ನೀರಿನ ದೊಣೆಗೆ ಯುವಕರಿಂದ ಪುನಶ್ಚೇತನ

08ct2ep.jpg

ಚಿತ್ರದುರ್ಗ: ನಗರದ ಚಿನ್ಮೂಲಾದ್ರಿ ಅಡ್ವೆಂಚರ್ ಕ್ಲಬ್‌ನ ಯುವಕರು ಜೋಗಿಮಟ್ಟಿ ಅರಣ್ಯ ಪ್ರದೇಶದಲ್ಲಿರುವ ನೀರಿನ ದೊಣೆಯನ್ನು ಪುನಶ್ಚೇತನ ಗೊಳಿಸುವ ಮೂಲಕ ‘ವಿಶ್ವ ಪರಿಸರ ದಿನ’ವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ.

ವಿಶ್ವ ಪರಿಸರ ದಿನಕ್ಕೆ ಮುನ್ನಾ ದಿನ ಕ್ಲಬ್‌ನ ಮುಖ್ಯಸ್ಥ ನಾಗರಾಜ್ (ನಾಗು ಆರ್ಟ್ಸ್‌) ಮತ್ತು ನಾಲ್ವರು ಸ್ನೇಹಿತರು ಆಡುಮಲ್ಲೇಶ್ವರದ ಮೇಲ್ಭಾಗದಲ್ಲಿರುವ ಹಿಮವತ್ಕೇದಾರ ಸಮೀಪದಲ್ಲಿನ ನೀರಿನ ದೊಣೆಯನ್ನು ಸ್ವಚ್ಛಗೊಳಿಸಿದ್ದಾರೆ.

‘ಬಂಡೆಗೆ ಹೊಂದಿಕೊಂಡಂತೆ ನಿರ್ಮಾಣವಾಗಿರುವ ಕಲ್ಲು ಕಟ್ಟಡದ ಈ ದೊಣೆಯಲ್ಲಿ ಹೂಳು ತುಂಬಿಕೊಂಡು ನೀರು ನಿಲ್ಲುವ ಪ್ರಮಾಣ ಕಡಿಮೆ ಯಾಗಿತ್ತು. ಹಿಂದೆ ಬೇರೆ ಬೇರೆ ದೊಣೆಗಳ ಹೂಳು ತೆಗೆದಾಗ, ನೀರು ನಿಲ್ಲುವ ಪ್ರಮಾಣದ ಬಗ್ಗೆ ಅರಿವು ಮೂಡಿತು. ಹಾಗಾಗಿ ಈ ದೊಣೆಯ ಹೂಳು ತೆಗೆದಿದ್ದೇವೆ’ ಎಂದು ನಾಗರಾಜ್ ತಿಳಿಸಿದರು.

ಈ ದೊಣೆಯ ಆಸು–ಪಾಸಿನಲ್ಲಿ ನವಿಲು, ಕರಡಿ, ಚಿರತೆ ಮತ್ತು ಕೊಂಡುಕುರಿಗಳು ಹೆಚ್ಚು ಅಡ್ಡಾಡುತ್ತವೆ. ಬಸವನಬಾಯಿಯಿಂದ ನೀರು ಬೀಳುವ ನೀರು ಸುತ್ತಲಿನ ದೊಣೆಗಳಲ್ಲಿ ಸಂಗ್ರಹ ವಾಗುತ್ತದೆ.

‘ಇಡೀ ದಿನ ಹೂಳು ತೆಗೆದವು. ಹೂಳು ತೆಗೆಯುತ್ತಲೇ ನೀರಿನ ಒರತೆ ಕಾಣಿಸಿಕೊಂಡಿತು. ಮಾರನೆಯ ದಿನ ಒಂದು ಗುಂಡಿಯಲ್ಲಿ ಪ್ರಾಣಿಗಳು ಕುಡಿಯುವಷ್ಟು ನೀರು ಸಂಗ್ರಹವಾಗಿತ್ತು’ ಎನ್ನುತ್ತಾ ನೀರು ಸಂಗ್ರಹವಾಗಿದ್ದನ್ನು ತೋರಿಸುತ್ತಾರೆ ನಾಗರಾಜ್.

‘ದೊಣೆ ಪುನರುಜ್ಜೀವನ’ದ ಶ್ರಮದಾನದಲ್ಲಿ ಕೆಇಬಿ ನೌಕರ ಸಂತೋಷ್, ಎಲೆಕ್ಟ್ರೀಷಿಯನ್ ನಾಗಭೂಷಣ, ಛಾಯಾಚಿತ್ರಗಾಹಕ ಬಾಬು, ಕಲಾವಿದ ಮಾರುತಿ ಪಾಲ್ಗೊಂಡಿದ್ದರು.

donenayakaru.jpg

ಜೋಗಿಮಟ್ಟಿಯ ‘ದೊಣೆ’ನಾಯಕರು!

ಬರ ಮತ್ತು ಬಾಯಾರಿಕೆಯಿಂದ ನಾಡು ಕಂಗೆಟ್ಟಿರುವ ಸಂದರ್ಭದಲ್ಲಿ ಚಿತ್ರದುರ್ಗಕ್ಕೆ ಸಮೀಪದ ಜೋಗಿಮಟ್ಟಿಯಲ್ಲಿ ಮಾತ್ರ ‘ನೀರಹಾಡು’ ಅನುರಣನಗೊಳ್ಳುತ್ತಿದೆ. ಅಲ್ಲಿನ ಕಾಡು ಪ್ರಾಣಿಗಳಿಗೆ ಬಿರುಬೇಸಿಗೆಯಲ್ಲೂ ಕುಡಿವ ನೀರಿಗೆ ಕೊರತೆ ಎನ್ನಿಸಿಲ್ಲ. ಅದಕ್ಕೆ ಕಾರಣ, ಯುವ ಉತ್ಸಾಹಿಗಳ ಪರಿಸರ ಕಾಳಜಿ.

ಕಾಡಿನಲ್ಲಿನ ನೀರತಾಣಗಳನ್ನು ಹುಡುಕಿ ಮರುಪೂರಣಗೊಳಿಸಿರುವ ಅವರು, ನಿಜವಾದ ಅರ್ಥದಲ್ಲಿ ‘ದೊಣೆ’ನಾಯಕರು.

‘ನೀರಿಲ್ಲ ಅಂತ ಎಲ್ಲ ಕಡೆಯಿಂದ ಸುದ್ದಿ ಬರ್ತಾ ಇದೆ. ಇಲ್ನೋಡಿ ಸರ್, ನಮ್ ಜೋಗಿಮಟ್ಟಿ ಕಾಡಿನ ತುದಿಯ ಗವಿಬಾಗಿಲು ಗುಹೆಯಲ್ಲಿ ಈಗಲೂ 13 ಅಡಿ ನೀರಿದೆ. ಸೀಳ್ಗಲ್ಲು, ತಣ್ಣೀರು ದೋಣಿ, ಈರಣ್ಣನ ಬಂಡೆ, ಮಡಿಕೆ ದೋಣಿ, ಎಬ್ಬಿದರು ಹಳ್ಳ, ಪಾಂಡವರಮಠದ ಬಂಡೆಗಳಲ್ಲೂ ನೀರು ನಿಂತಿದೆ…’

ಚಿನ್ಮೂಲಾದ್ರಿ ಅಡ್ವೆಂಚರ್ ಕ್ಲಬ್ ನಾಗರಾಜ್ (ನಾಗು) ಚಿತ್ರದುರ್ಗ ಸಮೀಪದ ಜೋಗಿಮಟ್ಟಿ ಅರಣ್ಯದ ತುದಿಯಲ್ಲಿ, ನೀರಿನ  ದೊಣೆಗಳಲ್ಲಿ (ಜಲಸಂಗ್ರಹ ರಚನೆ), ಗವಿ ಬಾವಿಯೊಳಗೆ ನೀರು ತುಂಬಿರುವ ಚಿತ್ರಗಳನ್ನು ಎದುರಿಗೆ ಹರವಿ ಕುಳಿತು ಮಾತಿಗಿಳಿದರು.

‘ಈ ಬಿರು ಬೇಸಿಗೆಯಲ್ಲೂ ಗುಹೆಯಲ್ಲಿ ನೀರಿದೆ. ಇದೆಲ್ಲ, ಹಿಂದೆ ನಾವು ಹೂಳು ತೆಗೆದು, ಸ್ವಚ್ಛ ಮಾಡಿದ್ದರ ಪ್ರತಿಫಲ…’ ಎಂದರು. ಅವರು ಹರಡಿಕೊಂಡಿದ್ದ ಅಂದು–ಇಂದಿನ ಚಿತ್ರಗಳಲ್ಲಿ ಒಂದೂವರೆ ದಶಕದಲ್ಲಿ ಕಾಡಿನಲ್ಲಾದ ಜಲ ಸಂರಕ್ಷಣೆಯ ಬದಲಾವಣೆಗಳು ಕಾಣುತ್ತಿದ್ದವು!

ನೀರಾಸರೆಯ ತಾಣಗಳು
ಚಿತ್ರದುರ್ಗದಿಂದ 10 ಕಿ.ಮೀ ದೂರವಿರುವ ಜೋಗಿಮಟ್ಟಿ ಕಾಯ್ದಿಟ್ಟ ಅರಣ್ಯ ಪ್ರದೇಶದ ತುದಿಯಲ್ಲಿ ನೀರಿನ ದೊಣೆಗಳಿವೆ. ಇವುಗಳಲ್ಲಿ ಕೆಲವು ಮಾನವ ನಿರ್ಮಿತ. ಇನ್ನೂ ಕೆಲವು ಸ್ವಾಭಾವಿಕ ರಚನೆಗಳು. ಕಾಡು ಪ್ರಾಣಿಗಳ ನೀರಡಿಕೆ ನೀಗಿಸಲು ಬಹಳ ಹಿಂದೆ ಇಂಥ ದೊಣೆಗಳನ್ನು ನಿರ್ಮಿಸಲಾಗಿದೆ.

ಇವುಗಳಲ್ಲಿ ಮಳೆಗಾಲದಲ್ಲಿ ನೀರು ತುಂಬಿಕೊಳ್ಳುತ್ತದೆ. ವರ್ಷಗಟ್ಟಲೆ ನೀರು ಬತ್ತುವುದಿಲ್ಲ. ಕುಡಿಯಲು ಯೋಗ್ಯವಾದ ನೀರಿನ ಈ ದೊಣೆಗಳು ಪ್ರಾಣಿಗಳಿಗೆ ನೀರಾಸರೆಯ ತಾಣಗಳಾಗಿವೆ. 13 ವರ್ಷಗಳ ಹಿಂದೆ ಈ ಗುಹೆ, ಹೊಂಡದ ಬಂಡೆಗಳು ಹೂಳು ತುಂಬಿಕೊಂಡು, ಗಿಡಗಂಟೆಗಳು ಬೆಳೆದುಕೊಂಡಿದ್ದವು. ಮಳೆ ಬಂದಾಗಲೂ ನೀರು ನಿಲ್ಲುತ್ತಿರಲಿಲ್ಲ. ನಿಂತರೂ ಆ ನೀರು ಕುಡಿಯುವ ಪ್ರಾಣಿಗಳಿಗೆ ಎಟುಕುವಂತಿರಲಿಲ್ಲ.

2003ನೇ ಇಸವಿ. ನಾಗರಾಜ್ ಮತ್ತು ಗೆಳೆಯರು ಚಾರಣಕ್ಕೆಂದು ಕಾಡಿಗೆ ಹೋಗಿದ್ದರು. ಗವಿಬಾಗಿಲ ಬಂಡೆ ಮೇಲೆ ಕುಳಿತು ಊಟ ಮಾಡುವಾಗ, ಊಟದ ನಡುವೆ ನೀರಡಿಕೆಯಾಗಿದೆ. ಸುತ್ತಲೂ ಹುಡುಕಿದರೂ ಎಲ್ಲಿಯೂ ನೀರು ಸಿಗಲಿಲ್ಲ. ಕೆಳಗೆ ಗುಹೆಯಲ್ಲಿ ನೀರಿದೆ, ಕುಡಿಯಲು ಯೋಗ್ಯವಿಲ್ಲ.

‘ನಮ್ಮ ಪಾಡೇ ಹೀಗಾದರೆ, ಬೇಸಿಗೆಯಲ್ಲಿ ಇಲ್ಲಿನ ಮೂಕ ಪ್ರಾಣಿಗಳ ಕಥೆ ಹೇಗಿರಬೇಡ’ ಎಂದು ನಾಗು ಮತ್ತು ಗೆಳೆಯ ಜಗದೀಶ್ ಅವರಿಗೆ ಅನ್ನಿಸಿತು. ಅದರ ಫಲವಾಗಿ, ಅವರು ಗವಿಗಳನ್ನು ಸ್ವಚ್ಛಗೊಳಿಸುವ ಸಂಕಲ್ಪ ಕೈಗೊಂಡರು.

‘ಮೊದಲು ಗಿಡಗಂಟೆ, ಹೂಳು ತೆಗೆದವು. ಹೂಳು ತೆಗೆದಂತೆ ಗವಿಯ ಆಳ–ಅಗಲ ವಿಸ್ತಾರವಾಯಿತು. ಹೂಳು ತೆಗೆದ ಮೇಲೆ ದೊಡ್ಡ ಬಾವಿಯೇ ನಿರ್ಮಾಣವಾದಂತಾಯಿತು. ಆ ವರ್ಷ ಮಳೆ ಬಂತು. ಗವಿಯೊಳಗೆ ನೀರು ತುಂಬಿಕೊಂಡಿತು. 20 ಅಡಿಗೂ ಹೆಚ್ಚು ನೀರು ಸಂಗ್ರಹವಾ­ಯಿತು. ಪ್ರಾಣಿಗಳಿಗೆ ನೀರಾಸರೆಯ ತಾಣವಾಯಿತು’ ಎಂದು ಆ ದಿನಗಳನ್ನು ನಾಗು ನೆನಪಿಸಿಕೊಳ್ಳುತ್ತಾರೆ. ಗವಿಬಾಗಿಲ ಗುಹೆಯಲ್ಲಿ ಈ ಬಿರು ಬಿಸಿಲಿನಲ್ಲೂ ವ್ಯಕ್ತಿ ಮುಳುಗುವಷ್ಟು ನೀರಿದೆ ಎಂದು ಪ್ರಸ್ತುತ ಗುಹೆಯ ಸ್ಥಿತಿಯನ್ನು ವಿವರಿಸುತ್ತಾರೆ.

ಉತ್ತೇಜಿಸಿದ ಮೊದಲ ಯಶಸ್ಸು: ಗವಿಬಾಗಿಲ ಗುಹೆಯ ಹೂಳೆತ್ತಿ, ನೀರು ಸಂಗ್ರಹವಾದ ಸುದ್ದಿ ಮಾಧ್ಯಮಗಳಲ್ಲಿ ಪ್ರಚಾರವಾಯಿತು. ಅದು ಯುವಕರ ‘ಶ್ರಮದಾನ’ಕ್ಕೆ ಮತ್ತಷ್ಟು ಉತ್ತೇಜನ ನೀಡಿತು. ಮುಂದೆ ಅರಣ್ಯದಲ್ಲಿರುವ ಕೆಲವು ಜಲತಾಣಗಳನ್ನು ಸ್ವಚ್ಛಗೊಳಿಸಲು ಸಂಕಲ್ಪ ಮಾಡಿದರು. ಹೂಳು ತೆಗೆವ ಜತೆಗೆ ಬಂಡೆಯ ಪೊಟರೆಗಳಿಗೆ ತಡೆಗೋಡೆ ಕಟ್ಟಿ ನೀರು ನಿಲ್ಲಿಸುವ ಕಾರ್ಯಕ್ಕೆ ಚಾಲನೆ ನೀಡಿದರು. ದೊಣೆಯ ಸನಿಹದಲ್ಲೇ ಹಣ್ಣಿನ ಗಿಡಗಳನ್ನು ನೆಟ್ಟರು.

‘ಹಣ್ಣಿನ ಗಿಡಗಳು ಏತಕ್ಕೆ?’ ಎಂದರೆ, ‘ನೀರು ಕುಡಿಯಲು ಬರುವ ಪ್ರಾಣಿಗಳಿಗೆ ಆಹಾರ ಸಿಗಲಿ ಎಂಬುದು ಹಣ್ಣಿನ ಗಿಡ ನೆಡುವ ಉದ್ದೇಶ’ ಎನ್ನುತ್ತಾರೆ ನಾಗು. ಗುಹೆಗಳಲ್ಲಿ ಹೂಳು ತೆಗೆಯುವಾಗ ಪುರಾತನ ಮಡಿಕೆ, ಕುಡಿಕೆಗಳು ಸಿಕ್ಕಿವೆ. ಇಳಿಜಾರಿನಲ್ಲಿರುವ ದೊಣೆಗಳ ಹೂಳು ತೆಗೆಯುವಾಗ ಸಿಕ್ಕಿರುವ ಕಲ್ಲು ಚಪ್ಪಡಿ (ಡ್ರೆಸ್ಸ್ ಸ್ಟೋನ್) ತಡೆ ಗೋಡೆಗಳು ಕಂಡಿವೆ.

ಈ ಕುರುಹುಗಳು, ನೀರಾಶ್ರಯ ತಾಣಗಳ ಪುರಾತನ ಇತಿಹಾಸವನ್ನು ಹೇಳುತ್ತವೆ. ಇತಿಹಾಸ ಸಂಶೋಧಕರು ‘ಮಡಿಕೆ, ಕುಡಿಕೆಗಳು ನೂರಾರು ವರ್ಷಗಳ ಹಿಂದೆ ಈ ಗುಹೆಗಳಲ್ಲಿ ಜನ ವಸತಿ ಇದ್ದಿರಬಹುದು ಎನ್ನುವುದಕ್ಕೆ ಸಾಕ್ಷಿ ಎನ್ನುತ್ತಾರೆ.

ಗುಹೆ, ದೊಣೆಗಳ ಹೂಳು ತೆಗೆದು, ನೀರು ಸಂಗ್ರಹಣೆ ಮಾಡಿದ ಯಶಸ್ಸಿನ ನಂತರ, 2010ರಲ್ಲಿ ನಾಗು ಮತ್ತು ಗೆಳೆಯರು ನೀರು ಸಂಗ್ರಹವಾಗುವ ಬಂಡೆಗಳಿಗೆ ಸಿಮೆಂಟ್, ಇಟ್ಟಿಗೆ ಬಳಸಿ ಒಡ್ಡು ನಿರ್ಮಿಸಿ, ನೀರು ನಿಲ್ಲಿಸಿದರು. 10 ಕಿ.ಮೀ ದೂರದಿಂದ ಅರಣ್ಯದವರೆಗೆ ಇಟ್ಟಿಗೆ ಸಿಮೆಂಟ್ ಹೊತ್ತು, ಬಂಡೆಗಳ ಇಳಿಜಾ­ರಿಗೆ ಅಡ್ಡಲಾಗಿ ಗೋಡೆ ನಿರ್ಮಿಸಿರುವುದು ಒಂದು ಸಾಹಸ.

‘ಒಬ್ಬನೇ ಕೆಲಸ ಆರಂಭಿಸಿದೆ. ನಂತರ ಗೆಳೆಯರು ಕೈಜೋಡಿಸಿದರು. ಒಂದು ವಾರ ಪರಿಶ್ರಮ ಹಾಕಿದೆವು. ಆಗ ಬೇಸಿಗೆಯಲ್ಲಿ ಈ ಕೆಲಸ ಮಾಡಿದ್ದು, ಮಳೆಗಾಲದಲ್ಲಿ ನೀರು ಸಂಗ್ರಹವಾಯಿತು. ಈ ಬೇಸಿಗೆಯಲ್ಲೂ ನೀರಿದೆ, ಅದು ತಿಳಿಯಾಗಿದೆ, ಶುದ್ಧವಾಗಿದೆ. ಕುಡಿಯಲು ಯೋಗ್ಯವಾಗಿದೆ’– ಎನ್ನುವುದು ಅವರ ವಿವರಣೆ.

ಎಲ್ಲದರಲ್ಲೂ ನೀರಿದೆ: ಕಳೆದ 13 ವರ್ಷಗಳಲ್ಲಿ ಸ್ವಚ್ಛಗೊಳಿಸಿರುವ ನೀರಿನ ದೊಣೆಗಳಲ್ಲಿ ಬಿರು ಬೇಸಿಗೆಯಲ್ಲೂ ನೀರಿದೆ. ಪ್ರಾಣಿಗಳು ನಿತ್ಯ ಇಲ್ಲಿ ನೀರು ಕುಡಿಯುತ್ತವೆ. ವಿಶೇಷವಾಗಿ ಕರಡಿ, ನವಿಲು, ಚಿರತೆ, ಜಿಂಕೆಗಳಿಗೆ ಈ ಹೊಂಡಗಳು ನೀರಾಸರೆಯಾಗುತ್ತವೆ. ಈಗಲೂ ನೀರಿನ ತಾಣಗಳ ಸುತ್ತ, ಪ್ರಾಣಿಗಳ ಹಿಕ್ಕೆಗಳು ಕಾಣುತ್ತವೆ.

ಚಾರಣ, ಚಿತ್ರಕಲೆ, ಛಾಯಾಗ್ರಹಣದ ಜೊತೆಗೆ ಪರಿಸರದ ಬಗ್ಗೆ ಕಾಳಜಿ ಹೊಂದಿರುವ ನಾಗುಗೆ ಇಂಥ ಹಲವು ಹವ್ಯಾಸಗಳು ವೃತ್ತಿಯಾಗಿವೆ. ಆದರೆ, ಪರಿಸರ ಸಂರಕ್ಷಣೆಯನ್ನು ಸೇವೆಯಾಗಿ ಉಳಿಸಿಕೊಂಡಿದ್ದಾರೆ. ಮೂರೂವರೆ ದಶಕಗಳಿಂದ ಗೆಳೆಯರು, ಶಾಲಾ ಮಕ್ಕಳು, ಪರ ಊರಿನ ಹವ್ಯಾಸಿ ಚಾರಣಿಗರೊಂದಿಗೆ ಜೋಗಿಮಟ್ಟಿ ಸುತ್ತಾಡು­ತ್ತಿರುವ ನಾಗುಗೆ ಅಲ್ಲಿನ ಗಿಡ ಮರ, ದೊಣೆ, ಹೊಂಡಗಳ ದಾರಿ ಗೊತ್ತಿದೆ.

ಪ್ರಾಣಿಗಳ ಆಹಾರದ ಕಾರಿಡಾರ್ ಕುರಿತು ಪಕ್ಕಾ ಮಾಹಿತಿ ಇದೆ. ಇತ್ತೀಚೆಗೆ ಚಿರತೆಯೊಂದು ನಾಯಿಯನ್ನು ಅಟ್ಟಿಸಿಕೊಂಡು ಹೋಗುತ್ತಿದ್ದ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ. ಪ್ರಾಣಿಗಳ ಜೀವನಕ್ರಿಯೆ ಅರಿತಿರುವ ಅವರು, ಅವುಗಳ ಪ್ರಮುಖ ನೀರಾಸರೆ ತಾಣವನ್ನೇ  ಗುರುತಿಸಿ, ಗೆಳೆಯರ ನೆರವಿನಿಂದ ಪುನಶ್ಚೇತನಗೊಳಿಸಿದ್ದಾರೆ.

ಹೀಗೆ ಸುತ್ತಾಡುತ್ತಾ, ಈ ರೀತಿ ಕೆಲಸ ಮಾಡುವ ನಾಗುಗೆ, ‘ಇದರಿಂದ ಏನು ಲಾಭ ನಿಮಗೆ… ಯಾಕೀ ಹುಚ್ಚಾಟ’ ಅಂತ ಕೇಳಿದರೆ ಭಾವನಾತ್ಮಕವಾಗಿ ಉತ್ತರಿಸುತ್ತಾರೆ. ‘ಈ ಕಾಡಿನೊಂದಿಗೆ ನನ್ನದು ಮೂರು ದಶಕಗಳ ಸಂಬಂಧ. ನನ್ನ ಚಿತ್ರಕಲೆ, ಫೋಟೊಗ್ರಫಿಗೆ ಸ್ಫೂರ್ತಿ ಕೊಟ್ಟ ಕಾನನ ಇದು. ಈ ಕಾಡಿನಲ್ಲಿ ನೀರಿನ ಕೊರತೆಯಾಗಿ, ನವಿಲು, ಕರಡಿ, ಚಿರತೆಗಳು ಪರದಾಡಿದ್ದನ್ನು ಕಂಡಿದ್ದೇನೆ.

ಹೀಗಾಗಬಾರದು ಎಂಬುದು ನನ್ನ ಪುಟ್ಟ ಕಾಳಜಿ. ಅದಕ್ಕಾಗಿಯೇ ಈ ಜಲತಾಣಗಳಿಗೆ ಜೀವ ನೀಡುವ ಕೆಲಸ ಮಾಡಿದ್ದೇನೆ. ನಾವೇನ್ ಮಹಾ ಮಾಡಿರೋದು, ಸುರಿಯುವ ಮಳೆ ನೀರಿಗೆ ದಾರಿ ಮಾಡಿಕೊಟ್ಟಿದ್ದೇವೆ. ಅದು ತಲುಪುವ ಜಾಗಕ್ಕೆ ತಲುಪಿಸಿದ್ದೇವೆ. ಹೂಳು ಎತ್ತಿ, ನೀರು ನಿಲ್ಲುವಂತೆ ಮಾಡಿದ್ದೇವೆ, ಅಷ್ಟೆ. ಇದರಲ್ಲಿ ವಿಶೇಷ ಸಾಧನೆಯೇನಿಲ್ಲ’ ಎನ್ನುತ್ತಾರೆ.

ಅಂದಹಾಗೆ, ಕಾಡಿನ ತುದಿಯಲ್ಲಿ ಇನ್ನೂ ಹಲವು ನೀರಿನ ದೊಣೆಗಳಿವೆ, ಗುಹೆಗಳಿವೆ. ಪುಟ್ಟ ಪುಟ್ಟ ಕೆರೆಗಳಿವೆ. ನೀರಾಸರೆಯ ತಾಣಗಳಿವೆ. ಇವುಗಳ ಪುನರುಜ್ಜೀವನಕ್ಕೆ ಕೈಜೋಡಿಸುವವರ ಸಂಖ್ಯೆ ಹೆಚ್ಚಾಗಬೇಕಿದೆ. ಹಾಗಾದರೆ ಮಾತ್ರ ಪ್ರಾಣಿಗಳು ನೀರಿಗಾಗಿ ಊರಿಗೆ ಬರುವುದನ್ನು ತಪ್ಪಿಸಬಹುದು ಎಂಬ ಪರಿಸರ ಕಾಳಜಿ ಅವರದ್ದು. ಸಂಪರ್ಕಕ್ಕೆ–9901124445.

 

ಕುಶಾಲನಗರದಲ್ಲಿ ಸೂರ್ಯೋದಯದ ದೃಶ್ಯ.

 

 

ಹೂಗೊಂಚಲಿಗೆ ಬಣ್ಣ, ಪುಟ್ಟ ಹಕ್ಕಿಗೆ ಹಾಡು
ಬೆಟ್ಟಕ್ಕೆ ಎದೆಯೆತ್ತಿ ನ್ಲಿಲುವ ಧೈರ್ಯ
ಹೊಳೆಯ ನೀರಿಗೆ ಉಗುರ ಬಿಸಿ
ಗಾಳಿ ನೆರಳಿಗೆ ತಂಪು ತಂದ ಯುಗಾದಿ
ಕುಸಿದು ಕೊರಗುವ ಬಾಳಿಗೇನ ತಂದೆ…
– ಕವಿ ಡಾ. ಸಿದ್ಧಲಿಂಗಯ್ಯ ಅವರ ಈ ಕವನದ ಸಾಲುಗಳು ವಸಂತ ಋತುವಿನೊಂದಿಗೆ ಆಗಮಿಸುವ ಯುಗಾದಿ ಹಬ್ಬದ ಸಡಗರವನ್ನು ಮೆಲುಕು ಹಾಕಿಸುತ್ತದೆ.

ನಿಜ, ಯುಗಾದಿ ಎಂದರೆ ಹೊಸತನ. ಮಕ್ಕಳಿಗೆ ಹೊಸ ಬಟ್ಟೆಯ ಸಂಭ್ರಮ. ಕೃಷಿಕರಿಗೆ ಮಳೆ-ಬೆಳೆ-ನಕ್ಷತ್ರಗಳ ವರ್ಷದ ಲೆಕ್ಕಾಚಾರ, ಉದಿಮೆದಾರರಿಗೆ ವರ್ಷದ ಸೋಲು-ಗೆಲುವನ್ನು ನಿರ್ಧರಿಸುವ ಸಮಯ. ಹೀಗೆ ಯುಗಾದಿ ಹಬ್ಬ ಹಲವು ‘ಹೊಸತು’ಗಳ ಸಂಗಮ.

ಯುಗಾದಿ – ಚೈತ್ರ ಮಾಸದ ಮೊದಲ ದಿನ. ಹೊಸ ಸಂವತ್ಸರದ ಮೊದಲ ಹಬ್ಬ. ದೇವಾನು-ದೇವತೆಗಳ ಸೋಂಕ್ಲಿಲದ ನಿಸರ್ಗದ ಹಬ್ಬ. ಹೊಸ ಮಳೆಗಾಲಕ್ಕೆ ಶ್ರೀಕಾರ. ಒಳ್ಳೆಯದು – ಕೆಟ್ಟದ್ದನ್ನು ಸಮನಾಗಿ ಸ್ವೀಕರಿಸುವ ಆಶಯದಿಂದ ಬೇವು-ಬ್ಲೆಲ ಮ್ಲೆಲುವ ಹಬ್ಬ. ಹೊಸ ಬಟ್ಟೆ ತೊಟ್ಟು ಹೊಟ್ಟೆ ತುಂಬಾ ಒಬ್ಬಟ್ಟು ತಿಂದು ಎಳೆ ಚಿಗುರಿನ ಹೊಂಗೆ, ಬೇವು, ಹಿಪ್ಪೆ ಮರದ ನೆರಳ್ಲಲಿ ಮೈ ಹರವಿಕೊಂಡು ವಿರಮಿಸಿಕೊಳ್ಳುವ ದಿನ.

 

ಸೂರ್ಯೋದಯದ ಮತ್ತೊಂದು ಚಿತ್ರ

ಯುಗಾದಿ ಸಂಪೂರ್ಣ ವಿರಾಮದ ಕೊನೆಯ ಮತ್ತು ದುಡಿಮೆಯ ಆರಂಭ- ಇವೆರಡರ ನಡುವೆ ಬರುವಂತಹ ಹಬ್ಬ. ಹಾಗಾಗಿಯೇ ಈ ಹಬ್ಬದ್ಲಲಿ ಸಿಹಿ-ಕಹಿಯ ಮಿಶ್ರಣವಿರುತ್ತದೆ. ಕಾಮನ ಹಬ್ಬ ನಿಸರ್ಗದ್ಲಲಿ ವರ್ಷದ ಕೊನೆಯ ಹಬ್ಬವಾದರೆ, ಯುಗಾದಿ ವರ್ಷದ ಮೊದಲ ಹಬ್ಬ. ಕಾಮನ ಹಬ್ಬವನ್ನು ಹಳ್ಳಿಗರು ಕದಿರೆ ಹುಣ್ಣಿಮೆ ಎಂತಲೂ ಕರೆಯುತ್ತಾರೆ. ಈ ಹಬ್ಬದ್ಲಲಿ ಹಳೆಯ ವಸ್ತುಗಳನ್ನು ಸುಟ್ಟು ಹೊಸ ವಸಂತದ ಆಗಮನಕ್ಕೆ ಸಿದ್ಧವಾಗುವ ಪರ್ವ ಕಾಲ. ಇದಾದ ಸ್ವಲ್ಪ ದಿನಕ್ಕೆ ಬರುವ ಯುಗಾದಿ ಯುಗದ ಆದಿ. ಶಾಲಿವಾಹನ ಶಕೆಯ ಹೊಸ ಸಂವತ್ಸರದ ಆರಂಭ.

ಹಳ್ಳಿಗಳ್ಲಲಿ ಯುಗಾದಿ…
ಯುಗಾದಿಯ ನೈಜತೆ ಉಳಿದಿರುವುದೇ ಹಳ್ಳಿಗಳ್ಲಲಿ, ರೈತರ ನೆಲೆಯ್ಲಲಿ. ನಗರವಾಸಿಗಳಿಗೆ ಯುಗಾದಿ ಕೇವಲ ಒಂದು ಹಬ್ಬ ಮಾತ್ರ. ಅವರು ಅಬ್ಬಬ್ಬಾ ಎಂದರೆ ಎರಡು ದಿವಸ ಹಬ್ಬ ಮಾಡಬಹುದು. ಆದರೆ ಕೃಷಿಕರ ಹಬ್ಬದ ಸಂಭ್ರಮವಿದೆಯ್ಲಲಾ, ಅದು ತಿಂಗಳ ಮುಂಚೆಯೇ ಆರಂಭವಾಗುತ್ತದೆ. ಈ ದಿನಗಳ್ಲಲಿ ಕೃಷಿಕರಿಗೆ ಯಾವುದೇ ಕೆಲಸ ಹೇಳಿದರೂ ‘ಹಬ್ಬಾದ್ಮೇಲೆ ನೋಡನ್ ಬಿಡ್ಲೆ’ ಎನ್ನುತ್ತಾರೆ. ಸಾಲ ಕೇಳಲು ಬಂದವರಿಗೂ ಅಥವಾ ಸಾಲ ಕೇಳುವವರು, ಹೊಸ ಕೆಲಸ ಆರಂಭಿಸುವವರು ಎಲರೂ ‘ಯುಗಾದಿ’ಯ ನೆಪ ಹೇಳುತ್ತಾರೆ.
ಯುಗಾದಿ ಹಬ್ಬವನ್ನು ಸಂಭ್ರಮಿಸಲು ಊರಿಗೆ ಊರೇ ತಯಾರಾಗುತ್ತಿರುತ್ತದೆ. ಮಹಿಳೆಯರು ಎರಡು ವಾರ ಮುಂಚೆಯೇ ಮನೆ ಸ್ವಚ್ಛಗೊಳಿಸಲು ಶುರುಮಾಡುತ್ತಾರೆ. ವರ್ಷಪೂರ್ತಿ ಗುಡಿಸದ ಮೂಲೆಗಳು, ವಾಡೆ, ಕೊಮ್ಮೆಗಳು, ಕೊಟ್ಟಿಗೆ-ಪಡಸಾಲೆಗಳು ಶುದ್ಧವಾಗುತ್ತವೆ. ಅಟ್ಟ, ಗೋಡೆ, ಅಂಗಳ, ಮಾಡು(ತಾರಸಿ)ಗಳ ದೂಳೊಡೆಯುತ್ತಾರೆ. ಮನೆ ಮುಂಭಾಗದ ಗೋಡೆಗಳಿಗೆ ಕೆಮ್ಮಣ್ಣು-ಸಗಣಿಯಿಂದ ಸಾರಿಸುತ್ತಾರೆ(ಈಗ ಎಲ ಪೇಂಟ್‌ಗಳ್ದದೇ ರಾಜ್ಯ). ಇಡೀ ಮನೆ ಸುಣ್ಣ-ಬಣ್ಣ ಕಾಣುತ್ತದೆ. ಕೆಮ್ಮಣ್ಣಿನ ಬಣ್ಣದ್ಲಲಿ ‘ಗೋಡೆಯ ಮೇಲೆ ಹಸೆ ಚಿತ್ತಾರಗಳನ್ನು ಮೂಡಿಸುವುದುಒಂದು ಸಂಭ್ರಮದ ಕೆಲಸ.

 

ಗಂಡಸರು ಹೊಸ ಬಟ್ಟೆ-ಬರೆ ಖರೀದಿಗೆ ಪಟ್ಟಣಕ್ಕೆ ಓಡಾಡುತ್ತಾರೆ. ಹಬ್ಬದ ಖರೀದಿಗಾಗಿ ಅಡಕೆ ಮಂಡಿ, ಗೊಬ್ಬರಿ ಮಂಡಿ, ಮಾಲೀಕರ ಬಳಿ ‘ಹಬ್ಬದ ಸಾಲವೆಂದೇ’ ಮುಂಗಡ ಹಣ ಪಡೆಯುತ್ತಾರೆ. ಬಟ್ಟೆ ಖರೀದಿಯೊಂದಿಗೆ ಬೇಸಾಯಕ್ಕೆ ಬೇಕಾದ ಹೊಸ ನೇಗಿಲು, ನೊಗ, ಮೇಣಿ, ದೊಡ್ಡಮಿಣಿ, ಹಗ್ಗ, ಚಿಲಕ್ಕಣ್ಣಿ, ಮಕಾಡ, ಕೊಳದಂಡೆ, ಕುಂಟೆ, ಕುಳ, ಅಲುಗು, ಕೂರಿಗೆ ಮುಂತಾದವುಗಳನ್ನು ಹೊಂಚುವ ಧಾವಂತದಲ್ಲಿರುತ್ತಾರೆ. ಯುಗಾದಿ ಹಿಂದೆ ಮುಂದೆ ದನಗಳ ಜಾತ್ರೆಗಳೂ ನಡೆಯುವುದರಿಂದ ರಾಸುಗಳನ್ನು ಕೊಟ್ಟು-ಕೊಳ್ಳುವ ಪ್ರಕ್ರಿಯೆಯೂ ನಡೆಯುತ್ತದೆ.

ಮೂರು ದಿನದ ಹಬ್ಬ !
ಬಯಲು ಸೀಮೆಯ್ಲಲಿ ಯುಗಾದಿ ಮೂರು ದಿನದ ಹಬ್ಬ. ಮೊದಲ ದಿನ ಮುಸುರೆ ಹಬ್ಬ. ಪಾತ್ರೆ-ಪಗಡಗಳನ್ನು ತೊಳೆದು ಹೊಸ ನೀರು ತಂದು ತುಂಬಿಸುತ್ತಾರೆ. ಹದಿನೈದು ದಿನಗಳ ಸ್ವಚ್ಚತಾ ಕಾರ್ಯಕ್ಕೆ ಅಂತಿಮ ರೂಪ. ಎರಡನೇ ದಿನ ಸಿಹಿ ಹಬ್ಬ. ಮನೆ ಮಕ್ಕಳ್ಲೆಲಾ ಎಣ್ಣೆ ಸ್ನಾನ ಮಾಡಿ ಹೊಸ ಬಟ್ಟೆ ತೊಡುತ್ತಾರೆ. ಮನೆಗ್ಲೆಲ ತೋರಣ ಕಟ್ಟಿ, ದನಗಳ ಕೊಟ್ಟಿಗೆಗೂ ಮಾವು-ಬೇವು ತೋರಣ ಕಟ್ಟಿ ಬೇವಿನ ಚಿಕ್ಕ-ಚಿಕ್ಕ ಕೊಂಬೆಗಳನ್ನು ತೋರಣದ ತುದಿಗೆ ಸಿಕ್ಕಿಸುತ್ತಾರೆ. ಜಾನುವಾರುಗಳು ರೋಗ ಮುಕ್ತವಾಗಲೆಂದು ಬೇವು ಬಳಸುತ್ತಾರೆ ಎಂಬುದು ಹಿರಿಯ ನಂಬಿಕೆ. ಮೂರನೆಯದಿನ ‘ವರಷದ ತಡುಕು’ ಅಥವಾ ವರ್ಷದ ಹೆಚ್ಚು. ಈ ದಿನ ಕೆಲವು ಕಡೆ ಬೇಟೆಗೆ ಹೋಗುತ್ತಾರೆ. ಮಾಂಸದ ಅಡುಗೆ ಮಾಡಿ ಊಟ ಮಾಡುತ್ತಾರೆ. ಸಸ್ಯಹಾರಿಗಳು ನುಗ್ಗೆಕಾಯಿ ಸಂಬಾರು, ಆಂಬೊಡೆಯಂತಹ ಎಣ್ಣೆ ತಿಂಡಿ ಮಾಡಿ ಸವಿಯುತ್ತಾರೆ.

 

ಹೊಸ ನೀರಿನ ಸಿಂಚನ

ಎತ್ತುಗಳಿಗೆ ಗೌಸು ಹೊದಿಸಿ, ಚೆಂಡು ಹೂವಿನ ಹಾರ ಹಾಕಿ, ಬಂಡಿ ಕಟ್ಟಿ ದೇವಾಲಯಕ್ಕೆ ಮೂರು ಸುತ್ತು ಬರುತ್ತಾರೆ. ಅವುಗಳಿಗೆ ವಿಶೇಷ ನೈವೇದ್ಯ ಇರುತ್ತದೆ. ಹೊಸ ಬಟ್ಟೆ ತೊಡುವ ಮುಂಚೆ ದನಗಳ ಬೆನ್ನ ಮೇಲೆ ಹಾಕುವುದು ರೂಢಿ. ಕೆಲವರು ಹೊಸ ಬಟ್ಟೆಗಳಿಗೆ ಅರಿಶಿಣ ಸೋಕಿಸುತ್ತಾರೆ. ಮೈಸೂರು ಸೀಮೆಯ್ಲಲಿ ದವಸ ಧಾನ್ಯಗಳನ್ನು ಕಣದ್ಲಲಿ ಒಟ್ಟು ಮಾಡಿ ಪೂಜಿಸುತ್ತಾರೆ.
ಪೂಜೆ ಪುನಸ್ಕಾರಗಳು ಮುಗಿದ ಮೇಲೆ ಮನೆ ಯಜಮಾನ ಎಲರಿಗೂ ಬೇವು-ಬ್ಲೆಲ ಹಂಚುತ್ತಾನೆ. ಮನೆಗೆ ಯಾರೇ ಬಂದರೂ ಬೇವು-ಬ್ಲೆಲ ನೀಡುವುದು ಸಂಪ್ರದಾಯ. ಕಿತ್ತು ಹೋದ ಎಷ್ಟು ಸಂಬಂಧಗಳು ಈ ಹಬ್ಬದ್ಲಲಿ ಬೇವು-ಬ್ಲೆಲ ತಿಂದು ಒಂದಾಗುವ ಸಂಪ್ರದಾಯವಿದೆ. ಬೇಳೆ ಒಬ್ಬಟ್ಟು, ಗಟ್ಟಕ್ಕಿ ಪಾಯಸ, ಅಕ್ಕಿ ಪಾಯಸ, ಕಡುಬು ಅಡುಗೆಗಳು ಹಬ್ಬದ ವಿಶೇಷ.

 

ಪೂಜೆ ಮಾಡಿ, ಸಿಹಿ ಊಟದ ನಂತರ ‘ಜೂಜಾಟ ಶುರು’. ಗಂಡಸರು ಹೊಸ ಬಟ್ಟೆ ತೊಟ್ಟು ಹೊಂಗೆ ಮರದ ನೆರಳ್ಲಲಿ ಇಸ್ಪೀಟ್ ಆಟ ಆರಂಭಿಸಿದರೆ, ಮಹಿಳೆಯರು ಮನೆಯ ಅಂಗಳದ್ಲಲೇ ಚೌಕಾಬರ, ಪಗಡೆ, ಆನೆ-ಕುರಿಯಾಟ.. ಹೀಗೆ ವಿವಿಧ ಆಟಗಳನ್ನಾಡುತ್ತಾರೆ. ಮನರಂಜನೆಯೊಂದಿಗೆ ಹೊರ ಹೊಮ್ಮುವ ಸೋಲು-ಗೆಲುವು ವರ್ಷ ಪೂರ್ತಿ ಎಚ್ಚರಿಕೆಯಿಂದ ಹೆಜ್ಜೆ ಇಡುವಂತೆ ಜನರಿಗೆ ಮಾರ್ಗದರ್ಶನ ನೀಡುತ್ತವೆ.

ಯುಗಾದಿ ಹಬ್ಬಕ್ಕೆ ಹದಿನೈದು ದಿನ ಮುನ್ನವೇ ಗ್ರಾಮೀಣ ಕ್ರೀಡೆಗಳ ಸುಗ್ಗಿ. ಜೊತೆ ಜೊತೆಗೆ ಬಯಲು ನಾಟಕಗಳ ಅಭ್ಯಾಸ. ಕೃಷಿಯ ಬಿಡುವಿನ ವೇಳೆಯ್ದಾದರಿಂದ ಊರ ಮಂದಿಯ್ಲೆಲ ಈ ಕ್ರೀಡೆಯ್ಲಲಿ ಭಾಗಿಯಾಗುತ್ತಾರೆ. ಮೈಗ್ಲೆಲ ಹರಳೆಣ್ಣೆ ಹಚ್ಚಿಕೊಂಡು ಕಬ್ಬಡ್ಡಿ, ಕೊಕ್ಕೊ, ವಾಲಿಬಾಲ್‌ನಂತಹ ಆಟವಾಡುವ ಸಂಪ್ರದಾಯ ಕೆಲವು ಪ್ರದೇಶಗಳ್ಲಲಿವೆ. ತುಮಕೂರು, ಚಿತ್ರದುರ್ಗ ಭಾಗಗಳ್ಲಲಿ ಯುಗಾದಿ ಹಬ್ಬದ ದಿನದಂದು ಉಯ್ಯಾಲೆಯಾಡುತ್ತಾರೆ. ಉಯ್ಯಾಲೆ ತೂಗುತ್ತ ತೂಗುತ್ತಾ, ಹಾಡುವ ಜನಪದ ಗೀತೆಗಳನ್ನು ಕೇಳುವುದೇ ಒಂದು ಸಂಭ್ರಮ.

ಬಿದಿಗೆ ಚಂದ್ರ ದರ್ಶನ :
ಗಣೇಶ ಚತುರ್ಥಿಯ ಬಿದಿಗೆ ಚಂದ್ರ ದರ್ಶನ ಅಪವಾದ. ಯುಗಾದಿ ಪಾಡ್ಯದ ನಂತರದ ಬಿದಿಗೆ ಚಂದ್ರ ದರ್ಶನ ಶುಭ ಎನ್ನುವ ನಂಬಿಕೆ ಗ್ರಾಮೀಣರ‍್ಲಲಿದೆ.  ಹಬ್ಬದೂಟ ಉಂಡು, ಉಯ್ಯಾಲೆಯಾಡಿ, ಜೂಜಾಟ ಮುಗಿಸಿ, ಪಶ್ಚಿಮದ್ಲಲಿ ಸೂರ್ಯ ಅಸ್ತಂಗತವಾಗುತ್ತ್ದಿದಂತೆ ಊರ ಮಂದಿಯ್ಲಲ ಮುಗಿಲತ್ತ ಮುಖಮಾಡುತ್ತಾರೆ. ಸಂವತ್ಸದರ ಮೊದಲ ಚಂದ್ರನ ಕೋಡನ್ನು ಕಂಡ ಮಂದಿ ಮನೆಗೆ ಹಿಂದಿರುಗಿ ಹಿರಿಯರ ಕಾಲಿಗೆ ನಮಸ್ಕರಿಸುತ್ತಾರೆ. ನವ ಸಂವತ್ಸರದ ಮೊದಲ ಚಂದ್ರನ ದರ್ಶನ ಇಡೀ ವರ್ಷದ್ಲಲಿ ಶುಭವನ್ನೇ ತರುತ್ತದೆ ಎಂಬ ನಂಬಿಕೆ ರೈತರ‍್ದದು.
ಚಂದ್ರನ ಕೋಡಿನ್ಲಲಿ ಮಳೆ-ಬೆಳೆಗಳ ಲೆಕ್ಕಾಚಾರ ಶುರು. ಇದಾದ ನಂತರ ಪಂಚಾಂಗ ಶ್ರವಣ. ಊರಿನ ದೇವಾಲಯದ್ಲಲೋ, ಅರಳಿಕಟ್ಟೆಯ ಮೇಲೋ ಕುಳಿತು, ಆ ವರ್ಷದ ಭವಿಷ್ಯ ಕೇಳುವ ಸಂಪ್ರದಾಯ. ಊರಿನ ಹಿರಿಯರು ವರ್ಷದ್ಲಲಿ ಯಾವ ಬೆಳೆ ಉತ್ತಮವಾಗಿದೆ ಎಂಬುದನ್ನು ವಿವರಿಸುತ್ತಾರೆ. ಧಾನ್ಯ ಹೆಸರು ಹೇಳದೇ ‘ಬಣ್ಣಗಳನ್ನು’ ಉಲೇಖಿಸುತ್ತಾ, ‘ಈ ಬಾರಿ ಹಸಿರು, ಕೆಂಪು, ಬೂದು ಬಣ್ಣದ ಧಾನ್ಯಗಳಿಗೆ ಏಳಿಗೆಯಿದೆ’ ಎಂದು ವಿವರಿಸುತ್ತಾರೆ. ಬುಧ, ಗುರು, ಚಂದ್ರ.. ಇತ್ಯಾದಿ ಗ್ರಹಗಳ ನಾಯಕತ್ವದ್ಲಲಿ ‘ಕೃಷಿ ಗ್ರಹ-ಗತಿ’ಗಳ ಲೆಕ್ಕಾಚಾರವೂ ನಡೆಯುತ್ತದೆ.

ಉತ್ತರ ಕರ್ನಾಟಕದ ಕೆಲವೆಡೆ ಚಕ್ಕಡಿಗೆ (ಗಾಡಿ) ತರಾತರ ಬಣ್ಣ ಹಚ್ಚಿ ಸಿಂಗರಿಸುತ್ತಾರೆ. ಚಕ್ಕಡಿಯ ಒಂದೊಂದು ಭಾಗಕ್ಕೆ ಒಂದೊಂದು ಬಣ್ಣ, ಗಾಲಿಗಳಿಗೆ ಕೆಮ್ಮಣ್ಣು, ಗಾಲಿ ಅಂಚಿಗೆ, ಗುಂಭಕ್ಕೆ, ಗುಜ್ಜುಗಳಿಗೆ ಸುಣ್ಣ ಬಳಿಯುವುದು ವಾಡಿಕೆ. ಬಯಲು ಸೀಮೆಯ್ಲಲಿ ಕೆಲವು ಜನಾಂಗದವರು ಕೃಷಿ ಆಯುಧಗಳನ್ನಿಟ್ಟು ಪೂಜಿಸುತ್ತಾರೆ. ಹಿರಿಯರ ಸಮಾಧಿಗಳಿಗೆ ಹೋಗಿ ಹಣ್ಣು-ಕಾಯಿ ಮಾಡಿ, ಎಡೆ ಹಾಕಿ ನಮಸ್ಕರಿಸುತ್ತಾರೆ.

ಅದಕ್ಕೆ ಹೇಳುವುದು ಹಬ್ಬ ಎಂದರೆ ಪೂಜೆ ಪುನಸ್ಕಾರವಷ್ಟೇ ಅಲ, ಅದೊಂದು ಸಂಸ್ಕೃತಿ, ವಿಜ್ಞಾನ, ಮನರಂಜನೆಯ ಸಂಗಮವೆಂದು. ಇಂಥ ಸಂಪ್ರದಾಯ ಹಲವು ಆಧುನಿಕತೆಗಳ ಅಬ್ಬರದ್ಲಲಿ ಮಾಯವಾಗುತ್ತಿದೆ ಎಂಬುದು ನೋವಿನ ಸಂಗತಿ. ಈ ನೋವು ಉಪಶಮನವಾಗಲಿ, ‘ಖರ’ನಾಮ ಸಂವತ್ಸವರ ಹಳೆಯ ಸಂಪ್ರದಾಯಗಳ್ಲೆಲ ಮರಳಿ ಹಳ್ಳಿಗಳಿಗೆ ಬರಲಿ ಎಂದು ಹಾರೈಸೋಣ.

(ಪ್ರಜಾವಾಣಿಯ ‘ಯುಗಾದಿ ವಿಶೇಷ ಪುರವಣಿಯಲ್ಲಿ’ ಬರೆದ ಲೇಖನ)

ಪಕ್ಷಿಗಳಿಗೆ ಬೊಗಸೆ ನೀರು ಕೊಡಿ ಪ್ಲೀಸ್!

This slideshow requires JavaScript.

ಚಿತ್ರದುರ್ಗ: ಆಡುಮಲ್ಲೇಶ್ವರ ಕಿರು ಉದ್ಯಾನದ ಪಕ್ಕದ ನರ್ಸರಿಯಲ್ಲಿ ನವಿಲೊಂದು ಪೈಪ್‌ನಿಂದ ಸೋರುತ್ತಿದ್ದ ನೀರಿಗೆ ಕೊಕ್ಕು ಹಾಕುತ್ತಿತ್ತು, ಬೆಳವಲದ ಹಕ್ಕಿಯೊಂದು ಕೊಳವೆಯಿಂದ ತೊಟ್ಟಿಕ್ಕುತ್ತಿದ್ದ ನೀರಿಗೆ ಕೊಕ್ಕು ನೀಡುತ್ತಿತ್ತು. ಜಿಲ್ಲಾಧಿಕಾರಿ ಕಚೇರಿಯ ಹಿಂಬದಿಯ ಹೋಟೆಲ್‌ ಟೇಬಲ್‌ ಮೇಲ್ಭಾಗದಲ್ಲಿ ಜಗ್ಗಿನಲ್ಲಿಟ್ಟಿದ್ದ ನೀರಿಗಾಗಿ ಮಂಗಗಳು ಕಸರತ್ತು ನಡೆಸುತ್ತಿದ್ದವು…

ಬೇಸಿಗೆಯ ತೀವ್ರತೆ ಹೆಚ್ಚಾಗಿದೆ. ಏಪ್ರಿಲ್‌ – ಮೇ ತಿಂಗಳಿಗೆ ಮುನ್ನವೇ ವಾತಾವರಣದಲ್ಲಿ 38 ಡಿಗ್ರಿ ಸೆ. ತಾಪಮಾನ ದಾಖಲಾಗಿದೆ. ಮಾರ್ಚ್‌ ಆರಂಭದವರೆಗೂ ಅಲ್ಲಲ್ಲಿ ಕಾಣುತ್ತಿದ್ದ ಜಲಮೂಲಗಳು ಬರಿದಾಗಿವೆ. ನಗರಕ್ಕೆ ಹೊಂದಿ ಕೊಂಡಿರುವ ಉದ್ಯಾನ, ಅರಣ್ಯದಂಚಿನ ಪ್ರದೇಶಗಳಲ್ಲಿ ಪ್ರಾಣಿ, ಪಕ್ಷಿಗಳು ನೀರಿಗಾಗಿ ಪರದಾಡುತ್ತಿವೆ.

ಅರಣ್ಯ ಪ್ರದೇಶದಲ್ಲಿ ಎಲ್ಲೂ ನೀರು ನಿಲ್ಲುವ ವ್ಯವಸ್ಥೆ ಇಲ್ಲ. ಮನುಷ್ಯರೇನೋ ಬಾಯಾರಿದರೆ ನೀರು ಕೇಳಿ ಪಡೆಯುತ್ತಾರೆ. ಆದರೆ, ಬಿಸಿಲ ದಿನಗಳಲ್ಲಿ ಮೂಕ ಪಕ್ಷಿಗಳ ಪಾಡೇನು? ಅದಕ್ಕಾಗಿ ದಯವಿಟ್ಟು ಪಕ್ಷಿಗಳಿಗೆ ನಿತ್ಯ ಸ್ವಲ್ಪ ನೀರಿಡಿ’ ಎನ್ನುವುದು ಪಕ್ಷಿ ಪ್ರಿಯರ ಕಳಕಳಿಯಾಗಿದೆ.

ಪಕ್ಷಿ, ಪ್ರಾಣಿಗಳಿಗಾಗಿ ಆಹಾರ ನೀಡುವ ಸಂಪ್ರದಾಯ ಸಾಮಾನ್ಯ. ನೀರು ಕೊಡುವ ಕಾಯಕ  ವಿರಳ. ಆದರೆ, ನಗರದ ಕೆಲವು ಕಡೆ ಅಂಥ ಪ್ರಯತ್ನಗಳು ನಡೆದಿವೆ. ಆ ಪ್ರಯತ್ನ ವ್ಯಾಪಕ ಆಗಬೇಕು ಎನ್ನುವುದು ಪರಿಸರ ಪ್ರಿಯರ ಮನವಿಯಾಗಿದೆ.

ಮೂರು ವರ್ಷಗಳ ಪ್ರಯತ್ನ:

ನಗರದ ಹೊರವಲಯದಲ್ಲಿರುವ ಮಾದಾರ ಚನ್ನಯ್ಯ ಗುರುಪೀಠದ ಅಂಗಳದಲ್ಲಿ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಮಠದ ಎದುರಿಗಿನ ಕಟ್ಟೆಯ ಮೇಲೆ ಮಣ್ಣಿನ ಹರಿವಾಣ (ತಟ್ಟೆಗಿಂತ ದೊಡ್ಡದು) ನೀರು ತುಂಬಿಸಿ ಇಡುತ್ತಾರೆ. ಮೂರ್ನಾಲ್ಕು ವರ್ಷಗಳಿಂದ ಈ ಕಾಯಕ ಮುಂದುವರಿದಿದೆ. ಬೇಸಿಗೆ ಮಾತ್ರವಲ್ಲ, ವರ್ಷಪೂರ್ತಿ ‘ಜಲಕಾಯಕ’ ನಡೆಯುತ್ತಿದೆ.

ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ, ಈ ಪಾತ್ರೆಗಳಿಗೆ ನೀರು ತುಂಬಿಸುತ್ತಾರೆ. ಮೂರು ಹೊತ್ತು ನೂರಾರು ಹಕ್ಕಿಗಳು ಹಿಂಡು ಹಿಂಡಾಗಿ ಬಂದು ನೀರು ಕುಡಿಯುತ್ತವೆ. ಕೆಲವು ಈಜಾಡುತ್ತವೆ. ಪಕ್ಕದಲ್ಲಿದ್ದ ಗಿಡಗಳ ಮೇಲೆ ಕುಳಿತು ದಣಿವಾರಿಸಿಕೊಂಡು ಹೋಗುತ್ತವೆ.

‘ಸಂಪಿಗೆ, ಬೇವಿನ ಮರ ಸುತ್ತ ಕಟ್ಟೆ ಕಟ್ಟಿಸಿದ್ದೇವೆ. ಅದರ ಸುತ್ತ ನೀರಿಟ್ಟಿದ್ದೇವೆ. ಮೂರು ಹೊತ್ತು ನೀರು ಕುಡಿಯಲು ನೂರಾರು ಪಕ್ಷಿಗಳು ಬರುತ್ತವೆ. ಚಿಟುಗು ಗುಬ್ಬಿ, ಬೆಳವಲ, ನೀಲಿ ಬಣ್ಣದ ಹಕ್ಕಿ, ಮರಕುಟುಕ, ಗುಬ್ಬಚ್ಚಿ, ಕಾಗೆ, ಸಾಂಬಾರು ಕಾಗೆ.. ಹೀಗೆ ಗಾತ್ರ, ಬಣ್ಣ, ಧ್ವನಿ ಆಧರಿಸಿ, 10ರಿಂದ 15 ಬಗೆಯ ಪಕ್ಷಿಗಳು ಬರುತ್ತವೆ. ನೀರು, ಆಹಾರ, ಆವಾಸ ಮೂರು ಇರುವುದರಿಂದ ಪಕ್ಷಿಗಳಿಗೆ ಉತ್ತಮ ತಾಣವಾಗಿದೆ’ ಎಂದು ಸ್ವಾಮೀಜಿ ಮಠದ ಅಂಗಳದ ಪಕ್ಷಿ ಸ್ನೇಹಿ ವಾತಾವರಣ ವಿವರಿಸುತ್ತಾರೆ.

ಪಾರಿವಾಳಗಳ ಹಿಂಡು:

ಕೆಳಗೋಟೆ ಯಲ್ಲಿರುವ ಆಕಾಶವಾಣಿ ಕೇಂದ್ರದ ಅಂಗಳದಲ್ಲಿ ಪಾರಿವಾಳಗಳ ಸಂಸಾರವೇ ಇದೆ. ಅಂದಾಜು 80ಕ್ಕೂ ಹೆಚ್ಚು ಪಾರಿವಾಳಗಳಿವೆ. ಇದರ ಜತೆ ಬೇರೆ ಬೇರೆ ಪಕ್ಷಿಗಳೂ ಬಂದು ಹೋಗುತ್ತವೆ.

‘ಆಕಾಶವಾಣಿ ಕೇಂದ್ರದ ಆವರಣ ದಲ್ಲಿ ಪಕ್ಷಿಗಳಿಗಾಗಿ ಕಾಯಂ ಜಲಪಾತ್ರೆ ಯನ್ನು ನಿರ್ಮಿಸಲಾಗಿದೆ. ನಮ್ಮಲ್ಲಿ ಕೆಲಸ ಮಾಡುವ ಸಿಬ್ಬಂದಿ ಸೇರಿ ಅದನ್ನು ನಿರ್ಮಿಸಿದ್ದಾರೆ. ಸೆಕ್ಯುರಿಟಿ ವಿಭಾಗದವರು ಪಕ್ಷಿಗಳಿಗೆ ಬೆಳಿಗ್ಗೆ, ಸಂಜೆ ಆಹಾರ ಪೂರೈಸುತ್ತಾರೆ. ಹೀಗಾಗಿ, ಆಕಾಶವಾಣಿ ಅಂಗಳದಲ್ಲಿ ಪಕ್ಷಿಗಳ ಸಂಸಾರ ನಿರಂತರ ವಾಗಿರುತ್ತದೆ’ ಎನ್ನುತ್ತಾರೆ ಕಾರ್ಯಕ್ರಮ ಮುಖ್ಯಸ್ಥೆ ಎಸ್‌.ಉಷಾಲತಾ.

‘ಸರಸ್ವತಿಪುರದ 1ನೇ ಕ್ರಾಸ್‌ನಲ್ಲಿ ನಮ್ಮ ಮನೆಯಿದೆ. ಅಂಗಳದಲ್ಲಿ ಸಂಪಿಗೆ, ಸೀಬೆ, ತೆಂಗಿನ ಮರಗಳಿವೆ. ಅಂಗಳದಲ್ಲಿ ದೊಡ್ಡದಾಗಿ ಪ್ಲಾಸ್ಟಿಕ್‌ ಟ್ಯಾಂಕ್ ಇಟ್ಟು, ನೀರು ತುಂಬಿಸುತ್ತೇವೆ. ಸಾಂಬಾರ ಕಾಗೆ, ಚಿಂವ್‌ ಚಿಂವ್‌ ಗುಬ್ಬಿ ಸೇರಿದಂತೆ ಹಲವು ಪಕ್ಷಿಗಳು ಬರುತ್ತವೆ. ಡ್ರಮ್‌ ಕಂಠದ ಮೇಲೆ ಕುಳಿತು, ಕೊಕ್ಕು ಹಾಕಿ, ನೀರು ಕುಡಿದು ಹಾರಿ ಹೋಗುತ್ತವೆ. ನೀರು, ನೆರಳು, ಹಣ್ಣು ಹಕ್ಕಿಗಳಿಗೆ ಸೂಕ್ತ ತಾಣವಾಗಿದೆ’ ಎನ್ನುತ್ತಾರೆ ನಿವಾಸಿ ಜಿ.ಎಸ್.ಉಜ್ಜಿನಪ್ಪ.

ಕೋಟೆ ಅಂಗಳದಲ್ಲಿ…:

ಐತಿಹಾಸಿಕ ಏಳು ಸುತ್ತನ ಕೋಟೆ ಪ್ರಾಂಗಣದಲ್ಲಿ ಪ್ರಾಣಿಗಳಿಗೆ ಅನುಕೂಲವಾಗುವಂತಹ ನೀರಿನ ವ್ಯವಸ್ಥೆ ಇಲ್ಲ ಎಂದು ಅಲ್ಲಿನ ವಾಯುವಿಹಾರಿಗಳು ಅಭಿಪ್ರಾಯಪಡು ತ್ತಾರೆ. ಕಳೆದ ವರ್ಷ ಗೊಂಬೆ ಮಂಟಪದ ವ್ಯಾಪ್ತಿಯಲ್ಲಿ ಅಳಿಲು, ಪಕ್ಷಿಗೆ ಅನುಕೂಲ ವಾಗುವಂತೆ ಕೆಲವು ವಾಯುವಿಹಾರಿ ಗಳು ಅಲ್ಲಲ್ಲೇ ಚಿಪ್ಪು ಮತ್ತು ಪ್ಲಾಸ್ಟಿಕ್ ಡಬ್ಬಗಳಲ್ಲಿ ನೀರು ತುಂಬಿಡುತ್ತಿದ್ದರು.

ಅದು ಸರಿ ಹೋಗುತ್ತಿಲ್ಲ­ವಾದ್ದರಿಂದ, ಪಕ್ಕದಲ್ಲೇ ಕೆಲಸ ಮಾಡುತ್ತಿದ್ದ ಕಾರ್ಮಿಕ ರಿಗೆ ಸಣ್ಣದೊಂದು ಬಾನಿ (ತೊಟ್ಟಿ) ನಿರ್ಮಿಸುವಂತೆ ಮನವಿ ಮಾಡಿದ್ದಾರೆ. ಆ ಕೆಲಸ ಇನ್ನೂ ಆಗಿಲ್ಲ. ಪ್ರಾಣಿ ಪಕ್ಷಿಗಳು ಪರದಾಡುವುದು ತಪ್ಪಿಲ್ಲ’ ಎನ್ನುತ್ತಾರೆ ಕೋಟೆ ವಾಯುವಿಹಾರಿಗಳು.

ಯಾಕ್ರಿ ಪದ್ಮನಾಭ್ ಹೀಗ್ ಮಾಡ್ಕೊಂಡ್ರಿ..

ಕಾರ್ಟೂನಿಸ್ಟ್ ಗೆಳೆಯ ಎಸ್.ವಿ.ಪದ್ಮನಾಭ್ ಆತ್ಮಹತ್ಯೆ ಮಾಡಿಕೊಂಡರು ಎಂದು ಮೆಸೇಜ್ ನೋಡಿದಾಗ, ಕೆಲವೊಮ್ಮೆ ಕಾರ್ಟುನಿಸ್ಟ್ ಗೆಳೆಯರು ಜೋಕ್ ಮಾಡ್ತಿರ್ತಾರೆ. ಇದು ಹಾಗೆ ಇರಬೇಕು ಅಂದು ಕೊಂಡು, ಆತ್ಮೀಯ ಗೆಳೆಯರಿಗೆ ಕರೆ ಮಾಡಿ ಕೇಳಿದೆ. ಮೆಸೇಜ್ ಸುಳ್ಳಾಗಿರಲಿಲ್ಲ. ಆದರೆ, ಆ ಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಪದ್ಮನಾಭ್, ಕೇವಲ ಮಾತು-ಮಂಥನದ ಗೆಳೆಯರಷ್ಟೇ ಅಲ್ಲ. ಸತತ ಮೂರು ವರ್ಷಗಳ ಕಾಲ ನನ್ನೊಂದಿಗೆ ಮಧ್ಯಾಹ್ನದ ಊಟದ ನೆಂಟನಾಗಿದ್ದರು. ನನ್ನ ಅಮ್ಮನ ಕೈಯಲ್ಲಿ ತಯಾರಾದ ತಿಳಿ ಸಾರು ಅವರಿಗೆ ಬಹಳ ಪ್ರಿಯವಾಗಿತ್ತು.

 

2004ರಲ್ಲಿ ‘ವಿಜಯ ಕರ್ನಾಟಕ’ದಲ್ಲಿದ್ದಾಗ, ನಾನು ಕೃಷಿ ಮ್ಯಾಗಜಿನ್ ವಿಭಾಗದ ಉಸ್ತುವಾರಿ ನೋಡಿಕೊಳ್ಳುತ್ತಿದ್ದೆ. ಪಕ್ಕದ ಸೆಕ್ಷನ್ ಅವರದ್ದು. ಮಧ್ಯಾಹ್ನ 1.30 ಆದ ಕೂಡಲೇ,’ಏನ್ರಿ ಇವತ್ತು ಊಟದ ವಿಶೇಷ’ ಎನ್ನುತ್ತಿದ್ದರು ಪದ್ಮನಾಭ್. ಹಾಗೆ ಕೇಳುತ್ತಿದ್ದಂತೆ, ಅವರ ಟೇಬಲ್ ಡೈನಿಂಗ್ ಟೇಬಲ್ ಆಗುತ್ತಿತ್ತು. ನಾನು, ರವಿ ಅಜ್ಜೀಪುರ, ಶಶಿಧರ ಹಳೇಮನಿ, ಎನ್. ಆರ್. ಬಡಿಗೇರ್, ಮಣಿಕಾಂತ್, ರಜನಿ… ಹೀಗೆ ಇನ್ನೂ ಅನೇಕ ಗೆಳೆಯರು ಎಲ್ಲ ಒಟ್ಟಿಗೆ ಊಟಕ್ಕೆ ಸೇರುತ್ತಿದ್ದೆವು. ಬಾಕ್ಸ್ ಗಳು ಬದಲಾಗುತ್ತಿದ್ದವು. ಅನೇಕ ಬಾರಿ, ಊಟ ಕಡಿಮೆಯಾದಾಗ, ಅರೆ ಹೊಟ್ಟೆ ಮಾಡ್ಕೊಬೇಡಿ ಬನ್ನಿ, ಅಂತ ಎಸ್ ಎಲ್ ವಿಗೆ ಹೋಗಿ ಊಟ ಮಾಡಿದ ದಿನಗಳೂ ಇದ್ದವು.
ಊಟದ ಜತೆ, ನಮ್ಮ ಟೇಬಲ್ ಮೇಲೆ ಹಿಂದಿನ ದಿನದ ಗರಮಾಗರಂ, ಅಪಾರಾರ್ಥ ಕಾರ್ಟೂನುಗಳು ಉಪ್ಪಿನಕಾಯಿಯಾಗುತ್ತಿದ್ದವು. ಆ ಕಾರ್ಟೂನ್ ಹೆಂಗೆ ಬರದೆ ಗೊತ್ತಾ ಅಂತ ಪದ್ಮನಾಭ್ ಗಂಭೀರವಾಗಿ ವಿವರಣೆ ನೀಡುತ್ತಿದ್ದರೆ, ಉಳಿದವರು ಬಾಯಲ್ಲಿ ಅನ್ನದ ತುತ್ತಿದ್ದರೂ, ತೊದಲುಕೊಂಡೇ ನಗುತ್ತಿದ್ದರು. ನೆತ್ತಿಗೆ ಹತ್ತುವವರೆಗೂ ನಗುತ್ತಿದ್ದರು. ‘ಅಪಾರಾರ್ಥ’ ಅಂಕಣದಲ್ಲಿ ಅವರು ಬರೆದಿದ್ದ ‘ಇನ್ ಕಮಿಂಗ್ ಕಾಲ್ಸೂ’ ಎಂಬ ಕಾರ್ಟೂನ್ ಇವತ್ತು ನೆನಪಿಸಿಕೊಂಡರೂ ನಗೆ ಹುಟ್ಟಿಸುತ್ತದೆ. ಇವತ್ತಿಗೂ ಅನೇಕ ಪತ್ರಿಕೋದ್ಯಮ ಶಿಬಿರಗಳಲ್ಲಿ ಈ ಕಾರ್ಟೂನ್ ಅನ್ನು ಉದಾಹರಿಸುತ್ತೇನೆ.
ಪದ್ಮನಾಭ್ ಆಫೀಸಿಗೆ ಬಂದ ಕೂಡಲೇ, ಎಲ್ಲ ಪೇಪರ್ ತಡಕುತ್ತಿದ್ದರು. ‘ಏನೂ ಆಹಾರ ಸಿಗಲಿಲ್ಲವಲ್ರೀ.. ಕಾರ್ಟೂನ್ ಬರೆಯೋಕೆ ಐಡಿಯಾ ಕೊಡ್ರಿ’ ಅಂತ ನಮ್ಮ ಹತ್ರ ಮಾಹಿತಿ ತಗೊಳ್ಳುತ್ತಿದ್ದರು. ನಾವೆಲ್ಲ ತಲೆಗೊಂದು ಐಡಿಯಾಕೊಟ್ಟು, ನಾಳೆ ಇದೇ ಬರೀತಾರೆ ನೋಡು.. ಎಂದು ಹೇಳುತ್ತಾ, ಬೆಳಿಗ್ಗೆ ಎದ್ದು ಪೇಪರ್ ನೋಡಿದರೆ, ವಿಭಿನ್ನವಾದ ಕಾರ್ಟೂನು ಪ್ರಕಟವಾಗಿರುತ್ತಿತ್ತು. ಪದ್ಮನಾಭ್ ಯೋಚಿಸುತ್ತಿದ್ದ ರೀತಿಯೇ ಅದ್ಭುತವಾಗಿತ್ತು. ಆತನ ಗೆರೆಗಳಲ್ಲಿ, ಪರಿಕಲ್ಪನೆಗಳಲ್ಲಿ ಬಹಳ ಸೂಕ್ಷ್ಮತೆಗಳಿರುತ್ತಿದ್ದವು.
ಪದ್ಮನಾಭ್ ಕಾರ್ಟೂನ್ ಪತ್ರಿಕೆಗಳಲ್ಲಷ್ಟೇ ಪ್ರಕಟವಾಗುತ್ತಿದ್ದಾಗ, ಅದನ್ನು ಕೃಷಿ ಬರಹಗಳಿಗೂ ಬಳಸಿಕೊಳ್ಳಬೇಕೆಂದು ಯೋಚನೆ ಮಾಡಿದ್ದು ಗೆಳೆಯ ಜಿ.ಕೃಷ್ಣಪ್ರಸಾದ್. ಪದ್ಮನಾಭ್ ಕೂಡ ಕೃಷಿ ಮನೆತನದವರು, ಮಣ್ಣು, ಗೊಬ್ಬರ, ಗಿಡ ಮರಗಳ ಬಗ್ಗೆ ಪ್ರೀತಿ ಇದ್ದಿದ್ದರಿಂದ ಕೃಷಿ ಪುಸ್ತಕಕ್ಕೆ ಕಾರ್ಟೂನ್ ಬರೆಯೋಕೆ ಒಪ್ಪಿದರು. ‘ಸಾವಯವ ಕೃಷಿಯ ಹತ್ತು ಹೆಜ್ಜೆಗಳು’ ಪುಸ್ತಕಕ್ಕೆ ಬರೆದುಕೊಟ್ಟರು. ಆ ಚಿತ್ರಗಳು ಎಷ್ಟು ಲವ್ಲಿಯಾಗಿದ್ದವೆಂದರೆ, ರೈತ ಮತ್ತು ಎರೆಹುಳು ನಡುವಿನ ಪ್ರೀತಿಯನ್ನು ಬಹಳ ಅಂದವಾಗಿ ಗೆರೆಗಳಲ್ಲಿ ಮೂಡಿಸಿದ್ದರು. ಇದಾದ ಮೇಲೆ ಕೃಷಿ ಪುಸ್ತಕದ ನಮ್ಮ ಬಳಗಕ್ಕೆ ಅವರು ಸೇರಿದರು. ಕೃಷಿ ಕಾರ್ಯಕ್ರಮಗಳಿಗೂ ಬರೋದಕ್ಕೆ ಶುರು ಮಾಡಿದರು.
ಮುಂದೆ, ಪದ್ಮನಾಭ್, ನನ್ನ ಅಜೋಲ್ಲಾ ಪುಸ್ತಕಕ್ಕೆ ಚಿತ್ರಗಳನ್ನು ಬರೆದುಕೊಟ್ಟರು. ಮೊದಲು ಒಪ್ಪಿರಲಿಲ್ಲ. ಪುಸ್ತಕ ಓದಿದ ಮೇಲೆ, ‘ಬಹಳ ಚೆನ್ನಾಗಿದೆ ರೀ, ಇಂಥ ಮಾಹಿತಿಗೆ, ಈ ಕಾರ್ಟೂನ್ ಬರೆಯೋಣ’ ಅವರೇ ನಿರ್ಧಾರ ಮಾಡಿ ಚಿತ್ರಗಳನ್ನು ಬರೆದರು. ‘ರೈತರೊಬ್ಬರು ಅಜೋಲಾ ಮುಂದೆ ಕುಳಿತು, ನಿಬ್ಬೆರಗಾಗಿ ನೋಡುತ್ತಿರುವುದನ್ನು’ ಅದ್ಭುತವಾಗಿ ಬರೆದಿದ್ದರು.
ಅಷ್ಟು ಅದ್ಬುತವಾಗಿ ಕಾರ್ಟೂನ್ ರಚಿಸುತ್ತಿದ್ದರೂ, ಬೇರೆ ಕಾರ್ಟೂನಿಸ್ಟ್ ಗಳ ಬಗ್ಗೆ ಬಹಳ ಗೌರವವಿತ್ತು. ಆಗ ಪ್ರಜಾವಾಣಿಯಲ್ಲಿ ಪಿ.ಮಹಮದ್ ‘ಚಿನಕುರುಳಿ’ ಬರೆಯುತ್ತಿದ್ದರು. ಅದನ್ನಿಟ್ಟುಕೊಂಡು, ಅನೇಕ ಬಾರಿ ಅವರಿಗೆ ಫೋನ್ ಮಾಡಿ ಮಾತನಾಡುತ್ತಿದ್ದರು.
ಮೊನ್ನೆ ಮೊನ್ನೆ ಕೂಡ, ಹೆಲ್ಮೆಟ್ ಕಡ್ಡಾಯವಾದಾಗ, ‘ಯಾರು ಯಾರನ್ನು ಬೇಕಾದರೂ ಬೈಕ್ ಹಿಂದೆ ಕೂರಿಸಿಕೊಂಡು ಹೋಗಬಹುದು’ ಎಂದು ಪದ್ಮನಾಭ್ ಕಾರ್ಟೂನ್ ಬರೆದಿದ್ದರು. ಅದನ್ನು ನೋಡಿ, ‘ರೀ ಪದ್ಮನಾಭ್ ಎಂಥ ಅಪಾಯದ ಐಡಿಯಾ ಕೊಡ್ತೀರಿ’ ಎಂದು ಪ್ರತಿಕ್ರಿಯಿಸಿದ್ದೆ. ಪ್ರತಿಕ್ರಿಯೆ ಸಾಲದು ಎಂದು ಫೋನ್ ಮಾಡಿ ಮಾತನಾಡಿದ್ದೆ. ‘ಶ್ರೀಕಂಠ, ಫೋನ್ ಕಳೆದು ಹೋಗಿದೆ. ನಿಮ್ಮ ನಂ. ಇರಲಿಲ್ಲ. ಅನೇಕ ಸಾರಿ ಫೋನ್ ಮಾಡ್ಕೋಬೇಕು ಅಂದುಕೊಂಡೆ, ನಂಬರ್ ಸಿಕ್ಕಿರಲಿಲ್ಲ. ನಿಮ್ಮ ನಂಬರ್ ಕೊಡಿ’ ಎಂದು ತೆಗೆದುಕೊಂಡಿದ್ದರು. ನಾನು, ಮಲ್ಲಿಕಾರ್ಜುನ ಹೊಸಪಾಳ್ಯ, ನಮ್ಮ ಹೊಸ ಪುಸ್ತಕಕ್ಕೆ ಕಾರ್ಟೂನ್ ಮಾಡಿಸುವ ಕುರಿತು ಯೋಚನೆ ಮಾಡ್ತಿದ್ದೆವು. ಆದರೆ, ಫೋನ್ ನಂಬರ್ ತಗೊಂಡ ಪದ್ಮನಾಭ್ ಮತ್ತೆ ಕರೆ ಮಾಡಲೂ ಇಲ್ಲ. ನಮ್ಮ ಕರೆಗೂ ಸಿಗಲಿಲ್ಲ.
ಯಾಕ್ ಹೀಗಾಯ್ತು ಎಂದು ಕೊಳ್ಳುತ್ತಿದ್ದಾಗ, ‘ಪದ್ಮನಾಭ್ ಆತ್ಮಹತ್ಯೆ ಮಾಡ್ಕೊಂಡ್ರು’ ಅಂತ ಬುಧವಾರ ನಾಲ್ಕು ಗಂಟೆಗೆ ಮೆಸೇಜ್ ಬಂತು. ಖಚಿತ ಪಡಿಸಿಕೊಳ್ಳೋಕೆ ಗೆಳೆಯರಿಗೆ ಕರೆ ಮಾಡಿದೆ. ವಿಷಯ ಸುಳ್ಳಾಗಲಿಲ್ಲ. ಕಾರಣ ಗೊತ್ತಾಗಲಿಲ್ಲ. ಅಲ್ಲಿ ಇಲ್ಲಿ ಸಿಕ್ಕಿದ ಗೆಳೆಯರು, ಫೋನ್ ನಲ್ಲಿ ಮಾತನಾಡಿದವರು,
‘ಸಾಲಬಾಧೆ’ ಸಾವಿಗೆ ಕಾರಣವಂತೆ ಎಂದು ಮಾತನಾಡಿಕೊಳ್ಳುತ್ತಿದ್ದರು. ಆದರೆ, ಹತ್ತಿರವಿದ್ದ ಗೆಳೆಯರು, ಅವರನ್ನು ಮಾತನಾಡಿಸಿ, ಏನಾದರೂ ಪರಿಹಾರ ಸೂಚಿಸಬಹುದಿತ್ತೋ ಏನೋ. ಹಾಗಂತ ಗೆಳೆಯ ಟಿ.ಆರ್.ಶಿವಪ್ರಸಾದ್ ಹೇಳ್ತಿದ್ದ. ಏನೋ ಅಪ್ಪ, ನಿನ್ನೆ ಮೊನ್ನೆಯಿಂದ ಮಾಧ್ಯಮದಲ್ಲಿ ಕೆಲಸ ಮಾಡುವ ಮೂರ್ನಾಲ್ಕು ಮಂದಿ ಹೀಗೆ ಮರಣಕ್ಕೆ ತುತ್ತಾಗಿದ್ದಾರೆ. ಕೆಲಸದ ಒತ್ತಡವೋ, ಜೀವನ ಶೈಲಿಯಲ್ಲಾದ ಬದಲಾವಣೆಯೋ.. ಒಂದು ಗೊತ್ತಾಗುತ್ತಿಲ್ಲ. ಇವೆಲ್ಲ ನೋಡಿಕೊಂಡು ವಾಪಸ್ ಮಣ್ಣಿನ ಮೇಲೆ ನಿಂತು ನೆಲೆ ಕಂಡು ಕೊಳ್ಳೋಣ ಎಂದರೆ, ಅಲ್ಲೂ ಕೂಡ ‘ಪದ್ಮನಾಭ್’ ಪ್ರಕರಣಗಳೇ ಕಾಣಿಸುತ್ತಿವೆ. ಸಾಯವ ರೈತರಿಗೆ ಆಪ್ತ ಸಲಹೆ ನೀಡುವುದಕ್ಕೂ ಊರಿನಲ್ಲಿ ಜನ ಇಲ್ಲದಂತಾಗಿದ್ದಾರೆ. ಬದುಕು ಬಹಳ ‘ಮೌನ’ ಎನ್ನಿಸುತ್ತಿದೆ.

ಅದೆಲ್ಲ ಸರಿ, ಪದ್ಮನಾಭ್, ಗೆರೆಗಳೊಂದಿಗೆ ನಮ್ಮನ್ನೆಲ್ಲ ನಗಿಸುತ್ತಾ, ಒಂದು ದಿನವೂ ಮುಖದ ಮೇಲೆ ಸಾವಿನ ಗೆರೆ ಎಳೆದುಕೊಳ್ಳದ ನೀವು.. ಯಾಕೆ ಹೀಗೆ ಮಾಡ್ಕೊಂಡ್ರಿ…. !

ಹೊಲದ ಕೃಷಿಹೊಂಡದಲ್ಲಿ ನೀರಿನ ಸೆಲೆ !

ನೀರಿನ ಸೆಲೆಯಿಂದ ತುಂಬಿಕೊಳ್ಳುತ್ತಿದ್ದ ತೆರೆದ ಬಾವಿಗಳು ಮಾಯವಾಗುತ್ತಿರುವ ಈ ಕಾಲದಲ್ಲಿ 3 ಮೀಟರ್ ಆಳದ ಕೃಷಿಹೊಂಡವೊಂದರಲ್ಲಿ ನೀರಿನ ಸೆಲೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ…!
ಹಿರಿಯೂರು ತಾಲ್ಲೂಕಿನ ಐಮಂಗಲ ಹೋಬಳಿಯ ವದ್ದೀಕೆರೆಯ ನಾಗವೇಣಿ ಲೋಕನಾಥ್ ಎಂಬ ರೈತರ ಹೊಲದ ಕೃಷಿಹೊಂಡದಲ್ಲಿ ನೀರಿನಸೆಲೆ ಲಭ್ಯವಾಗಿದೆ. ಈ ಸಣ್ಣದಾದ ನೀರಿನ ಒರತೆಯಿಂದಾಗಿ ಒಂದೆರಡು ವಾರದಲ್ಲಿ ಹೊಂಡದಲ್ಲಿ ಎರಡೂವರೆ ಅಡಿಯಷ್ಟು ನೀರು ಸಂಗ್ರಹವಾಗಿದೆ.
ಕೃಷಿಕ ಮಹಿಳೆ ನಾಗವೇಣಿ, ಕೃಷಿ ಚಟುವಟಿಕೆಗೆ ಎದುರಾಗಿದ್ದ ನೀರಿನ ಸಮಸ್ಯೆಗೆ ಪರಿಹಾರವಾಗಿ 20 ಮೀಟರ್ ಅಗಲ,20ಮೀಟರ್ ಉದ್ದ, 3 ಮೀಟರ್ ಆಳದ ಅಳತೆಯ ಕೃಷಿಹೊಂಡ ಮಾಡಿಸಿದ್ದಾರೆ. ಇಲಾಖೆಯ ಯೋಜನೆ­ಯೊಂದರಡಿ ₨ 1ಲಕ್ಷ ವೆಚ್ಚದಲ್ಲಿ ನಿರ್ಮಿಸಿ­ರುವ ಕೃಷಿಹೊಂಡದ ನಿರ್ಮಾಣ ಅಂತಿಮ ಹಂತ­ದಲ್ಲಿ­ದ್ದಾಗ, ಹೊಂಡದ ತುದಿಯಿಂದ ನೀರಿನ ಒರತೆ ಕಾಣಿಸಿಕೊಂಡಿದೆ. ಒಂದೆರಡು ವಾರಗಳಲ್ಲಿ ಹೊಂಡದಲ್ಲಿ ಎರಡೂವರೆ ಅಡಿಯಷ್ಟು ನೀರು ಸಂಗ್ರಹವಾಗಿದೆ. ಬಿರು ಬೇಸಿಗೆಯಲ್ಲಿ ನೀರಿನ ಒರತೆ ಕಂಡು, ನಾಗವೇಣಿ ಕುಟುಂಬ ಸಂಭ್ರಮಪಟ್ಟಿದೆ.

ನೀರಿನ ಸೆಲೆ ಹೇಗೆ?
ಹಿರಿಯೂರು ತಾಲ್ಲೂಕಿನ ಐಮಂಗಲ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ  200 ರಿಂದ 250 ಅಡಿಗೆ ಲಭ್ಯವಿದೆ. ಆದರೆ, ಆ ನೀರಿನಲ್ಲಿ 1500 ಪಿಪಿಎಂಗಿಂತ ಹೆಚ್ಚು ಲವಣಾಂಶಗಳಿದ್ದು, ಕುಡಿಯಲು ಯೋಗ್ಯವಿಲ್ಲ. ಇಂಥ ಪ್ರದೇಶದಲ್ಲಿ ತೆಗೆಸಿರುವ ಕೃಷಿಹೊಂಡದಲ್ಲಿ 10 ಮೀಟರ್‌ಗೆ ನೀರಿನ ಸೆಲೆ ಲಭ್ಯವಾಗಿದೆ. ಜತೆಗೆ, ಆ ನೀರು ಕುಡಿಯಲು ಯೋಗ್ಯವಾಗಿದೆ ಎಂದು ಜಲತಜ್ಞ ಎನ್.ದೇವರಾಜರೆಡ್ಡಿ ಖಚಿತಪಡಿಸುತ್ತಾರೆ. ‘ಈ ಭಾಗದ ಭೂಗರ್ಭದಲ್ಲಿರುವ ಶಿಥಿಲ (ಫೆದರ್‌ಝೋನ್) ವಲಯದಲ್ಲಿ ನೀರಿನ ಹರಿವಿನ ಪ್ರಮಾಣ ಉತ್ತಮವಾಗಿದೆ. ಇದೇ ಕಾರಣದಿಂದಾಗಿಯೇ ಇಷ್ಟು ಮೇಲ್ಭಾಗದಲ್ಲಿ ನೀರು ಲಭ್ಯವಾಗಿದೆ’ ಎಂದು ರೆಡ್ಡಿ ಅಭಿಪ್ರಾಯ­ಪಡುತ್ತಾರೆ.
‘ಕೃಷಿಹೊಂಡದ ಸಾಲಿನಲ್ಲಿರುವ (ಮೇಲ್ಭಾಗದಲ್ಲಿ) ಹೊಲದಲ್ಲಿ ಒಂದೆರಡು ಬಾವಿಗಳಿವೆ. ಬಾವಿ ಹಾಗೂ ಕೃಷಿ ಹೊಂಡ­ವಿರುವ ಜಾಗ ಇಳಿಜಾರಿನಲ್ಲಿದೆ. ಮಳೆ ನೀರು ಇದೇ ಜಾಡಿನಲ್ಲಿ ಹರಿಯುವಾಗ ಬಾವಿಗಳಲ್ಲಿ ಇಂಗಿರಬಹುದು. ಬಾವಿ ನೀರು ಬಳಸದಿರುವುರಿಂದ ಅಂತರ್ಜಲ ಹೆಚ್ಚಾಗಿ ಕೃಷಿ ಹೊಂಡದಲ್ಲಿ ಒರತೆ ಕಾಣಿಸಿಕೊಂಡಿ­ರ­ಬಹುದು ಎಂದು ನಾಗವೇಣಿ ಮತ್ತೊಂದು ರೀತಿ ಅಂದಾಜಿಸುತ್ತಾರೆ.

4 ಕಿ.ಮೀ ಕ್ಯಾಚ್‌ಮೆಂಟ್‌:
ನಾಲ್ಕು ಕಿ.ಮೀ ವ್ಯಾಪ್ತಿಯ ಹಳ್ಳಿಗಳ ನೀರು ನಾಗವೇಣಿಯವರ ಜಮೀನಿನ ಮೇಲೆ ಹರಿದು, ನಂತರ ಮುಂದಿ­ರುವ ಸಾಣಿಕೆರೆಗೆ ಸೇರುತ್ತಿತ್ತಂತೆ. ಹಾಗೆ ಹರಿಯುವ ನೀರು ಭೂಮಿಯಲ್ಲಿ ಇಂಗಿ, ಭೂಗರ್ಭದ ಶಿಥಿಲಪದರ­ದಲ್ಲಿ ಸಂಗ್ರಹವಾಗಿದೆ. ಇಳಿಜಾರಿಗೆ ಅಡ್ಡಲಾಗಿ ಕೃಷಿಹೊಂಡ ನಿರ್ಮಿಸಿರುವುದರಿಂದ, ನೀರಿನ ಸೆಲೆ ಕಾಣುತ್ತಿದೆ ಎಂಬುದು ತಜ್ಞರ ಲೆಕ್ಕಾಚಾರವಾಗಿದೆ.

ತಜ್ಞರು ಹೀಗೆ ಹೇಳ್ತಾರೆ…
ಭೂಗರ್ಭದ ಶಿಥಿಲವಲಯದಲ್ಲಿ ನೀರಿನ ಪ್ರಮಾಣ ಉತ್ತಮವಾಗಿರುವುದೇ, ಹೊಂಡದಲ್ಲಿ ನೀರಿನ ಒರತೆ ಗೋಚರಿಸಲು ಸಾಧ್ಯವಾಗಿದೆ. ಜಮೀನಿನಲ್ಲಿ ಮಳೆ ನೀರು ಇಂಗಿದರೆ ಇಂಥ ಅಚ್ಚರಿಗಳು ಕಾಣಿಸಲು ಸಾಧ್ಯವಿದೆ.
– ಎನ್. ದೇವರಾಜರೆಡ್ಡಿ, ಜಲತಜ್ಞರು,
ಕೋಟ್‌…

ಕೊನೆ ಕ್ಷಣದಲ್ಲಿ ನೀರು ಕಂಡಿತು..

ಜೆಸಿಬಿಯಿಂದ ಮಣ್ಣು ತೆಗೆಸಿ, ಪ್ಲಾಸ್ಟಿಕ್ ಹೊದಿಸುವ ಹಂತದಲ್ಲಿದ್ದೆವು. ಆಗ ಹೊಂಡದ ಮೂಲೆಯಿಂದ ಒರತೆ ಕಾಣಿಸಿಕೊಂಡಿತು. ಈಗ ಹೊಂಡದಲ್ಲಿ ಮೊಳಕಾಲುದ್ದ ನೀರು ಸಂಗ್ರಹವಾಗಿದೆ.
– ನಾಗವೇಣಿ ಲೋಕನಾಥ್, ವದ್ದೀಕೆರೆ

ನೀರಿನ ಸಮಸ್ಯೆ; ಕೊಳವೆಬಾವಿ ಎಷ್ಟು ಅನಿವಾರ್ಯ ?

೧೯೯೯-೨೦೦೦ರ ಸಮಯ. ಚನ್ನಗಿರಿ ಸಮೀಪದ ಹಳ್ಳಿಯೊಂದರಲ್ಲಿ ಕೊಳವೆ ಬಾವಿ ಕೊರೆಸುವ ಕುರಿತು ಚರ್ಚೆ ನಡೆಯುತ್ತಿತ್ತು. ‘ಈ ಪ್ರದೇಶದಲ್ಲಿ ಅಂತರ್ಜಲ ಕುಸಿದಿದೆ. ಕೊಳವೆ ಬಾವಿ ಕೊರೆಸಿದರೂ ನೀರು ಸಿಗುವುದಿಲ್ಲ’ ಎಂಬ ಸಲಹೆ ನೀಡಿದೆ. ಅದಕ್ಕೊಬ್ಬ ರೈತರು, ‘ಅಲ್ಲ, ನಮ್ಮೂರು ಸಮುದ್ರ ಮಟ್ಟದಿಂದ ೩ ಸಾವಿರ ಅಡಿ ಮೇಲಿದೆ ಅಲ್ವಾ? ಹಾಗಾದರೆ, ನೀವ್ಯಾಕೆ ೮೦೦ ಅಡಿ ಬಗ್ಗೆ ಯೋಚ್ನೆ ಮಾಡ್ತೀರಾ ? ಸಮುದ್ರದಲ್ಲೇ ನೀರಿದೆ ಎಂದರೆ, ನಾವು ೩ ಸಾವಿರ ಅಡಿ ಕೊರದರೆ ನೀರು ಸಿಗುತ್ತಲ್ಲ. ಹಣ ಎಷ್ಟಾದರೂ ಖರ್ಚಾಗಲಿ’ ಎಂದರು. ಹೀಗೆ ಹೇಳುವವರಿಗೆ, ಆ ಕಾಲದಲ್ಲಿ ಸಾವಿರ ಅಡಿ ಆಳ ಕೊರೆಯಲು ನಮ್ಮಲ್ಲಿ ಯಂತ್ರಗಳಿಲ್ಲ ಎಂಬ ಅರಿವೂ ಇರಲಿಲ್ಲ…!
****
ತುಂಗಭದ್ರ ಜಲಾಶಯದ ಹಿನ್ನೀರಿನಲ್ಲಿರುವ ಹೊಸಪೇಟೆ ಸಮೀಪದ ಹಳ್ಳಿ. ಡ್ಯಾಂ ತುಂಬಿದಾಗ ಈ ಹಳ್ಳಿಯ ಜಮೀನುಗಳು ಜಲಾವೃತವಾಗುತ್ತವೆ. ಬೇಸಿಗೆಯಲ್ಲಿ ನೀರು ಇಂಗಿದ ಮೇಲೆ ಆ ಜಾಗದಲ್ಲಿ ಬೆಳೆ ಬೆಳೆಯುತ್ತಾರೆ. ಆ ರೈತರಿಗೆ, ಜಲಾವೃತವಾಗುವ ಜಾಗದಲ್ಲಿ ಬೋರ್ ಹಾಕಿಸಿ, ಬೆಳೆ ಬೆಳೆಯುವ ಹಂಬಲ. ನನ್ನ ಸಲಹೆ ಕೇಳಿದರು, ಪಾಯಿಂಟ್ ಮಾಡಿಕೊಡಿ ಎಂದರು. ‘ಈ ಸ್ಥಳದಲ್ಲಿ ನೀರಿನ ಸೆಲೆ ಇಲ್ಲ’ ಎಂದೆ. ಆ ರೈತರು ಗೇಲಿ ಮಾಡಿದರು. ‘ರೀ ಎಷ್ಟು ವರ್ಷ ನಿಮಗೆ ಎಕ್ಸ್‌ಪೀರಿಯನ್ಸು ? ಪ್ರತಿ ವರ್ಷ ನಾಲ್ಕು ಮಟ್ಟ ನೀರು ನಿಲ್ಲುವ ಈ ಜಾಗದಲ್ಲಿ ನೀರು ಸಿಗಲ್ಲ ಎನ್ನುತ್ತೀರಿ’ ಎಂದು ವ್ಯಂಗ್ಯ ಮಾಡಿದರು. ಅವರ ಪ್ರತಿಕ್ರಿಯೆ ಗಮನಿಸಿದಾಗ, ‘ಜಲಾಶಯಗಳು ನೀರಿನ ಸಂಗ್ರಹಾಗಾರಗಳು. ಗಟ್ಟಿಭೂಮಿ ಮೇಲೆ ಜಲಾಶಯ ಕಟ್ಟುವುದು. ಅಲ್ಲಿ ಅಂತರ್ಜಲ ಮೇಲ್ಮಟ್ಟದಲ್ಲಿರುವುದಿಲ್ಲ’ ಎಂಬ ಸಾಮಾನ್ಯ ಅರಿವು ಇದ್ದಂತೆ ಕಾಣಲಿಲ್ಲ..!
***
ಅಂತರ್ಜಲ ಭೂಮಿಯ ಒಳಗಿರುವ ಬೃಹತ್ ಸರೋವರ, ಹರಿಯುವ ನದಿ ಎಂಬ ತಪ್ಪು ಕಲ್ಪನೆಗಳಿವೆ. ಅಂತರ್ಜಲ ಕುಸಿದಿದೆ ಎಂದರೆ, ಎಲ್ಲಿವರೆಗೂ ಕುಸಿದಿದೆಯೋ ಅಲ್ಲಿಂದಲೇ ಪೈಪ್ ಹಾಕಿ ನೀರು ಎತ್ತೋಣ ಎಂದು ಅರ್ಥೈಸಿಕೊಂಡು, ಜಮೀನಿನ ತುಂಬಾ ಕೊಳವೆಬಾವಿ ಕೊರೆಸುವವರೇ ಹೆಚ್ಚಾಗಿದ್ದಾರೆ. ಇಂಥ ಅವೈಜ್ಞಾನಿಕ ಅರಿವು ಅಂತರ್ಜಲ ಬರಿದಾಗಲು ಕಾರಣ.
ಅಂತರ್ಜಲ ಎಂದರೆ ಭೂ ಮೇಲ್ಪದರದಿಂದ ನಿರ್ದಿಷ್ಟ ಆಳದಲ್ಲಿ ಮಣ್ಣಿನ ಕಣಗಳ ನಡುವಿನ ಖಾಲಿ ಜಾಗದಲ್ಲಿ ಶಿಲಾಪದರಗಳ ನಡುವೆ ಸಂಗ್ರಹವಾಗಿರುವ ನೀರು. ಇದನ್ನು ‘ಸ್ಪಂಜಿನಲ್ಲಿ ಶೇಖರಿಸಿಟ್ಟ ನೀರಿಗೆ’ ಹೋಲಿಸಬಹುದು. ನೀರು ಕಣ್ಣಿಗೆ ಕಾಣ-ದಿದ್ದರೂ, ಅದನ್ನು ಹಿಂಡಿ ಹೊರತೆಗೆಯಬಹುದು. ಇಂಥ ನೀರನ್ನು ಕೊಳವೆ ಬಾವಿಗಳಿಂದ ಎತ್ತಲು ಆರಂಭವಾಗಿದ್ದು ೭೦ರ ದಶಕದಲ್ಲಿ.
೭೦ರ ದಶಕ ತೆರೆದ ಬಾವಿಗಳ ಕಾಲ. ಆದರೆ, ವೈಜ್ಞಾನಿಕವಾಗಿ ನೀರಿನ ಸೆಲೆ ಗುರು-ತಿಸಲಾಗದೇ, ಎಷ್ಟೋ ಮಂದಿ ಬಾವಿ ತೆಗೆಸುವುದರಲ್ಲಿ ಸೋಲುತ್ತಿದ್ದರು. ಬಾವಿ ತೆಗೆದರೂ ನೀರು ಸಿಗದಿರುವ ಉದಾಹರಣೆಗಳಿದ್ದವು. ಆಗ ಸರ್ಕಾರ ಕೊಳವೆ ಬಾವಿ ಪರಿಚಯಿಸಿತು. ಸಣ್ಣ ಹಿಡುವಳಿದಾರರು ಎಕರೆ ಜಮೀನಿನಲ್ಲಿ ಅರ್ಧ ಭಾಗವನ್ನು ಬಾವಿಗಾಗಿ ವ್ಯರ್ಥ ಮಾಡುವ ಬದಲು, ಕೊಳವೆ ಮೂಲಕ ಬಾವಿಯಷ್ಟೇ ಆಳದಿಂದ ನೀರು ತೆಗೆದು ಬಳಸುವ ಈ ಸುಲಭ ವಿಧಾನ ಸೂಕ್ತ ಎಂದು ಹೇಳಲಾಯಿತು.
ಕೊಳವೆ ಬಾವಿ ಕೊರೆಸಲು ಭೂಗರ್ಭಶಾಸ್ತ್ರಜ್ಞರ ಮಾರ್ಗದರ್ಶನ ಕಡ್ಡಾಯ. ಜಿಯಾಲಜಿಸ್ಟ್ಗಳೂ ಸಹ ೧೮ ರಿಂದ ೩೦ ಮೀಟರ್ (೧೦೦ ಅಡಿ) ದಾಟದಂತೆ ನೀರಿನ ಸೆಲೆ ಗುರುತಿಸುವ ನಿಬಂಧನೆ ವಿಧಿಸಲಾಗಿತ್ತು. ಅಂದರೆ ಮೇಲ್ಪದರದಲ್ಲಿರುವ ನೀರು ತೆಗೆಯಲು ಮಾತ್ರ ಅನುಮತಿ ಇತ್ತು. ಸರ್ಕಾರದ ನಿಬಂಧನೆ ಮೀರಿ ನೀರಿನ ಸೆಲೆ ಗುರುತಿಸಿದರೆ, ಅಂಥವರು ಒಳ್ಳೆಯ ಜಿಯಾಲಜಿಸ್ಟ್ ಅಲ್ಲ ಎಂದು ಹಿರಿಯ ಭೂಗರ್ಭಶಾಸ್ತ್ರಜ್ಞ ಡಾ.ಬಿ.ಪಿ.ರಾಧಾಕೃಷ್ಣ ಹೇಳುತ್ತಿದ್ದರು.
ಆದರೆ, ಸರ್ಕಾರದ ಈ ನಿಬಂಧನೆಗಳು ಬಹಳ ದಿನ ಉಳಿಯಲಿಲ್ಲ. ಕೊಳವೆಬಾವಿ ಕ್ಷೇತ್ರಕ್ಕೆ ಖಾಸಗಿಯವರು ಪ್ರವೇಶಿಸಿದ ಮೇಲೆ, ವಾಣಿಜ್ಯ ಕೃಷಿ ಸಾಂದ್ರತೆ ಹೆಚ್ಚಾದ ಮೇಲೆ, ಭೂಗರ್ಭ ಶಾಸ್ತ್ರಜ್ಞ ಸಾಲ ಪಡೆಯುವವರಿಗೆ ಪ್ರಮಾಣ ಪತ್ರ ನೀಡಲಷ್ಟೇ ಸೀಮಿತವಾದರು ಅಂದಾಜಿನ ಮೇಲೆ ನೀರಿನ ಸೆಲೆ ಗುರುತಿಸುವವರ ಸಂಖ್ಯೆ ಹೆಚ್ಚಾಯಿತು. ಸರ್ಕಾರ ಕೂಡ ಇದನ್ನು ನಿಯಂತ್ರಿಸಲು ಕಾನೂನು ರಚಿಸಲಿಲ್ಲ. ಪರಿಣಾಮ ಕೊಳವೆ ಬಾವಿಗಳ ಬಳಕೆ ವಿಸ್ತರಣೆಯಾಯಿತು. ೧೦೦ ಅಡಿಯಲ್ಲಿದ್ದ ಅಂತರ್ಜಲ ೧೫೦೦ ಅಡಿಗೆ ಇಳಿಯಿತು.

ಗುಣಮಟ್ಟದ ನೀರಿನ ಕೊರತೆ ?
ಬಹಳಷ್ಟು ಮಂದಿಗೆ ಬಳಸುತ್ತಿರುವ ಕೊಳವೆ ಬಾವಿ ನೀರಿನ ಗುಣಮಟ್ಟದ ಬಗ್ಗೆ ಅರಿವಿಲ್ಲ. ಅದು ಎಷ್ಟು ಆಳದಲ್ಲೇ ದೊರೆತರೂ, ‘ಎಷ್ಟು ಇಂಚು’ ಸಿಕ್ಕಿದೆ ಸಂಭ್ರಮಿಸುತ್ತಾರೆಯೇ ವಿನಃ ಆ ನೀರು ಎಷ್ಟು ಗುಣಮಟ್ಟದ್ದಾಗಿದೆ ಎಂದು ಯೋಚಿಸುವುದಿಲ್ಲ.
ಭೂಗರ್ಭದ ಮೂರು ಪದರಗಳಲ್ಲಿ ನೀರು ಲಭ್ಯವಿದೆ. ಶೀತಲ ಪದರ (ವೆದರ್ ಝೋನ್), ಕಲ್ಲು ಪದರ (ಫ್ರಾಕ್ಚರ್ ಝೋನ್), ಪಳೆಯುಳಿಕೆ ಪದರ (ಫಾಸಿಲ್ಸ್ ಝೋನ್). ಶೀತಲ ಪದರದಲ್ಲಿರುವ ನೀರು ಮಾತ್ರ ಬಳಕೆಗೆ ಯೋಗ್ಯ. ಉಳಿದ ಎರಡು ಪದರಗಳಲ್ಲಿರುವ ನೀರಿನಲ್ಲಿ ರಾಸಾಯನಿಕಗಳು ಬೆರೆತಿರುತ್ತವೆ. ಅದೇ ಗಡಸು ನೀರು, ಫ್ಲೋರೈಡ್, ಆರ್ಸೆನಿಕ್‌ನಂತಹ ರಾಸಾಯನಿಕಯುಕ್ತ ನೀರು. ರಾಜ್ಯದಲ್ಲಿ ಬಹುತೇಕ ಕಡೆ ಈಗಾಗಲೇ ಎರಡನೇ ಪದರದ ನೀರು ಬಳಕೆಯಲ್ಲಿದೆ. ಕೆಲವು ಕಡೆ ಮೂರನೇ ಪದರಕ್ಕೂ ಕೈ ಹಾಕಿರುವ ಉದಾಹರಣೆಗಳಿವೆ.

ಜನರು ‘ನನಗೆ ಐದು ಇಂಚು ನೀರು ಸಿಕ್ಕಿದೆ’ ಎನ್ನುತ್ತಾರೆ. ಅದು ೧೨೫೦ ಅಡಿ ಆಳದಿಂದ ನೀರು ತೆಗೆದಿರುವುದನ್ನು ಮರೆತಿರುತ್ತಾರೆ. ಆ ನೀರಿನಲ್ಲಿ ೧೫೦೦ ಪಿಪಿಎಂ ಫ್ಲೋರೈಡ್ ಅಂಶವಿರುತ್ತದೆ. ಅದನ್ನು ಸೇವಿಸಿದರೆ ಕ್ಷಾರಯುಕ್ತ ರುಚಿ. ಕೃಷಿಗೆ ಬಳಸಿದರೆ ಮಣ್ಣಿನ ಫಲವತ್ತತೆ ಹಾಳಾಗುತ್ತದೆ. ಈ ಬಗ್ಗೆ ಅರಿವಿರುವುದಿಲ್ಲ. ೫ ಇಂಚು ನೀರು ಸಿಕ್ಕಿತು ಎಂದ ಕೂಡಲೇ ಅಡಿಕೆ ಬೆಳೆ ಇಡಲು ಮುಂದಾಗುತ್ತಾರೆ !
ಇಂಥ ಕೃಷಿಗಷ್ಟೇ ಅಲ್ಲ, ಕಟ್ಟಡ ನಿರ್ಮಾಣಕ್ಕೂ ಅಪಾಯವಾಗುತ್ತದೆ. ಇಂಥ ಗಡಸು, ಫ್ಲೋರೈಡ್ ಯುಕ್ತ ನೀರು ಬಳಸಿ ಕಟ್ಟಿದ ಕಟ್ಟಡಗಳ ಬಾಳಿಕೆ ಗುಣ (ಶೆಲ್ಫ್ ಲೈಫ್)’ ಕಡಿಮೆಯಾಗುತ್ತದೆ. ಧಾರವಾಡದ ಸಮೀಪದ ಮುಳ್ಳಳ್ಳಿ ಎಂಬಲ್ಲಿ ಸ್ವಾಮೀಜಿಯೊಬ್ಬರು ಮಠದ ಕಟ್ಟಡ ನಿರ್ಮಾಣಕ್ಕೆ, ಸ್ವಂತ ಕೊಳವೆಬಾವಿಯಲ್ಲಿ ೪ ಇಂಚು ನೀರು ಸಿಕ್ಕರೂ, ಅದು ಗಡಸು ನೀರು ಎಂದು, ಹುಬ್ಬಳ್ಳಿಯಿಂದ ಸಿಹಿನೀರು ತರಿಸಿ ಅದರಲ್ಲಿ ಕಟ್ಟಡ ಕಟ್ಟಿದ್ದಾರೆ.

ಅವೈಜ್ಞಾನಿಕ ಬೆಳೆಪದ್ಧತಿ:
ಬಯಲು ಸೀಮೆಗೆ ಮಳೆಯಾಶ್ರಿತ ಬೆಳೆಯೇ ಸೂಕ್ತ. ಆದರೆ, ಬೆಂಗಾಡಿನಲ್ಲೂ ಅಡಿಕೆಯಂತಹ ವಾಣಿಜ್ಯ ಬೆಳೆ ಬೆಳೆಯಲಾಗುತ್ತಿದೆ. ಚಿತ್ರದುರ್ಗ, ದಾವಣಗೆರೆಯಲ್ಲಿ ಬೇಸಿಗೆಯಲ್ಲಿ ಶೇಂಗಾ, ಈರುಳ್ಳಿ, ಹತ್ತಿ, ಅಡಿಕೆ, ಬತ್ತ ಬೆಳೆಯುವವರು ಹೆಚ್ಚಿದ ಮೇಲೆ ಕೊಳವೆಬಾವಿಗಳ ಸಂತತಿ ವಿಸ್ತರಣೆಯಾಗಿದೆ. ಅಡಿಕೆ ಬೆಳೆಗಾಗಿ ಕೊಳವೆಬಾವಿ ತೆಗೆಸಿ ಚನ್ನಗಿರಿಯಲ್ಲಿ ಲಕ್ಷ ಲಕ್ಷ ಸಾಲ ಮಾಡಿ ಸೋತ ರೈತರಿದ್ದಾರೆ.
ಇಷ್ಟಾದರೂ ಜನರಲ್ಲಿ ಕೊಳವೆಬಾವಿ ಬಗೆಗಿನ ವ್ಯಾಮೋಹ ಕಡಿಮೆಯಾಗಿಲ್ಲ. ಅಷ್ಟು ಸೋತರೂ ಕಿಲೋಮೀಟರ್ ದೂರದ ಬೆಟ್ಟದಿಂದ ಪೈಪ್ ಲೈನ್ ಹಾಕಿ ನೀರು ತರುವ ಪೈಪೋಟಿ ಇಳಿದಿಲ್ಲ. ಮಾತ್ರವಲ್ಲ, ‘ಅಲ್ಲೇ ೨೦೦ ಅಡಿಗೆ ನೀರಿದೆ, ನಮ್ಮಲ್ಲೇಕೆ ಇಲ್ಲ’ ಎಂದು ಸವಾಲಿನ ಪ್ರಶ್ನೆ ಹಾಕುತ್ತಾರೆ. ಇನ್ನೂ ಕೆಲವರು, ೫೦ ಅಡಿಗೆ ಒಂದೊಂದು ಕೊಳವೆಬಾವಿ ಕೊರೆಸಿ, ನೀರು ಎತ್ತುತ್ತಿದ್ದಾರೆ. ಮಣ್ಣಿನ ಗುಣಮಟ್ಟ, ಭೂಗರ್ಭದ ರಚನೆ, ಜಲ ಸೆಲೆ ಹರಿಯುವ ಅರಿವಿಲ್ಲದೇ, ಯಾರೋ ಅಂದಾಜಿಸಿ ಗುರುತಿಸುವ ಜಾಗದಲ್ಲಿ ಕೊಳವೆ ಬಾವಿ ಕೊರೆಸುತ್ತಿದ್ದಾರೆ. ಇಂಥ ಅವೈಜ್ಞಾನಿಕ ಮನಸ್ಥಿತಿ ಅಂತರ್ಜಲ ಬರಿದಾಗಲು ಕಾಣವಾಗಿದೆ.

ಸಮಸ್ಯೆ ಢಾಳವಾಗಿದೆ :
ರಾಜ್ಯದ ಕುಡಿಯುವ ನೀರಿನ ಪರಿಸ್ಥಿತಿಗೆ ಕೊಳವೆಬಾವಿ ಪರಿಹಾರವಿರಬಹುದು. ಆದರೆ, ರಾಜ್ಯವನ್ನೂ ಒಳಗೊಂಡ ದೇಶದಲ್ಲಿ ಎಲ್ಲೂ ಕೊಳವೆಬಾವಿಗಳ ಕಾರ್ಯ-ಕ್ಷಮತೆ ಉತ್ತಮವಾಗಿಲ್ಲ. ಬೇಸಿಗೆಯಲ್ಲಿ ಬತ್ತಿದ ಬೋರ್ವೆಲ್‌ಗಳು ಮಳೆಗಾಲದಲ್ಲಿ ಮರುಪೂರಣವಾಗುತ್ತವೆ, ಆದರೆ, ಫ್ಲೋರೈಡ್, ನೈಟ್ರೇಟ್ ಸಮಸ್ಯೆ ನಿರಂತರ-ವಾಗಿರುತ್ತದೆ.
ಇಷ್ಟು ವರ್ಷ ಅಂತರ್ಜಲ ಬರಿದು ಮಾಡಿರುವುದರಿಂದ ಭೂಗರ್ಭದ ಪದರಗಳಲ್ಲಿ ಗಾಳಿ ತುಂಬಿಕೊಂಡಿದೆ. ಮಳೆ ನೀರು ಇಂಗಿದಾಗ, ಭೂಮಿಯಿಂದ ಗುಳ್ಳೆಗಳು ಹೊರಹೊಮ್ಮುತ್ತಿವೆ. ಅಂತರ್ಜಲವನ್ನು ಎಷ್ಟು ತೆಗೆದಿದ್ದೇವೆಂದರೆ, ಊರಿನ ಕೆರೆ, ಕಟ್ಟೆ, ಕುಂಟೆಗಳು ಕನಿಷ್ಠ ಹತ್ತು ಸಾರಿ ತುಂಬಿ, ನೀರು ಇಂಗಿದರೆ ಆಗುವಷ್ಟು ಪ್ರಮಾಣದಲ್ಲಿ ತೆಗೆದಿದ್ದೇವೆ. ಇಂಥ ಪರಿಸ್ಥಿತಿಯಲ್ಲಿ ಸರ್ಕಾರ ಪ್ರತಿ ವರ್ಷ ನೀರಿನ ಸಮಸ್ಯೆಗೆ ಕೊಳವೆಬಾವಿಗಳೇ ಪರಿಹಾರ ಎನ್ನುತ್ತಿದೆ.

ಮಳೆನೀರೇ ಪರಿಹಾರ :
ನೀರಿನ ಸಮಸ್ಯೆಗೆ ಕೊಳವೆಬಾವಿ ಒಂದೇ ಪರಿಹಾರವಾಗುವುದಿಲ್ಲ. ಈ ಪರಿಹಾರಕ್ಕೆ ಕೆರೆ ಕಟ್ಟೆಗಳಂತಹ ಜಲಸಂರಕ್ಷಣಾ ತಾಣಗಳನ್ನು ಜೋಡಿಸಬೇಕು. ಗುಡ್ಡಗಾಡು ಪ್ರದೇಶಗಳಲ್ಲೂ ನೀರು ಇಂಗಿಸುವ ಚೆಕ್ ಡ್ಯಾಮ್ ಗಳು ನಿರ್ಮಾಣವಾಗಬೇಕು. ಜಗಳೂರಿನಲ್ಲಿ ಹಿಂದೆ ಗುರುಸಿದ್ದನಗೌಡರು ಶಾಸಕರಾಗಿದ್ದಾಗ ೧೦೦ಕ್ಕೂ ಹೆಚ್ಚು ಪುಟ್ಟ ಪುಟ್ಟ ಕೆರೆಗಳನ್ನು ಕಟ್ಟಿಸಿದ್ದರು. ಅವು ಪ್ರತಿ ಮಳೆಗಾಲದಲ್ಲಿ ತುಂಬುತ್ತವೆ. ಅಕ್ಕಪಕ್ಕದ ಕೊಳವೆಬಾವಿಗಳು ರೀಚಾರ್ಜ್ ಆಗುತ್ತವೆ. ಫ್ಲೋರೈಡ್ ಅಂಶ ಕಡಿಮೆಯಾಗುತ್ತದೆ. ಈ ಪ್ರಯತ್ನಗಳು ಸಾಮೂಹಿವಾಗಿ ನಡೆಯುವಂತಾಗಬೇಕು.
ನೀರಿನ ಸಮಸ್ಯೆಗೆ ‘ಮಳೆ ನೀರು’ ಹಿಡಿದುಕೊಳ್ಳುವ ಪರಿಹಾರ ಸೂಚಿಸಿದಾಗಲೆಲ್ಲ, ಕೆಲವರು ಜಗಳಕ್ಕೆ ಇಳಿಯುತ್ತಾರೆ. ‘ಮಳೆಯೇ ಬೀಳಲ್ಲ, ಇನ್ನು ಇಂಗಿಸುವುದು ಏನನ್ನು’ ಎಂದು ವ್ಯಂಗ್ಯ ಮಾಡುತ್ತಾರೆ.
ನೋಡಿ, ಈ ವರ್ಷ ಚಿತ್ರದುರ್ಗದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಯಿತು. ನಮ್ಮ ಮನೆ ಚಾವಣಿಯಿಂದ(೧೨೦೦ ಚ.ಅಡಿ) ೧.೫೦ ಲಕ್ಷ ಲೀಟರ್ ಸಂಗ್ರಹವಾಯಿತು. ನಾಲ್ಕೈದು ಕಿ.ಮೀ ದೂರದ ಜಮೀನಿನಲ್ಲಿ ಇಷ್ಟೇ ಮಳೆ ಸುರಿದಿದೆ. ಆದರೆ ಮಳೆ ನೀರು ಎಲ್ಲಿ ಹೋಯಿತು ? ಮನೆಯಲ್ಲಿ ಸರಿ ಹೋಗುವ ’ಗಣಿತ’, ಜಮೀನಿನಲ್ಲೇಕೆ ಸರಿಯಾಗುವುದಿಲ್ಲ? ಈ ಬಗ್ಗೆ ರೈತರು ಯೋಚಿಸಬೇಕಿದೆ. ಜಮೀನಿನ ಮೇಲೆ ಸುರಿಯುವ ಹನಿ ಮಳೆ ನೀರು, ಅದೇ ಮಣ್ಣಿನೊಳಗೆ ಠೇವಣಿಯಾಗಬೇಕು. ಮಣ್ಣಿನ ಫಲವತ್ತತೆ ಹೆಚ್ಚಿಸಬೇಕು. ಅಂಥ ಬೆಳೆ ಸಂಯೋಜನೆ ಮಾಡಬೇಕು. ಮಳೆಯಾಶ್ರಿತ ಅಥವಾ ಕಡಿಮೆ ನೀರು ಆಧಾರಿತ ಕೃಷಿ ಚಟುವಟಿಕೆಯೇ ಪ್ರಧಾನವಾಗಬೇಕು.
——–
‘ನೀರು ಶುದ್ಧೀಕರಣ’ದ ನಂತರ ಮುಂದೇನು ?
——————–
ಕರ್ನಾಟಕ ಸರ್ಕಾರ ರಾಷ್ಟ್ರಪತಿ ಕುಡಿಯುವಂಥ ಶುದ್ಧ ಕುಡಿಯುವ ನೀರನ್ನೂ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಪೂರೈಸಬೇಕೆಂದು ಹಳ್ಳಿ ಹಳ್ಳಿಗೆ ಶುದ್ಧ ಕುಡಿಯುವ ನೀರಿನ ಘಟಕ (ರಿವರ್ಸ್ ಆಸ್ಮೋಸಿಸ್ ಪ್ಲಾಂಟ್) ಸ್ಥಾಪಿಸುತ್ತಿದೆ. ಈ ಆರ್ ಓ ಘಟಕಗಳ ಬಾಳಿಕೆ ಅವಧಿ ಎಷ್ಟು ? ಒಂದು ಲೀಟರ್ ಶುದ್ಧೀಕರಿಸಲು ಒಂಬತ್ತು ಲೀಟರ್ ತ್ಯಾಜ್ಯ ನೀರು ಹೊರ ಹೊಮ್ಮುತ್ತದೆ. ಆ ರಾಸಾಯನಿಕ ತ್ಯಾಜ್ಯ ನೀರನ್ನು ಎಲ್ಲಿಗೆ ಪೂರೈಸುತ್ತಾರೆ. ಹಾಗೆ ಪೂರೈಸಿದಾಗ ಭೂಮಿಗೆ ಪುನಃ ರಾಸಾಯನಿಕ ಅಂಶಗಳು ಸೇರುವುದಿಲ್ಲವೇ ? ಈ ಬಗ್ಗೆ ಯಾರೂ ಚಿಂತಿಸುತ್ತಿಲ್ಲ.
ಉದಾಹರಣೆಗೆ, ಚಿತ್ರದುರ್ಗ ನಗರದಲ್ಲಿ ಕೆಲವು ಕಡೆ ಖಾಸಗಿಯವರು ಶುದ್ಧೀಕರಣ ಘಟಕ ಆರಂಭಿಸಿದ್ದರು. ಆ ಭಾಗದಲ್ಲಿನ ನೀರಿನಲ್ಲಿ 1200 ಪಿಪಿಎಂ ಪ್ರಮಾಣದಲ್ಲಿ ಫ್ಲೋರೈಡ್ ಇದ್ದಿದ್ದರಿಂದ, ತ್ವರಿತಗತಿಯಲ್ಲಿ ಶುದ್ಧೀಕರಣ ಯಂತ್ರಗಳು ಹಾಳಾಗಿ, ಲಕ್ಷ ರೂಪಾಯಿ ಖರ್ಚಿಗೆ ಬಂತು. ಅಂತಿಮವಾಗಿ, ಈಗ ಬೇರೆಡೆಯಿಂದ ಮೆದುನೀರನ್ನು ಖರೀದಿಸಿ, ಶುದ್ಧೀಕರಿಸಿ ಮಾರುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ, ಚಿತ್ರದುರ್ಗದಲ್ಲೇ ‘ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ’ ಅಳವಡಿಸಿರುವ ನೀರು ಶುದ್ಧೀಕರಣ ಘಟಕಗಳು ಎಷ್ಟು ಸುರಕ್ಷಿತ, ಶಾಶ್ವತ ?
——————————-

ಹೆಚ್ಚಿನ ಮಾಹಿತಿಗಾಗಿ : ಎನ್. ದೇವರಾಜರೆಡ್ಡಿ,
ಭೂಗರ್ಭಶಾಸ್ತ್ರಜ್ಞ ಮತ್ತು ಜಲತಜ್ಞ, ಜಲಧಾಮ, ಜಿಯೋ ರೈನ್ ವಾಟರ್ ಬೋರ್ಡ್, ಅಯ್ಯಪ್ಪಸ್ವಾಮಿ ದೇವಾಲಯದ ಎದುರು, ಎಂ.ಎಚ್.ರಸ್ತೆ, ವಿದ್ಯಾನಗರ, ಚಿತ್ರದುರ್ಗ 577502, ದೂರವಾಣಿ: 9448125498 email: devraj05@gmail.com

ಬದಲಾದ ನಮ್ಮೂರಿನಲ್ಲಿ ‘ಅಪ್ಪಿಕೋ’ ದಿನ

ಗುಡ್ಡಗಳ ಮೇಲೆಲ್ಲ  ವರ್ಷಪೂರ್ತಿ ಹಸಿರಿನ ಚಾದರ. ಅವುಗಳ ತಪ್ಪಲಿನಲ್ಲಿರುವ ಕೆರೆಗಳಲ್ಲಿ ವರ್ಷಪೂರ್ತಿ ನೀರು. ಹಳ್ಳಿಗಳ ರಸ್ತೆಗಳ ಇಕ್ಕಲೆಗಳಲ್ಲಿ ಹುಣಸೆ, ಹೊಂಗೆ, ಆಲ, ಬೇವು, ನೇರಲೆ.. ಇತ್ಯಾದಿ ಹಣ್ನಿನ ಮರಗಳ ಸಾಲು ಸಾಲು. ತೊನೆದಾಡುವ ತೆಂಗು, ಅಲ್ಲಲ್ಲಿ ಕಾಣುತ್ತಿದ್ದ ಕಂಗು, ದೂರದಲ್ಲಿ ಬತ್ತದ ಪೈರುಗಳು, ಕೊಯ್ಲಿನ ನಂತರ ಕಣದ ಬದುಕು, ಸುಗ್ಗಿಯ ಸಂಭ್ರಮ..!

ಕೇವಲ ಮೂವತ್ತು ವರ್ಷಗಳ ಹಿಂದೆ ನಮ್ಮೂರು ಗಾಣಧಾಳು ಹೀಗೆ ಇತ್ತು (ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಹೋಬಳಿಯಲ್ಲಿನ ನಮ್ಮೂರು ಅರ್ಥಾತ್ ಗಾಣಧಾಳು) ನಮ್ಮೂರಷ್ಟೇ ಅಲ್ಲ, ಸುತ್ತಲಿನ ಗುರುವಾಪುರ, ಮೇಲನಹಳ್ಳಿ, ರಂಗನಕೆರೆ, ದಸೂಡಿ, ದಬ್ಬಗುಂಟೆ, ಲಕ್ಕೇನಹಳ್ಳಿ, ಹೊಯ್ಸಲಕಟ್ಟೆ.. ಎಲ್ಲವೂ ಹೀಗೆ ಇದ್ದವು.

ಗುಡ್ಡಗಳನ್ನೇ ಸುತ್ತುವರಿದ ಊರುಗಳಾಗಿದ್ದರಿಂದ ಪ್ರತಿ ಗುಡ್ಡದ ತಪ್ಪಲಲ್ಲಿ  ಒಂದೊಂದು ಕರೆಗಳಿರುತ್ತಿದ್ದವು. ಒಂದು ಮಳೆಗಾಲಕ್ಕೆ ಕೆರೆ ತುಂಬಿದರೆ, ಎರಡು ವರ್ಷ ಭತ್ತ, ತೋಟಕ್ಕೆ ಆಗುವಷ್ಟು ನೀರು ಖಚಿತ. ಹೀಗಾಗಿ, ವರ್ಷ ಪೂರ್ತಿ ತೋಟದಲ್ಲಿ ಒಂದಲ್ಲ ಒಂದು ಕೃಷಿ ಚಟುವಟಿಕೆ ಕಾಯಂ.

ಗುಡ್ಡಗಳಲ್ಲಿ ಹಸಿರು ಕಾಣೆಯಾಗಿದ್ದನ್ನು ನಾನು ಕಂಡಿಲ್ಲ. ಅದು ಅರಣ್ಯ ಇಲಾಖೆಯ ಪ್ರಾಮಾಣಿಕ ಪ್ರಯತ್ನವೋ ಅಥವಾ ನಮ್ಮ ಪಶು, ಪಕ್ಷಿಗಳ ಬೀಜ ಪ್ರಸಾರದ ಕಾರ್ಯವೋ ಏನೋ, ಒಟ್ಟಾರೆ, ಇಡೀ ಗುಡ್ಡಗಳೆಲ್ಲ ಹಚ್ಚ ಹಸಿರಿನ ತಾಣವಾಗಿದ್ದವು. ವರ್ಷ ಪೂರ್ತಿ ದನಗಳಿಗೆ ಮೇವು ನೀಡುತ್ತಿದ್ದ ಗೋಮಾಳಗಳಾಗಿದ್ದವು.

ರಂಗನಗುಡ್ಡ, ಕರಡಿಗುಡ್ಡದ ತುಂಬಾ ಕಾಡುಬಿಕ್ಕೆ, ಕಾರೆಕಾಯಿ, ಬೆಲವತ್ತ ಹಣ್ಣಿನ ಮರ, ಕಾಡು ಹಲಸು, ಬೆಟ್ಟದ ನೆಲ್ಲಿ, ಕಿರುನೆಲ್ಲಿ, ಸೀಬೆ, ಮರಸೇಬು, ಸಪೋಟ, ಹುಣಸೆ ಸೇರಿದಂತೆ ಅನೇಕ ಹಣ್ಣಿ ಗಿಡಗಳು ಹರಡಿಕೊಂಡಿದ್ದವು. ಇವುಗಳ ಜೊತೆಗೆ ಬೇಟೆ ಸೊಪ್ಪು, ಕೊಳಕುಮಂಡಳ ಹಾವು ಕಚ್ಚಿದರೆ ವಾಸಿ ಮಾಡುವ ಗಿಡ ಮೂಲಿಕೆ, ಬೇಲಿ ಮಾಡುವ ಬಂದ್ರೆ ಸೊಪ್ಪು, ಜೀರುಂಬೆ ತಿನ್ನುವ ಬೇಟೆ ಸೊಪ್ಪು, ದನಗಳಿಗಾಗಿ ಮೇವಿನ ಮರಗಳು, ಕರಡೇವು.. ಹೀಗೆ ಸುತ್ತ ಹತ್ತೂರಿನ ಜನ ಜಾನುವಾರಿಗೆ ಪೂರೈಸುವ ಎಲ್ಲ ಸಂಪನ್ಮೂಲಗಳೂ ಸಮೃದ್ಧವಾಗಿದ್ದವು. ಇದೇ ಕಾರಣಕ್ಕೆ ಗುಡ್ಡದ ಮೇಲಿನ ಬಂಡೆಗಳ ಗುಹೆಗಳಲ್ಲಿ ಕರಡಿಗಳು ವಾಸವಿರುತ್ತಿದ್ದವು. ಅವುಗಳಿಗಾಗಿಯೇ ಅರಣ್ಯ ಇಲಾಖೆಯವರು ಅಲ್ಲಲ್ಲಿ ಗುಂಡಿಗಳನ್ನು ಮಾಡಿ, ಮಳೆ ನೀರು ಸಂಗ್ರಹಿಸುತ್ತಿದ್ದರು. ಈ ಎಲ್ಲ ಕಾರಣದಿಂದಲೇ ನಮಗೆಂದೂ ಗುಡ್ಡಗಳು ನಿರ್ಜೀವ ವಸ್ತುಗಳಾಗಿ ಕಾಣದೇ, ಜೀವವೈವಿಧ್ಯದ ಭಂಡಾರದಂತೆ ಗೋಚರಿಸುತ್ತಿದ್ದವು.

ಗುಡ್ಡಗಳು ನಮ್ಮೂರಿನ ಎಲ್ಲ ಜಲಮೂಲಗಳ ಕ್ಯಾಚ್ಮೆಂಟ್ ಪ್ರದೇಶ. ಮಳೆ ನಮ್ಮೂರಿಗೆ ಬೀಳಬೇಕೆಂದು ನಾವು ಎಣಿಸುತ್ತಿರಲಿಲ್ಲ. ದೂರದ ಗುಡ್ಡಕ್ಕೋ, ಆ ಬದಿಯ ಊರಿಗೆ ಜೋರು ಮಳೆಯಾಗಿ, ಉಳಿದ ನಾಲ್ಕು ಹನಿ ನಮ್ಮೂರಿನ ಜಮೀನುಗಳ ಮೇಲೆ ಬಿದ್ದರೆ ಎಂದು ಎಣಿಸುತ್ತಿದ್ದೆವು. ಅಂಥದ್ದೇ ಮಳೆ ಕರೆಯುವುದಕ್ಕಾಗಿ ನಮ್ಮೂರಲ್ಲಿ ‘ಕನ್ನೆಕೆರೆ’ ಎಂಬ ಸಾಂಪ್ರದಾಯಿಕ ದೇವರ ಹಬ್ಬ ಕೂಡ ನಡೆಯುತ್ತಿತ್ತು.

ಹಿರಿಯೂರು ಭಾಗದ ಕುದರೆಕಣಿವೆ (ಮಾರಿಕಣಿವೆ ಹಿಂಭಾಗದ ಜಾಗ) ಬೆಟ್ಟ, ದಸೂಡಿ ಭಾಗದ ಗುಡ್ಡಗಳ ಮೇಲೆ ಮಳೆ ಸುರಿದರೆ, ಸೋಮನಹಳ್ಳಿ ಕೆರೆ, ಹಳೇಕೆರೆ ಭರ್ತಿಯಾಗುತ್ತಿತ್ತು. ಈ ಗುಡ್ಡಗಳ ಮೇಲೆ ಸುರಿದ ಹನಿ ಹನಿ ಮಳೆ ನೀರು ತಪ್ಪದೇ ಕೆರೆ ಸೇರುತ್ತಿತ್ತು. ಒಮ್ಮೆ ಕೆರೆ ತುಂಬಿದರೆ, ಊರಲ್ಲಿರುವ ಬಾವಿಗಳೆಲ್ಲ ಭರ್ತಿಯಾಗುತ್ತಿದ್ದವು. ನನಗೆ ನೆನಪಿದ್ದಂತೆ, ನಮ್ಮ ಮನೆಯ ಎದುರಿನ ಬಾವಿಯಲ್ಲಿ ಹಗ್ಗ, ರಾಟೆ ಇಲ್ಲದೇ, ಹಾಗೆಯೇ ಬಿಂದಿಗೆಯಲ್ಲಿ ನೀರು ಮೊಗೆದ ಉದಾಹರಣೆಗಳಿವೆ. ಅಷ್ಟರಮಟ್ಟಿಗೆ ಅಂತರ್ಜಲ ಮೇಲ್ಭಾಗದಲ್ಲಿರುತ್ತಿತ್ತು.

ಕೆರೆಯಲ್ಲಿ ನೀರಿದ್ದಾಗ, ಊರಿನಲ್ಲಿ ಯಾರೂ ಮನೆ ಕಟ್ಟುವ ಪ್ರಯತ್ನ ಮಾಡುತ್ತಿರಲಿಲ್ಲ. ಏಕೆಂದರೆ, ತಳ ಹದಿ ತೆಗೆಯುವ ವೇಳೆಗೆ ನೀರಿನ ಒರತೆ ಆರಂಭವಾಗುತ್ತಿತ್ತು. ಕಡಪ ಕಲ್ಲಿನ ಮನೆಗಳಲ್ಲಿ ನೀರಿನ ಜೋಪು ಕಾಣುತ್ತಿತ್ತು. ಕೊಟ್ಟಿಗೆಗಳಲ್ಲಿ ದನ ಕಟ್ಟಲು ನೆಟ್ಟಿದ್ದ ಗೂಟೆಗಳೆಲ್ಲ ಸಡಿಲವಾಗುತ್ತಿದ್ದವು. ತೋಟದಲ್ಲಿ, ತೆಂಗಿನ ಮರಗಳಿಗೆ ಹೆಚ್ಚು ನೀರು ಹಾಯುತ್ತದೆ ಎಂದು ತೋಟದ ಸುತ್ತಾ, ಬಸಿಗಾಲುವೆಗಳನ್ನು ನಿರ್ಮಾಣ ಮಾಡುತ್ತಿದ್ದರು. ಹೆಚ್ಚಾದ ನೀರು, ಈ ಕಾಲುವೆಗಳ ಮೂಲಕ ತೋಟದಿಂದ ಹೊರ ಹಾಕುತ್ತಿದ್ದರು. ಹೀಗಾಗಿ ಮಳೆಗಾಲದ ಸುಮಾರು ಒಂದೂವರೆ ತಿಂಗಳು, ಅತಿಯಾದ ಅಂತರ್ಜಲದ ಒರತೆ ಇಡೀ ಊರನ್ನೇ ಬಾಧಿಸುತ್ತಿತ್ತು.

ವಿಶೇಷ ಎಂದರೆ ನಮ್ಮೂರಿನ ಪ್ರತಿ ತೋಟದಲ್ಲೂ ಒಂದೊಂದು ತೆರೆದ ಬಾವಿ ಇತ್ತು. ಹಳೇಕೆರೆ, ಹೊಸಕೆರೆ ಮುದ್ದಣ್ಣನ ತೋಟದ ಬಾವಿ, ಕುಂಬಾರಳ್ಳಿಯವರ ಬಾವಿ, ದೊಡ್ಡಯ್ಯನ ತೋಟದ ಬಾವಿ, ಪಂಚನಹಳ್ಳಿಯವರ ಬಾವಿ, ನೇರಲಬಾವಿ, ದೆವ್ವದ ಬಾವಿ, ಹಂಪಣ್ಣನ ಮನೆ ಬಾವಿ, ಗುಡಿಗೌಡರ ಮನೆ ಬಾವಿ, ಸಾಬರ ತೋಟದ ಬಾವಿ, ಗಂಗಸಿದ್ನಾಳ್ ಹಳ್ಳ, ಯಗಚಿಹಳ್ಳಿ ಹಳ್ಳ, ಬಾಳೆಗುಂದಿ ಹಳ್ಳ.. ಇತ್ಯಾದಿ ಬಾವಿಗಳಿದ್ದವು. 1980ರವರೆಗೂ ಕೊಳವೆ ಬಾವಿ ಬಂದಿರಲಿಲ್ಲ. ಪ್ರತಿಯೊಂದು ಮನೆಯ ಹಿತ್ತಲಿನಲ್ಲೂ ತೆರೆದಬಾವಿಗಳಿದ್ದವು. ಹೀಗಾಗಿ, ನೀರಿಗಾಗಿ ಪಂಪ್ ಹಾಕುವುದು, ಮೋಟಾರ್ ಹಾಕುವುದು ಇವೆಲ್ಲ ತಾಪತ್ರಯವೇ ಇರಲಿಲ್ಲ.

ಮತ್ತೊಂದು ಕಡೆ ಹುಳಿಯಾರು ಹೊರ ಭಾಗದಲ್ಲಿ ಉತ್ತಮ ಮಳೆಯಾಗಿ ತಿಮ್ಮಲಾಪುರದ ಕೆರೆ ಭರ್ತಿಯಾದರೆ ಸಾಕು, ಹೆಚ್ಚಾದ ನೀರು, ಕಾರೇಹಳ್ಳಿ ಮೂಲಕ ಹರಿದು ಬೋರನಕಣಿವೆ ಜಲಾಶಯ ಸೇರುತ್ತಿತ್ತು. ಒಮ್ಮೆ ಜಲಾಶಯ ಭರ್ತಿಯಾದರೆ, ಸುತ್ತಲಿನ ಗದ್ದೆಗಳಲ್ಲಿ ಎರಡು ವರ್ಷ ಭತ್ತ, ಜೊತೆಗೆ ಮೀನುಗಾರಿಕೆ ಚಟುವಟಿಕೆ ನಿರಂತರವಾಗಿ ನಡೆಯುತ್ತಿತ್ತು.

ಗಾಣಧಾಳು ಗ್ರಾಮದ  ಮೇಲ್ಭಾಗದ ಪ್ರದೇಶದಲ್ಲಿ ಕಬ್ಬು ಬೆಳೆಯುತ್ತಿದ್ದರು. ಅದಕ್ಕಾಗಿಯೇ ಆ ಜಾಗಕ್ಕೆ ಇವತ್ತಿಗೂ ‘ಕಬ್ಬಿನ ಕೂಳೆ’ ಎಂಬ ಹೆಸರಿದೆ. ಅಲ್ಲಿ ಬೆಳೆದ ಕಬ್ಬನ್ನು ಗಾಣಧಾಳಿನಲ್ಲಿದ್ದ ಆಲೆಮನೆಗಳಲ್ಲಿ ಅರೆದು ಬೆಲ್ಲ ಮಾಡುತ್ತಿದ್ದರಂತೆ. ಅದಕ್ಕೇ ಗಾಣದ ಹಾಲು ಎಂಬ ಹೆಸರಿದೆ ಎಂದು ಹೇಳುತ್ತಾರೆ.

ಯಗಚಿಹಳ್ಳಿಯಿಂದ ಕೆಳಭಾಗಕ್ಕಿರುವ ಹಳ್ಳವನ್ನು ‘ಬಾಳೆಗುಂದಿ ಹಳ್ಳ’ ಎನ್ನುತ್ತಾರೆ. ಸುತ್ತಲಿನ ಗುಡ್ಡ ಹಾಗೂ ದೂರದ ಕೆರೆಯಲ್ಲಿ ನಿಂತು ಇಂಗಿ, ಹೆಚ್ಚಾಗಿ ಹರಿದ ನೀರು ಈ ಹಳ್ಳದಲ್ಲಿ ಹರಿಯುತ್ತಿದ್ದು, ಈ ಪ್ರದೇಶದಲ್ಲಿ ಬಾಳೆ ಬೆಳೆಯುತ್ತಿದ್ದರಿಂದ ಆ ಹೆಸರು ಇಟ್ಟಿದ್ದಾರೆ. ಈ ಎಲ್ಲ ಸಂಕೇತಗಳು, ಚಿನ್ಹೆಗಳು, ಈ ಗ್ರಾಮದಲ್ಲಿನ ಅಂತರ್ಜಲ ಸಮೃದ್ಧಿ, ಸುಸ್ಥಿರ ಕೃಷಿ ಚಟುವಟಿಕೆಯನ್ನು ಪ್ರತಿ ಪಾದಿಸುತ್ತವೆ.

ಸಿರಾರಸ್ತೆಯಲ್ಲಿರುವ ಬೆಳ್ಳಾರದ ಸಮೀಪದ ಚಿನ್ನದಗಣಿ ಇತ್ತು. ಅದೇ ಜಾಗದಲ್ಲಿ ರಾಜ್ಯಪಾಲರಾಗಿದ್ದ ಧರ್ಮವೀರ ಅವರ ಹೆಸರಿನಲ್ಲಿ ತೋಟಗಾರಿಕಾ ಫಾರಂ ಕೂಡ ಇತ್ತು (ಈಗ ಬೋರ್ಡ್ ಅಷ್ಟೇ ಇರಬಹುದು). ಇಲ್ಲಿ ಚಿನ್ನದ ಗಣಿ ನಿಂತ ಮೇಲೆ, ತೆಂಗಿನ ತಳಿಗಳನ್ನು ಬೆಳೆಸುವ ಅಥವಾ ಅಭಿವೃದ್ದಿಪಡಿಸುವ ಕೆಲಸಗಳು ನಡೆಯುತ್ತಿದ್ದವು. 1984ರಲ್ಲಿ ಕೈಗೆಟುಕುವ ಬುಡ್ಡ ತೆಂಗಿನ ಮರಗಳಲ್ಲಿ (ಡ್ವಾರ್ಫ್ ವೆರೈಟಿ) ಕೆಂದನೆಯ ಎಳನೀರು ಬಿಟ್ಟಿದ್ದನ್ನು ನೋಡಿದ ನೆನಪು.

ಇಂಥ ಸಮೃದ್ಧವಾಗಿದ್ದ ಹುಳಿಯಾರು ಸುತ್ತಮುತ್ತಲಿನ ಗ್ರಾಮಗಳ ಪರಿಸರ ಎರಡು-ಮೂರು ದಶಕಗಳಲ್ಲಿ ಕ್ಷಿಪ್ರಗತಿಯಲ್ಲಿ ಬದಲಾಗಿದೆ. ಈ ಬದಲಾವಣೆಗೆ ಮಳೆ ದಿನಗಳು ಕಡಿಮೆಯಾಗಿದೆ ಎನ್ನುವ ಕಾರಣ ಒಂದು ಕಡೆಯಾದರೆ, ಮತ್ತೊಂದು ಕಾರಣ ಸುರಿವ ಮಳೆಯ ನೀರನ್ನು ಕೆರೆಗಳಿಗೆ ಸೇರಿಸುತ್ತಿದ್ದ ಬೆಟ್ಟ ಗುಡ್ಡಗಳಲ್ಲಿದ್ದ ನೀರ ಹಾದಿಯನ್ನೇ ಬದಲಿಸಿರುವುದು. ಗುಡ್ಡಗಳ ನೆತ್ತಿಗಳನ್ನು ಕಡಿದು ಪವನ ಯಂತ್ರಗಳನ್ನು ಅಳವಡಿಸಿ, ನೀರು ಹರಿಯುವ ದಾರಿಗಳನ್ನು ಬದಲಾಯಿಸಲಾಗಿದೆ. ಅಲ್ಪಸ್ವಲ್ಪ ಇದ್ದ ಕುರುಚಲು ಕಾಡು ತೆಳ್ಳಗಾಗುತ್ತಿದೆ. ಕಾಡುಬಿಕ್ಕೆ, ಕಾಡು ಹಲಸು, ನೇರಳೆ, ಕಾಡುನೆಲ್ಲಿ ಇತ್ಯಾದಿ ಗಿಡಗಳು ನಾಪತ್ತೆಯಾಗಿವೆ. ಗುಡ್ಡ ರಕ್ಷಿಸುತ್ತಿದ್ದ ಕರಡಿ, ಕಿರುಬನಂತಹ ಪ್ರಾಣಿಗಳು ನಾಪತ್ತೆಯಾಗಿವೆ.

ಕ್ಯಾಚ್ಮೆಂಟ್ (ಗುಡ್ಡಗಳು) ಪ್ರದೇಶ ಹಾಳಾದ ಮೇಲೆ ಕೆರೆಯಲ್ಲಿ ನೀರು ನಿಲ್ಲುವ ಪ್ರಮಾಣ ಕಡಿಮೆಯಾಗಿದೆ. ಪರಿಣಾಮ ಅಂತರ್ಜಲ ಕುಸಿದಿದೆ. ಕೆಲವು ಹಳ್ಳಿಗಳಲ್ಲಿ ಕೊಳವೆ ಬಾವಿಯ ನೀರು  ಫ್ಲೋರೈಡ್ ಯುಕ್ತವಾಗಿದೆ. ಗ್ರಾಮಗಳಿಗೂ ಕ್ಯಾನ್ ವಾಟರ್ ಅಡಿಯಿಟ್ಟಿದೆ. ಕೆಲವು ಕಡೆ ಶುದ್ಧನೀರಿನ ಘಟಕಗಳು ಸ್ಥಾಪಿತಗೊಂಡಿವೆ.

ಅಂತರ್ಜಲ ಪಾತಾಳಕ್ಕೆ ಇಳಿಯಲು ಅತಿಯಾದ ಕೊಳವೆಬಾವಿಳ ಕೊರೆತವೂ ಕಾರಣವಾಗಿದೆ. ಪರಿಣಾಮವಾಗಿ ತೊನೆದಾಡುತ್ತಿದ್ದ ತೆಂಗಿನ ಮರಗಳೇ ಸುಳಿ ಬಿಟ್ಟಿವೆ. ಬಯಲು ಸೀಮೆಗೆ ಬೇಡವಾಗಿದ್ದ ಅಡಕೆ ತಂದು ನೆಟ್ಟು, ನೀರನ್ನು ಬರಿದು ಮಾಡಲಾಗಿದೆ. ಹೊಲ, ಗದ್ದೆ ಉಳುಮೆ ಮಾಡಲು ಕೂಲಿ ಕಾರ್ಮಿಕರು ಸಿಗದೇ, ಆ ಗದ್ದೆಗಳ್ಲಲಿ ಹಣ ನೀಡುತ್ತದೆ ಎಂಬ ಆಸೆಯಿಂದ ಅಂತರ್ಜಲ ಬರಿದು ಮಾಡುವ ಅಕೇಷಿಯಾ ಗಿಡಗಳನ್ನು ನೆಡುತ್ತಿದ್ದಾರೆ.

ಬೋರಕನಕಣಿವೆ ಜಲಾಶಯಕ್ಕೆ ನೀರು ಬಾರದೇ ವರ್ಷಗಳೇ ಕಳೆದಿವೆ. ವಾಣಿಜ್ಯ ಪಟ್ಟಣ ಎಂದೇ ಹೆಸರು ಪಡೆದಿದ್ದ ಹುಳಿಯಾರು ಕುಡಿಯುವ ನೀರಿನ ಸಮಸ್ಯೆಯಿಂದ ನಲುಗುತ್ತಿದೆ. ರಾಜಕಾರಣಿಗಳು ಹೇಮಾವತಿ ಕೊಡುತ್ತೀವಿ, ಭದ್ರಾ ಮೇಲ್ದಂಡೆ ತರುತ್ತೇವೆ ಎಂಬ ನೀರು ಕೊಡುವ ಭರವಸೆಗಳೊಂದಿಗೆ ಚುನಾವಣೆಗಳನ್ನು ಗೆಲ್ಲುತ್ತಿದ್ದಾರೆ.

ಇತ್ತ ನೀರಿಲ್ಲದೇ ನಾಟಿ ಆಕಳು, ಹೋರಿಗಳೇ ತುಂಬಿದ್ದ ಗ್ರಾಮಗಳಲ್ಲಿ ಹೆಚ್ಚು ಹಾಲುಕೊಡುವ ಸೀಮೆ ಹಸುಗಳು ಸ್ಥಾನಪಡೆದಿವೆ. ಗುಡ್ಡಕ್ಕೆ ಜಂಗ್ಲಿ ದನ ಹೊಡೆಯುವವರೂ ಇಲ್ಲವಾಗಿದ್ದಾರೆ. ಪ್ರತಿ ಊರಿನಲ್ಲಿ ನಿತ್ಯವೂ ಭಾನುವಾರದ ಕಳೆ. ಊರನ್ನು ರಕ್ಷಿಸುತ್ತಿದ್ದ ಬಹುತೇಕ ಮನೆ ಯಜಮಾನ, ಯಜಮಾನತಿಯರು, ಜಮೀನುಗಳನ್ನು ಬೆದ್ಲು ಬಿಟ್ಟು, ಬೆಂಗಳೂರಿನ ಹೊರವಲಯದ ಎಂಟನೇ ಮೈಲಿ, ದಾಸರಹಳ್ಳಿ, ನೆಲಗದರನಹಳ್ಳಿಯಲ್ಲಿ ನೆಲೆಸಿದ್ದಾರೆ. ಸಮೀಪದ ಗಾರ್ಮೆಂಟ್ ಕಾರ್ಖಾನೆಯಲ್ಲಿ ಪತಿ ಸೆಕ್ಯೂರಿಟಿ ಗಾರ್ಡ್, ಪತ್ನಿ ಮಕ್ಕಳು ಗಾರ್ಮೆಂಟ್್ನಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ನಮ್ಮೂರಿನಲ್ಲಿ ಬಿಪಿಎಲ್ ಕಾರ್ಡ್, ಅನ್ನಭಾಗ್ಯದ ಅಕ್ಕಿ, ಸಕ್ಕರೆ, ಗೋಧಿ ಪಡೆದು, ಬೆಂಗಳೂರಿನ ಮೆನ ಮಂದಿಯಲ್ಲ ಸೇರಿ ವರ್ಷಕ್ಕೆ ಕೃಷಿಯಿಂದ ದುಡಿಯುವ ಹಣವನ್ನು ತಿಂಗಳೊಪ್ಪತ್ತಿಗೆ ದುಡಿಯುತ್ತಾ, ಇದೇ ಸರಿಯಾದ ಜೀವನ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

ಮೂರು ದಶಕಗಳ ಈ ಕ್ಷಿಪ್ರಗತಿಯ ಬದಲಾವಣೆಯ ವೇಳೆ, ಸಲಹೆಗಳನ್ನು ನೀಡಿ, ಪರಿಸರವನ್ನು ರಕ್ಷಿಸುವ ಯಾವ ಪ್ರಯತ್ನಗಳು ನಡೆದೇ ಇಲ್ಲ. ಇಂಥ ಸಂಕಷ್ಟದ ದಂಡೆಯ ಮೇಲೆ ನಿಂತಿರುವ  ಪ್ರದೇಶದಲ್ಲಿ ‘ಸಹ್ಯಾದ್ರಿ ಉಳಿಸಿ’ ಅಪ್ಪಿಕೋ ಚಳವಳಿಯ 32ನೇ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.

ಬಯಲು ಸೀಮೆಯವರಿಗೆ ದಾರಿ ತೋರುವ  ಇಂಥ ಕಾರ್ಯಗಳು ಬಹಳ ಹಿಂದೆಯೇ ನಡೆಯಬೇಕಿತ್ತು. ಕನಿಷ್ಠ ತಡವಾಗಿಯಾದರೂ ಈ ಪ್ರಯತ್ನಗಳು ನಡೆಯುತ್ತಿವೆ ಎಂಬುದು ಖುಷಿಯ ವಿಚಾರ. ಈ ಕಾರ್ಯಕ್ರಮ ಬಯಲು ಸೀಮೆಯಲ್ಲಿ ಜಲ ಸಂರಕ್ಷಣೆಯ ಕ್ರಾಂತಿಗೆ ನಾಂದಿಯಾಡುವಂತಾಗಲಿ. ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ.

ಹುಣಸೆಕಟ್ಟೆಯ ಹೂವಿನ ಬದುಕು

ಹುಣಸೆಕಟ್ಟೆ ಜಿಲ್ಲೆಯಲ್ಲೇ ಅತ್ಯಧಿಕ ಹೂವು ಬೆಳೆಯುವ ಏಕೈಕ ಗ್ರಾಮ. ಪರಿಶಿಷ್ಟರೇ ಹೆಚ್ಚಾಗಿರುವ ಈ ಊರಿನಲ್ಲಿ ೬೦೦ ಕುಟುಂಬಗಳಿವೆ. ಅದರಲ್ಲಿ ೫೫೦ ಕುಟುಂಬಗಳಿಗೂ ಜಮೀನಿದೆ. ಜಮೀನು ಹೊಂದಿರುವರೆಲ್ಲರೂ ಕನಿಷ್ಠ ೧೦ ಗುಂಟೆಯಿಂದ ೧ ಎಕರೆ ಪ್ರದೇಶವನ್ನು ಹೂವಿಗಾಗಿ ಮೀಸಲಿಟ್ಟಿದ್ದಾರೆ. ಕಡಿಮೆ ಜಾಗದಲ್ಲಿ ಹೂವು ಬೆಳೆಯುವವರದ್ದೇ ಸಿಂಹಪಾಲು.

ಅಚ್ಚರಿಯ ವಿಷಯವೆಂದರೆ ಪುಷ್ಪ ಕೃಷಿಯಲ್ಲಿ ತೊಡಗಿರುವವರಲ್ಲಿ ೪೦೦ ಮಂದಿ ೨೨ ರಿಂದ ೪೦ ವರ್ಷದೊಳಗಿನವರು. ಇವರಲ್ಲಿ ಕನಿಷ್ಠ ಎಸ್‌ಎಸ್‌ಎಲ್‌ಸಿಯಿಂದ, ಗರಿಷ್ಠ ಬಿಎ ವರೆಗೆ ಓದಿದವರಿದ್ದಾರೆ.

ವಿದ್ಯಾಭ್ಯಾಸವೇನೇ ಇದ್ದರೂ ಗದ್ದೆಗಿಳಿದು ಕೈ-ಮೈ ಕೆಸರು ಮಾಡಿಕೊಳ್ಳುತ್ತಾರೆ. ಊರಿಗೆ ಬರುವ ಸೊಸೆಯಂದಿರೂ ಇದರಿಂದ ಹೊರತಾಗಿಲ್ಲ. ಹೀಗಾಗಿ ಊರಿನಲ್ಲಿ ಉಳಿಯುವ ಅನಿವಾರ್ಯವೋ, ಅವಕಾಶಗಳಿಲ್ಲದೆಯೋ ಒಟ್ಟಿನಲ್ಲಿ ಈ ಯುವಕರು ದುಡಿಮೆಗಾಗಿ ಸಮೀಪದ ನಗರಕ್ಕಾಗಲಿ, ದೂರದ ಬೆಂಗಳೂರಿಗಾಗಲಿ ಹೋಗದೇ, ಹೂವಿನ ಕೃಷಿಯನ್ನೇ ನಂಬಿ ಬದುಕುತ್ತಿದ್ದಾರೆ. ಇದೇ ಕೃಷಿಯಲ್ಲಿ ವರ್ಷಕ್ಕೆ ಕನಿಷ್ಠ ೨ ರಿಂದ ೩ ಲಕ್ಷ ಲಾಭ ಗಳಿಸುತ್ತಿದ್ದಾರೆ !

ಹೂವಿನ ಕೃಷಿ ಹೀಗೆ ಬಂತು
ಮೂವತ್ತು ವರ್ಷಗಳ ಹಿಂದಿನ ಕಥೆ. ಹುಣಸೆಕಟ್ಟೆ ಗ್ರಾಮದಲ್ಲಿ ದಾಸರ ಬೋರಜ್ಜ ಎಂಬ ಗ್ರಾಮ ಪಂಚಾಯ್ತಿ ಅಧ್ಯಕ್ಷರು ವಾಸವಿದ್ದರು. ಅವರು ಮೊದಲು ಸೇವಂತಿಗೆ ಹೂವನ್ನು ಗ್ರಾಮದಲ್ಲಿ ಬೆಳೆಯುತ್ತಿದ್ದರು. ಬಿಡಿ ಬಿಡಿ ಹೂವನ್ನು ಕುಕ್ಕೆಯಲ್ಲಿ ತುಂಬಿಕೊಂಡು ಚಿತ್ರದುರ್ಗದ ಮಾರುಕಟ್ಟೆಗೆ ಹೋಗಿ ಕೆ.ಜಿ ಲೆಕ್ಕದಲ್ಲಿ ಮಾರಾಟ ಮಾಡುತ್ತಿದ್ದರು. ‘ಅಜ್ಜ’ನಿಂದ ಆರಂಭವಾದ ಹೂವಿನ ಉದ್ಯಮ ಈಗ ಯುವಕರ ಶ್ರಮ, ದುಡಿಮೆ ಮೇಲೆ ವಿಸ್ತಾರಗೊಳ್ಳುತ್ತಿದೆ. ಅಂದು ಒಂದು ಪಟ್ಟೆ, ಗುಂಟೆಯಲ್ಲಿ ಬೆಳೆಯುತ್ತಿದ್ದ ಒಂದೋ ಎರಡೋ ತಳಿಯ ಹೂವುಗಳು, ಇಂದು ಒಂದು ಎಕರೆವರೆಗೂ ವಿಸ್ತಾರಗೊಂಡಿದೆ. ಹತ್ತಾರು ತಳಿಯ ಹೂವುಗಳನ್ನು ಬೆಳೆಯಲಾಗುತ್ತಿದೆ.

ಎಲ್ಲರೂ ‘ಹೂವಿನ’ ಯಜಮಾನರು:
ಹುಣಸೆಕಟ್ಟೆಯಲ್ಲಿ ಪ್ರತಿಯೊಬ್ಬ ರೈತರೂ ಹೂವಿನ ತೋಟದ ಮಾಲೀಕರು. ಸೇವಂತಿಗೆಯ ಚಾಂದಿನಿ, ಬೆಳ್ಳಟ್ಟಿ, ಪಚ್ಚೆ, ಕುಪ್ಪಂ, ಕರ್ನೂಲ್, ಬಟನ್ ರೋಸ್, ದುಂಡು ಮಲ್ಲಿಗೆ ಸೇರಿದಂತೆ ವಿವಿಧ ಬಗೆಯ ಹೂವುಗಳನ್ನು ಬೆಳೆಯುತ್ತಾರೆ. ೧೦೦ ಎಕರೆಯಷ್ಟು ಕನಕಾಂಬರ ಹೂವಿನ ತೋಟವಿದೆ.

ಈ ಹೂದೋಟದಲ್ಲಿ ನಡುವೆ ನೆರಳಿಗಾಗಿ ಚೊಗಚೆ (ಅಗಸೆ, ತೊಗಜೆ) ಮರಗಳನ್ನು ಬೆಳೆಸಿದ್ದಾರೆ. ‘ಈ ಮರಗಳು ಹೂವಿಗೆ ನೆರಳಾಗುತ್ತವೆ. ವೀಳ್ಯೆದೆಲೆಗೆ ಬಳ್ಳಿಗೆ ಆಸರೆಯಾಗುತ್ತವೆ. ಜಮೀನಿನ ಮೇಲೆ ಎಲೆ ಉದುರಿಸಿ ಗೊಬ್ಬರವಾಗಿಸುತ್ತವೆ. ಪ್ರತಿ ವರ್ಷ ಮರಗಳನ್ನು ಸವರಿದ ಎಲೆಗಳಿಂದ ಗೊಬ್ಬರ ತಯಾರಿಸುತ್ತೇವೆ’ ಎನ್ನುತ್ತಾರೆ ಮುಕ್ಕಾಲು ಎಕರೆಯಲ್ಲಿ ಪುಷ್ಪ ಕೃಷಿ ಕೈಗೊಂಡಿರುವ ತಿಪ್ಪೇಸ್ವಾಮಿ.

ಈ ಗ್ರಾಮದಲ್ಲಿ ಎಂಥ ಪರಿಸ್ಥಿತಿಯಲ್ಲೂ ಪುಷ್ಪ ಕೃಷಿ ನಿಂತಿಲ್ಲ. ಬರಗಾಲ ಬಂದು, ಕೊಳವೆ ಬಾವಿಯಲ್ಲಿ ನೀರು ಖಾಲಿಯಾದಾಗ ಅಕ್ಕಪಕ್ಕದ ತೋಟಗಳಿಂದ ನೀರು ಖರೀದಿಸಿ ಹೂವಿನ ಕೃಷಿ ಉಳಿಸಿಕೊಂಡಿದ್ದಾರೆ. ‘ಸಾಲ ಮಾಡಿಯಾದರೂ ತುಪ್ಪ ತಿನ್ನು’ ಎನ್ನವಂತೆ, ಸಾಲ ಮಾಡಿ ಹೂವಿನ ಕೃಷಿ ಮಾಡುತ್ತಿದ್ದಾರೆ. ಕಳೆದ ವರ್ಷದಲ್ಲಿ ನಷ್ಟ ಮಾಡಿಕೊಂಡಿದ್ದನ್ನು, ಮುಂದಿನ ವರ್ಷದಲ್ಲಿ ಬಡ್ಡಿಯೊಂದಿಗೆ ದುಡಿಯುತ್ತೇವೆ ಎಂಬ ವಿಶ್ವಾಸ ಹುಣಸೆ ಕಟ್ಟೆಯ ಹೂವಾಡಿಗರದ್ದು !

ವರ್ಷಪೂರ್ತಿ ದುಡಿಮೆ
ಸೇವಂತಿಗೆ 8 ತಿಂಗಳ ಬೆಳೆ. ಕನಕಾಂಬರ ಕೂಡ ವರ್ಷದ ಬೆಳೆ. ಸೇವಂತಿಗೆ ಬೆಳೆಯನ್ನು ವರ್ಷಕ್ಕೊಮ್ಮೆ ನಾಟಿ ಮಾಡಬೇಕು. ಕನಕಾಂಬರ ಒಂದು ಸಾರಿ ನೆಟ್ಟರೆ ಹತ್ತು ವರ್ಷ ಹೂವು ಬಿಡುತ್ತದೆ. ಹುಣಸೆಕಟ್ಟೆ ವ್ಯಾಪ್ತಿಯಲ್ಲಿ ಅಂದಾಜು 100 ಎಕರೆಯಷ್ಟು ಕನಕಾಂಬರದ ಹೂವಿನ ಬೆಳೆ ಇದೆ.

ಎಕರೆ ಹೂವಿನ ಕೃಷಿಯಲ್ಲಿ ನಾಲ್ಕೈದು ತಳಿಗಳನ್ನು ನಾಟಿ ಮಾಡುತ್ತಾರೆ. ಹಬ್ಬ, ಸೀಸನ್, ಬೇಡಿಕೆಗೆ ತಕ್ಕಂತೆ ಹೂವುಗಳನ್ನು ಬೆಳೆಯುತ್ತಾರೆ. ಇದು ಹತ್ತು – ಹದಿನೈದು ವರ್ಷಗಳ ಅನುಭವದಿಂದ ಬಂದ ಕಲೆ. ’ಯುಗಾದಿಯ ಎಡ ಬಲದಾಗೆ ಸೇವಂತಿಗೆ ಹೂವಿನ ಗಿಡಗಳನ್ನು ನಾಟಿ ಮಾಡ್ತೀವಿ. ಅದು ದೀಪಾವಳಿಗೆ ಕೊಯ್ಲಿಗೆ ಬರುತ್ತದೆ.

ಇದು ಒಂದು ಜಾತಿ ಹೂವು. ಅದರ ಜೊತೆಗೆ ಇನ್ನೊಂದೆರಡು ಜಾತಿ ಹೂವುಗಳನ್ನು ನಾಟಿ ಮಾಡ್ತೀವಿ. ಒಂದು ಹೂವು ಕೊಯ್ಲು ಪೂರ್ಣವಾಗುವುದೊಳಗೆ ಮತ್ತೊಂದು ತಳಿಯ ಹೂವು ಕೊಯ್ಲಿಗೆ ಸಿದ್ಧ. ಹಾಗಾಗಿ ವರ್ಷಪೂರ್ತಿ ಹೂವು ಕೊಯ್ಲು ನಿರಂತರ. ಇದರಿಂದ ವರ್ಷ ಪೂರ್ತಿ ಕೆಲಸ’ ಎಂದು ವಿವರಿಸುತ್ತಾರೆ ಎರಡು ದಶಕಗಳ ಪುಷ್ಪ ಕೃಷಿಯ ಅನುಭವಿ ರೈತ ಕಾಂತರಾಜು.

ಈಗ ಶ್ರಾವಣದಲ್ಲಿ ಬೆಳ್ಳಟ್ಟಿ ತಳಿ ಸೇವಂತಿಗೆ ನಾಟಿ ಮಾಡಿದ್ದಾರೆ. ಅದು ಯುಗಾದಿಗೆ ಕೊಯ್ಲಿಗೆ ಬರುತ್ತದೆ. ಒಂದು ಎಕರೆ ಜಮೀನಿನಲ್ಲಿ ಕಾಲು ಬಾಗ ಈ ಹೂವಿನ ತಳಿ ನಾಟಿ ಮಾಡಿದ್ದೇವೆ. ನಾಲ್ಕೈದು ತಳಿಗಳನ್ನು ಹಾಕುವುದರಿಂದ ಒಂದು ತಳಿ ಸೋತರೆ, ಮತ್ತೊಂದು ತಳಿ ಗೆಲ್ಲುತ್ತದೆ ಎನ್ನುವುದು ಈ ಊರಿನ ಪುಷ್ಪ ಕೃಷಿಕರ ಲೆಕ್ಕಾಚಾರ.

ಹೂವಿನ ಹಾಸಿಗೆಯಲ್ಲ!
ಪುಷ್ಪೋದ್ಯಮ ಈ ಊರಿನ ಯುವಕರಿಗೆ ಹೂವಿನ ಹಾಸಿಗೆಯೇನಲ್ಲ. ಒಂದೊಂದು ಸಮಯದಲ್ಲಿ ಕೆ.ಜಿ ಕನಕಾಂಬರ ಸಾವಿರ ರೂಪಾಯಿ ಬೆಲೆ ಕಟ್ಟಿಕೊಟ್ಟರೆ, ಮತ್ತೊಮ್ಮೆ 100 ರೂಪಾಯಿಯನ್ನೂ ಕರುಣಿಸಿದೆ. ಹೂವಿಗೆ ಬೆಂಕಿ ರೋಗ ಕಾಣಿಸಿಕೊಂಡರೆ, ಇಡೀ ಹೂವಿನ ಅಂಗಳವೇ ಸುಟ್ಟು ಭಸ್ಮವಾಗುತ್ತದೆ. ಹಾಗೆಂದು ಪುಷ್ಪೋದ್ಯಮ ಎಂದೂ ನಷ್ಟ ಮಾಡಿಲ್ಲ. ಇದರಲ್ಲಿ ಆದಾಯವೂ ಇದೆ, ರಿಸ್ಕ್ ಕೂಡ ಇದೆ. ಆದರೆ ದೊಡ್ಡ ಪ್ರಮಾಣದಲ್ಲಿ ನಷ್ಟವಾಗುವುದಿಲ್ಲ. ನಾವು ಎಷ್ಟು ಜಾಗೃತಿಯಿಂದ ಕೃಷಿ ಮಾಡುತ್ತೇವೆ ಎನ್ನುವುದರ ಮೇಲೆ ಎಲ್ಲವೂ ನಿರ್ಧಾರವಾಗುತ್ತದೆ ಎನ್ನುತ್ತಾರೆ ತಿಪ್ಪೇಸ್ವಾಮಿ.

‘ಲಕ್ಷ ರೂಪಾಯಿ ಬಂಡವಾಳ ಹಾಕಿದರೆ 25 ಸಾವಿರ ರೂಪಾಯಿ ಕೂಲಿಗೆ, 10 ಸಾವಿರ ರೂಪಾಯಿ ದಲ್ಲಾಳಿಗೆ ಕೊಡಬೇಕು. 1,000 ರೂಪಾಯಿ ಆದಾಯ ಬಂದರೆ, ೫೦೦ ರೂ ಖರ್ಚು. ಉಳಿದ್ದು ಲಾಭ. ಹುಣಸೆಕಟ್ಟೆಯಿಂದ ಪ್ರತಿದಿನ ಒಂದು ಕ್ವಿಂಟಲ್ ಹೂವು ಚಿತ್ರದುರ್ಗಕ್ಕೆ ಸಾಗಿಸುತ್ತಾರೆ. ಕಳೆದ ವರ್ಷ ಇದೇ ವೇಳೆ 10ರಿಂದ 15 ಕ್ವಿಂಟಲ್ ಹೂವು ಮಾರುಕಟ್ಟೆಗೆ ಪೂರೈಸಿದ್ದರು. ಹಬ್ಬದ ದಿನಗಳಲ್ಲಿ ಪ್ರತಿದಿನ 10 ಲಕ್ಷ ರೂಪಾಯಿ ಹೂವಿನ ವಹಿವಾಟು ನಡೆಯುತ್ತದೆ. ನೀರು ಸರಿಯಾಗಿದ್ದರೆ ಪ್ರತಿದಿನ ಕನಿಷ್ಠ 2-3 ಲಕ್ಷ ರೂಪಾಯಿ ವಹಿವಾಟು ನಡೆಸಬಹುದು’ – ಲೆಕ್ಕಾಚಾರ ಮುಂದಿಡುತ್ತಾರೆ ಪುಷ್ಪ ಕೃಷಿಕರು.

ಹೂವಿನ ವ್ಯಾಪಾರಕ್ಕೆ ಅಡಿಕೆ ಕೃಷಿಯೂ ಸಾಟಿಯಾಗಲ್ಲ ಎನ್ನುತ್ತಾರೆ ಹೂವಾಡಿಗರು. ಒಂದು ಎಕರೆ ಅಡಿಕೆ ಕೃಷಿಯಿಂದ 2 ಲಕ್ಷ ರೂ. ಪಡೆಯಬಹುದು. ಸಕಾಲದಲ್ಲಿ ಮಳೆಯಾಗಿ, ಗೊಬ್ಬರ, ಔಷಧ ಪೂರೈಕೆಯಾದರೆ ಈ ಹೂವಿನ ಬೇಸಾಯದಲ್ಲಿ ಒಂದು ಸೀಸನ್‌ಗೆ ಕಾಲು ಎಕರೆಗೆ ಒಂದು ಲಕ್ಷ ರೂಪಾಯಿ ದುಡಿಯುತ್ತೇವೆ. ಗ್ರಾಮದ ರಘು ಎಂಬುವವರು ಕಾಲು ಎಕರೆ ಬೆಳ್ಳಟ್ಟಿ ತಳಿ ಬೆಳೆದು, ಖರ್ಚು ತೆಗೆದು 3 ಲಕ್ಷ ರೂಪಾಯಿ ಆದಾಯ ಗಳಿಸಿದ್ದಾರೆ ಎಂದು ಉದಾಹರಿಸುತ್ತಾರೆ ಗೋವಿಂದಸ್ವಾಮಿ.

‘ಪುಷ್ಪ ಕೃಷಿಯನ್ನು ದುರಾಸೆಯಿಂದ ಮಾಡುತ್ತಿಲ್ಲ. ನಮ್ಮದು ನಾಲ್ವರ ಕುಟುಂಬ. ಕಾಲು ಎಕರೆಯಲ್ಲಿ ಹೂವು ಕೃಷಿ ಮಾಡಿದರೆ ಸಾಕು. ಮಹಂತೇಶ, ಗೋವಿಂದಸ್ವಾಮಿ, ರಘು ಎಲ್ಲರೂ ಕಾಲು ಎಕರೆಯಲ್ಲಿ ಹೂವು ಬೆಳೆಯುತ್ತಿದ್ದಾರೆ. 10–12 ವರ್ಷಗಳಿಂದ ಪುಷ್ಪ ಕೃಷಿ ನಿರಂತರವಾಗಿ ಮಾಡುತ್ತಿದ್ದರೆ. ಇದೆಲ್ಲ ಅಪ್ಪಂದಿರು ಕಲಿಸಿಕೊಟ್ಟ ಪಾಠ’ ಎಂದು ನೆನಪಿಸಿಕೊಳ್ಳುತ್ತಾರೆ ಕಾಂತರಾಜು.

ಮಹಿಳೆಯರು, ಆಟೋದವರಿಗೂ ಉದ್ಯೋಗ
ಹುಣಸೆಕಟ್ಟೆ ಯುವಕರ ಪುಷ್ಪ ಕೃಷಿ ಕೇವಲ ರೈತರಿಗಷ್ಟೇ ಅಲ್ಲ, ಸುತ್ತಮುತ್ತಲ ಗ್ರಾಮದ ಮಹಿಳೆಯರಿಗೆ, ಕೂಲಿ ಕಾರ್ಮಿಕರಿಗೆ ಅಷ್ಟೇ ಏಕೆ, ಆಟೋ ಓಡಿಸುವವರಿಗೂ ಉದ್ಯೋಗ ನೀಡಿದೆ. ಹೂವು ಬಿಡಿಸಲು, ಅದನ್ನು ಮಾಲೆಯಾಗಿಸುವ ಕೆಲಸವನ್ನು ಮಾಡನಾಯಕನಹಳ್ಳಿ, ಗೋನೂರು ಸುತ್ತಲಿನ ಗ್ರಾಮದ ಮಹಿಳೆಯರಿಗೆ ವಹಿಸುತ್ತಾರೆ.

‘ಬೆಳಿಗ್ಗೆ 5 ಗಂಟೆಗೆ ಹೂವಿನ ಕೊಯ್ಲು ಶುರು. ಕೂಲಿ ಆಳು, ಮನೆ ಮಂದಿ ಎಲ್ಲ ಸೇರಿ ಹೂ ಬಿಡಿಸುತ್ತೇವೆ. ಒಬ್ಬೊಬ್ಬ ಕೂಲಿ ಆಳು 1 ಕೆ.ಜಿ ಹೂವು ಬಿಡಿಸಿದರೆ 100 ರೂ. ಅದನ್ನು ಕಟ್ಟಿದರೆ 100 ರೂ. ಸುತ್ತಮುತ್ತಲಿನ ಹಳ್ಳಿಯ ಮಹಿಳೆಯರನ್ನೇ ಬಳಸಿಕೊಂಡು ಉದ್ಯೋಗ ನೀಡುತ್ತೇವೆ. ಬೆಳಿಗ್ಗೆ ೭ ರಿಂದ ೧೧ ಗಂಟೆವರೆಗೆ ೧ ಕೆ.ಜಿ ಹೂವು ಕಟ್ಟುತ್ತಾರೆ’ ಎನ್ನುತ್ತಾರೆ ಕಾಂತರಾಜು.

ಕೊಯ್ಲಾದ ಹೂವನ್ನು ಹಳ್ಳಿಯಲ್ಲೇ ’ಮೌಲ್ಯವರ್ಧಿಸಿ’ ಮಾರುಕಟ್ಟೆಗೆ ತಲುಪಿಸುವುದರಿಂದ ಬೆಲೆಯೂ ಹೆಚ್ಚು, ಸ್ಥಳೀಯರಿಗೆ ಉದ್ಯೋಗವೂ ಲಭ್ಯ ಎನ್ನುವುದು ಹೂವು ಬೆಳೆಗಾರರ ತಂತ್ರಗಾರಿಕೆ. ಇದರಲ್ಲಿ ಅವರು ಯಶಸ್ವಿಯಾಗಿದ್ದಾರೆ. ಹಾಗಾಗಿ ನೂರಾರು ಮಹಿಳೆಯರಿಗೆ ಊರಿನಲ್ಲೇ ವರ್ಷ ಪೂರ್ತಿ ಉದ್ಯೋಗ. ಹೆಚ್ಚಾಗಿ ಭೂರಹಿತ ಪುರುಷರಿಗೆ ಹಾಗೂ ಮಹಿಳೆಯರಿಗೆ, ಈ ಪುಷ್ಪ ಕೃಷಿಯಿಂದ ಸಾಕಷ್ಟು ಉದ್ಯೋಗ.

ಮಾಲೆ ಕಟ್ಟಿದ ಹೂವನ್ನು ಹೊತ್ತೊಯ್ಯಲು ಊರಿನಲ್ಲಿ 11 ಲಗೇಜ್ ಆಟೋಗಳಿವೆ. ಊರಿನ ಯುವಕರೇ ಆಟೊದ ಮಾಲೀಕರು. ದಿನವೊಂದಕ್ಕೆ ಕನಿಷ್ಠ 300ಮಂದಿ ಮಾರುಕಟ್ಟೆಗೆ ಹೂವು ಕೊಂಡೊಯ್ಯುತ್ತಾರೆ. ಒಂದು ಸಾರಿ ದುರ್ಗದ ಮಾರುಕಟ್ಟೆಗೆ ಹೋಗಿ ಬರಲು ಒಬ್ಬೊಬ್ಬರಿಗೆ ೩೫ ರೂಪಾಯಿ ಖರ್ಚು. ಈ ಲೆಕ್ಕಾಚಾರದಲ್ಲಿ ದಿನಕ್ಕೆ 15 ಸಾವಿರ ರೂಪಾಯಿ ಬಸ್‌ಚಾರ್ಜ್. ಹೀಗಾಗಿ ಆಟೊದವರಿಗೆ ನಿತ್ಯ ಉದ್ಯೋಗ, ಆದಾಯ – ಲೆಕ್ಕಾಚಾರ ನೀಡುತ್ತಾರೆ ಕಾಂತರಾಜು.

ಬೇಡಿಕೆಯ ಗುಟ್ಟು
ಹುಣಸೆಕಟ್ಟೆಯ ಹೂವು ಬೆಳಗಾವಿ, ಮಂಗಳೂರು, ಉಡುಪಿ, ಬಿಜಾಪುರ, ತಮಿಳುನಾಡು, ಮಹಾರಾಷ್ಟ್ರ, ಮೈಸೂರು ಸೇರಿದಂತೆ ರಾಜ್ಯ- ಹೊರ ರಾಜ್ಯಗಳಲ್ಲಿ ಮಾರಾಟವಾಗುತ್ತದೆ. ಬೆಳಿಗ್ಗೆ ಕೊಯ್ಲಾದ ಹೂವು ಮಧ್ಯಾಹ್ನ 12ಗಂಟೆಯೊಳಗೆ ಮಾರ್ಕೆಟ್ ತಲುಪುತ್ತದೆ. ಈ ಊರಿನ ಹೂವಿಗೆ ತಾಳಿಕೆ ಗುಣ ಹೆಚ್ಚು. ಹಾಗಾಗಿ ಬೇಡಿಕೆಯೂ ಹೆಚ್ಚು. ಅನೇಕ ವ್ಯಾಪಾರಸ್ಥರು ಕೆಲವೊಮ್ಮೆ ಹುಣಸೆಕಟ್ಟೆಗೆ ಬಂದು ಹೂವು ಕೊಂಡೊಯ್ಯುತ್ತಾರೆ.

ಗುಣಮಟ್ಟ ಕಾಯ್ದುಕೊಳ್ಳಲು ಸಕಾಲಕ್ಕೆ ನೀರು ಪೂರೈಸಬೇಕು. ಇದಕ್ಕಾಗಿ ಕೊಳವೆಬಾವಿಗಳಿ ಮೊರೆ ಹೋಗಿದ್ದರು. ಒಂದೊಂದು ತೋಟದವರು 10ಕ್ಕೂ ಹೆಚ್ಚು ಕೊಳವೆ ಬಾವಿ ಕೊರೆಸಿದ್ದರು. ಸಾಕಷ್ಟು ಹಣ ಸುರಿದಿದ್ದರು. ಕಳೆದ ವರ್ಷ ಬರ ಬಂದಾಗ ಎಲ್ಲ ಕೊಳವೆ ಬಾವಿಗಳು ಬತ್ತಿ ಹೋಗಿದ್ದವು. ಇಡೀ ಹೂವಿನ ಬಯಲೇ ಬರಿದಾಗಿತ್ತು.

ಅಂಥ ಪರಿಸ್ಥಿತಿಯಲ್ಲಿ ಒಬ್ಬ ರೈತನಿಗೆ ಕೊಳವೆಬಾವಿಯಲ್ಲಿ ಎರಡು ಇಂಚು ನೀರು ಸಿಕ್ಕರೆ ನಾಲ್ಕು ರೈತರು ಹಂಚಿಕೊಳ್ಳುವ ಅಘೋಷಿತ ಸಹಕಾರ ಮನೋಭಾವವನ್ನು ಗ್ರಾಮದ ರೈತರು ರೂಢಿಸಿಕೊಂಡು ಹೂವಿನ ಕೃಷಿ ಉಳಿಸಿಕೊಂಡಿದ್ದರು. ಗುಣಮಟ್ಟದ ಹೂವಿಗಾಗಿ ಅವರು ಕೈಗೊಂಡ ನಿರ್ಧಾರಗಳು ನಿಜಕ್ಕೂ ಬೆರಗು ಮೂಡಿಸುವಂತಹವು.

ಊರೂ ಮಾದರಿ, ಯುವಕರೂ..
ಈ ಬಾರಿ ಮಳೆ ಚೆನ್ನಾಗಿದೆ. ಹುಣಸೆಕಟ್ಟೆ ಗ್ರಾಮದಲ್ಲಿ ಅಂತರ್ಜಲ ಹೆಚ್ಚಾಗಿ 7೦೦ ಅಡಿಗೆ ಇಳಿದಿದ್ದ ಕೊಳವೆಬಾವಿಗಳಲ್ಲಿ 2೦೦ ಅಡಿಗೆ ನೀರಿನ ಮಟ್ಟ ಏರಿದೆ. ಹುಣಸೆಕಟ್ಟೆಯಲ್ಲಿ ಮತ್ತೆ ಪುಷ್ಪೋದ್ಯಮ ಚುರುಕುಗೊಂಡಿದೆ. ಹೂವಿನ ಕೃಷಿ ಕೈಗೊಳ್ಳುವ ಯುವಕರ ಸಂಖ್ಯೆಯೂ ಹೆಚ್ಚಾಗಿದೆ. ಮತ್ತೆ ಸುತ್ತಲಿನ ಗ್ರಾಮದ ಕೂಲಿ ಕಾರ್ಮಿಕರು, ಹೂವು ಕಟ್ಟುವ ಮಹಿಳೆಯರು ಗ್ರಾಮದತ್ತ ಹೆಜ್ಜೆ ಹಾಕಿದ್ದಾರೆ. ಇಷ್ಟೆಲ್ಲ ಆದರೂ ಸರ್ಕಾರದ ಯಾವ ಇಲಾಖೆಗಳೂ ಈ ಊರಿನ ಬೆಳವಣಿಗೆಯತ್ತ ಮುಖ ಮಾಡದಿರುವುದು ವಿಪರ್ಯಾಸದ ಸಂಗತಿ.

ಕೃಷಿಯಲ್ಲಿ ಎಲ್ಲಿದೆ ಲಾಭ? ಎನ್ನುವ ಪ್ರಶ್ನೆಗೆ ಸಮಸ್ಯೆಗಳ ನಡುವೆ ಹುಣಕಟ್ಟೆಯಲ್ಲಿ ಜೀವಂತವಾಗಿರುವ ಯುವಕರ ಪುಷ್ಪೋದ್ಯಮ ಉತ್ತರ ನೀಡುತ್ತಿದೆ. ಹಳ್ಳಿಗಳಲ್ಲಿ ಯುವಕರಿಲ್ಲ, ಯುವಕರಿಗೆ ಲಾಭ ತರುವ ಉದ್ಯಮಿಗಳಿಲ್ಲ ಎಂದು ಸೋಗು ಹೇಳುವವರಿಗೆ ಇದೇ ಯುವಕರು ಉತ್ತರವಾಗುತ್ತಾರೆ.
ಸಂಪರ್ಕಕ್ಕೆ: ರಾಜು– 9632 651457

‘ಹೂವಲ್ಲಿ ಎತ್ತಿದ್ದನ್ನು ದಿನಸಿಗೆ ಕೊಡ್ತೀವಿ’
ಪುಷ್ಪಕೃಷಿಯಲ್ಲಿ ತೊಡಗಿರುವ ಹುಣಸೆಕಟ್ಟೆ ಯುವಕರಿಗೆ ತಮ್ಮ ಕಾಯಕದ ಬಗ್ಗೆ ಎಲ್ಲಿಲ್ಲದ ಪ್ರೀತಿ. ಇಂಥ ಕೃಷಿ ಸಂಕಷ್ಟದಲ್ಲಿದ್ದಾಗ ಅವರು ಸಂದರ್ಭವನ್ನು ಹೇಗೆ ಸ್ವೀಕರಿಸಿದರು. ಸಂಕಷ್ಟದಲ್ಲೂ ಊರು ಬಿಡದಿರಲು ಕಾರಣ ಏನು? ನಗರದ ಆಕರ್ಷಣೆಗೆ ಮಾರು ಹೋಗಲಿಲ್ಲವೇ ? ಎಂಬ ಪ್ರಶ್ನೆಗಳನ್ನಿಟ್ಟುಕೊಂಡು ಕೆಲವು ಯುವಕರ ಜೊತೆ ನಡೆಸಿದ ಸಂವಾದ ಇಲ್ಲಿದೆ.

* ಹೂವೇ ಏಕೆ ಬೆಳೆಯುತ್ತೀರಿ ?
೧೦ ವರ್ಷದಿಂದ ಬೆದ್ಲು ಜಮೀನಿನಲ್ಲಿ ರಾಗಿ, ಜೋಳ, ದಿನಿಸಿ ಏನೂ ಬೆಳೆದಿಲ್ಲ. ಕೊಳವೆ ಬಾವಿಯ ಆಶ್ರಯದಲ್ಲೇ ಜೀವನ ನಡೆಸೋದರಿಂದ ಹೂವು ಬೆಳೆಯುತ್ತೀವಿ. ಈ ಹೂವಿನ ಬೆಳೆ ಐತಲ್ಲಾ, ಒಂಥರಾ ಮನೆಗೆ ಕರಾವಿನ ಎಮ್ಮೆ ಇದ್ದ ಹಂಗೆ. ದಿನಾ ಹಾಲು ಕೊಡ್ತಾ, ದುಡ್ಡು ಕೊಡಿಸ್ತದೆ. ಹಾಗೆ ಈ ಹೂವು ಕೂಡಾ. ಏನೂ ಇಲ್ಲ ಎಂದರೆ ದಿನಕ್ಕೆ ೧೦೦ ರೂಪಾಯಿ ಜೇಬಿಗೆ ಇಳಿಸುತ್ತದೆ. ಇದು ದಿನಾ ದುಡ್ಡು ಕೊಡುವ ಉದ್ಯೋಗ.

* ಹಳ್ಳಿಯಲ್ಲೇ ಉಳಿಯಬೇಕೆನ್ನುವ ನಿಮ್ಮ ಛಲದ ಹಿಂದಿನ ಗುಟ್ಟು ?
ಮುಂಜಾನೆಯಿಂದ ರಾತ್ರಿವರೆಗೆ ಕೆಲಸಕೊಟ್ಟು, ಕೈತುಂಬಾ ಹಣಕೊಡುವ ಉದ್ಯೋಗ ನಮ್ಮೂರಿನಲ್ಲಿದೆ. ಕಾಲು, ಮುಕ್ಕಾಲು, ಒಂದು ಎಕರೆ ಪುಷ್ಪ ಕೃಷಿಯಲ್ಲಿ ಮೂರ್ನಾಲ್ಕು ಲಕ್ಷ ಸಂಪಾದನೆಯಿದೆ. ಹತ್ತಾರು ಮಂದಿಗೆ ಹಳ್ಳಿಯಲ್ಲೇ ಉದ್ಯೋಗ ಕೊಡ್ತೀವಿ. ಇದಕ್ಕಿಂತ ಉತ್ತಮ ಜೀವನ ನಗರದಲ್ಲಿಲ್ಲ. ಅಷ್ಟೆಲ್ಲ ಯಾಕ್ ಸ್ವಾಮಿ, ಚಿತ್ರದುರ್ಗದಾಗೆ, ಸುಮ್ಮನೆ ಸುತ್ತಾಡೋಕೂ ನಮಗೆ ಪುರುಸೊತ್ತಿಲ್ಲ.

* ಎಲ್ಲ ಜಮೀನಲ್ಲೂ ಹೂವನ್ನೇ ಬೆಳೆದರೆ, ಹೊಟ್ಟೆಗೆ ಏನ್ ಮಾಡ್ತೀರಿ ?
ರಾಗಿ, ಜೋಳ ಬೆಳೆದರೆ ಮಾರ್ಕೆಟ್ ಕಷ್ಟ. ಅದಕ್ಕೆ ಹತ್ತು ಎಕರೆ ಭೂಮಿಯಲ್ಲಿ ಒಂದು ಎಕರೆ ಹೂವಿಗೆ ಮೀಸಲು. ಇನ್ನು ಉಳಿದಿದ್ದರಲ್ಲಿ ರಾಗಿ, ಜೋಳ, ತೊಗರಿ ಹಾಕ್ತೀವಿ. ಅವುಗಳಿಗೆ ಬೋರ್‌ವೆಲ್ ನೀರು ಕೊಟ್ಟು ಪೂರೈಸೋದಕ್ಕೆ ಆಗುತ್ತಾ. ಮಳೆ ನಂಬಿಕೊಂಡು ಬರುವ ಬೆಳೆ ಅವು. ಬಂದ್ರೆ ಬಂದ್ವು. ಇಲ್ಲದಿದ್ದರೆ ಇಲ್ಲ. ಅದಕ್ಕೆ ಹೂವಲ್ಲಿ ಎತ್ತಿದ ದುಡ್ಡಿನಲ್ಲಿ, ದಿನಸಿ ಕೊಳ್ತೀವಿ, ಅಷ್ಟೆ.

* ನೀವೇನೋ ಕೃಷಿ ಮಾಡ್ತೀರಿ, ನಿಮ್ಮೂರಿಗೆ ಸೊಸೆಯಾಗಿ ಬಂದವರು…?
ಅವ್ರೂ ದುಡಿತಾರೆ. ನೋಡಿ. ನನ್ನಾಕೆ ಬಿಎ ಓದಿದ್ದಾರೆ. ನಮ್ಮ ಸಮಕ್ಕೆ ಗದ್ದೆಯಲ್ಲಿ ಕೆಲಸ ಮಾಡ್ತಾರೆ. ಕಳೆ ತೆಗೀತಾರೆ. ಹೂವು ಬಿಡಿಸ್ತಾರೆ. ಕಟ್ಟುತ್ತಾರೆ. ಕೆಲಸ, ಓದು, ವಿದ್ಯೆ ಇವೆಲ್ಲ ಹಣಕ್ಕಾಗಿ ಅಲ್ಲವೇ ?

* ಮಾರ್ಕೆಟ್ ಪರ್ವಾಗಿಲ್ಲಾ ಅನ್ನಿಸುತ್ತದೆಯೇ ?
ಅದೇ ನಮಗೆ ಕಿರಿಕಿರಿ. ಮಾರ್ಕೆಟ್‌ಗೆ ಹೂವು ಕಳಿಸಿಬಿಡ್ತೇವೆ. ಅಲ್ಲಿ ದಲ್ಲಾಳಿಗಳು ಮೂವತ್ತು ಮಾರು ಅಳೆಯುವವರು, ಇಪ್ಪತ್ತಕ್ಕೆ ಇಳಿಸ್ತಾರೆ. ಜಗಳ ಮಾಡದೇ ಇದ್ದರೆ ಲಾಸ್ ಆಗುತ್ತದೆ. ಆದರೂ ನಮ್ಮ ಕೆಲವು ರೈತರು ಅವರ ಬಳಿ ಔಷಧ, ಗೊಬ್ಬರಕ್ಕಾಗಿ ಸಾಲ ಮಾಡಿರ್ತಾರೆ. ಅಂಥವರನ್ನೇ ಜಗಳ ಮಾಡುವವರ ವಿರುದ್ಧ ಎತ್ತಿ ಕಟ್ತಾರೆ. ಅಂಥ ಸಮಸ್ಯೆ ನಡುವೆಯೂ ಹೋರಾಟ ಮಾಡ್ತಿದ್ದೇವೆ.

(ಪ್ರಶ್ನೋತ್ತರದಲ್ಲಿ ಪಾಲ್ಗೊಂಡಿದ್ದವರು ಕಾಂತರಾಜು, ತಿಪ್ಪೇಸ್ವಾಮಿ, ಮಹಂತೇಶ್, ಗೋವಿಂದಸ್ವಾಮಿ