ಲಾಲ್‌ಬಾಗ್‌ನಲ್ಲಿ ಇಂದಿನಿಂದ ನ. 29ರ ವರೆಗೆ ನಡೆಯುವ ‘ಸಂಗಮ’ದಲ್ಲಿ ದೇಶದ ವಿವಿಧ ಭಾಗಗಳ ಹಣ್ಣುಗಳನ್ನು ನೋಡಬಹುದು, ಕೊಳ್ಳಬಹುದು. ಇದರಲ್ಲಿ ಕೆಲವಂತೂ ಅಪರೂಪದ್ದು. ಪ್ರದರ್ಶನ ಸಮಯ ಬೆಳಿಗ್ಗೆ 9 ರಿಂದ ಸಂಜೆ 7ಗಂಟೆ.
ಚುಮು ಚುಮು ಚಳಿಯಲ್ಲಿ ಲಾಲ್‌ಬಾಗ್ ಸುತ್ತುವುದೆಂದರೆ, ಅದೊಂದು ರೋಮಾಂಚನ ಅನುಭವ. ಕಣ್ಮನ ಸೆಳೆಯುವ ಬಣ್ಣ ಬಣ್ಣದ ಪುಷ್ಪರಾಶಿ, ಪರಿಮಳ ಸೂಸುವ ಪುಷ್ಪಗಳು, ಅಲಂಕಾರಿಕ ಗಿಡಗಳು… ಮೈ ಸೋಕುವ ತಂಗಾಳಿ.. ಒಟ್ಟಾರೆ ಗಿರಿಧಾಮದಲ್ಲಿದ್ದಂತಹ ಅನುಭವ !
ಇಂಥ ಪರಿಮಳದ ಹಿತಾನುಭವದೊಂದಿಗೆ ಬಾಯಿ ಚಪ್ಪರಿಸಲು ಹಣ್ಣುಗಳಿದ್ದರೆ ಎಷ್ಟು ಚಂದ ಅಲ್ಲವೇ? ಕೆಂಪು ತೋಟ ಸುತ್ತುತ್ತಾ ಹೀಗೆ ಯೋಚಿಸುವಿರಾದರೆ ಗುರುವಾರದಿಂದ ಲಾಲ್‌ಬಾಗ್‌ನಲ್ಲಿ ಆರಂಭವಾಗುವ ‘ಸಂಗಮ’ ಹಣ್ಣಿನ ಮೇಳದಲ್ಲಿ ಭಾಗವಹಿಸಿ. ಅಹ್ಲಾದಕರ ವಾತಾವರಣದ ಜೊತೆಗೆ ನೀವು ನೋಡಿರದ ಹಣ್ಣುಗಳನ್ನು ವೀಕ್ಷಿಸಬಹುದು. ಮಾತ್ರವಲ್ಲ… ರುಚಿನೋಡದ ಹಣ್ಣುಗಳನ್ನು ಕೊಂಡು ರುಚಿ ನೋಡಬಹುದು.
ಹಾರ್ಟಿ ಸಂಗಮ್
ದೇಶದ ವಿವಿಧೆಡೆ ಬೆಳೆಯುವ ಚಳಿಗಾಲದ ಹಣ್ಣುಗಳ ಸಮಾಗಮವೇ ‘ಹಾರ್ಟಿ ಸಂಗಮ್ – 2010’ ಹಣ್ಣುಗಳ ಮೇಳ. ಇಲ್ಲಿ ಹತ್ತು ರಾಜ್ಯಗಳ ಎಪ್ಪತ್ತೆರಡು ಹಣ್ಣಿನ ಬೆಳೆಗಾರರು ವೈವಿಧ್ಯಮಯ ಹಣ್ಣುಗಳನ್ನು ಪ್ರದರ್ಶನಕ್ಕಿಡುತ್ತಾರೆ.
ನಮ್ಮದೇ ರಾಜ್ಯದ ಜಾಪುರ, ಕೊಡಗು ಭಾಗದಿಂದ ವಿವಿಧ ಕಿತ್ತಳೆ, ಮೋಸಂಬಿ ತಳಿಗಳು, ಮಹಾರಾಷ್ಟ್ರದ ಸಾತಾರದ ಕಿತ್ತಳೆ ತಳಿಗಳು, ನಿಂಬೆ ಜಾತಿಯ ಹಣ್ಣುಗಳು, ಅನಾನಸ್ ಈ ಪ್ರದರ್ಶನದ ಪ್ರಮುಖ ಆಕರ್ಷಣೆ. ಜೇನು, ಒಣ ದ್ರಾಕ್ಷಿ, ಗೋಡಂಬಿ, ಖರ್ಜೂರದಂಥವು ಕೂಡ ಇಲ್ಲಿ ತಮ್ಮ ಅಸ್ತಿತ್ವ ತೋರಿಸಲಿವೆ.
ತೋಟಗಾರಿಕೆ ಯೋಜನೆಗಳಲ್ಲಿ ನೆರವು ಪಡೆದಿರುವ ಉತ್ಪಾದಕ ರೈತರು, ತಂತ್ರಜ್ಞಾನ ವರ್ಗಾವಣೆಯಡಿ ತರಬೇತಿ ಪಡೆದವರು, ಹಣ್ಣು ಬೆಳೆಗಾರರ ಸಂಘದವರು, ಹಾಪ್‌ಕಾಮ್ಸ್ ಮತ್ತು ಆಯ್ದ ರಫ್ತುದಾರರು ಮತ್ತು ಸಂಸ್ಕರಣೆದಾರರು ಈ ಸಂಗಮದಲ್ಲಿ ಭಾಗವಹಿಸುತ್ತಾರೆ.
ಈಶಾನ್ಯ ರಾಜ್ಯಗಳ ಹಣ್ಣುಗಳು
ಈ ಮೇಳದಲ್ಲಿ ಈಶಾನ್ಯ ರಾಜ್ಯಗಳ ಹಣ್ಣುಗಳದ್ದೇ ಸಿಂಹಪಾಲು. ಅರುಣಾಚಲ ಪ್ರದೇಶ, ಸಿಕ್ಕಿಂ, ಮಿಜೊರಾಂ, ನಾಗಾಲ್ಯಾಂಡ್, ತ್ರಿಪುರ ಮತ್ತು ಮೇಘಾಲಯದ ರಾಜ್ಯಗಳಲ್ಲಿ ಬೆಳೆಯುವ ಹಣ್ಣುಗಳನ್ನು ಪ್ರದರ್ಶನಕ್ಕಿಟ್ಟು ಮಾರಾಟ ಮಾಡಲಾಗುತ್ತದೆ.
ಯೂರೋಪಿಯನ್ ಕಕುಂಬರ್, ಲಿಚಿ, ಕಿವಿ, ಪ್ಯಾಷನ್ ಫ್ರೂಟ್, ಸ್ಟ್ರಾಬೆರಿಯಂತಹ ಹಣ್ಣುಗಳ ಮಹಾನಗರದ ಜನತೆಗೆ ಅಪರೂಪ. ಇಂಥ ಹಣ್ಣುಗಳನ್ನು ನೋಡುವ, ರುಚಿ ಸವಿಯುವ ಅವಕಾಶ ಈ ಮೇಳದಲ್ಲಿದೆ. ಇವೆಲ್ಲದರ ಜೊತೆಗೆ ದ್ರಾಕ್ಷಾ ರಸ (ಗ್ರೇಪ್ ವೈನ್) ಕೂಡ ಪ್ರದರ್ಶನದಲ್ಲಿರುತ್ತದೆ. ಆದರೆ ಇದನ್ನು ‘ಸವಿ’ಯುವ ಅವಕಾಶವಿಲ್ಲ ಅಂತ ಮೇಳದ ಸಂಘಟಕರು ‘ಸ್ಟಾರ್’ ಮಾರ್ಕ್ ಹಾಕಿದ್ದಾರೆ!
‘ಈ ಮೇಳದಲ್ಲಿ ಪ್ರಸಕ್ತ ಋತುಮಾನದಲ್ಲಿ ಬೆಳೆಯುವ ಹಾಗೂ ಲಭ್ಯವಿರುವ ಎಲ್ಲ ವಿಶೇಷ ಹಣ್ಣುಗಳನ್ನು ಪ್ರದರ್ಶನದಲ್ಲಿಡ ಲಾಗುತ್ತದೆ. ಉತ್ತಮ ರುಚಿ ಹಾಗೂ ಯೋಗ್ಯ ಬೆಲೆಗೆ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತದೆ’ ಎನ್ನುತ್ತಾರೆ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕರಾದ ಷಣ್ಮುಖಪ್ಪ ಅವರು.
ನಾಲ್ಕು ದಿನಗಳ ಕಾಲ ನಡೆಯುವ ಈ ಮೇಳವನ್ನು ತೋಟಗಾರಿಕೆ ಮತ್ತು ಸಕ್ಕರೆ ಸಚಿವ ರವೀಂದ್ರನಾಥ್ ಅವರು ಉದ್ಘಾಟಿಸುತ್ತಾರೆ. ಶಾಸಕ ಹೇಮಚಂದ್ರ ಸಾಗರ್, ಸಂಸದ ಅನಂತಕುಮಾರ್ ಭಾಗವಹಿಸಲಿದ್ದಾರೆ.
(http://www.prajavani.net/Content/Nov252010/metrothurs20101124214445.asp)