‘ಕೆರೆ ತುಂಬಿದರೆ, ಮತ್ತೆ ಆಲೆಮನೆ ಹಾಕ್ತೀವಿ’

‘ನಮ್ಮೂರು ಕೆರೆ ತುಂಬಿದರೆ ಸುತ್ತ ಇಪ್ಪತ್ತೈದು ಬಾವಿಗಳಲ್ಲಿ ಸದಾ ನೀರು ಜಿನುಗುತ್ತಿತ್ತು. ಗದ್ದೆಯಲ್ಲಿ ಭತ್ತದ ಪೈರು, ಪಕ್ಕದಲ್ಲಿ ಕಬ್ಬಿನ ಬೆಳೆ, ಸಮೀಪದಲ್ಲೇ ಆಲೆಮನೆ ಹಾಕಿ ಹುಂರ್ಗಡಿ ಬೆಲ್ಲ ಮಾಡ್ತಿದ್ವಿ. ಇದು ಕಥೆ ಅಲ್ಲ, 35 ವರ್ಷಗಳ ಹಿಂದೆ ಊರಲ್ಲಿ ಹಿಂಗೇ ನಡೀತಿತ್ತು. ಇವತ್ತಿಗೂ ನಮ್ಮೂರಲ್ಲಿ ಅಂದು ಕಬ್ಬು ಬೆಳೆದವರು, ಬೆಲ್ಲ ಮಾಡ್ದವರು ಇದ್ದಾರೆ…’

ತಾಲ್ಲೂಕಿನ ಭರಮಸಗಾರ ಸಮೀಪದ ಎಮ್ಮೆಹಟ್ಟಿ ಕೆರೆಯ ಇತಿಹಾಸವನ್ನು ಊರಿನ ಹಿರಿಯ ಸುಂಕದಕಲ್ಲು ತಿಪ್ಪಣ್ಣ ಹಂಪಿಯ ಗತವೈಭವದಂತೆ ಮೆಲುಕು ಹಾಕುತ್ತಾರೆ. ಆದರೆ, 90ರ ದಶಕದಿಂ­ದೀ­ಚೆಗೆ ಕೆರೆಗೆ ನೀರು ಹರಿಯುವುದು ಕಡಿಮೆಯಾದ ಮೇಲೆ, ಬಾವಿಗಳು ಮುಚ್ಚಿಹೋಗಿವೆ. ಕಬ್ಬು, ಭತ್ತ, ಶೇಂಗಾ, ಜೋಳದ ಕೃಷಿ ನಿಂತು ಹೋಗಿರುವುದಕ್ಕೆ ಬೇಸರ ವ್ಯಕ್ತಪಡಿಸುತ್ತಾರೆ. ಸದ್ಯ ಈಗ ಎಮ್ಮೆಹಟ್ಟಿಯಲ್ಲಿ ಕೊಳವೆಬಾವಿಗಳ ಆಶ್ರಯದಲ್ಲಿ ಸೊಪ್ಪು, ತರಕಾರಿ, ಎಲೆಬಳ್ಳಿ, ಮುಸುಕಿನ ಜೋಳ ಬೆಳೆಯುತ್ತಿರುವುದನ್ನು ಅವರು ಉಲ್ಲೇಖಿಸುತ್ತಾರೆ.

ಚಿಕ್ಕ ಕೆರೆ, ಚೊಕ್ಕ ಅಚ್ಚುಕಟ್ಟು: ಭರಮಸಾಗರದಿಂದ ನಾಲ್ಕು ಕಿ.ಮೀ ದೂರದಲ್ಲಿ, ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದಲ್ಲಿರುವ ಎಮ್ಮೆಹಟ್ಟಿ ಕೆರೆಯ ನೀರು ಸಂಗ್ರಹಣಾ ಸಾಮರ್ಥ್ಯದ ವಿಸ್ತೀರ್ಣ 66 ಎಕರೆ. ಅಚ್ಚುಕಟ್ಟು ಪ್ರದೇಶ ಕೂಡ 75 ರಿಂದ 80 ಎಕರೆ. ನೀರ್ಥಡಿ ಬೆಟ್ಟ ಪ್ರದೇಶ, ಹಂಪನೂರು, ಹಳುವದರ ಸೇರಿದಂತೆ ನಾಲ್ಕೈದು ಕಿಲೋ ಮೀಟರ್ ವ್ಯಾಪ್ತಿಯ ಹಳ್ಳಿಗಳೇ ಈ ಕೆರೆಯ ಅಚ್ಚುಕಟ್ಟು ಪ್ರದೇಶ. ಅಲ್ಲಿ ಮಳೆ ಸುರಿದರೆ, ಈ ಕೆರೆಗೆ ಹಳ್ಳಗಳ ರೂಪದಲ್ಲಿ ನೀರು ಹರಿಯುತ್ತದೆ. ಈ ಕೆರೆ ತುಂಬಿ ಕೋಡಿ ಹರಿದರೆ, ಮುಂದೆ ಪಳಗೆರೆಕೆರೆ­(ಬೇವಿನಹಳ್ಳಿ), ತುಪ್ಪದಹಳ್ಳಿ ಕೆರೆಗೆ ನೀರು ಹರಿಯುತ್ತದೆ. ಸುತ್ತಲಿನ ನಾಲ್ಕೈದು ಹಳ್ಳಿಗಳ ಅಂತರ್ಜಲ ಹೆಚ್ಚಾಗುತ್ತದೆ.

ಇತ್ತೀಚೆಗೆ ಕೆರೆ ತುಂಬಿಲ್ಲ : 1992 ಮತ್ತು 2000ನೇ ವರ್ಷದಲ್ಲಿ ಶೇ 80­ರಷ್ಟು ಕೆರೆ ತುಂಬಿತ್ತು. ಆದರೆ ಕೋಡಿ ಹರಿದಿರಲಿಲ್ಲ. ಇದನ್ನು ಹೊರತುಪಡಿಸಿ, ಕೆರೆ ತುಂಬಿದ್ದನ್ನು ಕಂಡಿಲ್ಲ ಎನ್ನುತ್ತಾರೆ ಗ್ರಾಮದ ಹನುಮಂತಪ್ಪ. ಕೆರೆಗೆ ಮಳೆ ನೀರು ಹರಿಯುವ ಹಂಪನೂರು, ನೀರ್ಥಡಿ ಕಡೆಯ ಹಳ್ಳಗಳು ಒತ್ತುವರಿಯಾಗಿದ್ದು, ನೀರ್ಥಡಿ ಕಡೆಯಿಂದ ಕೆರೆಗೆ ನೀರು ಹರಿಸಲು ನಿರ್ಮಿಸಬೇಕಿದ್ದ ಫೀಡರ್ ಚಾನೆಲ್ ಅರ್ಧಕ್ಕೆ ನಿಂತಿದ್ದರಿಂದ, ಕೆರೆಗೆ ಸಮರ್ಪಕವಾಗಿ ಮಳೆ ನೀರು ಸೇರುವುದಿಲ್ಲ ಎನ್ನುತ್ತಾರೆ ಅವರು.

ಹೀಗೆ ಒಂದು ಕಡೆ ಮಳೆಯ ಪ್ರಮಾಣದಲ್ಲಿ ಏರುಪೇರು, ಮತ್ತೊಂದು ಕಡೆ ಸುರಿವ ಮಳೆ ನೀರು ಸರಿಯಾಗಿ ಕೆರೆ ಸೇರದ ಪರಿಣಾಮ, ಪ್ರತಿ ಮಳೆಗಾಲದಲ್ಲಿ ಎಷ್ಟು ಜೋರು ಮಳೆ ಸುರಿದರೂ, ಕೆರೆ ಭರ್ತಿಯಾಗುತ್ತಿಲ್ಲ.

ಕೆರೆ ನಿರ್ವಹಣೆ ಕೊರತೆ: ಎಮ್ಮೆಹಟ್ಟಿ ಕೆರೆ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಡುತ್ತದೆ. ಇಂಥದ್ದೊಂದು ವಾರಸುದಾರಿಕೆ ಹೊರತುಪಡಿಸಿದರೆ ಇಲಾಖೆಯಿಂದ ಕೆರೆ ನಿರ್ವಹಣೆ ಮಾಡಿದ ಉದಾಹರಣೆಗಳು ಇಲ್ಲ. ರಾಷ್ಟ್ರೀಯ ಹೆದ್ದಾರಿ ನಿರ್ಮಾ­ಣದ ವೇಳೆ ಕೆರೆಗೆ ನೀರು ಹರಿಯುವ ದಾರಿಯನ್ನು ಕದಲಿಸಿದ್ದರಿಂದ, ಮಳೆ ನೀರು ಕೆರೆ ಸೇರುತ್ತಿಲ್ಲ. ಇನ್ನು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಸರ್ವೀಸ್ ರಸ್ತೆ ನಿರ್ಮಿಸುವಾಗ ಕೆರೆ ಅಂಗಳದ ಮೂರ್ನಾಲ್ಕು ಎಕರೆಯನ್ನು ಸ್ವಾಧೀನ ಮಾಡಿಕೊಂಡಿದ್ದಾರೆ. ಇದರಿಂದ ಕೆರೆಯ ನೀರು ಸಂಗ್ರಹಣಾ ಸಾಮರ್ಥ್ಯವೂ ಕಡಿಮೆಯಾಗಿದೆ. ಸರ್ವೀಸ್ ರಸ್ತೆ ಮಾಡಿದ ಮೇಲಾದರೂ, ಕೆರೆಗೆ ಮಳೆ ನೀರು ಹರಿಯುವ ಕಾಲುವೆಗಳನ್ನು ಮಾಡಿಕೊಡಲಿಲ್ಲ’ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಾರೆ.

ಕೆರೆಗೆ ನೀರು ತುಂಬಬೇಕಾದರೆ: ಕೆರೆಗೆ ಮಳೆ ನೀರು ಹರಿಯಬೇಕಾದರೆ ಹಂಪನೂರು ಫೀಡರ್ ಚಾನೆಲ್ ಕಾಮಗಾರಿ ಪೂರ್ಣ­ಗೊಳ್ಳ­ಬೇಕು. ಗ್ರಾಮದ ಮೇಲೆ ಹಾಗೂ ರಸ್ತೆಯ ಮೇಲೆ ಸುರಿಯ ಮಳೆ ನೀರು ಕೆರೆಗೆ ಸೇರುವಂತೆ ಹೆದ್ದಾರಿ ಪ್ರಾಧಿಕಾರದವರು ಕಾಲುವೆಗಳನ್ನು ನಿರ್ಮಿಸಬೇಕು. ಆಗ ಕೆರೆ ಮೊದಲಿನಂತಾಗುತ್ತದೆ.

ಕೆರೆಗೆ ನೀರು ಹರಿದರೆ, ಮತ್ತೆ ಎಮ್ಮೆಹಟ್ಟಿ ಗ್ರಾಮದ ಸುತ್ತ, ಕಬ್ಬು, ಭತ್ತ, ಶೇಂಗಾ ಕೃಷಿ ಗರಿಗೆದರುತ್ತದೆ. ಮತ್ತೆ ಆಲೆಮನೆ ವೈಭವ ಶುರುವಾಗಿ, ಹುಂಡಿ ಬೆಲ್ಲದ ತಯಾರಿಕೆಯನ್ನೂ ಕಾಣಬಹುದು ಎಂದು ರೈತ ಸಂಘದ ತಾಲ್ಲೂಕು ಉಪಾಧ್ಯಕ್ಷ ಕೆಂಚ ಯಲಪ್ಪ, ಗ್ರಾಮ ಪಂಚಾಯ್ತಿ ಸದಸ್ಯರಾದ ಈಶ್ವರಪ್ಪ, ರಂಗನಾಥ್ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಹಳ್ಳ ದುರಸ್ತಿಯಾದರೆ ಕೆರೆ ತುಂಬಿ ಹರಿಯುವುದು

ಚಿತ್ರದುರ್ಗ: ಅಚ್ಚುಕಟ್ಟು ಪ್ರದೇಶದಲ್ಲಿರುವ ಹಳ್ಳಗಳಲ್ಲಿ ನೀರಿಲ್ಲದೇ ನಮ್ಮೂರ ಕೆರೆ ತುಂಬುತ್ತಿಲ್ಲ, ಪರಿಣಾಮ ವರ್ಷದಿಂದ ವರ್ಷಕ್ಕೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗುತ್ತಿದೆ. ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಾಗುತ್ತಿದೆ. ಕೃಷಿ ಬದುಕು ಕುಂಟುತ್ತಾ ಸಾಗಿದೆ!
17ct-jnkote2
ಜಂಪಣ್ಣನಾಯಕನ ಕೋಟೆಯ(ಜೆಎನ್ ಕೋಟೆ) ಗ್ರಾಮಸ್ಥರು, ತಮ್ಮೂರಿನ ಕೆರೆಗೆ ನೀರು ಹರಿಯದಿರುವ ಕುರಿತು ಹೀಗೆ ಬೇಸರದಿಂದ ವಿವರಿಸುತ್ತಾರೆ.

ಸುಮಾರು ಹತ್ತು ವರ್ಷಗಳಿಂದ ಕೆರೆಗೆ ಸರಿಯಾಗಿ ನೀರು ಹರಿಯುತ್ತಿಲ್ಲ. ಹೀಗಾಗಿ ಕೆರೆಯನ್ನೇ ನಂಬಿಕೊಂಡಿರುವ ಸುತ್ತಲಿನ ಹತ್ತು ಹದಿನೈದು ಹಳ್ಳಿಗಳಲ್ಲಿ ಅಂತರ್ಜಲ ಕುಸಿದಿದೆ. ಕುಡಿಯಲು ಶುದ್ಧ ನೀರಿಲ್ಲ. ಕೃಷಿ ಚಟುವಟಿಕೆಗಳ ಪರಿಸ್ಥಿತಿಯಂತೂ ಹೇಳತೀರದು.

ಜೆಎನ್ ಕೋಟೆ ಕೆರೆ ಇತಿಹಾಸ: 135 ಹೆಕ್ಟೇರ್ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಜೆಎನ್ ಕೋಟೆ ಕೆರೆಗೆ ರೈತರ ಪ್ರಕಾರ 300 ಎಕರೆ ಅಚ್ಚುಕಟ್ಟು ಪ್ರದೇಶವಿದೆ. ಕುರುಮರಡಿಕೆರೆ ತುಂಬಿ ಕೋಡಿ, ನರೇನಾಳ್ ಗ್ರಾಮ ವ್ಯಾಪ್ತಿಯ ಎತ್ತರ ಪ್ರದೇಶಗಳೇ ಕೆರೆ ಅಚ್ಚುಕಟ್ಟು ಪ್ರದೇಶ. ಕುರುಮರಡಿಕೆರೆ ಕೆರೆ ತುಂಬಿ ಹರಿದರೆ, ಆ ನೀರು ಹಳ್ಳದ ರೂಪದಲ್ಲಿ ಪಾಲನಹಳ್ಳಿ, ರಾಷ್ಟ್ರೀಯ ಹೆದ್ದಾರಿ ದಾಟಿ, ಕ್ಯಾದಿಗ್ಗೆರೆ ಆಸುಪಾಸಿನಲ್ಲಿ ಹರಿಯುತ್ತಾ ಜೆಎನ್ ಕೋಟೆ ಸೇರುವ ವ್ಯವಸ್ಥೆ ಇದೆ.

1985-86ರಕ್ಕೆ ಮುನ್ನ ಮಳೆಗಾಲ ಉತ್ತಮವಾಗಿತ್ತು. ಪ್ರತಿ ವರ್ಷ ಕೆರೆ ತುಂಬುತ್ತಿತ್ತು. ತೆಂಗು, ಭತ್ತ, ತರಕಾರಿ, ಹೂವು ಎಲ್ಲ ಸಮೃದ್ಧವಾಗಿತ್ತು. 86ರನಂತರ ಮಳೆ ಕ್ಷೀಣಿಸಿತು. ಕೊಳವೆಬಾವಿಗಳು ಹೆಚ್ಚಾದವು. ಅಂತರ್ಜಲ ಕುಸಿಯಲಾರಂಭಿಸಿತು. ಆದರೂ ಮಳೆಗಾಲದಲ್ಲಿ ಕೆರೆ ತುಂಬಿರುತ್ತಿತ್ತು. ‘15 ವರ್ಷಗಳ ಹಿಂದೆ ಕೆರೆ ಕೋಡಿಬಿದ್ದಿದ್ದು ನೆನಪಿದೆ. ಅಚ್ಚುಕಟ್ಟು ಪ್ರದೇಶದಲ್ಲಿ ಕ್ವಾರಿಯಾಗುವ ಮುಂಚೆಯೂ ಕೆರೆ ತುಂಬುತ್ತಿತ್ತು. ಆದರೆ ಕ್ವಾರಿ ನಡೆದು ಬೃಹತ್ ಕೆರೆಗಳು ನಿರ್ಮಾಣವಾಗಿ, ಸುತ್ತಲಿನ ಜಮೀನಿನವರು ಹಳ್ಳದ ನೀರನ್ನು ಕ್ವಾರಿಗೆ ತಿರುಗಿಸಲು ಶುರು ಮಾಡಿದ ಮೇಲೆ, ಕೆರೆಗೆ ಮಳೆ ನೀರು ಹರಿಯುವುದೇ ನಿಂತುಹೋಯಿತು’ ಎನ್ನುತ್ತಾರೆ ಗ್ರಾಮದ ಮುಖಂಡ ಮಂಜುನಾಥ್.

ಶ್ರಮದಾನದಿಂದ ಹಳ್ಳ ದುರಸ್ತಿ: ಅಚ್ಚುಕಟ್ಟು ಪ್ರದೇಶ ಹಿರಿಯೂರು ಮತ್ತು ಚಿತ್ರದುರ್ಗ ತಾಲ್ಲೂಕುಗಳಿಗೆ ಸೇರುತ್ತದೆ. ಹೀಗೆ ಹಳ್ಳಗಳು ಒತ್ತುವರಿಯಾಗಿ, ನೀರನ್ನು ಕ್ವಾರಿಗೆ ತಿರುಗಿಸುವುದು ಗೊತ್ತಾದ ಮೇಲೆ ಗ್ರಾಮಸ್ಥರೆಲ್ಲ ಎರಡು ತಾಲ್ಲೂಕಿನ ತಹಶೀಲ್ದಾರರಿಗೆ ದೂರು ನೀಡಿ, ಸಮೀಕ್ಷೆ ನಡೆಸಿ ಹಳ್ಳಗಳನ್ನು ಗುರುತಿಸುವಂತೆ ಮನವಿ ಮಾಡಿದ್ದಾರೆ.

ಈ ನಡುವೆ ಜೆಎನ್ ಕೋಟೆ ಗ್ರಾಮಸ್ಥರೆಲ್ಲ ಹಳ್ಳ ಸರಿಪಡಿಸಲು ಪ್ರಯತ್ನಿಸಿ ಸುತ್ತಲಿನ ಜಮೀನಿನವರ ವಿರೋಧಕ್ಕೂ ಗುರಿಯಾಗಿದ್ದಾರೆ. ಹಳ್ಳಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಕಳೆದ ವರ್ಷ ಪ್ರತಿಭಟನೆ ನಡೆಸಿದ್ದಾರೆ. ಇದಾವುದೂ ಸಾಧ್ಯವಾಗದಿದ್ದಾಗ, ಸ್ವತಃ ಗ್ರಾಮಸ್ಥರೆಲ್ಲ ಸೇರಿ ನಾಲ್ಕು ದಿನ ಶ್ರಮದಾನ ಮಾಡಿ, ಲಕ್ಷದವರೆಗೂ ಹಣ ಖರ್ಚು ಮಾಡಿ ಹಳ್ಳಗಳಿಗೆ ತಡೆಗೋಡೆ ನಿರ್ಮಿಸಿದ್ದಾರೆ. ಆದರೂ ಇದು ತಾತ್ಕಾಲಿಕ ರಚನೆಯಾಗಿದ್ದು, ನೀರಿನ ರಭಸಕ್ಕೆ ಕೊಚ್ಚಿ ಹೋಗಬಹುದು. ಶಾಶ್ವತ ತಡೆಗೋಡೆ ಬೇಕು ಎನ್ನುತ್ತಾರೆ ಗ್ರಾಮಸ್ಥರು

ಸರ್ವೆ ಮಾಡಿಸಿ, ಹಳ್ಳ ಗುರುತಿಸಿ: ಅಚ್ಚುಕಟ್ಟು ಪ್ರದೇಶದಲ್ಲಿ ಎರಡು ಹಳ್ಳಗಳಿವೆ. ಒಂದು ಹಳ್ಳದ ನೀರನ್ನು ಜಮೀನಿನ ರೈತರು ಕ್ವಾರಿಯ ಹೊಂಡಕ್ಕೆ ತಿರುವುತ್ತಾರೆ. ಮತ್ತೊಂದು ಹಳ್ಳಕ್ಕೆ ತಡೆ ಹಾಕುತ್ತಾರೆ. ಪ್ರಶ್ನಿಸಿದರೆ, ‘ಇಲ್ಲಿ ಹಳ್ಳವೇ ಇಲ್ಲ’ ಎಂದು ವಾದಿಸುತ್ತಾರೆ. ಈ ವಿಚಾರ ಪೊಲೀಸ್ ಠಾಣೆ ಮೆಟ್ಟಿಲು ಏರಿ, ತಹಶೀಲ್ದಾರ್ ವರೆಗೂ ಹೋಗಿ ಸ್ಥಳ ಪರಿಶೀಲನೆಯಾಗಿದೆ. ಅಧಿಕಾರಿಗಳು, ಸಮೀಕ್ಷೆ ಮೂಲಕ ಕಾಲುವೆ ಗುರುತಿಸಬೇಕು ಎಂದಿದ್ದಾರೆ. ಆದರೆ ಇಲ್ಲಿವರೆಗೂ ಕೆಲಸವಾಗಿಲ್ಲ ಎಂದು ಹೇಳಿದ ಅವರು, ಹಳ್ಳ ಗುರುತಿಸಿ ನಕ್ಷೆ ಮಾಡಿಸಿದರೆ ಸಾಕು, ಮುಂದಿನ ಕೆಲಸ ಬೇರೆ ಇಲಾಖೆಯವರು ಮಾಡುತ್ತಾರೆ’ ಎಂದು ಗ್ರಾಮದ ಜಯಕುಮಾರ್, ಸಿ.ಎಸ್.ಗೌಡ್ರು ಅಭಿಪ್ರಾಯಪಡುತ್ತಾರೆ.

ಹಳ್ಳಗಳು ಸರಿ ಹೋದರೆ: ಹಳ್ಳಗಳಿಂದ ನೀರು ಕ್ವಾರಿಗೆ ಹರಿಯದಂತೆ ತಡೆಗೋಡೆ ಮಾಡಿಸಿ, ತಡೆ ಮಾಡಿರುವ ಹಳ್ಳಗಳನ್ನು ಸರಿಪಡಿಸಿದರೆ, ಜೆಎನ್ ಕೋಟೆ ಕೆರೆಗೆ ಸರಾಗವಾಗಿ ಮಳೆ ನೀರು ಹರಿಯುತ್ತದೆ. ಕನಿಷ್ಠ 15 ರಿಂದ 20 ಹಳ್ಳಿಯವರ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುತ್ತದೆ. ಕೊಳವೆಬಾವಿಗಳು ಮರುಪೂರಣಗೊಳ್ಳುತ್ತವೆ. ಫ್ಲೋರೈಡ್ ಸಮಸ್ಯೆ ಕಡಿಮೆಯಾಗುತ್ತದೆ. ‘ಕೆರೆಯಲ್ಲಿ ನೀರು ನಿಂತರೆ, ಸುತ್ತಲಿನ ಕೊಳವೆಬಾವಿಗಳು ಮರುಪೂರಣ ಆಗುತ್ತವೆ. ಕೊಳವೆಬಾವಿಗಳಿಗಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದೇವೆ. ಹಳ್ಳಗಳು ಸರಿಯಾದರೆ ಈ ಎಲ್ಲ ಸಮಸ್ಯೆಗೆ ಪರಿಹಾರ ದೊರೆಯುತ್ತದೆ’ ಎಂಬುದು ಗ್ರಾಮದ ಜಯಕುಮಾರ್ ಅವರ ಅಭಿಪ್ರಾಯ.

ನಾರಿ ಸುವರ್ಣ ಕುರಿ ತಳಿ

ಚಿತ್ರದುರ್ಗ: ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವತಿಯಿಂದ ರಾಜ್ಯದ ಮೂರು ಜಿಲ್ಲೆಗಳ 15 ರೈತರಿಗೆ ಅವಳಿ ಮರಿ ಸಂತಾ ನದ ನಾರಿ ಸುವರ್ಣ ಹೊಸ ಕುರಿ ತಳಿ ನೀಡಲಾಗಿದೆ.

ರಾಜ್ಯದಲ್ಲೇ ಅತಿ ಹೆಚ್ಚು ಕುರಿಗಳಿರುವ ತುಮಕೂರು, ಚಿತ್ರದುರ್ಗ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ತಲಾ ಐದು ಗ್ರಾಮಗಳ ರೈತರಿಗೆ ಹೊಸ ತಳಿಗಳ ಕುರಿ ಮರಿ ವಿತರಿಸಲಾಗಿದೆ.

ಪ್ರಾಯೋಗಿಕ ಯೋಜನೆ : ಏಳು ತಿಂಗಳ ಹಿಂದೆ ಮೂರು ಜಿಲ್ಲೆಗಳ  ಪಶುವೈದ್ಯಾಧಿ ಕಾರಿಗಳ ತಂಡವೊಂದು ಮಹಾ ರಾಷ್ಟ್ರದ ಸತಾರ ಜಿಲ್ಲೆಯ ಪಲ್ಟಾನ ಗ್ರಾಮಕ್ಕೆ ಎರಡು ದಿನಗಳ ಭೇಟಿ ನೀಡಿ ‘ನಾರಿ ಸುವರ್ಣ ತಳಿ’ ಕುರಿತು ಮಾಹಿತಿ ಸಂಗ್ರಹಿ ಸಿದೆ. ನಂತರ ಕುರಿ ಮತ್ತು ಉಣ್ಣೆ ಅಭಿ ವೃದ್ಧಿ ನಿಗಮ ಫಲಾನುಭವಿಗಳಿಗೆ ಪ್ರೋತ್ಸಾಹಧನ ನೀಡುವ ಮೂಲಕ ಈ ಹೊಸ ತಳಿಯ ಕುರಿ ಮರಿಗಳನ್ನು ಖರೀದಿಸಿ ಮೂರು ಜಿಲ್ಲೆಗಳಲ್ಲಿ ವಿತರಿಸಲಾಗಿದೆ. ಚಿತ್ರದುರ್ಗ ಜಿಲ್ಲೆಯ ಮದಕರಿಪುರ, ಕಕ್ಕೆಹರವು, ವಿಜಾಪುರ ಸಮೀಪದ ಕಿಟ್ಟದಹಳ್ಳಿ, ಕೋಡಯ್ಯನ ಹಟ್ಟಿ ಮತ್ತು ಬಚ್ಚಬೋರಯ್ಯನ­ಹಟ್ಟಿಯಲ್ಲಿ ಆಯ್ದ ಫಲಾನುಭವಿಗಳಿಗೆ ಈ ತಳಿಗಳನ್ನು ನೀಡಲಾಗಿದೆ.

ಫಲಾನುಭವಿಗಳಿಗೆ ತರಬೇತಿ : ಪಲ್ಟಾನ ಗ್ರಾಮದ ನಿಂಬ್ಕರ್ ಕೃಷಿ ಸಂಶೋಧನಾ ಸಂಸ್ಥೆ ಎಂಬ ಸ್ವಯಂ ಸೇವಾ ಸಂಸ್ಥೆಯ ತಜ್ಞರು ಈ ಕುರಿ ತಳಿ ಅಭಿವೃದ್ಧಿಪಡಿಸಿ ದ್ದಾರೆ. ‘ಪಶ್ಚಿಮ ಬಂಗಾಳದ ಸುಂದರ ಬನ್ ಪ್ರದೇಶದ ‘ಗೆರೋಲ್’ ಎಂಬ ಅವಳಿ ಮರಿ ಸಂತಾನದ ಕುರಿತ ತಳಿಯ ವಂಶವಾಹಿನಿಯನ್ನು (ಜೀನೊ ಟೈಪ್) ಸಾಮಾನ್ಯ ಕುರಿ ತಳಿಗೆ ಸೇರಿಸಿ ನಾರಿ ಸುವರ್ಣ ತಳಿ ಅಭಿವೃದ್ಧಿಪಡಿಸಲಾಗಿದೆ’ ಎಂದು ತಾಲ್ಲೂಕಿನ ಪಶು ವೈದ್ಯಾಧಿಕಾರಿ ಪ್ರಸನ್ನ ಕುಮಾರ್ ತಿಳಿಸಿದ್ದಾರೆ.

‘ಸದ್ಯ ಹೊಸ ಕುರಿ ತಳಿಯನ್ನು ಜಿಲ್ಲೆಯ ಐವರು ರೈತರಿಗೆ ವಿತರಿಸಿದ್ದೇವೆ. ಕುರಿ ತಳಿ ವಿತರಣೆಗೂ ಮುನ್ನ ಕುರಿಸಾಕಾ ಣೆದಾರರನ್ನು ಪಲ್ಟಾನ ಗ್ರಾಮಕ್ಕೆ ಕರೆದೊಯ್ದು, ನಾರಿ ಸುವರ್ಣ ಕುರಿ ತಳಿಯ ಸಾಕಾಣಿಕೆ, ಆಹಾರ, ಪೋಷಣೆ, ನಿರ್ವ ಹಣೆ ಕುರಿತು ತರಬೇತಿ ನೀಡಲಾಗಿದೆ’ ಎಂದು ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಜಿಲ್ಲೆಯ ಸಹಾಯಕ ನಿರ್ದೇಶ ಡಾ. ಬಿ.ವಿ.ಪ್ರತಾಪ್ ರೆಡ್ಡಿ ವಿವರಿಸಿದರು.

ಒಣಹವೆಗೆ ಒಗ್ಗುವ ತಳಿ : ಚಿತ್ರದುರ್ಗ, ತುಮಕೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ಹಾಗೂ ಸತಾರ ಜಿಲ್ಲೆಯ ಹವಾಮಾನ ಒಂದೇ ರೀತಿ ಇದ್ದು, ಒಣಹವೆಗೆ ಹೊಂದಿಕೊಂಡು ಬೆಳೆಯುತ್ತವೆ. ಪ್ರಾಯೋಗಿಕ ಯೋಜನೆ­ಯಾಗಿ­ರು­ವುದ ರಿಂದ, ಸದ್ಯಕ್ಕೆ ಕುರಿಗಾಹಿಗಳಿಗೆ ಈ ಕುರಿ ಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿ ಮೇಯಿಸು ವಂತೆ ತರಬೇತಿ ನೀಡಿದ್ದೇವೆ. ಆರು ತಿಂಗ ಳಲ್ಲಿ ಈ ಕುರಿಗಳು ಮರಿ ಹಾಕಲಿದ್ದು, ಫಲಿ ತಾಂಶ ಆಧರಿಸಿ ಮಂದೆ ಯಲ್ಲಿ ಬಿಟ್ಟು ಮೇಯಿಸಲು ಸೂಚಿಸಲಾಗುತ್ತದೆ’ ಎಂದು ಡಾ.ಪ್ರಸನ್ನ ವಿವರಿಸಿದರು.

ಇದು ಯೋಜನೆಯ ಪ್ರಥಮ ಹಂತವಾಗಿದೆ. ಈಗ ಫಲಾನುಭವಿಗಳಿಗೆ ನೀಡಿರುವ ಕುರಿಗಳು ಮುಂದಿನ ಆರೇಳು ತಿಂಗಳಲ್ಲಿ ಮರಿ ಹಾಕಲಿವೆ. ಈ ಪ್ರಯೋಗದ ಫಲಿತಾಂಶ ಆಧರಿಸಿ, ನಾರಿ ಸುವರ್ಣ ತಳಿಯನ್ನು ರಾಜ್ಯದಾದ್ಯಂತ ವಿಸ್ತರಿಸಬಹುದು ಎನ್ನುತ್ತಾರೆ ಅಧಿಕಾರಿಗಳು.

ನಿಷ್ಕ್ರಿಯ ಕೊಳವೆಬಾವಿಗಳಿಗೆ ಜಲಮರುಪೂರಣ

ಚಿತ್ರದುರ್ಗಜಿಲ್ಲೆಯ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಿಷ್ಕ್ರಿಯಗೊಂಡಿರುವ ಕೊಳವೆಬಾವಿಗಳಿಗೆ ಜಲ­ಮರು­ಪೂರಣ (ಮಳೆ ನೀರು ರೀಚಾರ್ಜ್) ವಿಧಾನ ಅಳವಡಿಸುವ ಕಾರ್ಯಕ್ಕೆ ಜಿಲ್ಲಾ ಪಂಚಾಯ್ತಿ ಮುಂದಾಗಿದೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ (ಎಂಎನ್ಆರ್ಇಜಿ) ನಿಷ್ಕ್ರಿಯ ಕೊಳವೆ­ಬಾವಿ­ಗಳಿಗೆ ಜಲಮರುಪೂರಣ ವಿಧಾನ ಅಳವಡಿಸುವ ಕಾಮಗಾರಿಯನ್ನು ಜಿಲ್ಲಾ ಪಂಚಾಯ್ತಿ ಎಂಜಿನಿಯರಿಂಗ್ ವಿಭಾಗ ಕೈಗೆತ್ತಿಕೊಂಡಿದೆ.

ಆರಂಭದಲ್ಲಿ ಪ್ರತಿ ಗ್ರಾಮ ಪಂಚಾಯ್ತಿಯಿಂದ 10 ಕೊಳವೆಬಾವಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಸದ್ಯಕ್ಕೆ ಮೊದಲ ಹಂತವಾಗಿ ಒಂದಷ್ಟು ಮಾದರಿಗಳನ್ನು ಸಿದ್ಧಪಡಿಸಿ, ಅದರಲ್ಲಿನ ಸಾಧಕ ಬಾಧಕಗಳನ್ನು ಪರಿಶೀಲಿಸಿದ ನಂತರ ಉಳಿದ ಕೊಳವೆಬಾವಿಗಳಿಗೂ ಈ ವಿಧಾನ ಅಳವಡಿಸಲು ನಿರ್ಧರಿಸಲಾಗಿದೆ.

ತರಬೇತಿ, ಕಾರ್ಯಾಗಾರ : ಜಲಮರುಪೂರಣ ಯೋಜನೆ ಆರಂಭಕ್ಕೆ ಮುನ್ನ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಈ ಯೋಜನೆ ನಿರ್ವಹಿಸುವ ತಂಡದವರಿಗೆ ಕಾರ್ಯಾಗಾರ ನಡೆಸಿ, ಜಲಮರುಪೂರಣ ಕಾಮಗಾರಿ ತರಬೇತಿ ನೀಡಲಾಗಿದೆ. ಆರಂಭದಲ್ಲಿ ಒಂದೊಂದು ಮಾದರಿ ಸಿದ್ಧಪಡಿಸಲು ಜಿಲ್ಲಾ ಪಂಚಾಯ್ತಿ ಸಿಇಒ ಸೂಚಿಸಿದ್ದಾರೆ. ಅದರಂತೆ ಚಿತ್ರದುರ್ಗ ತಾಲ್ಲೂಕು ದೊಡ್ಡ­ಸಿದ್ದವ್ವನ­ಹಳ್ಳಿಯ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಒಂದು ಕೊಳವೆಬಾವಿ ಸಿದ್ಧವಾಗಿದೆ.

ಏನಿದು ಜಲಮರುಪೂರಣ?: ನಿಷ್ಕ್ರಿಯಗೊಂಡಿರುವ ಕೊಳವೆಬಾವಿಗಳನ್ನು ಜಲಮರುಪೂರಣ ಕಾರ್ಯಕ್ಕಾಗಿ ಆಯ್ಕೆ ಮಾಡಿ­ಕೊಳ್ಳ­­ಲಾಗುತ್ತಿದೆ. ತಾಂತ್ರಿಕ ವಿಭಾಗದವರ ನಿರ್ದೇಶನದಂತೆ ಕೊಳವೆಬಾವಿ ಸುತ್ತ ಇಪ್ಪತ್ತು ಅಡಿ ಆಳದ ಗುಂಡಿ ತೆಗೆದು, ಸುತ್ತ ದಪ್ಪ ಕಲ್ಲು, ವಿವಿಧ ಗಾತ್ರಗಳ ಜಲ್ಲಿ, ಮರಳು ತುಂಬಿಸ­ಲಾ­ಗು­ತ್ತಿದೆ. ಕೊಳವೆಬಾವಿ ಸಮೀಪ­ದಲ್ಲಿ ಇಳಿಜಾರು ಪ್ರದೇಶವನ್ನು ಗುರುತಿಸಿ, ಅಲ್ಲಿಂದ ಮಳೆ ನೀರು ಜಲಮರುಪೂರಣ ರಚನೆಯತ್ತ ಹರಿದುಬರುವಂತೆ ಮಾಡಲಾಗುತ್ತಿದೆ.

‘ಭವಿಷ್ಯದಲ್ಲಿ ಹೊಸ ಕೊಳವೆಬಾವಿಗಳನ್ನು ಕೊರೆಸುವುದು ಕಡಿಮೆಯಾಗಬೇಕು. ಇರುವ ಕೊಳವೆಬಾವಿಗಳಿಗೆ ಮರುಜೀವ ತುಂಬಬೇಕು. ಪರಿಸರ ರಕ್ಷಿಸಬೇಕೆಂಬ ಉದ್ದೇಶದೊಂದಿಗೆ ನಿಷ್ಕ್ರಿಯ ಕೊಳವೆ ಬಾವಿಗಳನ್ನೇ ಜಲಮರುಪೂರಣ ವಿಧಾನ ಅಳವಡಿಕೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ’ ಎನ್ನುತ್ತಾರೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಮಂಜುಶ್ರೀ.

ಎಲ್ಲ ತಾಲ್ಲೂಕುಗಳಲ್ಲೂ…
ವೇದಾವತಿ ನದಿ ಪುನಶ್ಚೇತನ ಕಾರ್ಯ ನಡೆಯುತ್ತಿರುವ ಹೊಸದುರ್ಗ ತಾಲ್ಲೂಕು ಹೊರತುಪಡಿಸಿ, ಉಳಿದ ಐದು ತಾಲ್ಲೂಕುಗಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 10 ಕೊಳವೆಬಾವಿ ಕೈಗೆತ್ತಿಕೊಳ್ಳಲಾಗುತ್ತಿದೆ. ವೇದಾವತಿ ನದಿ ಪುನಶ್ಚೇತನ ಯೋಜನೆಯಲ್ಲೂ ಜಲಮರುಪೂರಣ ವಿಧಾನ ಅಳವಡಿಕೆಗೆ ಅವಕಾಶವಿರುವುದರಿಂದ ಹೊಸದುರ್ಗ ತಾಲ್ಲೂಕಿನಲ್ಲಿ 5 ಕೊಳವೆ ಬಾವಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಎಂದು ಸಿಇಒ ಮಂಜುಶ್ರೀ ಅವರು ಸ್ಪಷ್ಟಪಡಿಸಿದರು.

ಬಜೆಟ್‌ಗೆ ಅನುಮೋದನೆ ಸಿಕ್ಕಿಲ್ಲ
ಪ್ರತಿ ಕೊಳವೆಬಾವಿಗೆ ಜಲಮರುಪೂರಣ ವಿಧಾನ ಅಳವಡಿಸಲು (ಎರಡು ವಿಧಾನಗಳಲ್ಲಿ) ₨ 63 ರಿಂದ ₨ 68 ಸಾವಿರದಷ್ಟು ವೆಚ್ಚವಾಗಬಹುದು ಎಂದು ಎಂಜಿನಿಯರಿಂಗ್ ವಿಭಾಗದವರು ಅಂದಾಜು ವೆಚ್ಚ ನೀಡಿದ್ದಾರೆ. ವೇದಾವತಿ ನದಿ ಪುನಶ್ಚೇತನ ಯೋಜನೆಯಲ್ಲೂ ಈ ಕಾರ್ಯಕ್ಕಾಗಿ ₨ 65 ಸಾವಿರ ನಿಗದಿಪಡಿ­ಸಲಾ­ಗಿದೆ. ಸದ್ಯ ಈ ಯೋಜನೆಯ ಪ್ರಸ್ತಾವನೆಯನ್ನು ಆರ್‌ಡಿಪಿಆರ್‌ಗೆ ಕಳಿಸಿದ್ದೇವೆ. ಇನ್ನೂ ಅನುಮೋದನೆ ಸಿಕ್ಕಿಲ್ಲ. ಆದರೆ, ಇದು ಕಳೆದ ವರ್ಷವೇ ಆಗಬೇಕಾದ ಕೆಲಸವಾಗಿದ್ದರಿಂದ, ಈ ವರ್ಷದ ಮಳೆಗಾಲದ ಒಳಗೆ ಆಗಲಿ ಎಂದು ಕಾಮಗಾರಿ ಶುರು ಮಾಡಿಸಿರುವುದಾಗಿ ಮಂಜುಶ್ರೀ ವಿವರಿಸಿದರು.

‘ಈ ಯೋಜನೆ ರಾಜ್ಯದೆಲ್ಲೆಡೆ ಚಾಲ್ತಿಯಲ್ಲಿರುವ ಕುರಿತು ಮಾಹಿತಿ ಇಲ್ಲ. ಆದರೆ, ಚಿತ್ರದುರ್ಗ­ದಂತಹ ಕಡಿಮೆ ಮಳೆ ಬೀಳುವ ಪ್ರದೇಶಕ್ಕೆ ಈ ವಿಧಾನ ಅನಿವಾರ್ಯ. ಆದ್ದರಿಂದ ಮಳೆಗಾಲಕ್ಕೆ ಮುನ್ನವೇ ಕಾಮಗಾರಿಗೆ ಚಾಲನೆ ನೀಡಿದ್ದೇವೆ’ ಎಂದು ಅವರು ಸ್ಪಷ್ಟಪಡಿಸಿದರು.

ಮಕ್ಕಳ ಆಟವೋ… ಸಂವಹನದ ಪಾಠವೋ…

ನನ್ನ ಮಕ್ಕಳು ನದಿ, ಅಗರ್ತ ಮನೆಯಂಗಳದಲ್ಲಿ ಆಟವಾಡುತ್ತಿದ್ದರು.
ನದಿ, ‘ಅವಲಕ್ಕಿ ಪವಲಕ್ಕಿ ಕಾಂಚಣ, ಮಿಣ ಮಿಣ, ಡಾಂ ಡೂ, ಕೊಂಯ್ ಕೊಟಾರ್ ‘ ಅಂತ ಹೇಳ್ತಾ ಹೇಳ್ತಾ… ಇದಕ್ಕಿದ್ದಂತೆ “ಪಿಜ್ಜಾ ಲೈಕ್ ಫಿಜ್ಜಾ, ಪಿಜ್ಜಾ ಮೈ ಫೇವರೇಟ್ ಅಂತ…’ ಅಂತ ಮಧ್ಯೆ ಸೇರಿಸಿದ್ದಳು.
‘ಅವಲಕ್ಕಿ ಮಧ್ಯೆ ಪಿಜ್ಜಾ ಏಕೆ’ ಅಂತ ಕೇಳಿದೆ. ಅದಕ್ಕೆ ಅವಳು ಹೇಳ್ತಾಳೆ..’ಅವಲಕ್ಕಿ- ಪವಲಕ್ಕಿಯ’ ಇಂಗ್ಲಿಷ್ ವರ್ಷನ್ ಅಪ್ಪಾ ಇದು.. ಎಂದು ಸಮರ್ಥನೆ ಕೊಟ್ಟಳು !
ಆಟ ಮುಂದುವರಿಯುತು..
ಕೈ ಎಲ್ಲ ಎಲ್ಲಿ ಹೋಯ್ತ ಅಂತ ಆಟ ಶುರು ಮಾಡಿದಳು ನದಿ. ಅದಕ್ಕೆ ಅಗರ್ತ ‘ಕೈ ಎಲ್ಲೂ ಹೋಗಿಲ್ಲ, ಇಲ್ಲೆ ಇವೆ ನೋಡೇ..’ ಎನ್ನುತ್ತಾ ಬೆನ್ನ ಹಿಂದೆ ಮಡಿಸಿದ್ದ ಕೈಗಳನ್ನು ತೋರಿಸಿದ. ಆದರೂ ಅವರ ಅಕ್ಕ ಅವನನ್ನು ಒಪ್ಪಿಸಿ, ನೋಡು “ಕೈ ಎಲ್ಲ ಸಂತೆಗೆ ಹೋಯ್ತು” ಅಂತ ಹೇಳ್ಬೇಕು ಎಂದಳು. ಸರಿ, ಅದಕ್ಕೆ ಹೇಗೋ ಅವನು ಸಮ್ಮತಿಸಿದ.
ಮುಂದಿನ ಪ್ರಶ್ನೆ, ಸಂತೆಯಿಂದ ಏನ್ ತಂತು ?’ ಅಂತ ಕೇಳಿದಳು. ಅದಕ್ಕೆ ಅವನು ಪ್ರತಿಕ್ರಿಯಿಸಲಿಲ್ಲ.
ಮಗಳು ‘ಸ್ವಗತ ‘ದ ರೀತಿಯಲ್ಲಿ ‘ಬಾಳೆ ಹಣ್ಣು ತಂತು’ ಎಂದಳು.
‘ಹೋಗ್ಲಿ, ಬಾಳೆ ಹಣ್ಣು ಏನ್ಮಾಡದೇ’ ಅಂತ ಕೇಳಿದಳು, ಅದಕ್ಕೆ ಅಗರ್ತ ಥಟ್ಟನೆ ‘ತಿಂದೆ ಕಣೇ’ ಅಂತ ಕೂಗಿದ.
ಸರಿ, ಸಿಪ್ಪೆ ಏನ್ಮಾಡಿದೆಯೋ ಅಗರ್ತ ಎಂದಳು? ‘ಏನ್ಮಾಡ್ತಾರೆ, ಆ ಡಸ್ಟ್ ಬಿನ್ ಗೆ ಹಾಕ್ದೆ’ ಅಂತ ತೋರಿಸಿದ.
ಇಲ್ಲಿ ನದಿಗೆ ಈ ಆಟದ ಟ್ರ್ಯಾಕ್ ತಪ್ಪಿತು. ಅಯ್ಯೋ ಬಾಗಿಲು ಹಿಂದೆ ಹಾಕ್ಬೇಕಲ್ಲವಾ ? ಇವನು ತಪ್ಪು ಹೇಳ್ತಿದ್ದಾನೆ ಅಂತ ಜಗಳಮಾಡಿದಳು. ಅದಕ್ಕೆ ಅಗರ್ತ ಒಪ್ಪಲೇ ಇಲ್ಲ.
ಸರಿ, ಆಮೇಲೆ ಏನ್ಮಾಡಿದೆ ? ‘ಅಂತ ಕೇಳಿದಳು..
ಡಸ್ಟ್ ಬಿನ್ ತಗೊಂಡು ಹೋಗಿ ಕಸದವನಿಗೆ ಹಾಕ್ದೆ…’ ಎಂದ ಅಗರ್ತ.
ನದಿಗೆ, ಈ ಆಟದಲ್ಲಿ ಬಾಗಿಲು, ತಿಪ್ಪೆ, ಗೊಬ್ಬರ, ಬತ್ತ, ಎಲ್ಲ ಮಿಸ್ ಆಗ್ತಿದೆ ಅಂತ. ಆದರೆ ಅಗರ್ತನಿಗೆ ಅದೆಲ್ಲ ಗೊತ್ತಿಲ್ಲ. ಅವನಿಗೆ ಬಾಳೆ ಹಣ್ಣಿನ ಸಿಪ್ಪೆಯನ್ನು ಕಸದ ಬುಟ್ಟಿಗೆ ಹಾಕಿಯೇ ಗೊತ್ತು !
ಮಕ್ಕಳ ಈ ಸಂವಹನದಲ್ಲಿ ನನಗನ್ನಿಸಿತು, ‘ನಾವು ಮಕ್ಕಳಿಗೆ ಕಲಿಸಬೇಕಾದದ್ದು, ಕಲಿಯಬೇಕಾದದ್ದು ಎಷ್ಟೆಲ್ಲ ಇದೆ’ ಎಂದು.

ನಾವು ಆಡುತ್ತಿದ್ದ ಆಟದಲ್ಲಿ ಹಣ್ಣು, ಸಿಪ್ಪೆ, ಗೊಬ್ಬರ, ಬೂದಿ, ಗಿಡ, ಮರ.. ಹೀಗೆ, ಇಡೀ ಪ್ರಕೃತಿಯೊಳಗಿನ ಋತುಚಕ್ರವೇ ಅನಾವರಣಗೊಳ್ಳುತ್ತಿತ್ತು. ಈ ಮೂಲಕವೇ ಮಕ್ಕಳ ಬುದ್ದಿ ಶಕ್ತಿ, ನೆನಪಿನ ಶಕ್ತಿ ಹೆಚ್ಚಾಗುತ್ತಿತ್ತು. ಅದೇ ನಿಜವಾದ ರೈಮಿಂಗ್ ವರ್ಡ್ಸ್ ಆಗಿತ್ತು..!
ನಮ್ ರೈಮಿಂಗ್ ಹಿಂಗಿತ್ತು ಅಲ್ವಾ ?
ಕೈಯೆಲ್ಲ ಎಲ್ಲಿ ಹೋಯ್ತು ?
ಸಂತೆಗೆ ಹೋಯ್ತು
ಸಂತೆಯಿಂದ ಏನ್ ತಂತು ?
ಬಾಳೆ ಹಣ್ಣು ತಂತು.
ಬಾಳೆಹಣ್ಣು ಏನ್ಮಾಡ್ದೆ ?
ಸುಲಿದು ತಿಂದೆ
ಸಿಪ್ಪೆ ಏನ್ಮಾಡ್ದೆ ?
ಕದಿನಿಂದಕ್ಕೆ ಹಾಕ್ದೆ (ಬಾಗಿಲು ಹಿಂದಕ್ಕೆ)
ಕದ ಏನ್ ಕೊಡ್ತು ?
ಚೆಕ್ಕೆ ಕೊಡ್ತು .
ಚೆಕ್ಕೆ ಏನ್ ಮಾಡ್ದೆ ?
ಒಲೆಗೆ ಹಾಕ್ದೆ.
ಒಲೆ ಏನ್ ಕೊಡ್ತು ?
ಬೂದಿ ಕೊಡ್ತು
ಬೂದಿ ಏನ್ ಮಾಡ್ದೆ ?
ತಿಪ್ಪೆಗೆ ಹಾಕ್ದೆ .
ತಿಪ್ಪೆ ಏನ್ ಕೊಡ್ತು ?
ಗೊಬ್ಬರ ಕೊಡ್ತು.
ಗೊಬ್ಬರ ಏನ್ಮಾಡ್ದೆ?
ಗದ್ದೆಗೆ ಹಾಕ್ದೆ.
ಗದ್ದೆ ಏನ್ ಕೊಡ್ತು ?
ಭತ್ತ ಕೊಡ್ತು
ಭತ್ತ ಏನ್ ಮಾಡ್ದೆ?
ಅಕ್ಕಿ ಮಾಡ್ದೆ
ಅಕ್ಕಿ ಏನ್ ಕೊಡ್ತು ?
ಅನ್ನ ಕೊಡ್ತು
ಅನ್ನ ಏನ್ ಮಾಡ್ದೆ ?
ತಿಂದೆ…

ವೆಂಕಣ್ಣಾಚಾರ್ ಸ್ವಾತಂತ್ರ್ಯೋತ್ಸವದ ನಿರೂಪಣೆಗೆ 40 ವರ್ಷ !

‘ಆ ಪಥ ಸಂಚಲನದಲ್ಲಿ ಭಾಗವಹಿಸಿರುವ ಮಕ್ಕಳ ಶಿಸ್ತನ್ನು ನೋಡಿ. ಎಷ್ಟು ಸೊಗಸಾಗಿದೆ. ಓಹೋ.. ಇಲ್ನೋಡಿ, ನಮ್ ಸಚಿವರು ಸ್ವಾತಂತ್ರ್ಯದ ಶುಭಾಶಯ ಸಂಕೇತವಾಗಿ ಬಲೂನ್‌ಗಳನ್ನು ಆಗಸಕ್ಕೆ ಹಾರಿ ಬಿಡುತ್ತಿದ್ದಾರೆ. ನೀವೆಲ್ಲ ಈಗ ಚಪ್ಪಾಳೆ ತಟ್ಟಿ ಸಂಭ್ರಮಿಸಬೇಕು. ಆಸಂಭ್ರಮ ಮುಗಿಲು ಮುಟ್ಟಬೇಕು…’
ಪ್ರತಿ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವದಲ್ಲಿ ಹೀಗೆ ದೇಶ ಭಕ್ತಿಯ ಆವಾಹನೆಯೊಂದಿಗೆ ಸಾಹಿತ್ಯ ಪರಿಚಾರಕ ಕೆ.ವೆಂಕಣ್ಣಾಚಾರ್ ವೀಕ್ಷಕ ವಿವರಣೆ ನೀಡುತ್ತಿದ್ದರೆ, ಗ್ಯಾಲರಿಯಲ್ಲಿ ಕುಳಿತ ಪ್ರೇಕ್ಷಕ ಮಹಾಪ್ರಭು ಮರು ಯೋಚನೆ ಮಾಡದೇ, ಜೋರಾಗಿ ಕರತಾಡನ ಮಾಡಲೇ ಬೇಕು. ಅಷ್ಟರಮಟ್ಟಿಗೆ ಅವರ ಮಾತುಗಳು ಪ್ರೀತಿ ಪೂರ್ವಕವಾಗಿರುತ್ತವೆ.
ಅಂದಹಾಗೆ, 78ರ ಹೊಸ್ತಿಲಲ್ಲಿರುವ ವೆಂಕಣ್ಣಾಚಾರ್ ಅವರ ಸ್ವಾತಂತ್ರ್ಯೋತ್ಸವದ ವೀಕ್ಷಕ ವಿವರಣೆಗೆ ಈಗ 41ರ ಹರೆಯ. ಅಪರೂಪದ ಮಾಹಿತಿ, ಸ್ಪುಟವಾದ ಭಾಷೆ, ನವಿರಾದ ನಿರೂಪಣೆಯೊಂದಿಗೆ ನಾಲ್ಕು ದಶಕಗಳಿಂದ ನಿರಂತರವಾಗಿ ವೆಂಕಣ್ಣಾಚಾರ್ ವೀಕ್ಷಕ ವಿರಣೆ ನೀಡುತ್ತಾಬಂದಿದ್ದಾರೆ. ಸಾವಿರಾರು ಪ್ರೇಕ್ಷರಿಂದ ಚಪ್ಪಾಳೆಗಳನ್ನು ಹೊಡೆಸಿದ್ದಾರೆ.

ನೆನಪಿನಾಳದಿಂದ…
ಚಿತ್ರದುರ್ಗದ ಹಳೇ ಮಾಧ್ಯಮಿಕ ಶಾಲೆ ಮೈದಾನದಲ್ಲಿ ಆಗಸ್ಟ್ 15, 1973ರ ಸ್ವಾತಂತ್ರ್ಯೋತ್ಸವದೊಂದಿಗೆ ವೀಕ್ಷಕ ವಿವರಣೆ ಆರಂಭಿ­ಸಿದ ವೆಂಕಣ್ಣಾಚಾರ್, 40 ವರ್ಷಗಳಲ್ಲಿ ಒಂದೇಒಂದು ವರ್ಷವೂ ಕಾರ್ಯಕ್ರಮಕ್ಕೆ ತಪ್ಪಿಸಿಕೊಳ್ಳದೇ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದಾರೆ.
‘1972ರಲ್ಲಿ ಚಿತ್ರದುರ್ಗಕ್ಕೆ ಕನ್ನಡ ಸಂಸ್ಕೃತಿ ಇಲಾಖೆಯ ನೌಕರನಾಗಿ ಬಂದೆ. 73ರ ಜನವರಿಯಿಂದಲೇಗಣರಾಜ್ಯೋತ್ಸವದ ನಿರೂಪಣೆ ಜವಾಬ್ದಾರಿ ದೊರೆಯಿತು. ಮೊದಲು ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಎರಡೂಹಳೇ ಮಾಧ್ಯಮಿಕ ಶಾಲಾಆವರಣದಲ್ಲಿ ನಡೆಯುತ್ತಿತ್ತು. ನಂತರ ಒನಕೆ ಓಬವ್ವ ಕ್ರೀಡಾಂಗಣಕ್ಕೆ ವರ್ಗವಾಯಿತು. ಈಗ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ನಡೆಯುತ್ತಿದೆ. ಪ್ರತಿ ವರ್ಷವೂ ಹೊಸ ಹೊಸ ರೂಪದೊಂದಿಗೆ ಕಾರ್ಯಕ್ರಮಗಳು ನಡೆಯುತ್ತಿವೆ. ಮೊದಲು ಶಾಲಾ ಶಿಕ್ಷಕರು ಹಾಡು ಹೇಳುತ್ತಿದ್ದರೆ, ಮಕ್ಕಳು ನರ್ತಿಸುತ್ತಿದ್ದರು. ಈಗ ಟೇಪ್ ರೆಕಾರ್ಡರ್ ಗಳು ಹಾಡುತ್ತವೆ. ಆದರೆ, ಚಿತ್ರದುರ್ಗದಲ್ಲಿ ಎಂದೆಂದೂ ಕಾರ್ಯಕ್ರಮಗಳು ಕಳಪೆಯಾಗಿ ನಡೆಯಲಿಲ್ಲ’ ಎಂದು ಬದಲಾವಣೆಯ ಹಂತಗಳನ್ನು ನೆನಪಿಸಿಕೊಳ್ಳುತ್ತಾರೆ ವೆಂಕಣ್ಣಾಚಾರ್.

ಪ್ರೀತಿಯ ಕೆಲಸ…
ವೆಂಕಣ್ಣಾಚಾರ್ ತನ್ನ ನಾಲ್ಕು ದಶಕಗಳ ಈ ‘ನಿರೂಪಣೆಯ ಪಯಣ’ದಲ್ಲಿ ಸಾಕಷ್ಟು ರಾಜಕೀಯ ನಾಯಕರನ್ನು ಕಂಡಿದ್ದಾರೆ. ಸಾಹಿತಿಗಳು, ವೆಂಕಣ್ಣಾಚಾರ್ ಸ್ವಾತಂತ್ರ್ಯೋತ್ಸವದ ನಿರೂಪಣೆಗೆ 40 ವರ್ಷ ! ಓದಲು ಮುಂದುವರೆಸಿ

ಎದೆ ತುಂಬಿ ಹಾಡಿದ ಗಾಯಕರು, ಮನವಿಟ್ಟು ಕೇಳಿದ ಪ್ರೇಕ್ಷಕರು…!

03ct4ep 03ct5ep

ಬುಧವಾರ ಇಳಿ ಸಂಜೆಯಲ್ಲಿ ನಗರದ ತರಾಸು ರಂಗಮಂದಿರದ ತುಂಬಾ ಜಿಎಸ್ಎಸ್ ಕಾವ್ಯದ ಹೊನಲು ಹರಿಯುತ್ತಿತ್ತು. ಆ ಭಾವ ಲಹರಿಯ ಅಲೆಯಲ್ಲಿ ಐದುನೂರಕ್ಕೂ ಹೆಚ್ಚು ಕವಿ ಮನಸ್ಸಿನ ಸಹೃದಯಿಗಳು ತೇಲಿ ಹೋದರು..!
ವಿಶ್ವಪಥ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ‘ಎದೆ ತುಂಬಿ ಹಾಡುವೆವುವು…’ – ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರಿಗೆ ಗೀತ ನಮನ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯವಿದು.
‘ಹಣತೆ’ ಹಚ್ಚಿ ಕನ್ನಡ ಸಾರಸ್ವತ ಲೋಕವನ್ನು ಬೆಳಗಿಸಿದ ಚೈತ್ರ ಕವಿ ಜಿಎಸ್ಎಸ್ ಅವರ ಹದಿನಾರು ಜನಪ್ರಿಯ ಗೀತೆಗಳನ್ನು ಹದಿನೇಳು ಗಾಯಕರು ಹಾಡುವ ಮೂಲಕ ರಾಷ್ಟ್ರಕವಿಗೆ ಗೀತ ನಮನ ಸಲ್ಲಿಸಿದರು. ಗೀತೆಯ ಜೊತೆಗೆ, ಅದರ ರಚನೆಯ ಉದ್ದೇಶ, ಸನ್ನಿವೇಶ, ಸಂದರ್ಭಗಳನ್ನು ಸಾಹಿತ್ಯ ಪೂರಣ ನಿರೂಪಣೆಯ ಮೂಲಕ ಆಕಾಶವಾಣಿ ಕಾರ್ಯಕ್ರಮ ಮುಖಸ್ಥೆ ಉಷಾ ಲತಾ ಅವರು ನಿರೂಪಿಸಿದರು.
ಗಾಯಕಿ ಕೋಕಿಲಾ ರುದ್ರಮೂರ್ತಿಯವರ ದನಿಯಲ್ಲಿ ಮೂಡಿಬಂದ ಮುಂಗಾರಿನ ಅಭಿಷೇಕಕೆ / ಮಿದುವಾಯಿತು ನೆಲವು / ಧಗೆಯಾರಿದ ಹೃದಯದಲ್ಲಿ/ ಪುಟಿದೆದ್ದಿತು ಚೆಲುವು’ ಎಂಬ ಗೀತೆ ಪ್ರೇಕ್ಷಕರನ್ನು ಮುಂಗಾರಿನ ಮಳೆಯಲ್ಲಿ ತೊಯ್ದಂತಹ ಅನುಭವ ನೀಡಿತು.
ಯುವ ಗಾಯಕ ಪ್ರಜ್ವಲ್ ಧ್ವನಿಯಲ್ಲಿ ಮೂಡಿ ಬಂದ, ‘ಆಕಾಶದ ನೀಲಿಯಲ್ಲಿ / ಚಂದ್ರ ತಾರೆ ತೊಟ್ಟಿಲಲ್ಲಿ / ಬೆಳಕನಿಟ್ಟು ತೂಗದಾಕೆ / ನಿನಗೆ ಬೇರೆ ಹೆಸರು ಬೇಕೇ/ ಸ್ತ್ರೀ ಎಂದರೆ ಅಷ್ಟೇ ಸಾಕೆ’ ಗೀತೆ ಹಾಗೂ ಸತೀಶ್ ಜಟ್ಟಿಯವರ ಕಂಠದಿಂದ ಹೊಮ್ಮಿದ ‘ಕಾಣದ ಕಡಲಿಗೆ ಹಂಬಲಿಸಿದೆ ಮನ’ ಕವಿತೆ, ಗಾಯಕ ದಿ. ಸಿ. ಅಶ್ವತ್ಥ್ ಅವರ ಶಾರೀರವನ್ನು ನೆನಪಿಸಿತು. ಪ್ರೇಕ್ಷಕರ ಒತ್ತಾಯ ಹಾಗೂ ಹಾಡುಗಾರರ ಜಿಎಸ್ಎಸ್ ಮೇಲಿನ ಪ್ರೀತಿಯಿಂದಾಗಿ ‘ದುರ್ಗದ ಸಿರಿ’ ಸಾಂಸ್ಕೃತಿಕ ವೇದಿಕೆಯ ಡಿವೈಎಸ್ಪಿ ಮಹಂತರೆಡ್ಡಿಯವರು ’ಕಾಣದ ಕಡಲಿಗೆ ಹಂಬಲಿಸಿದ ಮನ’ ಹಾಡನ್ನು ಹಾಡಿ, ಪ್ರೇಕ್ಷಕರನ್ನು ಮತ್ತಷ್ಟು ರಂಜಿಸಿದರು. ಮಂದ್ರ ಸ್ಥಾಯಿ, ತಾರಸ್ಥಾಯಿಯ ಸಂಗೀತ ಸ್ವರಗಳಿಗೆ ಪ್ರೇಕ್ಷಕರು ತಲೆದೂಗಿದರು, ಧ್ಯಾನಸ್ಥರಾದರು, ಅಂತರ್ಮುಖಿಯಾಗಿ ಗಾಯನವನ್ನು ಆಸ್ವಾದಿಸಿದರು. ಕೆಲವರ ಕಣ್ಣಾಲಿಗಳು ತೇವವಾದವು !
ಬಿ.ಪಿ.ಶೋಭಾ ಅವರ ‘ಪ್ರಕೃತಿಯಂತೆ ಕವಿಯ ಮನಸು..’ ಗಾಯನ, ಚಿತ್ರದುರ್ಗದ ಜೋಗಿಮಟ್ಟಿಯ ಹಸಿರ ಸಿರಿಯನ್ನು ನೆನಪಿಸಿದರೆ, ಡಿ.ಓ ಮೊರಾರ್ಜಿಯವರ ‘ಶತಮಾನದಿಂದ ..’ ಗೀತೆ ದುರ್ಗದ ನೆಲದ ಹೋರಾಟದ ಕಿಚ್ಚನ್ನು ಮೆಲಕುವಂತೆ ಮಾಡಿತು. ವೇಣುಗೋಪಾಲ್ ಅವರ ದನಿಯಲ್ಲಿ ಮೂಡಿದ ‘ನಿನ್ನದೇ ನೆಲ, ನಿನ್ನದೇ ಜಲ..’ ಜಿಎಸ್ಎಸ್ ಅವರ ನೆಲದ ಪ್ರೀತಿಯನ್ನು ಪ್ರದರ್ಶಿಸಿತು. ಚಂದ್ರಪ್ಪ ಅವರು ‘ಎದೆ ತುಂಬಿ ಹಾಡುವೆನು’ ತ್ರಿವೇಣಿಯವರ ‘ಉಡುಗಣ ವೇಷ್ಟಿತ’, ಕುಮಾರಿ ನಾಶ್ರೀಯವರ ದನಿಯಲ್ಲಿ ಮೂಡಿ ಬಂದ ‘ಯಾವ ರಾಗಕೋ..’ ಗೀತೆಗಳು ಪ್ರೇಕ್ಷಕರ ಕೈಗಳಿಗೆ ತಾಳದ ಲೇಪನವನ್ನು ಹಚ್ಚಿದವು. ಈ ಎಲ್ಲ ಹಾಡುಗಳಿಗೂ ಪ್ರೇಕ್ಷಕ ಮಹಾಪ್ರಭು ಜೋರು ಚಪ್ಪಾಳೆ ತಟ್ಟುವ ಮೂಲಕ ‘ಫುಲ್ ಮಾರ್ಕ್ಸ್’ ನೀಡಿದರು.
ವೃಂದಗಾನದಲ್ಲಿ ಪ್ರಸ್ತುತಪಡಿಸಿದ ‘ಒಂದೇ ಒಂದೇ ಒಂದೇ ನಾವೆಲ್ಲರೂ ಒಂದೇ ’ ಗೀತೆ ಜಿಎಸ್ಎಸ್ ಅವರ ದೇಸಿ ತನವನ್ನು ತೆರೆದಿಟ್ಟರೆ, ನಾಗಶ್ರೀ, ಬಿ.ಪಿ.ಶೋಬಾ ಹಾಗೂ ಮೀನಾಕ್ಷಿ ಭಟ್ ಹಾಡಿದ ‘ಹೊಸ ವರ್ಷದ ಗೀತೆ’ ಪ್ರೇಕ್ಷರಿಗೆ ಹೊಸ ವರ್ಷಾಚರಣೆಯ ಶುಭಾಶಯವನ್ನು ಕೋರಿದಂತಿತ್ತು.
ಚಿತ್ರದುರ್ಗದ ಹಾಡು ಹಕ್ಕಿಗಳ ಸಂಗೀತಕ್ಕೆ ಗುಡದೇಶ್ (ಕೀಬೋರ್ಡ್), ಬಸವರಾಜ್ (ತಬಲ), ಚಂದ್ರಶೇಖರ್ (ರಿದಂ ಪ್ಯಾಡ್) ಪಕ್ಕವಾದ್ಯ ನೀಡಿದರು. ಈ ಮೂವರ ಸಂಗೀತದ ಮೋಡಿಯಿಂದ ಗೀತ ಗಾಯನ ಅದ್ಭುತವಾಗಿ ಮೂಡಿಬಂತು.
ಕೇತೇಶ್ವರ ಶ್ರೀಗಳು, ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ, ನ್ಯಾಯಾಧೀಶ ಸದಾಶಿವ ಎಸ್. ಸುಲ್ತಾನಪುರಿ, ಎಸ್.ಆರ್. ಎಸ್ ಕಾಲೇಜಿನ ಮುಖ್ಯಸ್ಥ ಲಿಂಗಾರೆಡ್ಡಿ, ಬಾಪೂಜಿ ವಿದ್ಯಾಸಂಸ್ಥೆಯ ಮುಖ್ಯಸ್ಥ ಕೆ.ಎಂ.ವೀರೇಶ್, ಸಾಹಿತ್ಯ ಪರಿಚಾರಕ ವೆಂಕಣ್ಣಾಚಾರ್, ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ, ಯಶೋಧಮ್ಮ ದಂಪತಿ ಸೇರಿದಂತೆ ಕೋಟೆ ನಾಡಿನ ಪ್ರಮುಖ ವ್ಯಕ್ತಿಗಳೆಲ್ಲ ಪ್ರೇಕ್ಷಕ ಗ್ಯಾಲರಿಯಲ್ಲಿ ಕುಳಿತು ಗಾನ ಸುಧೆಯನ್ನು ಆಸ್ವಾದಿಸಿದ್ದು ವಿಶೇಷ.
ಕಾರ್ಯಕ್ರಮ ಮುಗಿದು, ಪ್ರೇಕ್ಷಕರೆಲ್ಲ ಮನೆಯತ್ತ ಹೆಜ್ಜೆ ಹಾಕುತ್ತಿದ್ದರೆ, ಇತ್ತ ರಂಗ ಮಂದಿರದಲ್ಲಿ ಇಟ್ಟಿದ್ದ ಶಿವರುದ್ರಪ್ಪನವರ ಭಾವಚಿತ್ರದ ಎದುರು ನಿಂತು ಅವರ ಸಹೋದರಿ ಜಯಕ್ಕ, ಅಗಲಿದ ಸಹೋದರನನ್ನು ನೆನೆಯುತ್ತಾ ಕಣ್ಣೀರಿಡುತ್ತಿದ್ದರು !
———————————
ಉಳಿದಂತೆ ಹಾಡಿದವರು..
ಯಾವ ಹಾಡ ಹಾಡಲಿ – ತೋಟಪ್ಪ ಉತ್ತಂಗಿ
ನನ್ನ ನಿನ್ನ ನಡುವೆ – ಜಿ.ಎಸ್. ಉಜ್ಜಿನಪ್ಪ
ಎಲ್ಲೋ ಹುಡುಕಿದ – ರವಿ ಉಗ್ರಾಣ
ಹಾಡು ಹಳೆಯದಾದರೇನು – ಮೀನಾಕ್ಷಿ ಭಟ್
ಮಬ್ಬು ಕವಿದರೇನು – ಚಂಪಕಾ ಶ್ರೀಧರ್
ಒಂದೇ ಒಂದೇ ಒಂದೇ – ಎಂ.ಕೆ. ಹರೀಶ್
ಎಳೆ ಬೆಳದಿಂಗಳೇ – ಕೆ.ಎ. ಏಕಾಂತಪ್ಪ
–––––––––––––
ಹೊರಡುವ ಮುನ್ನ ಹೀಗೆಂದರು..
ವಿಭಿನ್ನ ಕಾರ್ಯಕ್ರಮ. ವಿನೂತನ ಪ್ರಯತ್ನ. ಭಾವಗೀತೆಯೇ ಪ್ರಧಾನವಾದ ಕಾರ್ಯಕ್ರಮ ಇದು. ಆಯೋಜಕರಿಗೊಂದು ಶಹಬ್ಬಾಸ್.
–ಅಶೋಕ್ ಬಾದರದಿನ್ನಿ, ರಂಗಕರ್ಮಿ

ಚಂದದ ಕಾರ್ಯಕ್ರಮ. ಚಿತ್ರದುರ್ಗದ ಜಿಲ್ಲಾ ಉತ್ಸವ ಇದೇ ರೀತಿಯಲ್ಲಿ ನಡೆಯಬೇಕು.
– ವಿ.ಪಿ.ಇಕ್ಕೇರಿ, ಜಿಲ್ಲಾಧಿಕಾರಿ
ಮೊದ ಮೊದಲು ಗಾಯನ ಸಾಧಾರಣವಾಗಿತ್ತು. ಆಮೇಲೆ ರಂಗ ಮಂದಿರದಿಂದ ಎದ್ದು ಹೋಗದ ಮಟ್ಟಿಗೆ ಆ ಗೀತೆಗಳು ನನ್ನ ಮನಸ್ಸನ್ನು ಕಟ್ಟಿ ಹಾಕಿಬಿಟ್ಟವು.
– ಕೋಟ್ಲಾ ರಾಮಲಿಂಗರೆಡ್ಡಿ, ರೈಲ್ವೆ ಹೋರಾಟ ಸಮಿತಿ ಸದಸ್ಯರು

ಕಲಾವಿದರಿಗೆ ಈ ಪರಿ ಗೌರವ ಕೊಟ್ಟಿದ್ದು ತುಂಬಾ ಸಂತಸ ತಂದಿದೆ. ಇಂಥ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು.
– ಬಿ.ಪಿ.ಶೋಭಾ, ಚಂದ್ರಪ್ ಕಲ್ಕರೆ, ಕಲಾವಿದರ ಪರವಾಗಿ

ಹುಣಸೆಕಟ್ಟೆಯ ಹೂವಿನ ಬದುಕು

ಹುಣಸೆಕಟ್ಟೆ ಜಿಲ್ಲೆಯಲ್ಲೇ ಅತ್ಯಧಿಕ ಹೂವು ಬೆಳೆಯುವ ಏಕೈಕ ಗ್ರಾಮ. ಪರಿಶಿಷ್ಟರೇ ಹೆಚ್ಚಾಗಿರುವ ಈ ಊರಿನಲ್ಲಿ ೬೦೦ ಕುಟುಂಬಗಳಿವೆ. ಅದರಲ್ಲಿ ೫೫೦ ಕುಟುಂಬಗಳಿಗೂ ಜಮೀನಿದೆ. ಜಮೀನು ಹೊಂದಿರುವರೆಲ್ಲರೂ ಕನಿಷ್ಠ ೧೦ ಗುಂಟೆಯಿಂದ ೧ ಎಕರೆ ಪ್ರದೇಶವನ್ನು ಹೂವಿಗಾಗಿ ಮೀಸಲಿಟ್ಟಿದ್ದಾರೆ. ಕಡಿಮೆ ಜಾಗದಲ್ಲಿ ಹೂವು ಬೆಳೆಯುವವರದ್ದೇ ಸಿಂಹಪಾಲು.

ಅಚ್ಚರಿಯ ವಿಷಯವೆಂದರೆ ಪುಷ್ಪ ಕೃಷಿಯಲ್ಲಿ ತೊಡಗಿರುವವರಲ್ಲಿ ೪೦೦ ಮಂದಿ ೨೨ ರಿಂದ ೪೦ ವರ್ಷದೊಳಗಿನವರು. ಇವರಲ್ಲಿ ಕನಿಷ್ಠ ಎಸ್‌ಎಸ್‌ಎಲ್‌ಸಿಯಿಂದ, ಗರಿಷ್ಠ ಬಿಎ ವರೆಗೆ ಓದಿದವರಿದ್ದಾರೆ.

ವಿದ್ಯಾಭ್ಯಾಸವೇನೇ ಇದ್ದರೂ ಗದ್ದೆಗಿಳಿದು ಕೈ-ಮೈ ಕೆಸರು ಮಾಡಿಕೊಳ್ಳುತ್ತಾರೆ. ಊರಿಗೆ ಬರುವ ಸೊಸೆಯಂದಿರೂ ಇದರಿಂದ ಹೊರತಾಗಿಲ್ಲ. ಹೀಗಾಗಿ ಊರಿನಲ್ಲಿ ಉಳಿಯುವ ಅನಿವಾರ್ಯವೋ, ಅವಕಾಶಗಳಿಲ್ಲದೆಯೋ ಒಟ್ಟಿನಲ್ಲಿ ಈ ಯುವಕರು ದುಡಿಮೆಗಾಗಿ ಸಮೀಪದ ನಗರಕ್ಕಾಗಲಿ, ದೂರದ ಬೆಂಗಳೂರಿಗಾಗಲಿ ಹೋಗದೇ, ಹೂವಿನ ಕೃಷಿಯನ್ನೇ ನಂಬಿ ಬದುಕುತ್ತಿದ್ದಾರೆ. ಇದೇ ಕೃಷಿಯಲ್ಲಿ ವರ್ಷಕ್ಕೆ ಕನಿಷ್ಠ ೨ ರಿಂದ ೩ ಲಕ್ಷ ಲಾಭ ಗಳಿಸುತ್ತಿದ್ದಾರೆ !

ಹೂವಿನ ಕೃಷಿ ಹೀಗೆ ಬಂತು
ಮೂವತ್ತು ವರ್ಷಗಳ ಹಿಂದಿನ ಕಥೆ. ಹುಣಸೆಕಟ್ಟೆ ಗ್ರಾಮದಲ್ಲಿ ದಾಸರ ಬೋರಜ್ಜ ಎಂಬ ಗ್ರಾಮ ಪಂಚಾಯ್ತಿ ಅಧ್ಯಕ್ಷರು ವಾಸವಿದ್ದರು. ಅವರು ಮೊದಲು ಸೇವಂತಿಗೆ ಹೂವನ್ನು ಗ್ರಾಮದಲ್ಲಿ ಬೆಳೆಯುತ್ತಿದ್ದರು. ಬಿಡಿ ಬಿಡಿ ಹೂವನ್ನು ಕುಕ್ಕೆಯಲ್ಲಿ ತುಂಬಿಕೊಂಡು ಚಿತ್ರದುರ್ಗದ ಮಾರುಕಟ್ಟೆಗೆ ಹೋಗಿ ಕೆ.ಜಿ ಲೆಕ್ಕದಲ್ಲಿ ಮಾರಾಟ ಮಾಡುತ್ತಿದ್ದರು. ‘ಅಜ್ಜ’ನಿಂದ ಆರಂಭವಾದ ಹೂವಿನ ಉದ್ಯಮ ಈಗ ಯುವಕರ ಶ್ರಮ, ದುಡಿಮೆ ಮೇಲೆ ವಿಸ್ತಾರಗೊಳ್ಳುತ್ತಿದೆ. ಅಂದು ಒಂದು ಪಟ್ಟೆ, ಗುಂಟೆಯಲ್ಲಿ ಬೆಳೆಯುತ್ತಿದ್ದ ಒಂದೋ ಎರಡೋ ತಳಿಯ ಹೂವುಗಳು, ಇಂದು ಒಂದು ಎಕರೆವರೆಗೂ ವಿಸ್ತಾರಗೊಂಡಿದೆ. ಹತ್ತಾರು ತಳಿಯ ಹೂವುಗಳನ್ನು ಬೆಳೆಯಲಾಗುತ್ತಿದೆ.

ಎಲ್ಲರೂ ‘ಹೂವಿನ’ ಯಜಮಾನರು:
ಹುಣಸೆಕಟ್ಟೆಯಲ್ಲಿ ಪ್ರತಿಯೊಬ್ಬ ರೈತರೂ ಹೂವಿನ ತೋಟದ ಮಾಲೀಕರು. ಸೇವಂತಿಗೆಯ ಚಾಂದಿನಿ, ಬೆಳ್ಳಟ್ಟಿ, ಪಚ್ಚೆ, ಕುಪ್ಪಂ, ಕರ್ನೂಲ್, ಬಟನ್ ರೋಸ್, ದುಂಡು ಮಲ್ಲಿಗೆ ಸೇರಿದಂತೆ ವಿವಿಧ ಬಗೆಯ ಹೂವುಗಳನ್ನು ಬೆಳೆಯುತ್ತಾರೆ. ೧೦೦ ಎಕರೆಯಷ್ಟು ಕನಕಾಂಬರ ಹೂವಿನ ತೋಟವಿದೆ.

ಈ ಹೂದೋಟದಲ್ಲಿ ನಡುವೆ ನೆರಳಿಗಾಗಿ ಚೊಗಚೆ (ಅಗಸೆ, ತೊಗಜೆ) ಮರಗಳನ್ನು ಬೆಳೆಸಿದ್ದಾರೆ. ‘ಈ ಮರಗಳು ಹೂವಿಗೆ ನೆರಳಾಗುತ್ತವೆ. ವೀಳ್ಯೆದೆಲೆಗೆ ಬಳ್ಳಿಗೆ ಆಸರೆಯಾಗುತ್ತವೆ. ಜಮೀನಿನ ಮೇಲೆ ಎಲೆ ಉದುರಿಸಿ ಗೊಬ್ಬರವಾಗಿಸುತ್ತವೆ. ಪ್ರತಿ ವರ್ಷ ಮರಗಳನ್ನು ಸವರಿದ ಎಲೆಗಳಿಂದ ಗೊಬ್ಬರ ತಯಾರಿಸುತ್ತೇವೆ’ ಎನ್ನುತ್ತಾರೆ ಮುಕ್ಕಾಲು ಎಕರೆಯಲ್ಲಿ ಪುಷ್ಪ ಕೃಷಿ ಕೈಗೊಂಡಿರುವ ತಿಪ್ಪೇಸ್ವಾಮಿ.

ಈ ಗ್ರಾಮದಲ್ಲಿ ಎಂಥ ಪರಿಸ್ಥಿತಿಯಲ್ಲೂ ಪುಷ್ಪ ಕೃಷಿ ನಿಂತಿಲ್ಲ. ಬರಗಾಲ ಬಂದು, ಕೊಳವೆ ಬಾವಿಯಲ್ಲಿ ನೀರು ಖಾಲಿಯಾದಾಗ ಅಕ್ಕಪಕ್ಕದ ತೋಟಗಳಿಂದ ನೀರು ಖರೀದಿಸಿ ಹೂವಿನ ಕೃಷಿ ಉಳಿಸಿಕೊಂಡಿದ್ದಾರೆ. ‘ಸಾಲ ಮಾಡಿಯಾದರೂ ತುಪ್ಪ ತಿನ್ನು’ ಎನ್ನವಂತೆ, ಸಾಲ ಮಾಡಿ ಹೂವಿನ ಕೃಷಿ ಮಾಡುತ್ತಿದ್ದಾರೆ. ಕಳೆದ ವರ್ಷದಲ್ಲಿ ನಷ್ಟ ಮಾಡಿಕೊಂಡಿದ್ದನ್ನು, ಮುಂದಿನ ವರ್ಷದಲ್ಲಿ ಬಡ್ಡಿಯೊಂದಿಗೆ ದುಡಿಯುತ್ತೇವೆ ಎಂಬ ವಿಶ್ವಾಸ ಹುಣಸೆ ಕಟ್ಟೆಯ ಹೂವಾಡಿಗರದ್ದು !

ವರ್ಷಪೂರ್ತಿ ದುಡಿಮೆ
ಸೇವಂತಿಗೆ 8 ತಿಂಗಳ ಬೆಳೆ. ಕನಕಾಂಬರ ಕೂಡ ವರ್ಷದ ಬೆಳೆ. ಸೇವಂತಿಗೆ ಬೆಳೆಯನ್ನು ವರ್ಷಕ್ಕೊಮ್ಮೆ ನಾಟಿ ಮಾಡಬೇಕು. ಕನಕಾಂಬರ ಒಂದು ಸಾರಿ ನೆಟ್ಟರೆ ಹತ್ತು ವರ್ಷ ಹೂವು ಬಿಡುತ್ತದೆ. ಹುಣಸೆಕಟ್ಟೆ ವ್ಯಾಪ್ತಿಯಲ್ಲಿ ಅಂದಾಜು 100 ಎಕರೆಯಷ್ಟು ಕನಕಾಂಬರದ ಹೂವಿನ ಬೆಳೆ ಇದೆ.

ಎಕರೆ ಹೂವಿನ ಕೃಷಿಯಲ್ಲಿ ನಾಲ್ಕೈದು ತಳಿಗಳನ್ನು ನಾಟಿ ಮಾಡುತ್ತಾರೆ. ಹಬ್ಬ, ಸೀಸನ್, ಬೇಡಿಕೆಗೆ ತಕ್ಕಂತೆ ಹೂವುಗಳನ್ನು ಬೆಳೆಯುತ್ತಾರೆ. ಇದು ಹತ್ತು – ಹದಿನೈದು ವರ್ಷಗಳ ಅನುಭವದಿಂದ ಬಂದ ಕಲೆ. ’ಯುಗಾದಿಯ ಎಡ ಬಲದಾಗೆ ಸೇವಂತಿಗೆ ಹೂವಿನ ಗಿಡಗಳನ್ನು ನಾಟಿ ಮಾಡ್ತೀವಿ. ಅದು ದೀಪಾವಳಿಗೆ ಕೊಯ್ಲಿಗೆ ಬರುತ್ತದೆ.

ಇದು ಒಂದು ಜಾತಿ ಹೂವು. ಅದರ ಜೊತೆಗೆ ಇನ್ನೊಂದೆರಡು ಜಾತಿ ಹೂವುಗಳನ್ನು ನಾಟಿ ಮಾಡ್ತೀವಿ. ಒಂದು ಹೂವು ಕೊಯ್ಲು ಪೂರ್ಣವಾಗುವುದೊಳಗೆ ಮತ್ತೊಂದು ತಳಿಯ ಹೂವು ಕೊಯ್ಲಿಗೆ ಸಿದ್ಧ. ಹಾಗಾಗಿ ವರ್ಷಪೂರ್ತಿ ಹೂವು ಕೊಯ್ಲು ನಿರಂತರ. ಇದರಿಂದ ವರ್ಷ ಪೂರ್ತಿ ಕೆಲಸ’ ಎಂದು ವಿವರಿಸುತ್ತಾರೆ ಎರಡು ದಶಕಗಳ ಪುಷ್ಪ ಕೃಷಿಯ ಅನುಭವಿ ರೈತ ಕಾಂತರಾಜು.

ಈಗ ಶ್ರಾವಣದಲ್ಲಿ ಬೆಳ್ಳಟ್ಟಿ ತಳಿ ಸೇವಂತಿಗೆ ನಾಟಿ ಮಾಡಿದ್ದಾರೆ. ಅದು ಯುಗಾದಿಗೆ ಕೊಯ್ಲಿಗೆ ಬರುತ್ತದೆ. ಒಂದು ಎಕರೆ ಜಮೀನಿನಲ್ಲಿ ಕಾಲು ಬಾಗ ಈ ಹೂವಿನ ತಳಿ ನಾಟಿ ಮಾಡಿದ್ದೇವೆ. ನಾಲ್ಕೈದು ತಳಿಗಳನ್ನು ಹಾಕುವುದರಿಂದ ಒಂದು ತಳಿ ಸೋತರೆ, ಮತ್ತೊಂದು ತಳಿ ಗೆಲ್ಲುತ್ತದೆ ಎನ್ನುವುದು ಈ ಊರಿನ ಪುಷ್ಪ ಕೃಷಿಕರ ಲೆಕ್ಕಾಚಾರ.

ಹೂವಿನ ಹಾಸಿಗೆಯಲ್ಲ!
ಪುಷ್ಪೋದ್ಯಮ ಈ ಊರಿನ ಯುವಕರಿಗೆ ಹೂವಿನ ಹಾಸಿಗೆಯೇನಲ್ಲ. ಒಂದೊಂದು ಸಮಯದಲ್ಲಿ ಕೆ.ಜಿ ಕನಕಾಂಬರ ಸಾವಿರ ರೂಪಾಯಿ ಬೆಲೆ ಕಟ್ಟಿಕೊಟ್ಟರೆ, ಮತ್ತೊಮ್ಮೆ 100 ರೂಪಾಯಿಯನ್ನೂ ಕರುಣಿಸಿದೆ. ಹೂವಿಗೆ ಬೆಂಕಿ ರೋಗ ಕಾಣಿಸಿಕೊಂಡರೆ, ಇಡೀ ಹೂವಿನ ಅಂಗಳವೇ ಸುಟ್ಟು ಭಸ್ಮವಾಗುತ್ತದೆ. ಹಾಗೆಂದು ಪುಷ್ಪೋದ್ಯಮ ಎಂದೂ ನಷ್ಟ ಮಾಡಿಲ್ಲ. ಇದರಲ್ಲಿ ಆದಾಯವೂ ಇದೆ, ರಿಸ್ಕ್ ಕೂಡ ಇದೆ. ಆದರೆ ದೊಡ್ಡ ಪ್ರಮಾಣದಲ್ಲಿ ನಷ್ಟವಾಗುವುದಿಲ್ಲ. ನಾವು ಎಷ್ಟು ಜಾಗೃತಿಯಿಂದ ಕೃಷಿ ಮಾಡುತ್ತೇವೆ ಎನ್ನುವುದರ ಮೇಲೆ ಎಲ್ಲವೂ ನಿರ್ಧಾರವಾಗುತ್ತದೆ ಎನ್ನುತ್ತಾರೆ ತಿಪ್ಪೇಸ್ವಾಮಿ.

‘ಲಕ್ಷ ರೂಪಾಯಿ ಬಂಡವಾಳ ಹಾಕಿದರೆ 25 ಸಾವಿರ ರೂಪಾಯಿ ಕೂಲಿಗೆ, 10 ಸಾವಿರ ರೂಪಾಯಿ ದಲ್ಲಾಳಿಗೆ ಕೊಡಬೇಕು. 1,000 ರೂಪಾಯಿ ಆದಾಯ ಬಂದರೆ, ೫೦೦ ರೂ ಖರ್ಚು. ಉಳಿದ್ದು ಲಾಭ. ಹುಣಸೆಕಟ್ಟೆಯಿಂದ ಪ್ರತಿದಿನ ಒಂದು ಕ್ವಿಂಟಲ್ ಹೂವು ಚಿತ್ರದುರ್ಗಕ್ಕೆ ಸಾಗಿಸುತ್ತಾರೆ. ಕಳೆದ ವರ್ಷ ಇದೇ ವೇಳೆ 10ರಿಂದ 15 ಕ್ವಿಂಟಲ್ ಹೂವು ಮಾರುಕಟ್ಟೆಗೆ ಪೂರೈಸಿದ್ದರು. ಹಬ್ಬದ ದಿನಗಳಲ್ಲಿ ಪ್ರತಿದಿನ 10 ಲಕ್ಷ ರೂಪಾಯಿ ಹೂವಿನ ವಹಿವಾಟು ನಡೆಯುತ್ತದೆ. ನೀರು ಸರಿಯಾಗಿದ್ದರೆ ಪ್ರತಿದಿನ ಕನಿಷ್ಠ 2-3 ಲಕ್ಷ ರೂಪಾಯಿ ವಹಿವಾಟು ನಡೆಸಬಹುದು’ – ಲೆಕ್ಕಾಚಾರ ಮುಂದಿಡುತ್ತಾರೆ ಪುಷ್ಪ ಕೃಷಿಕರು.

ಹೂವಿನ ವ್ಯಾಪಾರಕ್ಕೆ ಅಡಿಕೆ ಕೃಷಿಯೂ ಸಾಟಿಯಾಗಲ್ಲ ಎನ್ನುತ್ತಾರೆ ಹೂವಾಡಿಗರು. ಒಂದು ಎಕರೆ ಅಡಿಕೆ ಕೃಷಿಯಿಂದ 2 ಲಕ್ಷ ರೂ. ಪಡೆಯಬಹುದು. ಸಕಾಲದಲ್ಲಿ ಮಳೆಯಾಗಿ, ಗೊಬ್ಬರ, ಔಷಧ ಪೂರೈಕೆಯಾದರೆ ಈ ಹೂವಿನ ಬೇಸಾಯದಲ್ಲಿ ಒಂದು ಸೀಸನ್‌ಗೆ ಕಾಲು ಎಕರೆಗೆ ಒಂದು ಲಕ್ಷ ರೂಪಾಯಿ ದುಡಿಯುತ್ತೇವೆ. ಗ್ರಾಮದ ರಘು ಎಂಬುವವರು ಕಾಲು ಎಕರೆ ಬೆಳ್ಳಟ್ಟಿ ತಳಿ ಬೆಳೆದು, ಖರ್ಚು ತೆಗೆದು 3 ಲಕ್ಷ ರೂಪಾಯಿ ಆದಾಯ ಗಳಿಸಿದ್ದಾರೆ ಎಂದು ಉದಾಹರಿಸುತ್ತಾರೆ ಗೋವಿಂದಸ್ವಾಮಿ.

‘ಪುಷ್ಪ ಕೃಷಿಯನ್ನು ದುರಾಸೆಯಿಂದ ಮಾಡುತ್ತಿಲ್ಲ. ನಮ್ಮದು ನಾಲ್ವರ ಕುಟುಂಬ. ಕಾಲು ಎಕರೆಯಲ್ಲಿ ಹೂವು ಕೃಷಿ ಮಾಡಿದರೆ ಸಾಕು. ಮಹಂತೇಶ, ಗೋವಿಂದಸ್ವಾಮಿ, ರಘು ಎಲ್ಲರೂ ಕಾಲು ಎಕರೆಯಲ್ಲಿ ಹೂವು ಬೆಳೆಯುತ್ತಿದ್ದಾರೆ. 10–12 ವರ್ಷಗಳಿಂದ ಪುಷ್ಪ ಕೃಷಿ ನಿರಂತರವಾಗಿ ಮಾಡುತ್ತಿದ್ದರೆ. ಇದೆಲ್ಲ ಅಪ್ಪಂದಿರು ಕಲಿಸಿಕೊಟ್ಟ ಪಾಠ’ ಎಂದು ನೆನಪಿಸಿಕೊಳ್ಳುತ್ತಾರೆ ಕಾಂತರಾಜು.

ಮಹಿಳೆಯರು, ಆಟೋದವರಿಗೂ ಉದ್ಯೋಗ
ಹುಣಸೆಕಟ್ಟೆ ಯುವಕರ ಪುಷ್ಪ ಕೃಷಿ ಕೇವಲ ರೈತರಿಗಷ್ಟೇ ಅಲ್ಲ, ಸುತ್ತಮುತ್ತಲ ಗ್ರಾಮದ ಮಹಿಳೆಯರಿಗೆ, ಕೂಲಿ ಕಾರ್ಮಿಕರಿಗೆ ಅಷ್ಟೇ ಏಕೆ, ಆಟೋ ಓಡಿಸುವವರಿಗೂ ಉದ್ಯೋಗ ನೀಡಿದೆ. ಹೂವು ಬಿಡಿಸಲು, ಅದನ್ನು ಮಾಲೆಯಾಗಿಸುವ ಕೆಲಸವನ್ನು ಮಾಡನಾಯಕನಹಳ್ಳಿ, ಗೋನೂರು ಸುತ್ತಲಿನ ಗ್ರಾಮದ ಮಹಿಳೆಯರಿಗೆ ವಹಿಸುತ್ತಾರೆ.

‘ಬೆಳಿಗ್ಗೆ 5 ಗಂಟೆಗೆ ಹೂವಿನ ಕೊಯ್ಲು ಶುರು. ಕೂಲಿ ಆಳು, ಮನೆ ಮಂದಿ ಎಲ್ಲ ಸೇರಿ ಹೂ ಬಿಡಿಸುತ್ತೇವೆ. ಒಬ್ಬೊಬ್ಬ ಕೂಲಿ ಆಳು 1 ಕೆ.ಜಿ ಹೂವು ಬಿಡಿಸಿದರೆ 100 ರೂ. ಅದನ್ನು ಕಟ್ಟಿದರೆ 100 ರೂ. ಸುತ್ತಮುತ್ತಲಿನ ಹಳ್ಳಿಯ ಮಹಿಳೆಯರನ್ನೇ ಬಳಸಿಕೊಂಡು ಉದ್ಯೋಗ ನೀಡುತ್ತೇವೆ. ಬೆಳಿಗ್ಗೆ ೭ ರಿಂದ ೧೧ ಗಂಟೆವರೆಗೆ ೧ ಕೆ.ಜಿ ಹೂವು ಕಟ್ಟುತ್ತಾರೆ’ ಎನ್ನುತ್ತಾರೆ ಕಾಂತರಾಜು.

ಕೊಯ್ಲಾದ ಹೂವನ್ನು ಹಳ್ಳಿಯಲ್ಲೇ ’ಮೌಲ್ಯವರ್ಧಿಸಿ’ ಮಾರುಕಟ್ಟೆಗೆ ತಲುಪಿಸುವುದರಿಂದ ಬೆಲೆಯೂ ಹೆಚ್ಚು, ಸ್ಥಳೀಯರಿಗೆ ಉದ್ಯೋಗವೂ ಲಭ್ಯ ಎನ್ನುವುದು ಹೂವು ಬೆಳೆಗಾರರ ತಂತ್ರಗಾರಿಕೆ. ಇದರಲ್ಲಿ ಅವರು ಯಶಸ್ವಿಯಾಗಿದ್ದಾರೆ. ಹಾಗಾಗಿ ನೂರಾರು ಮಹಿಳೆಯರಿಗೆ ಊರಿನಲ್ಲೇ ವರ್ಷ ಪೂರ್ತಿ ಉದ್ಯೋಗ. ಹೆಚ್ಚಾಗಿ ಭೂರಹಿತ ಪುರುಷರಿಗೆ ಹಾಗೂ ಮಹಿಳೆಯರಿಗೆ, ಈ ಪುಷ್ಪ ಕೃಷಿಯಿಂದ ಸಾಕಷ್ಟು ಉದ್ಯೋಗ.

ಮಾಲೆ ಕಟ್ಟಿದ ಹೂವನ್ನು ಹೊತ್ತೊಯ್ಯಲು ಊರಿನಲ್ಲಿ 11 ಲಗೇಜ್ ಆಟೋಗಳಿವೆ. ಊರಿನ ಯುವಕರೇ ಆಟೊದ ಮಾಲೀಕರು. ದಿನವೊಂದಕ್ಕೆ ಕನಿಷ್ಠ 300ಮಂದಿ ಮಾರುಕಟ್ಟೆಗೆ ಹೂವು ಕೊಂಡೊಯ್ಯುತ್ತಾರೆ. ಒಂದು ಸಾರಿ ದುರ್ಗದ ಮಾರುಕಟ್ಟೆಗೆ ಹೋಗಿ ಬರಲು ಒಬ್ಬೊಬ್ಬರಿಗೆ ೩೫ ರೂಪಾಯಿ ಖರ್ಚು. ಈ ಲೆಕ್ಕಾಚಾರದಲ್ಲಿ ದಿನಕ್ಕೆ 15 ಸಾವಿರ ರೂಪಾಯಿ ಬಸ್‌ಚಾರ್ಜ್. ಹೀಗಾಗಿ ಆಟೊದವರಿಗೆ ನಿತ್ಯ ಉದ್ಯೋಗ, ಆದಾಯ – ಲೆಕ್ಕಾಚಾರ ನೀಡುತ್ತಾರೆ ಕಾಂತರಾಜು.

ಬೇಡಿಕೆಯ ಗುಟ್ಟು
ಹುಣಸೆಕಟ್ಟೆಯ ಹೂವು ಬೆಳಗಾವಿ, ಮಂಗಳೂರು, ಉಡುಪಿ, ಬಿಜಾಪುರ, ತಮಿಳುನಾಡು, ಮಹಾರಾಷ್ಟ್ರ, ಮೈಸೂರು ಸೇರಿದಂತೆ ರಾಜ್ಯ- ಹೊರ ರಾಜ್ಯಗಳಲ್ಲಿ ಮಾರಾಟವಾಗುತ್ತದೆ. ಬೆಳಿಗ್ಗೆ ಕೊಯ್ಲಾದ ಹೂವು ಮಧ್ಯಾಹ್ನ 12ಗಂಟೆಯೊಳಗೆ ಮಾರ್ಕೆಟ್ ತಲುಪುತ್ತದೆ. ಈ ಊರಿನ ಹೂವಿಗೆ ತಾಳಿಕೆ ಗುಣ ಹೆಚ್ಚು. ಹಾಗಾಗಿ ಬೇಡಿಕೆಯೂ ಹೆಚ್ಚು. ಅನೇಕ ವ್ಯಾಪಾರಸ್ಥರು ಕೆಲವೊಮ್ಮೆ ಹುಣಸೆಕಟ್ಟೆಗೆ ಬಂದು ಹೂವು ಕೊಂಡೊಯ್ಯುತ್ತಾರೆ.

ಗುಣಮಟ್ಟ ಕಾಯ್ದುಕೊಳ್ಳಲು ಸಕಾಲಕ್ಕೆ ನೀರು ಪೂರೈಸಬೇಕು. ಇದಕ್ಕಾಗಿ ಕೊಳವೆಬಾವಿಗಳಿ ಮೊರೆ ಹೋಗಿದ್ದರು. ಒಂದೊಂದು ತೋಟದವರು 10ಕ್ಕೂ ಹೆಚ್ಚು ಕೊಳವೆ ಬಾವಿ ಕೊರೆಸಿದ್ದರು. ಸಾಕಷ್ಟು ಹಣ ಸುರಿದಿದ್ದರು. ಕಳೆದ ವರ್ಷ ಬರ ಬಂದಾಗ ಎಲ್ಲ ಕೊಳವೆ ಬಾವಿಗಳು ಬತ್ತಿ ಹೋಗಿದ್ದವು. ಇಡೀ ಹೂವಿನ ಬಯಲೇ ಬರಿದಾಗಿತ್ತು.

ಅಂಥ ಪರಿಸ್ಥಿತಿಯಲ್ಲಿ ಒಬ್ಬ ರೈತನಿಗೆ ಕೊಳವೆಬಾವಿಯಲ್ಲಿ ಎರಡು ಇಂಚು ನೀರು ಸಿಕ್ಕರೆ ನಾಲ್ಕು ರೈತರು ಹಂಚಿಕೊಳ್ಳುವ ಅಘೋಷಿತ ಸಹಕಾರ ಮನೋಭಾವವನ್ನು ಗ್ರಾಮದ ರೈತರು ರೂಢಿಸಿಕೊಂಡು ಹೂವಿನ ಕೃಷಿ ಉಳಿಸಿಕೊಂಡಿದ್ದರು. ಗುಣಮಟ್ಟದ ಹೂವಿಗಾಗಿ ಅವರು ಕೈಗೊಂಡ ನಿರ್ಧಾರಗಳು ನಿಜಕ್ಕೂ ಬೆರಗು ಮೂಡಿಸುವಂತಹವು.

ಊರೂ ಮಾದರಿ, ಯುವಕರೂ..
ಈ ಬಾರಿ ಮಳೆ ಚೆನ್ನಾಗಿದೆ. ಹುಣಸೆಕಟ್ಟೆ ಗ್ರಾಮದಲ್ಲಿ ಅಂತರ್ಜಲ ಹೆಚ್ಚಾಗಿ 7೦೦ ಅಡಿಗೆ ಇಳಿದಿದ್ದ ಕೊಳವೆಬಾವಿಗಳಲ್ಲಿ 2೦೦ ಅಡಿಗೆ ನೀರಿನ ಮಟ್ಟ ಏರಿದೆ. ಹುಣಸೆಕಟ್ಟೆಯಲ್ಲಿ ಮತ್ತೆ ಪುಷ್ಪೋದ್ಯಮ ಚುರುಕುಗೊಂಡಿದೆ. ಹೂವಿನ ಕೃಷಿ ಕೈಗೊಳ್ಳುವ ಯುವಕರ ಸಂಖ್ಯೆಯೂ ಹೆಚ್ಚಾಗಿದೆ. ಮತ್ತೆ ಸುತ್ತಲಿನ ಗ್ರಾಮದ ಕೂಲಿ ಕಾರ್ಮಿಕರು, ಹೂವು ಕಟ್ಟುವ ಮಹಿಳೆಯರು ಗ್ರಾಮದತ್ತ ಹೆಜ್ಜೆ ಹಾಕಿದ್ದಾರೆ. ಇಷ್ಟೆಲ್ಲ ಆದರೂ ಸರ್ಕಾರದ ಯಾವ ಇಲಾಖೆಗಳೂ ಈ ಊರಿನ ಬೆಳವಣಿಗೆಯತ್ತ ಮುಖ ಮಾಡದಿರುವುದು ವಿಪರ್ಯಾಸದ ಸಂಗತಿ.

ಕೃಷಿಯಲ್ಲಿ ಎಲ್ಲಿದೆ ಲಾಭ? ಎನ್ನುವ ಪ್ರಶ್ನೆಗೆ ಸಮಸ್ಯೆಗಳ ನಡುವೆ ಹುಣಕಟ್ಟೆಯಲ್ಲಿ ಜೀವಂತವಾಗಿರುವ ಯುವಕರ ಪುಷ್ಪೋದ್ಯಮ ಉತ್ತರ ನೀಡುತ್ತಿದೆ. ಹಳ್ಳಿಗಳಲ್ಲಿ ಯುವಕರಿಲ್ಲ, ಯುವಕರಿಗೆ ಲಾಭ ತರುವ ಉದ್ಯಮಿಗಳಿಲ್ಲ ಎಂದು ಸೋಗು ಹೇಳುವವರಿಗೆ ಇದೇ ಯುವಕರು ಉತ್ತರವಾಗುತ್ತಾರೆ.
ಸಂಪರ್ಕಕ್ಕೆ: ರಾಜು– 9632 651457

‘ಹೂವಲ್ಲಿ ಎತ್ತಿದ್ದನ್ನು ದಿನಸಿಗೆ ಕೊಡ್ತೀವಿ’
ಪುಷ್ಪಕೃಷಿಯಲ್ಲಿ ತೊಡಗಿರುವ ಹುಣಸೆಕಟ್ಟೆ ಯುವಕರಿಗೆ ತಮ್ಮ ಕಾಯಕದ ಬಗ್ಗೆ ಎಲ್ಲಿಲ್ಲದ ಪ್ರೀತಿ. ಇಂಥ ಕೃಷಿ ಸಂಕಷ್ಟದಲ್ಲಿದ್ದಾಗ ಅವರು ಸಂದರ್ಭವನ್ನು ಹೇಗೆ ಸ್ವೀಕರಿಸಿದರು. ಸಂಕಷ್ಟದಲ್ಲೂ ಊರು ಬಿಡದಿರಲು ಕಾರಣ ಏನು? ನಗರದ ಆಕರ್ಷಣೆಗೆ ಮಾರು ಹೋಗಲಿಲ್ಲವೇ ? ಎಂಬ ಪ್ರಶ್ನೆಗಳನ್ನಿಟ್ಟುಕೊಂಡು ಕೆಲವು ಯುವಕರ ಜೊತೆ ನಡೆಸಿದ ಸಂವಾದ ಇಲ್ಲಿದೆ.

* ಹೂವೇ ಏಕೆ ಬೆಳೆಯುತ್ತೀರಿ ?
೧೦ ವರ್ಷದಿಂದ ಬೆದ್ಲು ಜಮೀನಿನಲ್ಲಿ ರಾಗಿ, ಜೋಳ, ದಿನಿಸಿ ಏನೂ ಬೆಳೆದಿಲ್ಲ. ಕೊಳವೆ ಬಾವಿಯ ಆಶ್ರಯದಲ್ಲೇ ಜೀವನ ನಡೆಸೋದರಿಂದ ಹೂವು ಬೆಳೆಯುತ್ತೀವಿ. ಈ ಹೂವಿನ ಬೆಳೆ ಐತಲ್ಲಾ, ಒಂಥರಾ ಮನೆಗೆ ಕರಾವಿನ ಎಮ್ಮೆ ಇದ್ದ ಹಂಗೆ. ದಿನಾ ಹಾಲು ಕೊಡ್ತಾ, ದುಡ್ಡು ಕೊಡಿಸ್ತದೆ. ಹಾಗೆ ಈ ಹೂವು ಕೂಡಾ. ಏನೂ ಇಲ್ಲ ಎಂದರೆ ದಿನಕ್ಕೆ ೧೦೦ ರೂಪಾಯಿ ಜೇಬಿಗೆ ಇಳಿಸುತ್ತದೆ. ಇದು ದಿನಾ ದುಡ್ಡು ಕೊಡುವ ಉದ್ಯೋಗ.

* ಹಳ್ಳಿಯಲ್ಲೇ ಉಳಿಯಬೇಕೆನ್ನುವ ನಿಮ್ಮ ಛಲದ ಹಿಂದಿನ ಗುಟ್ಟು ?
ಮುಂಜಾನೆಯಿಂದ ರಾತ್ರಿವರೆಗೆ ಕೆಲಸಕೊಟ್ಟು, ಕೈತುಂಬಾ ಹಣಕೊಡುವ ಉದ್ಯೋಗ ನಮ್ಮೂರಿನಲ್ಲಿದೆ. ಕಾಲು, ಮುಕ್ಕಾಲು, ಒಂದು ಎಕರೆ ಪುಷ್ಪ ಕೃಷಿಯಲ್ಲಿ ಮೂರ್ನಾಲ್ಕು ಲಕ್ಷ ಸಂಪಾದನೆಯಿದೆ. ಹತ್ತಾರು ಮಂದಿಗೆ ಹಳ್ಳಿಯಲ್ಲೇ ಉದ್ಯೋಗ ಕೊಡ್ತೀವಿ. ಇದಕ್ಕಿಂತ ಉತ್ತಮ ಜೀವನ ನಗರದಲ್ಲಿಲ್ಲ. ಅಷ್ಟೆಲ್ಲ ಯಾಕ್ ಸ್ವಾಮಿ, ಚಿತ್ರದುರ್ಗದಾಗೆ, ಸುಮ್ಮನೆ ಸುತ್ತಾಡೋಕೂ ನಮಗೆ ಪುರುಸೊತ್ತಿಲ್ಲ.

* ಎಲ್ಲ ಜಮೀನಲ್ಲೂ ಹೂವನ್ನೇ ಬೆಳೆದರೆ, ಹೊಟ್ಟೆಗೆ ಏನ್ ಮಾಡ್ತೀರಿ ?
ರಾಗಿ, ಜೋಳ ಬೆಳೆದರೆ ಮಾರ್ಕೆಟ್ ಕಷ್ಟ. ಅದಕ್ಕೆ ಹತ್ತು ಎಕರೆ ಭೂಮಿಯಲ್ಲಿ ಒಂದು ಎಕರೆ ಹೂವಿಗೆ ಮೀಸಲು. ಇನ್ನು ಉಳಿದಿದ್ದರಲ್ಲಿ ರಾಗಿ, ಜೋಳ, ತೊಗರಿ ಹಾಕ್ತೀವಿ. ಅವುಗಳಿಗೆ ಬೋರ್‌ವೆಲ್ ನೀರು ಕೊಟ್ಟು ಪೂರೈಸೋದಕ್ಕೆ ಆಗುತ್ತಾ. ಮಳೆ ನಂಬಿಕೊಂಡು ಬರುವ ಬೆಳೆ ಅವು. ಬಂದ್ರೆ ಬಂದ್ವು. ಇಲ್ಲದಿದ್ದರೆ ಇಲ್ಲ. ಅದಕ್ಕೆ ಹೂವಲ್ಲಿ ಎತ್ತಿದ ದುಡ್ಡಿನಲ್ಲಿ, ದಿನಸಿ ಕೊಳ್ತೀವಿ, ಅಷ್ಟೆ.

* ನೀವೇನೋ ಕೃಷಿ ಮಾಡ್ತೀರಿ, ನಿಮ್ಮೂರಿಗೆ ಸೊಸೆಯಾಗಿ ಬಂದವರು…?
ಅವ್ರೂ ದುಡಿತಾರೆ. ನೋಡಿ. ನನ್ನಾಕೆ ಬಿಎ ಓದಿದ್ದಾರೆ. ನಮ್ಮ ಸಮಕ್ಕೆ ಗದ್ದೆಯಲ್ಲಿ ಕೆಲಸ ಮಾಡ್ತಾರೆ. ಕಳೆ ತೆಗೀತಾರೆ. ಹೂವು ಬಿಡಿಸ್ತಾರೆ. ಕಟ್ಟುತ್ತಾರೆ. ಕೆಲಸ, ಓದು, ವಿದ್ಯೆ ಇವೆಲ್ಲ ಹಣಕ್ಕಾಗಿ ಅಲ್ಲವೇ ?

* ಮಾರ್ಕೆಟ್ ಪರ್ವಾಗಿಲ್ಲಾ ಅನ್ನಿಸುತ್ತದೆಯೇ ?
ಅದೇ ನಮಗೆ ಕಿರಿಕಿರಿ. ಮಾರ್ಕೆಟ್‌ಗೆ ಹೂವು ಕಳಿಸಿಬಿಡ್ತೇವೆ. ಅಲ್ಲಿ ದಲ್ಲಾಳಿಗಳು ಮೂವತ್ತು ಮಾರು ಅಳೆಯುವವರು, ಇಪ್ಪತ್ತಕ್ಕೆ ಇಳಿಸ್ತಾರೆ. ಜಗಳ ಮಾಡದೇ ಇದ್ದರೆ ಲಾಸ್ ಆಗುತ್ತದೆ. ಆದರೂ ನಮ್ಮ ಕೆಲವು ರೈತರು ಅವರ ಬಳಿ ಔಷಧ, ಗೊಬ್ಬರಕ್ಕಾಗಿ ಸಾಲ ಮಾಡಿರ್ತಾರೆ. ಅಂಥವರನ್ನೇ ಜಗಳ ಮಾಡುವವರ ವಿರುದ್ಧ ಎತ್ತಿ ಕಟ್ತಾರೆ. ಅಂಥ ಸಮಸ್ಯೆ ನಡುವೆಯೂ ಹೋರಾಟ ಮಾಡ್ತಿದ್ದೇವೆ.

(ಪ್ರಶ್ನೋತ್ತರದಲ್ಲಿ ಪಾಲ್ಗೊಂಡಿದ್ದವರು ಕಾಂತರಾಜು, ತಿಪ್ಪೇಸ್ವಾಮಿ, ಮಹಂತೇಶ್, ಗೋವಿಂದಸ್ವಾಮಿ

ಸಿರಿಧಾನ್ಯಗಳೆಂಬ ಪರಿಪೂರ್ಣ ಆಹಾರ

ಸಿರಿಧಾನ್ಯಗಳ ಪರಿಪೂರ್ಣ ಊಟ

‘ನಾವೆಲ್ಲ  ಬಾಣಂತನದಾಗ ನವಣಕ್ಕಿ, ಸಾವಕ್ಕಿ ಅನ್ನ-ರೊಟ್ಟಿ ಉಂಡು; ಮೂಲಂಗಿ, ಹಕ್ಕರಿಕಿ ಸೊಪ್ಪು ತಿಂತಿದ್ವಿ. ನನ್ನ ಗಂಡ ನವಣಕ್ಕಿ ಕುಟ್ಟೋನು. ನಾನು ಹಸನು ಮಾಡೋಳು. ಮುಂಜಾನೆ ಉಂಡ್ರೆ ಸಂಜಿಮಟ ಹಸಿವಾಗ್ತಿರಲಿಲ್ಲ. ಈಗಿನೋರು ನೆಲ್ಲಕ್ಕಿ ಉಣ್ತಾರ. ಅದನ್ನು ದಿವಸಕ್ಕೆ ಮೂರು ಸಾರಿ ಉಂಡ್ರೂ ಹಸಿವು ತಡೆಯಾಕಿಲ್ರಿ’

ಹಾವೇರಿ ಜ್ಲಿಲೆಯ ರಾಣೆಬೆನ್ನೂರು ತ್ಲಾಲೂಕಿನ ಕಾಕೋಳದ ಹೇಮವ್ವ ಲಮಾಣಿ ಬಾಣಂತನದ ಊಟದ್ಲಲಿ ಸಾವೆ, ನವಣಕ್ಕಿ ಬಳಕೆ, ಅದರೊಳಗಿನ ಪೌಷ್ಟಿಕತೆಯನ್ನು ಸೊಗಸಾಗಿ ಬಿಚ್ಚಿಡುತ್ತಾರೆ. ಹೇಮವ್ವ ಅಷ್ಟೇ ಅಲ, ಉತ್ತರ ಕರ್ನಾಟಕದ ಬಹುಪಾಲು ಹಳ್ಳಿಗರು ಸಿರಿಧಾನ್ಯಗಳ ಕುರಿತು ಇಂಥ್ದದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ನವಣೆ, ಸಾಮೆ, ಸಜ್ಜೆ, ಆರಕ, ರಾಗಿಯಂತಹ ಸಿರಿಧಾನ್ಯ(ಕಿರುಧಾನ್ಯ)ಗಳ ಅಡುಗೆಗಳೆಂದರೆ ಹಾಗೆ. ರುಚಿ ಹೆಚ್ಚು, ಪೌಷ್ಟಿಕಾಂಶದ್ಲಲೂ ತುಸು ಮುಂದು. ಈ ಧಾನ್ಯಗಳ ಒಂದು ಉಂಡೆ, ಅರ್ಧ ರೊಟ್ಟಿ, ಅರ್ಧ ಲೋಟ ಪಾಯಸ ದೀರ್ಘಕಾಲ ಹಸಿವನ್ನು ಮುಂದೂಡುತ್ತವೆ. ಹೊಟ್ಟೆಗೆ ತಂಪು ನೀಡಿ, ದೇಹಕ್ಕೆ ಶಕ್ತಿ ತುಂಬುತ್ತವೆ. ಅದಕ್ಕಾಗಿಯೇ ಹಿರಿಯರು ಈ ಖಾದ್ಯಗಳನ್ನು ಸೇವಿಸಿದರೆ ‘ಜೀವಕ್ಕೆ ತಂಪು, ಜುಟ್ಟಿಗೆ ಭದ್ರ’ ಎನ್ನುತ್ತಾರೆ.

ಬರಗಾಲ ಎದರಿಸುತ್ತಾ ಅರಳುವ ಪ್ರತಿ ಕಿರುಧಾನ್ಯದ ಒಡಲ್ಲಲಿ ಭರಪೂರ ಪೋಷಕಾಂಶಗಳಿವೆ. ಆಹಾರ ತಜ್ಞರ ಪ್ರಕಾರ ಕಿರುಧಾನ್ಯಗಳು, ಅಕ್ಕಿ ಮತ್ತು ಗೋಧಿಗಿಂತ ಐದು ಪಟ್ಟು ಹೆಚ್ಚಿನ ಪ್ರಮಾಣದ್ಲಲಿ ಪ್ರೊಟೀನ್, ವಿಟಮಿನ್ ಹಾಗೂ ಖನಿಜಗಳನ್ನು ಹೊಂದಿವೆ. ಹಾಗಾಗಿ ಈ ಧಾನ್ಯಗಳು ಆಹಾರವಷ್ಟೇ ಅಲ. ಔಷಧವೂ ಹೌದು.

ಮಿಲ್ಲೆಟ್ಸ್ ಗೆ ಹೊಸ ಪೋಷಾಕು

ಸಿರಿಧಾನ್ಯಗಳಲ್ಲಿ ರೋಗಗಳನ್ನು ನಿಯಂತ್ರಿಸುವ ಫಿನೋಲಿಕ್ ಆಸಿಡ್, ಫ್ಲೆವನೋಯ್ಡ್ಸ್ ಹಾಗೂ ಫೈಟೊ ಆಲೆಕ್ಸಿನ್‌ನಂಥ ಫೈಟೊನ್ಯೂಟ್ರಿಯಂಟ್ಸ್‌ಗಳಿವೆ. ಅವು ಶಕ್ತಿಶಾಲಿ ಆಂಟಿ ಆಕ್ಸಿಡೆಂಟ್‌ಗಳು. ಸಿರಿಧಾನ್ಯಗಳು ಕೇವಲ ಕಾರ್ಬೊಹೈಡ್ರೇಟ್ ಮಾತ್ರವ್ಲಲ; ಉತ್ತಮ ಗುಣಮಟ್ಟದ ಕೊಬ್ಬನ್ನೂ ಪೂರೈಸುತ್ತವೆ. ‘ಉದಾಹರಣೆಗೆ ಸಜ್ಜೆಯ್ಲಲಿರುವ ೫.೩ ಕೊಬ್ಬಿನ್ಲಲಿ ಶೇ ೨.೮ರಷ್ಟು ಒಮೆಗಾ-೩ ಕೊಬ್ಬಿನಾಮ್ಲ(ಫ್ಯಾಟಿ ಆಸಿಡ್)’ ಇರುತ್ತದೆ ಎನ್ನುತ್ತಾರೆ ಆಹಾರ ತಜ್ಞ ಕೆ.ಸಿ.ರಘು.

ಸಿರಿಧಾನ್ಯಗಳ ಕಾರ್ಯ ವೈಖರಿ: ಸಿರಿಧಾನ್ಯಗಳ ಆಹಾರ ಸೇವಿಸಿದ ನಂತರ ನಿಧಾನವಾಗಿ ಜೀರ್ಣವಾಗುತ್ತಾ, ದೇಹಕ್ಕೆ ಶಕ್ತಿಯನ್ನು ಪೂರೈಸುತ್ತವೆ. ನೋಡಿ, ನಮ್ಮ ದೇಹಕ್ಕೆ ಶಕ್ತಿ ಸರಬರಾಜಾಗುವುದು – ಕಾರ್ಬೊಹೈಡ್ರೇಟ್ಸ್ + ಪ್ರೋಟಿನ್ಸ್ + ಖನಿಜಾಂಶಗಳಿಂದ. ಅದರ‍್ಲಲೂ ಕಾರ್ಬೊಹೈಡ್ರೇಟ್‌ಗಳಿಂದ ಹೆಚ್ಚು ಶಕ್ತಿ (ಶೇ ೬೦-೯೦ರಷ್ಟು) ಪೂರೈಕೆಯಾಗುತ್ತದೆ. ಇವುಗಳ್ಲಲಿ ಪಿಷ್ಠದ(ಸ್ಟಾರ್ಚ್) ಅಂಶ ಅಧಿಕವಾಗಿರುತ್ತದೆ. ಈ ಪಿಷ್ಠದ್ಲಲಿ ಅಮಿಲೊ ಪೆಕ್ಟಿನ್ ಮತ್ತು ಅಮಿಲೋಸ್ ಎಂಬ ಎರಡು ರಾಸಾಯನಿಕಗಳಿರುತ್ತವೆ. ಅಮಿಲೋಸ್ – ರಕ್ತಕ್ಕೆ ನಿಧಾನವಾಗಿ ಸಕ್ಕರೆಯನ್ನು ಪೂರೈಸುತ್ತದೆ. ಸಿರಿಧಾನ್ಯಗಳ್ಲಲಿ ಅಮಿಲೋಸ್ ಪ್ರಮಾಣ ಹೆಚ್ಚಿರುವುದರಿಂದ ಆಹಾರ ಪಚನವಾಗಿ, ಶಕ್ತಿಯಾಗಿ ಪರಿವರ್ತನೆಯಾಗುವವರೆಗೂ ರಕ್ತಕ್ಕೆ ಸೇರುವ ಸಕ್ಕರೆ ಪ್ರವಾಹವನ್ನು ನಿಯಂತ್ರಿಸುತ್ತದೆ.

ಪ್ರಸ್ತುತ ನಾವು ಸೇವಿಸುತ್ತಿರುವ ಪಾಲಿಷ್ ಮಾಡಿದ ಗೋಧಿ, ಅಕ್ಕಿಯಂತಹ ಆಹಾರದ್ಲಲಿ ಪೆಕ್ಟಿನ್ ಅಂಶ ಹೆಚ್ಚು, ಅಮಿಲೋಸ್ ಕಡಿಮೆ. ಪರಿಣಾಮ ಸೇವಿಸಿದ ಆಹಾರ ಶೀಘ್ರ ಕೊಬ್ಬಾಗಿ ಪರಿವರ್ತನೆಗೊಳ್ಳುತ್ತದೆ. ಆಹಾರದ್ಲಲಿರುವ ಸಕ್ಕರೆ ಪ್ರಮಾಣ ವೇಗವಾಗಿ ಹಾಗೂ ನೇರವಾಗಿ ರಕ್ತ ಸೇರುತ್ತದೆ. ರಕ್ತದ್ಲಲಿ ಸಕ್ಕರೆ ಹೆಚ್ಚಾಗಿ ಮಧುಮೇಹ ರೋಗ ಉಲ್ಬಣಕ್ಕೆ ಕಾರಣವಾಗುತ್ತದೆ. ಕೊಬ್ಬು ಹೆಚ್ಚಾಗಿ ‘ರಕ್ತದ ಒತ್ತಡ’ಕ್ಕೆ ಕಾರಣವಾಗುತ್ತದೆ’- ಎಂದು ರಘು ವಿವರಿಸುತ್ತಾರೆ. ‘ಇದೇ ಕಾರಣಗಳಿಂದಲೇ ಹಿಂದಿನ ಕಾಲದ್ಲಲಿ ನವಣೆ, ಸಾಮೆ, ಸಜ್ಜೆಯಂತಹ ಸಿರಿಧಾನ್ಯಗಳ ಆಹಾರ ಉಂಡು ಬೆಳೆದವರಿಗೆ ಮಧುಮೇಹ, ರಕ್ತದೊತ್ತಡದಂತಹ ಖಾಯಿಲೆಗಳು ಸೋಕುತ್ತಿರಲ್ಲಿಲ. ಮಾತ್ರವ್ಲಲ, ದೀರ್ಘಾಯುಷಿಗಳಾಗಿರುತ್ತ್ದಿದರು’ ಎನ್ನುವುದು ಅವರ ಅಭಿಪ್ರಾಯ.

ಪೌಷ್ಟಿಕಾಂಶ ಪರೀಕ್ಷೆ, ಫಲಿತಾಂಶ :

‘ಸಿರಿಧಾನ್ಯಗಳ್ಲಲಿ ಇಷ್ಟ್ಲೆಲ ಪೋಷಕಾಂಶಗಳು, ಪ್ರೋಟಿನ್, ವಿಟಮಿನ್ ಇರುತ್ತವೆ ಎಂದು ಹೇಗೆ ನಂಬುವುದು’- ಇದು ಇವತ್ತಿನ ಬ್ದುದಿವಂತ ನಾಗರಿಕ ಸಮಾಜ ಕೇಳುವ ಪ್ರಶ್ನೆ. ಇಂಥ ಪ್ರಶ್ನೆಗಳನ್ನಿಟ್ಟುಕೊಂಡೇ ಬೆಂಗಳೂರಿನ ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗ, ಪ್ರಿಸ್ಟೀನ್ ಆರ್ಗಾನಿಕ್ಸ್ ಮತ್ತು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಗೃಹ ವಿಜ್ಞಾನ ವಿಭಾಗದವರು ಮೊಟ್ಟ ಮೊದಲ ಬಾರಿಗೆ ಸಿರಿಧಾನ್ಯಗಳನ್ನು ಪರೀಕ್ಷೆಗೆ ಒಳಪಡಿಸಿ ಅವುಗಳ್ಲಲಿರುವ ಪೌಷ್ಟಿಕಾಂಶ, ನಾರು ಮತ್ತು ಕಬ್ಬಿಣದ ಅಂಶಗಳನ್ನು ದಾಖಲಿಸ್ದಿದಾರೆ.

ಆ ಪ್ರಕಾರ ನವಣೆ, ಸಾಮೆ, ಹಾರಕ ಮತ್ತು ರಾಗಿಯ್ಲಲಿ ಡಯಟರಿ ಫೈಬರ್‌ಗಳು (ನಾರಿನಂಶ) ಹೆಚ್ಚಾಗಿರುವುದನ್ನು ಗುರುತಿಸಲಾಗಿದೆ. ಈ ಧಾನ್ಯಗಳ ಖಾದ್ಯಗಳು ಸಕ್ಕರೆಯನ್ನು ನಿಧಾನವಾಗಿ ಹೀರಿಕೊಂಡು, ರಕ್ತದ್ಲಲಿ ಕರಾರುವಕ್ಕಾಗಿ ಬಿಡುಗಡೆ ಮಾಡುತ್ತವೆ. ಇದರಿಂದ ಪಚನಕ್ರಿಯೆ ನಿಧಾನವಾಗಿ, ದೇಹಕ್ಕೆ ಶಕ್ತಿ ಸರಬರಾಜಾ ಗುತ್ತದೆ. ಅದೇ ರೀತಿ ಪೌಷ್ಟಿಕಾಂಶಗಳಂತೆ ಸಿರಿಧಾನ್ಯಗಳ್ಲಲಿರುವ ಖನಿಜಾಂಶಗಳು ಕೂಡ ಗಮನಾರ್ಹವಾಗಿವೆ. ೧೦೦ ಗ್ರಾಂ ಸಜ್ಜೆಯ್ಲಲಿ ೮ ಮಿ.ಗ್ರಾಂ ಕಬ್ಬಿಣದ ಅಂಶವಿದೆ. ಅಕ್ಕಿಯ್ಲಲಿ ಕೇವಲ ೦.೭ ಮಿ.ಗ್ರಾಂ ಅಂಶವಿದೆ. ಹಾಗಾಗಿ ಸಜ್ಜೆರೊಟ್ಟಿ ತಿನ್ನುವುದರಿಂದ ಕಬ್ಬಿಣಾಂಶ ದೇಹಕ್ಕೆ ಪೂರೈಕೆಯಾಗುತ್ತದೆ.

‘ಕ್ಯಾಲ್ಸಿಯಂ ಕೊರತೆ’ ಎಂದ ಕೂಡಲೇ ವೈದ್ಯರು ಮಾತ್ರೆಗಳನ್ನು ಬರೆಯುತ್ತಾರೆ. ಗರ್ಭಿಣಿಯರಲ್ಲಂತೂ ಈ ಮಾತ್ರೆ ಸೇವನೆ ಪ್ರಮಾಣ ಹೆಚ್ಚು. ‘ಕ್ಯಾಲ್ಸಿಯಂ ಕೊರತೆಯಿರುವ ನನ್ನ ಪೇಷೆಂಟ್‌ಗಳಿಗೆ ರಾಗಿ ಆಹಾರವನ್ನೇ ಸೂಚಿಸುತ್ತೇನೆ. ಮಧುಮೇಹಿಗಳಿಗೆ ಅನ್ನದ ಬದಲಿಗೆ ನವಣೆ ಪದಾರ್ಥಗಳನ್ನು ಸೂಚಿಸುತ್ತೇನೆ. ಬಾಲ್ಯದಿಂದಲೇ ನವಣೆ, ಸಾಮೆ, ರಾಗಿ ಬಳಸುವ ಅಭ್ಯಾಸ ರೂಢಿಸಿಕೊಂಡರೆ ರೋಗಗಳಿಂದ ದೂರವಿರಬಹುದು’ ಎನ್ನುತ್ತಾರೆ ಆಯುರ್ವೇದ ವೈದ್ಯೆ ಡಾ.ವಸುಂಧರಾ ಭೂಪತಿ.

ಮೈಸೂರಿನ ಸಿರಿಧಾನ್ಯ ಮೇಳದಲ್ಲಿ ಸಜ್ಜೆ, ಸಾಮೆ, ನವಣೆ ತಿನಿಸುಗಳಿಗೆ ಮುಗಿದ್ದ ಬಿದ್ದ ಜನ

ಹೀಗೆ ಆಹಾರ – ಔಷಧ ಎರಡನ್ನೂ ಒಳಗೊಂಡ ಸಿರಿಧಾನ್ಯಗಳು ನಮ್ಮ ದಿನಿಸಿ ಪಟ್ಟಿಯಿಂದ ನಾಪತ್ತೆಯಾಗಿವೆ. ಸಂಸ್ಕರಣೆ ಸಮಸ್ಯೆಯಿಂದಾಗಿ ರೈತರ ಹೊಲಗಳಿಂದಲೂ ಕಾಣೆಯಾಗುತ್ತಿವೆ. ಈ ಧಾನ್ಯಗಳ ಸಂರಕ್ಷಣೆಗಾಗಿ ಹೈದರಾಬಾದ್‌ನ ಡೆಕ್ಕನ್ ಡೆವಲಪ್‌ಮೆಂಟ್ ಸೊಸೈಟಿ(ಡಿಡಿಎಸ್) ದಶಕಗಳಿಂದ ಶ್ರಮಿಸುತ್ತಿದೆ. ಮಿಲೆಟ್ ನೆಟ್‌ವರ್ಕ್ ಆಫ್ ಇಂಡಿಯಾ ಎಂಬ ಜಾಲದೊಂದಿಗೆ ವಿವಿಧ ಸಂಸ್ಥೆಗಳೊಡನೆ ಜನರ‍್ಲಲಿ ಜಾಗೃತಿ ಮೂಡಿಸುತ್ತಿದೆ. ಹವಾಮಾನ ವೈಪರೀತ್ಯ, ಆಹಾರ ಸುರಕ್ಷತೆಗೆ ನೆರವಾಗುವ ಈ ಧಾನ್ಯಗಳನ್ನು ‘ಸಾರ್ವಜನಿಕ ಪಡಿತರ ವ್ಯವಸ್ಥೆ’ಯ್ಲಲಿ ಸೇರಿಸಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಬಿಸಿಯೂಟ, ಅಂಗನವಾಡಿ ಯೋಜನೆಯ್ಲಲಿ ಈ ಧಾನ್ಯಗಳನ್ನು ಬಳಸುವುದರಿಂದ ಮಕ್ಕಳ್ಲಲಿನ ಅಪೌಷ್ಠಿಕತೆಗೆ ಪರಿಹಾರ ದೊರೆತಂತಾಗುತ್ತದೆ. ಈ ಯೋಜನೆಗಳಿಗಾಗಿ ಸ್ಥಳೀಯ ರೈತರಿಂದ ಧಾನ್ಯ ಖರೀದಿಸಿದರೆ ಉತ್ತಮ ಮಾರುಕಟ್ಟೆ ಲಭ್ಯವಾಗುತ್ತದೆ ಎನ್ನುವುದು ಡಿಡಿಎಸ್‌ನ ಮುಖ್ಯಸ್ಥ ಪಿ.ವಿ.ಸತೀಶ್ ಅವರ ಅಭಿಪ್ರಾಯ. ಸಿರಿಧಾನ್ಯಗಳ ಪೌಷ್ಟಿಕಾಂಶ ಕುರಿತು ಹೆಚ್ಚಿನ ಮಾಹಿತಿಗೆ ಆಹಾರ ತಜ್ಞ ಕೆ.ಸಿ.ರಘು ಅವರ ದೂರವಾಣಿ ಸಂಖ್ಯೆ: ೯೯೮೦೦೦೯೧೪೦.

ವಿಶಾಖಪಟ್ಟಣದ ಸಬ್‌ಮೆರೀನ್ ಮ್ಯೂಸಿಯಂ

ಕುರ್ಸುರಾ ಸಬ್ ಮೆರೀನ್ ಮ್ಯೂಸಿಯಂ ಹೊರ ದೃಶ್ಯ

ವಿಶಾಖಪಟ್ಟಣದ ರಾಮಕೃಷ್ಣ ಬೀಚ್ ದಂಡೆಯ ಮೇಲೆ ಜಲಾಂತರ್ಗಾಮಿಯೊಂದು ಲಂಗರು ಹಾಕಿದೆ. ಮೂರು ದಶಕಗಳ ಬಿಡುವಿಲ್ಲದ ದುಡಿಮೆಯ ನಂತರ ಸುದೀರ್ಘ ವಿಶ್ರಾಂತಿಯಲ್ಲಿದೆ.

ವಿಶ್ರಾಂತಿಯಲ್ಲಿದ್ದರೂ ಅದು ಸುಮ್ಮನಿಲ್ಲ. ತನ್ನನ್ನು ನೋಡಲು ಬರುವವರಿಗೆ `ತಾನು ಯುದ್ಧದಲ್ಲಿ ಎಷ್ಟೆಲ್ಲ ಕೆಲಸ ಮಾಡಿದ್ದೇನೆ. ನೌಕಾಪಡೆಯಲ್ಲಿ ನನ್ನ ಪಾತ್ರವೇನಿತ್ತು, ತನ್ನ ಅಂಗಾಂಗಗಳ ಶಕ್ತಿ-ಸಾಮರ್ಥ್ಯ…`- ಹೀಗೆ ತನ್ನನ್ನು ತಾನು ಸಂಪೂರ್ಣವಾಗಿ ಪರಿಚಯಿಸಿಕೊಳ್ಳುತ್ತಿದೆ.

ಹೀಗೆ ಸ್ವಪರಿಚಯ ಮಾಡಿಕೊಳ್ಳುತ್ತಿರುವ ಜಲಾಂತರ್ಗಾಮಿಯ ಹೆಸರು `ಐಎನ್‌ಎಸ್ ಕುರ‌್ಸುರಾ – ಎಸ್ 20`. ಭಾರತೀಯ ನೌಕಾಪಡೆಯಲ್ಲಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದ ಈ ಜಲಾಂತರ್ಗಾಮಿಯನ್ನು ಮಾಹಿತಿ ಪ್ರಸರಣದ ಉದ್ದೇಶದಿಂದ ನೌಕಾಪಡೆ ವಿಭಾಗದವರು `ಮ್ಯೂಸಿಯಂ` ಆಗಿ ಪರಿವರ್ತಿಸಿದ್ದಾರೆ.

ಶಸ್ತ್ರಸ್ತ್ರಗಳನ್ನು ಜೋಡಿಸಿರುವ ಮೊದಲ ಕೊಠಡಿ

ರಷ್ಯ ನಿರ್ಮಿತ ಜಲಾಂತರ್ಗಾಮಿ
ಡಿಸೆಂಬರ್ 18, 1969ರಲ್ಲಿ ರಷ್ಯದಲ್ಲಿ ನಿರ್ಮಾಣಗೊಂಡ ಜಲಾಂತರ್ಗಾಮಿ. ಆ ದೇಶದ ಫಾಕ್ಸ್‌ಟ್ರೋಟ್ ಕ್ಲಾಸ್ ಜಲಾಂತರ್ಗಾಮಿಗಳಲ್ಲಿ ಇದೂ ಒಂದು. 1970ರಲ್ಲಿ ಭಾರತದ ನೌಕಾದಳದವರು ಖರೀದಿಸಿದರು. ಈ ನೌಕಾಸ್ತ್ರ ವಿಶಾಖಪಟ್ಟಣ ಬಂದರು ಸೇರಿದ್ದು ಮೇ 11, 1970ರಲ್ಲಿ. `ಐಎನ್‌ಎಸ್ ಕುರ‌್ಸುರಾ` ಎಂಬ ಹೆಸರಿನೊಂದಿಗೆ ಭಾರತೀಯ ನೌಕಾಪಡೆಯ ಸದಸ್ಯತ್ವ ಪಡೆಯಿತು.

ಫೆಬ್ರುವರಿ 27, 2001 ಕುರ‌್ಸುರಾ ಯುದ್ಧನೌಕೆ `ಸೇವೆ`ಯಿಂದ ನಿವೃತ್ತಿಯಾಗಿದ್ದು, ಆ ಸಮಯದಲ್ಲಿ ರಾಷ್ಟ್ರೀಯ ಹಡಗು ವಿನ್ಯಾಸ ಮತ್ತು ಸಂಶೋಧನಾ ಕೇಂದ್ರ, ಒಎನ್‌ಜಿಸಿ, ವಿಶಾಖಪಟ್ಟಣ ಬಂದರು ಟ್ರಸ್ಟ್ ಮತ್ತು ಇತರೆ ನೌಕಾಪಡೆಯ ಸಂಘಟನೆಗಳು ನೀರೊಳಗಿದ್ದ ಯುದ್ಧನೌಕೆಯನ್ನು ಮರಳಿನ ಮೇಲಕ್ಕೆ ಕರೆತಂದವು.

ತಾಂತ್ರಿಕ ನೆರವು ನೀಡಿ ಮ್ಯೂಸಿಯಂ ಆಗಿ ಪರಿವರ್ತಿಸಿದವು. ಇದಕ್ಕಾಗಿ ಆಂಧ್ರಪ್ರದೇಶ ಸರ್ಕಾರ ಆರು ಕೋಟಿ ರೂಪಾಯಿ ವೆಚ್ಚ ಮಾಡಿತು. ಆಗಸ್ಟ್ 9, 2002ರಂದು ಅಂದಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು `ಜಲಾಂತರ್ಗಾಮಿ ಮ್ಯೂಸಿಯಂ`ಅನ್ನು ದೇಶಕ್ಕೆ ಸಮರ್ಪಿಸಿದರು.

`ವೃತ್ತಿ`ಯಲ್ಲಿದ್ದಾಗ ಯಂತ್ರ ಹೇಗಿತ್ತೋ ಅದೇ ಸ್ಥಿತಿಯಲ್ಲೇ ಮ್ಯೂಸಿಯಂ ಮಾಡಲಾಗಿದೆ. ಹಾಗಾಗಿ ಜಲಾಂತರ್ಗಾಮಿ ಒಳಭಾಗದಲ್ಲಿ 40-50ರ ದಶಕದ ಯಾಂತ್ರಿಕ ವಸ್ತುಗಳಿವೆ. ಇದು ವಿಶ್ವದಲ್ಲೇ ಎರಡನೆಯ `ಸಬ್ ಮೆರೀನ್ ಮ್ಯೂಸಿಯಂ`. ಏಷ್ಯಾ ಖಂಡದ್ಲ್ಲಲಿ ಮೊದಲನೆಯದು!

ಯಂತ್ರಗಳ ಪ್ರಪಂಚ ಜಲಾಂತರ್ಗಾಮಿಯ ಒಳಗಡೆ ಬೃಹತ್ ಯಂತ್ರಗಳದ್ದೇ ಒಂದು ಪ್ರಪಂಚ. ಒಂದೆಡೆ ಎದುರಾಳಿಗಳನ್ನು ಉಡಾಯಿಸಲು ಸಜ್ಜಾಗಿರುವ ಮಿಸೈಲ್‌ಗಳು. ಇನ್ನೊಂದೆಡೆ ಅವುಗಳನ್ನು ನಿಯಂತ್ರಿಸುವ ತಿರುಗಣೆಗಳು. ಓಣಿಯಂತಿರುವ ಸರಣಿ ಕೊಠಡಿಗಳು. ಇವೆಲ್ಲವನ್ನೂ ಒಂದಾದ ಮೇಲೊಂದರಂತೆ ದಾಟುತ್ತಾ ಹೊರಟರೆ, ಹೊಸ ಯಾಂತ್ರಿಕ ಜಗತ್ತೇ ಕಣ್ಣಮುಂದೆ ತೆರೆದುಕೊಳ್ಳುತ್ತದೆ.

ತಿಮಿಂಗಲಾಕಾರದಲ್ಲಿರುವ ಈ ಜಲಾಂತರ್ಗಾಮಿ 91.3 ಮೀಟರ್ ಉದ್ದ, 7.5 ಮೀಟರ್ ಅಗಲ, 1952 ಟನ್ ತೂಕವಿದೆ. `ಇದು ಮೇಲ್ಭಾಗದಲ್ಲಿ ಕಾಣುವ ಜಲಾಂತರ್ಗಾಮಿಯ ಅಳತೆ. ಇದಕ್ಕೂ ಹೆಚ್ಚು ಉದ್ದ- ಗಾತ್ರ- ಅಗಲದಷ್ಟು ಭಾಗ ಭೂಮಿಯ ಆಳದಲ್ಲಿದೆ` ಎನ್ನುತ್ತಾರೆ ಗೈಡ್ ರಘು. ಇದರ ಒಟ್ಟು ತೂಕ 2475 ಟನ್. ಕಾರ್ಯ ನಿರ್ವಹಿಸುತ್ತಿದ್ದಾಗ 985 ಮೀಟರ್ ಸಮುದ್ರದ ಆಳದವರೆಗೂ ಈ ಅಂತರ್ಗಾಮಿ ಚಲಿಸುವ ಸಾಮರ್ಥ್ಯವಿತ್ತಂತೆ.

ಒಳಾಂಗಣ ವಿಶೇಷ
ಈ ನೌಕಾಸ್ತ್ರದಲ್ಲಿ ಒಟ್ಟು ಏಳು ಕೊಠಡಿಗಳಿವೆ. ಹನ್ನೊಂದು ಮಂದಿ ನಾವಿಕರು ಪಯಣಿಸುವಷ್ಟು ಸೌಕರ್ಯವಿದೆ. ಒಂದು ಕೊಠಡಿಯಲ್ಲಿ ಶಸ್ತ್ರಾಸ್ತ್ರಗಳಿವೆ. ಮತ್ತೊಂದು ಕೊಠಡಿಗಳಲ್ಲಿ ಅವುಗಳನ್ನು ನಿಯಂತ್ರಿಸುವ ತಿರುಗಣಿಗಳಿವೆ. ಎಡಭಾಗದಲ್ಲಿ ಸಿಗ್ನಲ್ ಛೇಂಬರ್, ಬಲಭಾಗದಲ್ಲಿ ಅಡುಗೆ ಕೋಣೆ, ವಿಶ್ರಾಂತಿ ಕೊಠಡಿ, ರೀಡಿಂಗ್ ರೂಮ್… ಹೀಗೆ ಗಾಳಿ, ಬೆಳಕು ರಹಿತವಾಗಿ ತಿಂಗಳುಗಟ್ಟಲೆ ಜೀವನ ನಡೆಸುವಂತಹ ವಾತಾವರಣದ ವ್ಯವಸ್ಥೆಯನ್ನು ಮ್ಯೂಸಿಂಯನಲ್ಲಿ ನೋಡಬಹುದು.

ಪ್ರವಾಸಿಗರಿಗೆ ಸಬ್‌ಮೆರೀನ್ ಕಾರ್ಯ ವೈಖರಿ ಮಾಹಿತಿಯನ್ನು ಸುಲಭವಾಗಿ ಅರ್ಥೈಸಲು ಪ್ರತಿ ಕೊಠಡಿಗಳಲ್ಲೂ ಯೋಧರ ಪ್ರತಿ ರೂಪದ ಬೊಂಬೆಗಳನ್ನು ನಿಲ್ಲಿಸಲಾಗಿದೆ. ಆ ಬೊಂಬೆಗಳ `ಆಕ್ಷನ್`ಗಳು ಕೊಠಡಿಯ ಮಹತ್ವ, ಕಾರ್ಯಚಟುವಟಿಕೆಯನ್ನು ವಿವರಿಸುತ್ತವೆ. ಇವುಗಳ ಜೊತೆಗೆ ಅಲ್ಲಲ್ಲಿ ಸೂಚನಾ ಫಲಕಗಳಿವೆ. ಈ ಬೊಂಬೆಗಳ ಜೊತೆಗೆ `ಸಬ್‌ಮರೀನ್` ಕುರಿತ ಕಥೆ ಹೇಳಲು ಆರು ಮಂದಿ ಮಾರ್ಗದರ್ಶಿಗಳಿದ್ದಾರೆ.

ಕೊಠಡಿಗಳನ್ನು ಸಂಪರ್ಕಿಸುವ ಸುರಂಗ ಮಾರ್ಗ

ಇಪ್ಪತ್ತೈದು ರೂಪಾಯಿ ಪ್ರವೇಶ ಶುಲ್ಕ ಕೊಟ್ಟು, ಈ ಮ್ಯೂಸಿಯಂ ಹೊಕ್ಕಿದರೆ ಸಾಕು, ಜಲಾಂತರ್ಗಾಮಿಯ ವಿಶ್ವರೂಪವೇ ನಮ್ಮೆದುರು ತೆರೆದುಕೊಳ್ಳುತ್ತದೆ. ವಿಶಾಖಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರ ತನ್ನೂರಿನ ಹಡಗು ನಿರ್ಮಾಣ ಹಾಗೂ ನೌಕಾಪಡೆಯ ಮಾಹಿತಿ ನೀಡುವುದಕ್ಕಾಗಿಯೇ ಇಂಥ ಮ್ಯೂಸಿಯಂ ನಡೆಸುತ್ತಿದ್ದು, ಈ ಮ್ಯೂಸಿಯಂ ಸೋಮವಾರ ಹೊರತುಪಡಿಸಿ ವಾರದ ಎಲ್ಲ ದಿನಗಳಲ್ಲೂ ತೆರೆದಿರುತ್ತದೆ. ಸಂಜೆ 4 ರಿಂದ ರಾತ್ರಿ 8ರವರೆಗೆ ಪ್ರವೇಶಾವಕಾಶ. ಭಾನುವಾರ ಮತ್ತು ಸಾರ್ವಜನಿಕ ರಜೆ ದಿನಗಳಲ್ಲಿ ಬೆಳಿಗ್ಗೆ 11ರಿಂದ ಮಧ್ಯಾಹ್ನ 1.30ರವರೆಗೆ ತೆರೆದಿರುತ್ತದೆ.

'ಪ್ರಜಾವಾಣಿ' ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ಲೇಖನ