ನಮ್ಮ ತೆಂಗು.. ನಮ್ಮ ಆರೋಗ್ಯ

ತೆಂಗು ಬೆಳೆಗಾರರೇ ಮತ್ತು ಬಳಕೆದಾರರೆ,ತೆಂಗಿನ ಎಣ್ಣೆಯು ಜಗತ್ತಿನ ಶ್ರೇಷ್ಠ ಎಣ್ಣೆ ಎಂಬುದು ಸಾಬೀತಾಗಿದೆ. ತಾಯಿಯ ಎದೆ ಹಾಲಿಗೆ ಸಮಾನವಾದ ಪೋಷಕಾಂಶಗಳಿವೆ. ತೆಂಗಿನೆಣ್ಣೆಯು ದೇಹದಲ್ಲಿ ರೋಗತರುವ ಬ್ಯಾಕ್ಟೀರಿಯಾ ಹಾಗು ವೈರಸ್‌ಗಳ ವಿರುದ್ದ ಕೆಲಸ ಮಾಡುತ್ತದೆ. ಇದರಿಂದ ಮಾಮೂಲು ಶೀತ, ನೆಗಡಿ, ಜ್ವರ, ಹೆಪಟೈಟಿಸ್, ಅಮೀಬಿಯಾಸಿಸ್, ಹರ್ಷಿಸ್ ಮತ್ತು ಎಚ್‌ಐವಿ ಮುಂತಾದ ರೋಗಗಳ ವಿರುದ್ದ ನಿರೋಧಕ ಶಕ್ತಿಯನ್ನು ಕೊಡುತ್ತದೆ. ಸಕ್ಕರೆ ಕಾಯಿಲೆ, ಹೃದಯ ರೋಗ, ರಕ್ತದೊತ್ತಡ, ಹೆಚ್ಚು ತೂಕ, ಬೊಜ್ಜುದೇಹ ಇವೆಲ್ಲ ರೋಗಿಗಳು ತಿನ್ನಬಹುದಾದ ಏಕೈಕ ಎಣ್ಣೆ ತೆಂಗಿನೆಣ್ಣೆ. ತೆಂಗಿನೆಣ್ಣೆಯಲ್ಲಿರುವ ಲಾರಿಕ್ ಆಸಿಡ್ ಎಂಬುದು ತಾಯಿಯ ಎದೆಹಾಲನ್ನು ಬಿಟ್ಟರೆ ಇಷ್ಟು ಪ್ರಮಾಣದಲ್ಲಿ (ಶೇ.೫೦) ಸಿಗುವುದು ತೆಂಗಿನೆಣ್ಣೆಯಲ್ಲಿ ಮಾತ್ರ. ಜಗತ್ತಿನಲ್ಲಿಯೇ ತೆಂಗಿನ ಎಣ್ಣೆಯನ್ನು ಹೇರಳವಾಗಿ ಬಳಸುವ ಶ್ರೀಲಂಕಾದಲ್ಲಿ ಹೃದಯಾಘಾತದ ಪ್ರಮಾಣ ಬಹಳ ಕಡಿಮೆ ಇದೆ.

  ಆದರೆ, ತೆಂಗಿನೆಣ್ಣೆಯಲ್ಲಿ ಕೊಲೆಸ್ಟರಾಲ್ ಇದೆ (ಸ್ಯಾಚುರೇಟೆಡ್ ಫ್ಯಾಟ್) ಎಂದು ಹೇಳಿ ತೆಂಗಿನ ಎಣ್ಣೆಯನ್ನು ಬಳಸಲು ಜನರು ಭಯಪಡುವಂತಹ ಸನ್ನಿವೇಶ ಬಂದೊದಗಿದೆ. ತೆಂಗಿನೆಣ್ಣೆ ತಿಂದರೆ ಹೃದಯಾಘಾತವಾಗುತ್ತೆ ಎಂದು ಜನರು ದಿಗಿಲು ಬೀಳುವಂತೆ ಮಾಡಿದ್ದಾರೆ. ಆದರೆ ಸತ್ಯ ಏನೆಂದರೆ “ತೆಂಗಿನೆಣ್ಣೆ ತಿನ್ನುವುದರಿಂದ ಹೃದಯ ಸಂಬಂಧಿಕಾಯಿಲೆಗಳು ದೂರವಾಗುತ್ತವೆ” ಎಂಬುದನ್ನು ವೈಜ್ಞಾನಿಕವಾಗಿ ಒಪ್ಪಿಕೊಳ್ಳಲಾಗಿದೆ. ತೆಂಗಿನ ಮೇಲೆ ಅಪವಾದಮಾಡಲು ಕಾರಣ, ಸೋಯಾಬೀನ್ ಎಣ್ಣೆಯನ್ನು ತೃತೀಯ ಜಗತ್ತಿನ ರಾಷ್ಟ್ರಗಳಲ್ಲಿ ಮಾರಾಟ ಮಾಡಲು ಪಾಶ್ಚಿಮಾತ್ಯ ರಾಷ್ಟ್ರಗಳು ಪಿತೂರಿ ನಡೆಸುತ್ತಿವೆ. ಇಲ್ಲಿನ ಎಣ್ಣೆಯನ್ನು ಬಳಸದಂತೆ ಮಾಡಿ ತಮ್ಮ ಎಣ್ಣೆಗಳನ್ನು ಮಾರಿಕೊಳ್ಳುತ್ತಿದ್ದಾರೆ.

 ತೆಂಗಿನೆಣ್ಣೆಯನ್ನು ಕಾಯಿಯ ರೂಪದಲ್ಲಿ ತುಮಕೂರು ಸೀಮೆ ಜನ ಹೇರಳವಾಗಿ ಬಳಸುತ್ತಿದ್ದೇವೆ. ಕರಾವಳಿಯ ಜನರಂತೂ ಕೊಬ್ಬರಿಎಣ್ಣೆ ಇಲ್ಲದೆ ಏನನ್ನೂ ಮಾಡುವುದಿಲ್ಲ. ಸಾವಿರಾರು ವರ್ಷಗಳಿಂದ ನಮ್ಮ ಜನ ತೆಂಗನ್ನು ತಿನ್ನುತ್ತಾ ಬದುಕಿದ್ದಾರೆ. ತೆಂಗು ನಮ್ಮ ಜನರ ಆಹಾರ ಸಂಸ್ಕೃತಿಯ ಭಾಗವಾಗಿದೆ. ಆಯುರ್ವೇದವೂ ತೆಂಗಿನೆಣ್ಣೆಯನ್ನು ಸಾಕಷ್ಟುಕಾಯಿಲೆಗಳಿಗೆ ಔಷಧಿಯಾಗಿ ಬಳಸಲು ಹೇಳುತ್ತದೆ.

 ಆದರೆ ಇದರ ಬಗ್ಗೆ ಮಾತನಾಡಬೇಕಾದ ಜವಾಬ್ದಾರಿಯಿರುವ ಬಹುಪಾಲು ವೈದ್ಯರು, ವಿಜ್ಞಾನಿಗಳು, ಇಲಾಖೆಗಳು, ಮಂಡಳಿಗಳು ಬಾಯಿ ಮುಚ್ಚಿ ಕುಳಿತಿದ್ದಾರೆ. ಇದೇ ಕಾರಣದಿಂದ ತೆಂಗಿನ ಉತ್ಪನ್ನಗಳ ಬೆಲೆಯೂ ಕುಸಿದಿದೆ. ಸ್ಥಳೀಯ ಬಳಕೆಯೂ ಕಡಿಮೆಯಾಗಿದೆ. ತೆಂಗು ಬಳಕೆದಾರರೇ ಎದ್ದೇಳಿ, ತೆಂಗಿನ ಶ್ರೇಷ್ಠತೆಯನ್ನು ಜಗತ್ತಿಗೆ ಸಾರೋಣ.

 ಸೆಪ್ಟಂಬರ್ ೨ ವಿಶ್ವ ತೆಂಗು ದಿನ. ಅಂದು ನಾವೆಲ್ಲರೂ ತೆಂಗು ಪ್ರಸಿದ್ದ ಚಿಕ್ಕನಾಯಕನಹಳ್ಳಿಯಿಂದ ತಿಪಟೂರಿನಿಂದ ಮತ್ತು ತುರುವೆಕೆರೆಯಿಂದ ತುಮಕೂರಿನವರೆಗೂ ಸೈಕಲ್ ತುಳಿಯುತ್ತ ಜಾಥಾ ಹೋಗಲು ತೀರ್ಮಾನಿಸಿದ್ದೇವೆ. ಆ ಮೂಲಕ ತೆಂಗು ಜಗತ್ತಿನ ಶ್ರೇಷ್ಠ ಎಣ್ಣೆಯೆಂದು ಎಲ್ಲರಿಗೂ ಹೇಳೋಣ. ತೆಂಗಿನ ಶ್ರೇಷ್ಠತೆಯನ್ನು ಸಾರುವ ಸೈಕಲ್ ಜಾಥಾದಲ್ಲಿ ನೀವು ಭಾಗವಹಿಸಿರಿ. ಭಾಗವಹಿಸುವ ಆಸಕ್ತರು ಹೆಚ್ಚಿನ ಮಾಹಿತಿಗೆ ಕೆಳಗಿನ ದೂರವಾಣಿಗಳಿಗೆ ಸಂಪರ್ಕಿಸಿ ನಿಮ್ಮ ಹೆಸರನ್ನು ನೊಂದಾಯಿಸಿಕೊಳ್ಳಿ. ನೆನಪಿರಲಿ, ನಿಮ್ಮ ಭಾಗವಹಿಸುವಿಕೆಯು ಜಗತ್ತಿಗೆ ಮುಖ್ಯ ಸಂದೇಶವೊಂದನ್ನು ಕೂಗಿ ಹೇಳಲಿದೆ. 

  ಅಲ್ಲದೆ ಇದೇ ದಿನ ಸಂಜೆ ನಾಲ್ಕುಗಂಟೆ ತೆಂಗು ಬೆಳೆಗಾರರೆಲ್ಲ ತುಮಕೂರಿನಲ್ಲಿ ಒಂದೆಡೆ ಸೇರಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮದ ಮೂಲಕ ತೆಂಗು ಜಗತ್ತಿನ ಶ್ರೇಷ್ಠ ಎಣ್ಣೆ ಎಂದು ಹೇಳಲು ರೈತರೆಲ್ಲಾ ಸೇರುತ್ತಿದ್ದಾರೆ. ತೆಂಗು ತಜ್ಞರು ಆರೋಗ್ಯದ ಬಗ್ಗೆ ಮಾತನಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತೆಂಗು ಬೆಳೆಗಾರರ ಏಕತೆಯನ್ನು ಪ್ರದರ್ಶಿಸೋಣ. ನೀವು ಬನ್ನಿ. 

ಜಾಥಾದ ಸಂಚಾಲಕರು: ಅಣೇಕಟ್ಟೆ ವಿಶ್ವನಾಥ್ ೮೦೯೫೨೨೨೭೨೮, ರಘುರಾಂ ಎಸ್. ೯೯೬೪೨೦೦೮೪೦ ಮತ್ತು ವಿನೋದ್ ೯೪೪೮೩೫೭೫೩೬

ಹೃದಯದ ಆರೋಗ್ಯಕ್ಕೆ ತೆಂಗು ಬಳಸಿ

 

  

‘ಬೀಜ ಗೆಳತನ’ಕ್ಕೆ ಕೈ ಚಾಚಿದ್ದಾರೆ ವಸಂತ ಮಾಲವಿ

ಮೇಘ ಪರಿಸರ ಬಳಗದಿಂದ 2000 ನೇ ಇಸವಿಯಲ್ಲಿ ಹಗರಿಬೊಮ್ಮನಹಳ್ಳಿ ರಸ್ತೆಯಲ್ಲಿ ಫ್ಲವರ್ ಗಿಡಗಳನ್ನು ಬೆಳೆಸಿರುವುದು

ಗೆಳೆಯ ವಸಂತ ಮಾಲವಿ, ಬಿಸಿಲ ನಾಡು ಬಳ್ಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯವರು. ಮೂಲತಃ ಛಾಯಾಗ್ರಾಹಕ. ಬಹಳ ವರ್ಷಗಳ ಕಾಲ ಪ್ರಜಾವಾಣಿ ಪತ್ರಿಕೆಗೆ ಅರೆಕಾಲಿಕ ವರದಿಗಾರರಾಗಿದ್ದರು. ಆ ಸಮಯದಲ್ಲಿ  ಕರ್ನಾಟಕ ದರ್ಶನ, ಕೃಷಿ ಹಾಗೂ ಸುಧಾ ಪತ್ರಿಕೆಯಲ್ಲಿ ಸಾಕಷ್ಟು ಲೇಖನಗಳನ್ನು ಬರೆಯುತ್ತಿದ್ದರು. ಕಳೆದ ಕೆಲವು ವರ್ಷಗಳಿಂದ ಪತ್ರಿಕೋದ್ಯಮದಿಂದ ದೂರ ಉಳಿದು ಪೂರ್ಣಪ್ರಮಾಣದ ಕೃಷಿಕರಾಗಿದ್ದಾರೆ. ಜೊತೆಗೆ ಪರಿಸರ ಸಂಘಟನೆಗಳ ಜೊತೆಗೂಡಿ  ‘ಪರಿಸರ ಸಂರಕ್ಷಣೆ’ಯತ್ತಲೂ ಹೆಜ್ಜೆ ಇಟ್ಟಿದ್ದಾರೆ. 1991ರಲ್ಲಿ ಮೇಘಪರಿಸರ ಬಳಗದ ಜೊತೆ ಸೇರಿ ರಸ್ತೆ ಬದಿಯಲ್ಲಿ ಸಸಿಗಳನ್ನು ನೆಟ್ಟಿದ್ದಾರೆ. ಅವೆಲ್ಲ  ಈಗ ಮರಗಳಾಗಿವೆ. ಹಗರಿಬೊಮ್ಮನಹಳ್ಳಿಯ ರಸ್ತೆಗಳಲ್ಲಿ ತಂಪು ನೀಡುತ್ತಿವೆ.

ಇಷ್ಟೆಲ್ಲ ನೆನಪಾಗಿದ್ದು, ‘ತಾರಸಿಯಲ್ಲಿ ವಿಷಮುಕ್ತ ತರಕಾರಿ – ಕೇರಳದ ಮಾದರಿ’ ಬರೆಹಕ್ಕೆ ವಸಂತ ಪ್ರತಿಕ್ರಿಯಿಸಿದಾಗ. ತಮ್ಮ ಪ್ರತಿಕ್ರಿಯೆಯಲ್ಲಿ ‘ಕೇರಳದ ಮಾದರಿ ಎಲ್ಲೆಡೆ

1999 ರಲ್ಲಿ ಮಹಾತ್ಮ ಗಾಂಧಿ ರಸ್ತೆ (ರಥ ಬೀದಿ)ಯಲ್ಲಿ ಬೆಳೆಸಿದ ಆಕಾಶ ಮಲ್ಲಿಗೆ ಗಿಡಗಳು

ಅನುಷ್ಠಾನಗೊಳ್ಳಬೇಕೆಂಬ’ ಆಶಯ ವ್ಯಕ್ತಪಡಿಸಿದ್ದಾರೆ. ಹಾಗೆ ಹೇಳಲು ಕಾರಣವೂ ಇದೆ.  ವಸಂತ್ ಇತ್ತೀಚೆಗೆ ಸಾವಯವ ಪದ್ಧತಿಯಲ್ಲಿ ತರಕಾರಿ ಬೆಳೆ, ಪರಿಸರ ಪೂರಕ ನವ ತಂತ್ರಜ್ಞಾನಗಳಲ್ಲಿ ತೋಟಗಾರಿಕಾ ಬೆಳೆ ಬೆಳೆಯುವತ್ತ ಆಸಕ್ತಿ ತೋರಿದ್ದಾರೆ.  ಅವರಿಗೆ ಸದ್ಯ ಜವಾರಿ ಬದನೆ, ಸೌತೆ, ಹಿರೇಕಾಯಿ, ಕಿರುಧಾನ್ಯಗಳ ಬೀಜಗಳು ಬೇಕಂತೆ.  ಸಾಧ್ಯವಾದರೆ ಬೀಜಗಳನ್ನು ಕಳುಹಿಸುವ ವ್ಯವಸ್ಥೆ ಮಾಡಿ.  ಬೀಜ ಮತ್ತು ರವಾನೆಯ ವೆಚ್ಚ ಎಷ್ಟೆಂದು ತಿಳಿಸಿದರೆ ಹಣ ಕಳುಹಿಸುತ್ತೇನೆ ಎನ್ನುತ್ತಿದ್ದಾರೆ. ಆಸಕ್ತರು ವಸಂತ ಮಾಲವಿಯವರನ್ನು ಸಂಪರ್ಕಿಸಬಹುದು – ‘ಬೀಜ ಗೆಳೆತನ’ ಬೆಳೆಸಬಹುದು. ದೂರವಾಣಿ ಸಂಖ್ಯೆ: 9448261916. ವಸಂತ ಮಾಲವಿ ಇಮೇಲ್ ಐಡಿ-  vasanthmalavi@gmail.com

ತಾರಸಿಯಿಂದ ನಿರ್ವಿಷ ತರಕಾರಿ : ಕೇರಳ ಮಾದರಿ

ಕೇರಳದ ಪಟ್ಟಣವೊಂದರಲ್ಲಿ ತಾರಸಿ ಮೇಲೆ ತೋಟ ಕಟ್ಟಿರುವ ದೃಶ್ಯ.

“ಹಣದ ಉಳಿತಾಯ ಮುಖ್ಯವಲ್ಲ. ಪ್ರತಿದಿನ ವಿಷದ ಸೋಂಕು ಇಲ್ಲದ ತರಕಾರಿ ಸಿಗುತ್ತದಲ್ಲಾ, ಅದಕ್ಕಾಗಿ ನನ್ನ ಬಿಡುವಿಲ್ಲದ ಕೆಲಸದ ನಡುವೆಯೂ ದಿನಕ್ಕರ್ಧ ಗಂಟೆ ಇಟ್ಟುಕೊಳ್ಳುತ್ತೇನೆ” ತಿರುವನಂತಪುರ ಸೆಕ್ರೆಟೆರಿಯೇಟ್‌ನ ಭಾಷಾತಜ್ಞರಾಗಿರುವ ಟಿ.ಕೆ.ಭಾಸ್ಕರ ಪಣಿಕ್ಕರ್ ಮಾತಿನಲ್ಲಿ ಹೆಮ್ಮೆಯಿತ್ತು.

ವಳುದಕ್ಕಾಡ್‌ನ ಎಮ್.ಪಿ.ಅಪ್ಪನ್ ರೆಸಿಡೆನ್ಸಿಯಲ್ ಕಾಲೊನಿಯಲ್ಲಿ ಮನೆ. ನಾಲ್ಕು ಸೆಂಟ್ಸ್‌ನ ಪುಟ್ಟ ನಿವೇಶನ. ತಾರಸಿಯಲ್ಲೇ ಅಲಸಂಡೆ, ಹರಿವೆ, ಬೆಂಡೆ, ಬದನೆ, ಚೀನಿಕಾಯಿ…ಪಡುವಲ ಒಂದೇ ಬಾಕಿ. ಮನೆ ಖರ್ಚಿಗೆ ಆಗಿ ಮಿಕ್ಕುಳಿದದ್ದು ನೆರೆಯವರಿಗೆ. ಪ್ರೀತಿಯಿಂದ.

” ಇದು ಮಾತ್ರ ಅಲ್ಲ ಪ್ರಯೋಜನ. ನಮ್ಮವೆಲ್ಲ ಆಗ ಜೀರೋ-ವೇಸ್ಟ್ ಮನೆಗಳು. ನಾವು ಪ್ಲಾಸ್ಟಿಕ್ ಚೀಲಗಳನ್ನು ಬಿಟ್ಟರೆ ಬೇರೆ ಯಾವುದೇ ತ್ಯಾಜ್ಯ ಹೊರ ಹಾಕುತ್ತಿಲ್ಲ ನೋಡಿ”, ಪಣಿಕ್ಕರ್ ತಿಳಿಸುತ್ತಾರೆ. ಈ ’ನಾವು’ ಯಾರು? ನಗರದ ಈ ಬ್ಯುಸಿ- ನಿವಾಸಿಗಳಿಗೆ ಎಲ್ಲಾ ಬಿಟ್ಟು ತರಕಾರಿ ಬೆಳೆಸುವ ಹುಚ್ಚು ಹತ್ತಿಸಿದ್ದು ಯಾರು? ತಾರಸಿ ಕೃಷಿಗೂ ಶೂನ್ಯತ್ಯಾಜ್ಯಕ್ಕೂ ಏನು ಸಂಬಂಧ ?

“ನಗರತ್ತಿಲ್ ಒರು ನಾಟ್ಟಿಲ್‌ಪುರಮ್” (ನಗರದಲ್ಲಿ ಒಂದು ಹಳ್ಳಿ.) ಇದು ಕೇರಳ ಸರಕಾರ ಮೂರು ವರ್ಷ ಹಿಂದೆ ರಾಜ್ಯ ರಾಜಧಾನಿಯಲ್ಲಿ ಆರಂಭಿಸಿದ ಒಂದು ದೂರದೃಷ್ಟಿಯ ಯೋಜನೆ. ಮನೆಗಳಲ್ಲಿ ಅಲ್ಲಿನ ಅಡುಗೆಮನೆ ಇತ್ಯಾದಿ ತ್ಯಾಜ್ಯ ಬಳಸಿ ಎರೆಹುಳ ಸಾಕಣೆ. ಆ ಗೊಬ್ಬರ ಬಳಸಿ ತಾರಸಿಯಲ್ಲಿ ತರಕಾರಿ ಬೆಳೆ. ಪೂರ್ತಿ ಸಾವಯವ ರೀತಿ. ಒಂದು ಮನೆಗೆ ೧೨೦೦ ರೂ. ವೆಚ್ಚ ಅಂತ ಅಂದಾಜು ಅದರಲ್ಲಧ ಸರಕಾರದಿಂದ.

ನಿಮಗೆ ಅಚ್ಚರಿಯಾಗಬಹುದು, ಈ ಚಟುವಟಿಕೆಗೆ ತೊಡಗಿದ ಮನೆಗಳ ಸಮ್ಖ್ಯೆ ಈಗ ಸಾವಿರ ಮಿಕ್ಕಿದೆ. “ಪ್ರತಿ ತಿಂಗಳು ೬೦ – ೭೦ ಹೊಸ ಮನೆಗಳು ಸೇರುತ್ತಲೇ ಇವೆ” ಎನ್ನುತ್ತಾರೆ ಯೋಜನೆಯ ಮುಖ್ಯಸ್ಥ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಥೋಮಸ್ ಮೇಮನ್.

ಪ್ಲಾಸ್ಟಿಕ್ ಚೀಲದಲ್ಲಿ ಅರಳಿರುವ ತರಕಾರಿ

ಪಣಿಕರ್ ಅದೇ ಕಾಲೊನಿ ನಿವಾಸಿ ಪಿ.ಜಿ.ಕೃಷ್ಣನ್ ಕುಟ್ಟಿ ನಾಯರ್ರದು ಆರು ಸೆಂಟ್ಸ್‌ನ ಮನೆ. ಹಿಂದೆ ವಾರಕ್ಕೆ ೬೦ – ೭೫ ರೂ. ತರಕಾರಿಗೆ ಬೇಕಿತ್ತು. ಈಗ ಕೇವಲ ೧೦ – ೨೦ರೂ. ಸಾಕಾಗುತ್ತದೆ. “ಪೇಟೆ ತರಕಾರಿ ಒಂದು ವಾರದಲ್ಲಿ ಕೊಳೆಯುತ್ತಿತ್ತು. ನಾವು ಬೆಳೆಸಿದ ತರಕಾರಿ ಹಾಗಲ್ಲ. ತಾಜಾ ಇರುತ್ತದೆ, ರುಚಿಯೂ ಹೆಚ್ಚು” ನಾಯರ್ ಖ್ಯಾತ ನ್ಯಾಯವಾದಿ. ಹೆಂಡತಿ ಕಂದಾಯ ಇಲಾಖೆಯ ಅಧಿಕಾರಿ. ಇಬ್ಬರು ಮಕ್ಕಳು. ಎಲ್ಲರೂ ದಿನಕ್ಕೊಂದೆರಡು ಗಂಟೆ ಕೃಷಿಯಲ್ಲಿ ಖುಷಿ ಕಾಣುತ್ತಾರೆ. “ಆದರೂ, ನಾನು ಈ ಕೆಲಸಕ್ಕೆ ಹೊರಡಲು ಮುಖ್ಯ ಕಾರಣ ತ್ಯಾಜ್ಯ ನಿರ್ವಹಣೆಯೇ”, ನಾಯರ್ ಸ್ಪಷ್ಟಪಡಿಸುತ್ತಾರೆ.

ಆರಂಭದ ದಿನಗಳಲ್ಲಿ ಈ ಯೋಜನೆ ರೂಪ ಪಡೆದದ್ದು ತ್ಯಾಜ್ಯ ನಿರ್ವಹಣೆಗಾಗಿಯೇ. ಉಳಿದ ನಗರಗಳಂತೆ ಇಲ್ಲೂ ಈ ಸಮಸ್ಯೆ ತೀವ್ರ. ನಗರದ ಎಲ್ಲ ತ್ಯಾಜ್ಯವನ್ನೀಗ ವಳಪ್ಪಿಲ್‌ ಶಾಲ ಎಂಬಲ್ಲಿಗೆ ಸಾಗಿಸುತ್ತಿದ್ದಾರೆ. ಅಲ್ಲಿನ ಖಾಸಗಿ ಕಂಪೆನಿ ಈ ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸುತ್ತದೆ. ಆದರೆ ತ್ಯಾಜ್ಯ ಒಟ್ಟು ಹಾಕಿದ್ದರಿಂದ ಸುತ್ತಲಿನ ಜನರ ಬದುಕು ಅಸಹನೀಯವಾಗಿದೆ. ಜಲಮೂಲಗಳು ಕಾಯಿಲೆ ಹುಟ್ಟಿಸುತ್ತಿವೆ. ಜನ ಪ್ರತಿಭಟಿಸ ತೊಡಗಿದ್ದಾರೆ. ಯೋಜನೆಗೆ ಅಂತಿಮ ರೂಪ ಕೊಡುವ ಹೊತ್ತಿಗೆ ಮನೆಮಟ್ಟದಲ್ಲಿ ಈ ಎರೆಗೊಬ್ಬರ ಬಳಸಿ ತಾರಸಿ ಕೃಷಿ ಪರಿಚಯಿಸಿದರೆ ಹೇಗೆ ಎಂಬ ಚಿಂತನೆ. ಹಾಗೆ ‘ನಗರದಲ್ಲಿ ಹಳ್ಳಿ’ ಹುಟ್ಟು ಹಾಕುವ ಪರಿಕಲ್ಪನೆ ಮೂಡಿತು.

ಕಾಲೊನಿಗಳಲ್ಲಿ ಜನರನ್ನು ಒಗ್ಗೂಡಿಸಿ ಅರಿವು ಮೂಡಿಸುವುದು ಇಲಾಖೆ ಮಾಡುವ ಮೊದಲ ಕೆಲಸ. ಈವರೆಗೆ ಇಂತಹ ೮೫ ತರಬೇತಿಗಳು ನಡೆದಿವೆ. ಎರೆಗೊಬ್ಬರ ನಿರ್ಮಾಣಕ್ಕೆ ವೃತ್ತಾಕಾರದ ಸಿಮೆಂಟ್ ರಿಂಗ್‌ಗೆ. ಅದರ ಹೊರಭಾಗದಲ್ಲಿ ಇರುವೆ ತಡೆಯಲು ನೀರಿನ ಕಾಲುವೆ ಇರುವ ರಿಂಗ್‌ಗೆ ಎರೆಹುಳ, ಗಿಡ,ಬೀಜ, ಸ್ಪ್ರೇಯರ್, ಕೃಷಿ ಉಪಕರಣ – ಹೀಗೆ ಬೇಕಾದ ಒಳಸುರಿಗಳ ವಿತರಣೆ. ಎರೆಗೊಬ್ಬರ, ಎರೆಜಲ ಉತ್ಪಾದನೆ, ಇದನ್ನು ಬಳಸಿ ತಾರಸಿ ಕೃಷಿ, ಸಸ್ಯಜನ್ಯ ಕೀಟನಾಶಕ ತಯಾರಿಗಳ ಬಗ್ಗೆ ತಿಳಿವಳಿಕೆ. ರಸಗೊಬ್ಬರ, ರಸವಿಷ ಬಳಕೆ ಇಲ್ಲ.

“ಮೊದಲ ವರ್ಷದಲ್ಲೇ ಈ ಕೆಲಸ ಆರಂಭಿಸಿದ ಕೆಲವು ಮನೆಗಳು ದಿನಕ್ಕೊಂದು ಕೆಜಿ ತರಕಾರಿ ಉತ್ಪಾದಿಸುತ್ತಿದ್ದಾರೆ ಮೇಮ್ಮನ್ ತಿಳಿಸುತ್ತಾರೆ. ಈ ಯೋಜನೆ ಇಷ್ಟೊಂದು ಜನಪ್ರಿಯ ಆಗಲು ಏನು ಕಾರಣ. ” ಸರಕಾರಿ ಯೋಜನೆಗಳು ಸೋಲಲು ಇರುವ ಕಾರಣಗಳನ್ನು ವಿಶ್ಲೇಷಿಸಿ ಇಲ್ಲಿ ಅವುಗಳ ನಿವಾರಣೆ ಮಾಡಿದ್ದೇವೆ. ಸಬ್ಸಿಡಿ ನೀಡಿಕೆ, ಸಲಹೆ, ಯಾವ ಕೆಲಸಕ್ಕೂ ಇವರು ಇಲಾಖಾ ಕಚೇರಿಗೆ ಬಾರಂತೆ ಮಾಡಿದ್ದೇವೆ.” ಸಮಸ್ಯೆ ಎದುರಾದಾಗ ದೂರವಾಣಿ ಮೂಲಕ ಸಲಹೆ. ಮನೆಬಾಗಿಲಿಗೇ ಸವಲತ್ತುಗಳು.

ಹಲವರಿಗೆ ತಾರಸಿಯಲ್ಲಿ ಗಿಡ ಬೆಳೆಸಿದರೆ ಅಲ್ಲಿ ಕ್ರಮೇಣ ನೀರು ಸೋರುತ್ತದೆ ಎಂಬ ಭಯ ಇರುತ್ತದೆ. ಪ್ಲಾಸ್ಟಿಕ್ ಚೀಲಗಳನ್ನು ತಾರಸಿ ನೆಲದ ಮೇಲೆ ನೇರವಾಗಿ ಇಡುವ ಬದಲು ನಾಲ್ಕು ಇಟ್ಟಿಗೆ ತುಂಡು ಇರಿಸಿ ಅದರ ಮೇಲೆ ಚೀಲ ಇಡುವಂತೆ ಇವರು ಹೇಳುತ್ತಾರೆ.ಮಣ್ಣು ತಂದು ಚೀಲದಲ್ಲಿ ತುಂಬುವುದು ನಗರವಾಸಿಗಳಿಗೆ ದೊಡ್ಡ ತಲೆನೋವು. ಅದಕ್ಕಾಗಿ ಥಾಮಸ್ ಹೊಸ ಉಪಾಯ ಹೂಡಿದ್ದಾರೆ.

ನಿರುದ್ಯೋಗಿಗಳ ಕಾರ್ಯಪಡೆ. ಕೆಲಸವಹಿಸಿದರೆ ಇವರೇ ಬಂದು ಚೀಲಗಳಲ್ಲಿ ಮಣ್ಣು , ಗೊಬ್ಬರ ತುಂಬಿ ಬೀಜ ಹಾಕಿ ಹೋಗುತ್ತಾರೆ. ಚೀಲಕ್ಕೆ ೨೦ ರೂಪಾಯಿ ಕೊಟ್ಟರಾಯಿತು. ಮೂರರಿಂದ ಆರು ಮಂದಿ ಇರುವ ಈ ತಂದು ಕೆಲವು ತಿಂಗಳಲ್ಲಿ ೧೮೦೦೦ ರೂ. ವರೆಗೂ ಸಂಪಾದಿಸಿದೆಯಂತೆ.

ಎಂ.ಪಿ. ಅಪ್ಪನ್ ಕಾಲೊನಿಯಲ್ಲಿನ ೧೨೫ ಮನೆಗಳಲ್ಲಿ ೨೫ರಲ್ಲೂ ಈ “ಹುಚ್ಚು” ಹಬ್ಬಿದೆ. ಯೋಜನೆಯನ್ನು ದೊಡ್ಡ ರೀತಿಯಲ್ಲಿ ಅನುಸರಿಸುವ ಇನ್ನಿತರ ಕೆಲವು ಕಾಲೊನಿಗಳೆಂದರೆ ಉದಾರ ಶಿರೋಮಣಿ ರಸ್ತೆಯ ಗೃಹ ಕಾಲೊನಿ, ನಾಲಾಮಿಂಜರದ ಐಶ್ವರ್ಯ ನಗರ, ಅಂಬಲಮೇಡುವಿನ ಶ್ರೀನಿವಾಸ ರೆಸಿಡೆಂಟ್ಸ್ ಅಸೋಸಿಯೇಶನ್ ಇತ್ಯಾದಿ.

“ಮೊದಮೊದಲು ನಾವೇ ಹಲವು ಬಾರಿ ಓಡಾಡಿ ಜನ ಸೇರಿಸಬೇಕಿತ್ತು. ಈಗ ಹೊಸಬರೇ ನಮ್ಮನ್ನು ಸಂಪರ್ಕಿಸಿ ಸಭೆಗೆ ಆಹ್ವಾನಿಸುತ್ತಿದ್ದಾರೆ”, ಮೇಮ್ಮನ್ ಬೊಟ್ಟು ಮಾಡುತ್ತಾರೆ. ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ರಾಜ್ಯದ ಐದು ನಗರಪಾಲಿಕೆಗಳಿಗೆ ಈ ಯೋಜನೆಯನ್ನು ವಿಸ್ತರಿಸುವ ಕೆಲಸ ಸರಕಾರದ ತೀವ್ರ ಪರಿಶೀಲನೆಯಲ್ಲಿಯೆಂತೆ.

ವಿಶ್ಲೇಷಿಸಿ ನೋಡಿದರೆ, ಕೇರಳದಲ್ಲಿ ಈ ಯೋಜನೆ ಯಶಸ್ವಿಯಾಗಲು ಎರಡು ಕಾರಣಗಳು ಹೊಳೆಯುತ್ತವೆ. ಒಂದು : ಇಲ್ಲಿನ ನಗರದಲ್ಲಿ ದೊಡ್ಡ ಉದ್ಯಮಿ, ಅಧಿಕಾರಿ, ಮಂತ್ರಿ ಆದವನೂ ಕೂಡಾ ಎಲ್ಲೋ ಹಳ್ಳಿಮೂಲೆಯಲ್ಲಿ ಹುಟ್ಟಿ ಬಂದಿರುತ್ತಾನೆ; ಅಥವಾ ಹಳ್ಳಿಗಳ ಪರಿಚಯವಿರುತ್ತದೆ. ರಾಜ್ಯದಲ್ಲಿ ಪಯಣಿಸುತ್ತಿದ್ದರೆ ಒಂದು ಬರೇ ಹಳ್ಳಿ, ಪಟ್ಟಣ, ನಗರ, ಚಿಕ್ಕ ಪೇಟೆ – ಹೀಗೆ ವೈವಿಧ್ಯ ಎದುರಾಗುತ್ತಿರುತ್ತದೆ. ಕೇರಳದಲ್ಲಿ ನಗರ ಮತ್ತು ಹಳ್ಳಿಗಳ ನಡುವಣ ಭಿತ್ತಿ ಬಹಳ ತೆಳ್ಳಗೆ. ಹೀಗಾಗಿ ಮನದ ಮೂಲೆಯಲ್ಲೆಲ್ಲೋ ಕೃಷಿಪ್ರೀತಿ ಸುಪ್ತವಾಗಿರುತ್ತದೆ. ಕಾಸರಗೋಡಿನ ಎಂಡೋಸಲ್ಫಾನ್ ದುರಂತವನ್ನಂತೂ ರಾಜ್ಯದ ಮೂಲೆಮೂಲೆಯ ಜನರೂ ಮರೆಯುವಂಥದ್ದಲ್ಲ. ಎರಡನೆಯ ಕಾರಣ – ಇಲ್ಲಿನ ಜನರಲ್ಲಿರುವ ಅರಿವಿನ ಮಟ್ಟ. ಆಹಾರ ಪದಾರ್ಥಗಳಲ್ಲಿ ವಿಷದ ತೀವ್ರ ಬಳಕೆ, ಅದರಿದಾಗಬಹುದಾದ ಅಪಾಯ, ತ್ಯಾಜ್ಯ ಕೇಂದ್ರೀಕರಣದ ಅನಾಹುತ – ಇವೆಲ್ಲವುಗಳ ಬಗ್ಗೆ ಇಲ್ಲಿನ ಚುರುಕಿನ ಮಾಧ್ಯಮಗಳಿಂದ ಇವರು ವಿಷಯದ ಆಳ ಅರಿತಿರುತ್ತಾರೆ. ಸಾವಯವ ನೀತಿ ಸಿದ್ಧಗೊಳಿಸಿರುವ ಕರ್ನಾಟಕ ಸರಕಾರ ಕೇರಳಕ್ಕಿಂತ ಮುಂದೆ ಇದೆ. ನಮ್ಮಲ್ಲಿ, ಬೆಂಗಳೂರಿನ ಸಂಜಯ ನಗರದ ಅನುಸೂಯ ಶರ್ಮಾ, ಹಾಸನದ ವಿಜಯ್ ಅಂಗಡಿ ತಾರಸಿ ಕೃಷಿ ಮಾಡುತ್ತಾ ಇತರರಿಗೂ ತಿಳಿವಳಿಕೆ ಹಂಚುತ್ತಿದ್ದಾರೆ. ನಗರಗಳಲ್ಲಿ ತ್ಯಾಜ್ಯ ನಿರ್ವಹಣೆಗೆ ತಳಕು ಹಾಕಿ ಕೇರಳ ಮಾದರಿಯಲ್ಲೇಕೆ ರಾಜ್ಯ ಸರಕಾರ ಇಂತಹ ಕಾರ್ಯಕ್ರಮ ಕೈಗೆತ್ತಿಕೊಳ್ಳಬಾರದು?

ಲೇಖನ ಶ್ರೀ ಪಡ್ರೆ ಅಂಚೆ: ವಾಣಿನಗರ,

ದಾರಿ: ಪೆರ್ಲ, ಕೇರಳ – ೬೭೧ ೫೫೨ ಮಿಂಚಂಚೆ :

———————————–

ಥ್ಯಾಂಕ್ಸ್  ಎ ಟನ್ !

ವಿಶ್ವ ಕೈತೋಟ ದಿನದಂದು ಬ್ಲಾಗ್ ನಲ್ಲಿ ಪ್ರಕಟಿಸಿದ ‘ತಾರಸಿ ಮೇಲೆ ತೋಟ’ ಬರಹಕ್ಕೆ ಜಲಪತ್ರಕರ್ತ ‘ಶ್ರೀ’ ಪಡ್ರೆಯವರು ಈ ಲೇಖನದ ಮೂಲಕ ಪ್ರತಿಕ್ರಿಯಿಸಿದ್ದಾರೆ. ಮೂರ್ನಾಲ್ಕು ವರ್ಷಗಳ ಹಿಂದೆ ಈ ಲೇಖನವನ್ನು ಅವರು ‘ವಿಜಯ ಕರ್ನಾಟಕ’ ಪತ್ರಿಕೆಗಾಗಿ ಬರೆದಿದ್ದರು. ಆಗ ನಾನು ಕೃಷಿ ವಿಜಯ ಪುರವಣಿ ವಿಭಾಗದ ಮುಖ್ಯಸ್ಥನಾಗಿದ್ದೆ. ‘ಬೆಂಗಳೂರು ಕೃಷಿ ವಿಜಯ’ ಪುರವಣಿಯಲ್ಲಿ ಈ ಲೇಖನ ಪ್ರಕಟವಾಗಿತ್ತು.  ಹಾರೈಸಿದ ‘ಶ್ರೀ’ ಪಡ್ರೆಯವರಿಗೆ ಕೃತಜ್ಞತೆಗಳು.

-ಗಾಣಧಾಳು ಶ್ರೀಕಂಠ

ತಾರಸಿ ಅಂಗಳದಲ್ಲಿ ಸುಂದರ ಕೈತೋಟ

ನಿನ್ನೆಯಷ್ಟೇ ವಿಶ್ವ ಕೈತೋಟ ದಿನ ಆಚರಿಸಿದ್ದೇವೆ. ಕೈತೋಟಕ್ಕೆ ವಿಶಾಲವಾದ ಭೂಮಿಯೇ ಇರಬೇಕೆಂದಿಲ್ಲ. ಬೆಂಗಳೂರಿನಂಥ ನಗರದಲ್ಲಿ ಮನೆ ತಾರಸಿಯ ಮೇಲೂ ಸಸಿಗಳನ್ನು ನೆಟ್ಟು ತರಕಾರಿ ಬೆಳೆದು ಬಳಸಲು ಸಾಧ್ಯ. ಅದು ಹೇಗೆ ಎಂದಿರಾ? ‘ತಾರಸಿ ತೋಟ’ದ ಕಿರು ಮಾಹಿತಿ ಇಲ್ಲಿದೆ.

ಹಸಿರು ಕಳೆದುಕೊಂಡು ಬೋಳಾಗುತ್ತಿರುವ ಬೆಂಗಳೂರಿನ ಮುಂಜಾವು ದಿನದಿಂದ ದಿನಕ್ಕೆ ಬೋರು ಬೇಜಾರು. ರಸ್ತೆ ವಿಸ್ತರಣೆ- ಮೆಟ್ರೋ ನೆಪದಲ್ಲಿ ಬೀದಿಬದಿಯ ಮರಗಳು ನೆಲಕಚ್ಚುತ್ತಿವೆ. ಹಸಿರು ಪರಿಸರ ಎನ್ನುವುದು ಲಾಲ್‌ಬಾಗ್- ಕಬ್ಬನ್‌ಪಾರ್ಕ್‌ಗೇ ಸೀಮಿತವಾಗಿದೆ. ಬಾಡಿಗೆ ಮನೆಯಲ್ಲಿರುವ ನಾವು ಇದನ್ನೆಲ್ಲಾ ನೋಡುತ್ತಾ ಹಪಹಪಿಸುವುದು ಬಿಟ್ಟು ಇನ್ನೇನು ಮಾಡೋದು ಸ್ವಾಮಿ ಎಂದಿರಾ… ಯಾಕ್ರೀ ಅಷ್ಟು ಬೇಜಾರು. ನಿಮ್ಮ ಮನೇಲೇ ಒಂದು ಲಾಲ್‌ಬಾಗ್ ಮಾಡ್ರೀ. ಹೇಗೆ ಅಂತ ಹೇಳ್ಕೊಡದಕೆ ವಿಶ್ವನಾಥ್, ಅನಸೂಯ ಅವರಂಥ ಸಹೃದಯರಿದ್ದಾರೆ. ನಿಮ್ಮ ಸಮಯ ನಮಗೆ ಕೊಡಿ. ನಿಮ್ಮ ಮನೆಗೆ- ಬೆಂಗಳೂರಿಗೆ ಹಸಿರು ತುಂಬುವ ಮಾಹಿತಿ ನಾವು ಕೊಡುತ್ತೇವೆ ಎನ್ನುತ್ತಾರೆ.

ತಾರಸಿ ತೋಟ

ಪಾಟ್‌ಗಳಲ್ಲಿ ಗಿಡ ನೆಡುವುದು ಹಳೇ ಸ್ಟೈಲ್. ಅದರ ಜತೆಗೆ ಸವೆದು ವೇಸ್ಟ್ ಆದ ಟೈರ್, ಥರ್ಮೊಕೋಲ್ ಪೆಟ್ಟಿಗೆ, ಸಿಮೆಂಟ್ ಚೀಲ, ಒಡೆದ ಬಕೆಟ್ ಇತ್ಯಾದಿಗಳಲ್ಲಿ ಗಿಡ ನೆಡುವುದು ಇಂದಿನ ವಿದ್ಯಮಾನ. ಇದಿಷ್ಟೇ ಅಲ್ಲ; ಗಿಡಗಳ ಬೇರುಗಳಿಗೆ ರಕ್ಷಣೆ ನೀಡುವ, ಪೋಷಕಾಂಶ ಪೂರೈಕೆಗೆ ಸಹಾಯವಾಗುವ ಯಾವುದೇ ಪರಿಕರಗಳಲ್ಲೂ ಗಿಡ ನೆಟ್ಟು ನೀವೂ ಅನ್ನದಾತರಾಗಬಹುದು. ಆದರೆ ಗಿಡ ಬೆಳೆಸುವ ಪರಿಕರದ ತಳಭಾಗದಲ್ಲಿ ರಂಧ್ರ ಮಾಡುವುದನ್ನು ಮಾತ್ರ ಮರೆಯದಿರಿ.

ತಾರಸಿ ತೋಟ ಮಾಡುವವರು ‘ವಾಟರ್ ಪ್ರೂಫ್’ ಸಿಮೆಂಟ್ ಮಾಡಿಸಿರಲೇ ಬೇಕು. ಇಲ್ಲದಿದ್ದರೆ ಗಿಡಗಳಿಗೆ ಹನಿಸಿದ ನೀರು ಮನೆಯೊಳಗೆ ಇಳಿದು ನೀವು ಡಾಕ್ಟರ್ ಫಿಕ್ಸಿಟ್ ಜಾಹೀರಾತಿಗೆ ಮಾಡೆಲ್‌ಗಳಾಗುತ್ತೀರಿ ಎಚ್ಚರಿಕೆ! ತಾರಸಿಯಲ್ಲಿ ನೀರಿನ ಟ್ಯಾಂಕ್ ಇದ್ದರೆ ಅದರ ನೆರಳಿನಲ್ಲಿ ಗಿಡಗಳಿಗೆ ಬೇಕಾದ ಪುಟ್ಟ ಗೊಬ್ಬರ ಘಟಕ ಸ್ಥಾಪಿಸಬಹುದು. ಗಿಡಗಳ ಎಲೆ, ಅಡುಗೆ ಮನೆ ತ್ಯಾಜ್ಯ, ಕೊಳೆಯುವ ಯಾವುದೇ ವಸ್ತುವನ್ನು ಇದರಲ್ಲಿ ತುಂಬಿಸಿಟ್ಟರೆ 45 ದಿನಗಳಲ್ಲಿ ತೋಟಕ್ಕೆ ಬೇಕಾದ ಗೊಬ್ಬರ ಸಿದ್ಧ. ಇದೇ ಗೊಬ್ಬರಕ್ಕೆ ಎರೆಹುಳು ಬಿಟ್ಟರೆ ಉತ್ಕೃಷ್ಟ ಕಾಂಪೋಸ್ಟ್ ತಯಾರಿ. ತಾರಸಿಯಲ್ಲಿ ಬಿದ್ದ ಮಳೆ ನೀರು ಒಂದೆಡೆ ಶೇಖರವಾಗಲು ತೊಟ್ಟಿ ನಿರ್ಮಿಸಿ.

ಮಳೆ ನೀರಿನಿಂದ ಕನಿಷ್ಠ ಐದಾರು ತಿಂಗಳು ಗಿಡಗಳನ್ನು ಪೋಷಿಸಬಹುದು. ತಾರಸಿ ಸುತ್ತಲಿನ ಪ್ಯಾರಾಪೆಟ್ ಗೋಡೆಗೆ ಕಬ್ಬಿಣದ ಪಟ್ಟಿ ಹೊಡೆಯಿರಿ. ಎದುರಿನ ಗೋಡೆಗಳಿಗೆ ‘ಟಿ’ ಆಕಾರದ ಕಬ್ಬಿಣ ಜೋಡಿಸಿ. ಅವುಗಳಿಗೆ ನಾಲ್ಕೈದು ಸಾಲು ತಂತಿ ಕಟ್ಟಿ. ಬಳ್ಳಿ ಗಿಡಗಳನ್ನು ಕುಂಡದಲ್ಲಿ ಬೆಳೆಸಿ, ತಂತಿಗಳ ಆಧಾರ ಕೊಡಿ. ಬಳ್ಳಿಗಳು ಸೊಂಪಾಗಿ ಹರಡಿ ಬೇರೆ ಗಿಡಗಳಿಗೆ ಚಪ್ಪರವಾಗಿ ನೆರಳು ನೀಡುತ್ತವೆ. ನೆರಳಲ್ಲೇ ಅರಳುವ ಗಿಡಗಳನ್ನು ಇಲ್ಲಿ ಬೆಳೆಸಬಹುದು. ನರ್ಸರಿ ಮಾಡಬಹುದು. ಗಿಡಗಳೇ ಇಲ್ಲದ ಕಾಲದಲ್ಲಿ ಬಟ್ಟೆ ಒಣಗಿಸಲು ಈ ತಂತಿ ಅನುಕೂಲವಾಗುತ್ತದೆ!

‘ತಾರಸಿ ಸುತ್ತ ಕಡಪ ಕಲ್ಲಿನಿಂದಲೋ, ಸಿಮೆಂಟ್ ಸ್ಲಾಬ್‌ಗಳಿಂದಲೂ ಒಂದು ಕುಂಡವಿಡುವಷ್ಟು ವಿಸ್ತೀರ್ಣದ ಕಟ್ಟೆಗಳನ್ನು ನಿರ್ಮಿಸಿ. ಇದರಿಂದ ಗಿಡ ನಿರ್ವಹಣೆಗೆ ಸುಲಭವಾಗುತ್ತದೆ’ ಎನ್ನುವುದು ತಾರಸಿ ಕೃಷಿ ಪರಿಣತೆ ಅನಸೂಯಾ ಶರ್ಮಾ ಅವರ ಅಭಿಪ್ರಾಯ. ಇವರು ಸುಮಾರು 400ಕ್ಕೂ ಹೆಚ್ಚು ಕುಂಡಗಳನ್ನಿಟ್ಟು ಗಿಡಗಳನ್ನು ಬೆಳೆಸಿದ್ದಾರೆ. ಗಿಡ ಬೆಳೆಸುವ ಬಗೆ ಒಂದು ಭಾಗ ಮಣ್ಣು, ಒಂದು ಭಾಗ ಮರಳು, ಒಂದೂವರೆ ಭಾಗ ಗೊಬ್ಬರದ ಮಿಶ್ರಣವನ್ನು ಕುಂಡ ಅಥವಾ ನಿಗದಿತ ಪರಿಕರದಲ್ಲಿ ತುಂಬಿ. ಕುಂಡದ ಕೆಳಭಾಗದಲ್ಲಿನ ಡ್ರೈನೇಜ್ ರಂಧ್ರವನ್ನು ದಪ್ಪಮರಳು ಮತ್ತು ಇಟ್ಟಿಗೆಗಳಿಂದ ಪ್ಯಾಕ್ ಮಾಡಿ. ಗಿಡ ನೆಡುವಾಗ ಕುಂಡದಲ್ಲಿ ಒಂದೂವರೆಯಿಂದ ಎರಡು ಇಂಚು ಬಿಟ್ಟು ಮಣ್ಣು ತುಂಬಿ. ಹೀಗಿದ್ದಾಗ ಕ್ಷಣಕಾಲ ನೀರು ನಿಂತು ನಿಧಾನವಾಗಿ ಆಳಕ್ಕೆ ಇಳಿಯಲು ಸಹಕಾರಿಯಾಗುತ್ತದೆ.

ಯಾವ ಸಸ್ಯ ಬೆಳೆಯಬಹುದು?

ಥರ್ಮೋಕೋಲ್ ನಲ್ಲಿ ಸೊಪ್ಪು ತರಕಾರಿ

ಕೇರಳದ ಒಂದು ಪಟ್ಟಣವೊಂದರ ತಾರಸಿ ಮೇಲೆ ಪಪ್ಪಾಯ, ಬಾಳೆ, ದಾಳಿಂಬೆಯಂತಹ ಮರಗಳನ್ನೇ ಬೆಳೆದಿದ್ದಾರೆ. ಕೈತೋಟ ಮಾಡುವ ಮನಸ್ಸಿದ್ದರೆ ಎಂಥ ಗಿಡ ಬೇಕಾದರೂ ಬೆಳೆಸಬಹುದು. ಆದರೆ, ಬೆಳೆಯುವ ಗಿಡದ ಗಾತ್ರವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಶರ್ಮಾ ಅವರ ಅನುಭವದಂತೆ ‘ಪುದೀನಾದಂತಹ ಹರಡಿಕೊಳ್ಳುವ ಗಿಡಗಳನ್ನು ಹಳೇ ಟೈರುಗಳಲ್ಲಿ ಬೆಳೆಸಬಹುದು. ಬುಟ್ಟಿಗಳಲ್ಲಿ ಮೆಂತ್ಯೆ, ಅಗಲವಾದ ಥರ್ಮೋಕೋಲ್‌ನಲ್ಲಿ ಕೊತ್ತಂಬರಿ, ಹರಿವೆಯಂತ ಸೊಪ್ಪುಗಳನ್ನು ಬೆಳೆಸಬಹುದು. ಗೆಡ್ಡೆ ಗೆಣಸುಗಳಿಗೆ ಸ್ವಲ್ಪ ಆಳವಾದ ಕುಂಡಗಳ ಅಗತ್ಯವಿದೆ. ತಾರಸಿ ಕೃಷಿ ಹೆಚ್ಚಿನ ಮಾಹಿತಿಗೆ: ಅನಸೂಯಾ ಶರ್ಮಾ ಅವರನ್ನು (2341 5664) ಸಂಪರ್ಕಿಸಬಹುದು.

ವಿಶ್ವ ಕೈತೋಟ ದಿನಕ್ಕೊಂದು ಹಿನ್ನಲೆ

ಅಮೆರಿಕದ ‘ಕಿಚನ್ ಗಾರ್ಡನ್ ಇಂಟರ್ ನ್ಯಾಷನಲ್’ (ಕೆಜಿಐ) ಎಂಬ ಸ್ವಯಂ ಸೇವಾ ಸಂಸ್ಥೆ ವಿಶ್ವ ಕೈತೋಟ ದಿನಾಚರಣೆಯನ್ನು ಆರಂಭಿಸಿತು.  ರಾಸಾಯನಿಕ ಮುಕ್ತ ಆಹಾರ ಕುರಿತು ಅರಿವು ಮೂಡಿಸಲು ಕನಿಷ್ಠ ಒಂದು ದಿನವನ್ನಾದರೂ ಮೀಸಲಿಡಲು ಈ ಸಂಸ್ಥೆ ನಿರ್ಧರಿಸಿತು. ಅದಕ್ಕಾಗಿ ಆಗಸ್ಟ್ ತಿಂಗಳಿನ ಕೊನೆ ವಾರ ಆಯ್ಕೆ ಮಾಡಿತು. ಈ ಆಚರಣೆಯಲ್ಲಿ ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿರುವ ಕೈತೋಟ ಆಸಕ್ತರು ಒಂದೆಡೆ ಸೇರಿ, ಸುರಕ್ಷಿತ ಆಹಾರದ ಬಗ್ಗೆ ಚರ್ಚಿಸುತ್ತ ಬಂದಿದ್ದಾರೆ.
ಕೆಜಿಐಗೆ 45ಕ್ಕೂ ಹೆಚ್ಚು ದೇಶಗಳಲ್ಲಿ ಸದಸ್ಯರಿದ್ದಾರೆ. ‘ಮನೆ ಸನಿಹದಲ್ಲಿ ನಮ್ಮ ನಿಗಾದಲ್ಲಿ ಬೆಳೆದ ಆಹಾರಕ್ಕಿಂತ ಸುರಕ್ಷಿತವಾದದ್ದು ಯಾವುದೂ ಇಲ್ಲ.  ಹಾಗಾಗಿ ನಮ್ಮ ಆರೋಗ್ಯದ ಗುಟ್ಟು ನಮ್ಮಲ್ಲೇ ಇದೆ ಎಂಬುದನ್ನು ಜನರಲ್ಲಿ ಮನದಟ್ಟು ಮಾಡಿಸುವುದೇ ವಿಶ್ವ ಕೈತೋಟ ದಿನದ ಉದ್ದೇಶ’ ಎನ್ನುತ್ತಾರೆ ಕೆಜಿಐ ಸ್ಥಾಪಕ ರೋಜರ್ ಡಾಯಿರಾನ್.

ಭತ್ತ ಉತ್ಸವಕ್ಕೆ ಬನ್ನಿ

ಚೌಳು ಮಣ್ಣಿನ ಸಮಸ್ಯೆ ನಮ್ಮ ಬೇಸಾಯ ಸಮುದಾಯಕ್ಕೆ ಕಂಟಕ. ಎಷ್ಟೋ ಎಕೆರೆ ಭೂಮಿ ಇದರಿಂದ ಬೀಳು ಬಿದ್ದಿದೆ.
ನಮ್ಮ ಪೂರ್ವಿಕರಲ್ಲಿ ಚೌಳು ಮಣ್ಣನ್ನು ಪಳಗಿಸುವ ತಾಳ್ಮೆ, ಸೂಕ್ತ ತಳಿಗಳ ಭಂಢಾರ ಹಾಗೂ ಜ್ಞಾನ ಅಪಾರವಾಗಿತ್ತು.
ಆದರೆ ಆಧುನಿಕ ಕೃಷಿ ಈ ಎಲ್ಲವನ್ನೂ ತಿರಸ್ಕರಿಸಿದ ಪರಿಣಾಮ ಇಂದು ಚೌಳು ಭೂಮಿ ವಿಸ್ತರಿಸುತ್ತಿದೆ.
ಆದರೆ ಈಗಲೂ ಕೆಲ ರೈತ ಸಮುದಾಯಗಳು ಚೌಳು ನಿರೋಧಕ ಭತ್ತ ಮತ್ತು ರಾಗಿ ತಳಿಗಳನ್ನು ಉಳಿಸಿಕೊಂಡು ನೆಮ್ಮದಿಯಿಂದ ಬೇಸಾಯ ಮಾಡುತ್ತಿದ್ದಾರೆ.
ದಿನಾಂಕ ೨೧ ಮತ್ತು ೨೨ ನೇ ಆಗಸ್ಟ್ ೨೦೧೦ ರಂದು ಚೌಳು ಭೂಮಿ ಭತ್ತದ ಬೇಸಾಯದ ಬಗ್ಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಕರ್ನಾಟಕದಲ್ಲಿ ಇದು ಮೊದಲ ಪ್ರಯತ್ನ ಎಂಬುದು ನಮ್ಮ ಅಭಿಪ್ರಾಯ.
ಆಹ್ವಾನ ಪತ್ರಿಕೆ ಇದರ ಜೊತೆಗಿದೆ.

ದಯಮಾಡಿ ಬನ್ನಿ

ನಿಮ್ಮ ವಿಶ್ವಾಸಿಗಳು

ಧಾನ್ಯ ಸಂಸ್ಥೆ, ತುಮಕೂರು
ಸಹಜ ಸಮೃದ್ಧ, ಬೆಂಗಳೂರು
ಸಮಾಜ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ, ಬಡವನಹಳ್ಳಿ

ಪತ್ರೆ-ಪುಷ್ಪದಲ್ಲಿ ಆರೋಗ್ಯದ ಗುಟ್ಟು

ಕದಂಬ ವನವಾಸಿನಿ ವರಮಹಾಲಕ್ಷ್ಮಿ ಪೂಜೆಗೆ ಹಲವು ಪುಷ್ಪ-ಪತ್ರೆಗಳನ್ನು ಬಳಸುವ ಸಂಪ್ರದಾಯವಿದೆ. ಆದರೆ ಅವುಗಳ ಬಳಕೆಯ ಹಿಂದಿರುವ ಮಹತ್ವ, ವಿಶೇಷ, ಪ್ರಯೋಜನ ಏನು? ಇಲ್ಲಿದೆ ಮಾಹಿತಿ

ಗಿಡದಿ ನಗುತಿರುವ ಹೂವು ಪ್ರಕೃತಿ ಸಖನಿಗೆ ಚಂದ
ಮಡದಿ ಮುಡಿದಿರುವ ಹೂವು ಯುವಕಂಗೆ ಚಂದ
ಗುಡಿಯೊಳಗೆ ಕೊಡುವ ಹೂವು ದೈವಭಕ್ತಗೆ ಚಂದ
ಬಿಡಿಗಾಸು ಹೂವೊಳಗೆ – ಮಂಕುತಿಮ್ಮ

ಕಮಲದ ಹೂವು

ನಾಳೆ ವರಮಹಾಲಕ್ಷ್ಮಿ ವ್ರತ. ಗಾಂಧಿಬಜಾರು, ಮಲ್ಲೇಶ್ವರಂ ಮಾರ್ಕೆಟ್, ಜಯನಗರ ಕಾಂಪ್ಲೆಕ್ಸ್, ಬನಶಂಕರಿ ಸಂತೆಯಲ್ಲೆಲ್ಲಾ ಜನವೋ ಜನ. ಎಲ್ಲರ ಕೈಯಲ್ಲೂ ಒಂದೊಂದು ಬುಟ್ಟಿ. ಬುಟ್ಟಿ ತುಂಬಾ ತರಹೇವಾರಿ ಹೂವುಗಳು.. ಪತ್ರೆಗಳು.. ಪುಷ್ಪ ಮಾಲಿಕೆಗಳು.. ಹಣ್ಣು.. ಹಂಪಲು.. ಊದು ಬತ್ತಿ, ಕರ್ಪೂರ.. ಇತ್ಯಾದಿ.. ಇತ್ಯಾದಿ..
ನಿಜ, ವರಮಹಾಲಕ್ಷ್ಮಿ ಕೇವಲ ಹಬ್ಬ ಅಷ್ಟೇ ಅಲ್ಲ. ಅದೊಂದು ವ್ರತ. ‘ಕಮಲದ ದೇವತೆ’ ಲಕ್ಷ್ಮಿದೇವಿಯನ್ನು ಅಷ್ಟ ಪುಷ್ಪಗಳಿಂದ ಅಲಂಕರಿಸಿ, ಆರು ಪತ್ರೆಗಳಿಂದ ಪೂಜಿಸಿ, ಆರಾಧಿಸುತ್ತಾರೆ. ‘ಅರ್ಚಕ ಸಂಹಿತೆ’ ಪ್ರಕಾರ ಈ ವ್ರತವನ್ನು ಸುಗಂಧ ಹಾಗೂ ಕುಸುಮವಿರುವ ಪತ್ರ-ಪುಷ್ಪಗಳಿಂದಲೇ ಪೂಜಿಸಬೇಕು!

‘ಹೌದು, ಈ ದೇವರುಗಳೆಲ್ಲ ಎಕೆ, ಇಂಥದ್ದೇ ಪುಷ್ಪ, ಪತ್ರೆ ಪೂಜೆ ಮಾಡು ಅಂತ ಕೇಳುತ್ತವೆ?’. ಇದು ವರಮಹಾಲಕ್ಷ್ಮಿ ಮುಂದೆ ಪೂಜೆಗೆ ಕುಳಿತ ‘ಯುವ ಪೀಳಿಗೆಯ’ ಪ್ರಶ್ನೆ. ಅಷ್ಟು ಮಾತ್ರವಲ್ಲ, ಅನೇಕ ವಿಚಾರವಾದಿಗಳ ಪ್ರಶ್ನೆಯೂ ಹೌದು.  ಆದರೆ ಈ ಪ್ರಶ್ನೆಗೆ ಅಷ್ಟು ಸುಲಭವಾಗಿ ಉತ್ತರ ಲಭ್ಯವಿಲ್ಲ. ಏಕೆ ಗೊತ್ತಾ? ಈ ಪ್ರಶ್ನೆಯ ಹಿಂದೆ ವಿಜ್ಞಾನ ಮತ್ತು ಆರೋಗ್ಯ ಶಾಸ್ತ್ರವೇ ಅಡಗಿದೆ. ಆ ಪ್ರಕಾರ ಪೂಜೆಗೆ ಬಳಸುವ ಹೂವು-ಪತ್ರೆಗಳೆಲ್ಲ ದೇವರ ಪೂಜೆಗಾದರೆ, ಅವುಗಳಿಂದ ಹೊರ ಹೊಮ್ಮುವ ಔಷಧಯುಕ್ತ ಪರಿಮಳ ಪೂಜಿಸುವ ಭಕ್ತರಿಗಾಗುತ್ತದೆ! ಇದು ಅಚ್ಚರಿಯಾದರೂ ಸತ್ಯ.

ಪೂಜೆ-ಪುಷ್ಪ- ಆರ್ಯುವೇದ

ವರಮಹಾಲಕ್ಷ್ಮಿ ವ್ರತಕ್ಕಾಗಿ ಮಂತ್ರಪುಷ್ಪಕ್ಕೊಂದರಂತೆ ಜಾಜಿ, ಅಡಿಕೆ ಹೂವು (ಪೂಗ ಪುಷ್ಪ-ಹೊಂಬಾಳೆ), ಪುನ್ನಾಗ (ಸುರಹೊನ್ನೆ), ಬಕುಳ (ವಕುಲ ಪುಷ್ಪ), ಮಲ್ಲಿಗೆ (ಮಲ್ಲಿಕಾ ಪುಷ್ಪ), ಸೇವಂತಿ, ತಾರೆ (ಕಮಲ), ನೀಲಿ ಕಮಲ ಎಂಬ ಎಂಟು ವಿಧದ ಪುಷ್ಪಗಳನ್ನು ಬಳಸುತ್ತಾರೆ. ಧವನ (ಮಾಚಿ ಪತ್ರೆ), ತುಳಸಿ, ಬಿಲ್ವ, ಮರುಗ (ಮರುವಕ), ಸೇವಂತಿ ಪತ್ರೆ, ವಿಷ್ಣು ಕ್ರಾಂತಿ ಎಂಬ ಆರು ಪತ್ರೆಗಳನ್ನೂ ಉಪಯೋಗಿಸುತ್ತಾರೆ.

ಸೇವಂತಿಯೇ.. ಸೇವಂತಿಯೇ...

ಒಂದು ವಿಶೇಷ ಎಂದರೆ, ಪ್ರತಿ ಹಬ್ಬ ಅಥವಾ ವ್ರತಗಳಲ್ಲಿ ಕಾಲಕ್ಕೆ ಅನುಗುಣವಾಗಿ ಹೊಂದಿಕೊಳ್ಳುವ ಅಥವಾ ಆಯಾ ಕಾಲದಲ್ಲಿ ಉದ್ಭವಿಸುವ ರೋಗಗಳಿಗೆ ಔಷಧವಾಗುವಂತಹ ಪುಷ್ಪ-ಪತ್ರಗಳನ್ನು ಬಳಸುತ್ತಾರೆ. ‘ಮಳೆಗಾಲದಲ್ಲಿ ಬರುವ ವರಮಹಾಲಕ್ಷ್ಮಿ ವ್ರತದಲ್ಲಿ ಬಳಸುವ ಈ ಪುಷ್ಪ ಮತ್ತು ಪತ್ರೆಗಳು ಶೀತ, ಜ್ವರಕ್ಕೆ ಔಷಧಿಯಾಗುತ್ತವೆ ಎನ್ನುತ್ತಾರೆ’ ಡಾ.ವಸುಂಧರಾಭೂಪತಿ.

ಹೂವು-ಪತ್ರೆಗಳಲ್ಲಿ ಔಷಧ

ಪ್ರಕೃತಿ ಚಿಕಿತ್ಸಕರ ಪ್ರಕಾರ ಜಾಜಿ ಹೂವಿನ ಪರಿಮಳದಲ್ಲಿ ಉದ್ರೇಕ ನಿಯಂತ್ರಿಸುವ ಚಿಕಿತ್ಸಕ ಗುಣವಿದೆ. ಮಾತ್ರವಲ್ಲ, ದೀರ್ಘಕಾಲದ ಜ್ವರದಿಂದ ಬಳಲುತ್ತಿರುವವರಿಗೆ ಜಾಜಿ ಬೇರಿನ ಕಷಾಯವನ್ನು ಕುಡಿಸುತ್ತಾರೆ. ಸುಟ್ಟ ಗಾಯಗಳಿಗೆ ಜಾಜಿ ಹೂವು ಅಥವಾ ಎಲೆಯಿಂದ ತಯಾರಿಸಿದ ತುಪ್ಪವನ್ನು ಲೇಪಿಸುತ್ತಾರೆ. ಅಡಿಕೆಯ ಹೊಂಬಾಳೆ ಮನೆಯ ಕಳಶದ ಸಂಕೇತ. ಇವುಗಳ ಕೇಸರಗಳನ್ನು ‘ಸ್ಥಿರ ಚೈತನ್ಯ’ದ ಸಂಕೇತ ಎನ್ನುತ್ತಾರೆ. ಅಡಿಕೆ ಮರದ ಹೂವು, ಬೇರು, ಎಲೆ, ಹಣ್ಣು ಎಲ್ಲವೂ ಔಷಧವಾಗುತ್ತದೆ. ಇವುಗಳನ್ನು ದೇಹ ತಂಪುಗೊಳಿಸಲು, ಸಂದು ನೋವು ನಿವಾರಣೆಗೆ, ನರ ಮತ್ತು ಮೂತ್ರ ಸಂಬಂಧಿ ಕಾಯಿಲೆ ಗುಣಪಡಿಸಲು ಬಳಸುತ್ತಾರೆ.

ಪುನ್ನಾಗ ಪುಷ್ಪದ ತೊಗಟೆ, ಅಂಟು, ತಿರುಳು ಔಷಧವಾಗಿ ಬಳಕೆಯಾಗುತ್ತವೆ. ಈ ಹೂವಿನ ಗಿಡದಲ್ಲಿ ರಾಳ ಮತ್ತು ಟ್ಯಾನಿನ್ ಎಂಬ ರಾಸಾಯನಿಕಗಳಿವೆ. ಸಂಧಿವಾತಕ್ಕೆ ಹೂವಿನ ಎಣ್ಣೆ ಬಳಸುತ್ತಾರೆ. ತುರಿಕಜ್ಜಿ ಮತ್ತು ತಲೆಯಲ್ಲಿನ ಹುಣ್ಣುಗಳಿಗೆ ಈ ಎಣ್ಣೆ ದಿವ್ಯೌಷಧ.

ಬಕುಲ ಅಥವಾ ಪಗಡೆಯಲ್ಲಿ ಹೂವು, ಹಣ್ಣು, ತೊಗಡೆ ಮತ್ತು ಬೀಜದ ತೈಲ ಔಷಧವಾಗುತ್ತದೆ. ತಲೆನೋವಿಗೆ ಹೂವಿನ ಪುಡಿ ಮದ್ದು. ಮಲಬದ್ಧತೆಗೆ ಬೀಜದ ಪುಡಿ ಉತ್ತಮ ಪರಿಹಾರ. ಚರ್ಮರೋಗ ದಂತರೋಗ, ಬಾಯಿ ಹುಣ್ಣಿಗೆ ತೊಗಟೆಯ ಕಷಾಯ ಸಿದ್ಧೌಷಧ.

ಮಲ್ಲಿಗೆ, ಸೇವಂತಿಗೆ, ಪದ್ಮಪುಷ್ಪ (ತಾವರೆ, ಕಮಲ) ಪುಷ್ಪಗಳು ಮಾನಸಿಕ ಖಿನ್ನತೆಗೆ, ಜ್ವರ, ರಕ್ತಶುದ್ಧಿ ಮತ್ತು ವೃದ್ಧಿ, ಡಯೇರಿಯಾದಂತಹ ರೋಗಗಳಿಗೆ ಔಷಧವಾಗುತ್ತದೆ. ದವನ ಪತ್ರೆ- ಶೀತ ಸಂಬಂಧಿ ಕಾಯಿಲೆಗಳಿಗೆ, ಊತ-ವಾತ ನಿವಾರಣೆಗೆ ಮರುಗ, ಮಲಬದ್ಧತೆ, ಚರ್ಮರೋಗ, ಜಾಂಡೀಸ್ ನಿವಾರಣೆಗೆ ಬಿಲ್ವಪತ್ರೆ, ಶ್ವಾಸಕೋಶದ ತೊಂದರೆ, ಕೆಮ್ಮು-ದಮ್ಮು ನಿವಾರಣೆಗೆ ತುಳಸಿ, ಬಿಕ್ಕಳಿಕೆ, ನಿಶ್ಯಕ್ತಿ ನಿವಾರಣೆಗೆ ವಿಷ್ಣುಕ್ರಾಂತಿ ಪತ್ರೆ ಔಷಧವಾಗಿ ಬಳಕೆಯಾಗುತ್ತದೆ.

ಧ್ಯಾನದೊಂದಿಗೆ ಪರಿಮಳ ಆಘ್ರಾಣ

ಮಕರದ ಹೀರುತ್ತಿರುವ ಪಾತರಿಗಿತ್ತಿ

ಪ್ರಸ್ತುತದಲ್ಲಿ ಪೂಜೆ, ವ್ರತ ಎಂದರೆ ಆಡಂಬರ, ಅಲಂಕಾರಕ್ಕೆ ಸೀಮಿತವಾಗಿದೆ. ಭಕ್ತಿಯ ಪರಾಕಾಷ್ಠೆಯಲ್ಲಿ ‘ಮೂಢ ನಂಬಿಕೆಗಳೂ’ ಮನೆ ಮಾಡಿವೆ. ನಿಜವಾದ ಅರ್ಥದಲ್ಲಿ ಪೂಜೆ ಎಂದರೆ ಧ್ಯಾನ. ಧ್ಯಾನದ ಮೂಲಕ ಪತ್ರೆ-ಪುಷ್ಪಗಳ ಪರಿಮಳವನ್ನು ಆಘ್ರಾಣಿಸಬೇಕು’. ಇದರಿಂದ ಮನಸ್ಸು ಪ್ರಫುಲ್ಲವಾಗುತ್ತದೆ. ಏಕಾಗ್ರತೆ, ಮನಶಾಂತಿ ಮೂಡುತ್ತದೆ. ಈ ಅಂಶಗಳು ಅನೇಕ ರೋಗಗಳಿಗೆ ಔಷಧವಾಗುತ್ತವೆ. ಇದನ್ನೇ ‘ಆರೋಮಾ ಥೆರಪಿ’ ಅಥವಾ ಸುಗಂಧ ಚಿಕಿತ್ಸೆ ಎನ್ನುತ್ತಾರೆ.

ಭಾರತೀಯ ಸಂಸ್ಕೃತಿಯಲ್ಲಿ ಹಬ್ಬ-ಹರಿದಿನ, ವ್ರತ-ಪೂಜೆ-ಪುನಸ್ಕಾರಗಳಲ್ಲಿ ಇಂಥ ‘ಥೆರಪಿ’ಗಳು ಅಡಗಿವೆ. ಆಯುರ್ವೇದದಲ್ಲಿ ‘ಕುಸುಮಾಯುರ್ವೇದ’ ವಿಭಾಗವೇ ಇದೆ. ಇಂಥ ಮಹತ್ವದ ವಿಚಾರಗಳನ್ನೊಳಗೊಂಡಿರುವ ಹಬ್ಬಗಳ ಮಹತ್ವವನ್ನು ಸರಿಯಾಗಿ ಪ್ರಚಾರ ಪಡಿಸದೇ ‘ಮೂಢ ನಂಬಿಕೆ’ ಎಂಬ ಪಟ್ಟಕಟ್ಟಲಾಗಿದೆ ಎನ್ನುವುದು ಆಯುರ್ವೇದ ತಜ್ಞ ಡಾ.ಸತ್ಯನಾರಾಯಣ ಭಟ್ ಅಭಿಪ್ರಾಯ

ರೈತನ ಗೆಳೆಯ ‘ಅಜೋಲಾ’

ಅಜೋಲಾ – ಮೇವಿನ ಬೆಳೆಯೂ ಹೌದು, ಗೊಬ್ಬರದ ಒಳಸುರಿಯೂ ಹೌದು. ಅಜೋಲಾ ಬೆಳೆಸಿ ಬಳಸುವುದರಿಂದ ಆಕಳುಗಳಿಗೆ ಪೌಷ್ಟಿಕ ಮೇವಾಗುತ್ತದೆ. ಹಾಲಿನ ಇಳುವರಿ ಹೆಚ್ಚುತ್ತದೆ. ಜೊತೆಗೆ, ಮೇವಿನ ಖರೀದಿಗಾಗಿ ವ್ಯಯಿಸುವ ಹಣ ಉಳಿತಾಯವಾಗುತ್ತದೆ.
ಅಜೋಲಾ ಕುರಿತು ಸಾಕಷ್ಟು ಸಂಶೋಧನೆಗಳಾಗಿವೆ. ಅಧ್ಯಯನಗಳೂ ನಡೆದಿವೆ. ವಿಶ್ವ ವಿದ್ಯಾಲಯ ಮಟ್ಟದಲ್ಲಿ ಅನೇಕ ಪ್ರಬಂಧಗಳನ್ನು ಮಂಡಿಸಲಾಗಿದೆ. ಆದರೆ ರೈತರಿಗೆ ಅರ್ಥವಾಗುವ ರೀತಿಯಲ್ಲಿ ಸ್ಥಳೀಯ ಭಾಷೆಯಲ್ಲಿ ಪುಸ್ತಕಗಳು ಪ್ರಕಟವಾಗಿರಲಿಲ್ಲ.
ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆ ಸರಳ ಕನ್ನಡದಲ್ಲಿ ಅಜೋಲಾ ಪುಸ್ತಕವನ್ನು ಪ್ರಕಟಿಸುವ ಮೂಲಕ ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆ ಆ ಕೊರತೆಯನ್ನು ತುಂಬಿಕೊಟ್ಟಿದೆ. ಗಾಣಧಾಳು ಶ್ರೀಕಂಠ ಅವರ ಈ ಹೊತ್ತಗೆ ಅಜೋಲಾ ಕೃಷಿಯ ಸಂಪೂರ್ಣ ಮಾಹಿತಿ ನೀಡುತ್ತದೆ.
(- ಡಾ.ಮುರುಳಿ ಕೃಷ್ಣ, ಪಶುವೈದ್ಯರು, ಬೆಂಗಳೂರು)

ಸಾವಯವದಿಂದ ಜೀವ ವೈವಿಧ್ಯವರೆಗೆ…

ಎರಡು ಗ್ರಾಮ, ಒಂದು ಯೋಜನೆ, ಒಂದು ಇಲಾಖೆ, ಒಂದು ಸಂಸ್ಥೆ. ಪುಟ್ಟ ಬದಲಾವಣೆ…
-ಈ ಸಮೀಕರಣದ ಫಲಿತಾಂಶವೇ ‘ಹಸಿರು ಹೆಜ್ಜೆಗಳು’ ಎಂಬ ಕೃತಿ.
ಕೃಷಿ ಇಲಾಖೆ ‘ಸಾವಯವ ಗ್ರಾಮ/ಸ್ಥಳ ಯೋಜನೆ’ಯನ್ನು ಅನುಷ್ಠಾನಗೊಳಿಸಲು ಭೂಮಿ ಸುಸ್ಥಿರ ಅಭಿವೃದ್ದಿ ಸಂಸ್ಥೆಗೆ ವಹಿಸಿತು. ಸಂಸ್ಥೆಯ ಮಾರ್ಗದರ್ಶನದಲ್ಲಿ ಸಕಲೇಶಪುರ ತಾಲ್ಲೂಕಿನ ಯೆಡೇಹಳ್ಳಿ, ಮೂಡಿಗೆರೆ ತಾಲ್ಲೂಕಿನ ಫಲ್ಗುಣಿಯ ಅಂದಾಜು ಇನ್ನೂರು ರೈತರು ೨೫೦ ಎಕರೆ ಜಮೀನಿನಲ್ಲಿ ಸಾವಯವ ಕೃಷಿ ಯೋಜನೆಯನ್ನು ಅಳವಡಿಸಿಕೊಂಡರು.
ಮೂರು ವರ್ಷಗಳಲ್ಲಿ ಅಷ್ಟೂ ಕುಟುಂಬಗಳು ಸಾವಯವ ಕೃಷಿಗೆ ಪರಿವರ್ತನೆ ಗೊಳ್ಳುವ ಸಂಕಲ್ಪ ಮಾಡಿದರು. ಆ ಬದಲಾವಣೆಯ ಹೆಜ್ಜೆಗಳೇ ಈ ಕೃತಿಯ ಒಂದೊಂದು ಪಠ್ಯಗಳು.
ಈ ಕೃತಿಯಲ್ಲಿ ಒಟ್ಟು ಹನ್ನೆರಡು ಕೃಷಿಕರ ಅನುಭವಗಳಿವೆ. ಮೂರು ವರ್ಷಗಳಕಾಲ ಈ ರೈತರ ತೋಟಗಳ ಬೆಳವಣಿಗೆಯನ್ನು ಗಮನಿಸಿ ದಾಖಲಿಸಲಾಗಿದೆ. ನಮ್ಮನ್ನೂ ಒಳಗೊಂಡಂತೆ ಒಟ್ಟು ಐದು ಮಂದಿ ಬರಹಗಾರರು ಮೂರು ವರ್ಷಗಳ ಕಾಲ ಈ ಯೋಜನಾ ಕ್ಷೇತ್ರಗಳಲ್ಲಿ ಸುತ್ತಾಡಿ ಮಾಹಿತಿಯನ್ನು ದಾಖಲಿಸಿದ್ದಾರೆ.
ಸಾವಯವ ಕೃಷಿಗೆ ಪರಿವರ್ತನೆಯಾಗುವುದೆಂದರೆ ಕೇವಲ ರಾಸಾಯನಿಕ ಗೊಬ್ಬರ, ಕೀಟನಾಶಕಗಳನ್ನು ತ್ಯಜಿಸುವುದು, ಎರೆಗೊಬ್ಬರ ಬಳಸುವುದಷ್ಟೇ ಅಲ್ಲ. ನೆಲ-ಜಲ ಸಂರಕ್ಷಣೆ, ದುಬಾರಿ ಒಳಸುರಿಗೆ ಬ್ರೇಕ್ ಹಾಕುವುದು, ಬೀಜ ಸ್ವಾವಲಂಬನೆ, ಸ್ಥಳೀಯ ಸಂಪನ್ಮೂಲಗಳ ಸದ್ಬಳಕೆ, ತ್ಯಾಜ್ಯದಿಂದ ಗೊಬ್ಬರ ತಯಾರಿ ಹಾಗೂ ಸ್ವಾವಲಂಬನೆಯಿಂದ ಬದುಕುವುದೇ ‘ಸಾವಯವ ಕೃಷಿ’ ಎಂಬುದನ್ನು ಈ ಕೃತಿಯಲ್ಲಿನ ಲೇಖನಗಳು ಮನವರಿಕೆ ಮಾಡಿಕೊಡು ತ್ತವೆ.
ಪ್ರತಿ ಲೇಖನವೂ ಸಾವಯವ ಕೃಷಿಯ ಹೊಸ ಮಗ್ಗಲನ್ನು ಪರಿಚಯಿಸುತ್ತದೆ. ಯಾವ ಲೇಖನಗಳಲ್ಲೂ ಉತ್ಪ್ರೇಕ್ಷೆಯಿಲ್ಲ. ಯಾವ ರೈತರೂ ಉದ್ಘರಿಸಿ ಮಾತನಾಡಿಲ್ಲ. ಆರಂಭದಲ್ಲಿ ಸಾವಯವ ಕೃಷಿ ಕಷ್ಟ ಎನ್ನುವುದನ್ನು ರೈತರು ಒಪ್ಪಿಕೊಂಡಿದ್ದಾರೆ. ಒಮ್ಮೆ ಭೂಮಿ ಒಗ್ಗಿಕೊಂಡರೆ ಭವಿಷ್ಯದಲ್ಲಿ ಬೆಳೆದಿದ್ದೆಲ್ಲವೂ ಲಾಭ ಎಂಬುದು ರೈತರಿಗೆ ಮನವರಿಕೆಯಾಗಿದೆ.
ಎಕರೆಗಟ್ಟಲೆ ಭತ್ತ ಬೆಳೆದರೂ ‘ಊಟದ ಅಕ್ಕಿಗಾಗಿ ಹುಡುಕಾಟ ನಡೆಸುತ್ತಾ ದೇಸಿ ಭತ್ತದ ಬೀಜ ಬ್ಯಾಂಕ್ ಕಟ್ಟಿದ್ದು, ಸಾವಯವ ಕೃಷಿ ಯೋಜನೆಯಿಂದ ಊರಿನಲ್ಲಿ ಸಾಮಾಜಿಕ ಬದಲಾವಣೆಯಾಗಿರುವಂತಹ ವಿಚಾರಗಳು ಸಾವಯವ ಕೃಷಿಗೆ ಹೊಸದಾಗಿ ಹೆಜ್ಜೆ ಇಡುವ ರೈತರಿಗೆ ಹಾಗೂ ಸಂಘಟನೆಗಳಿಗೆ ಸಾವಯವದ ಹೊಸ ದಿಕ್ಕನ್ನು ಪರಿಚಯಿಸುತ್ತವೆ.
ಭೂ ರಹಿತರಾದರೂ ಇರುವಷ್ಟೇ ಭೂಮಿಯಲ್ಲೇ ಕೃಷಿ ಮಾಡಿಕೊಂಡು ಬದುಕುಕಟ್ಟಿಕೊಂಡಿರುವವರು, ಗೊಬ್ಬರದ ಗುಂಡಿಯ ಸುತ್ತಾ ಕೈತೋಟ ಕಟ್ಟಿಕೊಂಡವರು,  ರಸ್ತೆ ಬದಿಯ ಕಂಪೌಂಡ್ ಅನ್ನೇ ತರಕಾರಿ ಮಾರುಕಟ್ಟೆ ಮಾಡಿಕೊಂಡವರು, ಸಾವಯವದಲ್ಲಿ ಅನಾನಸ್ ಬೆಳೆದು ಮಂಗಳೂರಿಗೆ ಮಾರಾಟ ಮಾಡಿದವರು ಕೃಷಿ ಕಥೆಗಳು ಕೃಷಿ ಬಿಟ್ಟು, ಊರು ಬಿಟ್ಟು ಗುಳೆ ಹೊರಟವರ ಕೈ ಹಿಡಿಯಬಹುದು ಎಂಬುದು ನಮ್ಮ ವಿಶ್ವಾಸ.