ಮಕ್ಕಳ ಆಟವೋ… ಸಂವಹನದ ಪಾಠವೋ…

ನನ್ನ ಮಕ್ಕಳು ನದಿ, ಅಗರ್ತ ಮನೆಯಂಗಳದಲ್ಲಿ ಆಟವಾಡುತ್ತಿದ್ದರು.
ನದಿ, ‘ಅವಲಕ್ಕಿ ಪವಲಕ್ಕಿ ಕಾಂಚಣ, ಮಿಣ ಮಿಣ, ಡಾಂ ಡೂ, ಕೊಂಯ್ ಕೊಟಾರ್ ‘ ಅಂತ ಹೇಳ್ತಾ ಹೇಳ್ತಾ… ಇದಕ್ಕಿದ್ದಂತೆ “ಪಿಜ್ಜಾ ಲೈಕ್ ಫಿಜ್ಜಾ, ಪಿಜ್ಜಾ ಮೈ ಫೇವರೇಟ್ ಅಂತ…’ ಅಂತ ಮಧ್ಯೆ ಸೇರಿಸಿದ್ದಳು.
‘ಅವಲಕ್ಕಿ ಮಧ್ಯೆ ಪಿಜ್ಜಾ ಏಕೆ’ ಅಂತ ಕೇಳಿದೆ. ಅದಕ್ಕೆ ಅವಳು ಹೇಳ್ತಾಳೆ..’ಅವಲಕ್ಕಿ- ಪವಲಕ್ಕಿಯ’ ಇಂಗ್ಲಿಷ್ ವರ್ಷನ್ ಅಪ್ಪಾ ಇದು.. ಎಂದು ಸಮರ್ಥನೆ ಕೊಟ್ಟಳು !
ಆಟ ಮುಂದುವರಿಯುತು..
ಕೈ ಎಲ್ಲ ಎಲ್ಲಿ ಹೋಯ್ತ ಅಂತ ಆಟ ಶುರು ಮಾಡಿದಳು ನದಿ. ಅದಕ್ಕೆ ಅಗರ್ತ ‘ಕೈ ಎಲ್ಲೂ ಹೋಗಿಲ್ಲ, ಇಲ್ಲೆ ಇವೆ ನೋಡೇ..’ ಎನ್ನುತ್ತಾ ಬೆನ್ನ ಹಿಂದೆ ಮಡಿಸಿದ್ದ ಕೈಗಳನ್ನು ತೋರಿಸಿದ. ಆದರೂ ಅವರ ಅಕ್ಕ ಅವನನ್ನು ಒಪ್ಪಿಸಿ, ನೋಡು “ಕೈ ಎಲ್ಲ ಸಂತೆಗೆ ಹೋಯ್ತು” ಅಂತ ಹೇಳ್ಬೇಕು ಎಂದಳು. ಸರಿ, ಅದಕ್ಕೆ ಹೇಗೋ ಅವನು ಸಮ್ಮತಿಸಿದ.
ಮುಂದಿನ ಪ್ರಶ್ನೆ, ಸಂತೆಯಿಂದ ಏನ್ ತಂತು ?’ ಅಂತ ಕೇಳಿದಳು. ಅದಕ್ಕೆ ಅವನು ಪ್ರತಿಕ್ರಿಯಿಸಲಿಲ್ಲ.
ಮಗಳು ‘ಸ್ವಗತ ‘ದ ರೀತಿಯಲ್ಲಿ ‘ಬಾಳೆ ಹಣ್ಣು ತಂತು’ ಎಂದಳು.
‘ಹೋಗ್ಲಿ, ಬಾಳೆ ಹಣ್ಣು ಏನ್ಮಾಡದೇ’ ಅಂತ ಕೇಳಿದಳು, ಅದಕ್ಕೆ ಅಗರ್ತ ಥಟ್ಟನೆ ‘ತಿಂದೆ ಕಣೇ’ ಅಂತ ಕೂಗಿದ.
ಸರಿ, ಸಿಪ್ಪೆ ಏನ್ಮಾಡಿದೆಯೋ ಅಗರ್ತ ಎಂದಳು? ‘ಏನ್ಮಾಡ್ತಾರೆ, ಆ ಡಸ್ಟ್ ಬಿನ್ ಗೆ ಹಾಕ್ದೆ’ ಅಂತ ತೋರಿಸಿದ.
ಇಲ್ಲಿ ನದಿಗೆ ಈ ಆಟದ ಟ್ರ್ಯಾಕ್ ತಪ್ಪಿತು. ಅಯ್ಯೋ ಬಾಗಿಲು ಹಿಂದೆ ಹಾಕ್ಬೇಕಲ್ಲವಾ ? ಇವನು ತಪ್ಪು ಹೇಳ್ತಿದ್ದಾನೆ ಅಂತ ಜಗಳಮಾಡಿದಳು. ಅದಕ್ಕೆ ಅಗರ್ತ ಒಪ್ಪಲೇ ಇಲ್ಲ.
ಸರಿ, ಆಮೇಲೆ ಏನ್ಮಾಡಿದೆ ? ‘ಅಂತ ಕೇಳಿದಳು..
ಡಸ್ಟ್ ಬಿನ್ ತಗೊಂಡು ಹೋಗಿ ಕಸದವನಿಗೆ ಹಾಕ್ದೆ…’ ಎಂದ ಅಗರ್ತ.
ನದಿಗೆ, ಈ ಆಟದಲ್ಲಿ ಬಾಗಿಲು, ತಿಪ್ಪೆ, ಗೊಬ್ಬರ, ಬತ್ತ, ಎಲ್ಲ ಮಿಸ್ ಆಗ್ತಿದೆ ಅಂತ. ಆದರೆ ಅಗರ್ತನಿಗೆ ಅದೆಲ್ಲ ಗೊತ್ತಿಲ್ಲ. ಅವನಿಗೆ ಬಾಳೆ ಹಣ್ಣಿನ ಸಿಪ್ಪೆಯನ್ನು ಕಸದ ಬುಟ್ಟಿಗೆ ಹಾಕಿಯೇ ಗೊತ್ತು !
ಮಕ್ಕಳ ಈ ಸಂವಹನದಲ್ಲಿ ನನಗನ್ನಿಸಿತು, ‘ನಾವು ಮಕ್ಕಳಿಗೆ ಕಲಿಸಬೇಕಾದದ್ದು, ಕಲಿಯಬೇಕಾದದ್ದು ಎಷ್ಟೆಲ್ಲ ಇದೆ’ ಎಂದು.

ನಾವು ಆಡುತ್ತಿದ್ದ ಆಟದಲ್ಲಿ ಹಣ್ಣು, ಸಿಪ್ಪೆ, ಗೊಬ್ಬರ, ಬೂದಿ, ಗಿಡ, ಮರ.. ಹೀಗೆ, ಇಡೀ ಪ್ರಕೃತಿಯೊಳಗಿನ ಋತುಚಕ್ರವೇ ಅನಾವರಣಗೊಳ್ಳುತ್ತಿತ್ತು. ಈ ಮೂಲಕವೇ ಮಕ್ಕಳ ಬುದ್ದಿ ಶಕ್ತಿ, ನೆನಪಿನ ಶಕ್ತಿ ಹೆಚ್ಚಾಗುತ್ತಿತ್ತು. ಅದೇ ನಿಜವಾದ ರೈಮಿಂಗ್ ವರ್ಡ್ಸ್ ಆಗಿತ್ತು..!
ನಮ್ ರೈಮಿಂಗ್ ಹಿಂಗಿತ್ತು ಅಲ್ವಾ ?
ಕೈಯೆಲ್ಲ ಎಲ್ಲಿ ಹೋಯ್ತು ?
ಸಂತೆಗೆ ಹೋಯ್ತು
ಸಂತೆಯಿಂದ ಏನ್ ತಂತು ?
ಬಾಳೆ ಹಣ್ಣು ತಂತು.
ಬಾಳೆಹಣ್ಣು ಏನ್ಮಾಡ್ದೆ ?
ಸುಲಿದು ತಿಂದೆ
ಸಿಪ್ಪೆ ಏನ್ಮಾಡ್ದೆ ?
ಕದಿನಿಂದಕ್ಕೆ ಹಾಕ್ದೆ (ಬಾಗಿಲು ಹಿಂದಕ್ಕೆ)
ಕದ ಏನ್ ಕೊಡ್ತು ?
ಚೆಕ್ಕೆ ಕೊಡ್ತು .
ಚೆಕ್ಕೆ ಏನ್ ಮಾಡ್ದೆ ?
ಒಲೆಗೆ ಹಾಕ್ದೆ.
ಒಲೆ ಏನ್ ಕೊಡ್ತು ?
ಬೂದಿ ಕೊಡ್ತು
ಬೂದಿ ಏನ್ ಮಾಡ್ದೆ ?
ತಿಪ್ಪೆಗೆ ಹಾಕ್ದೆ .
ತಿಪ್ಪೆ ಏನ್ ಕೊಡ್ತು ?
ಗೊಬ್ಬರ ಕೊಡ್ತು.
ಗೊಬ್ಬರ ಏನ್ಮಾಡ್ದೆ?
ಗದ್ದೆಗೆ ಹಾಕ್ದೆ.
ಗದ್ದೆ ಏನ್ ಕೊಡ್ತು ?
ಭತ್ತ ಕೊಡ್ತು
ಭತ್ತ ಏನ್ ಮಾಡ್ದೆ?
ಅಕ್ಕಿ ಮಾಡ್ದೆ
ಅಕ್ಕಿ ಏನ್ ಕೊಡ್ತು ?
ಅನ್ನ ಕೊಡ್ತು
ಅನ್ನ ಏನ್ ಮಾಡ್ದೆ ?
ತಿಂದೆ…

ಎದೆ ತುಂಬಿ ಹಾಡಿದ ಗಾಯಕರು, ಮನವಿಟ್ಟು ಕೇಳಿದ ಪ್ರೇಕ್ಷಕರು…!

03ct4ep 03ct5ep

ಬುಧವಾರ ಇಳಿ ಸಂಜೆಯಲ್ಲಿ ನಗರದ ತರಾಸು ರಂಗಮಂದಿರದ ತುಂಬಾ ಜಿಎಸ್ಎಸ್ ಕಾವ್ಯದ ಹೊನಲು ಹರಿಯುತ್ತಿತ್ತು. ಆ ಭಾವ ಲಹರಿಯ ಅಲೆಯಲ್ಲಿ ಐದುನೂರಕ್ಕೂ ಹೆಚ್ಚು ಕವಿ ಮನಸ್ಸಿನ ಸಹೃದಯಿಗಳು ತೇಲಿ ಹೋದರು..!
ವಿಶ್ವಪಥ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ‘ಎದೆ ತುಂಬಿ ಹಾಡುವೆವುವು…’ – ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರಿಗೆ ಗೀತ ನಮನ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯವಿದು.
‘ಹಣತೆ’ ಹಚ್ಚಿ ಕನ್ನಡ ಸಾರಸ್ವತ ಲೋಕವನ್ನು ಬೆಳಗಿಸಿದ ಚೈತ್ರ ಕವಿ ಜಿಎಸ್ಎಸ್ ಅವರ ಹದಿನಾರು ಜನಪ್ರಿಯ ಗೀತೆಗಳನ್ನು ಹದಿನೇಳು ಗಾಯಕರು ಹಾಡುವ ಮೂಲಕ ರಾಷ್ಟ್ರಕವಿಗೆ ಗೀತ ನಮನ ಸಲ್ಲಿಸಿದರು. ಗೀತೆಯ ಜೊತೆಗೆ, ಅದರ ರಚನೆಯ ಉದ್ದೇಶ, ಸನ್ನಿವೇಶ, ಸಂದರ್ಭಗಳನ್ನು ಸಾಹಿತ್ಯ ಪೂರಣ ನಿರೂಪಣೆಯ ಮೂಲಕ ಆಕಾಶವಾಣಿ ಕಾರ್ಯಕ್ರಮ ಮುಖಸ್ಥೆ ಉಷಾ ಲತಾ ಅವರು ನಿರೂಪಿಸಿದರು.
ಗಾಯಕಿ ಕೋಕಿಲಾ ರುದ್ರಮೂರ್ತಿಯವರ ದನಿಯಲ್ಲಿ ಮೂಡಿಬಂದ ಮುಂಗಾರಿನ ಅಭಿಷೇಕಕೆ / ಮಿದುವಾಯಿತು ನೆಲವು / ಧಗೆಯಾರಿದ ಹೃದಯದಲ್ಲಿ/ ಪುಟಿದೆದ್ದಿತು ಚೆಲುವು’ ಎಂಬ ಗೀತೆ ಪ್ರೇಕ್ಷಕರನ್ನು ಮುಂಗಾರಿನ ಮಳೆಯಲ್ಲಿ ತೊಯ್ದಂತಹ ಅನುಭವ ನೀಡಿತು.
ಯುವ ಗಾಯಕ ಪ್ರಜ್ವಲ್ ಧ್ವನಿಯಲ್ಲಿ ಮೂಡಿ ಬಂದ, ‘ಆಕಾಶದ ನೀಲಿಯಲ್ಲಿ / ಚಂದ್ರ ತಾರೆ ತೊಟ್ಟಿಲಲ್ಲಿ / ಬೆಳಕನಿಟ್ಟು ತೂಗದಾಕೆ / ನಿನಗೆ ಬೇರೆ ಹೆಸರು ಬೇಕೇ/ ಸ್ತ್ರೀ ಎಂದರೆ ಅಷ್ಟೇ ಸಾಕೆ’ ಗೀತೆ ಹಾಗೂ ಸತೀಶ್ ಜಟ್ಟಿಯವರ ಕಂಠದಿಂದ ಹೊಮ್ಮಿದ ‘ಕಾಣದ ಕಡಲಿಗೆ ಹಂಬಲಿಸಿದೆ ಮನ’ ಕವಿತೆ, ಗಾಯಕ ದಿ. ಸಿ. ಅಶ್ವತ್ಥ್ ಅವರ ಶಾರೀರವನ್ನು ನೆನಪಿಸಿತು. ಪ್ರೇಕ್ಷಕರ ಒತ್ತಾಯ ಹಾಗೂ ಹಾಡುಗಾರರ ಜಿಎಸ್ಎಸ್ ಮೇಲಿನ ಪ್ರೀತಿಯಿಂದಾಗಿ ‘ದುರ್ಗದ ಸಿರಿ’ ಸಾಂಸ್ಕೃತಿಕ ವೇದಿಕೆಯ ಡಿವೈಎಸ್ಪಿ ಮಹಂತರೆಡ್ಡಿಯವರು ’ಕಾಣದ ಕಡಲಿಗೆ ಹಂಬಲಿಸಿದ ಮನ’ ಹಾಡನ್ನು ಹಾಡಿ, ಪ್ರೇಕ್ಷಕರನ್ನು ಮತ್ತಷ್ಟು ರಂಜಿಸಿದರು. ಮಂದ್ರ ಸ್ಥಾಯಿ, ತಾರಸ್ಥಾಯಿಯ ಸಂಗೀತ ಸ್ವರಗಳಿಗೆ ಪ್ರೇಕ್ಷಕರು ತಲೆದೂಗಿದರು, ಧ್ಯಾನಸ್ಥರಾದರು, ಅಂತರ್ಮುಖಿಯಾಗಿ ಗಾಯನವನ್ನು ಆಸ್ವಾದಿಸಿದರು. ಕೆಲವರ ಕಣ್ಣಾಲಿಗಳು ತೇವವಾದವು !
ಬಿ.ಪಿ.ಶೋಭಾ ಅವರ ‘ಪ್ರಕೃತಿಯಂತೆ ಕವಿಯ ಮನಸು..’ ಗಾಯನ, ಚಿತ್ರದುರ್ಗದ ಜೋಗಿಮಟ್ಟಿಯ ಹಸಿರ ಸಿರಿಯನ್ನು ನೆನಪಿಸಿದರೆ, ಡಿ.ಓ ಮೊರಾರ್ಜಿಯವರ ‘ಶತಮಾನದಿಂದ ..’ ಗೀತೆ ದುರ್ಗದ ನೆಲದ ಹೋರಾಟದ ಕಿಚ್ಚನ್ನು ಮೆಲಕುವಂತೆ ಮಾಡಿತು. ವೇಣುಗೋಪಾಲ್ ಅವರ ದನಿಯಲ್ಲಿ ಮೂಡಿದ ‘ನಿನ್ನದೇ ನೆಲ, ನಿನ್ನದೇ ಜಲ..’ ಜಿಎಸ್ಎಸ್ ಅವರ ನೆಲದ ಪ್ರೀತಿಯನ್ನು ಪ್ರದರ್ಶಿಸಿತು. ಚಂದ್ರಪ್ಪ ಅವರು ‘ಎದೆ ತುಂಬಿ ಹಾಡುವೆನು’ ತ್ರಿವೇಣಿಯವರ ‘ಉಡುಗಣ ವೇಷ್ಟಿತ’, ಕುಮಾರಿ ನಾಶ್ರೀಯವರ ದನಿಯಲ್ಲಿ ಮೂಡಿ ಬಂದ ‘ಯಾವ ರಾಗಕೋ..’ ಗೀತೆಗಳು ಪ್ರೇಕ್ಷಕರ ಕೈಗಳಿಗೆ ತಾಳದ ಲೇಪನವನ್ನು ಹಚ್ಚಿದವು. ಈ ಎಲ್ಲ ಹಾಡುಗಳಿಗೂ ಪ್ರೇಕ್ಷಕ ಮಹಾಪ್ರಭು ಜೋರು ಚಪ್ಪಾಳೆ ತಟ್ಟುವ ಮೂಲಕ ‘ಫುಲ್ ಮಾರ್ಕ್ಸ್’ ನೀಡಿದರು.
ವೃಂದಗಾನದಲ್ಲಿ ಪ್ರಸ್ತುತಪಡಿಸಿದ ‘ಒಂದೇ ಒಂದೇ ಒಂದೇ ನಾವೆಲ್ಲರೂ ಒಂದೇ ’ ಗೀತೆ ಜಿಎಸ್ಎಸ್ ಅವರ ದೇಸಿ ತನವನ್ನು ತೆರೆದಿಟ್ಟರೆ, ನಾಗಶ್ರೀ, ಬಿ.ಪಿ.ಶೋಬಾ ಹಾಗೂ ಮೀನಾಕ್ಷಿ ಭಟ್ ಹಾಡಿದ ‘ಹೊಸ ವರ್ಷದ ಗೀತೆ’ ಪ್ರೇಕ್ಷರಿಗೆ ಹೊಸ ವರ್ಷಾಚರಣೆಯ ಶುಭಾಶಯವನ್ನು ಕೋರಿದಂತಿತ್ತು.
ಚಿತ್ರದುರ್ಗದ ಹಾಡು ಹಕ್ಕಿಗಳ ಸಂಗೀತಕ್ಕೆ ಗುಡದೇಶ್ (ಕೀಬೋರ್ಡ್), ಬಸವರಾಜ್ (ತಬಲ), ಚಂದ್ರಶೇಖರ್ (ರಿದಂ ಪ್ಯಾಡ್) ಪಕ್ಕವಾದ್ಯ ನೀಡಿದರು. ಈ ಮೂವರ ಸಂಗೀತದ ಮೋಡಿಯಿಂದ ಗೀತ ಗಾಯನ ಅದ್ಭುತವಾಗಿ ಮೂಡಿಬಂತು.
ಕೇತೇಶ್ವರ ಶ್ರೀಗಳು, ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ, ನ್ಯಾಯಾಧೀಶ ಸದಾಶಿವ ಎಸ್. ಸುಲ್ತಾನಪುರಿ, ಎಸ್.ಆರ್. ಎಸ್ ಕಾಲೇಜಿನ ಮುಖ್ಯಸ್ಥ ಲಿಂಗಾರೆಡ್ಡಿ, ಬಾಪೂಜಿ ವಿದ್ಯಾಸಂಸ್ಥೆಯ ಮುಖ್ಯಸ್ಥ ಕೆ.ಎಂ.ವೀರೇಶ್, ಸಾಹಿತ್ಯ ಪರಿಚಾರಕ ವೆಂಕಣ್ಣಾಚಾರ್, ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ, ಯಶೋಧಮ್ಮ ದಂಪತಿ ಸೇರಿದಂತೆ ಕೋಟೆ ನಾಡಿನ ಪ್ರಮುಖ ವ್ಯಕ್ತಿಗಳೆಲ್ಲ ಪ್ರೇಕ್ಷಕ ಗ್ಯಾಲರಿಯಲ್ಲಿ ಕುಳಿತು ಗಾನ ಸುಧೆಯನ್ನು ಆಸ್ವಾದಿಸಿದ್ದು ವಿಶೇಷ.
ಕಾರ್ಯಕ್ರಮ ಮುಗಿದು, ಪ್ರೇಕ್ಷಕರೆಲ್ಲ ಮನೆಯತ್ತ ಹೆಜ್ಜೆ ಹಾಕುತ್ತಿದ್ದರೆ, ಇತ್ತ ರಂಗ ಮಂದಿರದಲ್ಲಿ ಇಟ್ಟಿದ್ದ ಶಿವರುದ್ರಪ್ಪನವರ ಭಾವಚಿತ್ರದ ಎದುರು ನಿಂತು ಅವರ ಸಹೋದರಿ ಜಯಕ್ಕ, ಅಗಲಿದ ಸಹೋದರನನ್ನು ನೆನೆಯುತ್ತಾ ಕಣ್ಣೀರಿಡುತ್ತಿದ್ದರು !
———————————
ಉಳಿದಂತೆ ಹಾಡಿದವರು..
ಯಾವ ಹಾಡ ಹಾಡಲಿ – ತೋಟಪ್ಪ ಉತ್ತಂಗಿ
ನನ್ನ ನಿನ್ನ ನಡುವೆ – ಜಿ.ಎಸ್. ಉಜ್ಜಿನಪ್ಪ
ಎಲ್ಲೋ ಹುಡುಕಿದ – ರವಿ ಉಗ್ರಾಣ
ಹಾಡು ಹಳೆಯದಾದರೇನು – ಮೀನಾಕ್ಷಿ ಭಟ್
ಮಬ್ಬು ಕವಿದರೇನು – ಚಂಪಕಾ ಶ್ರೀಧರ್
ಒಂದೇ ಒಂದೇ ಒಂದೇ – ಎಂ.ಕೆ. ಹರೀಶ್
ಎಳೆ ಬೆಳದಿಂಗಳೇ – ಕೆ.ಎ. ಏಕಾಂತಪ್ಪ
–––––––––––––
ಹೊರಡುವ ಮುನ್ನ ಹೀಗೆಂದರು..
ವಿಭಿನ್ನ ಕಾರ್ಯಕ್ರಮ. ವಿನೂತನ ಪ್ರಯತ್ನ. ಭಾವಗೀತೆಯೇ ಪ್ರಧಾನವಾದ ಕಾರ್ಯಕ್ರಮ ಇದು. ಆಯೋಜಕರಿಗೊಂದು ಶಹಬ್ಬಾಸ್.
–ಅಶೋಕ್ ಬಾದರದಿನ್ನಿ, ರಂಗಕರ್ಮಿ

ಚಂದದ ಕಾರ್ಯಕ್ರಮ. ಚಿತ್ರದುರ್ಗದ ಜಿಲ್ಲಾ ಉತ್ಸವ ಇದೇ ರೀತಿಯಲ್ಲಿ ನಡೆಯಬೇಕು.
– ವಿ.ಪಿ.ಇಕ್ಕೇರಿ, ಜಿಲ್ಲಾಧಿಕಾರಿ
ಮೊದ ಮೊದಲು ಗಾಯನ ಸಾಧಾರಣವಾಗಿತ್ತು. ಆಮೇಲೆ ರಂಗ ಮಂದಿರದಿಂದ ಎದ್ದು ಹೋಗದ ಮಟ್ಟಿಗೆ ಆ ಗೀತೆಗಳು ನನ್ನ ಮನಸ್ಸನ್ನು ಕಟ್ಟಿ ಹಾಕಿಬಿಟ್ಟವು.
– ಕೋಟ್ಲಾ ರಾಮಲಿಂಗರೆಡ್ಡಿ, ರೈಲ್ವೆ ಹೋರಾಟ ಸಮಿತಿ ಸದಸ್ಯರು

ಕಲಾವಿದರಿಗೆ ಈ ಪರಿ ಗೌರವ ಕೊಟ್ಟಿದ್ದು ತುಂಬಾ ಸಂತಸ ತಂದಿದೆ. ಇಂಥ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು.
– ಬಿ.ಪಿ.ಶೋಭಾ, ಚಂದ್ರಪ್ ಕಲ್ಕರೆ, ಕಲಾವಿದರ ಪರವಾಗಿ

ವರ್ಲಿ ಚಿತ್ತಾರಗಳ ವಿದ್ಯಾನಿಕೇತನ

ಬಿದಿರಿನ ಕಲಾಕೃತಿಗಳಿಂದ ಅಲಂಕೃತ ಹೆಬ್ಬಾಗಿಲು. ಒಳಗೆ ಹಸಿರು ಗೋಡೆಗಳ ಮೇಲೆ ಬೆಳ್ಳನೆಯ ಗೆರೆಗಳ ಚಿತ್ತಾರಗಳು. ಕಂಬಗಳ ನಡುವೆ, ಕಿಟಕಿಯ ಪಕ್ಕ, ಬಾಗಿಲು, ಕಾರಿಡಾರ್‌ನ ಬದಿಯಲ್ಲೆಲ್ಲಾ ಚಿತ್ತಾರಗಳ ಸೊಬಗು. ಜನರ ದೈನಂದಿನ ಬದುಕಿಗೆ ಆಧಾರವಾದ ಹಲವು ಕಾಯಕಗಳನ್ನು ಪರಿಚಯಿಸುವ ಚಿತ್ರಗಳು ಗೋಡೆಗಳ ಮೇಲೆ ಅನಾವರಣಗೊಂಡಿವೆ! ಗೆರೆಗಳನ್ನೇ ಬಾಗಿಸಿ, ಸುರುಳಿಯಾಗಿ ಸುತ್ತಿಸಿ ಬಿಡಿಸಿರುವ ‘ವರ್ಲಿ ಚಿತ್ತಾರಗಳು’ ಶಾಲೆ ಅಂದವನ್ನು ಇಮ್ಮಡಿಗೊಳಿಸಿವೆ!

ವರ್ಲಿ ಚಿತ್ತಾರಗಳ ಸಿರಿವಂತಿಕೆಯನ್ನೇ ಧರಿಸಿನಿಂತಿರುವ ಈ ಶಾಲೆಯ ಹೆಸರು ಟ್ವಿಂಕ್ಲರ್ಸ್‌ ವಿದ್ಯಾನಿಕೇತನ. ಬೆಂಗಳೂರಿನ ನಾಗರಬಾವಿ ಬಡಾವಣೆಯ ಎನ್‌ಜಿಇಎಫ್ ಲೇಔಟ್‌ನಲ್ಲಿದೆ. ಕೆ.ಎಸ್.ಜಗನ್ನಾಥ ಗುಪ್ತ ಈ ಶಾಲೆಯ ಸ್ಥಾಪಕರು. 350 ಮಕ್ಕಳು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಮೂರು ವರ್ಷಗಳ ಹಿಂದೆ ಈ ಶಾಲೆಯ ಗೋಡೆಗಳ ಮೇಲೆಲ್ಲಾ ಕಾರ್ಟೂನ್‌ಗಳಳು ಎದ್ದು ಕಾಣುತ್ತಿದ್ದವು. ಅದೇ ಮಿಕ್ಕಿಮೌಸ್, ಟೆಡ್ಡಿ ಬೇರ್. ಟಿವಿ, ಪುಸ್ತಕ, ಸಿನಿಮಾಗಳಲ್ಲಿ ಇಂಥ ಚಿತ್ರಗಳನ್ನು ನೋಡಿ ಬೋರ್ ಹೊಡೆಸಿಕೊಂಡಿದ್ದ ಮಕ್ಕಳು, ಶಾಲೆ ಗೋಡೆಗಳ ಮೇಲಿದ್ದ ಅವೇ ಚಿತ್ರಗಳನ್ನು ಅಷ್ಟಾಗಿ ಗಮನಿಸುತ್ತಿರಲಿಲ್ಲ. ಇದೇ ಸಮಯದಲ್ಲಿ ಪತ್ರಿಕೆಯೊಂದರಲ್ಲಿ ‘ವರ್ಲಿ ಕಲೆ’ ಕುರಿತು ಪ್ರಕಟವಾದ ಲೇಖನ ಹಾಗೂ ಚಿತ್ರಗಳನ್ನು ಗಮನಿಸಿದ ಗುಪ್ತ ಅವರಿಗೆ  ತಮ್ಮ  ಶಾಲೆಯ ಗೋಡೆಗಳ ಮೇಲೂ ಇಂಥ ಚಿತ್ರಗಳನ್ನು ಬಿಡಿಸಬಾರದೇಕೆ? ಅನ್ನಿಸಿತು. ವರ್ಲಿ ಚಿತ್ರಗಳ ಮೂಲಕ ಮಕ್ಕಳಿಗೆ ‘ಸ್ಥಳೀಯ ಶ್ರಮ ಸಂಸ್ಕೃತಿ’ಯನ್ನು ಪರಿಚಯಿಸಬೇಕು ಎನ್ನುವ ನಿರ್ಧಾರಕ್ಕೆ ಬಂದರು.

ಇದೇ ಸಮಯದಲ್ಲಿ ಸಂಶೋಧಕ ಸತ್ಯಜಿತ್ ಅವರ ಮೂಲಕ ಮಂಡ್ಯದ ಕಲಾವಿದ ಸೋಮವರದ ಅವರ  ಪರಿಚಯವಾಯಿತು. ಸತ್ಯಜಿತ್ ಅವರ ಮಗ ಈ ಶಾಲೆಯ ವಿದ್ಯಾರ್ಥಿ. ಸೋಮವರದ ಅವರ ಕಲಾ ಕೌಶಲ್ಯ ಹಾಗೂ ಗುಪ್ತ ಅವರ ‘ಸ್ಥಳೀಯ ಸಂಸ್ಕೃತಿ’ ಪರಿಕಲ್ಪನೆ ಎರಡೂ ಸಮಾಗಮಗೊಂಡು ಮೂರು ತಿಂಗಳಲ್ಲಿ ಶಾಲೆಯ ಗೋಡೆಗಳ ಮೇಲೆ ವರ್ಲಿ ಚಿತ್ತಾರಗಳು ಅರಳಿದವು!

ಮಧ್ಯಾಹ್ನ ಊಟದ ಸಮಯದಲ್ಲಿ ಶಿಕ್ಷಕಿಯರೊಂದಿಗೆ ಚಿತ್ತಾರಗಳ ನೋಟ

ಕಟ್ಟಡದ ವಿನ್ಯಾಸಕ್ಕೆ ತಕ್ಕಂತೆ ಚಿತ್ರಗಳಿವೆ. ಮಕ್ಕಳು ಓಡಾಡುವ, ಊಟ ಮಾಡುವ ಹಾಗೂ ಆಟವಾಡುವ ಸ್ಥಳದ ಪಕ್ಕದ ಗೋಡೆಗಳ ಮೇಲೆ ಚಿತ್ರಗಳನ್ನು ಬರೆಸಲಾಗಿದೆ. ಹಳ್ಳಿಯ ಹಾಗೂ ಪಟ್ಟಣದ ಜೀವನವನ್ನು ಪರಿಚಯಿಸುವ ಚಿತ್ರಗಳಿವೆ. ಬೇಸಾಯ ಚಟುವಟಿಕೆಗಳಾದ ಉಳುಮೆ, ಚಕ್ಕಡಿ ಓಟ, ಬಿತ್ತನೆ, ಧಾನ್ಯ ಸಂಸ್ಕರಣೆ, ಅಡುಗೆ ತಯಾರಿ, ಗ್ರಾಮೀಣ ಕ್ರೀಡೆಗಳೂ ಸೇರಿದಂತೆ 20 ರಿಂದ 25 ವೈವಿಧ್ಯಮಯ ಚಿತ್ರಗಳು ಇಲ್ಲಿ ಅರಳಿವೆ. ಈ ಚಿತ್ರಗಳು ಅರಣ್ಯ,ಪರಿಸರ, ಜಲ ಸಂರಕ್ಷಣೆಯ ಪಾಠಗಳನ್ನೂ ಹೇಳುತ್ತವೆ. ಪುಟ್ಟ ಮಕ್ಕಳಿಗಾಗಿ ವಿಮಾನ, ಹಳೆಕಾಲದ ಉಗಿಬಂಡಿ,  ಬಸ್ಸು, ಲಾರಿ, ಮೋಟರ್ ಬೈಕ್ ಮತ್ತಿತರ ವಾಹನಗಳ ಚಿತ್ರಗಳಿವೆ.

‘ಇಲ್ಲಿನ ವರ್ಲಿ ಚಿತ್ರಗಳಲ್ಲಿ ವೈವಿಧ್ಯತೆ ಇದೆ. ಮಕ್ಕಳು ಬಹಳ ಆಸಕ್ತಿಯಿಂದ ಇವನ್ನು ಗಮನಿಸುತ್ತಾರೆ. ಊಟದ ಸಮಯದಲ್ಲಿ, ಬಿಡುವಿನ ವೇಳೆಯಲ್ಲಿ ಚಿತ್ರಗಳ ಮೇಲೆ ಕಣ್ಣು ಹಾಯಿಸುತ್ತಾರೆ. ಚಿತ್ರಗಳನ್ನು ತೋರಿಸುತ್ತಾ  ಶಿಕ್ಷಕರನ್ನು ಪ್ರಶ್ನಿಸುವುದನ್ನು ನಾನು ಗಮನಿಸಿದ್ದೇನೆ ಎನ್ನುತ್ತಾರೆ ಗುಪ್ತ.

ಮಕ್ಕಳ ಮನೋ ವಿಕಾಸ: ‘ಮಕ್ಕಳ ಮುಗ್ಧ ಮನಸ್ಸುಗಳಿಗೆ ಖುಷಿ ಕೊಡುವಂತಹ ಚಿತ್ರ ಬಿಡಿಸಬೇಕು. ಆ ಚಿತ್ರ ನೋಡಿದ ಕೂಡಲೇ ಮಕ್ಕಳು ತಾವೂ ಚಿತ್ರ ಬರೆಯಲು ಮುಂದಾಗಬೇಕು. ಅದಕ್ಕೆಂದೇ ‘ವರ್ಲಿ ಚಿತ್ರ ಕಲೆಯನ್ನು ಆಯ್ಕೆ ಮಾಡಿಕೊಂಡೆ’ ಎನ್ನುತ್ತಾರೆ ಸೋಮವರದ. ವರ್ಲಿ ಚಿತ್ರ ರಚಿಸುವುದು ಸುಲಭ ಹಾಗೂ ಅವು ಜನರಿಗೆ ನೋಡುತ್ತಿದ್ದಂತೆ ಅರ್ಥವಾಗಿಬಿಡುತ್ತವೆ ಎನ್ನುವುದು ಸೋಮವರದ ಅವರ ಅಭಿಪ್ರಾಯ.

ಚಿತ್ರಗಳಿಗೆ ಹಸಿರು ಮತ್ತು ಬಿಳಿ ಬಣ್ಣಗಳನ್ನು ಮಾತ್ರ ಬಳಸಿದ್ದೇನೆ. ‘ಹಸಿರು ನಿಸರ್ಗದ ಸಂಕೇತ. ಅದು ಕಣ್ಣಿಗೆ ತಂಪು ನೀಡುತ್ತದೆ. ಶಾಲೆಯ ಹಿಂಭಾಗದಲ್ಲಿ ಮರಗಳಿವೆ. ಹಸಿರು ಹಿನ್ನೆಲೆಯಲ್ಲಿ ಬಿಳಿ ಗೆರೆಗಳು ಎದ್ದುಕಾಣುತ್ತವೆ ಎನ್ನುತ್ತಾರೆ.

ಮಾಧ್ಯಮಿಕ ಶಾಲೆ ಮಕ್ಕಳಿಗೆ ಚಿತ್ತ ನೋಡುವಲ್ಲಿ ಆಸಕ್ತಿ

ಶಾಲೆಯ ಚಿತ್ರಗಳು ಮಕ್ಕಳ ಪಾಲಕರು ಹಾಗೂ ಸಾರ್ವಜನಿಕರಿಗೂ ಇಷ್ಟವಾಗಿವೆ. ಚಿತ್ರಗಳನ್ನು ನೋಡಿ ಉತ್ತೇಜನಗೊಂಡಿರುವ ಅನೇಕ ಪಾಲಕರು ತಮ್ಮ ಮನೆಗಳ ಗೋಡೆಗಳ ಮೇಲೆ ವರ್ಲಿ ಚಿತ್ರಗಳನ್ನು ಬರೆಸಲು ಮುಂದಾಗಿದ್ದಾರೆ. ಗುಪ್ತ ಅವರೂ ತಮ್ಮ ಹೊಸ ಶಾಲಾ ಕಟ್ಟಡದ ಗೋಡೆಗಳ ಮೇಲೂ ವರ್ಲಿ ಚಿತ್ರಗಳನ್ನೇ  ಬರೆಸಲು ನಿರ್ಧರಿಸಿದ್ದಾರೆ.

ಟ್ವಿಂಕ್ಲರ್ಸ್‌ ವಿದ್ಯಾನಿಕೇತನ ಶಾಲೆಯ ಈ ಪ್ರಯತ್ನ ಅನೇಕ ಶೈಕ್ಷಣಿಕ ಸಂಸ್ಥೆಗಳಿಗೆ ಮಾದರಿಯಾಗಿದೆ. ಭಾರೀ ಹಣ ಖರ್ಚು ಮಾಡಿ ಶಾಲೆಯ ಗೋಡೆಗಳ ಮೇಲೆ ಬಣ್ಣಗಳ ರಾಡಿ ಎಬ್ಬಿಸುವ ಬದಲು ಸೌಮ್ಯ ಬಣ್ಣಗಳನ್ನು ಬಳಸಿಕೊಂಡು ಆಕರ್ಷಕ ಚಿತ್ರಗಳನ್ನು ಬರೆಸುವುದು ಹೆಚ್ಚು ಪರಿಣಾಮಕಾರಿ.

ಟ್ವಿಂಕ್ಲರ್ಸ್‌ ವಿದ್ಯಾನಿಕೇತನ ಶಾಲೆಯ ದೂರವಾಣಿ ನಂಬರ್- 23213135. ಸೋಮವರದ ಅವರ ಮೊಬೈಲ್ ನಂಬರ್ – 9743512174.

ನಗರದತ್ತ ಗ್ರಾಮೀಣರ ಚಿತ್ತ

ಹಳ್ಳಿ ಮಾರಾಟವಾಗಿದೆ !
ಕೆಲವು ತಿಂಗಳುಗಳ ಹಿಂದೆ ಗೆಳೆಯ ಪತ್ರಕರ್ತ ಶಿವಾನಂದ ಕಳವೆ ಹೀಗೊಂದು ಸುದ್ದಿ ಹೇಳಿದರು. ಅಚ್ಚರಿಯಾಯ್ತು. ಜಮೀನು, ಮನೆ ಮಾರಾಟವಾಗಿದ್ದನ್ನು ಕೇಳಿದ್ದೆ. ಊರಿಗೇ ಊರೇ ವ್ಯಾಪಾರವಾಯ್ತು ಅಂದಾಗ, ಇದು ಎಂಥಾ ದುರಂತ ಎನ್ನಿಸಿತು.
ಹಾಗೆ ಮಾರಾಟವಾದ ಊರಿನ ಹೆಸರು ಮೇಗನಿ. ಉತ್ತರ ಕನ್ನಡ ಜಿಲ್ಲೆಯ ಪುಟ್ಟ ಹಳ್ಳಿ. ಎಂಟು ಮನೆಗಳ ಗ್ರಾಮ. ಕೊಲ್ಲೂರು ಸಮೀಪದ ಗುಡ್ಡದ ಮೇಲಿರುವ ಈ ಊರು ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ. ಸಂಚಾರ, ವಿದ್ಯುತ್.. ಎಲ್ಲವೂ ಅವ್ಯವಸ್ಥೆ. ಹಾಗಾಗಿ ಇಲ್ಲಿನ ಮಕ್ಕಳೆಲ್ಲ ದೂರದ ಊರಿನಲ್ಲಿ ಅಕ್ಷರ ಕಲಿಯುತ್ತಿದ್ದಾರೆ. ಈ ಊರಿನ ಗಂಡು ಮಕ್ಕಳಿಗೆ ಹೆಣ್ಣು ಕೊಡುವುದಿಲ್ಲ. ಇಲ್ಲಿನ ಹೆಣ್ಣು ಮಕ್ಕಳನ್ನು ಯಾರೂ ಮದುವೆಯಾಗುವುದಿಲ್ಲ. ಇಂಥ ತಾಪತ್ರಯ ಬೇಡ ಅಂತ ಊರಿಗೆ ಊರೇ ಮಾರಿದರು ಹಳ್ಳಿಗರು. ಹೀಗೆ ಮಾರಾಟ ಮಾಡಿ ಹಣ ಪಡೆದವರು ಅದೇ ಊರಿನಲ್ಲಿರುವ ತಮ್ಮದೇ ಜಮೀನಿನಲ್ಲೇ ಕೂಲಿ ಕೆಲಸಕ್ಕೆ ದುಡಿಯುತ್ತಿದ್ದಾರೆ, ಆ ಜಮೀನಿನ ಮಾಲೀಕರು ಮಾತ್ರ ಬದಲಾಗಿದ್ದಾರೆ !
****
ಹಳ್ಳಿ ಮಾರಾಟದ ಈ ಕಥೆ – ನಮ್ಮ ಗ್ರಾಮೀಣ ಭಾರತದಲ್ಲಿನ ಹಳ್ಳಿಗಳ ಪರಿಸ್ಥಿತಿಯ ಒಂದು ತುಣಕು. ಇಂಥ ಅದೆಷ್ಟೋ ಸಮಸ್ಯೆಗಳ ಸಾಲಿನಿಂದಾಗಿ ಸಾಕಷ್ಟು ಹಳ್ಳಿಗಳು ಇಂದು ಬರಿದಾಗುತ್ತಿವೆ. ಹವಾಮಾನ ವೈಪರೀತ್ಯ, ಬೆಳೆ ನಷ್ಟ, ವ್ಯಕ್ತಿ ಗೌರವದ ಕೊರತೆ.. ಹೀಗೆ ಹಲವು ಕಾರಣಗಳಿಂದ ಜಮೀನು ಉಳ್ಳವರು ಹಳ್ಳಿ ಬಿಟ್ಟು ಪಟ್ಟಣ ಸೇರುತ್ತಿದ್ದಾರೆ. ತುಂಬು ಕುಟುಂಬದಂತಿದ್ದ ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ.

೪೦ ವರ್ಷದ ನಂತರದವರು ಮಾತ್ರ ಹಳ್ಳಿಗಳ ತೋಟ, ಹೊಲಗಳಲ್ಲಿ ದುಡಿಯುತ್ತಿದ್ದಾರೆ. ಹಳ್ಳಿಗಳಲ್ಲಿ ಹುಡುಕಿದರೂ ೨೫-೩೫ರ ಹರೆಯದ ಯುವಕರು ದೊರಯುವುದು ಕಷ್ಟ. ಇದೇ ಪರಿಸ್ಥಿತಿಯಲ್ಲಿ ೨೦ ವರ್ಷದ ಬಳಿಕ ನಮ್ಮ ಹಳ್ಳಿ ಭವಿಷ್ಯ ಏನಾಗುತ್ತದೆ? ಎಂದು ಚರ್ಚೆ ಆರಂಭಿಸಿದರೆ, ಎರಡು ವರ್ಷಕ್ಕೆ ಏನಾಗುತ್ತದೆ ಎಂಬುದೇ ತಿಳಿದಿಲ್ಲ ಎಂಬ ದಿಗಿಲು ಎದೆ ನಡುಗಿಸುತ್ತಿದೆ.

ಹಳ್ಳಿಯಿಂದ ಪಟ್ಟಣಕ್ಕೆ ವಲಸೆ ಬರುತ್ತಿರುವವರದ್ದು ಒಬ್ಬೊಬ್ಬರದ್ದು ಒಂದೊಂದು ಸಮಸ್ಯೆ. ಮಲೆನಾಡು, ಘಟ್ಟ ಪ್ರದೇಶ, ಕರಾವಳಿಯಲ್ಲಿ ಕೂಲಿಕಾರ್ಮಿಕರ ಸಮಸ್ಯೆ. ಉತ್ತರ ಕರ್ನಾಟಕ ಹಾಗೂ ಬಯಲು ಸೀಮೆಯಲ್ಲಿ ಮಳೆ ಕೊರತೆ, ಉತ್ಪಾದನೆ ಕ್ಷೀಣ. ಈ ಭಾಗಗಳಲ್ಲಿರುವ ಸಾಮಾನ್ಯ ಸಮಸ್ಯೆಗಳೆಂದರೆ ಹವಾಮಾನ ವೈಪರೀತ್ಯ, ಬೆಳೆಗೆ ಸಿಗದ ವ್ಶೆಜ್ಞಾನಿಕ ಬೆಲೆ, ರೈತರ ಮಕ್ಕಳಿಗೆ ಹೆಣ್ಣು ಕೊಡುವುದಿಲ್ಲ, ಕೃಷಿ ಕುಟುಂಬಕ್ಕೆ ದೊರಕದ ವ್ಯಕ್ತಿ ಗೌರವ.

ಇತ್ತೀಚೆಗಿನ ವರ್ಷಗಳಲ್ಲಿ ಗಣಿಗಾರಿಕೆ ಮತ್ತು ರಿಯಲ್ ಎಸ್ಟೇಟ್, ವಿಶೇಷ ಆರ್ಥಿಕ ವಲಯ (ಎಸ್‌ಇಎಜ್)ದಿಂದಾಗಿ ಭೂಮಿ ಸ್ವಾಧೀನ ಪ್ರಕ್ರಿಯೆಗಳಿಂದಾಗಿ ಜನರು ಅನಿವಾರ್ಯವಾಗಿ ಬೇರೆ ಕಡೆಗೆ ವಲಸೆ ಹೋಗಬೇಕಿದೆ. ಇತ್ತೀಚೆಗೆ ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲಿ ನಡೆದ ಘಟನೆಗಳು ಸಂಕಟಪಡುವಂತಹವು. ಅಭಿವೃದ್ಧಿ ಹೆಸರಲ್ಲಿ ಹೀಗೆ ಹುಟ್ಟಿದ ಊರನ್ನು, ನೆಟ್ಟ ಗಿಡ-ಗಂಟೆಗಳನ್ನು, ತಲೆತಲಾಂತರದಿಂದ ಉತ್ತಿ-ಬಿತ್ತಿ-ಬೆಳೆದ ಭೂಮಿ ತಾಯಿಯನ್ನು ಬಿಟ್ಟು ಹೋಗುವುದು ಎಷ್ಟು ಕಷ್ಟ ಅಲ್ವಾ ?

ಒಂದು ಕಡೆ ಸಮಸ್ಯೆಗಳಿಂದಾಗಿ ಜನ ಹಳ್ಳಿ ತೊರೆಯುತ್ತಿದ್ದಾರೆ. ಇನ್ನೊಂದೆಡೆ ವ್ಯಕ್ತಿ ಗೌರವಕ್ಕಾಗಿ (ರೆಕಗ್ನೀಷನ್‌ಗಾಗಿ) ಪಟ್ಟಣಕ್ಕೆ ವಲಸೆ ಬರುವವರ ಸಂಖ್ಯೆ ಹೆಚ್ಚುತ್ತಿದೆ.
ಬೆಂಗಳೂರಿನಲ್ಲಿರುವ ವರ್ಷಕ್ಕೆ ೧೨ ಲಕ್ಷ ತೆಗೆದುಕೊಳ್ಳುವ ಸಾಫ್ಟ್‌ವೇರ್ ಎಂಜಿನಿಯರ್‌ಗೆ ಮಗಳನ್ನು ಕೊಡುತ್ತಾರೆ ಹೆತ್ತಮ್ಮಂದಿರು. ಅವರ ಊರಿನ ಪಕ್ಕದಲ್ಲಿರುವ ರೈತರೊಬ್ಬರ ಮಗ ಅದರ ಒಂದೂವರೆ ಪಟ್ಟು ಹಣ ಸಂಪಾದಿಸುತ್ತಾನೆ. ಆದರೆ ಅವನಿಗೆ ಹೆಣ್ಣು ಕೊಡುವುದಿಲ್ಲ.

ಅಪ್ಪಂದಿರಿಗೆ ಮಗ ಊರಿನಲ್ಲಿ ಉಳಿಯಬೇಕೆಂಬ ಆಸೆಯಿದೆ. ತನ್ನ ಕೃಷಿ ಬದುಕನ್ನು ಉಳಿಸಿಕೊಂಡು ಹೋಗಲೆಂಬ ಹಂಬಲವಿದೆ. ಆದರೆ ತಾಯಿ, ತನ್ನ ಗಂಡ ಈ ಕೊಂಪೆಯಲ್ಲಿ ಏಗಿದ್ದು ಸಾಕು. ಮಗನಾದರೂ ಚೆನ್ನಾಗಿರಲಿ ಅಂತ ಪಟ್ಟಣದಲ್ಲೇ ನೆಲಸಲು ಪ್ರೋತ್ಸಾಹಿಸುತ್ತಾಳೆ. ಅಮ್ಮನ ಮಾತು ವೇದವಾಖ್ಯವಾಗುತ್ತದೆ. ಮಕ್ಕಳು ಊರು ತೊರೆಯಲು ಸಿದ್ಧರಾಗುತ್ತಾರೆ.

ಇವತ್ತು ಹವ್ಯಕ ಸಮುದಾಯದಲ್ಲಿ ಇಂಥದ್ದೊಂದು ಸಮಸ್ಯೆ ಎದುರಾಗಿದೆ. ಆ ಸಮುದಾಯದಲ್ಲಿ ಹೆಣ್ಣು- ಗಂಡಿನ ಅನುಪಾತದಲ್ಲಿ ತೀರಾ ವ್ಯತ್ಯಾಸವಿದೆ. ಹೆಣ್ಣು ಮಕ್ಕಳ ಸಂಖ್ಯೆ ಕ್ಷೀಣ. ಈ ಸಮುದಾಯದಲ್ಲಿ ಎರಡು ವರ್ಗದ ವ್ಯಕ್ತಿಗಳಿದ್ದಾರೆ. ಒಂದು ವರ್ಗದವರು ಉನ್ನತ ವ್ಯಾಸಂಗ ಮಾಡಿ ಪಟ್ಟಣ ಸೇರಿ ಕೈತುಂಬಾ ಸಂಬಳ ಪಡೆಯುತ್ತಾರೆ. ಇನ್ನೊಂದು ವರ್ಗದವರು ಸಂಬಳಕ್ಕಿಂತ ಹೆಚ್ಚಾಗಿ ಕೃಷಿಯಲ್ಲೇ ಹಣ ಗಳಿಸುತ್ತಾರೆ. ಇವರಿಬ್ಬರ ಆದಾಯದಲ್ಲಿ ವ್ಯತ್ಯಾಸವಿಲ್ಲ. ಆದರೆ ಹಳ್ಳಿಯಲ್ಲಿರುವ ವ್ಯಕ್ತಿಯನ್ನು ಅದೇ ಸಮುದಾಯದವರು ಮದುವೆಯಾಗಲು ಒಲ್ಲೆ ಎನ್ನುತ್ತಾರೆ. ರೂಪ, ವಿದ್ಯೆ, ಆದಾಯ ಎಲ್ಲವೂ ಇದ್ದರೂ ರೈತರಾಗಿದ್ದಾರೆ, ಹಳ್ಳಿಯಲ್ಲಿದ್ದಾರೆ ಎಂಬ ಕಾರಣಕ್ಕೆ ಮದುವೆಯಾಗುವುದಿಲ್ಲ. ಈ ಸಾಮಾಜಿಕ ಸಮಸ್ಯೆಯಿಂದಾಗಿ ಉತ್ತರ ಕನ್ನಡದ ಗಂಡು ಮಕ್ಕಳು ಪಟ್ಟಣದಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.

ಯುವಕರ ವಲಸೆ ಹೆಚ್ಚಿಸಿದ ಸಾಫ್ಟ್‌ವೇರ್ ಕ್ರಾಂತಿ :
ಗ್ರಾಮೀಣ ವ್ಯವಸ್ಥೆ ಹದಗೆಡಲು ಇವತ್ತಿನ ಕೃಷಿ ಸಮಸ್ಯೆಗಳಷ್ಟೇ ಕಾರಣವಲ್ಲ. ಕಳೆದ ದಶಕಗಳಿಂದ ನಮ್ಮಲ್ಲಿ ಬದಲಾಗುತ್ತಿರುವ ಶೈಕ್ಷಣಿಕ ಪ್ರಗತಿ ಮತ್ತು ಶಿಕ್ಷಣ ವ್ಯವಸ್ಥೆಯೂ ಕಾರಣ. ನಮ್ಮ ರಾಜ್ಯದಲ್ಲಿ ಗ್ರಾಮೀಣ ವಲಸೆ ಗುರುತಿಸುವ ರೀತಿಯಲ್ಲಿ ಆರಂಭವಾಗಿದ್ದು ೯೦ರ ದಶಕದಲ್ಲಿ. ಖ್ಯಾತ ಸಮಾಜಶಾಸ್ತ್ರಜ್ಞ ದೀಪಾಂಕರ ಗುಪ್ತಾ ಅವರ ತಮ್ಮ ಪ್ರಬಂಧವೊಂದರಲ್ಲಿ ಉಲ್ಲೇಖಿಸಿರುವಂತೆ ಮೂರ‍್ನಾಲ್ಕು ದಶಕಗಳ ಹಿಂದೆ ಉತ್ತರ ಭಾರತದಲ್ಲಿ ಗ್ರಾಮೀಣ ವಲಸೆ ಆರಂಭವಾಗಿತ್ತು. ಕೃಷಿ ವಲಯದಲ್ಲಿ ಉಂಟಾಗುತ್ತಿದ್ದ ಏರುಪೇರು, ಜೀವನ ನಡೆಸಲು ದುಸ್ತರ ಎಂದು ಉತ್ತರ ಭಾರತದ ಹಳ್ಳಿಗಳಲ್ಲಿನ ಕೃಷಿಕರು ಮಹಾನಗರಗಳಿಗೆ ವಲಸೆ ಬರಲು ಆರಂಭಿಸಿದರು.

ಕೃಷಿ ಸಮಸ್ಯೆ, ಮೂಲಸೌಲಭ್ಯಗಳ ಕೊರತೆಯಿಂದಾಗಿ ರಾಜ್ಯದಲ್ಲಿ ವಲಸೆ ಆರಂಭವಾಯಿತು. ಇದು ಮೇಲ್ನೋಟಕ್ಕೆ ಕಾಣುವ ಸತ್ಯ. ಆದರೆ ವಲಸೆಯ ಮೂಲ ಇರುವುದು ಶೈಕ್ಷಣಿಕ ಪ್ರಗತಿಯಲ್ಲಿ ಎನ್ನುವುದು ಗಮನಿಸಬೇಕಾದ ಅಂಶ.

ಶೈಕ್ಷಣಿಕ ಪ್ರಗತಿ ಏರುತ್ತಿರುವಂತೆ ಗ್ರಾಮೀಣ ಪ್ರದೇಶದಿಂದ ಕೃಷಿಯೇತರ ಕ್ಷೇತ್ರಗಳೆಡೆಗೆ ನಗರ ವಲಸೆ ಹೆಚ್ಚಿದೆ. ಉನ್ನತ ಶಿಕ್ಷಣ ಕಲಿತವರು ಹಳ್ಳಿಗಳಿಗೆ ಹಿಂದಿರುಗುತ್ತಿಲ್ಲ. ಒಂದೂವರೆ ದಶಕದ ಹಿಂದೆ ಶಿಕ್ಷಣ ಮತ್ತು ಕೈಗಾರಿಕಾ ಕ್ಷೇತ್ರ ಪ್ರವೇಶಿಸಿದ ಸಾಫ್ಟ್‌ವೇರ್ ಕ್ರಾಂತಿ ಗ್ರಾಮೀಣದಲ್ಲಿನ ಬುದ್ಧಿವಂತ ಯುವಕರನ್ನು ಅಯಸ್ಕಾಂತದಂತೆ ಸೆಳೆಯಿತು. ಪಿಯುಸಿ ಪಾಸಾದವರು, ಡಿಗ್ರಿ ಫೇಲಾದವರು, ಮಾತು ಬಲ್ಲವರು, ಅಂದವಾಗಿರುವವರು ಬಹುರಾಷ್ಟ್ರೀಯ ಕಂಪೆನಿಗಳ ಹಿಂದೆ ಓಡಿದ್ದಾರೆ. ತಿಂಗಳ ಸಂಬಳ ನಾಲ್ಕಂಕೆ ದಾಟಿದೆ. ಎಕರೆ ಕೃಷಿಯ ಆದಾಯವನ್ನು ಕಂಪ್ಯೂಟರ್ ಎಂಜಿನಿಯರ್ ತನ್ನ ಒಂದು ತಿಂಗಳ ಸಂಬಳಕ್ಕೆ ಹೋಲಿಸಿ ನೋಡಲಾರಂಭಿಸಿದ್ದಾರೆ. ಎಂಜಿನಿಯರ್ ಅಪ್ಪ ಕೂಡ, ತನ್ನ ವಾರ್ಷಿಕ ಕೃಷಿ ಆದಾಯವನ್ನು ಮಕ್ಕಳ ಸಂಬಳಕ್ಕೆ ಹೋಲಿಸುತ್ತಾ, ಎಷ್ಟು ಕಡಿಮೆಯಾಯ್ತು ಎಂದು ಅಲ್ಲಗೆಳೆದ. ಹೀಗೆ ಕೃಷಿಯ ಒಟ್ಟೂ ಆದಾಯ, ಖರ್ಚಿನ ತುಲನೆಯಲ್ಲಿ ಬೇಸಾಯ ಬಡವಾಯಿತು. ಆ ಬಡತನ ಈಗಲೂ ಮುಂದುವರಿದಿದೆ. ಶೈಕ್ಷಣಿಕ ಕ್ರಾಂತಿ ಹಳ್ಳಿಯನ್ನು ಬರಿದಾಗಿಸುತ್ತಿದೆ.

ಇವೆಲ್ಲದರ ಹಿಂದೆ ಅಪ್ಪ ಅಮ್ಮಂದಿರ ಕಾಣಿಕೆಯೂ ಇಲ್ಲದಿಲ್ಲ. ಶಾಲೆಗೆ ಹೋಗುವ ಮಕ್ಕಳಿಗೆ ಯೂನಿಫಾರಂ ತೊಡಿಸಿ, ಟೈಕಟ್ಟಿ, ಸೊಂಟ್ಟಕ್ಕೆ ಬೆಲ್ಟ್ ಕಟ್ಟುತ್ತಾ… ನನ್ನ ಹಾಗೆ ನೀವು ಮೈ-ಕೈ ಕೊಳೆ ಮಾಡ್ಕೊಳ್ಳೋದು ಬೇಡ. ನೀನೊಬ್ಬ ದೊಡ್ಡ ಆಫೀಸರ್ ಆಗಬೇಕು. ಡಾಕ್ಟರ್ ಆಗಬೇಕು.. ಎಂಜಿನಿಯರ್ ಆಗಬೇಕು.. ಎಂದು ಮಕ್ಕಳ ತಲೆಗೆ ಪಟ್ಟಣದ ಬಣ್ಣದ ಬದುಕನ್ನು ತುಂಬಿದ್ದಾರೆ. ಆಗಿನಿಂದಲೇ ಉಣ್ಣುವ ಅನ್ನದ ಮೂಲ ಅರ್ಥವಾಗದಂತೆ ಮಕ್ಕಳನ್ನು ಬೆಳೆಸುವ ಪರಿಪಾಟ ಬೆಳೆದಿದೆ. ಕೃಷಿ ಚಟುವಟಿಕೆಗಳು, ಹಳ್ಳಿ ಸಂಸ್ಕೃತಿ ಎನ್ನುವುದು ಶಾಲೆಯ ಪಾಠಗಳಿಗಷ್ಟೇ ಸೀಮಿತವಾಗಿದೆ. ಭತ್ತ, ರಾಗಿ, ಬೇಳೆ ಕಾಳು, ಕೃಷಿ ಬದುಕನ್ನು ಪ್ರಾಯೋಗಿಕವಾಗಿ ಹೇಳುವಂತಹ ಶಿಕ್ಷಣ ಇಲ್ಲದಂತಾಗಿದೆ. ಮಣ್ಣಲ್ಲಿ ಬೇರುಬಿಡಿಸಿ ಬದುಕಿನ ದಾರಿ ತೋರಿಸಿದ ಕೃಷಿಕರಿಗಿಂತ ರಾಜಕೀಯ ಮುತ್ಸದ್ದಿಗಳ ಜೀವನ ಓದುವುದು ಪರೀಕ್ಷೆಯಾಗಿದೆ. ಇದೆಲ್ಲದರ ಜೊತೆಗೆ ಸಣ್ಣ ವಯಸ್ಸಿನಲ್ಲೇ ಊರು ಬಿಡಲು ಮಕ್ಕಳ ಜೇಬಲ್ಲಿ ಪಾಸ್‌ಪೋರ್ಟ್, ವೀಸಾ ತುರುಕಿದ್ದೇವೆ. ಇದ್ದೊಬ್ಬ ಮಗನನ್ನು ನಗರದ ನೌಕರಿಗೆ ಕಳಿಸಿ, ಈಗ ಕೃಷಿ ನಿರ್ವಹಣೆಗೆ ಜನಗಳಿಲ್ಲ ಎಂದು ಸಬೂಬು ಹೇಳುತ್ತಾ ಕಾಲಹರಣ ಮಾಡುತ್ತಿದ್ದೇವೆ. ಹಳ್ಳಿ ಖಾಲಿ ಮಾಡುತ್ತಿದ್ದೇವೆ. ಇಂಥದ್ದೊಂದು ತಳಹದಿ ಮೇಲೆ ಬೆಳೆದ ಮಕ್ಕಳು ಹಳ್ಳಿಯಲ್ಲಿರುವುದಾದರೂ ಹೇಗೆ ?

ದಿಢೀರ್ ದುಡ್ಡು ಮಾಡುವ ಕನಸು:
ಶೈಕ್ಷಣಿಕ ಪ್ರಗತಿ ಒಂದೆಡೆ ಗ್ರಾಮೀಣರನ್ನು ಪಟ್ಟಣಕ್ಕೆ ಸೆಳೆಯುತ್ತಿದ್ದರೆ, ಇನ್ನೊಂದೆಡೆ ದಿಢೀರ್ ದುಡ್ಡು ಮಾಡುವ ಪ್ರವೃತ್ತಿ ಕೂಡ ಪಟ್ಟಣದ ರುಚಿ ಹತ್ತಿಸಿದೆ. ಇಂದು ಬಿತ್ತಿ, ನಾಳೆ ಬೆಳೆದು, ನಾಡಿದ್ದು ಹಣ ಸಂಪಾದಿಸಲು ವಿವಿಧ ಬೆಳೆಗಳ ಪ್ರಯೋಗ ನಡೆಸಿದ ರೈತರಲ್ಲಿ ಕೈ ಸುಟ್ಟುಕೊಂಡವರೇ ಹೆಚ್ಚು. ಹೀಗೆ ಹಳ್ಳಿಯಲ್ಲಿ ಸೋಲು ಕಂಡವರು, ಪಟ್ಟಣದಲ್ಲಿ ಗೆಲುವು ಹುಡುಕುತ್ತಾ ಹೊರಟರು. ಬಾಡಿಗೆ ರೂಮು ಹಂಚಿಕೊಂಡು, ಶಿಫ್ಟ್‌ಗಳಲ್ಲಿ ಕೆಲಸ ಹುಡುಕಿಕೊಂಡರು. ಮೊದಲು ಒಬ್ಬ, ನಂತರ ಮತ್ತೊಬ್ಬ.. ಹೀಗೆ ಒಬ್ಬರ ಕೈ ಹಿಡಿದು ಎಳೆಯುತ್ತಾ ಹಳ್ಳಿ ಬಿಟ್ಟರು.
ಹೀಗೆ ಬದಲಾದ ಮನಸ್ಥಿತಿಯಿಂದಾಗಿ ಹಳ್ಳಿಗಳಲ್ಲಿನ ಅವಿಭಕ್ತ ಕುಟುಂಬಗಳಲ್ಲಿ ಬಿರುಕು ಉಂಟಾಯಿತು. ಹಳ್ಳಿಗಳಲ್ಲಿ ಅಪ್ಪ-ಅಮ್ಮನ ಜೊತೆಯಿದ್ದ ಮಕ್ಕಳೂ ಕೂಡ, ಪಟ್ಟಣದ ಸಹೋದರರ ದಾರಿ ಹಿಡಿಯಲು ಸಿದ್ಧರಾದರು. ಹೀಗಾಗಿ ಮನೆಗಳು ಇಬ್ಬಾಗವಾದವು. ಮನೆ ಮನೆಗಳ ನಡುವೆ ಗೋಡೆ ಎದ್ದಿತು. ಅದು ಮನಸ್ಸುಗಳ ನಡುವೆಯೂ ಗೋಡೆ ಕಟ್ಟುತ್ತಿದೆ. ಹದ ಮಳೆ ಬಿದ್ದ ಕೂಡಲೇ ಹೊಲದ ಕಡೆ ಹೆಜ್ಜೆ ಹಾಕುತ್ತಿದ್ದವರು, ಈಗ ಪಟ್ಟಣದಲ್ಲಿ ಕುಳಿತು ಮಳೆಯನ್ನು ಶಪಿಸುವ ಮಟ್ಟಕ್ಕೆ ಬದಲಾಗಿದ್ದಾರೆ.

ಜಾಗತೀಕರಣ, ಉದಾರೀಕರಣ :
ಜಾಗತಿಕರಣದ ಪ್ರಭಾವದಿಂದಾಗಿ ವಿದೇಶಿ ಕಂಪೆನಿಗಳು ನಮ್ಮ ನೆಲದಲ್ಲಿ ಗುತ್ತಿಗೆ ಕೃಷಿ  ಬೀಜ ಬಿತ್ತಿದವು. ಆನಂತರದಲ್ಲಿ ಗ್ರಾಮೀಣ ಪರಿಸ್ಥಿತಿಯೇ ಬದಲಾಯಿತು. ವೆನಿಲ್ಲಾದಂತಹ ಚಿನ್ನದ ಬೆಳೆಗಳು ಅನೇಕ ಆಸೆಗಳನ್ನು ಹುಟ್ಟಿಸಿ ಕೆಲವೇ ವರ್ಷದಲ್ಲಿ ನಿರಾಸೆ ಮೂಡಿಸಿತು. ನಂತರ ಬಹುರಾಷ್ಟ್ರೀಯ ಕಂಪೆನಿಗಳು ಶುಂಠಿ ಹಿಡಿದುಕೊಂಡು ಕೃಷಿ ಜಮೀನನ್ನು ಗುತ್ತಿಗೆ ಪಡೆಯಲು ಮಲೆನಾಡಿನ ಅಂಗಳಕ್ಕೆ ಜಿಗಿದವು. ಕೂಲಿಕಾರ್ಮಿಕರ ಕೊರತೆಯಿಂದ ಸೋತಿದ್ದ ರೈತರು, ಕಂಪೆನಿಗಳ ಜೊತೆ ಶುಂಠಿ ಬೆಳೆಯಲು ಒಪ್ಪಿಕೊಂಡವು. ಅಧಿಕ ಇಳುವರಿ, ರೋಗ ನಿಯಂತ್ರಣಕ್ಕಾಗಿ ಕಂಪೆನಿಗಳು ವರ್ಷಗಟ್ಟಲೆ ಜಮೀನಿಗೆ ವಿಷ ಸುರಿದವು. ಬಂದಿದ್ದೆಲ್ಲವನ್ನು ಬಾಚಿಕೊಂಡು ಮಣ್ಣಿನ ಫಲವತ್ತತೆ ಬರೀದು ಮಾಡಿದವು. ಮುಂದೊಂದು ದಿನ ಜಮೀನಿನಲ್ಲಿ ಏನೂ ಬೆಳೆಯದಾದಾಗ ಅನಿವಾರ್ಯವಾಗಿ ರೈತರು ಜಮೀನು ಮಾರಾಟ ಮಾಡುವ ಸ್ಥಿತಿ ಎದುರಾಯಿತು.

ಅನೇಕ ಸಮಸ್ಯೆಗಳ ನಡುವೆ ರೈತರು ಕಷ್ಟಪಟ್ಟು ಬೆಳೆದ ಬೆಳೆಗೆ ಸರಿಯಾದ ಮಾರುಕಟ್ಟೆ ಸಿಗಲಿಲ್ಲ. ಕಳೆದ ಒಂದು ದಶಕದಿಂದೀಚೆಗೆ ಬಹುರಾಷ್ಟ್ರೀಯ ಕಂಪೆನಿಗಳೆಲ್ಲ ಚಿಲ್ಲರೆ ಮಾರಾಟಕ್ಕೆ ಇಳಿದ ಮೇಲಂತೂ ದಲ್ಲಾಳಿಗಳ ಸಂಖ್ಯೆ ವಿಪರೀತವೆನ್ನುವಷ್ಟಾಯಿತು. ಬೆಳೆದ ರೈತನಿಗೆ ಅಸಲು ದೊರಕದ ರೀತಿಯಲ್ಲಿ ಮಾರುಕಟ್ಟೆ ವ್ಯವಸ್ಥೆ ನಿರ್ಮಾಣವಾಯಿತು. ಇವೆಲ್ಲದರ ಪರಿಣಾಮ ಬೆಳೆಗೆ ಬೆಲೆ ಸಿಗಲಿಲ್ಲ. ಗಳಿಸಿದ ಹಣ ಮಾಡಿದ ಸಾಲಕ್ಕೆ ಸಮವಾಯಿತು. ಮತ್ತೆ ಸಾಲ ಮಾಡಿ ಕೃಷಿ ಮಾಡಬೇಕಾದ ಪರಿಸ್ಥಿತಿ ಬಂತು. ಇಂಥ ಬದುಕಿನಿಂದ ಬೇಸತ್ತ ಕೃಷಿಕರು ಜಮೀನು ಗುತ್ತಿಗೆ ಕೊಟ್ಟು ತಾವು ಬೇರೆ ಪಟ್ಟಣಗಳಲ್ಲಿ ಕೆಲಸ ಹುಡುಕಿಕೊಂಡರು. ಇತ್ತ ಜಮೀನಿನಲ್ಲಿ ಹಣ ಸಿಕ್ಕಿತು. ಇನ್ರ್ನೆಂದೆಡೆ ದುಡಿಮೆಯೂ ಆಯಿತು.

ಹೀಗೆ ದುಬಾರಿ ಒಳಸುರಿ – ದಲ್ಲಾಳಿ ಮಾರಾಟ – ಬೆಲೆ ಏರಿಳಿತ- ಬ್ಯಾಂಕ್ ಸಾಲ.. ಇಂಥ ಹೊಡೆತ ತಾಳಲಾರದೇ ಬೇಸತ್ತ ರೈತರು ಊರು ಬಿಟ್ಟು ಪಟ್ಟಣಕ್ಕೆ ವಲಸೆ ಬಂದರು. ವರ್ಷಪೂರ್ತಿ ಕೃಷಿಯಲ್ಲಿ ದುಡಿಯಲಾಗದ್ದನ್ನೂ, ಪಟ್ಟಣದಲ್ಲಿ ಕೆಲಸಕ್ಕೆ ಸೇರಿ ದುಡಿಯಲಾರಂಬಿಸಿದರು.  ಕೈ ತುಂಬಾ ಹಣ  ಸಂಪಾದಿಸಿದರು. ಆದರೆ ಹಳ್ಳಿಯಲ್ಲಿ ಸಮಸ್ಯೆಗಳ ನಡುವೆ ಇದ್ದ ಖುಷಿಯ ಕ್ಷಣಗಳು ಮಾತ್ರ ನಾಪತ್ತೆಯಾಗಿವೆ ಎಂಬುದು ಅವರಿಗೆ ಅನ್ನಿಸಿತು.

ಮಾಧ್ಯಮಗಳ ಭರಾಟೆ – ಯವಕರ ವಲಸೆ
ತೆಂಗಿನ ನುಸಿಪೀಡೆ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಟೊಮೇಟೊ ಬೆಳೆಯಲ್ಲಿ ಸುಖವಿಲ್ಲ. ಕಾಫಿ ಕಾಯಿಕೊರಕ ಕಾಡುತ್ತಲೇ ಇದೆ. ಇಂಥ ಕೃಷಿಯಲ್ಲಿ ಸುಖ ಕಾಣುವುದೆಂತೋ.. ಹೀಗೆ ನೂರೆಂಟು ನೆಪಗಳನ್ನು ಮುಂದಿಟ್ಟುಕೊಂಡು ಗ್ರಾಮೀಣ ಮಕ್ಕಳು ಬೆಂಗಳೂರಿಗೆ ಓಡಿದ್ದಾರೆ.

ನಗರ ವಲಸೆಗೆ ಉದ್ಯೋಗ ಹುಡುಕಾಟ ಮಾತ್ರ ಕಾರಣ ಎಂದರೆ ಅದು ನಂಬುವ ವಿಷಯವಲ್ಲ. ಏಕೆಂದರೆ, ಇಂದಿನ ಯುವಕರಿಗೆ ಬದಲಾವಣೆ ಬೇಕಿದೆ. ಹಿರಿಯರ ಅಂಕೆ-ಶಿಕ್ಷೆಯಿಂದ ದೂರ ಬದುಕುವ ಆಸೆ ಹೆಚ್ಚಿದೆ. ಬಿಸಿಲಿನಲ್ಲಿ ನೇಗಿಲು ಹಿಡಿದು ಬೆವರಿಳಿಸುವುದು ಅವರಿಗೆ ಬೇಕಿಲ್ಲ. ಮಾಧ್ಯಮಗಳಲ್ಲಿ ಬಿತ್ತರವಾಗುವ ಕನಸಿನ ಬೀಜಗಳು, ವಯಸ್ಸಿಗೆ ಮೀರಿದ ಆಸೆಯನ್ನು ಹುಟ್ಟು ಹಾಕಿವೆ. ಅದಕ್ಕೆ ಬೇಕಾದ ಖರ್ಚಿನ ಗಳಿಕೆಗೆ ಕೆಲಸದ ಅವಶ್ಯಕತೆ. ಇವೆಲ್ಲ ಕಾರಣಗಳೂ ಯುವಕರನ್ನು ಪಟ್ಟಣದೆಡೆಗೆ ಆಕರ್ಷಿಸುತ್ತವೆ.

ಪಿಯುಸಿ ಫೇಲಾದರೂ ಕಾಲ್ ಸೆಂಟರ್‌ನಲ್ಲಿ ಕೆಲಸ. ಸಾವಿರಾರು ರೂಪಾಯಿ ಸಂಬಳ. ಉಂಡು – ಮಲಗುವ ಹೊತ್ತಿನಲ್ಲಿ ದುಡಿಮೆ, ಕೆಲಸ ಮಾಡುವ ಹೊತ್ತಿನಲ್ಲಿ ನಿದ್ದೆ. ವಾರಕ್ಕೆ ಐದು ದಿನ ಕೆಲಸ. ಆರೋಗ್ಯಕ್ಕೆ ಕುತ್ತು. ಅಕಾಲ ವೃದ್ಧಾಪ್ಯ ಪ್ರಾಪ್ತಿ. ಪರಿಣಾಮ ಅತ್ತ ಹಳ್ಳಿಗೆ ಹೋಗಲಾಗದೇ ಪಟ್ಟಣದಲ್ಲಿರಲೂ ಆಗದಂತಹ ತ್ರಿಶಂಕು ಸ್ಥಿತಿ ಗ್ರಾಮೀಣ ಯುವಕರದ್ದು.

ಪರಿಹಾರಗಳಿವೆ, ತಾಳ್ಮೆ ಸಂಯಮ ಬೇಕಿದೆ ;

ಹಳ್ಳಿಗಳಿಂದ ನಗರದ ವಲಸೆ ತಪ್ಪಿಸಲು, ಹಳ್ಳಿ ಮಕ್ಕಳನ್ನು ಹಳ್ಳಿಯಲ್ಲೇ ಉಳಿಸಲು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಪುರ ಎಂಬ ಯೋಜನೆ ರೂಪಿಸಲು ಸರ್ಕಾರಕ್ಕೆ ಸಲಹೆ ನೀಡಿದ್ದರು. ಹಳ್ಳಿಯಲ್ಲಿ ಮೂಲಭೂತ ಸೌಲಭ್ಯಕಲ್ಪಿಸಿ ಸಣ್ಣಪುಟ್ಟ ಕೈಗಾರಿಕೆ ಮುಖೇನ ಉದ್ಯೋಗ ಸೃಷ್ಟಿಸುವುದು ಈ ಸರ್ಕಾರಿ ಯೋಜನೆಯ ಉದ್ದೇಶ. ಅದಕ್ಕಾಗಿ ಗ್ರಾಮಗಳನ್ನೂ ಆಯ್ಕೆ ಮಾಡಲಾಗಿತ್ತು. ಈವರೆಗೂ ಯೋಜನೆಯ ಮಾತು ಕೇಳಿದ್ದೇವೆಯೇ ವಿನಃ ಪರಿಣಾಮ ಅರಿಯಲು ಸಾಧ್ಯವಾಗಿಲ್ಲ.

ಆದರೆ ನಗರದ ಸೌಲಭ್ಯಗಳನ್ನು ಹಳ್ಳಿಗೆ ನೀಡಿದ ಕೂಡಲೇ ಸಮಸ್ಯೆ ಬಗೆಹರಿಯುವುದಿಲ್ಲ. ಯಾವತ್ತೂ ಹಳ್ಳಿಗಳಿಗೆ ನಗರ ಮಾದರಿಯಲ್ಲ. ಹಳ್ಳಿಗಳು ನಗರಗಳ ಹಾಗೆ ಕಲ್ಲು, ಇಟ್ಟಿಗೆ, ಕಾಂಕ್ರಿಟ್‌ನಿಂದ ದಶಕಗಳಲ್ಲಿ ರೂಪುಗೊಂಡಿಲ್ಲ. ಶತಮಾನಗಳ ಹಿಂದೆ ಅಲೆಮಾರಿಗಳು ನದಿ ತಟದಲ್ಲಿ ಗುಡಿಸಿಲು ಕಟ್ಟಿದರು. ಕೃಷಿ ಭೂಮಿ ಗುರುತಿಸಿದರು. ಉಳುಮೆ ಮಾಡಿ ಭೂಮಿ ಹದ ಮಾಡಿದರು. ಉತ್ತಿದರು. ಬಿತ್ತಿದರು. ಹಾಡು ಹೇಳಿ, ಹಬ್ಬ ಮಾಡಿ, ಜಾತ್ರೆ ಮಾಡಿ, ಮನ-ಮನಗಳ ನಡುವೆ ಸಂಬಂಧದ ಕೊಂಡಿ ಬೆಸೆದರು. ಇಂಥ ಸಂಸ್ಕೃತಿಯ ಬೇಲಿಯಲ್ಲಿ, ಭಾವನಾತ್ಮಕ ಸಂಬಂಧಗಳ ನಡುವೆ ಹಳ್ಳಿಗಳು ನಿರ್ಮಾಣವಾಯಿತು. ಇಂಥ ಹಳ್ಳಿಗಳಿಗೆ ನಗರ ಸೌಲಭ್ಯಗಳು ದೊರೆತರೆ, ಅಲ್ಲಿ ಮತ್ತೊಂದು ಯಾಂತ್ರಿಕ ಜಗತ್ತು ನಿರ್ಮಾಣವಾಗುತ್ತದೆ.

ಹಳ್ಳಿಗಳಲ್ಲಿ ಏನಿದೆ ? ಎಂದು ಪ್ರಶ್ನಿಸುತ್ತಲೇ ಹಳ್ಳಿ ಖಾಲಿ ಮಾಡುತ್ತಿರುವ ಯುವಕರ ಸಂಖ್ಯೆ ಹೆಚ್ಚಾಗಿದೆ. ಪ್ರಸ್ತುತದ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ನಾವಿರುವ ಹಳ್ಳಿಯಲ್ಲೇ ಏನೆಲ್ಲಾ ಸಾಧಿಸುವ ಅವಕಾಶಗಳಿವೆ. ಅದಕ್ಕೆ ತಾಳ್ಮೆ ಬೇಕು, ಕಾಯುವ ಸಂಯಮ ಬೇಕು ಅಷ್ಟೇ.

ಒಮ್ಮೆ ನಮ್ಮ ರಾಜ್ಯದ ಹಳ್ಳಿಯಲ್ಲಿ ಬದುಕುತ್ತಾ ನೆಮ್ಮದಿ ಕಂಡವರ ಕಡೆಗೆ ಕಣ್ಣು ಹಾಯಿಸಿ. ಪಾವಗಡದ ಸಮೀಪವಿರುವ ಸಿ.ಕೆ.ಪುರ ಎಂಬ ಗ್ರಾಮದಲ್ಲಿ ವಿಜ್ಞಾನಿ ಶೇಷಗಿರಿ ರಾವ್ ಅವರು, ತಮ್ಮ ಊರಿನ ಜಮೀನುಗಳಲ್ಲೇ ಬೆಳೆಗಳಿಗೆ ತಗಲುವ ರೋಗ-ಕೀಟ ಬಾಧೆ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ. ಕರ್ನಾಟಕದ ಗಡಿಭಾಗ ಕಾಸರಗೋಡಿನ ಹಳ್ಳಿಯೊಂದರಲ್ಲಿ ಕುಳಿತ ಜಲಪತ್ರ ಶ್ರೀ ಪಡ್ರೆಯವರು ನಾಡಿನೆಲ್ಲೆಡೆ ಜಲ ಸಾಕ್ಷರತೆ ಮೂಡಿಸಿದ್ದಾರೆ. ಶಿರಸಿ ಸಮೀಪದ ಹಳ್ಳಿಯಲ್ಲಿರುವ ಗ್ರಾಮೀಣ ಪತ್ರಕರ್ತ ಶಿವಾನಂದ ಕಳವೆ ಗ್ರಾಮೀಣ ಬದುಕಿನ ತವಕ-ತಲ್ಲಣಗಳನ್ನು ನಾಡಿಗೇ ಪರಿಚಯಿಸುತ್ತಿದ್ದಾರೆ. ಹಾಸನ ಜಿಲ್ಲೆಯ ಸಂತೆಶಿವರದ ಬಸವರಾಜು ಬಿಎಸ್‌ಸಿ ಕೃಷಿ ಪದವೀಧರ. ೨೫ ವರ್ಷಗಳಿಂದ ಕೃಷಿ ಪದವಿಯನ್ನು ತನ್ನ ಜಮೀನಿನಲ್ಲಿ ಪ್ರಯೋಗ ಮಾಡುವುದಕ್ಕೆ ಬಳಸಿಕೊಂಡಿದ್ದಾರೆ. ರಾಜ್ಯ, ಅಂತರರಾಜ್ಯಗಳಲ್ಲೆಲ್ಲಾ ವಿಜ್ಞಾನಿಗಳಿಗೆ ಕೃಷಿ ಪಾಠ ಮಾಡುತ್ತಾರೆ. ಮೈಸೂರಿನ ಕಳಲವಾಡಿಯ ಎ.ಪಿ.ಚಂದ್ರಶೇಖರ್, ಬೆಳಗಾವಿಯ ಅಭಯ್ ಮುತಾಲಿಕ್ ದೇಸಾಯಿ ಇಬ್ಬರೂ ಮೆಕಾನಿಕಲ್ ಎಂಜಿನಿಯರ್‌ಗಳು. ಓದಿದ್ದನ್ನು ಬಿಟ್ಟು ಹಳ್ಳಿಯಲ್ಲೇ ನೆಲಸಿ, ಪ್ರಗತಿಪರ ರೈತರಾಗಿದ್ದಾರೆ. ಇವರೆಲ್ಲ ವೃತ್ತಿಯಲ್ಲಿ ಕೃಷಿಕರಾಗಿ ಪ್ರವೃತ್ತಿಯಲ್ಲಿ ಬರಹಗಾರ, ವಿಜ್ಞಾನಿ ಹೀಗೆ ಹಲವು ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಇವರೆಲ್ಲ ಕೇವಲ ಉದಾಹರಣೆಗಳಷ್ಟೇ ಇಂಥ ಅನೇಕ ಮಹನೀಯರು ರಾಜ್ಯದ ಹಳ್ಳಿಗಳಲ್ಲಿ ನೆಮ್ಮದಿ ಕಂಡುಕೊಂಡಿದ್ದಾರೆ.
ಹಳ್ಳಿಗಳಲ್ಲಿ ಎಲ್ಲವೂ ಇದೆ. ಬೇಕಾದ್ದನ್ನು ಹುಡುಕಿಕೊಳ್ಳುವ ಮನಸ್ಸು ಇರಬೇಕು ಅಷ್ಟೇ !

ಅದ್ಭುತ ಮರಳು ಶಿಲ್ಪ !

ನಿಜಕ್ಕೂ ಆ ಇಮೇಲ್ ಅದ್ಭುತವಾಗಿತ್ತು. ಸಾಮಾನ್ಯವಾಗಿ ಗೆಳೆಯ ಅಮೃತ ಜೋಗಿ ಕಳುಹಿಸುವ ಮೇಲ್ ಗಳು ಹೀಗೆ ಉದ್ಘರಿಸುವಂತೆ ಮಾಡುತ್ತವೆ. ಇವತ್ತು ಕೂಡ ಅಂಥದ್ದೇ ಒಂದು ಮೇಲ್ ಕಳುಹಿಸಿದ್ದಾರೆ. ವಿದೇಶೀಯನೊಬ್ಬರ ಮರಳಿನಲ್ಲಿ ವಿವಿಧ ಪ್ರತಿಮೆಗಳನ್ನು ಮಾಡಿದ್ದಾನೆ. ಹಾಸ್ಯ, ಕ್ರೌರ್ಯ, ಗಂಭೀರ, ಶೃಂಗಾರ, ವಾತ್ಸಾಯನ, ರಾಜಕೀಯ.. ಹೀಗೆ ಹಲವು ವೈವಿಧ್ಯಗಳಿವೆ. ವೈರುಧ್ಯಗಳೂ ಇವೆ. ಅಂಥ ಹದಿನೈದಕ್ಕೂ ಅಧಿಕ ಚಿತ್ರಗಳಲ್ಲಿ ಒಂದು ಚಿತ್ರ ನನಗೆ ತುಂಬಾ ಇಷ್ಟವಾಯಿತು. ಹಾಗೆ ನಿಮ್ಮೊಡನೆ ಹಂಚಿಕೊಳ್ಳಬೇಕೆನಿಸುತು.

ಸಾಗರೋತ್ತರದಲ್ಲಿ ‘ರಂಗ ಪಯಣ’

ಹೀಗಿದ್ದರೆ ಹೇಗೆ ನಾಟಕದ ದೃಶ್ಯದಲ್ಲಿ ಸುಂದರ್ ರಾಜ್ ಮತ್ತು ಲಕ್ಷ್ಮಿ ಚಂದ್ರಶೇಖರ್

ಆರು ಪೆಟ್ಟಿಗೆ, ನಾಲ್ಕು ಪಾತ್ರದಾರಿಗಳು, ೬೦ ದಿನಗಳ ಮೂರು ಸಾವಿರ ಮೈಲುಗಳ ಅಮೆರಿಕ ಪ್ರವಾಸ, ಹದಿಮೂರು ರಾಜ್ಯಗಳ್ಲಲಿ ೧೫ ನಗರಗಳ ಹದಿನಾರು ಸ್ಥಳಗಳ್ಲಲಿ ವಾರಾಂತ್ಯದ ಎಂಟು ದಿನಗಳ್ಲಲಿ, ಎರಡು ನಾಟಕಗಳ ಹದಿನೈದು ಪ್ರದರ್ಶನ…. ಅಬ್ಬಾ ! ಅದೊಂದು ರೋಚಕ ಅನುಭವ…

ಕಬ್ಬನ್ ಪಾರ್ಕ್ ಸೆಂಚುರಿ ಕ್ಲಬ್‌ನ ಅಂಗಳದ್ಲಲಿ ಗೋಬಿಮಂಚುರಿ ಮ್ಲೆಲುತ್ತಾ ಸಾಗರೋತ್ತರ ‘ರಂಗ ಪಯಣ’ದ ಅನುಭವವನ್ನು ರಂಗಭೂಮಿ ಕಲಾವಿದರಾದ ಲಕ್ಷ್ಮಿ ಚಂದ್ರಶೇಖರ್, ಸುಂದರ್‌ರಾಜ್, ಗಜಾನನ ನಾಯಕ್, ರಾಮಕೃಷ್ಣ ಕನ್ನರ್ಪಾಡಿ ವಿವರಿಸಿದ ಪರಿಯಿದು. ಹೀಗಿದ್ದರೆ ಹೇಗೆ ನಾಟದ ದೃಶ್ಯದಲ್ಲಿ ಸುಂದರ್ ರಾಜ್ ಮತ್ತು ಲಕ್ಷ್ಮಿ ಚಂದ್ರಶೇಖರ್

ಈ ಹೊಸ ಪ್ರಯತ್ನಕ್ಕಾಗಿ ಆರು ತಿಂಗಳ ಕಾಲ ತಾಲೀಮು ನಡೆಸ್ದಿದೆವು. ಪ್ರವಾಸಕ್ಕಾಗಿಯೇ ‘ನಾಟಕದ ಪರಿಕರಗಳನ್ನು’ ಸಿದ್ಧಗೊಳಿಸ್ದಿದೆವು. ಎಲವೂ ಫೋಲ್ಡಬಲ್ ಮತ್ತು ಪೋರ್ಟ್‌ಬಲ್. ವಸ್ತುಗಳಿಗೆ ತಕ್ಕಂತ ಪೆಟ್ಟಿಗೆಗಳು. ಇಷ್ಟ್ಲೆಲ ಇದರೂ ಪ್ರವಾಸದ್ಲಲ್ಲೆಲೂ ಒಂದಿಂಚೂ ಆಚೀಚೆಯಾಗಲ್ಲಿಲ’ ಎನ್ನುತ್ತ ಗೆಲುವಿನ ನಗೆಬೀರಿದರು ಲಕ್ಷ್ಮಿ ಮೇಡಮ್.
ನಾಲ್ಕು ಕಲಾವಿದರು ೨೫ ಪಾತ್ರಗಳು. ‘ರತ್ನನ್ ಪರಪಂಚ’ ನಾಟಕದ್ಲಲಿ ಒಟ್ಟು ಇಪ್ಪತ್ತೈದು ಪಾತ್ರಗಳು. ಇಷ್ಟೂ ಪಾತ್ರಗಳನ್ನು ನಾಲ್ಕು ಮಂದಿ ಅಭಿನಯಿಸ್ದಿದು ಈ ಪ್ರವಾಸ ವಿಶೇಷ.

‘ಸುಂದರ್ ನಾಲ್ಕೈದು ಪಾತ್ರ ಮಾಡಿದರು. ಒಂದೊಂದು ಪಾತ್ರ ಒಂದೂವರೆ ನಿಮಿಷದ್ಲಲಿ ವೇಷ-ಬಣ್ಣ ಬದಲಾಯಿಸಿಕೊಳ್ಳುತ್ತ್ದಿದರು. ನಿಜಕ್ಕೂ ಇದೊಂದು ಥ್ರಿಲ್’ ಲಕ್ಷ್ಮಿ ಮೇಡಮ್ ಮತ್ತೆ ಅನುಭವದ ನೆನಪಿಗೆ ಜಾರಿದರು

ಎಲ್ಲವೂ ಇದು ನಾಟಕ ಮಾಡೋದು ವಿಶೇಷವಲ್ಲ. ಗ್ರೀನ್ ರೂಮ್, ಸೈಡ್‌ವಿಂಗ್, ಲೈಟಿಂಗ್ ಹೀಗೆ.. ಯಾವ ವ್ಯವಸ್ಥೆಯೂ ಸರಿಯ್ಲಿಲದ ಪುಟ್ಟ ರಂಗ ಸಜ್ಜಿಕೆ ಮೇಲೆ ನಾಟಕ ಪ್ರದರ್ಶನ ನಿಜಕ್ಕೂ ಒಂದು ಸವಾಲು. ಇಂಥ ವಾತಾವರಣದ್ಲಲೇ ಹದಿನೈದು ಪ್ರದರ್ಶನಗಳನ್ನು ನೀಡ್ದಿದೇವೆ’ ಎನ್ನುವ ಕ್ರಿಯೇಟಿವ್ ತಂಡ್ದದು ಒಂದು ಮಟ್ಟಿಗೆ ‘ದೊಡ್ಡ ಸಾಧನೆಯೇ ಸರಿ’.

ವರ್ಷಗಳ ನಂತರ ನಕ್ಕ್ದಿದೇ ನಕ್ಕ್ದಿದು..!
ಕರ್ನಾಟಕದ್ಲಲಿ ೭೫ ಯಶಸ್ವಿ ಪ್ರದರ್ಶನಗಳನ್ನು ಕಂಡ ‘ಹೀಗಾದರೆ ಹೇಗೆ?’ ನಾಟಕ ನೋಡಿದವರು ಹೊಟ್ಟೆ ಹುಣ್ಣಾಗುವಷ್ಟು ನಕ್ಕ್ದಿದೇ ನಕ್ಕ್ದಿದು. ‘ಬಹಳ ವರ್ಷಗಳ ಮೇಲೆ ಹೀಗೆ ನಗುತ್ತ್ದಿದೇವೆ’ ಎಂದು ನಮ್ಮ ಪ್ರೇಕ್ಷಕರು ಉದ್ಗರಿಸ್ದಿದು ಪ್ರದರ್ಶನದ ಸಾರ್ಥಕತೆಗೆ ಹಿಡಿದ ಕನ್ನಡಿಯಾಗಿತ್ತು.

ವಿಶೇಷ ಅಂದ್ರೆ ಕನ್ನಡ ಅರ್ಥವಾಗದ ‘ಬಿಳಿಯ’ರೂ ಕೂಡ ಚಪ್ಪಾಳೆ ತಟ್ಟ್ದಿದು, ಅವರ ಮಕ್ಕಳು ಗಪ್‌ಚಿಪ್ ಆಗಿ ಕುಳಿತು ನಾಟಕ ನೋಡ್ದಿದು, ಇವ್ಲೆಲ ಮರೆಯಲಾಗದ ನೆನಪುಗಳು ಎಂದ ಮೇಡಮ್ ಮಾತಿಗೆ ಸುಂದರ್, ಗಜಾನನ, ರಾಮಕೃಷ್ಣ ಜೊತೆಯಾದರು.

ಶಹಬ್ಬಾಸ್, ಬನ್ನಿ ಮತ್ತೆ!
‘ಆಸ್ಕರ್ ಪ್ರಶಸ್ತಿ ನೀಡಬೇಕಾದ ಪ್ರದರ್ಶನ’ ಎಂದು ಉದ್ಗರಿಸಿದರೆ, ಇನ್ನು ಕೆಲವರು ‘ನಾವು ಬೆಂಗಳೂರಿಗೆ ಬಂದಾಗ ಕನ್ನಡ ನಾಟಕಗಳನ್ನು ತಪ್ಪದೇ ನೋಡುತ್ತೇವೆ’ ಎಂದರು. ಅನೇಕ ಕನ್ನಡ ಒಕ್ಕೂಟಗಳು ‘ಮತ್ತೆ ಬನ್ನಿ’ ಎಂದು ಆಹ್ವಾನ ನೀಡಿದವು. ಸ್ಥಳೀಯ ಕನ್ನಡ ಪತ್ರಿಕೆಗಳು ನಾಟಕಗಳ ಬಗ್ಗೆ ಪ್ರಶಂಸಾತ್ಮಕ ವಿಮರ್ಶೆ ಪ್ರಕಟಿಸಿದವು. ಅಷ್ಟರ ಮಟ್ಟಿಗೆ ನಮ್ಮ ನಾಟಕಗಳು ಅಲಿನ ಕನ್ನಡಿಗರ ಮೇಲೆ ಪರಿಣಾಮ ಬೀರಿದವು’ ಎಂದರು ಲಕ್ಷ್ಮಿ ಚಂದ್ರಶೇಖರ್.