ಹುಣಸೆಕಟ್ಟೆಯ ಹೂವಿನ ಬದುಕು


ಹುಣಸೆಕಟ್ಟೆ ಜಿಲ್ಲೆಯಲ್ಲೇ ಅತ್ಯಧಿಕ ಹೂವು ಬೆಳೆಯುವ ಏಕೈಕ ಗ್ರಾಮ. ಪರಿಶಿಷ್ಟರೇ ಹೆಚ್ಚಾಗಿರುವ ಈ ಊರಿನಲ್ಲಿ ೬೦೦ ಕುಟುಂಬಗಳಿವೆ. ಅದರಲ್ಲಿ ೫೫೦ ಕುಟುಂಬಗಳಿಗೂ ಜಮೀನಿದೆ. ಜಮೀನು ಹೊಂದಿರುವರೆಲ್ಲರೂ ಕನಿಷ್ಠ ೧೦ ಗುಂಟೆಯಿಂದ ೧ ಎಕರೆ ಪ್ರದೇಶವನ್ನು ಹೂವಿಗಾಗಿ ಮೀಸಲಿಟ್ಟಿದ್ದಾರೆ. ಕಡಿಮೆ ಜಾಗದಲ್ಲಿ ಹೂವು ಬೆಳೆಯುವವರದ್ದೇ ಸಿಂಹಪಾಲು.

ಅಚ್ಚರಿಯ ವಿಷಯವೆಂದರೆ ಪುಷ್ಪ ಕೃಷಿಯಲ್ಲಿ ತೊಡಗಿರುವವರಲ್ಲಿ ೪೦೦ ಮಂದಿ ೨೨ ರಿಂದ ೪೦ ವರ್ಷದೊಳಗಿನವರು. ಇವರಲ್ಲಿ ಕನಿಷ್ಠ ಎಸ್‌ಎಸ್‌ಎಲ್‌ಸಿಯಿಂದ, ಗರಿಷ್ಠ ಬಿಎ ವರೆಗೆ ಓದಿದವರಿದ್ದಾರೆ.

ವಿದ್ಯಾಭ್ಯಾಸವೇನೇ ಇದ್ದರೂ ಗದ್ದೆಗಿಳಿದು ಕೈ-ಮೈ ಕೆಸರು ಮಾಡಿಕೊಳ್ಳುತ್ತಾರೆ. ಊರಿಗೆ ಬರುವ ಸೊಸೆಯಂದಿರೂ ಇದರಿಂದ ಹೊರತಾಗಿಲ್ಲ. ಹೀಗಾಗಿ ಊರಿನಲ್ಲಿ ಉಳಿಯುವ ಅನಿವಾರ್ಯವೋ, ಅವಕಾಶಗಳಿಲ್ಲದೆಯೋ ಒಟ್ಟಿನಲ್ಲಿ ಈ ಯುವಕರು ದುಡಿಮೆಗಾಗಿ ಸಮೀಪದ ನಗರಕ್ಕಾಗಲಿ, ದೂರದ ಬೆಂಗಳೂರಿಗಾಗಲಿ ಹೋಗದೇ, ಹೂವಿನ ಕೃಷಿಯನ್ನೇ ನಂಬಿ ಬದುಕುತ್ತಿದ್ದಾರೆ. ಇದೇ ಕೃಷಿಯಲ್ಲಿ ವರ್ಷಕ್ಕೆ ಕನಿಷ್ಠ ೨ ರಿಂದ ೩ ಲಕ್ಷ ಲಾಭ ಗಳಿಸುತ್ತಿದ್ದಾರೆ !

ಹೂವಿನ ಕೃಷಿ ಹೀಗೆ ಬಂತು
ಮೂವತ್ತು ವರ್ಷಗಳ ಹಿಂದಿನ ಕಥೆ. ಹುಣಸೆಕಟ್ಟೆ ಗ್ರಾಮದಲ್ಲಿ ದಾಸರ ಬೋರಜ್ಜ ಎಂಬ ಗ್ರಾಮ ಪಂಚಾಯ್ತಿ ಅಧ್ಯಕ್ಷರು ವಾಸವಿದ್ದರು. ಅವರು ಮೊದಲು ಸೇವಂತಿಗೆ ಹೂವನ್ನು ಗ್ರಾಮದಲ್ಲಿ ಬೆಳೆಯುತ್ತಿದ್ದರು. ಬಿಡಿ ಬಿಡಿ ಹೂವನ್ನು ಕುಕ್ಕೆಯಲ್ಲಿ ತುಂಬಿಕೊಂಡು ಚಿತ್ರದುರ್ಗದ ಮಾರುಕಟ್ಟೆಗೆ ಹೋಗಿ ಕೆ.ಜಿ ಲೆಕ್ಕದಲ್ಲಿ ಮಾರಾಟ ಮಾಡುತ್ತಿದ್ದರು. ‘ಅಜ್ಜ’ನಿಂದ ಆರಂಭವಾದ ಹೂವಿನ ಉದ್ಯಮ ಈಗ ಯುವಕರ ಶ್ರಮ, ದುಡಿಮೆ ಮೇಲೆ ವಿಸ್ತಾರಗೊಳ್ಳುತ್ತಿದೆ. ಅಂದು ಒಂದು ಪಟ್ಟೆ, ಗುಂಟೆಯಲ್ಲಿ ಬೆಳೆಯುತ್ತಿದ್ದ ಒಂದೋ ಎರಡೋ ತಳಿಯ ಹೂವುಗಳು, ಇಂದು ಒಂದು ಎಕರೆವರೆಗೂ ವಿಸ್ತಾರಗೊಂಡಿದೆ. ಹತ್ತಾರು ತಳಿಯ ಹೂವುಗಳನ್ನು ಬೆಳೆಯಲಾಗುತ್ತಿದೆ.

ಎಲ್ಲರೂ ‘ಹೂವಿನ’ ಯಜಮಾನರು:
ಹುಣಸೆಕಟ್ಟೆಯಲ್ಲಿ ಪ್ರತಿಯೊಬ್ಬ ರೈತರೂ ಹೂವಿನ ತೋಟದ ಮಾಲೀಕರು. ಸೇವಂತಿಗೆಯ ಚಾಂದಿನಿ, ಬೆಳ್ಳಟ್ಟಿ, ಪಚ್ಚೆ, ಕುಪ್ಪಂ, ಕರ್ನೂಲ್, ಬಟನ್ ರೋಸ್, ದುಂಡು ಮಲ್ಲಿಗೆ ಸೇರಿದಂತೆ ವಿವಿಧ ಬಗೆಯ ಹೂವುಗಳನ್ನು ಬೆಳೆಯುತ್ತಾರೆ. ೧೦೦ ಎಕರೆಯಷ್ಟು ಕನಕಾಂಬರ ಹೂವಿನ ತೋಟವಿದೆ.

ಈ ಹೂದೋಟದಲ್ಲಿ ನಡುವೆ ನೆರಳಿಗಾಗಿ ಚೊಗಚೆ (ಅಗಸೆ, ತೊಗಜೆ) ಮರಗಳನ್ನು ಬೆಳೆಸಿದ್ದಾರೆ. ‘ಈ ಮರಗಳು ಹೂವಿಗೆ ನೆರಳಾಗುತ್ತವೆ. ವೀಳ್ಯೆದೆಲೆಗೆ ಬಳ್ಳಿಗೆ ಆಸರೆಯಾಗುತ್ತವೆ. ಜಮೀನಿನ ಮೇಲೆ ಎಲೆ ಉದುರಿಸಿ ಗೊಬ್ಬರವಾಗಿಸುತ್ತವೆ. ಪ್ರತಿ ವರ್ಷ ಮರಗಳನ್ನು ಸವರಿದ ಎಲೆಗಳಿಂದ ಗೊಬ್ಬರ ತಯಾರಿಸುತ್ತೇವೆ’ ಎನ್ನುತ್ತಾರೆ ಮುಕ್ಕಾಲು ಎಕರೆಯಲ್ಲಿ ಪುಷ್ಪ ಕೃಷಿ ಕೈಗೊಂಡಿರುವ ತಿಪ್ಪೇಸ್ವಾಮಿ.

ಈ ಗ್ರಾಮದಲ್ಲಿ ಎಂಥ ಪರಿಸ್ಥಿತಿಯಲ್ಲೂ ಪುಷ್ಪ ಕೃಷಿ ನಿಂತಿಲ್ಲ. ಬರಗಾಲ ಬಂದು, ಕೊಳವೆ ಬಾವಿಯಲ್ಲಿ ನೀರು ಖಾಲಿಯಾದಾಗ ಅಕ್ಕಪಕ್ಕದ ತೋಟಗಳಿಂದ ನೀರು ಖರೀದಿಸಿ ಹೂವಿನ ಕೃಷಿ ಉಳಿಸಿಕೊಂಡಿದ್ದಾರೆ. ‘ಸಾಲ ಮಾಡಿಯಾದರೂ ತುಪ್ಪ ತಿನ್ನು’ ಎನ್ನವಂತೆ, ಸಾಲ ಮಾಡಿ ಹೂವಿನ ಕೃಷಿ ಮಾಡುತ್ತಿದ್ದಾರೆ. ಕಳೆದ ವರ್ಷದಲ್ಲಿ ನಷ್ಟ ಮಾಡಿಕೊಂಡಿದ್ದನ್ನು, ಮುಂದಿನ ವರ್ಷದಲ್ಲಿ ಬಡ್ಡಿಯೊಂದಿಗೆ ದುಡಿಯುತ್ತೇವೆ ಎಂಬ ವಿಶ್ವಾಸ ಹುಣಸೆ ಕಟ್ಟೆಯ ಹೂವಾಡಿಗರದ್ದು !

ವರ್ಷಪೂರ್ತಿ ದುಡಿಮೆ
ಸೇವಂತಿಗೆ 8 ತಿಂಗಳ ಬೆಳೆ. ಕನಕಾಂಬರ ಕೂಡ ವರ್ಷದ ಬೆಳೆ. ಸೇವಂತಿಗೆ ಬೆಳೆಯನ್ನು ವರ್ಷಕ್ಕೊಮ್ಮೆ ನಾಟಿ ಮಾಡಬೇಕು. ಕನಕಾಂಬರ ಒಂದು ಸಾರಿ ನೆಟ್ಟರೆ ಹತ್ತು ವರ್ಷ ಹೂವು ಬಿಡುತ್ತದೆ. ಹುಣಸೆಕಟ್ಟೆ ವ್ಯಾಪ್ತಿಯಲ್ಲಿ ಅಂದಾಜು 100 ಎಕರೆಯಷ್ಟು ಕನಕಾಂಬರದ ಹೂವಿನ ಬೆಳೆ ಇದೆ.

ಎಕರೆ ಹೂವಿನ ಕೃಷಿಯಲ್ಲಿ ನಾಲ್ಕೈದು ತಳಿಗಳನ್ನು ನಾಟಿ ಮಾಡುತ್ತಾರೆ. ಹಬ್ಬ, ಸೀಸನ್, ಬೇಡಿಕೆಗೆ ತಕ್ಕಂತೆ ಹೂವುಗಳನ್ನು ಬೆಳೆಯುತ್ತಾರೆ. ಇದು ಹತ್ತು – ಹದಿನೈದು ವರ್ಷಗಳ ಅನುಭವದಿಂದ ಬಂದ ಕಲೆ. ’ಯುಗಾದಿಯ ಎಡ ಬಲದಾಗೆ ಸೇವಂತಿಗೆ ಹೂವಿನ ಗಿಡಗಳನ್ನು ನಾಟಿ ಮಾಡ್ತೀವಿ. ಅದು ದೀಪಾವಳಿಗೆ ಕೊಯ್ಲಿಗೆ ಬರುತ್ತದೆ.

ಇದು ಒಂದು ಜಾತಿ ಹೂವು. ಅದರ ಜೊತೆಗೆ ಇನ್ನೊಂದೆರಡು ಜಾತಿ ಹೂವುಗಳನ್ನು ನಾಟಿ ಮಾಡ್ತೀವಿ. ಒಂದು ಹೂವು ಕೊಯ್ಲು ಪೂರ್ಣವಾಗುವುದೊಳಗೆ ಮತ್ತೊಂದು ತಳಿಯ ಹೂವು ಕೊಯ್ಲಿಗೆ ಸಿದ್ಧ. ಹಾಗಾಗಿ ವರ್ಷಪೂರ್ತಿ ಹೂವು ಕೊಯ್ಲು ನಿರಂತರ. ಇದರಿಂದ ವರ್ಷ ಪೂರ್ತಿ ಕೆಲಸ’ ಎಂದು ವಿವರಿಸುತ್ತಾರೆ ಎರಡು ದಶಕಗಳ ಪುಷ್ಪ ಕೃಷಿಯ ಅನುಭವಿ ರೈತ ಕಾಂತರಾಜು.

ಈಗ ಶ್ರಾವಣದಲ್ಲಿ ಬೆಳ್ಳಟ್ಟಿ ತಳಿ ಸೇವಂತಿಗೆ ನಾಟಿ ಮಾಡಿದ್ದಾರೆ. ಅದು ಯುಗಾದಿಗೆ ಕೊಯ್ಲಿಗೆ ಬರುತ್ತದೆ. ಒಂದು ಎಕರೆ ಜಮೀನಿನಲ್ಲಿ ಕಾಲು ಬಾಗ ಈ ಹೂವಿನ ತಳಿ ನಾಟಿ ಮಾಡಿದ್ದೇವೆ. ನಾಲ್ಕೈದು ತಳಿಗಳನ್ನು ಹಾಕುವುದರಿಂದ ಒಂದು ತಳಿ ಸೋತರೆ, ಮತ್ತೊಂದು ತಳಿ ಗೆಲ್ಲುತ್ತದೆ ಎನ್ನುವುದು ಈ ಊರಿನ ಪುಷ್ಪ ಕೃಷಿಕರ ಲೆಕ್ಕಾಚಾರ.

ಹೂವಿನ ಹಾಸಿಗೆಯಲ್ಲ!
ಪುಷ್ಪೋದ್ಯಮ ಈ ಊರಿನ ಯುವಕರಿಗೆ ಹೂವಿನ ಹಾಸಿಗೆಯೇನಲ್ಲ. ಒಂದೊಂದು ಸಮಯದಲ್ಲಿ ಕೆ.ಜಿ ಕನಕಾಂಬರ ಸಾವಿರ ರೂಪಾಯಿ ಬೆಲೆ ಕಟ್ಟಿಕೊಟ್ಟರೆ, ಮತ್ತೊಮ್ಮೆ 100 ರೂಪಾಯಿಯನ್ನೂ ಕರುಣಿಸಿದೆ. ಹೂವಿಗೆ ಬೆಂಕಿ ರೋಗ ಕಾಣಿಸಿಕೊಂಡರೆ, ಇಡೀ ಹೂವಿನ ಅಂಗಳವೇ ಸುಟ್ಟು ಭಸ್ಮವಾಗುತ್ತದೆ. ಹಾಗೆಂದು ಪುಷ್ಪೋದ್ಯಮ ಎಂದೂ ನಷ್ಟ ಮಾಡಿಲ್ಲ. ಇದರಲ್ಲಿ ಆದಾಯವೂ ಇದೆ, ರಿಸ್ಕ್ ಕೂಡ ಇದೆ. ಆದರೆ ದೊಡ್ಡ ಪ್ರಮಾಣದಲ್ಲಿ ನಷ್ಟವಾಗುವುದಿಲ್ಲ. ನಾವು ಎಷ್ಟು ಜಾಗೃತಿಯಿಂದ ಕೃಷಿ ಮಾಡುತ್ತೇವೆ ಎನ್ನುವುದರ ಮೇಲೆ ಎಲ್ಲವೂ ನಿರ್ಧಾರವಾಗುತ್ತದೆ ಎನ್ನುತ್ತಾರೆ ತಿಪ್ಪೇಸ್ವಾಮಿ.

‘ಲಕ್ಷ ರೂಪಾಯಿ ಬಂಡವಾಳ ಹಾಕಿದರೆ 25 ಸಾವಿರ ರೂಪಾಯಿ ಕೂಲಿಗೆ, 10 ಸಾವಿರ ರೂಪಾಯಿ ದಲ್ಲಾಳಿಗೆ ಕೊಡಬೇಕು. 1,000 ರೂಪಾಯಿ ಆದಾಯ ಬಂದರೆ, ೫೦೦ ರೂ ಖರ್ಚು. ಉಳಿದ್ದು ಲಾಭ. ಹುಣಸೆಕಟ್ಟೆಯಿಂದ ಪ್ರತಿದಿನ ಒಂದು ಕ್ವಿಂಟಲ್ ಹೂವು ಚಿತ್ರದುರ್ಗಕ್ಕೆ ಸಾಗಿಸುತ್ತಾರೆ. ಕಳೆದ ವರ್ಷ ಇದೇ ವೇಳೆ 10ರಿಂದ 15 ಕ್ವಿಂಟಲ್ ಹೂವು ಮಾರುಕಟ್ಟೆಗೆ ಪೂರೈಸಿದ್ದರು. ಹಬ್ಬದ ದಿನಗಳಲ್ಲಿ ಪ್ರತಿದಿನ 10 ಲಕ್ಷ ರೂಪಾಯಿ ಹೂವಿನ ವಹಿವಾಟು ನಡೆಯುತ್ತದೆ. ನೀರು ಸರಿಯಾಗಿದ್ದರೆ ಪ್ರತಿದಿನ ಕನಿಷ್ಠ 2-3 ಲಕ್ಷ ರೂಪಾಯಿ ವಹಿವಾಟು ನಡೆಸಬಹುದು’ – ಲೆಕ್ಕಾಚಾರ ಮುಂದಿಡುತ್ತಾರೆ ಪುಷ್ಪ ಕೃಷಿಕರು.

ಹೂವಿನ ವ್ಯಾಪಾರಕ್ಕೆ ಅಡಿಕೆ ಕೃಷಿಯೂ ಸಾಟಿಯಾಗಲ್ಲ ಎನ್ನುತ್ತಾರೆ ಹೂವಾಡಿಗರು. ಒಂದು ಎಕರೆ ಅಡಿಕೆ ಕೃಷಿಯಿಂದ 2 ಲಕ್ಷ ರೂ. ಪಡೆಯಬಹುದು. ಸಕಾಲದಲ್ಲಿ ಮಳೆಯಾಗಿ, ಗೊಬ್ಬರ, ಔಷಧ ಪೂರೈಕೆಯಾದರೆ ಈ ಹೂವಿನ ಬೇಸಾಯದಲ್ಲಿ ಒಂದು ಸೀಸನ್‌ಗೆ ಕಾಲು ಎಕರೆಗೆ ಒಂದು ಲಕ್ಷ ರೂಪಾಯಿ ದುಡಿಯುತ್ತೇವೆ. ಗ್ರಾಮದ ರಘು ಎಂಬುವವರು ಕಾಲು ಎಕರೆ ಬೆಳ್ಳಟ್ಟಿ ತಳಿ ಬೆಳೆದು, ಖರ್ಚು ತೆಗೆದು 3 ಲಕ್ಷ ರೂಪಾಯಿ ಆದಾಯ ಗಳಿಸಿದ್ದಾರೆ ಎಂದು ಉದಾಹರಿಸುತ್ತಾರೆ ಗೋವಿಂದಸ್ವಾಮಿ.

‘ಪುಷ್ಪ ಕೃಷಿಯನ್ನು ದುರಾಸೆಯಿಂದ ಮಾಡುತ್ತಿಲ್ಲ. ನಮ್ಮದು ನಾಲ್ವರ ಕುಟುಂಬ. ಕಾಲು ಎಕರೆಯಲ್ಲಿ ಹೂವು ಕೃಷಿ ಮಾಡಿದರೆ ಸಾಕು. ಮಹಂತೇಶ, ಗೋವಿಂದಸ್ವಾಮಿ, ರಘು ಎಲ್ಲರೂ ಕಾಲು ಎಕರೆಯಲ್ಲಿ ಹೂವು ಬೆಳೆಯುತ್ತಿದ್ದಾರೆ. 10–12 ವರ್ಷಗಳಿಂದ ಪುಷ್ಪ ಕೃಷಿ ನಿರಂತರವಾಗಿ ಮಾಡುತ್ತಿದ್ದರೆ. ಇದೆಲ್ಲ ಅಪ್ಪಂದಿರು ಕಲಿಸಿಕೊಟ್ಟ ಪಾಠ’ ಎಂದು ನೆನಪಿಸಿಕೊಳ್ಳುತ್ತಾರೆ ಕಾಂತರಾಜು.

ಮಹಿಳೆಯರು, ಆಟೋದವರಿಗೂ ಉದ್ಯೋಗ
ಹುಣಸೆಕಟ್ಟೆ ಯುವಕರ ಪುಷ್ಪ ಕೃಷಿ ಕೇವಲ ರೈತರಿಗಷ್ಟೇ ಅಲ್ಲ, ಸುತ್ತಮುತ್ತಲ ಗ್ರಾಮದ ಮಹಿಳೆಯರಿಗೆ, ಕೂಲಿ ಕಾರ್ಮಿಕರಿಗೆ ಅಷ್ಟೇ ಏಕೆ, ಆಟೋ ಓಡಿಸುವವರಿಗೂ ಉದ್ಯೋಗ ನೀಡಿದೆ. ಹೂವು ಬಿಡಿಸಲು, ಅದನ್ನು ಮಾಲೆಯಾಗಿಸುವ ಕೆಲಸವನ್ನು ಮಾಡನಾಯಕನಹಳ್ಳಿ, ಗೋನೂರು ಸುತ್ತಲಿನ ಗ್ರಾಮದ ಮಹಿಳೆಯರಿಗೆ ವಹಿಸುತ್ತಾರೆ.

‘ಬೆಳಿಗ್ಗೆ 5 ಗಂಟೆಗೆ ಹೂವಿನ ಕೊಯ್ಲು ಶುರು. ಕೂಲಿ ಆಳು, ಮನೆ ಮಂದಿ ಎಲ್ಲ ಸೇರಿ ಹೂ ಬಿಡಿಸುತ್ತೇವೆ. ಒಬ್ಬೊಬ್ಬ ಕೂಲಿ ಆಳು 1 ಕೆ.ಜಿ ಹೂವು ಬಿಡಿಸಿದರೆ 100 ರೂ. ಅದನ್ನು ಕಟ್ಟಿದರೆ 100 ರೂ. ಸುತ್ತಮುತ್ತಲಿನ ಹಳ್ಳಿಯ ಮಹಿಳೆಯರನ್ನೇ ಬಳಸಿಕೊಂಡು ಉದ್ಯೋಗ ನೀಡುತ್ತೇವೆ. ಬೆಳಿಗ್ಗೆ ೭ ರಿಂದ ೧೧ ಗಂಟೆವರೆಗೆ ೧ ಕೆ.ಜಿ ಹೂವು ಕಟ್ಟುತ್ತಾರೆ’ ಎನ್ನುತ್ತಾರೆ ಕಾಂತರಾಜು.

ಕೊಯ್ಲಾದ ಹೂವನ್ನು ಹಳ್ಳಿಯಲ್ಲೇ ’ಮೌಲ್ಯವರ್ಧಿಸಿ’ ಮಾರುಕಟ್ಟೆಗೆ ತಲುಪಿಸುವುದರಿಂದ ಬೆಲೆಯೂ ಹೆಚ್ಚು, ಸ್ಥಳೀಯರಿಗೆ ಉದ್ಯೋಗವೂ ಲಭ್ಯ ಎನ್ನುವುದು ಹೂವು ಬೆಳೆಗಾರರ ತಂತ್ರಗಾರಿಕೆ. ಇದರಲ್ಲಿ ಅವರು ಯಶಸ್ವಿಯಾಗಿದ್ದಾರೆ. ಹಾಗಾಗಿ ನೂರಾರು ಮಹಿಳೆಯರಿಗೆ ಊರಿನಲ್ಲೇ ವರ್ಷ ಪೂರ್ತಿ ಉದ್ಯೋಗ. ಹೆಚ್ಚಾಗಿ ಭೂರಹಿತ ಪುರುಷರಿಗೆ ಹಾಗೂ ಮಹಿಳೆಯರಿಗೆ, ಈ ಪುಷ್ಪ ಕೃಷಿಯಿಂದ ಸಾಕಷ್ಟು ಉದ್ಯೋಗ.

ಮಾಲೆ ಕಟ್ಟಿದ ಹೂವನ್ನು ಹೊತ್ತೊಯ್ಯಲು ಊರಿನಲ್ಲಿ 11 ಲಗೇಜ್ ಆಟೋಗಳಿವೆ. ಊರಿನ ಯುವಕರೇ ಆಟೊದ ಮಾಲೀಕರು. ದಿನವೊಂದಕ್ಕೆ ಕನಿಷ್ಠ 300ಮಂದಿ ಮಾರುಕಟ್ಟೆಗೆ ಹೂವು ಕೊಂಡೊಯ್ಯುತ್ತಾರೆ. ಒಂದು ಸಾರಿ ದುರ್ಗದ ಮಾರುಕಟ್ಟೆಗೆ ಹೋಗಿ ಬರಲು ಒಬ್ಬೊಬ್ಬರಿಗೆ ೩೫ ರೂಪಾಯಿ ಖರ್ಚು. ಈ ಲೆಕ್ಕಾಚಾರದಲ್ಲಿ ದಿನಕ್ಕೆ 15 ಸಾವಿರ ರೂಪಾಯಿ ಬಸ್‌ಚಾರ್ಜ್. ಹೀಗಾಗಿ ಆಟೊದವರಿಗೆ ನಿತ್ಯ ಉದ್ಯೋಗ, ಆದಾಯ – ಲೆಕ್ಕಾಚಾರ ನೀಡುತ್ತಾರೆ ಕಾಂತರಾಜು.

ಬೇಡಿಕೆಯ ಗುಟ್ಟು
ಹುಣಸೆಕಟ್ಟೆಯ ಹೂವು ಬೆಳಗಾವಿ, ಮಂಗಳೂರು, ಉಡುಪಿ, ಬಿಜಾಪುರ, ತಮಿಳುನಾಡು, ಮಹಾರಾಷ್ಟ್ರ, ಮೈಸೂರು ಸೇರಿದಂತೆ ರಾಜ್ಯ- ಹೊರ ರಾಜ್ಯಗಳಲ್ಲಿ ಮಾರಾಟವಾಗುತ್ತದೆ. ಬೆಳಿಗ್ಗೆ ಕೊಯ್ಲಾದ ಹೂವು ಮಧ್ಯಾಹ್ನ 12ಗಂಟೆಯೊಳಗೆ ಮಾರ್ಕೆಟ್ ತಲುಪುತ್ತದೆ. ಈ ಊರಿನ ಹೂವಿಗೆ ತಾಳಿಕೆ ಗುಣ ಹೆಚ್ಚು. ಹಾಗಾಗಿ ಬೇಡಿಕೆಯೂ ಹೆಚ್ಚು. ಅನೇಕ ವ್ಯಾಪಾರಸ್ಥರು ಕೆಲವೊಮ್ಮೆ ಹುಣಸೆಕಟ್ಟೆಗೆ ಬಂದು ಹೂವು ಕೊಂಡೊಯ್ಯುತ್ತಾರೆ.

ಗುಣಮಟ್ಟ ಕಾಯ್ದುಕೊಳ್ಳಲು ಸಕಾಲಕ್ಕೆ ನೀರು ಪೂರೈಸಬೇಕು. ಇದಕ್ಕಾಗಿ ಕೊಳವೆಬಾವಿಗಳಿ ಮೊರೆ ಹೋಗಿದ್ದರು. ಒಂದೊಂದು ತೋಟದವರು 10ಕ್ಕೂ ಹೆಚ್ಚು ಕೊಳವೆ ಬಾವಿ ಕೊರೆಸಿದ್ದರು. ಸಾಕಷ್ಟು ಹಣ ಸುರಿದಿದ್ದರು. ಕಳೆದ ವರ್ಷ ಬರ ಬಂದಾಗ ಎಲ್ಲ ಕೊಳವೆ ಬಾವಿಗಳು ಬತ್ತಿ ಹೋಗಿದ್ದವು. ಇಡೀ ಹೂವಿನ ಬಯಲೇ ಬರಿದಾಗಿತ್ತು.

ಅಂಥ ಪರಿಸ್ಥಿತಿಯಲ್ಲಿ ಒಬ್ಬ ರೈತನಿಗೆ ಕೊಳವೆಬಾವಿಯಲ್ಲಿ ಎರಡು ಇಂಚು ನೀರು ಸಿಕ್ಕರೆ ನಾಲ್ಕು ರೈತರು ಹಂಚಿಕೊಳ್ಳುವ ಅಘೋಷಿತ ಸಹಕಾರ ಮನೋಭಾವವನ್ನು ಗ್ರಾಮದ ರೈತರು ರೂಢಿಸಿಕೊಂಡು ಹೂವಿನ ಕೃಷಿ ಉಳಿಸಿಕೊಂಡಿದ್ದರು. ಗುಣಮಟ್ಟದ ಹೂವಿಗಾಗಿ ಅವರು ಕೈಗೊಂಡ ನಿರ್ಧಾರಗಳು ನಿಜಕ್ಕೂ ಬೆರಗು ಮೂಡಿಸುವಂತಹವು.

ಊರೂ ಮಾದರಿ, ಯುವಕರೂ..
ಈ ಬಾರಿ ಮಳೆ ಚೆನ್ನಾಗಿದೆ. ಹುಣಸೆಕಟ್ಟೆ ಗ್ರಾಮದಲ್ಲಿ ಅಂತರ್ಜಲ ಹೆಚ್ಚಾಗಿ 7೦೦ ಅಡಿಗೆ ಇಳಿದಿದ್ದ ಕೊಳವೆಬಾವಿಗಳಲ್ಲಿ 2೦೦ ಅಡಿಗೆ ನೀರಿನ ಮಟ್ಟ ಏರಿದೆ. ಹುಣಸೆಕಟ್ಟೆಯಲ್ಲಿ ಮತ್ತೆ ಪುಷ್ಪೋದ್ಯಮ ಚುರುಕುಗೊಂಡಿದೆ. ಹೂವಿನ ಕೃಷಿ ಕೈಗೊಳ್ಳುವ ಯುವಕರ ಸಂಖ್ಯೆಯೂ ಹೆಚ್ಚಾಗಿದೆ. ಮತ್ತೆ ಸುತ್ತಲಿನ ಗ್ರಾಮದ ಕೂಲಿ ಕಾರ್ಮಿಕರು, ಹೂವು ಕಟ್ಟುವ ಮಹಿಳೆಯರು ಗ್ರಾಮದತ್ತ ಹೆಜ್ಜೆ ಹಾಕಿದ್ದಾರೆ. ಇಷ್ಟೆಲ್ಲ ಆದರೂ ಸರ್ಕಾರದ ಯಾವ ಇಲಾಖೆಗಳೂ ಈ ಊರಿನ ಬೆಳವಣಿಗೆಯತ್ತ ಮುಖ ಮಾಡದಿರುವುದು ವಿಪರ್ಯಾಸದ ಸಂಗತಿ.

ಕೃಷಿಯಲ್ಲಿ ಎಲ್ಲಿದೆ ಲಾಭ? ಎನ್ನುವ ಪ್ರಶ್ನೆಗೆ ಸಮಸ್ಯೆಗಳ ನಡುವೆ ಹುಣಕಟ್ಟೆಯಲ್ಲಿ ಜೀವಂತವಾಗಿರುವ ಯುವಕರ ಪುಷ್ಪೋದ್ಯಮ ಉತ್ತರ ನೀಡುತ್ತಿದೆ. ಹಳ್ಳಿಗಳಲ್ಲಿ ಯುವಕರಿಲ್ಲ, ಯುವಕರಿಗೆ ಲಾಭ ತರುವ ಉದ್ಯಮಿಗಳಿಲ್ಲ ಎಂದು ಸೋಗು ಹೇಳುವವರಿಗೆ ಇದೇ ಯುವಕರು ಉತ್ತರವಾಗುತ್ತಾರೆ.
ಸಂಪರ್ಕಕ್ಕೆ: ರಾಜು– 9632 651457

‘ಹೂವಲ್ಲಿ ಎತ್ತಿದ್ದನ್ನು ದಿನಸಿಗೆ ಕೊಡ್ತೀವಿ’
ಪುಷ್ಪಕೃಷಿಯಲ್ಲಿ ತೊಡಗಿರುವ ಹುಣಸೆಕಟ್ಟೆ ಯುವಕರಿಗೆ ತಮ್ಮ ಕಾಯಕದ ಬಗ್ಗೆ ಎಲ್ಲಿಲ್ಲದ ಪ್ರೀತಿ. ಇಂಥ ಕೃಷಿ ಸಂಕಷ್ಟದಲ್ಲಿದ್ದಾಗ ಅವರು ಸಂದರ್ಭವನ್ನು ಹೇಗೆ ಸ್ವೀಕರಿಸಿದರು. ಸಂಕಷ್ಟದಲ್ಲೂ ಊರು ಬಿಡದಿರಲು ಕಾರಣ ಏನು? ನಗರದ ಆಕರ್ಷಣೆಗೆ ಮಾರು ಹೋಗಲಿಲ್ಲವೇ ? ಎಂಬ ಪ್ರಶ್ನೆಗಳನ್ನಿಟ್ಟುಕೊಂಡು ಕೆಲವು ಯುವಕರ ಜೊತೆ ನಡೆಸಿದ ಸಂವಾದ ಇಲ್ಲಿದೆ.

* ಹೂವೇ ಏಕೆ ಬೆಳೆಯುತ್ತೀರಿ ?
೧೦ ವರ್ಷದಿಂದ ಬೆದ್ಲು ಜಮೀನಿನಲ್ಲಿ ರಾಗಿ, ಜೋಳ, ದಿನಿಸಿ ಏನೂ ಬೆಳೆದಿಲ್ಲ. ಕೊಳವೆ ಬಾವಿಯ ಆಶ್ರಯದಲ್ಲೇ ಜೀವನ ನಡೆಸೋದರಿಂದ ಹೂವು ಬೆಳೆಯುತ್ತೀವಿ. ಈ ಹೂವಿನ ಬೆಳೆ ಐತಲ್ಲಾ, ಒಂಥರಾ ಮನೆಗೆ ಕರಾವಿನ ಎಮ್ಮೆ ಇದ್ದ ಹಂಗೆ. ದಿನಾ ಹಾಲು ಕೊಡ್ತಾ, ದುಡ್ಡು ಕೊಡಿಸ್ತದೆ. ಹಾಗೆ ಈ ಹೂವು ಕೂಡಾ. ಏನೂ ಇಲ್ಲ ಎಂದರೆ ದಿನಕ್ಕೆ ೧೦೦ ರೂಪಾಯಿ ಜೇಬಿಗೆ ಇಳಿಸುತ್ತದೆ. ಇದು ದಿನಾ ದುಡ್ಡು ಕೊಡುವ ಉದ್ಯೋಗ.

* ಹಳ್ಳಿಯಲ್ಲೇ ಉಳಿಯಬೇಕೆನ್ನುವ ನಿಮ್ಮ ಛಲದ ಹಿಂದಿನ ಗುಟ್ಟು ?
ಮುಂಜಾನೆಯಿಂದ ರಾತ್ರಿವರೆಗೆ ಕೆಲಸಕೊಟ್ಟು, ಕೈತುಂಬಾ ಹಣಕೊಡುವ ಉದ್ಯೋಗ ನಮ್ಮೂರಿನಲ್ಲಿದೆ. ಕಾಲು, ಮುಕ್ಕಾಲು, ಒಂದು ಎಕರೆ ಪುಷ್ಪ ಕೃಷಿಯಲ್ಲಿ ಮೂರ್ನಾಲ್ಕು ಲಕ್ಷ ಸಂಪಾದನೆಯಿದೆ. ಹತ್ತಾರು ಮಂದಿಗೆ ಹಳ್ಳಿಯಲ್ಲೇ ಉದ್ಯೋಗ ಕೊಡ್ತೀವಿ. ಇದಕ್ಕಿಂತ ಉತ್ತಮ ಜೀವನ ನಗರದಲ್ಲಿಲ್ಲ. ಅಷ್ಟೆಲ್ಲ ಯಾಕ್ ಸ್ವಾಮಿ, ಚಿತ್ರದುರ್ಗದಾಗೆ, ಸುಮ್ಮನೆ ಸುತ್ತಾಡೋಕೂ ನಮಗೆ ಪುರುಸೊತ್ತಿಲ್ಲ.

* ಎಲ್ಲ ಜಮೀನಲ್ಲೂ ಹೂವನ್ನೇ ಬೆಳೆದರೆ, ಹೊಟ್ಟೆಗೆ ಏನ್ ಮಾಡ್ತೀರಿ ?
ರಾಗಿ, ಜೋಳ ಬೆಳೆದರೆ ಮಾರ್ಕೆಟ್ ಕಷ್ಟ. ಅದಕ್ಕೆ ಹತ್ತು ಎಕರೆ ಭೂಮಿಯಲ್ಲಿ ಒಂದು ಎಕರೆ ಹೂವಿಗೆ ಮೀಸಲು. ಇನ್ನು ಉಳಿದಿದ್ದರಲ್ಲಿ ರಾಗಿ, ಜೋಳ, ತೊಗರಿ ಹಾಕ್ತೀವಿ. ಅವುಗಳಿಗೆ ಬೋರ್‌ವೆಲ್ ನೀರು ಕೊಟ್ಟು ಪೂರೈಸೋದಕ್ಕೆ ಆಗುತ್ತಾ. ಮಳೆ ನಂಬಿಕೊಂಡು ಬರುವ ಬೆಳೆ ಅವು. ಬಂದ್ರೆ ಬಂದ್ವು. ಇಲ್ಲದಿದ್ದರೆ ಇಲ್ಲ. ಅದಕ್ಕೆ ಹೂವಲ್ಲಿ ಎತ್ತಿದ ದುಡ್ಡಿನಲ್ಲಿ, ದಿನಸಿ ಕೊಳ್ತೀವಿ, ಅಷ್ಟೆ.

* ನೀವೇನೋ ಕೃಷಿ ಮಾಡ್ತೀರಿ, ನಿಮ್ಮೂರಿಗೆ ಸೊಸೆಯಾಗಿ ಬಂದವರು…?
ಅವ್ರೂ ದುಡಿತಾರೆ. ನೋಡಿ. ನನ್ನಾಕೆ ಬಿಎ ಓದಿದ್ದಾರೆ. ನಮ್ಮ ಸಮಕ್ಕೆ ಗದ್ದೆಯಲ್ಲಿ ಕೆಲಸ ಮಾಡ್ತಾರೆ. ಕಳೆ ತೆಗೀತಾರೆ. ಹೂವು ಬಿಡಿಸ್ತಾರೆ. ಕಟ್ಟುತ್ತಾರೆ. ಕೆಲಸ, ಓದು, ವಿದ್ಯೆ ಇವೆಲ್ಲ ಹಣಕ್ಕಾಗಿ ಅಲ್ಲವೇ ?

* ಮಾರ್ಕೆಟ್ ಪರ್ವಾಗಿಲ್ಲಾ ಅನ್ನಿಸುತ್ತದೆಯೇ ?
ಅದೇ ನಮಗೆ ಕಿರಿಕಿರಿ. ಮಾರ್ಕೆಟ್‌ಗೆ ಹೂವು ಕಳಿಸಿಬಿಡ್ತೇವೆ. ಅಲ್ಲಿ ದಲ್ಲಾಳಿಗಳು ಮೂವತ್ತು ಮಾರು ಅಳೆಯುವವರು, ಇಪ್ಪತ್ತಕ್ಕೆ ಇಳಿಸ್ತಾರೆ. ಜಗಳ ಮಾಡದೇ ಇದ್ದರೆ ಲಾಸ್ ಆಗುತ್ತದೆ. ಆದರೂ ನಮ್ಮ ಕೆಲವು ರೈತರು ಅವರ ಬಳಿ ಔಷಧ, ಗೊಬ್ಬರಕ್ಕಾಗಿ ಸಾಲ ಮಾಡಿರ್ತಾರೆ. ಅಂಥವರನ್ನೇ ಜಗಳ ಮಾಡುವವರ ವಿರುದ್ಧ ಎತ್ತಿ ಕಟ್ತಾರೆ. ಅಂಥ ಸಮಸ್ಯೆ ನಡುವೆಯೂ ಹೋರಾಟ ಮಾಡ್ತಿದ್ದೇವೆ.

(ಪ್ರಶ್ನೋತ್ತರದಲ್ಲಿ ಪಾಲ್ಗೊಂಡಿದ್ದವರು ಕಾಂತರಾಜು, ತಿಪ್ಪೇಸ್ವಾಮಿ, ಮಹಂತೇಶ್, ಗೋವಿಂದಸ್ವಾಮಿ

Published by

ಗಾಣಧಾಳು ಶ್ರೀಕಂಠ

ಹುಟ್ಟೂರು ಗಾಣಧಾಳು. ಓದಿದ್ದು ತಿಪಟೂರು. ಕೆಲಸ ಮಾಡ್ತಿರೋದು ಬೆಂಗಳೂರು. ವೃತ್ತಿಯಲ್ಲಿ ಪತ್ರರ್ತ, ಆಸಕ್ತಿ ಕೃಷಿ-ಗ್ರಾಮೀಣಾಬಿವೃದ್ದಿ ಮತ್ತು ಪರಿಸರ. ಫೋಟೋಗ್ರಫಿ, ಪುಟ ವಿನ್ಯಾಸ, ಪ್ರವಾಸ ಹವ್ಯಾಸ. ರಮಾ ಬಾಳಸಂಗಾತಿ. ಆಕೆಯೂ ಹವ್ಯಾಸಿ ಬರಹಗಾರ್ತಿ. ಸ್ಪೈಸ್ ಇಂಡಿಯಾ ಕನ್ನಡ ಮಾಸ ಪತ್ರಿಕೆಯಲ್ಲಿ ಆರು ವರ್ಷ ಸಹಾಯಕ ಸಂಪಾದಕಿ (ಎಡಿಟೋರಿಯಲ್ ಅಸಿಸ್ಟೆಂಟ್) ಕೆಲಸ ಮಾಡಿದ್ದಾರೆ. ಸದ್ಯ ಚಿತ್ರದುರ್ಗ ಆಕಾಶವಾಣಿ ಕೇಂದ್ರದಲ್ಲಿ ಗೌರವ ಉದ್ಘೋಷಕಿ, ಮಗಳು ನದಿ ನನ್ನ ಬದುಕು, ಮಗ ಅಗರ್ತ, ನನ್ನ ಭವಿಷ್ಯ. ನಿವೃತ್ತ ಶಿಕ್ಷಕ ತಂದೆ ಗಾಣಧಾಳು ರಾಮಣ್ಣ ಅವರೊಂದಿಗೆ ವರ್ಗವಾದ ಕಡೆ ವಾಸ್ತವ್ಯ. ಸದ್ಯ ಚಿತ್ರದುರ್ಗದಲ್ಲಿ ವಾಸ. ಸಮಾಜಶಾಸ್ತ್ರ ಮತ್ತು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. ಕಾಲೇಜು ದಿನಗಳಲ್ಲೇ ಪತ್ರಿಕೆಗಳಿಗೆ ಲೇಖನ ಬರೆಯುವ ಹವ್ಯಾಸ. ಪ್ರಜಾಪ್ರಗತಿ, ಉದಯವಾಣಿ ಪತ್ರಿಕೆಗಳಿಗೆ ಅರೆಕಾಲಿಕ ವರದಿಗಾರನಾಗಿ ಸೇವೆ. ೧೯೯೬ರಿಂದ ತಿಪಟೂರಿನ ಬೈಫ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಲ್ಲಿ ದಾಖಲಾತಿಗಾರನಾಗಿ ವೃತ್ತಿ ಆರಂಭ. ಕ್ರಮೇಣ, ಅದೇ ಸಂಸ್ಥೆಯ ಪ್ರಕಾಶನದ ಸಿರಿಸಮೃದ್ಧಿ ಕೃಷಿ ಮಾಸಪತ್ರಿಕೆಯಲ್ಲಿ ಉಪ ಸಂಪಾದಕನಾಗಿ ಸೇವೆ ಮುಂದುವರಿಕೆ. ೨೦೦೨ರಿಂದ ವಿಜಯ ಕರ್ನಾಟಕ ದಿನಪತ್ರಿಕೆಯ ಚಿತ್ರದುರ್ಗ ಆವೃತ್ತಿಯಲ್ಲಿ ಉಪ ಸಂಪಾದಕನಾಗಿ ಸೇವೆ ಆರಂಭ. ೨೦೦೪ರಲ್ಲಿ ಇದೇ ಪತ್ರಿಕೆಯ ಕೃಷಿ ವಿಜಯ ಪುರವಣಿಯ ಮುಖ್ಯಸ್ಥನಾಗಿ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಣೆ. ೨೦೦೬ರಿಂದ ಪ್ರಜಾವಾಣಿ ಪತ್ರಿಕೆಯ ಬೆಂಗಳೂರಿನ ಕಚೇರಿಯಲ್ಲಿ ವಿವಿಧ ವಿಭಾಗಗಳಲ್ಲಿ ಸೇವೆ. ಪ್ರಕಟಿತ ಕೃತಿಗಳು : ಆಕಾಶವಾಣಿಯಲ್ಲಿ ಪ್ರಸಾರವಾದ ನಾಟಿ ಬೀಜಗಳ ಪರಂಪರೆ ಕುರಿತ ಸರಣಿಯ ಅಕ್ಷರ ರೂಪದ ಕೃತಿ ‘ಬೀಜಸಂಪದ’ . ಸಾವಯವ ಕೃಷಿಕರ ಯಶೋಗಾಥೆಯ ಕೃತಿ ‘ಸಾವಯವ ಚಿತ್ತಾರ’, ‘ವೆಲ್ವೆಟ್ ಬೀನ್ಸ್ -ನೆಲಕ್ಕೆ ಜೀವ ತುಂಬುವ ಮ್ಯಾಜಿಕ್ ಬಳ್ಳಿ’, ‘ಸ್ಲೋಫುಡ್- ಸುಭೋಜನಾ ಸಾವಧಾನ’, ‘ದೇಸಿ ಕೃಷಿ ಉಪಕರಣಗಳು’, ‘ನೆಲಮೂಲ ಕೃಷಿಜ್ಞಾನ- ಮಲೆನಾಡ ದೇಸಿ ಕೃಷಿ ಪದ್ಧತಿಗಳು’, ‘ ಹಸಿರು ಹಾದಿ’, ‘ಅಜೋಲಾ-ಮೇವಿಗೂ ಸೈ ಗೊಬ್ಬರಕ್ಕೂ ಜೈ’, ‘ಸುಸ್ಥಿರ ತೋಟ ಮಾಡೋಣ ಬನ್ನಿ’ ಹಾಗೂ ‘ಹೊನ್ನಾರು - ಪರಿಸರ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಚಿಂತನೆ’ ಕುರಿತ ಕೃತಿಗಳು ಪ್ರಕಟಗೊಂಡಿವೆ. ಪ್ರಶಸ್ತಿ ಪುರಸ್ಕಾರ ೨೦೦೬ರಲ್ಲಿ ಸಿಡಿಎಲ್ ಸಂಸ್ಥೆಯಿಂದ ‘ಕೆರೆ ಆಪೋಷಣ ಪುರಾಣ’ ಲೇಖನಕ್ಕೆ ರಾಜ್ಯಮಟ್ಟದ ‘ಚರಕ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ’. ಇದೇ ವರ್ಷ ಧಾರವಾಡದ ಕೃಷಿ ಮಾಧ್ಯಮ ಕೇಂದ್ರದಿಂದ ‘ವೆಲ್ವೆಟ್ ಬೀನ್ಸ್’ ಲೇಖನಕ್ಕಾಗಿ ‘ರಾಜ್ಯ ಮಟ್ಟದ ಉತ್ತಮ ಕೃಷಿ ಬರಹಗಾರ ಪ್ರಶಸ್ತಿ’. ‘ದೇಸಿ ಭತ್ತ ಭ್ರಹ್ಮ ನಟವರಸಾರಂಗಿ’ ಲೇಖನಕ್ಕಾಗಿ ೨೦೦೯ರಲ್ಲಿ ಮುರುಘಾಶ್ರೀ - ರಾಜ್ಯಮಟ್ಟದ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ, ೨೦೧೦-೧೧ನೇ ಸಾಲಿನ ‘ಉತ್ತಮ ವಿಜ್ಞಾನ ಲೇಖಕ ಪ್ರಶಸ್ತಿಗೆ ವೆಲ್ವೆಟ್ ಬೀನ್ಸ್ ಮತ್ತು ಸಾವಯವ ಚಿತ್ತಾರ ಪುಸ್ತಕಗಳ ಆಯ್ಕೆ. ೨೦೧೧ರಲ್ಲಿ ನವದೆಹಲಿಯ ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್(ಸಿಎಸ್ಇ) ಸಂಸ್ಥೆಯಿಂದ ‘ಜಲಮೂಲಗಳ ಅಧ್ಯಯನಕ್ಕಾಗಿ’ ೧೨ನೇ ಸಿಎಸ್ಇ ಫೆಲೋಷಿಪ್ ಗೌರವ. ೨೦೧೨ರ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ‘ಯಜಮಾನ್ ಶ್ರೀ ನಾರಾಯಣಪ್ಪ ಪ್ರಶಸ್ತಿ, ೨೦೧೧ನೇ ಸಾಲಿನಲ್ಲಿ ‘ಬೆಂಗಳೂರು ನಿರ್ಮಾತೃ ಕೆಂಪೇಗೌಡ ಪ್ರಶಸ್ತಿ ಪುರಸ್ಕಾರ ಹಾಗೂ ಪರಿಸರ ಪತ್ರಿಕೋದ್ಯಮದಲ್ಲಿನ ಎರಡು ದಶಕಗಳ ಗಣನೀಯ ಸೇವೆಯನ್ನು ಗುರುತಿಸಿರುವ ಕರ್ನಾಟಕ ಸರ್ಕಾರ ‘೨೦೧೪ನೇ ಸಾಲಿನ ರಾಜ್ಯಮಟ್ಟದ ‘ಪರಿಸರ ಪತ್ರಿಕೋದ್ಯಮ’ ಪ್ರಶಸ್ತಿ’ ನೀಡಿ ಗೌರವಿಸಿದೆ. ಅಧ್ಯಯನ ಪ್ರವಾಸ : ಕೃಷಿ ಅಧ್ಯಯನಕ್ಕಾಗಿ ೨೦೧೩ರಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಸ್ಯಾನ್ಫ್ರಾನ್ಸಿಸ್ಕೋಗೆ ಪ್ರವಾಸ. ಭಾರತದ ಚಂಡಿಗಡ, ಒರಿಸ್ಸಾ, ಬಿಹಾರ, ಆಂಧ್ರ, ತಮಿಳುನಾಡು ಸೇರಿದಂತೆ ಕೃಷಿ ಅಧ್ಯಯನಕ್ಕಾಗಿ ವಿವಿಧ ರಾಜ್ಯಗಳಲ್ಲಿ ಪ್ರವಾಸ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s