ಬುಧವಾರ ಇಳಿ ಸಂಜೆಯಲ್ಲಿ ನಗರದ ತರಾಸು ರಂಗಮಂದಿರದ ತುಂಬಾ ಜಿಎಸ್ಎಸ್ ಕಾವ್ಯದ ಹೊನಲು ಹರಿಯುತ್ತಿತ್ತು. ಆ ಭಾವ ಲಹರಿಯ ಅಲೆಯಲ್ಲಿ ಐದುನೂರಕ್ಕೂ ಹೆಚ್ಚು ಕವಿ ಮನಸ್ಸಿನ ಸಹೃದಯಿಗಳು ತೇಲಿ ಹೋದರು..!
ವಿಶ್ವಪಥ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ‘ಎದೆ ತುಂಬಿ ಹಾಡುವೆವುವು…’ – ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರಿಗೆ ಗೀತ ನಮನ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯವಿದು.
‘ಹಣತೆ’ ಹಚ್ಚಿ ಕನ್ನಡ ಸಾರಸ್ವತ ಲೋಕವನ್ನು ಬೆಳಗಿಸಿದ ಚೈತ್ರ ಕವಿ ಜಿಎಸ್ಎಸ್ ಅವರ ಹದಿನಾರು ಜನಪ್ರಿಯ ಗೀತೆಗಳನ್ನು ಹದಿನೇಳು ಗಾಯಕರು ಹಾಡುವ ಮೂಲಕ ರಾಷ್ಟ್ರಕವಿಗೆ ಗೀತ ನಮನ ಸಲ್ಲಿಸಿದರು. ಗೀತೆಯ ಜೊತೆಗೆ, ಅದರ ರಚನೆಯ ಉದ್ದೇಶ, ಸನ್ನಿವೇಶ, ಸಂದರ್ಭಗಳನ್ನು ಸಾಹಿತ್ಯ ಪೂರಣ ನಿರೂಪಣೆಯ ಮೂಲಕ ಆಕಾಶವಾಣಿ ಕಾರ್ಯಕ್ರಮ ಮುಖಸ್ಥೆ ಉಷಾ ಲತಾ ಅವರು ನಿರೂಪಿಸಿದರು.
ಗಾಯಕಿ ಕೋಕಿಲಾ ರುದ್ರಮೂರ್ತಿಯವರ ದನಿಯಲ್ಲಿ ಮೂಡಿಬಂದ ಮುಂಗಾರಿನ ಅಭಿಷೇಕಕೆ / ಮಿದುವಾಯಿತು ನೆಲವು / ಧಗೆಯಾರಿದ ಹೃದಯದಲ್ಲಿ/ ಪುಟಿದೆದ್ದಿತು ಚೆಲುವು’ ಎಂಬ ಗೀತೆ ಪ್ರೇಕ್ಷಕರನ್ನು ಮುಂಗಾರಿನ ಮಳೆಯಲ್ಲಿ ತೊಯ್ದಂತಹ ಅನುಭವ ನೀಡಿತು.
ಯುವ ಗಾಯಕ ಪ್ರಜ್ವಲ್ ಧ್ವನಿಯಲ್ಲಿ ಮೂಡಿ ಬಂದ, ‘ಆಕಾಶದ ನೀಲಿಯಲ್ಲಿ / ಚಂದ್ರ ತಾರೆ ತೊಟ್ಟಿಲಲ್ಲಿ / ಬೆಳಕನಿಟ್ಟು ತೂಗದಾಕೆ / ನಿನಗೆ ಬೇರೆ ಹೆಸರು ಬೇಕೇ/ ಸ್ತ್ರೀ ಎಂದರೆ ಅಷ್ಟೇ ಸಾಕೆ’ ಗೀತೆ ಹಾಗೂ ಸತೀಶ್ ಜಟ್ಟಿಯವರ ಕಂಠದಿಂದ ಹೊಮ್ಮಿದ ‘ಕಾಣದ ಕಡಲಿಗೆ ಹಂಬಲಿಸಿದೆ ಮನ’ ಕವಿತೆ, ಗಾಯಕ ದಿ. ಸಿ. ಅಶ್ವತ್ಥ್ ಅವರ ಶಾರೀರವನ್ನು ನೆನಪಿಸಿತು. ಪ್ರೇಕ್ಷಕರ ಒತ್ತಾಯ ಹಾಗೂ ಹಾಡುಗಾರರ ಜಿಎಸ್ಎಸ್ ಮೇಲಿನ ಪ್ರೀತಿಯಿಂದಾಗಿ ‘ದುರ್ಗದ ಸಿರಿ’ ಸಾಂಸ್ಕೃತಿಕ ವೇದಿಕೆಯ ಡಿವೈಎಸ್ಪಿ ಮಹಂತರೆಡ್ಡಿಯವರು ’ಕಾಣದ ಕಡಲಿಗೆ ಹಂಬಲಿಸಿದ ಮನ’ ಹಾಡನ್ನು ಹಾಡಿ, ಪ್ರೇಕ್ಷಕರನ್ನು ಮತ್ತಷ್ಟು ರಂಜಿಸಿದರು. ಮಂದ್ರ ಸ್ಥಾಯಿ, ತಾರಸ್ಥಾಯಿಯ ಸಂಗೀತ ಸ್ವರಗಳಿಗೆ ಪ್ರೇಕ್ಷಕರು ತಲೆದೂಗಿದರು, ಧ್ಯಾನಸ್ಥರಾದರು, ಅಂತರ್ಮುಖಿಯಾಗಿ ಗಾಯನವನ್ನು ಆಸ್ವಾದಿಸಿದರು. ಕೆಲವರ ಕಣ್ಣಾಲಿಗಳು ತೇವವಾದವು !
ಬಿ.ಪಿ.ಶೋಭಾ ಅವರ ‘ಪ್ರಕೃತಿಯಂತೆ ಕವಿಯ ಮನಸು..’ ಗಾಯನ, ಚಿತ್ರದುರ್ಗದ ಜೋಗಿಮಟ್ಟಿಯ ಹಸಿರ ಸಿರಿಯನ್ನು ನೆನಪಿಸಿದರೆ, ಡಿ.ಓ ಮೊರಾರ್ಜಿಯವರ ‘ಶತಮಾನದಿಂದ ..’ ಗೀತೆ ದುರ್ಗದ ನೆಲದ ಹೋರಾಟದ ಕಿಚ್ಚನ್ನು ಮೆಲಕುವಂತೆ ಮಾಡಿತು. ವೇಣುಗೋಪಾಲ್ ಅವರ ದನಿಯಲ್ಲಿ ಮೂಡಿದ ‘ನಿನ್ನದೇ ನೆಲ, ನಿನ್ನದೇ ಜಲ..’ ಜಿಎಸ್ಎಸ್ ಅವರ ನೆಲದ ಪ್ರೀತಿಯನ್ನು ಪ್ರದರ್ಶಿಸಿತು. ಚಂದ್ರಪ್ಪ ಅವರು ‘ಎದೆ ತುಂಬಿ ಹಾಡುವೆನು’ ತ್ರಿವೇಣಿಯವರ ‘ಉಡುಗಣ ವೇಷ್ಟಿತ’, ಕುಮಾರಿ ನಾಶ್ರೀಯವರ ದನಿಯಲ್ಲಿ ಮೂಡಿ ಬಂದ ‘ಯಾವ ರಾಗಕೋ..’ ಗೀತೆಗಳು ಪ್ರೇಕ್ಷಕರ ಕೈಗಳಿಗೆ ತಾಳದ ಲೇಪನವನ್ನು ಹಚ್ಚಿದವು. ಈ ಎಲ್ಲ ಹಾಡುಗಳಿಗೂ ಪ್ರೇಕ್ಷಕ ಮಹಾಪ್ರಭು ಜೋರು ಚಪ್ಪಾಳೆ ತಟ್ಟುವ ಮೂಲಕ ‘ಫುಲ್ ಮಾರ್ಕ್ಸ್’ ನೀಡಿದರು.
ವೃಂದಗಾನದಲ್ಲಿ ಪ್ರಸ್ತುತಪಡಿಸಿದ ‘ಒಂದೇ ಒಂದೇ ಒಂದೇ ನಾವೆಲ್ಲರೂ ಒಂದೇ ’ ಗೀತೆ ಜಿಎಸ್ಎಸ್ ಅವರ ದೇಸಿ ತನವನ್ನು ತೆರೆದಿಟ್ಟರೆ, ನಾಗಶ್ರೀ, ಬಿ.ಪಿ.ಶೋಬಾ ಹಾಗೂ ಮೀನಾಕ್ಷಿ ಭಟ್ ಹಾಡಿದ ‘ಹೊಸ ವರ್ಷದ ಗೀತೆ’ ಪ್ರೇಕ್ಷರಿಗೆ ಹೊಸ ವರ್ಷಾಚರಣೆಯ ಶುಭಾಶಯವನ್ನು ಕೋರಿದಂತಿತ್ತು.
ಚಿತ್ರದುರ್ಗದ ಹಾಡು ಹಕ್ಕಿಗಳ ಸಂಗೀತಕ್ಕೆ ಗುಡದೇಶ್ (ಕೀಬೋರ್ಡ್), ಬಸವರಾಜ್ (ತಬಲ), ಚಂದ್ರಶೇಖರ್ (ರಿದಂ ಪ್ಯಾಡ್) ಪಕ್ಕವಾದ್ಯ ನೀಡಿದರು. ಈ ಮೂವರ ಸಂಗೀತದ ಮೋಡಿಯಿಂದ ಗೀತ ಗಾಯನ ಅದ್ಭುತವಾಗಿ ಮೂಡಿಬಂತು.
ಕೇತೇಶ್ವರ ಶ್ರೀಗಳು, ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ, ನ್ಯಾಯಾಧೀಶ ಸದಾಶಿವ ಎಸ್. ಸುಲ್ತಾನಪುರಿ, ಎಸ್.ಆರ್. ಎಸ್ ಕಾಲೇಜಿನ ಮುಖ್ಯಸ್ಥ ಲಿಂಗಾರೆಡ್ಡಿ, ಬಾಪೂಜಿ ವಿದ್ಯಾಸಂಸ್ಥೆಯ ಮುಖ್ಯಸ್ಥ ಕೆ.ಎಂ.ವೀರೇಶ್, ಸಾಹಿತ್ಯ ಪರಿಚಾರಕ ವೆಂಕಣ್ಣಾಚಾರ್, ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ, ಯಶೋಧಮ್ಮ ದಂಪತಿ ಸೇರಿದಂತೆ ಕೋಟೆ ನಾಡಿನ ಪ್ರಮುಖ ವ್ಯಕ್ತಿಗಳೆಲ್ಲ ಪ್ರೇಕ್ಷಕ ಗ್ಯಾಲರಿಯಲ್ಲಿ ಕುಳಿತು ಗಾನ ಸುಧೆಯನ್ನು ಆಸ್ವಾದಿಸಿದ್ದು ವಿಶೇಷ.
ಕಾರ್ಯಕ್ರಮ ಮುಗಿದು, ಪ್ರೇಕ್ಷಕರೆಲ್ಲ ಮನೆಯತ್ತ ಹೆಜ್ಜೆ ಹಾಕುತ್ತಿದ್ದರೆ, ಇತ್ತ ರಂಗ ಮಂದಿರದಲ್ಲಿ ಇಟ್ಟಿದ್ದ ಶಿವರುದ್ರಪ್ಪನವರ ಭಾವಚಿತ್ರದ ಎದುರು ನಿಂತು ಅವರ ಸಹೋದರಿ ಜಯಕ್ಕ, ಅಗಲಿದ ಸಹೋದರನನ್ನು ನೆನೆಯುತ್ತಾ ಕಣ್ಣೀರಿಡುತ್ತಿದ್ದರು !
———————————
ಉಳಿದಂತೆ ಹಾಡಿದವರು..
ಯಾವ ಹಾಡ ಹಾಡಲಿ – ತೋಟಪ್ಪ ಉತ್ತಂಗಿ
ನನ್ನ ನಿನ್ನ ನಡುವೆ – ಜಿ.ಎಸ್. ಉಜ್ಜಿನಪ್ಪ
ಎಲ್ಲೋ ಹುಡುಕಿದ – ರವಿ ಉಗ್ರಾಣ
ಹಾಡು ಹಳೆಯದಾದರೇನು – ಮೀನಾಕ್ಷಿ ಭಟ್
ಮಬ್ಬು ಕವಿದರೇನು – ಚಂಪಕಾ ಶ್ರೀಧರ್
ಒಂದೇ ಒಂದೇ ಒಂದೇ – ಎಂ.ಕೆ. ಹರೀಶ್
ಎಳೆ ಬೆಳದಿಂಗಳೇ – ಕೆ.ಎ. ಏಕಾಂತಪ್ಪ
–––––––––––––
ಹೊರಡುವ ಮುನ್ನ ಹೀಗೆಂದರು..
ವಿಭಿನ್ನ ಕಾರ್ಯಕ್ರಮ. ವಿನೂತನ ಪ್ರಯತ್ನ. ಭಾವಗೀತೆಯೇ ಪ್ರಧಾನವಾದ ಕಾರ್ಯಕ್ರಮ ಇದು. ಆಯೋಜಕರಿಗೊಂದು ಶಹಬ್ಬಾಸ್.
–ಅಶೋಕ್ ಬಾದರದಿನ್ನಿ, ರಂಗಕರ್ಮಿ
ಚಂದದ ಕಾರ್ಯಕ್ರಮ. ಚಿತ್ರದುರ್ಗದ ಜಿಲ್ಲಾ ಉತ್ಸವ ಇದೇ ರೀತಿಯಲ್ಲಿ ನಡೆಯಬೇಕು.
– ವಿ.ಪಿ.ಇಕ್ಕೇರಿ, ಜಿಲ್ಲಾಧಿಕಾರಿ
ಮೊದ ಮೊದಲು ಗಾಯನ ಸಾಧಾರಣವಾಗಿತ್ತು. ಆಮೇಲೆ ರಂಗ ಮಂದಿರದಿಂದ ಎದ್ದು ಹೋಗದ ಮಟ್ಟಿಗೆ ಆ ಗೀತೆಗಳು ನನ್ನ ಮನಸ್ಸನ್ನು ಕಟ್ಟಿ ಹಾಕಿಬಿಟ್ಟವು.
– ಕೋಟ್ಲಾ ರಾಮಲಿಂಗರೆಡ್ಡಿ, ರೈಲ್ವೆ ಹೋರಾಟ ಸಮಿತಿ ಸದಸ್ಯರು
ಕಲಾವಿದರಿಗೆ ಈ ಪರಿ ಗೌರವ ಕೊಟ್ಟಿದ್ದು ತುಂಬಾ ಸಂತಸ ತಂದಿದೆ. ಇಂಥ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು.
– ಬಿ.ಪಿ.ಶೋಭಾ, ಚಂದ್ರಪ್ ಕಲ್ಕರೆ, ಕಲಾವಿದರ ಪರವಾಗಿ