‘ಸಿರಿಮನೆ’ಯ ಸೌಂದರ್ಯ

ಶೃಂಗೇರಿಯಿಂದ 17 ಕಿ.ಮೀ ದೂರದಲ್ಲಿರುವ ‘ಸಿರಿಮನೆ’ ಜಲಪಾತ ವರ್ಷಪೂರ್ತಿ ಧುಮ್ಮಿಕ್ಕಿ ಹರಿಯುತ್ತದೆ. ಧುಮ್ಮಿಕ್ಕಿ ಹರಿಯುವ ಜಲಧಾರೆಗೆ ಮೈಯೊಡ್ಡಿದರೆ ಅದರ ಆನಂದ ಅನುಭವಿಸಿದವನೇ ಬಲ್ಲ.  ಮೊನ್ನೆ ಇದೇ ಜಲಪಾತ ವೀಕ್ಷಣೆಗೆ ಕುಟುಂಬ ಸಮೇತ ಭೇಟಿ ನೀಡಿದೆ. ಒಂದೂವರೆ ಗಂಟೆಗಳ ಕಾಲ ಜಲಪಾತದ ಸೌಂದರ್ಯವನ್ನು ಕಣ್ತುಂಬಿಕೊಂಡೆ. ಗೆಳೆಯರಿಗೂ ಹಂಚೋಣವೆಂದು ಕ್ಯಾಮೆರಾದಲ್ಲಿ ಆ ಸೌಂದರ್ಯವನ್ನು ಸೆರೆ ಹಿಡಿದಿದ್ದೇನೆ.

'ಸಿರಿಮನೆ' ಜಲಪಾತಕ್ಕೆ ಹೋಗುವ ಹಾದಿ
ಧುಮ್ಮಿಕ್ಕಿ ಹರಿಯುವ ಜಲಧಾರೆಯಲ್ಲೋ...
ಗಿಡಗಳ ಮರೆಯಿಂದ ಕಂಡ ಸೊಬಗು
ಹಾಲ್ನೊರೆಯಂತಹ ಸೊಬಗು
ಇದೇ ಸಿರಿಮನೆ ಜಲಪಾತದ ಸೌಂದರ್ಯದ ಮೂಲ.

ಪಶ್ಚಿಮಘಟ್ಟಗಳ ಜಲಪಾತಗಳಪಟ್ಟಿಯಲ್ಲಿ ಸಿರಿಮನೆ ಜಲಪಾತಕ್ಕೂ ಸ್ಥಾನವಿದೆ. ಸಿರಿಮನೆ – ಮನೆತನದ ಹೆಸರು. ಜಲಪಾತದ ಸಮೀಪ ಈ ಮನೆತನದ ಹನ್ನೊಂದು ಮನೆಗಳಿವೆ. ಹಾಗಾಗಿ ಈ ಜಲಪಾತಕ್ಕೆ ‘ಸಿರಿಮನೆ’ ಎಂಬ ಹೆಸರಿದೆ.

ತಲುಪುವ ಬಗೆ:

ಶೃಂಗೇರಿಯಿಂದ ಕಿಗ್ಗ ಮಾರ್ಗವಾಗಿ ಸಿರಿಮನೆ ಜಲಪಾತ ತಲುಪಬಹುದು. ಬಸ್ಸುಗಳ ಸಂಖ್ಯೆ ವಿರಳ. ಕಿಗ್ಗ ವರೆಗೂ ಬಸ್ ಸೌಲಭ್ಯವಿದೆ. ನಂತರ ‘ನಟರಾಜಾ ಮೋಟಾರ್ ಸರ್ವೀಸ್’ ಅಂದರೆ ಕಾಲ್ನೆಡಿಗೆಯನ್ನೇ ಆಶ್ರಯಿಸಬೇಕು. ಸ್ವಂತ ವಾಹನವಿದ್ದರೆ ಆಯಾಸವಿಲ್ಲದ ಪ್ರವಾಸ.

ಪುಟ್ಟದಾದ ಜಲಪಾತವಾದರೂ, ಮಕ್ಕಳಿಗೆ ಇಷ್ಟವಾಗುವ ಸ್ಥಳ. ಏಕೆಂದರೆ ಆಳವಾದ ನೀರಿನಲ್ಲ. ಕೊಚ್ಚಿ ಹೋಗುವಷ್ಟು ರಭಸವೂ ಅಲ್ಲ.  ದೊಡ್ಡವರಿಗೆ ದೊಡ್ಡದಾದ ಜಲಧಾರೆ, ಮಕ್ಕಳಿಗೆ ಪುಟ್ಟ ಜಲಧಾರೆ.  ಒಂದು ಅಪಾಯವೆಂದರೆ, ಪಾಚಿಕಟ್ಟಿರುವ ಕಲ್ಲುಗಳು. ಕಾಲಿಡುವಾಗ ಎಚ್ಚರವಿರದಿದ್ದರೆ ಮೈ ಮೂಳೆ ಮುರಿಯುವುದು ಖಚಿತ. ಇದೊಂದು ಎಚ್ಚರಿಕೆಯಿದ್ದರೆ ಉಳಿದಿದ್ದೆಲ್ಲ ಸುಸೂತ್ರ.

ಮಳೆಗಾಲ ಮುಗಿದ ಕೂಡಲೇ ಜಲಪಾತ ನೋಡಲು ಹೊರಡಬೇಕು. ಆಗ ಸಿರಿಮನೆ ಜಲಪಾತದ ಜೊತೆಗೆ ಮೈತೊಳೆದುಕೊಂಡ ನಿಂತ ಪಶ್ಚಿಮಘಟ್ಟಗಳ ಸಾಲು, ಭತ್ತದ ಗದ್ದೆಗಳಲ್ಲಿ ನಾಟಿಯ ಸಂಭ್ರಮ, ಮರಗಳಲ್ಲಿ ತೊಟ್ಟಿಕ್ಕುವ ಹನಿಗಳು.. ಎಳೆ ಬಿಸಿಲನ ಅಹ್ಲಾದಕರ ವಾತಾವರಣ ಇವೆಲ್ಲ ಬೋನಸ್…

ಮತ್ತೊಂದು ವಿಶೇಷ:

ಹೀಗೆ ಧುಮ್ಮಿಕ್ಕಿ ಹರಿಯುವ ಜಲಧಾರೆಗೆ ಟರ್ಬನ್ ಅಳವಡಿಸಿ ವಿದ್ಯುತ್ ತಯಾರಿಸುತ್ತಾರೆ. (ಹೈಡ್ರೋ ಎಲೆಕ್ಟ್ರಿಕ್).  ಸಿರಿಮನೆಯ ಹನ್ನೊಂದು ಮನೆಗಳಿಗೆ ಈ ವಿದ್ಯುತ್ ಬಳಕೆಯಾಗುತ್ತಿದೆ. ಅಚ್ಹುತ ರಾವ್ ಎಂಬುವವರ ನಾಯಕತ್ವದಲ್ಲಿ ಇದು ಚಾಲ್ತಿಯಲ್ಲಿದೆ. ಕಳೆದ ಹದಿನಾರು ವರ್ಷಗಳಿಂದ ಜಲವಿದ್ಯುತ್  ಉತ್ಪಾದನೆಯಾಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ಅರಣ್ಯ ಇಲಾಖೆ ಈ ಜಲಪಾತದ  ಉಸ್ತುವಾರಿ ನೋಡಿಕೊಳ್ಳುತ್ತಿದೆ.

ಬೇಸರದ ಸಂಗತಿ:

ಬಹಳ ಬೇಸರದ ಸಂಗತಿ ಎಂದರೆ, ಇಂಥ ಅದ್ಭುತ ರಮಣೀಯ ಸ್ಥಳವನ್ನು ಪ್ರವಾಸಿಗರು ಪ್ಲಾಸ್ಟಿಕ್ ತ್ಯಾಜ್ಯಗಳಿಂದ ಮಲಿನಗೊಳಿಸಿದ್ದಾರೆ. ಬೀಡಿ-ಸಿಗರೇಟು, ಜರ್ದಾ ಪ್ಯಾಕೆಟ್ಟು.. ಹೀಗೆ ಹೊಲಸೆಂದು ಹೇಳುವ ಎಲ್ಲ ವಸ್ತುಗಳೂ ಅಲ್ಲಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದಿವೆ.  ‘ಕಸ ಹಾಕಬೇಡಿ’ ಎಂಬ ನಾಮಫಲಕಗಳಿದ್ದರೂ ಅದನ್ನು ಓದಿ ಅನುಸರಿಸುವವರ ಸಂಖ್ಯೆ ತೀರಾ ವಿರಳವಾಗಿದೆ.

ಸಿರಿಮನೆಗೆ ಹೊರಟಿದ್ದು…

ಸಿರಿಮನೆ ಹೆಸರು ಕೇಳಿದ್ದೆ. ಆದರೆ ನೋಡಲು ಸಾಧ್ಯವಾಗಿರಲಿಲ್ಲ.  ಈ ಬಾರಿ ಶೃಂಗೇರಿಯಲ್ಲಿ  ಇಂದ್ರಾ ಹಾಗೂ ಚಂದ್ರಶೇಖರ್  ದಂಪತಿ ಪರಿಚಯವಾಯ್ತು. ಅವರು ನಮ್ಮ ಸಂಬಂಧಿಯೂ ಹೌದು.  ಹೀಗೆ ಮಾತಿಗೆ ಕುಳಿತಾಗ ಸಿರಿಮನೆಯ ವೃತ್ತಾಂತ ವಿವರಿಸಿದರು. ಋಷ್ಯಶೃಂಗ ಪರ್ವತ, ನರಸಿಂಹ ಪರ್ವತಗಳ ಹಿಂದಿನ ಪುರಾಣ ಕಥೆಗಳನ್ನು ಹೇಳಿದರು.  ಕಥೆ ಕೇಳಿ ಖುಷಿಯಾಯ್ತು. ಸಂಜೆ ಜಲಪಾತ ನೋಡವ ಯೋಜನೆ ಸಿದ್ಧವಾಯಿತು. ಅವರ ಜೊತೆಯಲ್ಲೇ ಜಲಪಾತಕ್ಕೆ ಹೊರಟೆವು. ಇಂಥದ್ದೊಂದು ಪ್ರಕೃತಿ ಸಿರಿಯನ್ನು ಪರಿಚಯರಿಸಿದ ಇಂದ್ರಾ-ಚಂದ್ರಶೇಖರ್ ದಂಪತಿಗೆ ನಾವೆಂದೂ ಅಭಾರಿಯಾಗಿದ್ದೇವೆ.