ಬಹುಭಾಷಾ ನಟ ಪ್ರಕಾಶ್ ರೈ ನನಗೆ ಹೀಗೆ ನೆನಪಾದರು

ಬಹುಭಾಷಾ ನಟ ಪ್ರಕಾಶ್ ರೈ ನನಗೆ ಹೀಗೆ ನೆನಪಾದರು

ಆ ಕಡೆಯಿಂದ: ………… ’ನಾನು ಪ್ರಕಾಶ್ ರೈ ಮಾತಾಡ್ತಿರೋದು..’
ಈ ಕಡೆಯಿಂದ:……..‘ಕೇಳಿಸುತ್ತಿಲ್ಲ.. ಇನ್ನೊಮ್ಮೆ ಹೇಳಿ..’
‘ನಾನು ಪ್ರಕಾಶ್ ರೈ.. ಶ್ರೀಕಂಠ ಅವರಲ್ಲವಾ..’ –
ಅರೆ ಹೌದು ಪ್ರಕಾಶ್ ರೈ ವಾಯ್ಸ್.. ‘ಓಹೋ ಹೇಳಿ ಸರ್.. ಎಂಥ ಸರ್ಪ್ರೈಸ್ ಕೊಟ್ಟಿರಿ.. ನೀವು ಕರೆ ಮಾಡ್ತೀರಾ ಎಂದು ಊಹಿಸಿರಲಿಲ್ಲ. ಆಶ್ಚರ್ಯವಾಯಿತು’ ಎಂದು ಒಂದೇ ಉಸಿರಿಗೆ ಮಾತನಾಡಿದೆ.

****

ಹೀಗೆ ಒಮ್ಮೆ ಪ್ರಕಾಶ್ ರೈ ನನಗೆ ಕರೆ ಮಾಡಿ ಮಾತನಾಡಿದಾಗ, ಕ್ಷಣ ಥ್ರಿಲ್ ಆಗಿದ್ದೆ. ಅದು ಕರೆ ಮಾಡಿದ್ದಕ್ಕಲ್ಲ, ಒಂದು ಸಣ್ಣ ವಿಚಾರಕ್ಕೆ ದೊಡ್ಡ ಸ್ಟಾರ್ ನಟ ಇಷ್ಟು ಬೇಗ ಸ್ಪಂದಿಸಿದರಲ್ಲಾ ಎಂದು !

ಅಂದು ‘ನಾನು ನನ್ನ ಕನಸು’ ಚಿತ್ರ ನೋಡಿದ್ದೆ. ಚಿತ್ರಕಥೆ, ನವಿರಾದ ಸಂಭಾಷಣೆ, ಪಾತ್ರಗಳ ನಡುವಿನ ಭಾವನಾತ್ಮಕ ಸನ್ನಿವೇಶಗಳು, ಎಲ್ಲದಕ್ಕಿಂತ ಮುಖ್ಯವಾಗಿ ರೈ ನಟನೆ, ಅಚ್ಯುತಕುಮಾರ್ ಪಾತ್ರ.. ಎಲ್ಲವೂ ಸಿಕ್ಕಾಪಟ್ಟೆ ಇಷ್ಟವಾಗಿತ್ತು. ಇಡೀ ದಿನ ಚಿತ್ರದ ಸನ್ನಿವೇಶಗಳನ್ನೇ ಮೆಲಕು ಹಾಕುತ್ತಿದ್ದಾಗ ಗೆಳೆಯ ವಿನೋದ್ ಕುಮಾರ್ ನಾಯಕ್ ಕರೆ ಮಾಡಿದ. ಅವನೊಟ್ಟಿಗೆ ‘ಹುಲಿ ಸಂರಕ್ಷಣಾ ಅಭಿಯಾನ’ದಲ್ಲಿ ರೈ ಪಾಲ್ಗೊಂಡಿದರ ಬಗ್ಗೆ ನೆನಪಿಸಿಕೊಳ್ಳುತ್ತಾ, ‘ನಾನು ನನ್ನ ಕನಸು’ ಸಿನಿಮಾ ಬಗ್ಗೆ ಪ್ರಶಂಸೆ ಮಾಡಿದೆ. ‘ರೈ’ ಗೊಂದು ‘ಅಭಿನಂದನೆ ತಿಳಿಸು ಗೆಳೆಯಾ’ ಎಂದು ವಿನೋದ್‌ಗೆ ಹೇಳಿದೆ. ಬಹುಶಃ ಈ ವಿಷಯವನ್ನು ವಿನೋದ್ ಅವರಿಗೆ ತಿಳಿಸಿರಬೇಕು ಅನ್ನಿಸುತ್ತೆ, ಈ ಮಾತುಕತೆಯ ಮಾರನೆಯ ದಿನವೇ ಪ್ರಕಾಶ್ ರೈ ನನಗೆ ಕರೆ ಮಾಡಿ, ಅಚ್ಚರಿ ಮೂಡಿಸಿದರು !
ಸಿನಿಮಾ ನನಗೆ ಪ್ಯಾಷನ್. ಆದರೆ, ಆ ಕ್ಷೇತ್ರದೊಟ್ಟಿಗಿನ ಸಂಪರ್ಕ ಕಡಿಮೆ. ಆದರೂ ರೈ ಕರೆ ಮಾಡಿದಾಗ ಸಹಜವಾಗಿ ಖುಷಿಯಾಯಿತು. ಅವರೊಂದಿಗೆ ಸಿನಿಮಾ ಕಥೆ, ನಮ್ಮ ಹುಡುಗ ಅಚ್ಯುತ ಕುಮಾರ್ ಪಾತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದೆ. ರೈ ಕೂಡ ‘ಅಚ್ಯುತ ಅದ್ಭುತ ಪ್ರತಿಭೆ, ಕಲಾವಿದರು’ ಎಂದೆಲ್ಲ ಪ್ರಶಂಸಿದರು. ಎರಡೇ ನಿಮಿಷಕ್ಕೆ ಮುಗಿದ ಅವರ ಸಿನಿಮಾ ಮಾತು, ನಂತರ ಒಕ್ಕಲುತನದ ವಿಚಾರದತ್ತ ಹೊರಳಿತು.
‘ಹೈದರಾಬಾದ್ ಸಮೀಪ ತೋಟ ಮಾಡ್ತಿದ್ದೇನೆ. ನಿಮ್ಮಲ್ಲಿ ಒಳ್ಳೆಯ ದಾಳಿಂಬೆ ಸಸಿ ಸಿಗುತ್ತಂತೆ. ಚೆನ್ನಾಗಿರೋ ಸಸಿ ಕೊಡಿಸುತ್ತೀರಾ’ ಎಂದು ಕೇಳಿದರು ರೈ ! ಒಮ್ಮೆ ತೋಟಕ್ಕೆ ಬನ್ನಿ ಎಂದು ಆಹ್ವಾನಿಸಿದರು.
ಆ ಮಾತು ಕೇಳಿ ತುಂಬಾ ಖುಷಿಯಾಯಿತು. ಅಲ್ಲಿವರೆಗೆ ರೈ ಅವರನ್ನು ಒಬ್ಬ ಪ್ರತಿಭಾವಂತ ನಟ, ಸಾಮಾಜಿಕ ಚಿಂತಕ ಮಾತ್ರ ಎಂದುಕೊಂಡಿದ್ದೆ. ಅವರ ಭೇಟಿಯ ನಂತರ ‘ಅವರಲ್ಲೊಬ್ಬ ಕೃಷಿಕನೂ ಇದ್ದಾನೆ’ ಎಂದು ಅರ್ಥವಾಯಿತು. ಅವರೊಟ್ಟಿಗಿನ ಸಂಭಾಷಣೆಯಿಂದ ಒಟ್ಟು ಅರ್ಥವಾಗಿದ್ದು, ಅವರು ಎಲ್ಲೇ ಮಾತನಾಡಿದರೂ ತುಂಬಾ ಗಂಭೀರವಾಗಿ, ಜಬಾಬ್ದಾರಿಯಾಗಿ, ಮಾತನಾಡುತ್ತಾರೆಂದು…!