
“ಹಣದ ಉಳಿತಾಯ ಮುಖ್ಯವಲ್ಲ. ಪ್ರತಿದಿನ ವಿಷದ ಸೋಂಕು ಇಲ್ಲದ ತರಕಾರಿ ಸಿಗುತ್ತದಲ್ಲಾ, ಅದಕ್ಕಾಗಿ ನನ್ನ ಬಿಡುವಿಲ್ಲದ ಕೆಲಸದ ನಡುವೆಯೂ ದಿನಕ್ಕರ್ಧ ಗಂಟೆ ಇಟ್ಟುಕೊಳ್ಳುತ್ತೇನೆ” ತಿರುವನಂತಪುರ ಸೆಕ್ರೆಟೆರಿಯೇಟ್‌ನ ಭಾಷಾತಜ್ಞರಾಗಿರುವ ಟಿ.ಕೆ.ಭಾಸ್ಕರ ಪಣಿಕ್ಕರ್ ಮಾತಿನಲ್ಲಿ ಹೆಮ್ಮೆಯಿತ್ತು.
ವಳುದಕ್ಕಾಡ್‌ನ ಎಮ್.ಪಿ.ಅಪ್ಪನ್ ರೆಸಿಡೆನ್ಸಿಯಲ್ ಕಾಲೊನಿಯಲ್ಲಿ ಮನೆ. ನಾಲ್ಕು ಸೆಂಟ್ಸ್‌ನ ಪುಟ್ಟ ನಿವೇಶನ. ತಾರಸಿಯಲ್ಲೇ ಅಲಸಂಡೆ, ಹರಿವೆ, ಬೆಂಡೆ, ಬದನೆ, ಚೀನಿಕಾಯಿ…ಪಡುವಲ ಒಂದೇ ಬಾಕಿ. ಮನೆ ಖರ್ಚಿಗೆ ಆಗಿ ಮಿಕ್ಕುಳಿದದ್ದು ನೆರೆಯವರಿಗೆ. ಪ್ರೀತಿಯಿಂದ.
” ಇದು ಮಾತ್ರ ಅಲ್ಲ ಪ್ರಯೋಜನ. ನಮ್ಮವೆಲ್ಲ ಆಗ ಜೀರೋ-ವೇಸ್ಟ್ ಮನೆಗಳು. ನಾವು ಪ್ಲಾಸ್ಟಿಕ್ ಚೀಲಗಳನ್ನು ಬಿಟ್ಟರೆ ಬೇರೆ ಯಾವುದೇ ತ್ಯಾಜ್ಯ ಹೊರ ಹಾಕುತ್ತಿಲ್ಲ ನೋಡಿ”, ಪಣಿಕ್ಕರ್ ತಿಳಿಸುತ್ತಾರೆ. ಈ ’ನಾವು’ ಯಾರು? ನಗರದ ಈ ಬ್ಯುಸಿ- ನಿವಾಸಿಗಳಿಗೆ ಎಲ್ಲಾ ಬಿಟ್ಟು ತರಕಾರಿ ಬೆಳೆಸುವ ಹುಚ್ಚು ಹತ್ತಿಸಿದ್ದು ಯಾರು? ತಾರಸಿ ಕೃಷಿಗೂ ಶೂನ್ಯತ್ಯಾಜ್ಯಕ್ಕೂ ಏನು ಸಂಬಂಧ ?
“ನಗರತ್ತಿಲ್ ಒರು ನಾಟ್ಟಿಲ್‌ಪುರಮ್” (ನಗರದಲ್ಲಿ ಒಂದು ಹಳ್ಳಿ.) ಇದು ಕೇರಳ ಸರಕಾರ ಮೂರು ವರ್ಷ ಹಿಂದೆ ರಾಜ್ಯ ರಾಜಧಾನಿಯಲ್ಲಿ ಆರಂಭಿಸಿದ ಒಂದು ದೂರದೃಷ್ಟಿಯ ಯೋಜನೆ. ಮನೆಗಳಲ್ಲಿ ಅಲ್ಲಿನ ಅಡುಗೆಮನೆ ಇತ್ಯಾದಿ ತ್ಯಾಜ್ಯ ಬಳಸಿ ಎರೆಹುಳ ಸಾಕಣೆ. ಆ ಗೊಬ್ಬರ ಬಳಸಿ ತಾರಸಿಯಲ್ಲಿ ತರಕಾರಿ ಬೆಳೆ. ಪೂರ್ತಿ ಸಾವಯವ ರೀತಿ. ಒಂದು ಮನೆಗೆ ೧೨೦೦ ರೂ. ವೆಚ್ಚ ಅಂತ ಅಂದಾಜು ಅದರಲ್ಲಧ ಸರಕಾರದಿಂದ.
ನಿಮಗೆ ಅಚ್ಚರಿಯಾಗಬಹುದು, ಈ ಚಟುವಟಿಕೆಗೆ ತೊಡಗಿದ ಮನೆಗಳ ಸಮ್ಖ್ಯೆ ಈಗ ಸಾವಿರ ಮಿಕ್ಕಿದೆ. “ಪ್ರತಿ ತಿಂಗಳು ೬೦ – ೭೦ ಹೊಸ ಮನೆಗಳು ಸೇರುತ್ತಲೇ ಇವೆ” ಎನ್ನುತ್ತಾರೆ ಯೋಜನೆಯ ಮುಖ್ಯಸ್ಥ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಥೋಮಸ್ ಮೇಮನ್.

ಪಣಿಕರ್ ಅದೇ ಕಾಲೊನಿ ನಿವಾಸಿ ಪಿ.ಜಿ.ಕೃಷ್ಣನ್ ಕುಟ್ಟಿ ನಾಯರ್ರದು ಆರು ಸೆಂಟ್ಸ್‌ನ ಮನೆ. ಹಿಂದೆ ವಾರಕ್ಕೆ ೬೦ – ೭೫ ರೂ. ತರಕಾರಿಗೆ ಬೇಕಿತ್ತು. ಈಗ ಕೇವಲ ೧೦ – ೨೦ರೂ. ಸಾಕಾಗುತ್ತದೆ. “ಪೇಟೆ ತರಕಾರಿ ಒಂದು ವಾರದಲ್ಲಿ ಕೊಳೆಯುತ್ತಿತ್ತು. ನಾವು ಬೆಳೆಸಿದ ತರಕಾರಿ ಹಾಗಲ್ಲ. ತಾಜಾ ಇರುತ್ತದೆ, ರುಚಿಯೂ ಹೆಚ್ಚು” ನಾಯರ್ ಖ್ಯಾತ ನ್ಯಾಯವಾದಿ. ಹೆಂಡತಿ ಕಂದಾಯ ಇಲಾಖೆಯ ಅಧಿಕಾರಿ. ಇಬ್ಬರು ಮಕ್ಕಳು. ಎಲ್ಲರೂ ದಿನಕ್ಕೊಂದೆರಡು ಗಂಟೆ ಕೃಷಿಯಲ್ಲಿ ಖುಷಿ ಕಾಣುತ್ತಾರೆ. “ಆದರೂ, ನಾನು ಈ ಕೆಲಸಕ್ಕೆ ಹೊರಡಲು ಮುಖ್ಯ ಕಾರಣ ತ್ಯಾಜ್ಯ ನಿರ್ವಹಣೆಯೇ”, ನಾಯರ್ ಸ್ಪಷ್ಟಪಡಿಸುತ್ತಾರೆ.
ಆರಂಭದ ದಿನಗಳಲ್ಲಿ ಈ ಯೋಜನೆ ರೂಪ ಪಡೆದದ್ದು ತ್ಯಾಜ್ಯ ನಿರ್ವಹಣೆಗಾಗಿಯೇ. ಉಳಿದ ನಗರಗಳಂತೆ ಇಲ್ಲೂ ಈ ಸಮಸ್ಯೆ ತೀವ್ರ. ನಗರದ ಎಲ್ಲ ತ್ಯಾಜ್ಯವನ್ನೀಗ ವಳಪ್ಪಿಲ್ ಶಾಲ ಎಂಬಲ್ಲಿಗೆ ಸಾಗಿಸುತ್ತಿದ್ದಾರೆ. ಅಲ್ಲಿನ ಖಾಸಗಿ ಕಂಪೆನಿ ಈ ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸುತ್ತದೆ. ಆದರೆ ತ್ಯಾಜ್ಯ ಒಟ್ಟು ಹಾಕಿದ್ದರಿಂದ ಸುತ್ತಲಿನ ಜನರ ಬದುಕು ಅಸಹನೀಯವಾಗಿದೆ. ಜಲಮೂಲಗಳು ಕಾಯಿಲೆ ಹುಟ್ಟಿಸುತ್ತಿವೆ. ಜನ ಪ್ರತಿಭಟಿಸ ತೊಡಗಿದ್ದಾರೆ. ಯೋಜನೆಗೆ ಅಂತಿಮ ರೂಪ ಕೊಡುವ ಹೊತ್ತಿಗೆ ಮನೆಮಟ್ಟದಲ್ಲಿ ಈ ಎರೆಗೊಬ್ಬರ ಬಳಸಿ ತಾರಸಿ ಕೃಷಿ ಪರಿಚಯಿಸಿದರೆ ಹೇಗೆ ಎಂಬ ಚಿಂತನೆ. ಹಾಗೆ ‘ನಗರದಲ್ಲಿ ಹಳ್ಳಿ’ ಹುಟ್ಟು ಹಾಕುವ ಪರಿಕಲ್ಪನೆ ಮೂಡಿತು.
ಕಾಲೊನಿಗಳಲ್ಲಿ ಜನರನ್ನು ಒಗ್ಗೂಡಿಸಿ ಅರಿವು ಮೂಡಿಸುವುದು ಇಲಾಖೆ ಮಾಡುವ ಮೊದಲ ಕೆಲಸ. ಈವರೆಗೆ ಇಂತಹ ೮೫ ತರಬೇತಿಗಳು ನಡೆದಿವೆ. ಎರೆಗೊಬ್ಬರ ನಿರ್ಮಾಣಕ್ಕೆ ವೃತ್ತಾಕಾರದ ಸಿಮೆಂಟ್ ರಿಂಗ್‌ಗೆ. ಅದರ ಹೊರಭಾಗದಲ್ಲಿ ಇರುವೆ ತಡೆಯಲು ನೀರಿನ ಕಾಲುವೆ ಇರುವ ರಿಂಗ್‌ಗೆ ಎರೆಹುಳ, ಗಿಡ,ಬೀಜ, ಸ್ಪ್ರೇಯರ್, ಕೃಷಿ ಉಪಕರಣ – ಹೀಗೆ ಬೇಕಾದ ಒಳಸುರಿಗಳ ವಿತರಣೆ. ಎರೆಗೊಬ್ಬರ, ಎರೆಜಲ ಉತ್ಪಾದನೆ, ಇದನ್ನು ಬಳಸಿ ತಾರಸಿ ಕೃಷಿ, ಸಸ್ಯಜನ್ಯ ಕೀಟನಾಶಕ ತಯಾರಿಗಳ ಬಗ್ಗೆ ತಿಳಿವಳಿಕೆ. ರಸಗೊಬ್ಬರ, ರಸವಿಷ ಬಳಕೆ ಇಲ್ಲ.
“ಮೊದಲ ವರ್ಷದಲ್ಲೇ ಈ ಕೆಲಸ ಆರಂಭಿಸಿದ ಕೆಲವು ಮನೆಗಳು ದಿನಕ್ಕೊಂದು ಕೆಜಿ ತರಕಾರಿ ಉತ್ಪಾದಿಸುತ್ತಿದ್ದಾರೆ ಮೇಮ್ಮನ್ ತಿಳಿಸುತ್ತಾರೆ. ಈ ಯೋಜನೆ ಇಷ್ಟೊಂದು ಜನಪ್ರಿಯ ಆಗಲು ಏನು ಕಾರಣ. ” ಸರಕಾರಿ ಯೋಜನೆಗಳು ಸೋಲಲು ಇರುವ ಕಾರಣಗಳನ್ನು ವಿಶ್ಲೇಷಿಸಿ ಇಲ್ಲಿ ಅವುಗಳ ನಿವಾರಣೆ ಮಾಡಿದ್ದೇವೆ. ಸಬ್ಸಿಡಿ ನೀಡಿಕೆ, ಸಲಹೆ, ಯಾವ ಕೆಲಸಕ್ಕೂ ಇವರು ಇಲಾಖಾ ಕಚೇರಿಗೆ ಬಾರಂತೆ ಮಾಡಿದ್ದೇವೆ.” ಸಮಸ್ಯೆ ಎದುರಾದಾಗ ದೂರವಾಣಿ ಮೂಲಕ ಸಲಹೆ. ಮನೆಬಾಗಿಲಿಗೇ ಸವಲತ್ತುಗಳು.
ಹಲವರಿಗೆ ತಾರಸಿಯಲ್ಲಿ ಗಿಡ ಬೆಳೆಸಿದರೆ ಅಲ್ಲಿ ಕ್ರಮೇಣ ನೀರು ಸೋರುತ್ತದೆ ಎಂಬ ಭಯ ಇರುತ್ತದೆ. ಪ್ಲಾಸ್ಟಿಕ್ ಚೀಲಗಳನ್ನು ತಾರಸಿ ನೆಲದ ಮೇಲೆ ನೇರವಾಗಿ ಇಡುವ ಬದಲು ನಾಲ್ಕು ಇಟ್ಟಿಗೆ ತುಂಡು ಇರಿಸಿ ಅದರ ಮೇಲೆ ಚೀಲ ಇಡುವಂತೆ ಇವರು ಹೇಳುತ್ತಾರೆ.ಮಣ್ಣು ತಂದು ಚೀಲದಲ್ಲಿ ತುಂಬುವುದು ನಗರವಾಸಿಗಳಿಗೆ ದೊಡ್ಡ ತಲೆನೋವು. ಅದಕ್ಕಾಗಿ ಥಾಮಸ್ ಹೊಸ ಉಪಾಯ ಹೂಡಿದ್ದಾರೆ.
ನಿರುದ್ಯೋಗಿಗಳ ಕಾರ್ಯಪಡೆ. ಕೆಲಸವಹಿಸಿದರೆ ಇವರೇ ಬಂದು ಚೀಲಗಳಲ್ಲಿ ಮಣ್ಣು , ಗೊಬ್ಬರ ತುಂಬಿ ಬೀಜ ಹಾಕಿ ಹೋಗುತ್ತಾರೆ. ಚೀಲಕ್ಕೆ ೨೦ ರೂಪಾಯಿ ಕೊಟ್ಟರಾಯಿತು. ಮೂರರಿಂದ ಆರು ಮಂದಿ ಇರುವ ಈ ತಂದು ಕೆಲವು ತಿಂಗಳಲ್ಲಿ ೧೮೦೦೦ ರೂ. ವರೆಗೂ ಸಂಪಾದಿಸಿದೆಯಂತೆ.
ಎಂ.ಪಿ. ಅಪ್ಪನ್ ಕಾಲೊನಿಯಲ್ಲಿನ ೧೨೫ ಮನೆಗಳಲ್ಲಿ ೨೫ರಲ್ಲೂ ಈ “ಹುಚ್ಚು” ಹಬ್ಬಿದೆ. ಯೋಜನೆಯನ್ನು ದೊಡ್ಡ ರೀತಿಯಲ್ಲಿ ಅನುಸರಿಸುವ ಇನ್ನಿತರ ಕೆಲವು ಕಾಲೊನಿಗಳೆಂದರೆ ಉದಾರ ಶಿರೋಮಣಿ ರಸ್ತೆಯ ಗೃಹ ಕಾಲೊನಿ, ನಾಲಾಮಿಂಜರದ ಐಶ್ವರ್ಯ ನಗರ, ಅಂಬಲಮೇಡುವಿನ ಶ್ರೀನಿವಾಸ ರೆಸಿಡೆಂಟ್ಸ್ ಅಸೋಸಿಯೇಶನ್ ಇತ್ಯಾದಿ.
“ಮೊದಮೊದಲು ನಾವೇ ಹಲವು ಬಾರಿ ಓಡಾಡಿ ಜನ ಸೇರಿಸಬೇಕಿತ್ತು. ಈಗ ಹೊಸಬರೇ ನಮ್ಮನ್ನು ಸಂಪರ್ಕಿಸಿ ಸಭೆಗೆ ಆಹ್ವಾನಿಸುತ್ತಿದ್ದಾರೆ”, ಮೇಮ್ಮನ್ ಬೊಟ್ಟು ಮಾಡುತ್ತಾರೆ. ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ರಾಜ್ಯದ ಐದು ನಗರಪಾಲಿಕೆಗಳಿಗೆ ಈ ಯೋಜನೆಯನ್ನು ವಿಸ್ತರಿಸುವ ಕೆಲಸ ಸರಕಾರದ ತೀವ್ರ ಪರಿಶೀಲನೆಯಲ್ಲಿಯೆಂತೆ.
ವಿಶ್ಲೇಷಿಸಿ ನೋಡಿದರೆ, ಕೇರಳದಲ್ಲಿ ಈ ಯೋಜನೆ ಯಶಸ್ವಿಯಾಗಲು ಎರಡು ಕಾರಣಗಳು ಹೊಳೆಯುತ್ತವೆ. ಒಂದು : ಇಲ್ಲಿನ ನಗರದಲ್ಲಿ ದೊಡ್ಡ ಉದ್ಯಮಿ, ಅಧಿಕಾರಿ, ಮಂತ್ರಿ ಆದವನೂ ಕೂಡಾ ಎಲ್ಲೋ ಹಳ್ಳಿಮೂಲೆಯಲ್ಲಿ ಹುಟ್ಟಿ ಬಂದಿರುತ್ತಾನೆ; ಅಥವಾ ಹಳ್ಳಿಗಳ ಪರಿಚಯವಿರುತ್ತದೆ. ರಾಜ್ಯದಲ್ಲಿ ಪಯಣಿಸುತ್ತಿದ್ದರೆ ಒಂದು ಬರೇ ಹಳ್ಳಿ, ಪಟ್ಟಣ, ನಗರ, ಚಿಕ್ಕ ಪೇಟೆ – ಹೀಗೆ ವೈವಿಧ್ಯ ಎದುರಾಗುತ್ತಿರುತ್ತದೆ. ಕೇರಳದಲ್ಲಿ ನಗರ ಮತ್ತು ಹಳ್ಳಿಗಳ ನಡುವಣ ಭಿತ್ತಿ ಬಹಳ ತೆಳ್ಳಗೆ. ಹೀಗಾಗಿ ಮನದ ಮೂಲೆಯಲ್ಲೆಲ್ಲೋ ಕೃಷಿಪ್ರೀತಿ ಸುಪ್ತವಾಗಿರುತ್ತದೆ. ಕಾಸರಗೋಡಿನ ಎಂಡೋಸಲ್ಫಾನ್ ದುರಂತವನ್ನಂತೂ ರಾಜ್ಯದ ಮೂಲೆಮೂಲೆಯ ಜನರೂ ಮರೆಯುವಂಥದ್ದಲ್ಲ. ಎರಡನೆಯ ಕಾರಣ – ಇಲ್ಲಿನ ಜನರಲ್ಲಿರುವ ಅರಿವಿನ ಮಟ್ಟ. ಆಹಾರ ಪದಾರ್ಥಗಳಲ್ಲಿ ವಿಷದ ತೀವ್ರ ಬಳಕೆ, ಅದರಿದಾಗಬಹುದಾದ ಅಪಾಯ, ತ್ಯಾಜ್ಯ ಕೇಂದ್ರೀಕರಣದ ಅನಾಹುತ – ಇವೆಲ್ಲವುಗಳ ಬಗ್ಗೆ ಇಲ್ಲಿನ ಚುರುಕಿನ ಮಾಧ್ಯಮಗಳಿಂದ ಇವರು ವಿಷಯದ ಆಳ ಅರಿತಿರುತ್ತಾರೆ. ಸಾವಯವ ನೀತಿ ಸಿದ್ಧಗೊಳಿಸಿರುವ ಕರ್ನಾಟಕ ಸರಕಾರ ಕೇರಳಕ್ಕಿಂತ ಮುಂದೆ ಇದೆ. ನಮ್ಮಲ್ಲಿ, ಬೆಂಗಳೂರಿನ ಸಂಜಯ ನಗರದ ಅನುಸೂಯ ಶರ್ಮಾ, ಹಾಸನದ ವಿಜಯ್ ಅಂಗಡಿ ತಾರಸಿ ಕೃಷಿ ಮಾಡುತ್ತಾ ಇತರರಿಗೂ ತಿಳಿವಳಿಕೆ ಹಂಚುತ್ತಿದ್ದಾರೆ. ನಗರಗಳಲ್ಲಿ ತ್ಯಾಜ್ಯ ನಿರ್ವಹಣೆಗೆ ತಳಕು ಹಾಕಿ ಕೇರಳ ಮಾದರಿಯಲ್ಲೇಕೆ ರಾಜ್ಯ ಸರಕಾರ ಇಂತಹ ಕಾರ್ಯಕ್ರಮ ಕೈಗೆತ್ತಿಕೊಳ್ಳಬಾರದು?
ಲೇಖನ ಶ್ರೀ ಪಡ್ರೆ ಅಂಚೆ: ವಾಣಿನಗರ,
ದಾರಿ: ಪೆರ್ಲ, ಕೇರಳ – ೬೭೧ ೫೫೨ ಮಿಂಚಂಚೆ :
———————————–
ಥ್ಯಾಂಕ್ಸ್ ಎ ಟನ್ !
ವಿಶ್ವ ಕೈತೋಟ ದಿನದಂದು ಬ್ಲಾಗ್ ನಲ್ಲಿ ಪ್ರಕಟಿಸಿದ ‘ತಾರಸಿ ಮೇಲೆ ತೋಟ’ ಬರಹಕ್ಕೆ ಜಲಪತ್ರಕರ್ತ ‘ಶ್ರೀ’ ಪಡ್ರೆಯವರು ಈ ಲೇಖನದ ಮೂಲಕ ಪ್ರತಿಕ್ರಿಯಿಸಿದ್ದಾರೆ. ಮೂರ್ನಾಲ್ಕು ವರ್ಷಗಳ ಹಿಂದೆ ಈ ಲೇಖನವನ್ನು ಅವರು ‘ವಿಜಯ ಕರ್ನಾಟಕ’ ಪತ್ರಿಕೆಗಾಗಿ ಬರೆದಿದ್ದರು. ಆಗ ನಾನು ಕೃಷಿ ವಿಜಯ ಪುರವಣಿ ವಿಭಾಗದ ಮುಖ್ಯಸ್ಥನಾಗಿದ್ದೆ. ‘ಬೆಂಗಳೂರು ಕೃಷಿ ವಿಜಯ’ ಪುರವಣಿಯಲ್ಲಿ ಈ ಲೇಖನ ಪ್ರಕಟವಾಗಿತ್ತು. ಹಾರೈಸಿದ ‘ಶ್ರೀ’ ಪಡ್ರೆಯವರಿಗೆ ಕೃತಜ್ಞತೆಗಳು.
-ಗಾಣಧಾಳು ಶ್ರೀಕಂಠ