
ಚಿತ್ರದುರ್ಗ: ನಗರದ ಚಿನ್ಮೂಲಾದ್ರಿ ಅಡ್ವೆಂಚರ್ ಕ್ಲಬ್‌ನ ಯುವಕರು ಜೋಗಿಮಟ್ಟಿ ಅರಣ್ಯ ಪ್ರದೇಶದಲ್ಲಿರುವ ನೀರಿನ ದೊಣೆಯನ್ನು ಪುನಶ್ಚೇತನ ಗೊಳಿಸುವ ಮೂಲಕ ‘ವಿಶ್ವ ಪರಿಸರ ದಿನ’ವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ.
ವಿಶ್ವ ಪರಿಸರ ದಿನಕ್ಕೆ ಮುನ್ನಾ ದಿನ ಕ್ಲಬ್‌ನ ಮುಖ್ಯಸ್ಥ ನಾಗರಾಜ್ (ನಾಗು ಆರ್ಟ್ಸ್) ಮತ್ತು ನಾಲ್ವರು ಸ್ನೇಹಿತರು ಆಡುಮಲ್ಲೇಶ್ವರದ ಮೇಲ್ಭಾಗದಲ್ಲಿರುವ ಹಿಮವತ್ಕೇದಾರ ಸಮೀಪದಲ್ಲಿನ ನೀರಿನ ದೊಣೆಯನ್ನು ಸ್ವಚ್ಛಗೊಳಿಸಿದ್ದಾರೆ.
‘ಬಂಡೆಗೆ ಹೊಂದಿಕೊಂಡಂತೆ ನಿರ್ಮಾಣವಾಗಿರುವ ಕಲ್ಲು ಕಟ್ಟಡದ ಈ ದೊಣೆಯಲ್ಲಿ ಹೂಳು ತುಂಬಿಕೊಂಡು ನೀರು ನಿಲ್ಲುವ ಪ್ರಮಾಣ ಕಡಿಮೆ ಯಾಗಿತ್ತು. ಹಿಂದೆ ಬೇರೆ ಬೇರೆ ದೊಣೆಗಳ ಹೂಳು ತೆಗೆದಾಗ, ನೀರು ನಿಲ್ಲುವ ಪ್ರಮಾಣದ ಬಗ್ಗೆ ಅರಿವು ಮೂಡಿತು. ಹಾಗಾಗಿ ಈ ದೊಣೆಯ ಹೂಳು ತೆಗೆದಿದ್ದೇವೆ’ ಎಂದು ನಾಗರಾಜ್ ತಿಳಿಸಿದರು.
ಈ ದೊಣೆಯ ಆಸು–ಪಾಸಿನಲ್ಲಿ ನವಿಲು, ಕರಡಿ, ಚಿರತೆ ಮತ್ತು ಕೊಂಡುಕುರಿಗಳು ಹೆಚ್ಚು ಅಡ್ಡಾಡುತ್ತವೆ. ಬಸವನಬಾಯಿಯಿಂದ ನೀರು ಬೀಳುವ ನೀರು ಸುತ್ತಲಿನ ದೊಣೆಗಳಲ್ಲಿ ಸಂಗ್ರಹ ವಾಗುತ್ತದೆ.
‘ಇಡೀ ದಿನ ಹೂಳು ತೆಗೆದವು. ಹೂಳು ತೆಗೆಯುತ್ತಲೇ ನೀರಿನ ಒರತೆ ಕಾಣಿಸಿಕೊಂಡಿತು. ಮಾರನೆಯ ದಿನ ಒಂದು ಗುಂಡಿಯಲ್ಲಿ ಪ್ರಾಣಿಗಳು ಕುಡಿಯುವಷ್ಟು ನೀರು ಸಂಗ್ರಹವಾಗಿತ್ತು’ ಎನ್ನುತ್ತಾ ನೀರು ಸಂಗ್ರಹವಾಗಿದ್ದನ್ನು ತೋರಿಸುತ್ತಾರೆ ನಾಗರಾಜ್.
‘ದೊಣೆ ಪುನರುಜ್ಜೀವನ’ದ ಶ್ರಮದಾನದಲ್ಲಿ ಕೆಇಬಿ ನೌಕರ ಸಂತೋಷ್, ಎಲೆಕ್ಟ್ರೀಷಿಯನ್ ನಾಗಭೂಷಣ, ಛಾಯಾಚಿತ್ರಗಾಹಕ ಬಾಬು, ಕಲಾವಿದ ಮಾರುತಿ ಪಾಲ್ಗೊಂಡಿದ್ದರು.

Like this:
Like ಲೋಡ್ ಆಗುತ್ತಿದೆ...
Related
Published by
ಗಾಣಧಾಳು ಶ್ರೀಕಂಠ
ಹುಟ್ಟೂರು ಗಾಣಧಾಳು. ಓದಿದ್ದು ತಿಪಟೂರು. ಕೆಲಸ ಮಾಡ್ತಿರೋದು ಬೆಂಗಳೂರು. ವೃತ್ತಿಯಲ್ಲಿ ಪತ್ರರ್ತ, ಆಸಕ್ತಿ ಕೃಷಿ-ಗ್ರಾಮೀಣಾಬಿವೃದ್ದಿ ಮತ್ತು ಪರಿಸರ. ಫೋಟೋಗ್ರಫಿ, ಪುಟ ವಿನ್ಯಾಸ, ಪ್ರವಾಸ ಹವ್ಯಾಸ. ರಮಾ ಬಾಳಸಂಗಾತಿ. ಆಕೆಯೂ ಹವ್ಯಾಸಿ ಬರಹಗಾರ್ತಿ. ಸ್ಪೈಸ್ ಇಂಡಿಯಾ ಕನ್ನಡ ಮಾಸ ಪತ್ರಿಕೆಯಲ್ಲಿ ಆರು ವರ್ಷ ಸಹಾಯಕ ಸಂಪಾದಕಿ (ಎಡಿಟೋರಿಯಲ್ ಅಸಿಸ್ಟೆಂಟ್) ಕೆಲಸ ಮಾಡಿದ್ದಾರೆ. ಸದ್ಯ ಚಿತ್ರದುರ್ಗ ಆಕಾಶವಾಣಿ ಕೇಂದ್ರದಲ್ಲಿ ಗೌರವ ಉದ್ಘೋಷಕಿ, ಮಗಳು ನದಿ ನನ್ನ ಬದುಕು, ಮಗ ಅಗರ್ತ, ನನ್ನ ಭವಿಷ್ಯ. ನಿವೃತ್ತ ಶಿಕ್ಷಕ ತಂದೆ ಗಾಣಧಾಳು ರಾಮಣ್ಣ ಅವರೊಂದಿಗೆ ವರ್ಗವಾದ ಕಡೆ ವಾಸ್ತವ್ಯ. ಸದ್ಯ ಚಿತ್ರದುರ್ಗದಲ್ಲಿ ವಾಸ.
ಸಮಾಜಶಾಸ್ತ್ರ ಮತ್ತು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. ಕಾಲೇಜು ದಿನಗಳಲ್ಲೇ ಪತ್ರಿಕೆಗಳಿಗೆ ಲೇಖನ ಬರೆಯುವ ಹವ್ಯಾಸ. ಪ್ರಜಾಪ್ರಗತಿ, ಉದಯವಾಣಿ ಪತ್ರಿಕೆಗಳಿಗೆ ಅರೆಕಾಲಿಕ ವರದಿಗಾರನಾಗಿ ಸೇವೆ. ೧೯೯೬ರಿಂದ ತಿಪಟೂರಿನ ಬೈಫ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಲ್ಲಿ ದಾಖಲಾತಿಗಾರನಾಗಿ ವೃತ್ತಿ ಆರಂಭ. ಕ್ರಮೇಣ, ಅದೇ ಸಂಸ್ಥೆಯ ಪ್ರಕಾಶನದ ಸಿರಿಸಮೃದ್ಧಿ ಕೃಷಿ ಮಾಸಪತ್ರಿಕೆಯಲ್ಲಿ ಉಪ ಸಂಪಾದಕನಾಗಿ ಸೇವೆ ಮುಂದುವರಿಕೆ. ೨೦೦೨ರಿಂದ ವಿಜಯ ಕರ್ನಾಟಕ ದಿನಪತ್ರಿಕೆಯ ಚಿತ್ರದುರ್ಗ ಆವೃತ್ತಿಯಲ್ಲಿ ಉಪ ಸಂಪಾದಕನಾಗಿ ಸೇವೆ ಆರಂಭ. ೨೦೦೪ರಲ್ಲಿ ಇದೇ ಪತ್ರಿಕೆಯ ಕೃಷಿ ವಿಜಯ ಪುರವಣಿಯ ಮುಖ್ಯಸ್ಥನಾಗಿ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಣೆ. ೨೦೦೬ರಿಂದ ಪ್ರಜಾವಾಣಿ ಪತ್ರಿಕೆಯ ಬೆಂಗಳೂರಿನ ಕಚೇರಿಯಲ್ಲಿ ವಿವಿಧ ವಿಭಾಗಗಳಲ್ಲಿ ಸೇವೆ.
ಪ್ರಕಟಿತ ಕೃತಿಗಳು :
ಆಕಾಶವಾಣಿಯಲ್ಲಿ ಪ್ರಸಾರವಾದ ನಾಟಿ ಬೀಜಗಳ ಪರಂಪರೆ ಕುರಿತ ಸರಣಿಯ ಅಕ್ಷರ ರೂಪದ ಕೃತಿ ‘ಬೀಜಸಂಪದ’ . ಸಾವಯವ ಕೃಷಿಕರ ಯಶೋಗಾಥೆಯ ಕೃತಿ ‘ಸಾವಯವ ಚಿತ್ತಾರ’, ‘ವೆಲ್ವೆಟ್ ಬೀನ್ಸ್ -ನೆಲಕ್ಕೆ ಜೀವ ತುಂಬುವ ಮ್ಯಾಜಿಕ್ ಬಳ್ಳಿ’, ‘ಸ್ಲೋಫುಡ್- ಸುಭೋಜನಾ ಸಾವಧಾನ’, ‘ದೇಸಿ ಕೃಷಿ ಉಪಕರಣಗಳು’, ‘ನೆಲಮೂಲ ಕೃಷಿಜ್ಞಾನ- ಮಲೆನಾಡ ದೇಸಿ ಕೃಷಿ ಪದ್ಧತಿಗಳು’, ‘ ಹಸಿರು ಹಾದಿ’, ‘ಅಜೋಲಾ-ಮೇವಿಗೂ ಸೈ ಗೊಬ್ಬರಕ್ಕೂ ಜೈ’, ‘ಸುಸ್ಥಿರ ತೋಟ ಮಾಡೋಣ ಬನ್ನಿ’ ಹಾಗೂ ‘ಹೊನ್ನಾರು - ಪರಿಸರ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಚಿಂತನೆ’ ಕುರಿತ ಕೃತಿಗಳು ಪ್ರಕಟಗೊಂಡಿವೆ.
ಪ್ರಶಸ್ತಿ ಪುರಸ್ಕಾರ
೨೦೦೬ರಲ್ಲಿ ಸಿಡಿಎಲ್ ಸಂಸ್ಥೆಯಿಂದ ‘ಕೆರೆ ಆಪೋಷಣ ಪುರಾಣ’ ಲೇಖನಕ್ಕೆ ರಾಜ್ಯಮಟ್ಟದ ‘ಚರಕ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ’. ಇದೇ ವರ್ಷ ಧಾರವಾಡದ ಕೃಷಿ ಮಾಧ್ಯಮ ಕೇಂದ್ರದಿಂದ ‘ವೆಲ್ವೆಟ್ ಬೀನ್ಸ್’ ಲೇಖನಕ್ಕಾಗಿ ‘ರಾಜ್ಯ ಮಟ್ಟದ ಉತ್ತಮ ಕೃಷಿ ಬರಹಗಾರ ಪ್ರಶಸ್ತಿ’. ‘ದೇಸಿ ಭತ್ತ ಭ್ರಹ್ಮ ನಟವರಸಾರಂಗಿ’ ಲೇಖನಕ್ಕಾಗಿ ೨೦೦೯ರಲ್ಲಿ ಮುರುಘಾಶ್ರೀ - ರಾಜ್ಯಮಟ್ಟದ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ, ೨೦೧೦-೧೧ನೇ ಸಾಲಿನ ‘ಉತ್ತಮ ವಿಜ್ಞಾನ ಲೇಖಕ ಪ್ರಶಸ್ತಿಗೆ ವೆಲ್ವೆಟ್ ಬೀನ್ಸ್ ಮತ್ತು ಸಾವಯವ ಚಿತ್ತಾರ ಪುಸ್ತಕಗಳ ಆಯ್ಕೆ. ೨೦೧೧ರಲ್ಲಿ ನವದೆಹಲಿಯ ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್(ಸಿಎಸ್ಇ) ಸಂಸ್ಥೆಯಿಂದ ‘ಜಲಮೂಲಗಳ ಅಧ್ಯಯನಕ್ಕಾಗಿ’ ೧೨ನೇ ಸಿಎಸ್ಇ ಫೆಲೋಷಿಪ್ ಗೌರವ. ೨೦೧೨ರ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ‘ಯಜಮಾನ್ ಶ್ರೀ ನಾರಾಯಣಪ್ಪ ಪ್ರಶಸ್ತಿ, ೨೦೧೧ನೇ ಸಾಲಿನಲ್ಲಿ ‘ಬೆಂಗಳೂರು ನಿರ್ಮಾತೃ ಕೆಂಪೇಗೌಡ ಪ್ರಶಸ್ತಿ ಪುರಸ್ಕಾರ ಹಾಗೂ ಪರಿಸರ ಪತ್ರಿಕೋದ್ಯಮದಲ್ಲಿನ ಎರಡು ದಶಕಗಳ ಗಣನೀಯ ಸೇವೆಯನ್ನು ಗುರುತಿಸಿರುವ ಕರ್ನಾಟಕ ಸರ್ಕಾರ ‘೨೦೧೪ನೇ ಸಾಲಿನ ರಾಜ್ಯಮಟ್ಟದ ‘ಪರಿಸರ ಪತ್ರಿಕೋದ್ಯಮ’ ಪ್ರಶಸ್ತಿ’ ನೀಡಿ ಗೌರವಿಸಿದೆ.
ಅಧ್ಯಯನ ಪ್ರವಾಸ :
ಕೃಷಿ ಅಧ್ಯಯನಕ್ಕಾಗಿ ೨೦೧೩ರಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಸ್ಯಾನ್ಫ್ರಾನ್ಸಿಸ್ಕೋಗೆ ಪ್ರವಾಸ. ಭಾರತದ ಚಂಡಿಗಡ, ಒರಿಸ್ಸಾ, ಬಿಹಾರ, ಆಂಧ್ರ, ತಮಿಳುನಾಡು ಸೇರಿದಂತೆ ಕೃಷಿ ಅಧ್ಯಯನಕ್ಕಾಗಿ ವಿವಿಧ ರಾಜ್ಯಗಳಲ್ಲಿ ಪ್ರವಾಸ.
ಗಾಣಧಾಳು ಶ್ರೀಕಂಠ ಅವರ ಎಲ್ಲಾ ಲೇಖನಗಳನ್ನು ನೋಡಿ