ವ್ಯಾಸದಲ್ಲಿ ‘ಅಗ್ನಿಹೋತ್ರ’

ಜಿಗಣಿಯ ವಿವೇಕಾನಂದ ಯೋಗ ಕೇಂದ್ರದಲ್ಲಿ ಸೋಮವಾರದಿಂದ ‘ಯೋಗ, ಗೋವು ಹಾಗೂ ಗ್ರಾಮೀಣ ಪುನರ್‌ರಚನೆ’ ಕುರಿತ ಅಂತರರಾಷ್ಟ್ರೀಯ ಸಮಾವೇಶವೊಂದು ನಡೆಯುತ್ತಿದೆ.

ಯೋಗ, ಧ್ಯಾನ, ಪ್ರಾಣಾಯಾಮಗಳು ಸ್ವಾಸ್ಥ್ಯ ಜೀವನದ ಗುಟ್ಟು. ಪೌಷ್ಟಿಕ ಆಹಾರ ಈ ಗುಟ್ಟಿನ ಹಿಂದಿನ ಶಕ್ತಿ. ಆಹಾರ- ಆರೋಗ್ಯ- ವಾತಾವರಣ- ನಿತ್ಯದ ಕ್ರಿಯೆ. ಇವೆಲ್ಲ ಒಂದೊಕ್ಕೊಂದು ಕೊಂಡಿ. ಅದಕ್ಕಾಗಿ ಯೋಗ- ಧ್ಯಾನ- ಪ್ರಾಣಾಯಾಮ ತರಬೇತಿ ನೀಡುವ ಕೇಂದ್ರಗಳಲ್ಲೆಲ್ಲಾ ವಿಷರಹಿತ ಕೃಷಿ, ಸಾವಯವ ಆಹಾರದ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿರುತ್ತದೆ.

ಯೋಗ ಗುರು ಬಾಬಾ ರಾಮದೇವ್ ಅವರಿಂದ ಹಿಡಿದು, ಸ್ಥಳೀಯ ಮಠ ಮಾನ್ಯಗಳೆಲ್ಲ ಪೌಷ್ಟಿಕ ಆಹಾರ ಉತ್ಪಾದನೆಯಲ್ಲಿ ಆಸಕ್ತಿ ತೋರಿವೆ. ದೇಸಿ ಆಕಳು, ಅವುಗಳ ಸೆಗಣಿ, ಗಂಜಲ ಬಳಕೆಯಿಂದ ಕೃಷಿ ಚಟುವಟಿಕೆ ಕೈಗೊಳ್ಳುವುದರ ಜೊತೆಗೆ, ಸಾವಯವ ಆಹಾರ ಉತ್ಪಾದನೆಯ ದಾಸೋಹಕ್ಕೂ ಮುಂದಾಗಿವೆ. ಪುದುಚೆರಿಯ ಅರಬಿಂದೋ ಆಶ್ರಮದಲ್ಲಿ ಈ ಪ್ರಯತ್ನ ಸಾಗಿದೆ. ಅಲ್ಲಿನ ನಿತ್ಯ ದಾಸೋಹದಲ್ಲಿ ಸಾವಯವ ತರಕಾರಿ, ಹಣ್ಣು, ಹಂಪಲು, ಧಾನ್ಯಗಳನ್ನು ಬಳಸಲಾಗುತ್ತಿದೆ.

ಈ ಚಟುವಟಿಕೆಗಳ ನಡುವೆಯೇ ವೇದಗಳ ಕಾಲದ ಕೃಷಿಗೂ ಜೀವ ತುಂಬುವ ಕೆಲಸ ನಡೆಯುತ್ತಿದೆ. ಅಗ್ನಿಹೋತ್ರ, ಹೋಮ-ಹವನಗಳಿಂದ ಬೆಳೆ ಇಳುವರಿ ಹೆಚ್ಚಳ, ರೋಗ-ಕೀಟ ಬಾಧೆ ನಿಯಂತ್ರಣ, ವಾತಾವರಣ ಶುದ್ಧೀಕರಣ ಕುರಿತು ಸಂಶೋಧನೆಗಳೂ ಯಶಸ್ವಿಯಾಗಿವೆ.

ಅಗ್ನಿಹೋತ್ರ ಎಂದರೆ ನಾಟಿ ಹಸುವಿನ ಸೆಗಣಿಯ ಬೆರಣಿಗೆ ನಾಟಿ ಹಸುವಿನ ಬೆಣ್ಣೆ ಲೇಪಿಸಿ, ಉಲ್ಟಾ ಪಿರಮಿಡ್ (ರಿವರ್ಸ್ ಪಿರಮಿಡ್) ಆಕಾರದ ತಾಮ್ರದ ಹೋಮ ಕುಂಡದಲ್ಲಿ ಸೂರ್ಯೋದಯ ಹಾಗೂ ಸೂರ್ಯಾಸ್ತದ ಸಮಯದಲ್ಲಿ ನಿಗದಿತ ಮಂತ್ರ ಪಠಣದೊಂದಿಗೆ ಹೋಮ ಕೈಗೊಳ್ಳುವ ಕ್ರಿಯೆ. ಈ ಹೋಮದಿಂದ ಹೊರಹೊಮ್ಮುವ ಧೂಪ ವಾತಾವರಣವನ್ನು ಶುದ್ಧೀಕರಿಸುವ ಜೊತೆಗೆ, ಸುತ್ತಲಿನ ಗಿಡ-ಮರ, ಬೆಳೆ-ಬಳ್ಳಿಗಳ ಆರೋಗ್ಯ ಕಾಪಾಡಲು ನೆರವಾಗುತ್ತದೆ ಎನ್ನುವುದು ಈ ಹೋಮ ಕೈಗೊಳ್ಳುವ ಸಂಶೋಧಕರ ಅಭಿಪ್ರಾಯ.

ಒಂದು ಕಾಲದಲ್ಲಿ ಈ ಹೋಮ ಕೇವಲ ಧಾರ್ಮಿಕ ಆಚರಣೆಯಾಗಿತ್ತು. ಇತ್ತೀಚಿನ ಹಲವು ಸಂಶೋಧನೆಗಳ ಬಳಿಕ ಇದು ಕೃಷಿ ಕಾರ್ಯಗಳಲ್ಲೂ ಬಳಕೆಯಾಗುತ್ತಿದೆ. ವಿಶೇಷವಾಗಿ ಸಾವಯವ ಕೃಷಿ ಕೈಗೊಳ್ಳುತ್ತಿರುವ ಕೆಲವು ರೈತರು ಅಗ್ನಿಹೋತ್ರ- ಹೋಮಾ ಫಾರ್ಮ್ ಅಳವಡಿಸಿಕೊಳ್ಳುತ್ತಿದ್ದಾರೆ.

ತೀರ್ಥಹಳ್ಳಿಯ ಸಾವಯವ ಕೃಷಿಕ ದಿ. ಪುರುಷೋತ್ತಮ ರಾಯರು 80-90ರ ದಶಕದಲ್ಲಿ ಕರ್ನಾಟಕಕ್ಕೆ ‘ಅಗ್ನಿಹೋತ್ರ’ ಪರಿಚಯಿಸಿದರು. ಬೆಳಗಾವಿಯ ಅಭಯ್ ಮುತಾಲಿಕ್ ದೇಸಾಯಿ ಅವರು ಇವತ್ತಿಗೂ ತಮ್ಮ ಕೃಷಿ ಜಮೀನಿನಲ್ಲಿ ನಿತ್ಯ ಎರಡು ಹೊತ್ತು ‘ಅಗ್ನಿಹೋತ್ರ’ ಕೈಗೊಳ್ಳುತ್ತಿದ್ದಾರೆ. ಆ ಮೂಲಕ ತರಕಾರಿ ಬೆಳೆದು ಬೆಂಗಳೂರಿನಂತಹ ನಗರಗಳಿಗೆ ಹಂಚುತ್ತಿದ್ದಾರೆ.

ಅಗ್ನಿಹೋತ್ರ ಹೋಮದಿಂದ ಹೊರಹೊಮ್ಮುವ ಭಸ್ಮದಿಂದ ನೀರನ್ನು ಪರಿಶುದ್ಧಗೊಳಿಸಬಹುದು ಎಂದು ಟುಸ್ಕೀ ವಿವಿ ಸಂಶೋಧನೆಯೊಂದರಿಂದ ದೃಢಪಡಿಸಿದೆ. ಶಾಂತಿ ವಿಲ್ಲಾ ಸಂಸ್ಥೆ, ಈ ಸಂಶೋಧನೆಯನ್ನು ಪ್ರಯೋಗಕ್ಕೂ ಇಳಿಸಿದೆ.

ಉದಕಮಂಡಲದಲ್ಲಿರುವ ತೋಟಗಾರಿಕಾ ಸಂಶೋಧನಾ ಕೇಂದ್ರ ನಡೆಸಿದ ಪ್ರಾಥಮಿಕ ಅಧ್ಯಯನದಿಂದ ಹೋಮಾ ಫಾರ್ಮ್‌ನಿಂದ ತೋಟದ ಬೆಳೆಗಳಿಗೆ ಬಾಧಿಸಿದ್ದ ರೋಗ ನಿಯಂತ್ರಣಗೊಂಡಿದ್ದು, ಬೆಳೆ ಇಳುವರಿ ಏರಿಕೆಯಾಗಿರುವುದು ದೃಢಪಟ್ಟಿದೆ.

ಹೀಗೆ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಕೃಷಿ ವಲಯದಲ್ಲಿ ನಡೆಯುತ್ತಿರುವ ಹೋಮಾ ಫಾರ್ಮ್, ಅಗ್ನಿಹೋತ್ರ ಪ್ರಕ್ರಿಯೆಗಳ ಪರಿಣಾಮ ಕುರಿತ ವೈಜ್ಞಾನಿಕ ಸಂಶೋಧನೆಗಳ ಚರ್ಚೆಗೆ ಜಿಗಣಿ ಸಮೀಪವಿರುವ ವಿವೇಕಾನಂದ ಅನುಸಂದಾನ ಸಂಸ್ಥಾನದಲ್ಲಿ (ವ್ಯಾಸ) ‘ಯೋಗ, ಗೋವು ಮತ್ತು ಗ್ರಾಮೀಣ ಪುನರ್‌ರಚನೆ’ ಎಂಬ ಅಂತರರಾಷ್ಟ್ರೀಯ ಸಮಾವೇಶವೊಂದು ಸೋಮವಾರ ಆರಂಭವಾಗಿದ್ದು, ಮೂರು ದಿನ ನಡೆಯಲಿದೆ.

ಸಮಾವೇಶದಲ್ಲಿ ಏನೇನಿದೆ ?
ಭಾರತೀಯ ಕೃಷಿಯಲ್ಲಿ ಗೋವಿನ ಮಹತ್ವ ಕುರಿತ ಉಪನ್ಯಾಸ. ಮೂರೂ ದಿನಗಳ ಕಾಲ ‘ಅಗ್ನಿಹೋತ್ರ’ದ ಪ್ರಾತ್ಯಕ್ಷಿಕೆ, ವಿವಿಧ ಯೋಗಾಸನಗಳ ತರಬೇತಿ, ಭಜನೆ, ಗುಂಪು ಚರ್ಚೆ, ಕ್ಷೇತ್ರ ಭೇಟಿ, ಸತ್ಸಂಗ, ಕೃಷಿಯಲ್ಲಿ ಯೋಗ ವೃಕ್ಷಾಯುರ್ವೇದದ ಬಳಕೆ, ಸಾವಯವ ಕೃಷಿ ಮತ್ತು ಆರೋಗ್ಯ, ಗೋವು ಆಧಾರಿತ ಕೃಷಿ ಕುರಿತ ಚರ್ಚೆ  ಹಾಗೂ ಮನರಂಜನಾ ಕಾರ್ಯಕ್ರಮಗಳಿವೆ.

ಗೋವು ಆಧಾರಿತ ಸುಸ್ಥಿರ ಕೃಷಿಯಲ್ಲಿ ಪಂಚಗವ್ಯ ಮತ್ತು ಹೋಮಾ ಫಾರ್ಮ್ ಬಳಕೆ, ಆರ್ಥಿಕಾಭಿವೃದ್ಧಿಗೆ ಗೋವು, ಗೋವು ಮತ್ತು ಸಂಸ್ಕೃತಿ, ಗೋವು ಮತ್ತು ತಂತ್ರಜ್ಞಾನ, ಗೋವು ಮತ್ತು ಸಮುದಾಯ ಆಧಾರಿತ ಉದ್ಯೋಗ.. ಹೀಗೆ ಔದ್ಯೋಗಿಕ ದೃಷ್ಟಿಕೋನದಲ್ಲಿ ಚರ್ಚೆಗಳು ನಡೆಯಲಿವೆ. ದೇಶದ ವಿವಿಧ ಭಾಗಗಳಿಂದ ಸ್ವಯಂ ಸೇವಾ ಸಂಸ್ಥೆಗಳು ಭಾಗವಹಿಸಲಿದ್ದು, ಅಗ್ನಿಹೋತ್ರ ಉತ್ಪನ್ನಗಳು, ಅರ್ಕ, ಪಂಚಗವ್ಯ ಸೇರಿದಂತೆ ವಿವಿಧ ವಸ್ತುಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯಿದೆ.ಸಾವಯವ ಆಹಾರ ಕೃಷಿ ಹಾಗೂ ಆಯುರ್ವೇದ ಸಂಬಂಧಿ ಪುಸ್ತಕಗಳು,ಸಿಡಿಗಳು ಪ್ರದರ್ಶನದಲ್ಲಿರುತ್ತವೆ.

ಸ್ಥಳ: ವ್ಯಾಸ (ವಿವೇಕಾನಂದ ಅನುಸಂದಾನ ಸಂಸ್ಥಾನ),ಪ್ರಶಾಂತಿ ಕುಟೀರ, ವಿವೇಕಾನಂದ ಮಾರ್ಗ,ಜಿಗಣಿ. ಮಾಹಿತಿಗೆ: 2263 9955.

ಕಳೆ ತೆಗೆಯುವ ಸರಳ ಸಾಧನ

ಬೆಂಗಳೂರು ಕೃಷಿ ವಿವಿ ಎಂಜಿನಿಯರಿಂಗ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಕಡಿಮೆ ವೆಚ್ಚದಲ್ಲಿ ರೈತ ಸ್ನೇಹಿ ಕಳೆ ತೆಗೆಯುವ ಉಪಕರಣ ಸಿದ್ಧಪಡಿಸಿದ್ದಾರೆ. ಅಲ್ಪಸ್ವಲ್ಪ ಕಬ್ಬಿಣ ಕೆಲಸದ ಜ್ಞಾನವಿರುವ ಸಣ್ಣ ಹಿಡುವಳಿ ರೈತರೂ ತಯಾರಿಸಿಕೊಳ್ಳಬಹುದು.

ಕಳೆ ತೆಗೆವ ಯಂತ್ರ

ಕೃಷಿಯಲ್ಲಿ ಕಳೆ ತೆಗೆಯುವುದು ಒಂದು ಸಾಹಸದ ಕೆಲಸ. ಕೂಲಿ ಕಾರ್ಮಿಕರ ಸಮಸ್ಯೆಯಿಂದಾಗಿ ಈ ಕೆಲಸ ಮತ್ತಷ್ಟು ಹೈರಾಣ. ಆದರೂ ಹಠಕ್ಕೆ ಬಿದ್ದವರಂತೆ ಕಳೆ ಕಿತ್ತೇ ಕೀಳ್ತೀನಿ ಅಂತ ಕುಡುಗೋಲು ಹಿಡಿದು, ನಡು ಬಗ್ಗಿಸಿ, ಕುಳಿತರೆ ಒಂದು ದಿನಕ್ಕೆ ಅಬ್ಬಬ್ಬಾ ಅಂದ್ರೆ, 8 ರಿಂದ 10 ಗುಂಟೆ ಕಳೆ ತೆಗೆಯಬಹುದು. ಆಳುಗಳಿಗೆ ಕೂಲಿ ಕೊಟ್ಟು ತೆಗೆಸುತ್ತೇನೆಂದರೂ ನೂರಾರು ರೂಪಾಯಿ ಖರ್ಚು ಮಾಡಬೇಕು!

ಇಂಥ ‘ಕಳೆ ಸಮಸ್ಯೆ’ಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ವಿಭಾಗದ ಅಂತಿಮ ಪದವಿ ವಿದ್ಯಾರ್ಥಿಗಳು ಸುಲಭದ ಪರಿಹಾರ ಕಂಡುಹಿಡಿದ್ದಾರೆ. ಪ್ರೊ.ಎ.ಆರ್.ರಾಧಾಕೃಷ್ಣ ಅವರ ಮಾರ್ಗದರ್ಶನದಲ್ಲಿ ಖರ್ಚಿಲ್ಲದೇ ಕಳೆ ತೆಗೆಯುವ ಮಾನವ ಚಾಲಿತ ಉಪಕರಣವನ್ನು ಸಿದ್ಧಪಡಿಸಿದ್ಧಾರೆ. ನಿರುಪಯೋಗಿ ಬೈಸಿಕಲ್‌ನ ಬಿಡಿ ಭಾಗ ಬಳಸಿದ್ದಾರೆ.

ಬೈಸಿಕಲ್ ಹ್ಯಾಂಡಲ್, ಫೋರ್ಕ್, ನಡುವಿನ ಫ್ರೇಮ್ (ಕಬ್ಬಿಣದ ಪೈಪು), ವ್ಹೀಲ್ ಹಬ್, ಹಲ್ಲಿನ ಚಕ್ರ (ಚೈನ್ ವೀಲ್) ಹೀಗೆ ಸೈಕಲ್‌ನ ಬಿಡಿ ಭಾಗಗಳನ್ನು ಬಳಸಿ ಈ ಸಾಧನವನ್ನು ಸಿದ್ಧಪಡಿಸಲಾಗಿದೆ. ಕಳೆ ತೆಗೆಯುವ ಭಾಗಕ್ಕೆ ಬಳಸಿರುವ ಚೂಪಾದ ಪಟ್ಟಿಮಾತ್ರ ಮಾತ್ರ ಹೊಸ ಕಬ್ಬಿಣದ ವಸ್ತು.

ಹಲ್ಲಿನ ಚಕ್ರಗಳನ್ನು ಹಬ್‌ನೊಂದಿಗೆ ನಟ್-ಬೋಲ್ಟ್‌ಗಳಿಂದ ಜೋಡಿಸಲಾಗಿದೆ. ಕೆಳಭಾಗಕ್ಕೆ ಚೂಪು ಅಲುಗಿನ ತುಸು ಉಲ್ಟಾ ‘V’ ಆಕಾರದಲ್ಲಿರುವ ಕಬ್ಬಿಣದ ಪಟ್ಟಿಯಿದೆ. ಚಕ್ರ ಜೋಡಿಸಿರುವ ಹಬ್‌ಗೆ ಫೋರ್ಕ್ ಕೊಂಡಿಯಾಗಿದೆ. ಪೈಪಿನ ಮೇಲ್ಭಾಗಕ್ಕೆ ನಾಲ್ಕು ಅಡಿ ಉದ್ದದ ಪೈಪು. ಮೇಲ್ಭಾಗದಲ್ಲಿ ಹ್ಯಾಂಡಲ್ ಸೇರಿಸಿದ್ದಾರೆ. ಇದೆಲ್ಲ ಸೇರಿ ಕಳೆ ತೆಗೆಯುವ ಯಂತ್ರವಾಗಿದೆ.

‘ಈ ಉಪಕರಣದಿಂದ ದಿನವೊಂದಕ್ಕೆ ಒಬ್ಬ ವ್ಯಕ್ತಿ ಅರ್ಧ ಎಕರೆಯಷ್ಟು ಕಳೆತೆಗೆಯಬಹುದು. ಮಹಿಳೆಯರೂ ಸುಲಭವಾಗಿ ಇದನ್ನು ಬಳಸಬಹುದು’ ಎನ್ನುತ್ತಾರೆ ಉಪಕರಣ ತಯಾರಿಸಿದ ಕೆ.ಮಂಜುನಾಥ್. ರಮ್ಯಾ, ವಿಕ್ರಮ್ ಮತ್ತು ಜಯಂತಿ.

ಬೆಳೆ ಸಾಲಿನ ನಡುವೆ ಕಳೆಗಳಿರುವ ಜಾಗದಲ್ಲಿ ಹ್ಯಾಂಡಲ್ ಹಿಡಿದು ಈ ಉಪಕರಣವನ್ನು ಉರುಳಿಸುತ್ತಾ ಹೊರಟರೆ ಚೂಪಾದ ಅಲುಗು ಕಳೆಗಳನ್ನು ತೆಗೆಯುತ್ತಾ ಹೋಗುತ್ತದೆ.

ಚಕ್ರಗಳಿಗೆ ಹಲ್ಲುಗಳಿರುವುದರಿಂದ ತೇವವಾದ ಮಣ್ಣಿನಲ್ಲೂ ಸಿಕ್ಕಿ ಹಾಕಿಕೊಳ್ಳದೇ ಸರಾಗವಾಗಿ ಸಾಗುತ್ತದೆ. ‘ಟ್ರಾಕ್ಟರ್ ಟೈರ್‌ಗಳಲ್ಲಿರುತ್ತದಲ್ಲಾ, ಅದೇ ತಂತ್ರಜ್ಞಾನವನ್ನು ಇಲ್ಲಿ ಬಳಸಿದ್ದೇವೆ’ ಎಂದು ವಿವರಿಸುತ್ತಾರೆ ಎಂಜಿನಿಯರಿಂಗ್ ವಿಭಾಗದ ಟೆಕ್ನೀಷಿಯನ್ ರಾಮೇಗೌಡ.

ಮುಂಭಾಗದಲ್ಲಿ ಜೋಡಿಸಿರುವ ಬ್ಲೇಡನ್ನು (ಕಬ್ಬಿಣದ ಪಟ್ಟಿ) ಆಗಾಗ್ಗೆ ಬದಲಾಯಿಸಬಹುದು. ಬೆಳೆಗಳು ಹಾಗೂ ಸಾಲುಗಳ ಅಳತೆಗೆ ತಕ್ಕಂತೆ ವ್ಯತ್ಯಾಸ ಮಾಡಿಕೊಳ್ಳುವ ಅವಕಾಶವಿದೆ. ಬ್ಲೇಡ್ ಮೊಂಡಾದರೆ ಸಾಣೆ (ಚೂಪು) ಹಿಡಿಸಬಹುದು.

‘ರೈತರಿಗೆ ಕೈಗೆಟಕುವ ವಸ್ತುಗಳನ್ನು ಬಳಸಿ ಈ ಉಪಕರಣವನ್ನು ಸಿದ್ಧಪಡಿಸಲಾಗಿದೆ. ಹಾಗಾಗಿ ಸ್ವತಃ ರೈತರೇ ಇದನ್ನು ತಯಾರಿಸಿಕೊಳ್ಳಬಹುದು. ಈ ಉಪಕರಣವನ್ನು ಇಂತಿಷ್ಟೇ ಅಳತೆಯ ವಸ್ತುಗಳನ್ನು ಬಳಸಿ ಸಿದ್ಧಪಡಿಸಬೇಕೆಂಬ ನಿಯಮವಿಲ್ಲ. ಬೇಕಾದ ಅಳತೆಗೆ ತಕ್ಕಂತೆ ರೂಪಿಸಿಕೊಳ್ಳಬಹುದು. ಅಷ್ಟು ಸರಳವಾಗಿದೆ ಈ ಉಪಕರಣದ ವಿನ್ಯಾಸ’ ಎನ್ನುತ್ತಾರೆ ಎಂಜಿನಿಯರಿಂಗ್ ವಿಭಾಗದ ಉಪನ್ಯಾಸಕ ಶಂಕರ್.

ಕಳೆ ತೆಗೆಯುವ ಈ ಉಪಕರಣವನ್ನು ಕೃಷಿ ವಿಶ್ವವಿದ್ಯಾಲಯದ ಪ್ರಯೋಗ ತಾಕುಗಳಲ್ಲಿ ಕೂಲಿ ಕಾರ್ಮಿಕರು ಬಳಸುತ್ತಿದ್ದಾರೆ. ಸುಲಭ ಹಾಗೂ ಶ್ರಮವಿಲ್ಲದೇ ಕಳೆ ತೆಗೆಯುವ ಜೊತೆಗೆ ಸಮಯವೂ ಉಳಿತಾಯವಾಗುತ್ತದೆ’ ಎನ್ನುವುದು ಅವರ ಅಭಿಪ್ರಾಯವಾಗಿದೆ.

‘ನೆಲದಲ್ಲಿ ಗಂಟೆಗಟ್ಟಲೆ ಕುಳಿತು ಸೊಂಟ ಬಗ್ಗಿಸಿ ಕಳೆ ಕೀಳುವ ಶ್ರಮವನ್ನು ತಗ್ಗಿಸುವ ಸಲುವಾಗಿ ಈ ಉಪಕರಣವನ್ನು ಆವಿಷ್ಕರಿಸಲಾಗಿದೆ’ ಎನ್ನುತ್ತಾರೆ ವಿದ್ಯಾರ್ಥಿಗಳು.

‘ಕೃಷಿ ಕ್ಷೇತ್ರದಲ್ಲಿ ಕಳೆ ತೆಗೆಯುವ ಯಂತ್ರಗಳು ಸಾಕಷ್ಟಿವೆ. ಅವುಗಳ ತಯಾರಿಕೆಗೆ ಇತರರನ್ನು ಅವಲಂಬಿಸಬೇಕು. ರೈತರಿಗೆ ಸುಲಭವಾಗಿ ಉಪಕರಣ ದೊರೆಯಬೇಕು. ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ರೈತರು ತಮಗೆ ಬೇಕಾದ ರೀತಿಯಲ್ಲಿ ತಾವೇ ಸುಲಭವಾಗಿ ಸಿದ್ಧಪಡಿಸಿಕೊಳ್ಳಬೇಕು.

ಆ ಉದ್ದೇಶದಿಂದ ಇಂಥ ಸರಳ ಸಾಧನವನ್ನು ವಿದ್ಯಾರ್ಥಿಗಳ ಮೂಲಕ ತಯಾರಿಸಿದ್ದೇವೆ’ ಎನ್ನುವುದು ಕೃಷಿ ವಿವಿ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ. ಎ.ಆರ್.ರಾಧಾಕೃಷ್ಣ ಅವರ ಅಭಿಪ್ರಾಯ.

ಸೈಕಲ್ ಬಿಡಿ ಭಾಗಗಳನ್ನು ಬಳಸಿಕೊಂಡು ಸಣ್ಣ ಹಿಡುವಳಿದಾರ ರೈತರಿಗಾಗಿಯೇ ತಯಾರಿಸಿರುವ ಈ ಉಪಕರಣದ ನಿರ್ಮಾಣ ವೆಚ್ಚ ಅಂದಾಜು 300- 400 ರೂಪಾಯಿ. ಮಾಹಿತಿಗೆ 94483 66315.

ಫಲ ಸಂಗಮದಲ್ಲಿ ಭರ್ಜರಿ ಫಸಲು

ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಇತ್ತೀಚೆಗೆ ನಡೆದ ‘ಹಾರ್ಟಿ ಸಂಗಮ್-2010’ ಮೇಳ ಹಣ್ಣುಬೆಳೆಗಾರರಿಗೆ ಉತ್ತಮ ವೇದಿಕೆ ಕಲ್ಪಿಸಿತು. ಈಶಾನ್ಯ ರಾಜ್ಯಗಳಿಂದ ಆಗಮಿಸಿದ್ದ ಬೆಳೆಗಾರರು ನಿರೀಕ್ಷೆಗೂ ಮೀರಿ ಲಾಭ ಗಳಿಸಿದರು. ಸಾವಯವ ಉತ್ಪನ್ನಗಳಿಗೆ ಎಲ್ಲಿದೆ ಮಾರುಕಟ್ಟೆ? ಎಂದು ಪ್ರಶ್ನಿಸುವವರಿಗೆ ಈ ಮೇಳ ಸ್ಪಷ್ಟ ಉತ್ತರ ನೀಡಿತು.

ಸಾವಯವದಲ್ಲಿ ಬೆಳೆದಿರುವ ಮಣಿಪುರ ಕಿತ್ತಳೆ ಹಣ್ಣು

‘100 ಟನ್ ಕಿತ್ತಳೆ ಮೂರೇ ದಿನಕ್ಕೆ ಖಾಲಿ. ಮತ್ತೆ 80 ಟನ್‌ಗೆ ಆರ್ಡ್‌ರ್ ಮಾಡಿದ್ದೇವೆ. ರೈಲ್‌ನಲ್ಲಿ ಬರ್ತಾ ಇದೆ. ಬೇಡಿಕೆ ನೋಡಿದರೆ, ಇದೂ ಸಾಕಾಗೋದಿಲ್ಲ ಅನ್ನಿಸುತ್ತದೆ..’

– ಲಾಲ್‌ಬಾಗ್‌ನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ‘ಹಾರ್ಟಿ ಸಂಗಮ್ – 2010’ ಹೆಸರಿನ ಹಣ್ಣಿನ ಮೇಳದಲ್ಲಿ ನಾಗಾಲ್ಯಾಂಡ್‌ನ ತೋಟಗಾರಿಕಾ ಟೆಕ್ನಾಲಜಿ ಮಿಷನ್‌ನ ನಿರ್ದೇಶಕ ಡಾ.ಬೆನ್ಜೋಂಗ್ ಐರ್ ಉಮೇದಿನಿಂದಲೇ ಮೇಳದಲ್ಲಿನ ಕಿತ್ತಳೆ ವಹಿವಾಟನ್ನು ಬಿಚ್ಚಿಟ್ಟರು. ಅಂದ ಹಾಗೆ, ಐದು ದಿನಗಳ ಈ ಮೇಳದಲ್ಲಿ ಬರೋಬ್ಬರಿ 180 ಟನ್ನಿನಷ್ಟು ಸಾವಯವ ಕಿತ್ತಳೆ ವ್ಯಾಪಾರವಾಗಿತ್ತು. ಒಂದು ಕೆ.ಜಿ. ಕಿತ್ತಳೆ ಬೆಲೆ ರೂ. 50!

ಕಿತ್ತಳೆ ಅಷ್ಟೇ ಅಲ್ಲ, ಈಶಾನ್ಯ ರಾಜ್ಯಗಳ ವಿಶೇಷ ಹಣ್ಣುಗಳಾದ ಕಿವಿ, ಪೈನಾಪಲ್ (ಅನಾನಸ್), ಸಂಬಾರ ಪದಾರ್ಥಗಳಾದ ಶುಂಠಿ, ಅರಿಶಿಣ, ನಾಗಾ ಮಿರ್ಚಿ ಕೂಡ ದಾಖಲೆ ಪ್ರಮಾಣದಲ್ಲಿ ಬಿಕರಿಯಾಗಿವೆ. ಮೂರನೇ ದಿನದ ಹೊತ್ತಿಗೆ ಹಣ್ಣುಗಳೆಲ್ಲ ಖಾಲಿ, ಕೆಲವು ಮಳಿಗೆಗಳು ಖಾಲಿ ಖಾಲಿ.

ಸಾವಯವ ಅನಾನಸ್ಗೆ ಭಾರಿ ಬೇಡಿಕೆ

ಸಾವಯವ ಉತ್ಪನ್ನಗಳಿಗೆ ಎಲ್ಲಿದೆ ಮಾರುಕಟ್ಟೆ? ಎಂದು ಪ್ರಶ್ನಿಸುವವರಿಗೆ ಈ ಮೇಳ ಸ್ಪಷ್ಟ ಉತ್ತರ ನೀಡಿತು. ಬೆಳೆಗಾರರ ಪ್ರಕಾರ ಎರಡನೇ ದಿನದ ಹೊತ್ತಿಗೆ  45 ಟನ್ ಪೈನಾಪಲ್ ಖಾಲಿ. ಅಂದು ಮಧ್ಯಾಹ್ನ ಮೇಳಕ್ಕೆ ಬಂದವರಿಗೆ ಕಿವಿ ಹಣ್ಣು ನೋಡಲೂ ಸಿಗಲಿಲ್ಲ. ಕೆ.ಜಿಗೆ ರೂ. 240ಇದ್ದರೂ 500 ಕೆ.ಜಿ ಹಣ್ಣು ಖರ್ಚಾಯಿತು. ಇದರ ಜೊತೆಗೆ 10 ಟನ್ ಶುಂಠಿ, 10 ಟನ್ ಅರಿಶಿಣ, 100 ಕೆ ಜಿ ನಾಗಾ ಚಿಲ್ಲಿ (ಮೆಣಸಿನಕಾಯಿ)- ಎಲ್ಲ ಖರ್ಚಾಯಿತು. ಈ ಟ್ರೆಂಡ್ ನೋಡಿದ ಬೆನ್ಜೋಂಗ್, ‘ಸಾವಯವ ಉತ್ಪನ್ನಗಳಿಗೆ ಬೆಂಗಳೂರಿನಲ್ಲಿ ಉತ್ತಮ ಮಾರ್ಕೆಟ್ ಇದೆ, ಅಲ್ವಾ’ ಅಂತ ಪ್ರಶ್ನೆ ಮಾಡಿದರು.

ನಾಗಾ ರೈತರು ಫುಲ್ ಖುಷ್: ಮೇಳದ ವ್ಯಾಪಾರದಿಂದ ನಾಗಾಲ್ಯಾಂಡ್ ರೈತರಂತೂ ಫುಲ್ ಖುಷಿಯಾದರು. ಅಲ್ಲಿನ ಮೊಕ್ಕೋಚುಂಗ್ ಜಿಲ್ಲೆಯ ಯಾಚಾಂಗ್ ಗ್ರಾಮದ ಯಾಂಗೈ ಎಂಬ ರೈತ, ಕಿತ್ತಳೆ ಜ್ಯೂಸ್‌ನಿಂದ ಮೂರು ದಿನಗಳೊಳಗೆ ರೂ. 50 ಸಾವಿರ ವ್ಯಾಪಾರ ಮಾಡಿದ್ರು. ‘ಒಂದು ಲೋಟಕ್ಕೆ ರೂ. 10  ಬಿಡುವಿಲ್ಲದ ವ್ಯಾಪಾರ. ನಾವಂತೂ ನಿರೀಕ್ಷಿಸಿರಲಿಲ್ಲ’ ಎನ್ನುವ ಯಾಂಗೈಗೆ ಮುಖದಲ್ಲಿ ಗೆಲುವಿನ ನಗೆ. ಅಂದ ಹಾಗೆ, ಮೇಳದ ಐದು ದಿನಗಳಲ್ಲಿ ಬರೀ ಕಿತ್ತಳೆ ಹಣ್ಣಿನಿಂದಲೇ ರೂ.2.5 ಲಕ್ಷದಷ್ಟು ವ್ಯಾಪಾರವಾಗಿದೆ. ಅಲ್ಲಿಗೆ ಸಾವಯವ ಹಣ್ಣಿಗೆ ಇನ್ನೆಷ್ಟು ಬೇಡಿಕೆ ಇರಬೇಕೆಂಬುದನ್ನು ಸ್ಥಳೀಯ ಬೆಳೆಗಾರರು ಊಹಿಸಬಹುದು !

ಕರ್ನಾಟಕದ ಕೊಡಗಿನಲ್ಲಿ ಕಿತ್ತಳೆ ಬೆಳೆಯುವ ಹಾಗೆ, ನಾಗಾಲ್ಯಾಂಡ್‌ನಾದ್ಯಂತ 12000 ಹೆಕ್ಟೇರ್‌ನಲ್ಲಿ ಕಿತ್ತಳೆ ಬೆಳೆಯುತ್ತಾರೆ. ಪ್ರತಿ ರೈತರು ಕನಿಷ್ಠ 2 ರಿಂದ 3 ಎಕರೆ ಕಿತ್ತಳೆ ಬೆಳೆಯುತ್ತಿದ್ದಾರೆ. ಕೇಂದ್ರ ಸರ್ಕಾರ ಸಾವಯವ ಕೃಷಿಗೆ ಉತ್ತೇಜನ ನೀಡಲು ಆರಂಭಿಸಿದ ಮೇಲೆ, ಸಾವಯವದಲ್ಲಿ ಕಿತ್ತಳೆ ಬೆಳೆಯುವವರ ಸಂಖ್ಯೆ ಹೆಚ್ಚಾಗಿದೆ. ಬೆಳೆಗಾರ ಯಾಂಗೈ ಕೂಡ ಮೂರು ಹೆಕ್ಟೇರ್‌ನಲ್ಲಿ ಸಾವಯವದಲ್ಲಿ ಕಿತ್ತಳೆ ಬೆಳೆಯುತ್ತಾರೆ. ಎಕರೆಗೆ ಪ್ರತಿ ವರ್ಷ 15 ಸಾವಿರ ರೂಪಾಯಿ ಖರ್ಚು. ಹಣ್ಣು ಬಿಡಲು ಆರಂಭವಾದ ಮೇಲೆ ಪ್ರತಿವರ್ಷ ಎಕರೆಗೆ ರೂ. 2 ಲಕ್ಷ   ಆದಾಯ’ ಪಕ್ಕಾ ಲೆಕ್ಕಾಚಾರ ಕೊಡ್ತಾರೆ ಯಾಂಗೈ. ಇವರಂಥ 46 ಹಣ್ಣಿನ ಬೆಳೆಗಾರರು ನಾಗಾಲ್ಯಾಂಡ್‌ನ ವಿವಿಧ ಪ್ರದೇಶಗಳಿಂದ ಮೇಳಕ್ಕೆ ಬಂದಿದ್ದರು.

ಸಾವಯವ ತರಕಾರಿಗೂ ಡಿಮಾಂಡ್: ಮೇಳದಲ್ಲಿ ಹಣ್ಣಿನ ಜೊತೆಗೆ ಸಾವಯವ ತರಕಾರಿಗೂ ಹೆಚ್ಚು ಬೇಡಿಕಿಯಿತ್ತು. ಬೆಂಗಳೂರಿನ ಇಕೋವಾ ಸ್ವಯಂ ಸೇವಾ ಸಂಸ್ಥೆ 70ಟನ್‌ಗಳಷ್ಟು ತರಕಾರಿಯನ್ನು ಮಾರಾಟ ಮಾಡಿತು. ಹೀರೆ, ಹಾಗಲ, ಎಲೆ ಕೋಸಿಗೆ ಹೆಚ್ಚು ಬೇಡಿಕೆ. ಸೌತೆಕಾಯಿ, ಬೀನ್ಸ್, ಟೊಮೆಟೊ ಸೇರಿದಂತೆ ಹದಿಮೂರು ವಿಧದ ಸಾವಯವ ತರಕಾರಿಗಳು ಮಾರಾಟವಾದವು.

ಇಕೋವಾ - ಸಾವಯವ ತರಕಾರಿ

‘ಐದು ದಿನಗಳಲ್ಲಿ ಅಂದಾಜು 2000 ಗ್ರಾಹಕರು ತರಕಾರಿ ಖರೀದಿಸಿದ್ದಾರೆ. ಒಂದು ಲಕ್ಷ ರೂಪಾಯಿಯಷ್ಟು ವ್ಯಾಪಾರವಾಗಿರಬಹುದು’ ಎಂದು ಅಂದಾಜಿಸುತ್ತಾರೆ ಸಂಸ್ಥೆಯ ಹಿರಿಯ ವ್ಯವಸ್ಥಾಪಕ ರಾಮಚಂದ್ರ. ಅಂದ ಹಾಗೆ ಈ ಎಲ್ಲ ತರಕಾರಿಗಳನ್ನು ಬೆಳೆದವರು ದೇವನಹಳ್ಳಿ, ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರದ 170 ರೈತರು. ಇವರ ಪ್ರತಿನಿಧಿಯಾಗಿ ಸಂಸ್ಥೆ ಮೇಳಗಳಲ್ಲಿ ಮಾರುಕಟ್ಟೆ ಒದಗಿಸುವ ಕೆಲಸ ಮಾಡುತ್ತಿದೆ. ‘ಇದು ರೈತರ ಬೆಳೆ. ಸಂಸ್ಥೆ ಕೇವಲ ಗ್ರಾಹಕರಿಗೆ ತಲುಪಿಸುವ ಕೆಲಸ ಮಾಡ್ತಿದೆ’ ಎನ್ನುವ ಕ್ಷೇತ್ರಾಧಿಕಾರಿ ಮಹದೇವ್, ಈ ಎಲ್ಲ ರೈತರಿಗೆ ಸಾವಯವ ದೃಢೀಕರಣ ಪ್ರಮಾಣ ಪತ್ರ ಕೊಡಿಸಲು ಸಂಸ್ಥೆ ತರಬೇತಿ ನೀಡುತ್ತಿದೆ. ಒಂದೂವರೆ ವರ್ಷದ ನಂತರ ‘ದೃಢೀಕೃತ ತರಕಾರಿಗಳೊಂದಿಗೆ’ ರೈತರೇ ಅಧಿಕೃತವಾಗಿ ಗ್ರಾಹಕರನ್ನು ತಲುಪುತ್ತಾರೆಂದು ಮಹದೇವ್ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಸಾವಯವ ತರಕಾರಿಗಳಿಗೆ ಮಾಮೂಲಿ ತರಕಾರಿಗಳಿಗಿಂತ ಶೇ 15ರಷ್ಟು ಬೆಲೆ ಹೆಚ್ಚಿದೆ. ‘ಆದರೂ ಈಗಿನ ತರಕಾರಿ ಬೆಲೆಗೆ ಹೋಲಿಸಿದರೆ ಇವುಗಳ ಬೆಲೆ ಸ್ಪರ್ಧಾತ್ಮಕವಾಗಿಯೇ ಇದೆ’ ಎನ್ನುತ್ತಾ ಬೆಲೆ ಪಟ್ಟಿಯತ್ತ ಕೈ ತೋರುತ್ತಾರೆ ರಾಮಚಂದ್ರ. ‘ಬೆಲೆ ಯಾರೂ ನೋಡ್ತಿಲ್ಲ ಸರ್, ತರಕಾರಿ ವಿಷರಹಿತವಾಗಿದೆಯಾ ಎಂದು ಕೇಳ್ತಾರೆ. ಅದಕ್ಕಾಗಿಯೇ ಸಂಸ್ಥೆ ಪ್ರತಿ ತರಕಾರಿ ಮೇಲೂ ‘ಇದು ಸಾವಯದಿಂದ ಬೆಳೆಯುತ್ತಿರುವ ತರಕಾರಿ’ ಎಂಬ ಲೇಬಲ್ ಅಂಟಿಸಿದೆ’.

ಜ್ಯೂಸ್, ಜಾಮ್‌ಗೂ ಬೇಡಿಕೆ: ಮೇಳದಲ್ಲಿ ತರಕಾರಿ, ಹಣ್ಣುಗಳಷ್ಟೇ ಅಲ್ಲದೇ ಮೌಲ್ಯವರ್ಧಿತ ಉತ್ಪನ್ನಗಳಾದ ಜ್ಯೂಸ್, ಜಾಮ್, ಜೆಲ್ಲಿ, ತರಕಾರಿ ಉಪ್ಪಿನಕಾಯಿಗಳೂ ದಾಖಲೆ ಪ್ರಮಾಣದಲ್ಲಿ ಖರ್ಚಾಗಿದೆ. ಹಿಮಾಚಲ ಪ್ರದೇಶದ ಫ್ಯಾಷನ್ ಫ್ರೂಟ್ ಜ್ಯೂಸ್, ಮಿಕ್ಸೆಡ್ ಫ್ರೂಟ್ ಜಾಮ್ ಕೊಡಗಿನ ಜೇನು, ತಮಿಳುನಾಡು, ಕೇರಳದ ಗೋಡಂಬಿ, ದ್ರಾಕ್ಷಿ, ನೆಲ್ಲಿ ಜ್ಯೂಸ್, ಶಿರಸಿಯ ಕೋಕಂ, ಕೋಕಂ ಸಿಪ್ಪೆ, ಬಾಗಲಕೋಟೆಯ ಒಣ ದ್ರಾಕ್ಷಿಗೆ ಗ್ರಾಹಕರು ಮನಸೋತಿದ್ದಾರೆ.

‘ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ ವ್ಯಾಪಾರ ಕಡಿಮೆ. ಹಾಗಾಗಿ ಕಡಿಮೆ ವಸ್ತುಗಳನ್ನು ತಂದಿದ್ದೆವು. ಈಗ ಮೂರೇ ದಿನಕ್ಕೆ ಎಲ್ಲ ಖಾಲಿಯಾಗಿದೆ. ಇನ್ನೆರಡು ದಿನಕ್ಕೆ ಹೊಸದಾಗಿ ಜ್ಯೂಸ್, ಜೇನು ತರಿಸಿದ್ದೇವೆ’ –  ಶಿರಸಿಯ ಕದಂಬ ಮಾರ್ಕೆಟಿಂಗ್ ಸಂಸ್ಥೆಯ ಗಣಪತಿ ಭಟ್ ಗ್ರಾಹಕ ಬೇಡಿಕೆ ಪ್ರಮಾಣ ವಿವರಿಸಿದರು. ಭಟ್ಟರ ಮಳಿಗೆಯಲ್ಲಿ 100ಕ್ಕೂ ಹೆಚ್ಚು ಕೋಕಂ ಜ್ಯೂಸ್, ಸಿಪ್ಪೆ, ಜೇನು, ಜಾಮ್ ಮಾರಾಟವಾಗಿದೆ.  ‘ಗ್ರಾಹಕರ ಸಂಖ್ಯೆ ಕಡಿಮೆಯಿದ್ದರೂ ವ್ಯಾಪಾರ ಜೋರಾಗಿರುತ್ತದೆ’ ಎನ್ನುವುದು ಅವರ ಅಭಿಪ್ರಾಯ.

ಒಟ್ಟಾರೆ ಮೇಳದಲ್ಲಿ ಹಣ್ಣಿನ ವ್ಯಾಪಾರ ಜೋರು. ಈಶಾನ್ಯ ರಾಜ್ಯದ ಹಣ್ಣುಗಳನ್ನು ನೋಡಬೇಕು, ಮಕ್ಕಳಿಗೆ ತೋರಿಸಬೇಕು, ರುಚಿ ಸವಿಯ ಬೇಕೆಂದವರಿಗೆ ‘ನಿರಾಸೆ’. ಸಕಾಲದಲ್ಲಿ ಹಣ್ಣಿನ ಮೇಳ ನಡೆಸಿದ್ದರೆ ಪ್ರದರ್ಶನ ಇನ್ನೂ ಯಶಸ್ವಿಯಾಗುತ್ತಿತ್ತು ಎನ್ನುವುದು ಹಣ್ಣು ಬೆಳೆಗಾರರ ಅಭಿಪ್ರಾಯ. ಪ್ರಚಾರಕ್ಕೆ ತಕ್ಕ ಹಣ್ಣುಗಳು ಮೇಳದಲ್ಲಿರಬೇಕು ಎನ್ನುವುದು ಗ್ರಾಹಕರ ಬೇಡಿಕೆ.

ಪ್ರಶ್ನೆಗಳಾಗಿ ಉಳಿದಿದ್ದು
ಸಾವಯವ ಹಣ್ಣು, ತರಕಾರಿಗೆ ಬೇಡಿಕೆ ಇದೆ ಎಂಬುದನ್ನು ‘ಹಾರ್ಟಿ ಸಂಗಮ್ – 2010’ ಹಣ್ಣುಗಳ ಮೇಳ ಸಾಬೀತು ಪಡಿಸಿದೆ. ಇಷ್ಟೆಲ್ಲ ವಿಪುಲ ಅವಕಾಶಗಳು ನಮ್ಮ ರಾಜ್ಯದಲ್ಲಿರಬೇಕಾದರೆ, ನಮ್ಮ ರೈತರಿಗೇಕೆ ಸಾವಯವ ಉತ್ಪನ್ನಗಳನ್ನು ಮಾರಾಟ ಮಾಡಲು ಕಠಿಣವಾಗುತ್ತಿದೆ ?  ಈ ವಿಚಾರದಲ್ಲಿ ಸರ್ಕಾರದ ರಾಷ್ಟ್ರೀಯ ತೋಟಗಾರಿಕಾ ಮಿಷನ್, ರಾಜ್ಯ ತೋಟಗಾರಿಕೆ ಇಲಾಖೆ, ಸಾವಯವ ಕೃಷಿ ಮಿಷನ್.. ಇತ್ಯಾದಿ ಇಲಾಖೆಗಳು(ವಿಭಾಗಗಳು) ಸರಿಯಾದ ದಾರಿಯಲ್ಲಿ ಹೋಗುತ್ತಿಲ್ಲವೇ ? ಅಥವಾ ಬೆಳೆಗಾರರನ್ನು ಸಂಘಟಿಸುವಲ್ಲಿ ವಿಫಲವಾಗಿರಬಹುದೇ ? – ಹಾರ್ಟಿ ಸಂಗಮ್ – ಹಣ್ಣಿನ ಮೇಳದ ವಹಿವಾಟು ಕೇಳಿದ ಮೇಲೆ ಇಂಥ ಪ್ರಶ್ನೆಗಳು ಸಾಲು ಸಾಲಾಗಿ ಉದ್ಭವಿಸುತ್ತಿವೆ.

ಫಲ ಸಂಗಮ

ಲಾಲ್‌ಬಾಗ್‌ನಲ್ಲಿ ಇಂದಿನಿಂದ ನ. 29ರ ವರೆಗೆ ನಡೆಯುವ ‘ಸಂಗಮ’ದಲ್ಲಿ ದೇಶದ ವಿವಿಧ ಭಾಗಗಳ ಹಣ್ಣುಗಳನ್ನು ನೋಡಬಹುದು, ಕೊಳ್ಳಬಹುದು. ಇದರಲ್ಲಿ ಕೆಲವಂತೂ ಅಪರೂಪದ್ದು. ಪ್ರದರ್ಶನ ಸಮಯ ಬೆಳಿಗ್ಗೆ 9 ರಿಂದ ಸಂಜೆ 7ಗಂಟೆ.

ಚುಮು ಚುಮು ಚಳಿಯಲ್ಲಿ ಲಾಲ್‌ಬಾಗ್ ಸುತ್ತುವುದೆಂದರೆ, ಅದೊಂದು ರೋಮಾಂಚನ ಅನುಭವ. ಕಣ್ಮನ ಸೆಳೆಯುವ ಬಣ್ಣ ಬಣ್ಣದ ಪುಷ್ಪರಾಶಿ, ಪರಿಮಳ ಸೂಸುವ ಪುಷ್ಪಗಳು, ಅಲಂಕಾರಿಕ ಗಿಡಗಳು… ಮೈ ಸೋಕುವ ತಂಗಾಳಿ.. ಒಟ್ಟಾರೆ ಗಿರಿಧಾಮದಲ್ಲಿದ್ದಂತಹ ಅನುಭವ !

ಇಂಥ ಪರಿಮಳದ ಹಿತಾನುಭವದೊಂದಿಗೆ ಬಾಯಿ ಚಪ್ಪರಿಸಲು ಹಣ್ಣುಗಳಿದ್ದರೆ ಎಷ್ಟು ಚಂದ ಅಲ್ಲವೇ? ಕೆಂಪು ತೋಟ ಸುತ್ತುತ್ತಾ ಹೀಗೆ ಯೋಚಿಸುವಿರಾದರೆ ಗುರುವಾರದಿಂದ ಲಾಲ್‌ಬಾಗ್‌ನಲ್ಲಿ ಆರಂಭವಾಗುವ ‘ಸಂಗಮ’ ಹಣ್ಣಿನ ಮೇಳದಲ್ಲಿ ಭಾಗವಹಿಸಿ. ಅಹ್ಲಾದಕರ ವಾತಾವರಣದ ಜೊತೆಗೆ ನೀವು ನೋಡಿರದ ಹಣ್ಣುಗಳನ್ನು ವೀಕ್ಷಿಸಬಹುದು. ಮಾತ್ರವಲ್ಲ… ರುಚಿನೋಡದ ಹಣ್ಣುಗಳನ್ನು ಕೊಂಡು ರುಚಿ ನೋಡಬಹುದು.

ಹಾರ್ಟಿ ಸಂಗಮ್
ದೇಶದ ವಿವಿಧೆಡೆ ಬೆಳೆಯುವ ಚಳಿಗಾಲದ ಹಣ್ಣುಗಳ ಸಮಾಗಮವೇ ‘ಹಾರ್ಟಿ ಸಂಗಮ್ – 2010’ ಹಣ್ಣುಗಳ ಮೇಳ. ಇಲ್ಲಿ ಹತ್ತು ರಾಜ್ಯಗಳ ಎಪ್ಪತ್ತೆರಡು ಹಣ್ಣಿನ ಬೆಳೆಗಾರರು ವೈವಿಧ್ಯಮಯ ಹಣ್ಣುಗಳನ್ನು ಪ್ರದರ್ಶನಕ್ಕಿಡುತ್ತಾರೆ.

ನಮ್ಮದೇ ರಾಜ್ಯದ ಜಾಪುರ, ಕೊಡಗು ಭಾಗದಿಂದ ವಿವಿಧ ಕಿತ್ತಳೆ, ಮೋಸಂಬಿ ತಳಿಗಳು, ಮಹಾರಾಷ್ಟ್ರದ ಸಾತಾರದ ಕಿತ್ತಳೆ ತಳಿಗಳು, ನಿಂಬೆ ಜಾತಿಯ ಹಣ್ಣುಗಳು, ಅನಾನಸ್ ಈ ಪ್ರದರ್ಶನದ ಪ್ರಮುಖ ಆಕರ್ಷಣೆ. ಜೇನು, ಒಣ ದ್ರಾಕ್ಷಿ, ಗೋಡಂಬಿ, ಖರ್ಜೂರದಂಥವು ಕೂಡ ಇಲ್ಲಿ ತಮ್ಮ ಅಸ್ತಿತ್ವ ತೋರಿಸಲಿವೆ.

ತೋಟಗಾರಿಕೆ ಯೋಜನೆಗಳಲ್ಲಿ ನೆರವು ಪಡೆದಿರುವ ಉತ್ಪಾದಕ ರೈತರು, ತಂತ್ರಜ್ಞಾನ ವರ್ಗಾವಣೆಯಡಿ ತರಬೇತಿ ಪಡೆದವರು, ಹಣ್ಣು ಬೆಳೆಗಾರರ ಸಂಘದವರು, ಹಾಪ್‌ಕಾಮ್ಸ್ ಮತ್ತು ಆಯ್ದ ರಫ್ತುದಾರರು ಮತ್ತು ಸಂಸ್ಕರಣೆದಾರರು ಈ ಸಂಗಮದಲ್ಲಿ ಭಾಗವಹಿಸುತ್ತಾರೆ.

ಈಶಾನ್ಯ ರಾಜ್ಯಗಳ ಹಣ್ಣುಗಳು
ಈ ಮೇಳದಲ್ಲಿ ಈಶಾನ್ಯ ರಾಜ್ಯಗಳ ಹಣ್ಣುಗಳದ್ದೇ ಸಿಂಹಪಾಲು. ಅರುಣಾಚಲ ಪ್ರದೇಶ, ಸಿಕ್ಕಿಂ, ಮಿಜೊರಾಂ, ನಾಗಾಲ್ಯಾಂಡ್, ತ್ರಿಪುರ ಮತ್ತು ಮೇಘಾಲಯದ ರಾಜ್ಯಗಳಲ್ಲಿ ಬೆಳೆಯುವ ಹಣ್ಣುಗಳನ್ನು ಪ್ರದರ್ಶನಕ್ಕಿಟ್ಟು ಮಾರಾಟ ಮಾಡಲಾಗುತ್ತದೆ.

ಯೂರೋಪಿಯನ್ ಕಕುಂಬರ್, ಲಿಚಿ, ಕಿವಿ, ಪ್ಯಾಷನ್ ಫ್ರೂಟ್, ಸ್ಟ್ರಾಬೆರಿಯಂತಹ ಹಣ್ಣುಗಳ ಮಹಾನಗರದ ಜನತೆಗೆ ಅಪರೂಪ. ಇಂಥ ಹಣ್ಣುಗಳನ್ನು ನೋಡುವ, ರುಚಿ ಸವಿಯುವ ಅವಕಾಶ ಈ ಮೇಳದಲ್ಲಿದೆ. ಇವೆಲ್ಲದರ ಜೊತೆಗೆ ದ್ರಾಕ್ಷಾ ರಸ (ಗ್ರೇಪ್ ವೈನ್) ಕೂಡ ಪ್ರದರ್ಶನದಲ್ಲಿರುತ್ತದೆ. ಆದರೆ ಇದನ್ನು ‘ಸವಿ’ಯುವ ಅವಕಾಶವಿಲ್ಲ ಅಂತ ಮೇಳದ ಸಂಘಟಕರು ‘ಸ್ಟಾರ್’ ಮಾರ್ಕ್ ಹಾಕಿದ್ದಾರೆ!

‘ಈ ಮೇಳದಲ್ಲಿ ಪ್ರಸಕ್ತ ಋತುಮಾನದಲ್ಲಿ ಬೆಳೆಯುವ ಹಾಗೂ ಲಭ್ಯವಿರುವ ಎಲ್ಲ ವಿಶೇಷ ಹಣ್ಣುಗಳನ್ನು ಪ್ರದರ್ಶನದಲ್ಲಿಡ ಲಾಗುತ್ತದೆ. ಉತ್ತಮ ರುಚಿ ಹಾಗೂ ಯೋಗ್ಯ ಬೆಲೆಗೆ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತದೆ’ ಎನ್ನುತ್ತಾರೆ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕರಾದ ಷಣ್ಮುಖಪ್ಪ ಅವರು.

ನಾಲ್ಕು ದಿನಗಳ ಕಾಲ ನಡೆಯುವ ಈ ಮೇಳವನ್ನು ತೋಟಗಾರಿಕೆ ಮತ್ತು ಸಕ್ಕರೆ ಸಚಿವ ರವೀಂದ್ರನಾಥ್ ಅವರು ಉದ್ಘಾಟಿಸುತ್ತಾರೆ. ಶಾಸಕ ಹೇಮಚಂದ್ರ ಸಾಗರ್, ಸಂಸದ ಅನಂತಕುಮಾರ್ ಭಾಗವಹಿಸಲಿದ್ದಾರೆ.

(http://www.prajavani.net/Content/Nov252010/metrothurs20101124214445.asp)

ಅದ್ಭುತ ಮರಳು ಶಿಲ್ಪ !

ನಿಜಕ್ಕೂ ಆ ಇಮೇಲ್ ಅದ್ಭುತವಾಗಿತ್ತು. ಸಾಮಾನ್ಯವಾಗಿ ಗೆಳೆಯ ಅಮೃತ ಜೋಗಿ ಕಳುಹಿಸುವ ಮೇಲ್ ಗಳು ಹೀಗೆ ಉದ್ಘರಿಸುವಂತೆ ಮಾಡುತ್ತವೆ. ಇವತ್ತು ಕೂಡ ಅಂಥದ್ದೇ ಒಂದು ಮೇಲ್ ಕಳುಹಿಸಿದ್ದಾರೆ. ವಿದೇಶೀಯನೊಬ್ಬರ ಮರಳಿನಲ್ಲಿ ವಿವಿಧ ಪ್ರತಿಮೆಗಳನ್ನು ಮಾಡಿದ್ದಾನೆ. ಹಾಸ್ಯ, ಕ್ರೌರ್ಯ, ಗಂಭೀರ, ಶೃಂಗಾರ, ವಾತ್ಸಾಯನ, ರಾಜಕೀಯ.. ಹೀಗೆ ಹಲವು ವೈವಿಧ್ಯಗಳಿವೆ. ವೈರುಧ್ಯಗಳೂ ಇವೆ. ಅಂಥ ಹದಿನೈದಕ್ಕೂ ಅಧಿಕ ಚಿತ್ರಗಳಲ್ಲಿ ಒಂದು ಚಿತ್ರ ನನಗೆ ತುಂಬಾ ಇಷ್ಟವಾಯಿತು. ಹಾಗೆ ನಿಮ್ಮೊಡನೆ ಹಂಚಿಕೊಳ್ಳಬೇಕೆನಿಸುತು.

ಬಿದಿರು ಬೊಂಬಿನ ಸಂಗೀತ ಸಂಜೆ

ಸೆಪ್ಟೆಂಬರ್ 18, ವಿಶ್ವ ಬಿದಿರು ದಿನ. ಹೀಗೆಂದು ಗೊತ್ತಾಗಿದ್ದು ಡೆಕನ್ ಹೆರಾಲ್ಡ್ ನ ಪನೋರಮಾ ಪುಟದಲ್ಲಿ  ಅಪ್ಪಿಕೋ ಚಳುವಳಿ ನೇತಾರ ಪಾಂಡುರಂಗಹೆಗಡೆಯವರ ಬರೆದ ಲೇಖನ ಓದಿದ ಮೇಲೆ. ಈ ಸಂದರ್ಭದಲ್ಲಿ  ‘ಬಿದಿರಿನ ಗೆಳೆಯ’ ಕೇರಳದ ಉನ್ನಿಕೃಷ್ಣ ಪಕ್ಕನಾರ್ ನನಪಾದರು. ಹತ್ತಾರು ಬಿದಿರು ವಾದ್ಯಗಳ ಮೂಲಕ ಸಂಗೀತ ಸುಧೆ ಹರಿಸುತ್ತಾ ಪರಿಸರ ಸಂರಕ್ಷಣೆಗಾಗಿ ಪಣ ತೊಟ್ಟಿರುವ ಉನ್ನಿಕೃಷ್ಣ ತಂಡದ ಬಗ್ಗೆ ಕೆಲವು ತಿಂಗಳುಗಳ ಹಿಂದೆ ಕರ್ನಾಟಕ ದರ್ಶನದಲ್ಲಿ ಲೇಖನ ಬರೆದಿದ್ದೆ. ಹಾಗೆ ನೆನಪಿಸುವ ಸಲುವಾಗಿ ಇಲ್ಲಿ ಪೋಸ್ಟ್  ಮಾಡಿದ್ದೇನೆ.

ಉನ್ನಿಕೃಷ್ಣ ಸಂಗೀತ ತಂಡ

Our Bamboo,
Our Music,
Our Planet,
Save Bamboo,
Save Athirapilly,
Save Western ghats,

– ಹೀಗೆ ‘ಪ್ರಾರ್ಥಿಸುತ್ತಲೇ’ ಉನ್ನಿಕೃಷ್ಣ ಪಕ್ಕನಾರ ಮತ್ತು ತಂಡದವರು ‘ಬೊಂಬಿನ ಸಂಗೀತ ಸಂಜೆ’ ಆರಂಭಿಸುತ್ತಾರೆ. ಬಿದಿರಿನಿಂದ ತಯಾರಿಸಿದ ಸಂಗೀತ ವಾದ್ಯಗಳನ್ನು ನುಡಿಸುತ್ತಾ ಜನಪದ ಗೀತೆಗಳನ್ನು ಹಾಡುತ್ತಾರೆ. ನೋಡುಗರು ಮತ್ತು ಕೇಳುಗರನ್ನು ಮಂತ್ರಮುಗ್ಧರನ್ನಾಗಿಸುತ್ತಾರೆ.

‘ಸಂಗೀತವೇ ನಮ್ಮ ದೇವರು, ಪರಿಸರ ಸಂರಕ್ಷಣೆಯೇ ನಮ್ಮ ಉಸಿರು. ಬಿದಿರು ಉಳಿಸಿ, ಅಥಿರಪಲ್ಲಿ ರಕ್ಷಿಸಿ, ಪಶ್ಚಿಮ ಘಟ್ಟ ಸಂರಕ್ಷಿಸಿ.. ಎಂದು ಹೇಳುತ್ತಾ ಸಂಗೀತ ಕಾರ್ಯಕ್ರಮಕ್ಕೆ ‘ಮಂಗಳ’ ಹಾಡುತ್ತಾರೆ!

ಮೂಂಗೇತರಂಗ

ಉನ್ನಿಕೃಷ್ಣ ಪಕ್ಕನಾರ್ ಹಾಗೂ ಗೆಳೆಯರು ಕೇರಳದ ತ್ರಿಶ್ಯೂರ್ ಜಿಲ್ಲೆಯವರು. ಚಾಲುಕುಡಿ ನದಿಯ ದಡದ ನಿವಾಸಿಗಳು. ತಮ್ಮ ಊರಿನ ನದಿ  ನೀರು ಬಳಸಿ ವಿದ್ಯುತ್ ತಯಾರಿಸಲು ಕೇರಳ ಸರ್ಕಾರ ಮುಂದಾದಾಗ ಆ ಪ್ರಕ್ರಿಯೆ ವಿರುದ್ಧ ಹೋರಾಟ ನಡೆಸಲು ಉನ್ನಿಕೃಷ್ಣ ಬಿದಿರು ವಾದ್ಯಗಳ ಆರ್ಕೆಸ್ಟ್ರಾ ತಂಡವನ್ನು ಕಟ್ಟಿದರು. ಕಳೆದ ಹತ್ತು ವರ್ಷಗಳಿಂದ ‘ಮೂಲ ಪಾಡುಂ ರಾವು’(ಬಿದಿರು ಸಂಗೀತ ಸಂಜೆ) ತಂಡದೊಂದಿಗೆ ಪರಿಸರ ಸಂರಕ್ಷಣೆಗೆ ಧ್ವನಿಯಾಗಿದ್ದಾರೆ.

‘ಬ್ಯಾಂಬೂ ಮ್ಯೂಸಿಕ್ ತಂಡ’ದಲ್ಲಿ ಹತ್ತು ಮಂದಿ ನುರಿತ ಕಲಾವಿದರಿದ್ದಾರೆ. ಎಂಬತ್ತಕ್ಕೂ ಹೆಚ್ಚು ವೈವಿಧ್ಯಮಯ ಬಿದಿರು ವಾದ್ಯಗಳನ್ನು ಈ ತಂಡದ ಕಲಾವಿದರು ಬಳಸುತ್ತಾರೆ. ಅವನ್ನು ಅವರೇ ತಯಾರಿಸಿದ್ದಾರೆ.  ವಾದ್ಯಗಳಿಗೆ ಧ್ವನಿ ಆಧರಿಸಿ ಹೆಸರಿಟ್ಟಿದ್ದಾರೆ. ‘ಮೊಳದುದ್ದ  ಬಿದಿರಿಗೆ ಒಂದು ರಂಧ್ರ ಮಾಡಿದರೆ ‘ಅಂಬಾ’ ಎಂಬ ಶಬ್ದ ಹೊಮ್ಮುತ್ತದೆ. ಅದಕ್ಕೆ ‘ಅಂಬಾ’ ಎಂದು ಹೆಸರಿಟ್ಟೆವು. ಇದೇ ಬೇಸ್ ವಾಯ್ಸೆ. ಇನ್ನೊಂದಕ್ಕೆ ಮರಿಂಬಾ, ಮತ್ತೊಂದಕ್ಕೆ ಮೂಲಂ ತಡಿ (ರಿದಂ ಪ್ಯಾಡ್), ಮೂಲಂತಟ್ಟು (ರಿದಂ ಪ್ಯಾಡ್‌ನಂತಹ ವಾದ್ಯ), ನ್ಯಾಲಿಕೋರ್,  ಆಂಕ್ಲನ್ – ಸೈಲೋ ಫೋನ್ (ಇಂಡೋನೇಷ್ಯಾದ ವಾದನ), ಮುಂಗೇತರಂಗ್, ಪ್ಯಾನ್ ಪ್ಲೂಟ್(ಮೌತ್ ಆರ್ಗನ್), ಮರುಮೂಳಿ (ಮಳೆ ಹನಿ ಶಬ್ದ ಹೊರಡಿಸುವ ವಾದ್ಯ), ಪಕ್ಕನಾರ್-1 ಮತ್ತು ಪಕ್ಕನಾರ್-2 ಹೀಗೆ ಅವರದೇ ವಿಧಾನಗಳಲ್ಲಿ ವಾದ್ಯಗಳನ್ನು ಅನುಶೋಧಿಸಿದ್ದಾರೆ. ವಿಶೇಷವೆಂದರೆ ಪ್ರತಿ ವಾದ್ಯದ ಅನುಶೋಧನೆಯ ಹಿಂದೆ ಪರಿಸರದ ಲಯವಿದೆ. ತಾಳವಿದೆ. ದನಿಯಿದೆ.
ಸಂಗೀತಕ್ಕೆ ಸ್ಪೂರ್ತಿ ನೀಡಿದ ಬಿದಿರಿನೊಂದಿಗೆ ತನ್ನ ಹಳ್ಳಿಯಲ್ಲಿ ಉನ್ನಿಕೃಷ್ಣ
ಬಿದಿರು ಸಂಗೀತದ ಬೆನ್ನ ಹಿಂದೆ…
ಉನ್ನಿಕೃಷ್ಣ ಅವರದ್ದು ಕಾಡಿನೊಳಗಿನ ಜೀವನ. ಅಲ್ಲಿನ ಪ್ರಾಣಿ, ಪಕ್ಷಿಗಳು, ಗಿಡ-ಮರಗಳೇ ಅವರ ಸ್ನೇಹಿತರು. ದುಂಬಿಗಳ ಝೇಂಕಾರ, ಹಕ್ಕಿಗಳ ಚಿಲಿಪಿಲಿ ಕಲರವ, ಮಳೆ ಹನಿ ತೊಟ್ಟಿಕ್ಕುವ ಸದ್ದು, ಬಾಗುತ್ತಾ, ಬಳುಕುತ್ತಾ, ಧುಮ್ಮಿಕ್ಕುವ ಜಲಪಾತಗಳ ಮಂಜುಳ ನೀನಾದ… ಇವೇ ಮನರಂಜನೆ. ಒಮ್ಮೆ ಉನ್ನಿಕೃಷ್ಣ ಬಿದಿರು ಮೆಳೆಯಲ್ಲಿ  ಅಡ್ಡಾಡುತ್ತಿದ್ದರು. ಆಗ ಗಾಳಿ ಸುಯ್ಯೆಂದು ಬೀಸಿತು. ಗಾಳಿಗೆ ಸುತ್ತಲಿನ ಬಿದಿರು ಮೆಳೆಗಳು ಕಟಿ ಕಟಿ ಕಟಿ ಎಂದು ಶಬ್ದಮಾಡಿದವು. ಮರ, ಗಿಡ, ಬಳ್ಳಿಗಳು ತೊನೆದಾಡಿದವು.  ತೆಳ್ಳೆನೆಯ ಮರವೊಂದು ಬಳುಕುತ್ತ ಕೊರ್ರೊ…. ಎಂದು ಕೂಗಿತು. ಬಂಡೆಯ ಸಂದಿನೊಳಗೆ ಝರಿಯೊಂದು ಬಳುಕುತ್ತ ಜುಳಕ್, ಜುಳಕ್ ಸದ್ದು ಮಾಡಿತು. ಪ್ರಕೃತಿ ಹೊಮ್ಮಿಸುತ್ತಿದ್ದ ಇಂಥ ವೈವಿಧ್ಯಮಯ ನಾದಗಳ ಜೊತೆಗೆ ಉನ್ನಿಕೃಷ್ಣ ಕೊಳಲು ಬಾರಿಸುತ್ತ ಧ್ವನಿಗೂಡಿಸಿದರು. ‘ಪ್ರಕೃತಿಯ ಜೊತೆಗಿನ ಜುಗಲ್ ಬಂದಿಯೇ ಬಿದಿರಿನ ಸಂಗೀತ ಸಾಮ್ರಾಜ್ಯ ಆರಂಭಕ್ಕೆ ಮುನ್ನುಡಿ ಬರೆಯಿತು  ಎನ್ನುತ್ತಾರೆ ಉನ್ನಿಕೃಷ್ಣ.

ಪ್ರಕೃತಿಯಿಂದ ಸಂಗೀತ ಕಲಿತ ಉನ್ನಿಕೃಷ್ಣ ಆರಂಭದಲ್ಲಿ ಕೊಳಲು ನುಡಿಸುವುದನ್ನು ಕಲಿತರು. ಆನಂತರ ಸಮಾನಾಸಕ್ತ ಗೆಳೆಯರು ಜೊತೆಯಾದರು. ಮೊದಲು ಮೌತ್ ಆರ್ಗನ್, ಡ್ರಮ್, ರಿದಂ ಪ್ಯಾಡ್.. ಹೀಗೆ ಒಬ್ಬೊಬ್ಬರು ಒಂದೊಂದು ವಾದ್ಯಗಳನ್ನು ಅನುಶೋಧಿಸಿದರು. ಇದನ್ನು ಅನುಶೋಧನೆ ಎನ್ನುತ್ತಾರೆ. ನನಗೆ ಹಾಗನ್ನಿಸಿಲ್ಲ. ಬಿದಿರು ಸಂಗೀತ ಹಾಡಿತು. ನಾವು ಅದನ್ನು ಹಿಂಬಾಲಿಸಿದೆವು ಎನ್ನುತ್ತಾರೆ ಉನ್ನಿಕೃಷ್ಣ.

ಅಂಗುಲಾಂಗ್

ಉನ್ನಿಕೃಷ್ಣ ಅವರ ಅಪ್ಪ, ಅಜ್ಜ ಬಿದಿರಿನಿಂದ ಆಟಿಕೆ ತಯಾರಿಸಿ ಸ್ಥಳೀಯ ಹಬ್ಬ, ಜಾತ್ರೆ, ಸಂತೆಗಳಲ್ಲಿ ಮಾರಾಟ ಮಾಡುತ್ತಿದ್ದರು. ಒಮ್ಮೆ ಸ್ಥಳೀಯ ಪಂಚಾಯಿತಿಯ ಉತ್ಸವದಲ್ಲಿ ತಮ್ಮ ಮಳಿಗೆ ಮುಂದೆ ನಿಂತ ಗ್ರಾಹಕರು, ಅವುಗಳನ್ನು ನೋಡಿ ಹಾಗೇ ಹೊರಟು ಹೋಗುತ್ತಿದ್ದರು. ಈ ಗ್ರಾಹಕರನ್ನು ಸೆಳೆಯುವ ಮನಸ್ಸಾಯಿತು. ಮಾರನೆ ದಿನ ಮಳಿಗೆಯೊಳಗೆ ಕುಳಿತು ‘ನಾಧಿನ್ ಧಿನ್ನಾ,ನಾಧಿನ್ ಧಿನ್ನಾ’ ಅಂತ ಬಿದಿರಿನ ದಮಡಿ ನುಡಿಸಲು ಆರಂಭಿಸಿದರು. ‘ದಮಡಿ ತಾಳಕ್ಕೆ ಗ್ರಾಹಕರು ಮನ ಸೋತರು. ಮಳಿಗೆ ಎದುರು ಬಂದು ನಿಂತರು. ಬಿದಿರಿನ ಆಟಿಕೆಗಳ ವ್ಯಾಪಾರ ಕುದುರಿತು. ನನ್ನ ಈ ಅವತಾರ ನೋಡಿ ಕೆಲವರು ಹುಚ್ಚ ಎಂದರು ಎಂದು ಹಳೆಯ ನೆನಪುಗಳನ್ನು ಬಿಚ್ಚಿಡುತ್ತಾರೆ ಉನ್ನಿಕೃಷ್ಣ.

ಸಂಗೀತ – ಹೋರಾಟದ ನಂಟು:

ಬಿದಿರು ಸಂಗೀತ ತಂಡ ಆರಂಭವಾಗಿದ್ದು ಹವ್ಯಾಸ ಮತ್ತು ಮನರಂಜನೆಗಾಗಿ. ಕೆಲ ವರ್ಷಗಳ ಹಿಂದೆ ಕೊಟ್ಟನೆಲ್ಲು ಸಮೀಪ ಚಾಲುಕುಡಿ ನದಿ(ಅಥಿರಪಲ್ಲಿ ಜಲಪಾತ) ನೀರು ಬಳಸಿ ವಿದ್ಯುತ್ ತಯಾರಿಸಲು ಸರ್ಕಾರ ತೀರ್ಮಾನಿಸಿತು. ಈ ನದಿ ರಕ್ಷಣೆಗಾಗಿ ಹಲವು ಸಂಸ್ಥೆಗಳು ಹೋರಾಟ ಆರಂಭಿಸಿದವು. ‘ಪ್ರಕೃತಿಯನ್ನೇ ತಾಯಿ ಎಂದು ನಂಬಿರುವ ನಾವು ಆಕೆಯನ್ನು ಉಳಿಸಿಕೊಳ್ಳುವ ಸಲುವಾಗಿ ಪರಿಸರ ಹೋರಾಟಕ್ಕೆ ಕೈಜೋಡಿಸಿದೆವು. ಸಂಗೀತದ ಮೂಲಕ ಹೋರಾಟಕ್ಕೆ ಧ್ವನಿಯಾದೆವು’

‘ಪರಿಸರ ಹೋರಾಟ ಎನ್ನುತ್ತೀರಿ, ಬಿದಿರು ಕಡಿದು ವಾದ್ಯಗಳನ್ನು ಮಾಡಿಕೊಂಡಿದ್ದೀರಲ್ಲ? ಎಂಬ ಪ್ರಶ್ನೆಗೆ  ‘ಬಿದಿರು ಕಡಿದಂತೆ ಬೆಳೆಯುವ ಸಸ್ಯ. ಮಾನವನ ಬದುಕಿನ ಆದಿಯಿಂದ ಅಂತ್ಯದವರೆಗೂ ಬಿದಿರು ಬಳಕೆಯಾಗುತ್ತದೆ ಎಂಬ ವಿವರಣೆ ನೀಡುತ್ತಾರೆ.

ಹತ್ತು ವರ್ಷಗಳಿಂದ ಪರಿಸರ ಹೋರಾಟದಲ್ಲಿ ಸಕ್ರಿಯರಾಗಿರುವ ಬಿದಿರು ಸಂಗೀತ ತಂಡ ದೇಶದ ವಿವಿಧೆಡೆ ಸಂಗೀತ  ಕಾರ್ಯಕ್ರಮ ನೀಡಿದೆ. ಕೇರಳದ ‘ಅಥಿರಪಲ್ಲಿ ಉಳಿಸಿ’ ದಕ್ಷಿಣ ಭಾರತದ ಪಶ್ಚಿಮ ಘಟ್ಟ ಉಳಿಸಿ  ಹೋರಾಟ ಸೇರಿದಂತೆ ಹಲವು ಪರಿಸರ ಚಳವಳಿಗಳಲ್ಲಿ ಅವರು ಭಾಗವಹಿಸಿದ್ದಾರೆ. ಹೋರಾಟದ ಕಾರ್ಯಕ್ರಮಗಳಲ್ಲಿ ಉಚಿತವಾಗಿ ಮತ್ತು ಖಾಸಗಿ ಕಾರ್ಯಕ್ರಮಗಳಲ್ಲಿ ಸಂಭಾವನೆ ಪಡೆಯುವ ಉನ್ನಿಕೃಷ್ಣ ‘ಎರಡು ಹೊತ್ತಿನ ಊಟಕ್ಕೆ ಹಣ ಸಿಕ್ಕರೆ ಸಾಕು. ಸಂಗೀತದಿಂದ  ದುಡ್ಡು ಮಾಡುವ ಅಗತ್ಯ ಇಲ್ಲ’ ಎನ್ನುತ್ತಾರೆ.

ಮೂಲಂ ತುಡಿ

ಉನ್ನಿಕೃಷ್ಣ ನೂರು ಕಲಾವಿದರಿರುವ ಸಂಗೀತ ತಂಡ ಕಟ್ಟಿದ್ದಾರೆ. ಅವರೊಡನೆ ಹತ್ತು ಜನರ ‘ಕೋರ್’ ಟೀಮ್ ಕೂಡ ಇದೆ. ಕಳೆದ ವರ್ಷದಿಂದ  ‘ಇನ್ಸ್ಟಿಟ್ಯೂಟ್ ಆಫ್ ಬ್ಯಾಂಬೂ ಮ್ಯೂಸಿಕ್(ಐಬಿಎಂ) ಎಂಬ ಸಂಗೀತ ಶಾಲೆಯನ್ನೂ ಆರಂಭಿಸಿದ್ದಾರೆ. ಶಾಲೆಯಲ್ಲಿ ಹತ್ತೊಂಬತ್ತು ವಿದ್ಯಾರ್ಥಿಗಳು ಸಂಗೀತ ಅಭ್ಯಾಸ ಮಾಡುತ್ತಿದ್ದಾರೆ.

ಬಣ್ಣ ಬೇಡ, ಮಣ್ಣೇ ಸಾಕು

 

ಜೈ ಗಣೇಶ…

ಬೆಂಗಳೂರಿನ ಚಾಮರಾಜ ಪೇಟೆಯ ವೀಣಾ ಕಲಾ ಮಂದಿರದವರ ತಯಾರಿಸಿರುವ ಮಣ್ಣಿನ ಗಣಪ. ಅದಕ್ಕೆ ಲೇಪಿಸಿರುವ ಬಣ್ಣಗಳು ಸುಣ್ಣ, ಅರಿಶಿಣ, ಇಜ್ಜಿಲು ಮತ್ತು ಕುಂಕುಮ

ಣೇಶ ಬಂದ
ಕಾಯಿ ಕಡಬು ತಿಂದ
ಚಿಕ್ಕ ಕೆರೆಯ್ಲಲಿ ಎದ್ದ
ದೊಡ್ಡ ಕೆರೆಯ್ಲಲಿ ಬಿದ್ದ..

ಗಣೇಶ ಹಬ್ಬ ಮುಗಿಯುತ್ತಲೇ ಹೀಗೆ ಘೋಷಣೆ ಕೂಗುತ್ತಾ ಪಕ್ಕದ ಕೆರೆಗೋ, ಹೊಂಡಕ್ಕೋ, ತೊಟ್ಟಿಗೆ ಬಣ್ಣ ಲೇಪನದ ಗಣೇಶನ ಪ್ರತಿಮೆಯನ್ನು ಮುಳುಗಿಸುತ್ತೇವೆ. ಸಂಭ್ರಮ ಸಡಗರೆದೊಂದಿಗೆ ಕುಣಿದು ಕುಪ್ಪಳಿಸಿ, ಪ್ರಸಾದ ಮೆದ್ದು ಬೆಚ್ಚನೆ ಮಲಗುತ್ತೇವೆ. ಆದರೆ ಕೆರೆಯಲ್ಲಿ ಮುಳುಗಿದ ಬಣ್ಣದ ಗಣಪನ ವಿಗ್ರಹ ಅದೆಷ್ಟು ವಿಷ ಕಕ್ಕುತ್ತದೆಂದು ನಿಮಗೆ ಗೊತ್ತೇ? ಆ ವಿಷದಿಂದ ಕೆರೆಯಲ್ಲಿರುವ ಎಷ್ಟು ಜಲಚರಗಳು ಸಾಯುತ್ತವೆಂದು ನಿಮಗೆ ಅರವಿದೆಯೇ ? ಕೆರೆಯ ನೀರು ಭೂಮಿಯಲ್ಲಿ ಇಂಗಿ, ಅಂತರ್ಜಲ ಕಲುಷಿತಗೊಳ್ಳುವ ಪ್ರಕ್ರಿಯೆ ನಿಮಗೆ ಗೊತೇ ?
ಇಲ.. ಇಂಥ ಗೊತ್ತ್ಲಿಲದ ಅದೆಷ್ಟೋ ವಿಷಯಗಳಿಂದಾಗಿ ಎಲರೂ ರಾಸಾಯನಿಕ ಮಿಶ್ರಿತ ಬಣ್ಣಗಳ ಗಣೇಶನ ವಿಗ್ರಹಗಳನ್ನು ಭಕ್ತಿಯಿಂದ ಪೂಜಿಸಿ ನೀರಿಗೆ ಹಾಕಿ ಸಂಭ್ರಮ ಪಡುತ್ತೇವೆ. ಈ ಕೃತ್ಯದಿಂದ ಪ್ರಕೃತಿಗಷ್ಟೇ ಅಲ, ಮಾನವ ಕುಲಕ್ಕೇ ಕಂಟಕ ಎಂಬುದು ಎಲರಿಗೂ ತಿಳಿಯಬೇಕಾ ಅಂಶ.

ಗಣೇಶನ ಮೂರ್ತಿ ಆದಷ್ಟೂ ಆಕರ್ಷಕವಾಗಲೆಂದು ಎನಾಮೆಲ್ ಬಣ್ಣ ಬಳಿದ ದೊಡ್ಡ ದೊಡ್ಡ ವಿಗ್ರಹಗಳನ್ನೇ ತರುತ್ತೇವೆ. ಅಂಥ ಬಣ್ಣಗಳಲ್ಲಿ ಸೀಸ, ಕ್ಯಾಡ್ಮಿಯಂ, ಕ್ರೋಮಿಯಂ ಮುಂತಾದ ವಿಷದ ರಾಸಾಯನಿಕಗಳಿರುತ್ತವೆ. ಅದರಲ್ಲೂ ಸೀಸದ ವಿಷ ತೀರಾ ಅಪಾಯಕಾರಿ. ಅದು ನೀರಿನ ಮೂಲಕ, ಆವಿಯ ಮೂಲಕ, ಉಸಿರಿನ ಮೂಲಕ ನಮ್ಮ ದೇಹಕ್ಕೆ ನೇರವಾಗಿ ಪ್ರವೇಶಿಸಬಹುದು. ಇಲ್ಲವೇ ಮಣ್ಣು, ನೀರಿನ ಮೂಲಕ ಕಾಯಿಪಲ್ಲೆ, ಗಡ್ಡೆಗೆಣಸು, ಹಣ್ಣುಹಂಪಲುಗಳ ಮೂಲಕವೂ ನಮ್ಮದೇಹಕ್ಕೆ ಪ್ರವೇಶಿಸಬಹುದು. ಈ ವಿಷ ರಕ್ತನಾಳಗಳಲ್ಲಿ ಸೇರಿಕೊಂಡರೆ ಅದು ಯಕೃತ್ತು, ಮೂತ್ರಪಿಂಡ, ಹೃದಯದ ನಾಳಗಳಿಗೆ ಹೊಕ್ಕು ಅಲೇ ಕೂತಿರುತ್ತದೆ. ಮಿದುಳಿನ ನರಕೋಶಗಳಲ್ಲಿ ಸೇರಿದರೆ, ವಿಶೇಷವಾಗಿ ಎಳೆಯ ಮಕ್ಕಳ ಬುದ್ಧಿ ಕುಂಠಿತವಾಗಬಹುದು ಎನ್ನುತ್ತಾರೆ ವಿಜ್ಞಾನಿಗಳು.

ಮೇಲ್ನೋಟಕ್ಕೆ ಅತಿಚಟುವಟಿಕೆಯಿಂದ ಆಡುತ್ತಿದ್ದರೂ ಅದರ ಏಕಾಗ್ರತೆ, ಗ್ರಹಣಶಕ್ತಿ ಕಡಿಮೆಯಾಗಬಹುದು. ಗಣಪನ ಬಣ್ಣದಲ್ಲಿರುವ ಈ ಭಾರಲೋಹಗಳು ನಮಗಷ್ಟೇ ಅಲ, ನೀರು, ಗಾಳಿ ಮತ್ತು ಮಣ್ಣಿನ ಮೂಲಕ ಇತರ ಪ್ರಾಣಿಪಕ್ಷಿಗಳ ದೇಹಕ್ಕೂ ಸೇರಿ ನಾನಾ ಬಗೆಯ ಸಂಕಟಗಳನ್ನು ತಂದೊಡ್ಡಬಹುದು ಎನ್ನುತ್ತಾರೆ ವೈದ್ಯರು.
ಗಣಪನನ್ನು ನೀರಿನಲ್ಲಿ ವಿಸರ್ಜಿಸಿದಾಗ, ವಿಗ್ರಹಕ್ಕೆ ಬಳಿದ ಬಣ್ಣದ್ಲಲಿರುವ ವಿಷವಸ್ತುಗಳು ಕ್ರಮೇಣ ನೀರಿಗೆ ಸೇರುತ್ತವೆ; ಕೆಸರಿನಲ್ಲಿರುವ ಸೂಕ್ಷ್ಮ ಜೀವಿಗಳಿಗೆ, ಮಣ್ಣಿಗೆ, ಕಳೆಸಸ್ಯಗಳಿಗೆ, ಏಡಿಗೆ, ಕಪ್ಪೆಗೆ, ನೀರೊಳ್ಳೆ ಹಾವುಗಳಿಗೆ ಮತ್ತಿತರ ಜಲಚರಗಳಿಗೆ ಸೇರುತ್ತವೆ. ಕೆರೆಯ ಆಸುಪಾಸಿನ ಜೊಂಡು ಹ್ಲುಲನ್ನು ಮೇಯುವ ದನಕರುಗಳಿಗೂ ಸೀಸ, ಕ್ಯಾಡ್ಮಿಯಂ ಸೇರುತ್ತದೆ. ವಿಘ್ನ ನಿವಾರಣೆಗಾಗಿ ಪೂಜಿಸುವ ವಿಘ್ನೇಶ್ವರನ ಹಬ್ಬದಿಂದ ನಾನಾ ಬಗೆಯ ಜೀವಿಗಳ ಸಹಜ ಬದುಕಿಗೆ ವಿಘ್ನ ತರುತ್ತದೆ.

ಹಾಗಾದರೆ ವಿಘ್ನ ಹೆಚ್ಚಾಗದಂತೆ, ಬ್ದುದಿ ಕಡಿಮೆಯಾಗದಂತೆ, ಪರಿಸರ ಹಾಳಾಗದಂತೆ ಗಣೇಶನ ಹಬ್ಬ ಮಾಡುವುದಾದರೂ ಹೇಗೆ ? ಅದಕ್ಕೆ ಇಲಿದೆ ದಾರಿ;
೧. ‘ಪ್ರಖರ ಬಣ್ಣಗಳ ಗಣೇಶ ವಿಗ್ರಹ ಖರೀದಿಸಬೇಡಿ. ಮಣ್ಣಿನ ಬಣ್ಣದ ಗಣಪನನ್ನೇ ಪೂಜಿಸಿ

೨. ‘ಇಕೊ ಕಲರ್’ ಅಂದರೆ ಸಸ್ಯರಸದ ಬಣ್ಣ ಬಳಿದ, ನೀರ‍್ಲಲಿ ಕರಗಬಲ್ಲ ತಿಳಿ ಬಣ್ಣಗಳ ಗಣೇಶನನ್ನು ಖರೀದಿಸಿ.

೩. ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಓಪಿ) ಅಥವಾ ಸುಟ್ಟ ಮಣ್ಣಿನ ಗಣೇಶಮೂರ್ತಿಗಳು ಬೇಡ. ಏಕೆಂದರೆ ಅವು ಕೊನೆಗೆ ನೀರಲ್ಲಿ ಕರಗುವುದ್ಲಿಲ. ನಿಸರ್ಗಕ್ಕೆ ಸೇರುವುದಿಲ್ಲ.

೪. ಗಣಪನ ಮಂಟಪವನ್ನು ಮತ್ತು ಪೆಂಡಾಲ್ ಕಂಬಗಳನ್ನು ಅಲಂಕರಿಸುವಾಗ ಕೃತಕ ಬಣ್ಣ ಬ್ಯಾನರ್‌ಗಳನ್ನು ಬಳಸದಿರಿ. ಒಂದು ಪಕ್ಷ ಬಳಸಿದರೂ ಹಬ್ಬದ ನಂತರ ಅವುಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡಿ. ದಯವಿಟ್ಟು ಅವುಗಳನ್ನು ಸುಡಬೇಡಿ

೫ ಗಣಪ ನೈಸರ್ಗಿಕ ದೇವರು. ಆತನನ್ನು ತೆಂಗಿನ ಗರಿಗಳಿಂದ, ನೀಲಗಿರಿ ಎಲೆಗಳಿಂದ ಅಲಂಕರಿಸುತ್ತೇವೆ. ಗರಿಕೆಗಳಿಂದ ಪೂಜಿಸುತ್ತೇವೆ. ಹಾಗಾಗಿ ಇಂಥ ಸಸ್ಯಗಳನ್ನೇ ಬಳಸಿ ಸುಂದರ ತೋರಣಗಳನ್ನು ಸಿದ್ಧಪಡಿಸಬಹುದು.
೬. ವಿಸರ್ಜನೆಯ ಸಮಯದಲ್ಲಿ ಗಣೇಶ ಮೂರ್ತಿಯ ಮೇಲಿನ ಅಲಂಕಾರಗಳನ್ನ್ಲೆಲ ಪ್ರತ್ಯೇಕಿಸಿ. ಅವು ನೀರಿಗೆ ಹೋಗಬಾರದು. ಹಾಗೇ ಸಾವಯವ ದ್ರವ್ಯಗಳು ಅಂದರೆ ತುಳಸಿ, ದೂರ್ವೆ ಪುಷ್ಪಗುಚ್ಛಗಳನ್ನೂ ಹೊರಕ್ಕೆ ತೆಗೆದಿಡಿ. ಅವೂ ನೀರನ್ನು ಸೇರಬಾರದು.

೭. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯವರು ಗಣೇಶ ವಿಸರ್ಜನೆಗೆ ನಿರ್ದಿಷ್ಟ ತಾಣಗಳನ್ನು ನಿಗದಿ ಮಾಡಿರುತ್ತಾರೆ. ಅವುಗಳ ಬಗೆಗೆ ಮೊದಲೇ ಮಾಹಿತಿ ಸಂಗ್ರಹಿಸಿ, ಅಲೇ ಗಣೇಶನನ್ನು ವಿಸರ್ಜಿಸಿ.

ವರ್ಷಕ್ಕೆ ಒಂದೇ ಬಾರಿ ಗಣಪನ ಹಬ್ಬ. ಅದು ಇಡೀ ವರ್ಷ ನೆನಪಿನ್ಲಲಿ ಉಳಿಯಬೇಕು. ಗಣೇಶನ ಹಬ್ಬ ನಿಸರ್ಗದ ಪ್ರೀತಿಯ ಸಂಕೇತವಾಗಬೇಕು. ಹೀಗೆ ಆಗಬೇಕೆಂದರೆ ಎಲರೂ ಮೇಲಿನ ನಿಯಮಗಳನ್ನು ಪಾಲಿಸಬೇಕು.

ಗಣೇಶನ ಹಬ್ಬದ ಸಂದರ್ಭದ್ಲಲಿ ಪರಿಸರದ ಮೇಲಾಗುವ ಹಾನಿಯನ್ನು ತಪ್ಪಿಸಲು ಅನೇಕ ಸಂಘಟನೆಗಳು ಪ್ರಚಾರ ಕೈಗೊಂಡಿವೆ. ಬೆಂಗಳೂರಿನ ಒಂದು ಯುವಕರ ತಂಡ ಒಂದು ವೆಬ್‌ಸೈಟ್ ತಯಾರಿಸಿ, ಅವುಗಳ ಮೂಲಕ ಸಾರ್ವಜನಿಕರ‍್ಲಲಿ ಜಾಗೃತಿ ಮೂಡಿಸುತ್ತಿದೆ. ಆ ವೆಬ್‌ತಾಣದ ಹೆಸರು ಪರಿಸರಗಣಪತಿ.ನೆಟ್(parisaraganapathi.net). ಈ ತಾಣದ್ಲಲಿ ಪರಿಸರ ಸ್ನೇಹಿ ಗಣಪತಿ ವಿಗ್ರಹಗಳು ದೊರೆಯುವ ಸ್ಥಳ, ಅವುಗಳ ಬಳಸುವ ರೀತಿ, ಪರಿಸರ ಸ್ನೇಹಿ ಗಣೇಶ ಹಬ್ಬದ ಆಚರಣೆ ಕುರಿತು ನಾಡಿನ ಸ್ವಾಮೀಜಿಗಳ ಅನಿಸಿಕೆ ಅಭಿಪ್ರಾಯಗಳನ್ನು ಪ್ರಕಟಿಸಿದೆ.

ಪರಿಸರ ಸ್ನೇಹಿ ಗಣಪನ ವಿಗ್ರಹಗಳು ದೊರೆಯುವ ವಿಳಾಸ:

‘ಕರ್ನಾಟಕ ಹಸ್ತಶಿಲ್ಪಕಲಾ ಮಂಡಲಿ’ – ೦೮೦೨೩೫೬೭೪೭೦ – ಮಣ್ಣಿನ, ಸಹಜ ವರ್ಣದ ಇಕೊ-ಗಣೇಶ ಮೂರ್ತಿಗಳು ಸಿಗುತ್ತವೆ.
ವೀಣಾ ಕಲಾ ಮಂದಿರ, ಚಾಮರಾಜಪೇಟೆ, ಬೆಂಗಳೂರು – ೯೨೪೧೭೧೫೦೦೮, ೯೯೦೧೩೦೩೩೯೦.
ಹೆಚ್ಚಿನ ವಿಳಾಸಗಳಿಗೆ parisaraganapathi.net ನೋಡಿ.

ದಿಮ್ಮನೆ ರಂಗ, ದಿಮ್ಮನೆ ರಂಗಿ, ತಿನ್ನಲೆ ರಂಗ, ತಿನ್ನಲೆ ತೆಂಗ…!

ತೆಂಗಿನ ಕಾಯಿ ಒಡೆಯುವ ಮೂಲಕ ಜಿಲ್ಲಾಧಿಕಾರಿ ಸಿ.ಸೋಮಶೇಖರ್ ಅವರಿಂದ ಸಮಾವೇಶ ಉದ್ಘಾಟನೆ

ತೆಂಗಿನ ಹಾಡು ತುಮಕೂರು
ಕೊಬ್ಬರಿ ನಾಡು ತಿಪಟೂರು
ದಿಮ್ಮನೆ ರಂಗ, ದಿಮ್ಮನೆ ರಂಗಿ ತಿನ್ನಲೆ ರಂಗ, ತಿನ್ನಲೆ ತೆಂಗ !!

– ಸೈಕಲ್ ಮೇಲೆ ಕುಳಿತೇ ಇಂಥ್ದದೊಂದು ಕವಿತೆ ಗೀಚಿದ ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ, ತೆಂಗು ಉಳಿಸಿ ಸೈಕಲ್ ಜಾಥಕ್ಕೆ ಚಾಲನೆ ನೀಡಿದರು. ನೂರಾರು ರೈತರೊಂದಿಗೆ ಜಾಥದ ಉದಕ್ಕೂ ಕಲ್ಪವೃಕ್ಷಕ್ಕೆ ಅಂಟಿರುವ ಕಳಂಕ, ಕಂಪೆನಿಗಳ ಅಪಪ್ರಚಾರ, ಎಳನೀರಿನ ಆರೋಗ್ಯ, ತೆಂಗಿನ ಎಣ್ಣೆಯ ಔಷಧೀಯ ಗುಣ, ತೆಂಗಿನ ವೈವಿಧ್ಯ.. ಹೀಗೆ ಹಲವು ದೃಷ್ಟಿಕೋನಗಳಿಂದ ಕಲ್ಪವೃಕ್ಷವನ್ನು ಕವಿತೆಯೊಂದಿಗೆ ವಿವರಿಸುತ್ತಾ ಹೊರಟರು.

ಆಗಸ್ಟ್ ೩೧ರಿಂದ ತುಮಕೂರು ಜ್ಲಿಲೆಯ ಚಿಕ್ಕನಾಯ್ಕನಹಳ್ಳಿ, ತಿಪಟೂರು, ತುರುವೇಕೆರೆಯಿಂದ ಜಾಥಾ ಆರಂಭವಾಯಿತು. ನೂರಾರು ರೈತರು ಜಾಥಾದ್ಲಲಿ ಪಾಲ್ಗೊಂಡ್ದಿದರು. ತುರುವೇಕೆರೆಯಿಂದ ಡಾ.ನಂಜಪ್ಪ ನೇತೃತ್ವದ್ಲಲಿ ಮಹಿಳೆಯರಾದಿಯಾಗಿ ಸೈಕಲ್ ಜಾಥಾದ್ಲಲಿ ಪಾಲ್ಗೊಂಡ್ದಿದು ವಿಶೇಷ.  ತಿಪಟೂರಿನ್ಲಲಿ ಸಾವಿರಕ್ಕೂ ಹೆಚ್ಚು ಜನ ಸೇರ‍್ದಿದು ಬೆಳೆಗಾರರ ಒಗ್ಗಟ್ಟಿನ ಸಂಕೇತ. ತ್ಲಾಲೂಕಿನ ಪ್ರಮುಖ ಸ್ಥಳಗಳ್ಲಲಿ ಸಭೆ, ಚರ್ಚೆ. ಸಾಕಷ್ಟು ಬೆಳೆಗಾರರ ಬೆಂಬಲದೊಂದಿಗೆ ಜಾಥಾಕ್ಕೆ ಹಾಡು, ಕುಣಿತ, ಘೋಷಣೆಗಳ ಸಾತ್…

‘ಎಳ್ನೀರ್ ಎಳ್ನೀರ್ ನಮ್ಮೂರು.. ಎಳ್ನೀರು ಕುಡಿಯೋರ್ ಒಳ್ಳೆಯವರು.. ಮ್ದದೂರು ತಳಿ ಎಳ್ನೀರು.. ಕಾಯಿಲೆಗೆ ಮ್ದದು ಎಳ್ನೀರ್… ಎಂದು ಪ್ರಾಸ ಬದ್ಧ ಗಾನದೊಂದಿಗೆ ಸಾಗಿದ ಸೈಕಲ್ ಜಾಥಾ ಸೆಪ್ಟೆಂಬರ್ ೨ರ ‘ವಿಶ್ವ ತೆಂಗು’ ದಿನದಂದು ತುಮಕೂರಿನ ಸಿದ್ಧಾರ್ಥ ಮೆಡಿಕಲ್ ಕಾಲೇಜು ಆವರಣ ತಲುಪಿತು. ವಿಶ್ವ ತೆಂಗು ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ಸಲುವಾಗಿ ೨೨ ಸಂಘಟನೆಗಳು ಒಂದೇ ವೇದಿಕೆಯಡಿ ಈ ಅಭಿಯಾನವನ್ನು ಕೈಗೊಂಡ್ದಿದವು.

 

ತೆಂಗಿನ ಮಹತ್ವ ಸಾರುವ ಕಲ್ಪವೃಕ್ಷ ರಥ

ಬೆಲೆ ಸಿಗಬೇಕು, ಬೆಳೆ ಬಳಸಬೇಕು :

ಮಾರ್ಕೆಟ್‌ನ್ಲಲಿ ಎಲ ಬೆಲೆಗಳು ಏರುತ್ತವೆ. ತೆಂಗಿಗೆ ಬೆಲೆ ಮಾತ್ರ ಸ್ಥಿರ. ಮಾರ್ಕೆಟ್‌ನ್ಲಲಿ ಎಳನೀರು ಬೆಲೆ ೨೦ ರೂಪಾಯಿ ಆದರೂ, ರೈತರಿಗೆ ಸಿಗೋದು ೩ ರೂಪಾಯಿ. ಇಂಥ ಅವ್ಯವಸ್ಥೆಗಳು ಸರಿಯಾಗಬೇಕು. ತೆಂಗಿಗೆ ಬೆಲೆ ಸಿಗಬೇಕು. ನಮ್ಮ ಬೆಳೆ ನಾವೇ ಬಳಸುವಂತಾಗಬೇಕು. ಅಪಪ್ರಚಾರದಿಂದ ತೆಂಗು ತಿನ್ನುವುದನ್ನೇ ನ್ಲಿಲಿಸಿರುವ ಗ್ರಾಹಕರಿಗೆ ಈ ಫಲದ ಆರೋಗ್ಯದ ಗುಟ್ಟನ್ನು ತಿಳಿಸಬೇಕು. ಅದಕ್ಕಾಗಿ ಈ ಜಾಥಾ. ಎಳನೀರು ಮೇಳದಿಂದ ‘ಅಭಿಯಾನ’ ಆರಂಭವಾಯಿತು. ಈ ಸಮಾವೇಶ ಅದರ ಮುಂದುವರಿದ ಭಾಗ’ – ಅಭಿಯಾನದ ಸಂಘಟಕ ಅಣೇಕಟ್ಟೆ ವಿಶ್ವನಾಥ್ ಜಾಥಾದ ಉದೇಶ ವಿವರಿಸಿದರು.

ಹೃದಯಾಘಾತ – ತಪ್ಪು ಕಲ್ಪನೆ:

ಸಮಾವೇಶದ ಪ್ರಮುಖ ಕೇಂದ್ರ ಬಿಂದು ಹೃದ್ರೋಗ ತಜ್ಞ ಪ್ರೊ. ಬಿ.ಎಂ.ಹೆಗ್ಡೆ. ‘ಕಲ್ಪವೃಕ್ಷಕ್ಕೆ ಅಂಟಿದ’ ಕಳಂಕದ ಇತಿಹಾಸವನ್ನು ಸಮಾವೇಶದ್ಲಲಿ ಬಿಚ್ಚಿಟ್ಟ್ದಿದು ಹೀಗೆ; ‘೧೯೩೦ ರ‍್ಲಲಿ ಅಮೆರಿಕದ್ಲಲಿ ವ್ಯಾಪಕವಾಗಿ ತೆಂಗಿನ ಎಣ್ಣೆ ಬಳಕೆಯ್ಲಲಿತ್ತು. ೪೬-೪೭ರ ದಶಕದ್ಲಲಿ ಅಮೆರಿಕದ್ಲಲಿ ಸೋಯಾಬೀನ್ ಬೆಳೆಯಲು ಆರಂಭವಾಯಿತು. ಇದನ್ನು ವಿಶ್ವದ್ಲೆಲೆಡೆ ಹಂಚುವುದಕ್ಕಾಗಿಯೇ ತೃತೀಯ ರಾಷ್ಟ್ರಗಳ ಆಹಾರದ ಬಗ್ಗೆ ಅಪಪ್ರಚಾರ ಆರಂಭವಾಯಿತು. ವೈದ್ಯಕೀಯ ಪಠ್ಯಗಳ ರಚನೆಯಿಂದಲೇ ಅದಕ್ಕೆ ಚಾಲನೆ ಸಿಕ್ಕಿತು. ಅಂದು ರಚನೆಯಾದ ‘ಗೈಡ್‌ಲೈನ್’ ಇಟ್ಟುಕೊಂಡೇ ತೆಂಗಿನ ಎಣ್ಣೆಯ್ಲಲಿ ಸ್ಯಾಚುರೇಟೆಡ್ ಕೊಲೆಸ್ಟ್ರಾಲ್ ಇದೆ. ಅದನ್ನು ತಿಂದರೆ ಹೃದಯಾಘಾತವಾಗುತ್ತದೆ ಎಂದು ಈ ವೈದ್ಯರು ರೋಗಿಗಳಿಗೆ ಎಚ್ಚರಿಕೆ ನೀಡುತ್ತಾರೆ.
ಅದು ಸುಳ್ಳು. ಶುದ್ಧ ತೆಂಗಿನ ಎಣ್ಣೆ – ತಾಯಿಯ ಹಾಲ್ದಿದಂತೆ. ಈ ಎಣ್ಣೆಯಿಂದ ಹೃದ್ರೋಗ ಬರುವುದ್ಲಿಲ. ಬದಲಾಗಿ ಅದರ‍್ಲಲಿರುವ ಮಾನೋ ಲಾರಿಕ್ ಆಸಿಡ್ ಎಂಬ ಅಂಶ ಹೃದ್ರೋಗ ನಿವಾರಿಸುತ್ತದೆ. ಪ್ರತಿ ದಿನ ಬೆಳಿಗ್ಗೆ ಒಂದು ಚಮಚ ತೆಂಗಿನ ಎಣ್ಣೆ ಸೇವಿಸಿದರೆ ದೇಹದ್ಲಲಿನ ಮೆಟಬಾಲಿಕ್ ಚಟುವಟಿಕೆ ಚುರುಕುಗೊಳ್ಳುತ್ತದೆ’ ಎಂದು ಹೆಗಡೆಯವರು ವಿವರಿಸುತ್ತಾ ಹತ್ತು ನಿಮಿಷದ್ಲಲಿ ಹತ್ತಾರು ವೆಬ್‌ಸೈಟ್‌ಗಳು, ವಿಜ್ಞಾನಿಗಳು, ಪುಸ್ತಕಗಳ ವಿಳಾಸಗಳ ಸಾಕ್ಷಿಯನ್ನು ಬೆಳೆಗಾರರಿಗೆ ಒದಗಿಸಿದರು.
ಹೆಗ್ಡೆಯವರ ಮಾತಿನೊಂದಿಗೆ ಉದ್ಯಮಿಯೊಬ್ಬರು ‘ಶುದ್ಧ ತೆಂಗಿನ ಎಣ್ಣೆ’ ತುಂಬಿದ ಪುಟ್ಟ ಶೀಶೆಗಳನ್ನು ಸಮಾವೇಶದ್ಲಲಿ ವಿತರಿಸಿದರು. ಜೊತೆಗೊಂದು ತೆಂಗಿನ ಎಣ್ಣೆಯ ಆರೋಗ್ಯ ಕುರಿತ ವಿವರಣೆಯಳ್ಳ ಕರಪತ್ರವನ್ನು ನೀಡಿದರು. ಎದುರು ಕುಳಿತ್ದಿದ ಬೆಳೆಗಾರರ ಬಾಯ್ಲಲಿ ‘ಬಿಳಿಗೆರೆ’ಯ ಈ ಹಾಡಿನ ಸಾಲು ಗುನುಗುತ್ತಿತ್ತು…

ಲ್ಯಾಬಿನ ಲೋಕ ಒಂದೆಡೆ ಇರಲಿ
ನಮ್ಮನು ಮಂಗನ ಮಾಡದೇ ಇರಲಿ
ಕಣ್ಣಿಗೆ ಕಾಣುವ ಸತ್ಯದ ಗೊಂಚಲು
ಸಮಯ ಪರೀಕ್ಷೆ ಎಲಕೂ ಮೇಲು !!

ತೆಂಗಿನ ಹಣ್ಣನು ತಿನ್ನುವರು
ಹೊಳೆಯುವ ಕಣ್ಣನು ಪಡೆಯುವರು
ತೆಂಗಿನ ಮೇಲೆ ತೇಲುವರು
ಮುಳುಗದೇ ದಡವನು ಸೇರುವರು !!

 

ತಿಪಟೂರಿನಲ್ಲಿ ನಡೆದ ಜಾಥಾದ ದೃಶ್ಯ. ಇಲ್ಲಿ ದಾಖಲೆಯ ಸಂಖ್ಯೆಯಲ್ಲಿ ಬೆಳೆಗಾರರು ಜಾಥಾದಲ್ಲಿ ಪಾಲ್ಗೊಂಡಿದ್ದರು.

ಎಳನೀರ್ ಮಾರಾಟ ಮಾಡಿ :

‘ಎಳನೀರು ಮಾರಾಟ ಲಾಭದಾಕ. ಆದರೆ ಬೆಳೆಗಾರರು ಒಗ್ಗಟ್ಟಾಗಿ ಮಾರಾಟ ಮಾಡಬೇಕು. ನಮ್ಮೂರಿನ್ಲಲಿ ಈಗ ಒಂದು ಸಿಯಾಳಕ್ಕೆ ೯ ರೂಪಾಯಿ ಬೆಲೆ ಇದೆ’ – ಸಮಾವೇಶದ ಮತ್ತೊಬ್ಬ ಅತಿಥಿ ಕಾಸರಗೋಡು ಸಮೀಪದ ಮಿಯಪದವಿನ ಸಿ.ಕೆ.ಚೌಟರ ಮಾತು. ಕೆಲವು ತಿಂಗಳುಗಳ ಹಿಂದೆ ಕಿಬ್ಬನಹಳ್ಳಿಯ್ಲಲಿ ನಡೆದ ಎಳನೀರು ಮೇಳ ನೆನಪಿಸಿದ ಚೌಟರು, ತಮ್ಮೂರಿನ ಎಳನೀರು ವಹಿವಾಟು ಪ್ರಕ್ರಿಯೆ ವಿವರಿಸಿದರು.

‘ತೆಂಗು ಮಂಡಳಿ ಏನ್ ಕೆಲಸ ಮಾಡ್ತಿದೆ’ – ಸಮಾವೇಶದಲ್ಲಿ  ಹೀಗೆ ಗುಡುಗ್ದಿದು ತುರುವೇಕೆರೆಯ ವೈದ್ಯ ಡಾ. ನಂಜಪ್ಪ. ವಿಶ್ರಾಂತ ವೈದ್ಯರಾದ ನಂಜಪ್ಪ ನೂರಾರು ಬೆಳೆಗಾರರೊಂದಿಗೆ ತುರುವೇಕೆರೆಯಿಂದ ತುಮಕೂರುವರೆಗೂ ಸೈಕಲ್ ತುಳಿದುಕೊಂಡೇ ಬಂದ್ದಿದರು. ತೆಂಗು ಅಭಿವೃದ್ಧಿ ಮಂಡಳಿಯ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಬೇರೆಯವರತ್ತ ಬೊಟ್ಟು ಮಾಡುವ ಮುನ್ನ ನಮ್ಮ ಮನೆಗಳ್ಲಲಿ ಒಂದು ತೆಂಗಿನ ಕಾಯಿ ಬಳಸುವ ಜಾಗದ್ಲಲಿ ಎರಡು ಬಳಸುವಂತಾದರೆ, ನಾವು ಬೆಳದ್ದದನ್ನು ನಾವೇ ಬಳಸುವಂತಾದರೆ ನಮ್ಮ ಬೆಳೆಗೆ ಬೆಲೆ ಖಂಡಿತಾ – ಸಾವಯವ ಕೃಷಿಕ ಮಾರುಗೊಂಡನಹಳ್ಳಿ ಸದಾಶಿವಯ್ಯ ಅವರ ಅಭಿಮತ.

ಹೀಗೆ ಇಡೀ ಕಾರ್ಯಕ್ರಮದ್ದುದಕ್ಕೂ ಬೆಳೆಗಾರರು ಸಮಸ್ಯೆಗಳನ್ನು ವಿವರಿಸುತ್ತ್ದಿದರೆ ಅದನ್ನು ಆಲಿಸಬೇಕಾದ ಜನಪ್ರತಿನಿಧಿಗಳು ಸಮಾವೇಶಕ್ಕೆ ಗೈರಾಗ್ದಿದರು. ಇದನ್ನು ಗಮನಿಸಿದ ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ‘ಇಷ್ಟು ದೊಡ್ಡ ಸಮಾವೇಶ ನಡೆಯುತ್ತಿದೆ. ಇಲಿ ಬೆಳೆಗಾರರ ಸಮಸ್ಯೆಗಳನ್ನು ಕೇಳುವುದಕ್ಕಿಂತ ಈ ಜನಪ್ರತಿನಿಧಿಗಳಿಗೆ ಇನ್ನಾವ ಘನಕಾರ್ಯವಿತ್ತು’ ಎಂದು ಕಟುವಾಗಿ ಟೀಕಿಸಿದರು.

ತೆಂಗಿನ ಮೌಲ್ಯವರ್ಧಿತ ಉತ್ಪನ್ನಗಳು

ಸಮಾವೇಶದ ಒಳಗೆ ಮಾತುಗಳ ಮಳೆ. ಹೊರಗೆ ತೆಂಗಿನ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ. ಒಂದೆಡೆ ಬೆಳೆಗಾರರು ಮಾಧ್ಯಮದವರಿಗೆ ಸಂದರ್ಶನ ನೀಡುತ್ತ್ದಿದರೆ, ಹೆಗ್ಡೆಯವರ ಭಾಷಣ ಕೇಳಿದ ಗ್ರಾಹಕರು ಧೈರ್ಯವಾಗಿ ‘ತೆಂತಾ(ತಾಜಾ ತೆಂಗು) ಎಣ್ಣೆ’ ಖರೀದಿಯ್ಲಲಿ ನಿರತವಾಗ್ದಿದರು. ಒಳಗಡೆ ಸಮಾವೇಶ ಸಮಾಪ್ತಿಯಾಗುತ್ತಾ, ಸರ್ಕಾರಕ್ಕೆ ಒತ್ತಾಯಿಸುವ ಘೋಷಣೆಗಳು ಮೊಳಗುತ್ತ್ದಿದರೆ, ಇನ್ನೊಂದೆಡೆ ಮತ್ತೆ ‘ಬಿಳಿಗೆರೆಯ’ ಹಾಡಿನ ಕೊನೆ ಸಾಲುಗಳು ಬೆಳೆಗಾರರೊಬ್ಬರ ಬಾಯ್ಲಲಿ ಗುನ್ ಗುನಿಸುತ್ತಿತ್ತು…

ಕೊಲೆಸ್ಟ್ರಾಲಿನ ಕಂತೆ ಪುರಾಣ
ತೆಂಗಿಗೆ ತಗುಲದು ಸುಳ್ಳಿನ ಬಾಣ
ಕೊಬ್ಬರಿ ಎಣ್ಣೆ ತೆಂಗಿನ ಬೆಣ್ಣೆ
ಬೆಳಗು ಬೈಗು ಉಂಡವರು
ಹೃದಯದ ಕಾಯಿಲೆ ಗ್ಲೆಲುವರು
ಕೊಲೆಸ್ಟ್ರಾಲನೆ ಕ್ಲೊಲುವರು.

ದಿಮ್ಮನೆ ರಂಗ ದಿಮ್ಮನೆ ರಂಗಿ
ತಿನ್ನಲೆ ರಂಗ, ತಿನ್ನಲೆ ತೆಂಗ…!!

ತುಮಕೂರು ಘೋಷಣೆ
೧. ಕ್ವಿಂಟಾಲ್ ಕೊಬ್ಬರಿಗೆ ರೂ.೧೦೦೦೦ ವೈಜ್ಞಾನಿಕ ಬೆಂಬಲ ಬೆಲೆ ನಿಗಧಿಪಡಿಸಬೇಕು.
೨. ಎಳನೀರನ್ನು ರಾಷ್ಟ್ರೀಯ ಪಾನೀಯ ಎಂದು ಘೋಷಿಸಬೇಕು.
೩. ತೆಂಗು ಬಳಕೆಯಿಂದ ಆರೋಗ್ಯಭಾಗ್ಯ ಎಂಬುದನ್ನು ಸರ್ಕಾರ, ಇಲಾಖೆಗಳು ಪ್ರಚಾರ ಪಡಿಸಬೇಕು.
೪. ತೆಂಗು ಆಧಾರಿತ ಉತ್ಪನ್ನಗಳ ತಯಾರಿಕೆಗೆ ಮತ್ತು ಮಾರಾಟಕ್ಕೆ ಸಹಕಾರಿ ಸಂಸ್ಥೆಗಳಿಗೆ ಒತ್ತು ನೀಡಬೇಕು.
೫. ಪಡಿತರ ವ್ಯವಸ್ಥೆಯ್ಲಲಿ ವಿತರಣೆಯಾಗುತ್ತಿರುವ ಪಾಮ್‌ಆಯಿಲ್ ಬದಲಾಗಿ ತೆಂಗಿನೆಣ್ಣೆಯನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು.
೬. ವೈದ್ಯರಿಗೆ ಅದರ‍್ಲಲೂ ವಿಶೇಷವಾಗಿ ಹೃದ್ರೋಗ ತಜ್ಞರಿಗೆ ತೆಂಗಿನ ಶ್ರೇಷ್ಠತೆಯ ಬಗ್ಗೆ ಅರಿವು ಮೂಡಿಸಬೇಕು.
೭. ನಿಸ್ತೇಜವಾಗಿರುವ ರಾಜ್ಯ ತೆಂಗು ಅಭಿವೃದ್ಧಿ ಮಂಡಳಿಯ ಕಾರ್ಯಚಟುವಟಿಕೆ ಬದಲಾಗಬೇಕು.
೮. ಮಂಡಳಿಯ ಸಮಿತಿಯ್ಲಲಿ ರಾಜ್ಯದ ತೆಂಗು ಬೆಳೆಗಾರರಿಗೆ ಶೇ ೫೦% ರಷ್ಟು ಅವಕಾಶ ಕಲ್ಪಿಸಬೇಕು.
೮. ತೆಂಗು ಬೆಳೆಯುವ ಭಾಗಗಳ್ಲಲಿ ಮಂಡಳಿಯ ಶಾಖೆಗಳನ್ನು ತೆರೆದು ಬೆಳೆಗಾರರಿಗೆ ಸ್ಪಂದಿಸಬೇಕು.
೯. ವಿದೇಶದಿಂದ ಆಮದಾಗುತ್ತಿರುವ ಸೋಯಾಬೀನ್ ಎಣ್ಣೆಯನ್ನು ನಿಷೇಧಿಸಬೇಕು.
೧೦. ಈಗಾಗಲೆ ಚಾಲ್ತಿಯಲ್ಲಿರುವ ನಫೆಡ್ ಕೇಂದ್ರಗಳು ನಿರಂತರವಾಗಿ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕು.

ನಮ್ಮ ತೆಂಗು.. ನಮ್ಮ ಆರೋಗ್ಯ

ತೆಂಗು ಬೆಳೆಗಾರರೇ ಮತ್ತು ಬಳಕೆದಾರರೆ,ತೆಂಗಿನ ಎಣ್ಣೆಯು ಜಗತ್ತಿನ ಶ್ರೇಷ್ಠ ಎಣ್ಣೆ ಎಂಬುದು ಸಾಬೀತಾಗಿದೆ. ತಾಯಿಯ ಎದೆ ಹಾಲಿಗೆ ಸಮಾನವಾದ ಪೋಷಕಾಂಶಗಳಿವೆ. ತೆಂಗಿನೆಣ್ಣೆಯು ದೇಹದಲ್ಲಿ ರೋಗತರುವ ಬ್ಯಾಕ್ಟೀರಿಯಾ ಹಾಗು ವೈರಸ್‌ಗಳ ವಿರುದ್ದ ಕೆಲಸ ಮಾಡುತ್ತದೆ. ಇದರಿಂದ ಮಾಮೂಲು ಶೀತ, ನೆಗಡಿ, ಜ್ವರ, ಹೆಪಟೈಟಿಸ್, ಅಮೀಬಿಯಾಸಿಸ್, ಹರ್ಷಿಸ್ ಮತ್ತು ಎಚ್‌ಐವಿ ಮುಂತಾದ ರೋಗಗಳ ವಿರುದ್ದ ನಿರೋಧಕ ಶಕ್ತಿಯನ್ನು ಕೊಡುತ್ತದೆ. ಸಕ್ಕರೆ ಕಾಯಿಲೆ, ಹೃದಯ ರೋಗ, ರಕ್ತದೊತ್ತಡ, ಹೆಚ್ಚು ತೂಕ, ಬೊಜ್ಜುದೇಹ ಇವೆಲ್ಲ ರೋಗಿಗಳು ತಿನ್ನಬಹುದಾದ ಏಕೈಕ ಎಣ್ಣೆ ತೆಂಗಿನೆಣ್ಣೆ. ತೆಂಗಿನೆಣ್ಣೆಯಲ್ಲಿರುವ ಲಾರಿಕ್ ಆಸಿಡ್ ಎಂಬುದು ತಾಯಿಯ ಎದೆಹಾಲನ್ನು ಬಿಟ್ಟರೆ ಇಷ್ಟು ಪ್ರಮಾಣದಲ್ಲಿ (ಶೇ.೫೦) ಸಿಗುವುದು ತೆಂಗಿನೆಣ್ಣೆಯಲ್ಲಿ ಮಾತ್ರ. ಜಗತ್ತಿನಲ್ಲಿಯೇ ತೆಂಗಿನ ಎಣ್ಣೆಯನ್ನು ಹೇರಳವಾಗಿ ಬಳಸುವ ಶ್ರೀಲಂಕಾದಲ್ಲಿ ಹೃದಯಾಘಾತದ ಪ್ರಮಾಣ ಬಹಳ ಕಡಿಮೆ ಇದೆ.

  ಆದರೆ, ತೆಂಗಿನೆಣ್ಣೆಯಲ್ಲಿ ಕೊಲೆಸ್ಟರಾಲ್ ಇದೆ (ಸ್ಯಾಚುರೇಟೆಡ್ ಫ್ಯಾಟ್) ಎಂದು ಹೇಳಿ ತೆಂಗಿನ ಎಣ್ಣೆಯನ್ನು ಬಳಸಲು ಜನರು ಭಯಪಡುವಂತಹ ಸನ್ನಿವೇಶ ಬಂದೊದಗಿದೆ. ತೆಂಗಿನೆಣ್ಣೆ ತಿಂದರೆ ಹೃದಯಾಘಾತವಾಗುತ್ತೆ ಎಂದು ಜನರು ದಿಗಿಲು ಬೀಳುವಂತೆ ಮಾಡಿದ್ದಾರೆ. ಆದರೆ ಸತ್ಯ ಏನೆಂದರೆ “ತೆಂಗಿನೆಣ್ಣೆ ತಿನ್ನುವುದರಿಂದ ಹೃದಯ ಸಂಬಂಧಿಕಾಯಿಲೆಗಳು ದೂರವಾಗುತ್ತವೆ” ಎಂಬುದನ್ನು ವೈಜ್ಞಾನಿಕವಾಗಿ ಒಪ್ಪಿಕೊಳ್ಳಲಾಗಿದೆ. ತೆಂಗಿನ ಮೇಲೆ ಅಪವಾದಮಾಡಲು ಕಾರಣ, ಸೋಯಾಬೀನ್ ಎಣ್ಣೆಯನ್ನು ತೃತೀಯ ಜಗತ್ತಿನ ರಾಷ್ಟ್ರಗಳಲ್ಲಿ ಮಾರಾಟ ಮಾಡಲು ಪಾಶ್ಚಿಮಾತ್ಯ ರಾಷ್ಟ್ರಗಳು ಪಿತೂರಿ ನಡೆಸುತ್ತಿವೆ. ಇಲ್ಲಿನ ಎಣ್ಣೆಯನ್ನು ಬಳಸದಂತೆ ಮಾಡಿ ತಮ್ಮ ಎಣ್ಣೆಗಳನ್ನು ಮಾರಿಕೊಳ್ಳುತ್ತಿದ್ದಾರೆ.

 ತೆಂಗಿನೆಣ್ಣೆಯನ್ನು ಕಾಯಿಯ ರೂಪದಲ್ಲಿ ತುಮಕೂರು ಸೀಮೆ ಜನ ಹೇರಳವಾಗಿ ಬಳಸುತ್ತಿದ್ದೇವೆ. ಕರಾವಳಿಯ ಜನರಂತೂ ಕೊಬ್ಬರಿಎಣ್ಣೆ ಇಲ್ಲದೆ ಏನನ್ನೂ ಮಾಡುವುದಿಲ್ಲ. ಸಾವಿರಾರು ವರ್ಷಗಳಿಂದ ನಮ್ಮ ಜನ ತೆಂಗನ್ನು ತಿನ್ನುತ್ತಾ ಬದುಕಿದ್ದಾರೆ. ತೆಂಗು ನಮ್ಮ ಜನರ ಆಹಾರ ಸಂಸ್ಕೃತಿಯ ಭಾಗವಾಗಿದೆ. ಆಯುರ್ವೇದವೂ ತೆಂಗಿನೆಣ್ಣೆಯನ್ನು ಸಾಕಷ್ಟುಕಾಯಿಲೆಗಳಿಗೆ ಔಷಧಿಯಾಗಿ ಬಳಸಲು ಹೇಳುತ್ತದೆ.

 ಆದರೆ ಇದರ ಬಗ್ಗೆ ಮಾತನಾಡಬೇಕಾದ ಜವಾಬ್ದಾರಿಯಿರುವ ಬಹುಪಾಲು ವೈದ್ಯರು, ವಿಜ್ಞಾನಿಗಳು, ಇಲಾಖೆಗಳು, ಮಂಡಳಿಗಳು ಬಾಯಿ ಮುಚ್ಚಿ ಕುಳಿತಿದ್ದಾರೆ. ಇದೇ ಕಾರಣದಿಂದ ತೆಂಗಿನ ಉತ್ಪನ್ನಗಳ ಬೆಲೆಯೂ ಕುಸಿದಿದೆ. ಸ್ಥಳೀಯ ಬಳಕೆಯೂ ಕಡಿಮೆಯಾಗಿದೆ. ತೆಂಗು ಬಳಕೆದಾರರೇ ಎದ್ದೇಳಿ, ತೆಂಗಿನ ಶ್ರೇಷ್ಠತೆಯನ್ನು ಜಗತ್ತಿಗೆ ಸಾರೋಣ.

 ಸೆಪ್ಟಂಬರ್ ೨ ವಿಶ್ವ ತೆಂಗು ದಿನ. ಅಂದು ನಾವೆಲ್ಲರೂ ತೆಂಗು ಪ್ರಸಿದ್ದ ಚಿಕ್ಕನಾಯಕನಹಳ್ಳಿಯಿಂದ ತಿಪಟೂರಿನಿಂದ ಮತ್ತು ತುರುವೆಕೆರೆಯಿಂದ ತುಮಕೂರಿನವರೆಗೂ ಸೈಕಲ್ ತುಳಿಯುತ್ತ ಜಾಥಾ ಹೋಗಲು ತೀರ್ಮಾನಿಸಿದ್ದೇವೆ. ಆ ಮೂಲಕ ತೆಂಗು ಜಗತ್ತಿನ ಶ್ರೇಷ್ಠ ಎಣ್ಣೆಯೆಂದು ಎಲ್ಲರಿಗೂ ಹೇಳೋಣ. ತೆಂಗಿನ ಶ್ರೇಷ್ಠತೆಯನ್ನು ಸಾರುವ ಸೈಕಲ್ ಜಾಥಾದಲ್ಲಿ ನೀವು ಭಾಗವಹಿಸಿರಿ. ಭಾಗವಹಿಸುವ ಆಸಕ್ತರು ಹೆಚ್ಚಿನ ಮಾಹಿತಿಗೆ ಕೆಳಗಿನ ದೂರವಾಣಿಗಳಿಗೆ ಸಂಪರ್ಕಿಸಿ ನಿಮ್ಮ ಹೆಸರನ್ನು ನೊಂದಾಯಿಸಿಕೊಳ್ಳಿ. ನೆನಪಿರಲಿ, ನಿಮ್ಮ ಭಾಗವಹಿಸುವಿಕೆಯು ಜಗತ್ತಿಗೆ ಮುಖ್ಯ ಸಂದೇಶವೊಂದನ್ನು ಕೂಗಿ ಹೇಳಲಿದೆ. 

  ಅಲ್ಲದೆ ಇದೇ ದಿನ ಸಂಜೆ ನಾಲ್ಕುಗಂಟೆ ತೆಂಗು ಬೆಳೆಗಾರರೆಲ್ಲ ತುಮಕೂರಿನಲ್ಲಿ ಒಂದೆಡೆ ಸೇರಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮದ ಮೂಲಕ ತೆಂಗು ಜಗತ್ತಿನ ಶ್ರೇಷ್ಠ ಎಣ್ಣೆ ಎಂದು ಹೇಳಲು ರೈತರೆಲ್ಲಾ ಸೇರುತ್ತಿದ್ದಾರೆ. ತೆಂಗು ತಜ್ಞರು ಆರೋಗ್ಯದ ಬಗ್ಗೆ ಮಾತನಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತೆಂಗು ಬೆಳೆಗಾರರ ಏಕತೆಯನ್ನು ಪ್ರದರ್ಶಿಸೋಣ. ನೀವು ಬನ್ನಿ. 

ಜಾಥಾದ ಸಂಚಾಲಕರು: ಅಣೇಕಟ್ಟೆ ವಿಶ್ವನಾಥ್ ೮೦೯೫೨೨೨೭೨೮, ರಘುರಾಂ ಎಸ್. ೯೯೬೪೨೦೦೮೪೦ ಮತ್ತು ವಿನೋದ್ ೯೪೪೮೩೫೭೫೩೬

ಹೃದಯದ ಆರೋಗ್ಯಕ್ಕೆ ತೆಂಗು ಬಳಸಿ

 

  

‘ಬೀಜ ಗೆಳತನ’ಕ್ಕೆ ಕೈ ಚಾಚಿದ್ದಾರೆ ವಸಂತ ಮಾಲವಿ

ಮೇಘ ಪರಿಸರ ಬಳಗದಿಂದ 2000 ನೇ ಇಸವಿಯಲ್ಲಿ ಹಗರಿಬೊಮ್ಮನಹಳ್ಳಿ ರಸ್ತೆಯಲ್ಲಿ ಫ್ಲವರ್ ಗಿಡಗಳನ್ನು ಬೆಳೆಸಿರುವುದು

ಗೆಳೆಯ ವಸಂತ ಮಾಲವಿ, ಬಿಸಿಲ ನಾಡು ಬಳ್ಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯವರು. ಮೂಲತಃ ಛಾಯಾಗ್ರಾಹಕ. ಬಹಳ ವರ್ಷಗಳ ಕಾಲ ಪ್ರಜಾವಾಣಿ ಪತ್ರಿಕೆಗೆ ಅರೆಕಾಲಿಕ ವರದಿಗಾರರಾಗಿದ್ದರು. ಆ ಸಮಯದಲ್ಲಿ  ಕರ್ನಾಟಕ ದರ್ಶನ, ಕೃಷಿ ಹಾಗೂ ಸುಧಾ ಪತ್ರಿಕೆಯಲ್ಲಿ ಸಾಕಷ್ಟು ಲೇಖನಗಳನ್ನು ಬರೆಯುತ್ತಿದ್ದರು. ಕಳೆದ ಕೆಲವು ವರ್ಷಗಳಿಂದ ಪತ್ರಿಕೋದ್ಯಮದಿಂದ ದೂರ ಉಳಿದು ಪೂರ್ಣಪ್ರಮಾಣದ ಕೃಷಿಕರಾಗಿದ್ದಾರೆ. ಜೊತೆಗೆ ಪರಿಸರ ಸಂಘಟನೆಗಳ ಜೊತೆಗೂಡಿ  ‘ಪರಿಸರ ಸಂರಕ್ಷಣೆ’ಯತ್ತಲೂ ಹೆಜ್ಜೆ ಇಟ್ಟಿದ್ದಾರೆ. 1991ರಲ್ಲಿ ಮೇಘಪರಿಸರ ಬಳಗದ ಜೊತೆ ಸೇರಿ ರಸ್ತೆ ಬದಿಯಲ್ಲಿ ಸಸಿಗಳನ್ನು ನೆಟ್ಟಿದ್ದಾರೆ. ಅವೆಲ್ಲ  ಈಗ ಮರಗಳಾಗಿವೆ. ಹಗರಿಬೊಮ್ಮನಹಳ್ಳಿಯ ರಸ್ತೆಗಳಲ್ಲಿ ತಂಪು ನೀಡುತ್ತಿವೆ.

ಇಷ್ಟೆಲ್ಲ ನೆನಪಾಗಿದ್ದು, ‘ತಾರಸಿಯಲ್ಲಿ ವಿಷಮುಕ್ತ ತರಕಾರಿ – ಕೇರಳದ ಮಾದರಿ’ ಬರೆಹಕ್ಕೆ ವಸಂತ ಪ್ರತಿಕ್ರಿಯಿಸಿದಾಗ. ತಮ್ಮ ಪ್ರತಿಕ್ರಿಯೆಯಲ್ಲಿ ‘ಕೇರಳದ ಮಾದರಿ ಎಲ್ಲೆಡೆ

1999 ರಲ್ಲಿ ಮಹಾತ್ಮ ಗಾಂಧಿ ರಸ್ತೆ (ರಥ ಬೀದಿ)ಯಲ್ಲಿ ಬೆಳೆಸಿದ ಆಕಾಶ ಮಲ್ಲಿಗೆ ಗಿಡಗಳು

ಅನುಷ್ಠಾನಗೊಳ್ಳಬೇಕೆಂಬ’ ಆಶಯ ವ್ಯಕ್ತಪಡಿಸಿದ್ದಾರೆ. ಹಾಗೆ ಹೇಳಲು ಕಾರಣವೂ ಇದೆ.  ವಸಂತ್ ಇತ್ತೀಚೆಗೆ ಸಾವಯವ ಪದ್ಧತಿಯಲ್ಲಿ ತರಕಾರಿ ಬೆಳೆ, ಪರಿಸರ ಪೂರಕ ನವ ತಂತ್ರಜ್ಞಾನಗಳಲ್ಲಿ ತೋಟಗಾರಿಕಾ ಬೆಳೆ ಬೆಳೆಯುವತ್ತ ಆಸಕ್ತಿ ತೋರಿದ್ದಾರೆ.  ಅವರಿಗೆ ಸದ್ಯ ಜವಾರಿ ಬದನೆ, ಸೌತೆ, ಹಿರೇಕಾಯಿ, ಕಿರುಧಾನ್ಯಗಳ ಬೀಜಗಳು ಬೇಕಂತೆ.  ಸಾಧ್ಯವಾದರೆ ಬೀಜಗಳನ್ನು ಕಳುಹಿಸುವ ವ್ಯವಸ್ಥೆ ಮಾಡಿ.  ಬೀಜ ಮತ್ತು ರವಾನೆಯ ವೆಚ್ಚ ಎಷ್ಟೆಂದು ತಿಳಿಸಿದರೆ ಹಣ ಕಳುಹಿಸುತ್ತೇನೆ ಎನ್ನುತ್ತಿದ್ದಾರೆ. ಆಸಕ್ತರು ವಸಂತ ಮಾಲವಿಯವರನ್ನು ಸಂಪರ್ಕಿಸಬಹುದು – ‘ಬೀಜ ಗೆಳೆತನ’ ಬೆಳೆಸಬಹುದು. ದೂರವಾಣಿ ಸಂಖ್ಯೆ: 9448261916. ವಸಂತ ಮಾಲವಿ ಇಮೇಲ್ ಐಡಿ-  vasanthmalavi@gmail.com