ತಿಂಗಳು: ಜೂನ್ 2016
ನೀರಿನ ದೊಣೆಗೆ ಯುವಕರಿಂದ ಪುನಶ್ಚೇತನ
ಚಿತ್ರದುರ್ಗ: ನಗರದ ಚಿನ್ಮೂಲಾದ್ರಿ ಅಡ್ವೆಂಚರ್ ಕ್ಲಬ್‌ನ ಯುವಕರು ಜೋಗಿಮಟ್ಟಿ ಅರಣ್ಯ ಪ್ರದೇಶದಲ್ಲಿರುವ ನೀರಿನ ದೊಣೆಯನ್ನು ಪುನಶ್ಚೇತನ ಗೊಳಿಸುವ ಮೂಲಕ ‘ವಿಶ್ವ ಪರಿಸರ ದಿನ’ವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ.
ವಿಶ್ವ ಪರಿಸರ ದಿನಕ್ಕೆ ಮುನ್ನಾ ದಿನ ಕ್ಲಬ್‌ನ ಮುಖ್ಯಸ್ಥ ನಾಗರಾಜ್ (ನಾಗು ಆರ್ಟ್ಸ್) ಮತ್ತು ನಾಲ್ವರು ಸ್ನೇಹಿತರು ಆಡುಮಲ್ಲೇಶ್ವರದ ಮೇಲ್ಭಾಗದಲ್ಲಿರುವ ಹಿಮವತ್ಕೇದಾರ ಸಮೀಪದಲ್ಲಿನ ನೀರಿನ ದೊಣೆಯನ್ನು ಸ್ವಚ್ಛಗೊಳಿಸಿದ್ದಾರೆ.
‘ಬಂಡೆಗೆ ಹೊಂದಿಕೊಂಡಂತೆ ನಿರ್ಮಾಣವಾಗಿರುವ ಕಲ್ಲು ಕಟ್ಟಡದ ಈ ದೊಣೆಯಲ್ಲಿ ಹೂಳು ತುಂಬಿಕೊಂಡು ನೀರು ನಿಲ್ಲುವ ಪ್ರಮಾಣ ಕಡಿಮೆ ಯಾಗಿತ್ತು. ಹಿಂದೆ ಬೇರೆ ಬೇರೆ ದೊಣೆಗಳ ಹೂಳು ತೆಗೆದಾಗ, ನೀರು ನಿಲ್ಲುವ ಪ್ರಮಾಣದ ಬಗ್ಗೆ ಅರಿವು ಮೂಡಿತು. ಹಾಗಾಗಿ ಈ ದೊಣೆಯ ಹೂಳು ತೆಗೆದಿದ್ದೇವೆ’ ಎಂದು ನಾಗರಾಜ್ ತಿಳಿಸಿದರು.
ಈ ದೊಣೆಯ ಆಸು–ಪಾಸಿನಲ್ಲಿ ನವಿಲು, ಕರಡಿ, ಚಿರತೆ ಮತ್ತು ಕೊಂಡುಕುರಿಗಳು ಹೆಚ್ಚು ಅಡ್ಡಾಡುತ್ತವೆ. ಬಸವನಬಾಯಿಯಿಂದ ನೀರು ಬೀಳುವ ನೀರು ಸುತ್ತಲಿನ ದೊಣೆಗಳಲ್ಲಿ ಸಂಗ್ರಹ ವಾಗುತ್ತದೆ.
‘ಇಡೀ ದಿನ ಹೂಳು ತೆಗೆದವು. ಹೂಳು ತೆಗೆಯುತ್ತಲೇ ನೀರಿನ ಒರತೆ ಕಾಣಿಸಿಕೊಂಡಿತು. ಮಾರನೆಯ ದಿನ ಒಂದು ಗುಂಡಿಯಲ್ಲಿ ಪ್ರಾಣಿಗಳು ಕುಡಿಯುವಷ್ಟು ನೀರು ಸಂಗ್ರಹವಾಗಿತ್ತು’ ಎನ್ನುತ್ತಾ ನೀರು ಸಂಗ್ರಹವಾಗಿದ್ದನ್ನು ತೋರಿಸುತ್ತಾರೆ ನಾಗರಾಜ್.
‘ದೊಣೆ ಪುನರುಜ್ಜೀವನ’ದ ಶ್ರಮದಾನದಲ್ಲಿ ಕೆಇಬಿ ನೌಕರ ಸಂತೋಷ್, ಎಲೆಕ್ಟ್ರೀಷಿಯನ್ ನಾಗಭೂಷಣ, ಛಾಯಾಚಿತ್ರಗಾಹಕ ಬಾಬು, ಕಲಾವಿದ ಮಾರುತಿ ಪಾಲ್ಗೊಂಡಿದ್ದರು.
ಜೋಗಿಮಟ್ಟಿಯ ‘ದೊಣೆ’ನಾಯಕರು!
ಬರ ಮತ್ತು ಬಾಯಾರಿಕೆಯಿಂದ ನಾಡು ಕಂಗೆಟ್ಟಿರುವ ಸಂದರ್ಭದಲ್ಲಿ ಚಿತ್ರದುರ್ಗಕ್ಕೆ ಸಮೀಪದ ಜೋಗಿಮಟ್ಟಿಯಲ್ಲಿ ಮಾತ್ರ ‘ನೀರಹಾಡು’ ಅನುರಣನಗೊಳ್ಳುತ್ತಿದೆ. ಅಲ್ಲಿನ ಕಾಡು ಪ್ರಾಣಿಗಳಿಗೆ ಬಿರುಬೇಸಿಗೆಯಲ್ಲೂ ಕುಡಿವ ನೀರಿಗೆ ಕೊರತೆ ಎನ್ನಿಸಿಲ್ಲ. ಅದಕ್ಕೆ ಕಾರಣ, ಯುವ ಉತ್ಸಾಹಿಗಳ ಪರಿಸರ ಕಾಳಜಿ.
ಕಾಡಿನಲ್ಲಿನ ನೀರತಾಣಗಳನ್ನು ಹುಡುಕಿ ಮರುಪೂರಣಗೊಳಿಸಿರುವ ಅವರು, ನಿಜವಾದ ಅರ್ಥದಲ್ಲಿ ‘ದೊಣೆ’ನಾಯಕರು.
‘ನೀರಿಲ್ಲ ಅಂತ ಎಲ್ಲ ಕಡೆಯಿಂದ ಸುದ್ದಿ ಬರ್ತಾ ಇದೆ. ಇಲ್ನೋಡಿ ಸರ್, ನಮ್ ಜೋಗಿಮಟ್ಟಿ ಕಾಡಿನ ತುದಿಯ ಗವಿಬಾಗಿಲು ಗುಹೆಯಲ್ಲಿ ಈಗಲೂ 13 ಅಡಿ ನೀರಿದೆ. ಸೀಳ್ಗಲ್ಲು, ತಣ್ಣೀರು ದೋಣಿ, ಈರಣ್ಣನ ಬಂಡೆ, ಮಡಿಕೆ ದೋಣಿ, ಎಬ್ಬಿದರು ಹಳ್ಳ, ಪಾಂಡವರಮಠದ ಬಂಡೆಗಳಲ್ಲೂ ನೀರು ನಿಂತಿದೆ…’
ಚಿನ್ಮೂಲಾದ್ರಿ ಅಡ್ವೆಂಚರ್ ಕ್ಲಬ್ ನಾಗರಾಜ್ (ನಾಗು) ಚಿತ್ರದುರ್ಗ ಸಮೀಪದ ಜೋಗಿಮಟ್ಟಿ ಅರಣ್ಯದ ತುದಿಯಲ್ಲಿ, ನೀರಿನ ದೊಣೆಗಳಲ್ಲಿ (ಜಲಸಂಗ್ರಹ ರಚನೆ), ಗವಿ ಬಾವಿಯೊಳಗೆ ನೀರು ತುಂಬಿರುವ ಚಿತ್ರಗಳನ್ನು ಎದುರಿಗೆ ಹರವಿ ಕುಳಿತು ಮಾತಿಗಿಳಿದರು.
‘ಈ ಬಿರು ಬೇಸಿಗೆಯಲ್ಲೂ ಗುಹೆಯಲ್ಲಿ ನೀರಿದೆ. ಇದೆಲ್ಲ, ಹಿಂದೆ ನಾವು ಹೂಳು ತೆಗೆದು, ಸ್ವಚ್ಛ ಮಾಡಿದ್ದರ ಪ್ರತಿಫಲ…’ ಎಂದರು. ಅವರು ಹರಡಿಕೊಂಡಿದ್ದ ಅಂದು–ಇಂದಿನ ಚಿತ್ರಗಳಲ್ಲಿ ಒಂದೂವರೆ ದಶಕದಲ್ಲಿ ಕಾಡಿನಲ್ಲಾದ ಜಲ ಸಂರಕ್ಷಣೆಯ ಬದಲಾವಣೆಗಳು ಕಾಣುತ್ತಿದ್ದವು!
ನೀರಾಸರೆಯ ತಾಣಗಳು
ಚಿತ್ರದುರ್ಗದಿಂದ 10 ಕಿ.ಮೀ ದೂರವಿರುವ ಜೋಗಿಮಟ್ಟಿ ಕಾಯ್ದಿಟ್ಟ ಅರಣ್ಯ ಪ್ರದೇಶದ ತುದಿಯಲ್ಲಿ ನೀರಿನ ದೊಣೆಗಳಿವೆ. ಇವುಗಳಲ್ಲಿ ಕೆಲವು ಮಾನವ ನಿರ್ಮಿತ. ಇನ್ನೂ ಕೆಲವು ಸ್ವಾಭಾವಿಕ ರಚನೆಗಳು. ಕಾಡು ಪ್ರಾಣಿಗಳ ನೀರಡಿಕೆ ನೀಗಿಸಲು ಬಹಳ ಹಿಂದೆ ಇಂಥ ದೊಣೆಗಳನ್ನು ನಿರ್ಮಿಸಲಾಗಿದೆ.
ಇವುಗಳಲ್ಲಿ ಮಳೆಗಾಲದಲ್ಲಿ ನೀರು ತುಂಬಿಕೊಳ್ಳುತ್ತದೆ. ವರ್ಷಗಟ್ಟಲೆ ನೀರು ಬತ್ತುವುದಿಲ್ಲ. ಕುಡಿಯಲು ಯೋಗ್ಯವಾದ ನೀರಿನ ಈ ದೊಣೆಗಳು ಪ್ರಾಣಿಗಳಿಗೆ ನೀರಾಸರೆಯ ತಾಣಗಳಾಗಿವೆ. 13 ವರ್ಷಗಳ ಹಿಂದೆ ಈ ಗುಹೆ, ಹೊಂಡದ ಬಂಡೆಗಳು ಹೂಳು ತುಂಬಿಕೊಂಡು, ಗಿಡಗಂಟೆಗಳು ಬೆಳೆದುಕೊಂಡಿದ್ದವು. ಮಳೆ ಬಂದಾಗಲೂ ನೀರು ನಿಲ್ಲುತ್ತಿರಲಿಲ್ಲ. ನಿಂತರೂ ಆ ನೀರು ಕುಡಿಯುವ ಪ್ರಾಣಿಗಳಿಗೆ ಎಟುಕುವಂತಿರಲಿಲ್ಲ.
2003ನೇ ಇಸವಿ. ನಾಗರಾಜ್ ಮತ್ತು ಗೆಳೆಯರು ಚಾರಣಕ್ಕೆಂದು ಕಾಡಿಗೆ ಹೋಗಿದ್ದರು. ಗವಿಬಾಗಿಲ ಬಂಡೆ ಮೇಲೆ ಕುಳಿತು ಊಟ ಮಾಡುವಾಗ, ಊಟದ ನಡುವೆ ನೀರಡಿಕೆಯಾಗಿದೆ. ಸುತ್ತಲೂ ಹುಡುಕಿದರೂ ಎಲ್ಲಿಯೂ ನೀರು ಸಿಗಲಿಲ್ಲ. ಕೆಳಗೆ ಗುಹೆಯಲ್ಲಿ ನೀರಿದೆ, ಕುಡಿಯಲು ಯೋಗ್ಯವಿಲ್ಲ.
‘ನಮ್ಮ ಪಾಡೇ ಹೀಗಾದರೆ, ಬೇಸಿಗೆಯಲ್ಲಿ ಇಲ್ಲಿನ ಮೂಕ ಪ್ರಾಣಿಗಳ ಕಥೆ ಹೇಗಿರಬೇಡ’ ಎಂದು ನಾಗು ಮತ್ತು ಗೆಳೆಯ ಜಗದೀಶ್ ಅವರಿಗೆ ಅನ್ನಿಸಿತು. ಅದರ ಫಲವಾಗಿ, ಅವರು ಗವಿಗಳನ್ನು ಸ್ವಚ್ಛಗೊಳಿಸುವ ಸಂಕಲ್ಪ ಕೈಗೊಂಡರು.
‘ಮೊದಲು ಗಿಡಗಂಟೆ, ಹೂಳು ತೆಗೆದವು. ಹೂಳು ತೆಗೆದಂತೆ ಗವಿಯ ಆಳ–ಅಗಲ ವಿಸ್ತಾರವಾಯಿತು. ಹೂಳು ತೆಗೆದ ಮೇಲೆ ದೊಡ್ಡ ಬಾವಿಯೇ ನಿರ್ಮಾಣವಾದಂತಾಯಿತು. ಆ ವರ್ಷ ಮಳೆ ಬಂತು. ಗವಿಯೊಳಗೆ ನೀರು ತುಂಬಿಕೊಂಡಿತು. 20 ಅಡಿಗೂ ಹೆಚ್ಚು ನೀರು ಸಂಗ್ರಹವಾಯಿತು. ಪ್ರಾಣಿಗಳಿಗೆ ನೀರಾಸರೆಯ ತಾಣವಾಯಿತು’ ಎಂದು ಆ ದಿನಗಳನ್ನು ನಾಗು ನೆನಪಿಸಿಕೊಳ್ಳುತ್ತಾರೆ. ಗವಿಬಾಗಿಲ ಗುಹೆಯಲ್ಲಿ ಈ ಬಿರು ಬಿಸಿಲಿನಲ್ಲೂ ವ್ಯಕ್ತಿ ಮುಳುಗುವಷ್ಟು ನೀರಿದೆ ಎಂದು ಪ್ರಸ್ತುತ ಗುಹೆಯ ಸ್ಥಿತಿಯನ್ನು ವಿವರಿಸುತ್ತಾರೆ.
ಉತ್ತೇಜಿಸಿದ ಮೊದಲ ಯಶಸ್ಸು: ಗವಿಬಾಗಿಲ ಗುಹೆಯ ಹೂಳೆತ್ತಿ, ನೀರು ಸಂಗ್ರಹವಾದ ಸುದ್ದಿ ಮಾಧ್ಯಮಗಳಲ್ಲಿ ಪ್ರಚಾರವಾಯಿತು. ಅದು ಯುವಕರ ‘ಶ್ರಮದಾನ’ಕ್ಕೆ ಮತ್ತಷ್ಟು ಉತ್ತೇಜನ ನೀಡಿತು. ಮುಂದೆ ಅರಣ್ಯದಲ್ಲಿರುವ ಕೆಲವು ಜಲತಾಣಗಳನ್ನು ಸ್ವಚ್ಛಗೊಳಿಸಲು ಸಂಕಲ್ಪ ಮಾಡಿದರು. ಹೂಳು ತೆಗೆವ ಜತೆಗೆ ಬಂಡೆಯ ಪೊಟರೆಗಳಿಗೆ ತಡೆಗೋಡೆ ಕಟ್ಟಿ ನೀರು ನಿಲ್ಲಿಸುವ ಕಾರ್ಯಕ್ಕೆ ಚಾಲನೆ ನೀಡಿದರು. ದೊಣೆಯ ಸನಿಹದಲ್ಲೇ ಹಣ್ಣಿನ ಗಿಡಗಳನ್ನು ನೆಟ್ಟರು.
‘ಹಣ್ಣಿನ ಗಿಡಗಳು ಏತಕ್ಕೆ?’ ಎಂದರೆ, ‘ನೀರು ಕುಡಿಯಲು ಬರುವ ಪ್ರಾಣಿಗಳಿಗೆ ಆಹಾರ ಸಿಗಲಿ ಎಂಬುದು ಹಣ್ಣಿನ ಗಿಡ ನೆಡುವ ಉದ್ದೇಶ’ ಎನ್ನುತ್ತಾರೆ ನಾಗು. ಗುಹೆಗಳಲ್ಲಿ ಹೂಳು ತೆಗೆಯುವಾಗ ಪುರಾತನ ಮಡಿಕೆ, ಕುಡಿಕೆಗಳು ಸಿಕ್ಕಿವೆ. ಇಳಿಜಾರಿನಲ್ಲಿರುವ ದೊಣೆಗಳ ಹೂಳು ತೆಗೆಯುವಾಗ ಸಿಕ್ಕಿರುವ ಕಲ್ಲು ಚಪ್ಪಡಿ (ಡ್ರೆಸ್ಸ್ ಸ್ಟೋನ್) ತಡೆ ಗೋಡೆಗಳು ಕಂಡಿವೆ.
ಈ ಕುರುಹುಗಳು, ನೀರಾಶ್ರಯ ತಾಣಗಳ ಪುರಾತನ ಇತಿಹಾಸವನ್ನು ಹೇಳುತ್ತವೆ. ಇತಿಹಾಸ ಸಂಶೋಧಕರು ‘ಮಡಿಕೆ, ಕುಡಿಕೆಗಳು ನೂರಾರು ವರ್ಷಗಳ ಹಿಂದೆ ಈ ಗುಹೆಗಳಲ್ಲಿ ಜನ ವಸತಿ ಇದ್ದಿರಬಹುದು ಎನ್ನುವುದಕ್ಕೆ ಸಾಕ್ಷಿ ಎನ್ನುತ್ತಾರೆ.
ಗುಹೆ, ದೊಣೆಗಳ ಹೂಳು ತೆಗೆದು, ನೀರು ಸಂಗ್ರಹಣೆ ಮಾಡಿದ ಯಶಸ್ಸಿನ ನಂತರ, 2010ರಲ್ಲಿ ನಾಗು ಮತ್ತು ಗೆಳೆಯರು ನೀರು ಸಂಗ್ರಹವಾಗುವ ಬಂಡೆಗಳಿಗೆ ಸಿಮೆಂಟ್, ಇಟ್ಟಿಗೆ ಬಳಸಿ ಒಡ್ಡು ನಿರ್ಮಿಸಿ, ನೀರು ನಿಲ್ಲಿಸಿದರು. 10 ಕಿ.ಮೀ ದೂರದಿಂದ ಅರಣ್ಯದವರೆಗೆ ಇಟ್ಟಿಗೆ ಸಿಮೆಂಟ್ ಹೊತ್ತು, ಬಂಡೆಗಳ ಇಳಿಜಾರಿಗೆ ಅಡ್ಡಲಾಗಿ ಗೋಡೆ ನಿರ್ಮಿಸಿರುವುದು ಒಂದು ಸಾಹಸ.
‘ಒಬ್ಬನೇ ಕೆಲಸ ಆರಂಭಿಸಿದೆ. ನಂತರ ಗೆಳೆಯರು ಕೈಜೋಡಿಸಿದರು. ಒಂದು ವಾರ ಪರಿಶ್ರಮ ಹಾಕಿದೆವು. ಆಗ ಬೇಸಿಗೆಯಲ್ಲಿ ಈ ಕೆಲಸ ಮಾಡಿದ್ದು, ಮಳೆಗಾಲದಲ್ಲಿ ನೀರು ಸಂಗ್ರಹವಾಯಿತು. ಈ ಬೇಸಿಗೆಯಲ್ಲೂ ನೀರಿದೆ, ಅದು ತಿಳಿಯಾಗಿದೆ, ಶುದ್ಧವಾಗಿದೆ. ಕುಡಿಯಲು ಯೋಗ್ಯವಾಗಿದೆ’– ಎನ್ನುವುದು ಅವರ ವಿವರಣೆ.
ಎಲ್ಲದರಲ್ಲೂ ನೀರಿದೆ: ಕಳೆದ 13 ವರ್ಷಗಳಲ್ಲಿ ಸ್ವಚ್ಛಗೊಳಿಸಿರುವ ನೀರಿನ ದೊಣೆಗಳಲ್ಲಿ ಬಿರು ಬೇಸಿಗೆಯಲ್ಲೂ ನೀರಿದೆ. ಪ್ರಾಣಿಗಳು ನಿತ್ಯ ಇಲ್ಲಿ ನೀರು ಕುಡಿಯುತ್ತವೆ. ವಿಶೇಷವಾಗಿ ಕರಡಿ, ನವಿಲು, ಚಿರತೆ, ಜಿಂಕೆಗಳಿಗೆ ಈ ಹೊಂಡಗಳು ನೀರಾಸರೆಯಾಗುತ್ತವೆ. ಈಗಲೂ ನೀರಿನ ತಾಣಗಳ ಸುತ್ತ, ಪ್ರಾಣಿಗಳ ಹಿಕ್ಕೆಗಳು ಕಾಣುತ್ತವೆ.
ಚಾರಣ, ಚಿತ್ರಕಲೆ, ಛಾಯಾಗ್ರಹಣದ ಜೊತೆಗೆ ಪರಿಸರದ ಬಗ್ಗೆ ಕಾಳಜಿ ಹೊಂದಿರುವ ನಾಗುಗೆ ಇಂಥ ಹಲವು ಹವ್ಯಾಸಗಳು ವೃತ್ತಿಯಾಗಿವೆ. ಆದರೆ, ಪರಿಸರ ಸಂರಕ್ಷಣೆಯನ್ನು ಸೇವೆಯಾಗಿ ಉಳಿಸಿಕೊಂಡಿದ್ದಾರೆ. ಮೂರೂವರೆ ದಶಕಗಳಿಂದ ಗೆಳೆಯರು, ಶಾಲಾ ಮಕ್ಕಳು, ಪರ ಊರಿನ ಹವ್ಯಾಸಿ ಚಾರಣಿಗರೊಂದಿಗೆ ಜೋಗಿಮಟ್ಟಿ ಸುತ್ತಾಡುತ್ತಿರುವ ನಾಗುಗೆ ಅಲ್ಲಿನ ಗಿಡ ಮರ, ದೊಣೆ, ಹೊಂಡಗಳ ದಾರಿ ಗೊತ್ತಿದೆ.
ಪ್ರಾಣಿಗಳ ಆಹಾರದ ಕಾರಿಡಾರ್ ಕುರಿತು ಪಕ್ಕಾ ಮಾಹಿತಿ ಇದೆ. ಇತ್ತೀಚೆಗೆ ಚಿರತೆಯೊಂದು ನಾಯಿಯನ್ನು ಅಟ್ಟಿಸಿಕೊಂಡು ಹೋಗುತ್ತಿದ್ದ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ. ಪ್ರಾಣಿಗಳ ಜೀವನಕ್ರಿಯೆ ಅರಿತಿರುವ ಅವರು, ಅವುಗಳ ಪ್ರಮುಖ ನೀರಾಸರೆ ತಾಣವನ್ನೇ ಗುರುತಿಸಿ, ಗೆಳೆಯರ ನೆರವಿನಿಂದ ಪುನಶ್ಚೇತನಗೊಳಿಸಿದ್ದಾರೆ.
ಹೀಗೆ ಸುತ್ತಾಡುತ್ತಾ, ಈ ರೀತಿ ಕೆಲಸ ಮಾಡುವ ನಾಗುಗೆ, ‘ಇದರಿಂದ ಏನು ಲಾಭ ನಿಮಗೆ… ಯಾಕೀ ಹುಚ್ಚಾಟ’ ಅಂತ ಕೇಳಿದರೆ ಭಾವನಾತ್ಮಕವಾಗಿ ಉತ್ತರಿಸುತ್ತಾರೆ. ‘ಈ ಕಾಡಿನೊಂದಿಗೆ ನನ್ನದು ಮೂರು ದಶಕಗಳ ಸಂಬಂಧ. ನನ್ನ ಚಿತ್ರಕಲೆ, ಫೋಟೊಗ್ರಫಿಗೆ ಸ್ಫೂರ್ತಿ ಕೊಟ್ಟ ಕಾನನ ಇದು. ಈ ಕಾಡಿನಲ್ಲಿ ನೀರಿನ ಕೊರತೆಯಾಗಿ, ನವಿಲು, ಕರಡಿ, ಚಿರತೆಗಳು ಪರದಾಡಿದ್ದನ್ನು ಕಂಡಿದ್ದೇನೆ.
ಹೀಗಾಗಬಾರದು ಎಂಬುದು ನನ್ನ ಪುಟ್ಟ ಕಾಳಜಿ. ಅದಕ್ಕಾಗಿಯೇ ಈ ಜಲತಾಣಗಳಿಗೆ ಜೀವ ನೀಡುವ ಕೆಲಸ ಮಾಡಿದ್ದೇನೆ. ನಾವೇನ್ ಮಹಾ ಮಾಡಿರೋದು, ಸುರಿಯುವ ಮಳೆ ನೀರಿಗೆ ದಾರಿ ಮಾಡಿಕೊಟ್ಟಿದ್ದೇವೆ. ಅದು ತಲುಪುವ ಜಾಗಕ್ಕೆ ತಲುಪಿಸಿದ್ದೇವೆ. ಹೂಳು ಎತ್ತಿ, ನೀರು ನಿಲ್ಲುವಂತೆ ಮಾಡಿದ್ದೇವೆ, ಅಷ್ಟೆ. ಇದರಲ್ಲಿ ವಿಶೇಷ ಸಾಧನೆಯೇನಿಲ್ಲ’ ಎನ್ನುತ್ತಾರೆ.
ಅಂದಹಾಗೆ, ಕಾಡಿನ ತುದಿಯಲ್ಲಿ ಇನ್ನೂ ಹಲವು ನೀರಿನ ದೊಣೆಗಳಿವೆ, ಗುಹೆಗಳಿವೆ. ಪುಟ್ಟ ಪುಟ್ಟ ಕೆರೆಗಳಿವೆ. ನೀರಾಸರೆಯ ತಾಣಗಳಿವೆ. ಇವುಗಳ ಪುನರುಜ್ಜೀವನಕ್ಕೆ ಕೈಜೋಡಿಸುವವರ ಸಂಖ್ಯೆ ಹೆಚ್ಚಾಗಬೇಕಿದೆ. ಹಾಗಾದರೆ ಮಾತ್ರ ಪ್ರಾಣಿಗಳು ನೀರಿಗಾಗಿ ಊರಿಗೆ ಬರುವುದನ್ನು ತಪ್ಪಿಸಬಹುದು ಎಂಬ ಪರಿಸರ ಕಾಳಜಿ ಅವರದ್ದು. ಸಂಪರ್ಕಕ್ಕೆ–9901124445.