‘ನಮ್ಮೂರು ಕೆರೆ ತುಂಬಿದರೆ ಸುತ್ತ ಇಪ್ಪತ್ತೈದು ಬಾವಿಗಳಲ್ಲಿ ಸದಾ ನೀರು ಜಿನುಗುತ್ತಿತ್ತು. ಗದ್ದೆಯಲ್ಲಿ ಭತ್ತದ ಪೈರು, ಪಕ್ಕದಲ್ಲಿ ಕಬ್ಬಿನ ಬೆಳೆ, ಸಮೀಪದಲ್ಲೇ ಆಲೆಮನೆ ಹಾಕಿ ಹುಂರ್ಗಡಿ ಬೆಲ್ಲ ಮಾಡ್ತಿದ್ವಿ. ಇದು ಕಥೆ ಅಲ್ಲ, 35 ವರ್ಷಗಳ ಹಿಂದೆ ಊರಲ್ಲಿ ಹಿಂಗೇ ನಡೀತಿತ್ತು. ಇವತ್ತಿಗೂ ನಮ್ಮೂರಲ್ಲಿ ಅಂದು ಕಬ್ಬು ಬೆಳೆದವರು, ಬೆಲ್ಲ ಮಾಡ್ದವರು ಇದ್ದಾರೆ…’
ತಾಲ್ಲೂಕಿನ ಭರಮಸಗಾರ ಸಮೀಪದ ಎಮ್ಮೆಹಟ್ಟಿ ಕೆರೆಯ ಇತಿಹಾಸವನ್ನು ಊರಿನ ಹಿರಿಯ ಸುಂಕದಕಲ್ಲು ತಿಪ್ಪಣ್ಣ ಹಂಪಿಯ ಗತವೈಭವದಂತೆ ಮೆಲುಕು ಹಾಕುತ್ತಾರೆ. ಆದರೆ, 90ರ ದಶಕದಿಂದೀಚೆಗೆ ಕೆರೆಗೆ ನೀರು ಹರಿಯುವುದು ಕಡಿಮೆಯಾದ ಮೇಲೆ, ಬಾವಿಗಳು ಮುಚ್ಚಿಹೋಗಿವೆ. ಕಬ್ಬು, ಭತ್ತ, ಶೇಂಗಾ, ಜೋಳದ ಕೃಷಿ ನಿಂತು ಹೋಗಿರುವುದಕ್ಕೆ ಬೇಸರ ವ್ಯಕ್ತಪಡಿಸುತ್ತಾರೆ. ಸದ್ಯ ಈಗ ಎಮ್ಮೆಹಟ್ಟಿಯಲ್ಲಿ ಕೊಳವೆಬಾವಿಗಳ ಆಶ್ರಯದಲ್ಲಿ ಸೊಪ್ಪು, ತರಕಾರಿ, ಎಲೆಬಳ್ಳಿ, ಮುಸುಕಿನ ಜೋಳ ಬೆಳೆಯುತ್ತಿರುವುದನ್ನು ಅವರು ಉಲ್ಲೇಖಿಸುತ್ತಾರೆ.
ಚಿಕ್ಕ ಕೆರೆ, ಚೊಕ್ಕ ಅಚ್ಚುಕಟ್ಟು: ಭರಮಸಾಗರದಿಂದ ನಾಲ್ಕು ಕಿ.ಮೀ ದೂರದಲ್ಲಿ, ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದಲ್ಲಿರುವ ಎಮ್ಮೆಹಟ್ಟಿ ಕೆರೆಯ ನೀರು ಸಂಗ್ರಹಣಾ ಸಾಮರ್ಥ್ಯದ ವಿಸ್ತೀರ್ಣ 66 ಎಕರೆ. ಅಚ್ಚುಕಟ್ಟು ಪ್ರದೇಶ ಕೂಡ 75 ರಿಂದ 80 ಎಕರೆ. ನೀರ್ಥಡಿ ಬೆಟ್ಟ ಪ್ರದೇಶ, ಹಂಪನೂರು, ಹಳುವದರ ಸೇರಿದಂತೆ ನಾಲ್ಕೈದು ಕಿಲೋ ಮೀಟರ್ ವ್ಯಾಪ್ತಿಯ ಹಳ್ಳಿಗಳೇ ಈ ಕೆರೆಯ ಅಚ್ಚುಕಟ್ಟು ಪ್ರದೇಶ. ಅಲ್ಲಿ ಮಳೆ ಸುರಿದರೆ, ಈ ಕೆರೆಗೆ ಹಳ್ಳಗಳ ರೂಪದಲ್ಲಿ ನೀರು ಹರಿಯುತ್ತದೆ. ಈ ಕೆರೆ ತುಂಬಿ ಕೋಡಿ ಹರಿದರೆ, ಮುಂದೆ ಪಳಗೆರೆಕೆರೆ(ಬೇವಿನಹಳ್ಳಿ), ತುಪ್ಪದಹಳ್ಳಿ ಕೆರೆಗೆ ನೀರು ಹರಿಯುತ್ತದೆ. ಸುತ್ತಲಿನ ನಾಲ್ಕೈದು ಹಳ್ಳಿಗಳ ಅಂತರ್ಜಲ ಹೆಚ್ಚಾಗುತ್ತದೆ.
ಇತ್ತೀಚೆಗೆ ಕೆರೆ ತುಂಬಿಲ್ಲ : 1992 ಮತ್ತು 2000ನೇ ವರ್ಷದಲ್ಲಿ ಶೇ 80ರಷ್ಟು ಕೆರೆ ತುಂಬಿತ್ತು. ಆದರೆ ಕೋಡಿ ಹರಿದಿರಲಿಲ್ಲ. ಇದನ್ನು ಹೊರತುಪಡಿಸಿ, ಕೆರೆ ತುಂಬಿದ್ದನ್ನು ಕಂಡಿಲ್ಲ ಎನ್ನುತ್ತಾರೆ ಗ್ರಾಮದ ಹನುಮಂತಪ್ಪ. ಕೆರೆಗೆ ಮಳೆ ನೀರು ಹರಿಯುವ ಹಂಪನೂರು, ನೀರ್ಥಡಿ ಕಡೆಯ ಹಳ್ಳಗಳು ಒತ್ತುವರಿಯಾಗಿದ್ದು, ನೀರ್ಥಡಿ ಕಡೆಯಿಂದ ಕೆರೆಗೆ ನೀರು ಹರಿಸಲು ನಿರ್ಮಿಸಬೇಕಿದ್ದ ಫೀಡರ್ ಚಾನೆಲ್ ಅರ್ಧಕ್ಕೆ ನಿಂತಿದ್ದರಿಂದ, ಕೆರೆಗೆ ಸಮರ್ಪಕವಾಗಿ ಮಳೆ ನೀರು ಸೇರುವುದಿಲ್ಲ ಎನ್ನುತ್ತಾರೆ ಅವರು.
ಹೀಗೆ ಒಂದು ಕಡೆ ಮಳೆಯ ಪ್ರಮಾಣದಲ್ಲಿ ಏರುಪೇರು, ಮತ್ತೊಂದು ಕಡೆ ಸುರಿವ ಮಳೆ ನೀರು ಸರಿಯಾಗಿ ಕೆರೆ ಸೇರದ ಪರಿಣಾಮ, ಪ್ರತಿ ಮಳೆಗಾಲದಲ್ಲಿ ಎಷ್ಟು ಜೋರು ಮಳೆ ಸುರಿದರೂ, ಕೆರೆ ಭರ್ತಿಯಾಗುತ್ತಿಲ್ಲ.
ಕೆರೆ ನಿರ್ವಹಣೆ ಕೊರತೆ: ಎಮ್ಮೆಹಟ್ಟಿ ಕೆರೆ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಡುತ್ತದೆ. ಇಂಥದ್ದೊಂದು ವಾರಸುದಾರಿಕೆ ಹೊರತುಪಡಿಸಿದರೆ ಇಲಾಖೆಯಿಂದ ಕೆರೆ ನಿರ್ವಹಣೆ ಮಾಡಿದ ಉದಾಹರಣೆಗಳು ಇಲ್ಲ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ವೇಳೆ ಕೆರೆಗೆ ನೀರು ಹರಿಯುವ ದಾರಿಯನ್ನು ಕದಲಿಸಿದ್ದರಿಂದ, ಮಳೆ ನೀರು ಕೆರೆ ಸೇರುತ್ತಿಲ್ಲ. ಇನ್ನು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಸರ್ವೀಸ್ ರಸ್ತೆ ನಿರ್ಮಿಸುವಾಗ ಕೆರೆ ಅಂಗಳದ ಮೂರ್ನಾಲ್ಕು ಎಕರೆಯನ್ನು ಸ್ವಾಧೀನ ಮಾಡಿಕೊಂಡಿದ್ದಾರೆ. ಇದರಿಂದ ಕೆರೆಯ ನೀರು ಸಂಗ್ರಹಣಾ ಸಾಮರ್ಥ್ಯವೂ ಕಡಿಮೆಯಾಗಿದೆ. ಸರ್ವೀಸ್ ರಸ್ತೆ ಮಾಡಿದ ಮೇಲಾದರೂ, ಕೆರೆಗೆ ಮಳೆ ನೀರು ಹರಿಯುವ ಕಾಲುವೆಗಳನ್ನು ಮಾಡಿಕೊಡಲಿಲ್ಲ’ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಾರೆ.
ಕೆರೆಗೆ ನೀರು ತುಂಬಬೇಕಾದರೆ: ಕೆರೆಗೆ ಮಳೆ ನೀರು ಹರಿಯಬೇಕಾದರೆ ಹಂಪನೂರು ಫೀಡರ್ ಚಾನೆಲ್ ಕಾಮಗಾರಿ ಪೂರ್ಣಗೊಳ್ಳಬೇಕು. ಗ್ರಾಮದ ಮೇಲೆ ಹಾಗೂ ರಸ್ತೆಯ ಮೇಲೆ ಸುರಿಯ ಮಳೆ ನೀರು ಕೆರೆಗೆ ಸೇರುವಂತೆ ಹೆದ್ದಾರಿ ಪ್ರಾಧಿಕಾರದವರು ಕಾಲುವೆಗಳನ್ನು ನಿರ್ಮಿಸಬೇಕು. ಆಗ ಕೆರೆ ಮೊದಲಿನಂತಾಗುತ್ತದೆ.
ಕೆರೆಗೆ ನೀರು ಹರಿದರೆ, ಮತ್ತೆ ಎಮ್ಮೆಹಟ್ಟಿ ಗ್ರಾಮದ ಸುತ್ತ, ಕಬ್ಬು, ಭತ್ತ, ಶೇಂಗಾ ಕೃಷಿ ಗರಿಗೆದರುತ್ತದೆ. ಮತ್ತೆ ಆಲೆಮನೆ ವೈಭವ ಶುರುವಾಗಿ, ಹುಂಡಿ ಬೆಲ್ಲದ ತಯಾರಿಕೆಯನ್ನೂ ಕಾಣಬಹುದು ಎಂದು ರೈತ ಸಂಘದ ತಾಲ್ಲೂಕು ಉಪಾಧ್ಯಕ್ಷ ಕೆಂಚ ಯಲಪ್ಪ, ಗ್ರಾಮ ಪಂಚಾಯ್ತಿ ಸದಸ್ಯರಾದ ಈಶ್ವರಪ್ಪ, ರಂಗನಾಥ್ ವಿಶ್ವಾಸ ವ್ಯಕ್ತಪಡಿಸುತ್ತಾರೆ.