ಭೂಮಿಯನ್ನು ‘ಮಾತೃಭೂಮಿ, ಭೂಮ್ತಾಯಿ’ ಎನ್ನುತ್ತೇವೆ. ವನ್ಯ, ಖನಿಜ ಖಜಾನೆಯಾಗಿರುವುದರಿಂದ ‘ರತ್ನಗರ್ಭಾ ವಸುಂಧರೆ, ಹಸಿರು ನೀಲಾಂಬರ ಭೂಷಿತೆ’ ಎಂದೆಲ್ಲಾ ವ್ಯಾಖ್ಯಾನಿಸುತ್ತೇವೆ. ‘ಜನ್ಮ ನೀಡಿದ ಭೂ ತಾಯಿಯ ನಾ ಹೇಗೆ ತಾನೆ ಮರೆಯಲಿ…’ ಎಂದು ಹಾಡುತ್ತೇವೆ. ಹಾಗಾಗಿಯೇ ವೈಜ್ಞಾನಿಕವಾಗಿ ಭೂಮಿ ಒಂದು ಗ್ರಹವಾದರೂ, ಭಾವನಾತ್ಮಕವಾಗಿ ಅದು ನಮ್ಮೆಲ್ಲರ ‘ಮನೆ’. ಅದರ ಮೇಲಿರುವ ಸಕಲ ಜೀವರಾಶಿಯೂ ನಮ್ಮ ಕುಟುಂಬ. ಆದರೆ ಅದು ನಮ್ಮಆಸ್ತಿಯಲ್ಲ. ಪೀಳಿಗೆಯಿಂದ ಎರವಲಾಗಿ ಪಡೆದದ್ದು. ಅದನ್ನು ಅಷ್ಟೇ ಸುರಕ್ಷಿತವಾಗಿ, ಜೋಪಾನವಾಗಿ ಹಿಂದಿರುಗಿಸುವ ಜವಾಬ್ದಾರಿ ನಮ್ಮ ಮೇಲಿದೆ !
ಆದರೆ ನಾವೇನು ಮಾಡುತ್ತಿದ್ದೇವೆ? ಇಂಥ ಭೂಮಿಯನ್ನು ನಮ್ಮ ಸೌಲಭ್ಯ, ಸೌಕರ್ಯಗಳ ದುರಾಸೆಯಿಂದ ಬಲಿಕೊಡುತ್ತಿದ್ದೇವೆ. ಭೂಮಿ ತನ್ನ ರಕ್ಷಣೆಗಾಗಿ ತಾನೇ ನಿರ್ಮಿಸಿಕೊಂಡಿದ್ದ ಕಾಡು- ಮೇಡು, ಕೆರೆ-ಹೊಂಡ, ಗುಡ್ಡ-ಬೆಟ್ಟಗಳನ್ನೆಲ್ಲ ನಾಶ ಮಾಡುತ್ತಿದ್ದೇವೆ. ದಾಹ ತೀರಿಕೆಗಾಗಿ ಅಂತರ್ಜಲ ಬರಿದು ಮಾಡುತ್ತಿದ್ದೇವೆ. ಖನಿಜ ಸಂಪತ್ತಿಗಾಗಿ ಭೂಮಿ ಬಗೆಯುತ್ತಿದ್ದೇವೆ. ಮಡಿಲಲ್ಲಿ ಸೋಬಲಕ್ಕಿ ಇಟ್ಟು ಮನೆಯ ಹೆಣ್ಮಗಳಂತೆ ಕಾಣಬೇಕಿದ್ದ ಭೂಮಿಗೆ ವಿಷಕಾರಕ ತ್ಯಾಜ್ಯಗಳನ್ನು ತುಂಬುತ್ತಿದ್ದೇವೆ. ಭೂಮಿಯಲ್ಲಿ ಬದುಕುತ್ತಿರುವ ಜೀವಜಂತು ನಾಶ ಮಾಡುತ್ತಿದ್ದೇವೆ. ಅಳಿದುಳಿದ ನಿಸರ್ಗವನ್ನು ಮಲಿನಗೊಳಿಸುತ್ತಿದ್ದೇವೆ. ವಿಷ ಪ್ರಾಶನ ಮಾಡಿಸುತ್ತಿದ್ದೇವೆ. ‘ನಿಸರ್ಗ ಕುಟುಂಬ’ದ ಕೆಮಿಸ್ಟ್ರಿಯನ್ನೇ ಬದಲಾಯಿಸುತ್ತಿದ್ದೇವೆ. ಋತುಮಾನಗಳನ್ನೇ ಏರು ಪೇರು ಮಾಡುತ್ತಿದ್ದೇವೆ!

ನಿಸರ್ಗದ ಮೇಲೆ ನಡೆಯುತ್ತಿರುವ ಇಂಥ ದುಷ್ಕೃತ್ಯಗಳಿಂದಾಗಿ ಭೂಮಿಯ ಒಡಲು ಬಿಸಿಯಾಗುತ್ತಿದೆ. ಭೂಮಿ ಬಿಕ್ಕಿ ಬಿಕ್ಕಿ ಅಳುತ್ತಿದೆ. ಅದರ ಕಣ್ಣೀರು ಪ್ರವಾಹ, ಸುನಾಮಿಯಾಗಿ ಹಳ್ಳಿ, ನಗರ, ಪಟ್ಟಣಗಳನ್ನು ಯಾವುದೇ ಮುಲಾಜಿಲ್ಲದೆ ಆಹುತಿ ತೆಗೆದುಕೊಳ್ಳುತ್ತಿದೆ. ಇನ್ನೊಂದೆಡೆ ಮರುಭೂಮಿ ವಿಸ್ತರಣೆಯಾಗುತ್ತಿದೆ. ಈ ಏರುಪೇರುಗಳೊಂದಿಗೆ ಹೊಸ ಹೊಸ ರೋಗ-ರುಜಿನಗಳು ಅವತರಿಸುತ್ತ, ಪರೋಕ್ಷವಾಗಿ ಮಾನವನ ವಿರುದ್ಧ ಪ್ರಕೃತಿ ಯುದ್ಧ ಸಾರುತ್ತಿದೆ.
ಕೇಳಿಸದ ಭೂದೇವಿ ಆರ್ತನಾದ:
ಭೂಮಿ ತನಗಾಗುವ ನೋವನ್ನು ಹಲವು ಬಾರಿ ನಮ್ಮ ಮುಂದೆ ನಾನಾ ರೂಪದಲ್ಲಿ ತೋಡಿಕೊಳ್ಳುತ್ತದೆ. ವಾತಾವರಣ ಏರುಪೇರು ಮಾಡಿ, ಸೋನೆ ಮಳೆ ಸುರಿಸಿ, ಸಣ್ಣದಾಗಿ ಕಂಪಿಸಿ, ‘ನೋಡ್ರಪ್ಪಾ, ನನಗೆ ನೋವಾಗ್ತಿದೆ. ನಿಮ್ಮ ಅವಾಂತರಗಳನ್ನು ನಿಲ್ಲಿಸಿ’ ಎಂದೆಲ್ಲ ಬೇಡುತ್ತದೆ. ಪ್ರಕೃತಿಯನ್ನೇ ಅರ್ಥ ಮಾಡಿಕೊಳ್ಳದ ಪೃಥ್ವಿಯ ಪುತ್ರನಾದ ಮಾನವ, ತಾಯಿಯ ಆರ್ತನಾದವನ್ನು ಕೇಳಿಸಿಕೊಳ್ಳದೇ ನಿಸರ್ಗಕ್ಕೆ ತಲೆಬಾಗದೆ ಅಧಿಪತಿಯಾಗಲು ಮಹೀಪತಿಯಾಗಲು ಹೊರಟಿದ್ದಾನೆ. ಇಂಥ ಅಟ್ಟಹಾಸಗಳಿಗೆ ಭೂ ತಾಯಿ ಒಮ್ಮೊಮ್ಮೆ ಚಂಡಮಾರುತ, ಭೂಕಂಪ, ಬರಗಾಲದಂತಹ ವಿಕೋಪಗಳ ರುದ್ರ ನರ್ತನದೊಂದಿಗೆ ಉತ್ತರಿಸುತ್ತಾಳೆ!
ಇದು ಹೀಗೆ ಮುಂದುವರಿದರೆ ನಿಂತ ಜಾಗವೇ ಕುಸಿಯುತ್ತದೆ. ದೇಶಗಳು ಆಕೆಯ ಗರ್ಭದಲ್ಲಿ ಸಮಾದಿಯಾಗುತ್ತವೆ. ಪ್ರಳಯ ಎಂಬುದು ದೇವಾನು ದೇವತೆಗಳ ಶಾಪವಲ್ಲ. ವರ್ಷಾನುಗಟ್ಟಲೆಯಿಂದ ಮಾನವ ನಿಸರ್ಗದ ಮೇಲೆ ನಡೆಸಿದ ಅತ್ಯಾಚಾರಗಳ ಪ್ರತಿಫಲ.
ಅಂಥ ಅಪಾಯದ ಕರೆಗಂಟೆ ಈಗಾಗಲೇ ದೂರದ ಜಪಾನ್‌ನಲ್ಲಿ ಮೊಳಗಿದೆ. ಐದು ವರ್ಷಗಳ ಹಿಂದೆ ನಮ್ಮ ರಾಷ್ಟ್ರಕ್ಕೂ ತಟ್ಟಿತ್ತು. ಇಷ್ಟಾದರೂ ನಾವು ಎಚ್ಚೆತ್ತುಕೊಳ್ಳದಿದ್ದರೆ, ಅಪಾಯ ಖಚಿತ.
ಹಾಗಾದರೆ ನಾವೇನು ಮಾಡಬಹುದು ?
ಇರುವುದೊಂದೇ ಭೂಮಿ, ಉಳಿಸುವುದೊಂದೇ ನಮ್ಮ ಜವಾಬ್ದಾರಿ! ಇಷ್ಟೆಲ್ಲ ಅನಾಹುತಗಳ ಸುನಾಮಿಯನ್ನು ಎದುರಿಸುವುದು ಹೇಗೆಂದು ಯೋಚಿಸುತ್ತಿದ್ದೀರಾ? ಚಿಂತಿಸಬೇಡಿ. ಅದಕ್ಕೆ ಬೇಕಾದಷ್ಟು ಮಾರ್ಗಗಳಿವೆ. ಮೊದಲಿಗೆ ಪರಿಸರ ಉಳಿಸಲು ಪ್ರತಿಯೊಬ್ಬರೂ ಕಂಕಣ ಬದ್ಧರಾಗಿ. ನಿತ್ಯ ಪರಿಸರಕ್ಕೆ ಹಾನಿಯಾಗದಂತಹ ಹೆಜ್ಜೆಗಳನ್ನಿಡುತ್ತೇನೆಂದು ಸಂಕಲ್ಪ ಮಾಡಿ. ಅದರಂತೆ ಕಾರ್ಯಕ್ರಮ ರೂಪಿಸಿ. ಪರಿಸರ ಉಳಿದರೆ ಭೂಮಿ ಉಳಿದೀತು. ಭೂಮಿ ಉಳಿದರೆ ನಾವು ಉಳಿಯುತ್ತೇವೆ. ಈ ಕಾರ್ಯ ಒಬ್ಬರಿಂದ ಸಾಧ್ಯವಿಲ್ಲ. ಅದಕ್ಕಾಗಿ ಮೊದಲು ನೀವು ಹೆಜ್ಜೆ ಇಡಿ, ನಂತರ ನಿಮ್ಮೊಡನಿರುವವರನ್ನೂ ಕೈಹಿಡಿದು ಕರೆತನ್ನಿ.
ಏಪ್ರಿಲ್ 22, ವಿಶ್ವ ಭೂಮಿ ದಿನಾಚರಣೆ
‘ಭೂಮಿ ರಕ್ಷಣೆ’ಗಾಗಿ ಹಲವಾರು ಸಂಘಟನೆಗಳು ವಿಶ್ವದಾದ್ಯಂತ ಹೋರಾಟ ನಡೆಸುತ್ತಿವೆ. ಜನ-ಜಾಗೃತಿ ಮೂಡಿಸುತ್ತಿವೆ. ಅಮೆರಿಕದ ಸೆನೆಟರ್ ಗೆರಾಯ್ಡಿ ನೆಲ್ಸನ್ 1972ರ ಏಪ್ರಿಲ್ 22ರಂದು ಭೂಮಿ ಸಂರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ‘ವಿಶ್ವ ಭೂಮಿ ದಿನ’ ಆರಂಭಿಸಿದ. ದಶಕಗಳ ಕಾಲ ಅಮೆರಿಕಕ್ಕೆ ಸೀಮಿತವಾಗಿದ್ದ ಈ ‘ದಿನ’ 1990ರಲ್ಲಿ ವಿಶ್ವದ 141ರಾಷ್ಟ್ರಗಳಿಗೆ ವಿಸ್ತರಿಸಿತು.
ಬೆಂಗಳೂರಲ್ಲಿ…
ಕಳೆದ ಮೂರು ವರ್ಷಗಳಿಂದ ‘ವಿಶ್ವ ಭೂಮಿ ದಿನವನ್ನು’ ಕರ್ನಾಟಕದಲ್ಲೂ ಆಚರಿಸಲಾಗುತ್ತಿದೆ. ಈ ಬಾರಿ ಶುಕ್ರವಾರ ಡಾಲರ್ಸ್ ಕಾಲೊನಿಯಲ್ಲಿರುವ ಗ್ರೀನ್ ಪಾತ್ ಎಕೋ ಫೌಂಡೇಷನ್ ಸಂಸ್ಥೆ ನಾಯಕತ್ವದಲ್ಲಿ, ಬಿಸಿಐಎಲ್, ಪ್ರಿಸ್ಟೀನ್, ಡೈಲಿ ಡಂಪ್, ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆ, ಧಾನ್ಯ ಸೇರಿ ಹದಿನಾರು ಸಂಘಟನೆಗಳು ‘ವಿಶ್ವ ಭೂಮಿ ದಿನ’ ವಿಭಿನ್ನವಾಗಿ ಆಚರಿಸುತ್ತಿವೆ.
‘ರಾಗಿ ಆಹಾರ ಮೇಳ ಮತ್ತು ಸಾವಯವ ಸಂತೆ’ ಎಂಬ ವಿಷಯದೊಂದಿಗೆ ವಿವಿಧ ಬಗೆಯ ರಾಗಿಯ ತಿನಿಸುಗಳನ್ನು ಪ್ರದರ್ಶನವಿದೆ. ಪರಿಸರ ಕುರಿತ ವಿಚಾರ ವಿನಿಮಯ, ಸಾವಯವ ಊಟ, ಜೊತೆಗೆ ಜಾನಪದ ತಂಡಗಳೊಂದಿಗೆ ‘ಗೋ ಗ್ರೀನ್ ನಡಿಗೆ’ಯಿದೆ ಎನ್ನುತ್ತಾರೆ ಗ್ರೀನ್‌ಪಾತ್ ಫೌಂಡೇಷನ್ ಅಧ್ಯಕ್ಷ ಎಚ್.ಆರ್.ಜಯರಾಮ್.
ಕಾರ್ಯಕ್ರಮದಲ್ಲಿ ಭೂಮಿ ತಾಯಿಯ ಪ್ರೀತಿಗೆ ಅಕ್ಷರ ರೂಪ ಕೊಟ್ಟ ಸಾಹಿತಿ ಎಸ್.ಜಿ.ಸಿದ್ಧರಾಮಯ್ಯ, ನಾಡೋಜ ಕೃಷಿಕ ನಾರಾಯಣರೆಡ್ಡಿ, ಪರಿಸರ ತಜ್ಞ ಹರಿಹರನ್ ಚಂದ್ರಶೇಖರ್ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸುತ್ತಾರೆ. ಸ್ಥಳ: ದಿ ಗ್ರೀನ್ ಪಾತ್ ಎಕೋ ಫೌಂಡೇಷನ್, 348, ಡಾಲರ್ಸ್ ಕಾಲೊನಿ, ಆರ್‌ಎಂವಿ ಕ್ಲಬ್ ರಸ್ತೆ, ಆರ್‌ಎಂವಿ 2ನೇ ಹಂತ. ಬೆಳಿಗ್ಗೆ 10.30. ಮಾಹಿತಿಗೆ: 4160 6003, 4266 4777.
ಭೂಮಿ ರಕ್ಷಣೆಗೆ ಒಂದಿಷ್ಟು ಟಿಪ್ಸ್
- ಭೂಮಿ ಸಂರಕ್ಷಣೆಗಾಗಿ ದೊಡ್ಡ ದೊಡ್ಡ ಸೆಮಿನಾರ್ ನಡೆಸಬೇಕಿಲ್ಲ. ಪಂಚತಾರಾ ಹೋಟಲಿನಲ್ಲಿ ಕುಳಿತು ಭಾಷಣವೂ ಅಗತ್ಯವಿಲ್ಲ. ನಮ್ಮ ಬದುಕಿನಲ್ಲಿ ಯಾವ ಅಳಿಲುಸೇವೆಯನ್ನು ಮಾಡಬಹುದು ಎಂಬುದನ್ನು ಚಿಂತಿಸಿ. ಈ ಸಲಹೆಗಳನ್ನೂ ಪರಿಶೀಲಿಸಬಹುದು.

- ಎಲ್ಲಾದರೂ ಒಂದು ಗಿಡ ನೆಡಿ. ಅದನ್ನು ಪೋಷಿಸಿ. ನೀವು ಗಿಡ ನೆಟ್ಟರೆ ಸಾಲದು. ನಿಮ್ಮ ಅಕ್ಕಪಕ್ಕದವರನ್ನೂ ಪ್ರೇರೇಪಿಸಿ. ಶಾಲೆಯಲ್ಲಿ ಪ್ರತಿ ಮಗುವಿನ ಕೈಯಲ್ಲೂ ಒಂದು ಗಿಡವನ್ನು ನೆಡಿಸಿ. ಆ ಗಿಡಕ್ಕೆ ಅದರ ಹೆಸರಿಡಿ. ಆ ಗಿಡಕ್ಕೆ ನೀರು, ಗೊಬ್ಬರ, ಆರೈಕೆ ಪೋಷಣೆ ಜವಾಬ್ದಾರಿ ಕೊಡಿ. ಗಿಡದ ಬೆಳವಣಿಗೆಯನ್ನು ಸಾಧ್ಯವಾದರೆ ವಿವರಿಸಿ. ಎಲ್ಲಾ ಶಾಲೆಗಳಲ್ಲೂ ಈ ವಿಧಾನ ಅನುಸರಿಸಿ.
- ಕಸ ವಿಲೇವಾರಿಯಲ್ಲಿ ಜಾಗೃತಿ ವಹಿಸಿ. ನಿತ್ಯ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಿ. ಮಣ್ಣಲ್ಲಿ ಮಣ್ಣಾಗುವ ಉತ್ಪನ್ನಗಳನ್ನು ಬಳಸಿ. ನೀರು ಬಳಕೆಯಲ್ಲಿ ಜಾಗೃತಿ ಇರಲಿ. ನೀರು ಪೋಲಾಗುವುದನ್ನು ತಪ್ಪಿಸಿದರೆ ಅದಕ್ಕಿಂತ ದೊಡ್ಡ ಪರಿಸರ ಸಂರಕ್ಷಣೆ ಕೆಲಸ ಇನ್ನೊಂದಿಲ್ಲ.
- ಪ್ರತಿಯೊಂದು ವಸ್ತುಗಳ ಮರುಬಳಕೆ ಮಾಡುವ ಚಿಂತನೆ ನಡೆಸಿ. ಕಚೇರಿಯಲ್ಲಿ ಕಾಗದ ಮರುಬಳಕೆಯಾಗಲಿ.
- ವಿದ್ಯುತ್ ಬಳಕೆ ಮಿತವಾಗಿರಲಿ. ಪ್ರಕೃತಿದತ್ತವಾದ ಸೂರ್ಯನ ಬೆಳಕನ್ನೇ ಬಳಸಲು ಪ್ರಯತ್ನಿಸಿ. ಬುರುಡೆ ಬಲ್ಬ್ ಬದಲು ಸಿಎಫ್‌ಎಲ್, ಎಲ್‌ಇಡಿ ಬಳಸಿ. ಇವು ದುಬಾರಿ. ನಿಜ. ಆದರೆ ಹೆಚ್ಚು ಬಾಳಿಕೆ ಬರುತ್ತವೆ ಹಾಗೂ ಕಡಿಮೆ ವಿದ್ಯುತ್ತನ್ನು ಬಳಸಿಕೊಳ್ಳುತ್ತವೆ. ಒಟ್ಟಾರೆ ಲೆಕ್ಕಾಚಾರದಲ್ಲಿ ಲಾಭದಾಯಕ.
- ಒಂದು ಶಾಂಪೂ, ಒಂದು ಬಟ್ಟೆ ಒಗೆಯುವ ಸೋಪು ನಿಮ್ಮೂರಿನ ಜಲಮೂಲಗಳನ್ನೆಲ್ಲ ಮಲಿನಗೊಳಿಸುತ್ತವೆ. ಜಲಚರಗಳು ಸಾವನ್ನಪ್ಪುತ್ತವೆ. ಪರೋಕ್ಷವಾಗಿ ಅವುಗಳ ಸಾವಿಗೆ ನೀವು ಹೊಣೆಯಾಗುತ್ತೀರಿ. ಶಾಂಪೂ, ಸೋಪು ಬದಲಿಗೆ ಸೀಗೆಪುಡಿ ಅಂಟುವಾಳಕಾಯಿ ಬಳಸಿ.
- ಸಂಚಾರ ವಾಹನಗಳ ಬಳಕೆಯಲ್ಲೂ ಮಾರ್ಪಾಡು ಮಾಡಬಹುದು. ವಿದ್ಯುತ್ ಬ್ಯಾಟರಿ ಚಾಲಿತ ವಾಹನಗಳನ್ನು ಬಳಸಬಹುದು. ಕಾರ್-ಪೂಲಿಂಗ್ ಬಗ್ಗೆ ಆಲೋಚಿಸಬಹುದು. ಅನಿವಾರ್ಯ ಎಂಬ ಸಂದರ್ಭಗಳನ್ನು ಬಿಟ್ಟು ಉಳಿದ ಸಮಯದಲ್ಲಿ ಸಾರ್ವಜನಿಕ ಸಂಚಾರ ಸಾಧನವಾದ ಬಸ್‌ನಲ್ಲಿ ಪಯಣಿಸಬಹುದು.
- ಸಿಗ್ನಲ್ ಇರುವ ಕಡೆ ವಾಹನಗಳು, ಅದರಲಿಯ್ಲೂ ಬೈಕುಗಳನ್ನು ಆಫ್ ಮಾಡಿ. ಇದರಿಂದ ಹೊಗೆ ಉಗುಳುವುದು ನಿಲ್ಲುತ್ತದೆ. ಇಂಧನ ಉಳಿಯುತ್ತದೆ.
- ಕಚೇರಿಯಲ್ಲಿ ಪದೇ ಪದೇ ಕಾಫಿ/ ಚಹಾ ಕುಡಿಯುವಾಗ ಪಿಂಗಾಣಿ ಕಾಫಿ ಕಪ್ಪನ್ನು ಇಟ್ಟುಕೊಳ್ಳಿ. ಕಾಫಿ ಕುಡಿದಾದ ಮೇಲೆ ತೊಳೆದು ಮತ್ತೆ ಅದನ್ನು ಉಪಯೋಗಿಸಿ. ಪ್ಲಾಸ್ಟಿಕ್, ಕಾಗದದ ಕಪ್ ಬಳಸದಿರಲು ಇದು ಸುಲಭ ಮಾರ್ಗ.
- ಕಂಪ್ಯೂಟರ್, ದೀಪ, ಮಾನಿಟರ್, ಪ್ರಿಂಟರ್, ಸ್ಪೀಕರ್, ಫ್ಯಾನ್ ಇತ್ಯಾದಿಗಳನ್ನು ಹಿತ-ಮಿತವಾಗಿ ಬಳಸಿ. ಮನೆಗೆ ಹೋಗುವಾಗ ಎಲ್ಲವನ್ನೂ ಸ್ವಿಚ್-ಆಫ್ ಮಾಡಿ. ಇದರಿಂದ ಕಂಪೆನಿಗೆ ಲಾಭ ಎಂದುಕೊಳ್ಳಬೇಡಿ. ಪ್ರಕೃತಿಗೆ ನೀವು ಸಲ್ಲಿಸುವ ದೊಡ್ಡ ಸೇವೆ ಎಂದುಕೊಳ್ಳಿ.