ರೈತನ ಗೆಳೆಯ ‘ಅಜೋಲಾ’

ಅಜೋಲಾ – ಮೇವಿನ ಬೆಳೆಯೂ ಹೌದು, ಗೊಬ್ಬರದ ಒಳಸುರಿಯೂ ಹೌದು. ಅಜೋಲಾ ಬೆಳೆಸಿ ಬಳಸುವುದರಿಂದ ಆಕಳುಗಳಿಗೆ ಪೌಷ್ಟಿಕ ಮೇವಾಗುತ್ತದೆ. ಹಾಲಿನ ಇಳುವರಿ ಹೆಚ್ಚುತ್ತದೆ. ಜೊತೆಗೆ, ಮೇವಿನ ಖರೀದಿಗಾಗಿ ವ್ಯಯಿಸುವ ಹಣ ಉಳಿತಾಯವಾಗುತ್ತದೆ.
ಅಜೋಲಾ ಕುರಿತು ಸಾಕಷ್ಟು ಸಂಶೋಧನೆಗಳಾಗಿವೆ. ಅಧ್ಯಯನಗಳೂ ನಡೆದಿವೆ. ವಿಶ್ವ ವಿದ್ಯಾಲಯ ಮಟ್ಟದಲ್ಲಿ ಅನೇಕ ಪ್ರಬಂಧಗಳನ್ನು ಮಂಡಿಸಲಾಗಿದೆ. ಆದರೆ ರೈತರಿಗೆ ಅರ್ಥವಾಗುವ ರೀತಿಯಲ್ಲಿ ಸ್ಥಳೀಯ ಭಾಷೆಯಲ್ಲಿ ಪುಸ್ತಕಗಳು ಪ್ರಕಟವಾಗಿರಲಿಲ್ಲ.
ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆ ಸರಳ ಕನ್ನಡದಲ್ಲಿ ಅಜೋಲಾ ಪುಸ್ತಕವನ್ನು ಪ್ರಕಟಿಸುವ ಮೂಲಕ ಭೂಮಿ ಸುಸ್ಥಿರ ಅಭಿವೃದ್ಧಿ ಸಂಸ್ಥೆ ಆ ಕೊರತೆಯನ್ನು ತುಂಬಿಕೊಟ್ಟಿದೆ. ಗಾಣಧಾಳು ಶ್ರೀಕಂಠ ಅವರ ಈ ಹೊತ್ತಗೆ ಅಜೋಲಾ ಕೃಷಿಯ ಸಂಪೂರ್ಣ ಮಾಹಿತಿ ನೀಡುತ್ತದೆ.
(- ಡಾ.ಮುರುಳಿ ಕೃಷ್ಣ, ಪಶುವೈದ್ಯರು, ಬೆಂಗಳೂರು)

ಸಾವಯವದಿಂದ ಜೀವ ವೈವಿಧ್ಯವರೆಗೆ…

ಎರಡು ಗ್ರಾಮ, ಒಂದು ಯೋಜನೆ, ಒಂದು ಇಲಾಖೆ, ಒಂದು ಸಂಸ್ಥೆ. ಪುಟ್ಟ ಬದಲಾವಣೆ…
-ಈ ಸಮೀಕರಣದ ಫಲಿತಾಂಶವೇ ‘ಹಸಿರು ಹೆಜ್ಜೆಗಳು’ ಎಂಬ ಕೃತಿ.
ಕೃಷಿ ಇಲಾಖೆ ‘ಸಾವಯವ ಗ್ರಾಮ/ಸ್ಥಳ ಯೋಜನೆ’ಯನ್ನು ಅನುಷ್ಠಾನಗೊಳಿಸಲು ಭೂಮಿ ಸುಸ್ಥಿರ ಅಭಿವೃದ್ದಿ ಸಂಸ್ಥೆಗೆ ವಹಿಸಿತು. ಸಂಸ್ಥೆಯ ಮಾರ್ಗದರ್ಶನದಲ್ಲಿ ಸಕಲೇಶಪುರ ತಾಲ್ಲೂಕಿನ ಯೆಡೇಹಳ್ಳಿ, ಮೂಡಿಗೆರೆ ತಾಲ್ಲೂಕಿನ ಫಲ್ಗುಣಿಯ ಅಂದಾಜು ಇನ್ನೂರು ರೈತರು ೨೫೦ ಎಕರೆ ಜಮೀನಿನಲ್ಲಿ ಸಾವಯವ ಕೃಷಿ ಯೋಜನೆಯನ್ನು ಅಳವಡಿಸಿಕೊಂಡರು.
ಮೂರು ವರ್ಷಗಳಲ್ಲಿ ಅಷ್ಟೂ ಕುಟುಂಬಗಳು ಸಾವಯವ ಕೃಷಿಗೆ ಪರಿವರ್ತನೆ ಗೊಳ್ಳುವ ಸಂಕಲ್ಪ ಮಾಡಿದರು. ಆ ಬದಲಾವಣೆಯ ಹೆಜ್ಜೆಗಳೇ ಈ ಕೃತಿಯ ಒಂದೊಂದು ಪಠ್ಯಗಳು.
ಈ ಕೃತಿಯಲ್ಲಿ ಒಟ್ಟು ಹನ್ನೆರಡು ಕೃಷಿಕರ ಅನುಭವಗಳಿವೆ. ಮೂರು ವರ್ಷಗಳಕಾಲ ಈ ರೈತರ ತೋಟಗಳ ಬೆಳವಣಿಗೆಯನ್ನು ಗಮನಿಸಿ ದಾಖಲಿಸಲಾಗಿದೆ. ನಮ್ಮನ್ನೂ ಒಳಗೊಂಡಂತೆ ಒಟ್ಟು ಐದು ಮಂದಿ ಬರಹಗಾರರು ಮೂರು ವರ್ಷಗಳ ಕಾಲ ಈ ಯೋಜನಾ ಕ್ಷೇತ್ರಗಳಲ್ಲಿ ಸುತ್ತಾಡಿ ಮಾಹಿತಿಯನ್ನು ದಾಖಲಿಸಿದ್ದಾರೆ.
ಸಾವಯವ ಕೃಷಿಗೆ ಪರಿವರ್ತನೆಯಾಗುವುದೆಂದರೆ ಕೇವಲ ರಾಸಾಯನಿಕ ಗೊಬ್ಬರ, ಕೀಟನಾಶಕಗಳನ್ನು ತ್ಯಜಿಸುವುದು, ಎರೆಗೊಬ್ಬರ ಬಳಸುವುದಷ್ಟೇ ಅಲ್ಲ. ನೆಲ-ಜಲ ಸಂರಕ್ಷಣೆ, ದುಬಾರಿ ಒಳಸುರಿಗೆ ಬ್ರೇಕ್ ಹಾಕುವುದು, ಬೀಜ ಸ್ವಾವಲಂಬನೆ, ಸ್ಥಳೀಯ ಸಂಪನ್ಮೂಲಗಳ ಸದ್ಬಳಕೆ, ತ್ಯಾಜ್ಯದಿಂದ ಗೊಬ್ಬರ ತಯಾರಿ ಹಾಗೂ ಸ್ವಾವಲಂಬನೆಯಿಂದ ಬದುಕುವುದೇ ‘ಸಾವಯವ ಕೃಷಿ’ ಎಂಬುದನ್ನು ಈ ಕೃತಿಯಲ್ಲಿನ ಲೇಖನಗಳು ಮನವರಿಕೆ ಮಾಡಿಕೊಡು ತ್ತವೆ.
ಪ್ರತಿ ಲೇಖನವೂ ಸಾವಯವ ಕೃಷಿಯ ಹೊಸ ಮಗ್ಗಲನ್ನು ಪರಿಚಯಿಸುತ್ತದೆ. ಯಾವ ಲೇಖನಗಳಲ್ಲೂ ಉತ್ಪ್ರೇಕ್ಷೆಯಿಲ್ಲ. ಯಾವ ರೈತರೂ ಉದ್ಘರಿಸಿ ಮಾತನಾಡಿಲ್ಲ. ಆರಂಭದಲ್ಲಿ ಸಾವಯವ ಕೃಷಿ ಕಷ್ಟ ಎನ್ನುವುದನ್ನು ರೈತರು ಒಪ್ಪಿಕೊಂಡಿದ್ದಾರೆ. ಒಮ್ಮೆ ಭೂಮಿ ಒಗ್ಗಿಕೊಂಡರೆ ಭವಿಷ್ಯದಲ್ಲಿ ಬೆಳೆದಿದ್ದೆಲ್ಲವೂ ಲಾಭ ಎಂಬುದು ರೈತರಿಗೆ ಮನವರಿಕೆಯಾಗಿದೆ.
ಎಕರೆಗಟ್ಟಲೆ ಭತ್ತ ಬೆಳೆದರೂ ‘ಊಟದ ಅಕ್ಕಿಗಾಗಿ ಹುಡುಕಾಟ ನಡೆಸುತ್ತಾ ದೇಸಿ ಭತ್ತದ ಬೀಜ ಬ್ಯಾಂಕ್ ಕಟ್ಟಿದ್ದು, ಸಾವಯವ ಕೃಷಿ ಯೋಜನೆಯಿಂದ ಊರಿನಲ್ಲಿ ಸಾಮಾಜಿಕ ಬದಲಾವಣೆಯಾಗಿರುವಂತಹ ವಿಚಾರಗಳು ಸಾವಯವ ಕೃಷಿಗೆ ಹೊಸದಾಗಿ ಹೆಜ್ಜೆ ಇಡುವ ರೈತರಿಗೆ ಹಾಗೂ ಸಂಘಟನೆಗಳಿಗೆ ಸಾವಯವದ ಹೊಸ ದಿಕ್ಕನ್ನು ಪರಿಚಯಿಸುತ್ತವೆ.
ಭೂ ರಹಿತರಾದರೂ ಇರುವಷ್ಟೇ ಭೂಮಿಯಲ್ಲೇ ಕೃಷಿ ಮಾಡಿಕೊಂಡು ಬದುಕುಕಟ್ಟಿಕೊಂಡಿರುವವರು, ಗೊಬ್ಬರದ ಗುಂಡಿಯ ಸುತ್ತಾ ಕೈತೋಟ ಕಟ್ಟಿಕೊಂಡವರು,  ರಸ್ತೆ ಬದಿಯ ಕಂಪೌಂಡ್ ಅನ್ನೇ ತರಕಾರಿ ಮಾರುಕಟ್ಟೆ ಮಾಡಿಕೊಂಡವರು, ಸಾವಯವದಲ್ಲಿ ಅನಾನಸ್ ಬೆಳೆದು ಮಂಗಳೂರಿಗೆ ಮಾರಾಟ ಮಾಡಿದವರು ಕೃಷಿ ಕಥೆಗಳು ಕೃಷಿ ಬಿಟ್ಟು, ಊರು ಬಿಟ್ಟು ಗುಳೆ ಹೊರಟವರ ಕೈ ಹಿಡಿಯಬಹುದು ಎಂಬುದು ನಮ್ಮ ವಿಶ್ವಾಸ.