ಜೋಗಿಮಟ್ಟಿಯ ‘ದೊಣೆ’ನಾಯಕರು!


ಬರ ಮತ್ತು ಬಾಯಾರಿಕೆಯಿಂದ ನಾಡು ಕಂಗೆಟ್ಟಿರುವ ಸಂದರ್ಭದಲ್ಲಿ ಚಿತ್ರದುರ್ಗಕ್ಕೆ ಸಮೀಪದ ಜೋಗಿಮಟ್ಟಿಯಲ್ಲಿ ಮಾತ್ರ ‘ನೀರಹಾಡು’ ಅನುರಣನಗೊಳ್ಳುತ್ತಿದೆ. ಅಲ್ಲಿನ ಕಾಡು ಪ್ರಾಣಿಗಳಿಗೆ ಬಿರುಬೇಸಿಗೆಯಲ್ಲೂ ಕುಡಿವ ನೀರಿಗೆ ಕೊರತೆ ಎನ್ನಿಸಿಲ್ಲ. ಅದಕ್ಕೆ ಕಾರಣ, ಯುವ ಉತ್ಸಾಹಿಗಳ ಪರಿಸರ ಕಾಳಜಿ.

ಕಾಡಿನಲ್ಲಿನ ನೀರತಾಣಗಳನ್ನು ಹುಡುಕಿ ಮರುಪೂರಣಗೊಳಿಸಿರುವ ಅವರು, ನಿಜವಾದ ಅರ್ಥದಲ್ಲಿ ‘ದೊಣೆ’ನಾಯಕರು.

‘ನೀರಿಲ್ಲ ಅಂತ ಎಲ್ಲ ಕಡೆಯಿಂದ ಸುದ್ದಿ ಬರ್ತಾ ಇದೆ. ಇಲ್ನೋಡಿ ಸರ್, ನಮ್ ಜೋಗಿಮಟ್ಟಿ ಕಾಡಿನ ತುದಿಯ ಗವಿಬಾಗಿಲು ಗುಹೆಯಲ್ಲಿ ಈಗಲೂ 13 ಅಡಿ ನೀರಿದೆ. ಸೀಳ್ಗಲ್ಲು, ತಣ್ಣೀರು ದೋಣಿ, ಈರಣ್ಣನ ಬಂಡೆ, ಮಡಿಕೆ ದೋಣಿ, ಎಬ್ಬಿದರು ಹಳ್ಳ, ಪಾಂಡವರಮಠದ ಬಂಡೆಗಳಲ್ಲೂ ನೀರು ನಿಂತಿದೆ…’

ಚಿನ್ಮೂಲಾದ್ರಿ ಅಡ್ವೆಂಚರ್ ಕ್ಲಬ್ ನಾಗರಾಜ್ (ನಾಗು) ಚಿತ್ರದುರ್ಗ ಸಮೀಪದ ಜೋಗಿಮಟ್ಟಿ ಅರಣ್ಯದ ತುದಿಯಲ್ಲಿ, ನೀರಿನ  ದೊಣೆಗಳಲ್ಲಿ (ಜಲಸಂಗ್ರಹ ರಚನೆ), ಗವಿ ಬಾವಿಯೊಳಗೆ ನೀರು ತುಂಬಿರುವ ಚಿತ್ರಗಳನ್ನು ಎದುರಿಗೆ ಹರವಿ ಕುಳಿತು ಮಾತಿಗಿಳಿದರು.

‘ಈ ಬಿರು ಬೇಸಿಗೆಯಲ್ಲೂ ಗುಹೆಯಲ್ಲಿ ನೀರಿದೆ. ಇದೆಲ್ಲ, ಹಿಂದೆ ನಾವು ಹೂಳು ತೆಗೆದು, ಸ್ವಚ್ಛ ಮಾಡಿದ್ದರ ಪ್ರತಿಫಲ…’ ಎಂದರು. ಅವರು ಹರಡಿಕೊಂಡಿದ್ದ ಅಂದು–ಇಂದಿನ ಚಿತ್ರಗಳಲ್ಲಿ ಒಂದೂವರೆ ದಶಕದಲ್ಲಿ ಕಾಡಿನಲ್ಲಾದ ಜಲ ಸಂರಕ್ಷಣೆಯ ಬದಲಾವಣೆಗಳು ಕಾಣುತ್ತಿದ್ದವು!

ನೀರಾಸರೆಯ ತಾಣಗಳು
ಚಿತ್ರದುರ್ಗದಿಂದ 10 ಕಿ.ಮೀ ದೂರವಿರುವ ಜೋಗಿಮಟ್ಟಿ ಕಾಯ್ದಿಟ್ಟ ಅರಣ್ಯ ಪ್ರದೇಶದ ತುದಿಯಲ್ಲಿ ನೀರಿನ ದೊಣೆಗಳಿವೆ. ಇವುಗಳಲ್ಲಿ ಕೆಲವು ಮಾನವ ನಿರ್ಮಿತ. ಇನ್ನೂ ಕೆಲವು ಸ್ವಾಭಾವಿಕ ರಚನೆಗಳು. ಕಾಡು ಪ್ರಾಣಿಗಳ ನೀರಡಿಕೆ ನೀಗಿಸಲು ಬಹಳ ಹಿಂದೆ ಇಂಥ ದೊಣೆಗಳನ್ನು ನಿರ್ಮಿಸಲಾಗಿದೆ.

ಇವುಗಳಲ್ಲಿ ಮಳೆಗಾಲದಲ್ಲಿ ನೀರು ತುಂಬಿಕೊಳ್ಳುತ್ತದೆ. ವರ್ಷಗಟ್ಟಲೆ ನೀರು ಬತ್ತುವುದಿಲ್ಲ. ಕುಡಿಯಲು ಯೋಗ್ಯವಾದ ನೀರಿನ ಈ ದೊಣೆಗಳು ಪ್ರಾಣಿಗಳಿಗೆ ನೀರಾಸರೆಯ ತಾಣಗಳಾಗಿವೆ. 13 ವರ್ಷಗಳ ಹಿಂದೆ ಈ ಗುಹೆ, ಹೊಂಡದ ಬಂಡೆಗಳು ಹೂಳು ತುಂಬಿಕೊಂಡು, ಗಿಡಗಂಟೆಗಳು ಬೆಳೆದುಕೊಂಡಿದ್ದವು. ಮಳೆ ಬಂದಾಗಲೂ ನೀರು ನಿಲ್ಲುತ್ತಿರಲಿಲ್ಲ. ನಿಂತರೂ ಆ ನೀರು ಕುಡಿಯುವ ಪ್ರಾಣಿಗಳಿಗೆ ಎಟುಕುವಂತಿರಲಿಲ್ಲ.

2003ನೇ ಇಸವಿ. ನಾಗರಾಜ್ ಮತ್ತು ಗೆಳೆಯರು ಚಾರಣಕ್ಕೆಂದು ಕಾಡಿಗೆ ಹೋಗಿದ್ದರು. ಗವಿಬಾಗಿಲ ಬಂಡೆ ಮೇಲೆ ಕುಳಿತು ಊಟ ಮಾಡುವಾಗ, ಊಟದ ನಡುವೆ ನೀರಡಿಕೆಯಾಗಿದೆ. ಸುತ್ತಲೂ ಹುಡುಕಿದರೂ ಎಲ್ಲಿಯೂ ನೀರು ಸಿಗಲಿಲ್ಲ. ಕೆಳಗೆ ಗುಹೆಯಲ್ಲಿ ನೀರಿದೆ, ಕುಡಿಯಲು ಯೋಗ್ಯವಿಲ್ಲ.

‘ನಮ್ಮ ಪಾಡೇ ಹೀಗಾದರೆ, ಬೇಸಿಗೆಯಲ್ಲಿ ಇಲ್ಲಿನ ಮೂಕ ಪ್ರಾಣಿಗಳ ಕಥೆ ಹೇಗಿರಬೇಡ’ ಎಂದು ನಾಗು ಮತ್ತು ಗೆಳೆಯ ಜಗದೀಶ್ ಅವರಿಗೆ ಅನ್ನಿಸಿತು. ಅದರ ಫಲವಾಗಿ, ಅವರು ಗವಿಗಳನ್ನು ಸ್ವಚ್ಛಗೊಳಿಸುವ ಸಂಕಲ್ಪ ಕೈಗೊಂಡರು.

‘ಮೊದಲು ಗಿಡಗಂಟೆ, ಹೂಳು ತೆಗೆದವು. ಹೂಳು ತೆಗೆದಂತೆ ಗವಿಯ ಆಳ–ಅಗಲ ವಿಸ್ತಾರವಾಯಿತು. ಹೂಳು ತೆಗೆದ ಮೇಲೆ ದೊಡ್ಡ ಬಾವಿಯೇ ನಿರ್ಮಾಣವಾದಂತಾಯಿತು. ಆ ವರ್ಷ ಮಳೆ ಬಂತು. ಗವಿಯೊಳಗೆ ನೀರು ತುಂಬಿಕೊಂಡಿತು. 20 ಅಡಿಗೂ ಹೆಚ್ಚು ನೀರು ಸಂಗ್ರಹವಾ­ಯಿತು. ಪ್ರಾಣಿಗಳಿಗೆ ನೀರಾಸರೆಯ ತಾಣವಾಯಿತು’ ಎಂದು ಆ ದಿನಗಳನ್ನು ನಾಗು ನೆನಪಿಸಿಕೊಳ್ಳುತ್ತಾರೆ. ಗವಿಬಾಗಿಲ ಗುಹೆಯಲ್ಲಿ ಈ ಬಿರು ಬಿಸಿಲಿನಲ್ಲೂ ವ್ಯಕ್ತಿ ಮುಳುಗುವಷ್ಟು ನೀರಿದೆ ಎಂದು ಪ್ರಸ್ತುತ ಗುಹೆಯ ಸ್ಥಿತಿಯನ್ನು ವಿವರಿಸುತ್ತಾರೆ.

ಉತ್ತೇಜಿಸಿದ ಮೊದಲ ಯಶಸ್ಸು: ಗವಿಬಾಗಿಲ ಗುಹೆಯ ಹೂಳೆತ್ತಿ, ನೀರು ಸಂಗ್ರಹವಾದ ಸುದ್ದಿ ಮಾಧ್ಯಮಗಳಲ್ಲಿ ಪ್ರಚಾರವಾಯಿತು. ಅದು ಯುವಕರ ‘ಶ್ರಮದಾನ’ಕ್ಕೆ ಮತ್ತಷ್ಟು ಉತ್ತೇಜನ ನೀಡಿತು. ಮುಂದೆ ಅರಣ್ಯದಲ್ಲಿರುವ ಕೆಲವು ಜಲತಾಣಗಳನ್ನು ಸ್ವಚ್ಛಗೊಳಿಸಲು ಸಂಕಲ್ಪ ಮಾಡಿದರು. ಹೂಳು ತೆಗೆವ ಜತೆಗೆ ಬಂಡೆಯ ಪೊಟರೆಗಳಿಗೆ ತಡೆಗೋಡೆ ಕಟ್ಟಿ ನೀರು ನಿಲ್ಲಿಸುವ ಕಾರ್ಯಕ್ಕೆ ಚಾಲನೆ ನೀಡಿದರು. ದೊಣೆಯ ಸನಿಹದಲ್ಲೇ ಹಣ್ಣಿನ ಗಿಡಗಳನ್ನು ನೆಟ್ಟರು.

‘ಹಣ್ಣಿನ ಗಿಡಗಳು ಏತಕ್ಕೆ?’ ಎಂದರೆ, ‘ನೀರು ಕುಡಿಯಲು ಬರುವ ಪ್ರಾಣಿಗಳಿಗೆ ಆಹಾರ ಸಿಗಲಿ ಎಂಬುದು ಹಣ್ಣಿನ ಗಿಡ ನೆಡುವ ಉದ್ದೇಶ’ ಎನ್ನುತ್ತಾರೆ ನಾಗು. ಗುಹೆಗಳಲ್ಲಿ ಹೂಳು ತೆಗೆಯುವಾಗ ಪುರಾತನ ಮಡಿಕೆ, ಕುಡಿಕೆಗಳು ಸಿಕ್ಕಿವೆ. ಇಳಿಜಾರಿನಲ್ಲಿರುವ ದೊಣೆಗಳ ಹೂಳು ತೆಗೆಯುವಾಗ ಸಿಕ್ಕಿರುವ ಕಲ್ಲು ಚಪ್ಪಡಿ (ಡ್ರೆಸ್ಸ್ ಸ್ಟೋನ್) ತಡೆ ಗೋಡೆಗಳು ಕಂಡಿವೆ.

ಈ ಕುರುಹುಗಳು, ನೀರಾಶ್ರಯ ತಾಣಗಳ ಪುರಾತನ ಇತಿಹಾಸವನ್ನು ಹೇಳುತ್ತವೆ. ಇತಿಹಾಸ ಸಂಶೋಧಕರು ‘ಮಡಿಕೆ, ಕುಡಿಕೆಗಳು ನೂರಾರು ವರ್ಷಗಳ ಹಿಂದೆ ಈ ಗುಹೆಗಳಲ್ಲಿ ಜನ ವಸತಿ ಇದ್ದಿರಬಹುದು ಎನ್ನುವುದಕ್ಕೆ ಸಾಕ್ಷಿ ಎನ್ನುತ್ತಾರೆ.

ಗುಹೆ, ದೊಣೆಗಳ ಹೂಳು ತೆಗೆದು, ನೀರು ಸಂಗ್ರಹಣೆ ಮಾಡಿದ ಯಶಸ್ಸಿನ ನಂತರ, 2010ರಲ್ಲಿ ನಾಗು ಮತ್ತು ಗೆಳೆಯರು ನೀರು ಸಂಗ್ರಹವಾಗುವ ಬಂಡೆಗಳಿಗೆ ಸಿಮೆಂಟ್, ಇಟ್ಟಿಗೆ ಬಳಸಿ ಒಡ್ಡು ನಿರ್ಮಿಸಿ, ನೀರು ನಿಲ್ಲಿಸಿದರು. 10 ಕಿ.ಮೀ ದೂರದಿಂದ ಅರಣ್ಯದವರೆಗೆ ಇಟ್ಟಿಗೆ ಸಿಮೆಂಟ್ ಹೊತ್ತು, ಬಂಡೆಗಳ ಇಳಿಜಾ­ರಿಗೆ ಅಡ್ಡಲಾಗಿ ಗೋಡೆ ನಿರ್ಮಿಸಿರುವುದು ಒಂದು ಸಾಹಸ.

‘ಒಬ್ಬನೇ ಕೆಲಸ ಆರಂಭಿಸಿದೆ. ನಂತರ ಗೆಳೆಯರು ಕೈಜೋಡಿಸಿದರು. ಒಂದು ವಾರ ಪರಿಶ್ರಮ ಹಾಕಿದೆವು. ಆಗ ಬೇಸಿಗೆಯಲ್ಲಿ ಈ ಕೆಲಸ ಮಾಡಿದ್ದು, ಮಳೆಗಾಲದಲ್ಲಿ ನೀರು ಸಂಗ್ರಹವಾಯಿತು. ಈ ಬೇಸಿಗೆಯಲ್ಲೂ ನೀರಿದೆ, ಅದು ತಿಳಿಯಾಗಿದೆ, ಶುದ್ಧವಾಗಿದೆ. ಕುಡಿಯಲು ಯೋಗ್ಯವಾಗಿದೆ’– ಎನ್ನುವುದು ಅವರ ವಿವರಣೆ.

ಎಲ್ಲದರಲ್ಲೂ ನೀರಿದೆ: ಕಳೆದ 13 ವರ್ಷಗಳಲ್ಲಿ ಸ್ವಚ್ಛಗೊಳಿಸಿರುವ ನೀರಿನ ದೊಣೆಗಳಲ್ಲಿ ಬಿರು ಬೇಸಿಗೆಯಲ್ಲೂ ನೀರಿದೆ. ಪ್ರಾಣಿಗಳು ನಿತ್ಯ ಇಲ್ಲಿ ನೀರು ಕುಡಿಯುತ್ತವೆ. ವಿಶೇಷವಾಗಿ ಕರಡಿ, ನವಿಲು, ಚಿರತೆ, ಜಿಂಕೆಗಳಿಗೆ ಈ ಹೊಂಡಗಳು ನೀರಾಸರೆಯಾಗುತ್ತವೆ. ಈಗಲೂ ನೀರಿನ ತಾಣಗಳ ಸುತ್ತ, ಪ್ರಾಣಿಗಳ ಹಿಕ್ಕೆಗಳು ಕಾಣುತ್ತವೆ.

ಚಾರಣ, ಚಿತ್ರಕಲೆ, ಛಾಯಾಗ್ರಹಣದ ಜೊತೆಗೆ ಪರಿಸರದ ಬಗ್ಗೆ ಕಾಳಜಿ ಹೊಂದಿರುವ ನಾಗುಗೆ ಇಂಥ ಹಲವು ಹವ್ಯಾಸಗಳು ವೃತ್ತಿಯಾಗಿವೆ. ಆದರೆ, ಪರಿಸರ ಸಂರಕ್ಷಣೆಯನ್ನು ಸೇವೆಯಾಗಿ ಉಳಿಸಿಕೊಂಡಿದ್ದಾರೆ. ಮೂರೂವರೆ ದಶಕಗಳಿಂದ ಗೆಳೆಯರು, ಶಾಲಾ ಮಕ್ಕಳು, ಪರ ಊರಿನ ಹವ್ಯಾಸಿ ಚಾರಣಿಗರೊಂದಿಗೆ ಜೋಗಿಮಟ್ಟಿ ಸುತ್ತಾಡು­ತ್ತಿರುವ ನಾಗುಗೆ ಅಲ್ಲಿನ ಗಿಡ ಮರ, ದೊಣೆ, ಹೊಂಡಗಳ ದಾರಿ ಗೊತ್ತಿದೆ.

ಪ್ರಾಣಿಗಳ ಆಹಾರದ ಕಾರಿಡಾರ್ ಕುರಿತು ಪಕ್ಕಾ ಮಾಹಿತಿ ಇದೆ. ಇತ್ತೀಚೆಗೆ ಚಿರತೆಯೊಂದು ನಾಯಿಯನ್ನು ಅಟ್ಟಿಸಿಕೊಂಡು ಹೋಗುತ್ತಿದ್ದ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ. ಪ್ರಾಣಿಗಳ ಜೀವನಕ್ರಿಯೆ ಅರಿತಿರುವ ಅವರು, ಅವುಗಳ ಪ್ರಮುಖ ನೀರಾಸರೆ ತಾಣವನ್ನೇ  ಗುರುತಿಸಿ, ಗೆಳೆಯರ ನೆರವಿನಿಂದ ಪುನಶ್ಚೇತನಗೊಳಿಸಿದ್ದಾರೆ.

ಹೀಗೆ ಸುತ್ತಾಡುತ್ತಾ, ಈ ರೀತಿ ಕೆಲಸ ಮಾಡುವ ನಾಗುಗೆ, ‘ಇದರಿಂದ ಏನು ಲಾಭ ನಿಮಗೆ… ಯಾಕೀ ಹುಚ್ಚಾಟ’ ಅಂತ ಕೇಳಿದರೆ ಭಾವನಾತ್ಮಕವಾಗಿ ಉತ್ತರಿಸುತ್ತಾರೆ. ‘ಈ ಕಾಡಿನೊಂದಿಗೆ ನನ್ನದು ಮೂರು ದಶಕಗಳ ಸಂಬಂಧ. ನನ್ನ ಚಿತ್ರಕಲೆ, ಫೋಟೊಗ್ರಫಿಗೆ ಸ್ಫೂರ್ತಿ ಕೊಟ್ಟ ಕಾನನ ಇದು. ಈ ಕಾಡಿನಲ್ಲಿ ನೀರಿನ ಕೊರತೆಯಾಗಿ, ನವಿಲು, ಕರಡಿ, ಚಿರತೆಗಳು ಪರದಾಡಿದ್ದನ್ನು ಕಂಡಿದ್ದೇನೆ.

ಹೀಗಾಗಬಾರದು ಎಂಬುದು ನನ್ನ ಪುಟ್ಟ ಕಾಳಜಿ. ಅದಕ್ಕಾಗಿಯೇ ಈ ಜಲತಾಣಗಳಿಗೆ ಜೀವ ನೀಡುವ ಕೆಲಸ ಮಾಡಿದ್ದೇನೆ. ನಾವೇನ್ ಮಹಾ ಮಾಡಿರೋದು, ಸುರಿಯುವ ಮಳೆ ನೀರಿಗೆ ದಾರಿ ಮಾಡಿಕೊಟ್ಟಿದ್ದೇವೆ. ಅದು ತಲುಪುವ ಜಾಗಕ್ಕೆ ತಲುಪಿಸಿದ್ದೇವೆ. ಹೂಳು ಎತ್ತಿ, ನೀರು ನಿಲ್ಲುವಂತೆ ಮಾಡಿದ್ದೇವೆ, ಅಷ್ಟೆ. ಇದರಲ್ಲಿ ವಿಶೇಷ ಸಾಧನೆಯೇನಿಲ್ಲ’ ಎನ್ನುತ್ತಾರೆ.

ಅಂದಹಾಗೆ, ಕಾಡಿನ ತುದಿಯಲ್ಲಿ ಇನ್ನೂ ಹಲವು ನೀರಿನ ದೊಣೆಗಳಿವೆ, ಗುಹೆಗಳಿವೆ. ಪುಟ್ಟ ಪುಟ್ಟ ಕೆರೆಗಳಿವೆ. ನೀರಾಸರೆಯ ತಾಣಗಳಿವೆ. ಇವುಗಳ ಪುನರುಜ್ಜೀವನಕ್ಕೆ ಕೈಜೋಡಿಸುವವರ ಸಂಖ್ಯೆ ಹೆಚ್ಚಾಗಬೇಕಿದೆ. ಹಾಗಾದರೆ ಮಾತ್ರ ಪ್ರಾಣಿಗಳು ನೀರಿಗಾಗಿ ಊರಿಗೆ ಬರುವುದನ್ನು ತಪ್ಪಿಸಬಹುದು ಎಂಬ ಪರಿಸರ ಕಾಳಜಿ ಅವರದ್ದು. ಸಂಪರ್ಕಕ್ಕೆ–9901124445.

Published by

ಗಾಣಧಾಳು ಶ್ರೀಕಂಠ

ಹುಟ್ಟೂರು ಗಾಣಧಾಳು. ಓದಿದ್ದು ತಿಪಟೂರು. ಕೆಲಸ ಮಾಡ್ತಿರೋದು ಬೆಂಗಳೂರು. ವೃತ್ತಿಯಲ್ಲಿ ಪತ್ರರ್ತ, ಆಸಕ್ತಿ ಕೃಷಿ-ಗ್ರಾಮೀಣಾಬಿವೃದ್ದಿ ಮತ್ತು ಪರಿಸರ. ಫೋಟೋಗ್ರಫಿ, ಪುಟ ವಿನ್ಯಾಸ, ಪ್ರವಾಸ ಹವ್ಯಾಸ. ರಮಾ ಬಾಳಸಂಗಾತಿ. ಆಕೆಯೂ ಹವ್ಯಾಸಿ ಬರಹಗಾರ್ತಿ. ಸ್ಪೈಸ್ ಇಂಡಿಯಾ ಕನ್ನಡ ಮಾಸ ಪತ್ರಿಕೆಯಲ್ಲಿ ಆರು ವರ್ಷ ಸಹಾಯಕ ಸಂಪಾದಕಿ (ಎಡಿಟೋರಿಯಲ್ ಅಸಿಸ್ಟೆಂಟ್) ಕೆಲಸ ಮಾಡಿದ್ದಾರೆ. ಸದ್ಯ ಚಿತ್ರದುರ್ಗ ಆಕಾಶವಾಣಿ ಕೇಂದ್ರದಲ್ಲಿ ಗೌರವ ಉದ್ಘೋಷಕಿ, ಮಗಳು ನದಿ ನನ್ನ ಬದುಕು, ಮಗ ಅಗರ್ತ, ನನ್ನ ಭವಿಷ್ಯ. ನಿವೃತ್ತ ಶಿಕ್ಷಕ ತಂದೆ ಗಾಣಧಾಳು ರಾಮಣ್ಣ ಅವರೊಂದಿಗೆ ವರ್ಗವಾದ ಕಡೆ ವಾಸ್ತವ್ಯ. ಸದ್ಯ ಚಿತ್ರದುರ್ಗದಲ್ಲಿ ವಾಸ. ಸಮಾಜಶಾಸ್ತ್ರ ಮತ್ತು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. ಕಾಲೇಜು ದಿನಗಳಲ್ಲೇ ಪತ್ರಿಕೆಗಳಿಗೆ ಲೇಖನ ಬರೆಯುವ ಹವ್ಯಾಸ. ಪ್ರಜಾಪ್ರಗತಿ, ಉದಯವಾಣಿ ಪತ್ರಿಕೆಗಳಿಗೆ ಅರೆಕಾಲಿಕ ವರದಿಗಾರನಾಗಿ ಸೇವೆ. ೧೯೯೬ರಿಂದ ತಿಪಟೂರಿನ ಬೈಫ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಲ್ಲಿ ದಾಖಲಾತಿಗಾರನಾಗಿ ವೃತ್ತಿ ಆರಂಭ. ಕ್ರಮೇಣ, ಅದೇ ಸಂಸ್ಥೆಯ ಪ್ರಕಾಶನದ ಸಿರಿಸಮೃದ್ಧಿ ಕೃಷಿ ಮಾಸಪತ್ರಿಕೆಯಲ್ಲಿ ಉಪ ಸಂಪಾದಕನಾಗಿ ಸೇವೆ ಮುಂದುವರಿಕೆ. ೨೦೦೨ರಿಂದ ವಿಜಯ ಕರ್ನಾಟಕ ದಿನಪತ್ರಿಕೆಯ ಚಿತ್ರದುರ್ಗ ಆವೃತ್ತಿಯಲ್ಲಿ ಉಪ ಸಂಪಾದಕನಾಗಿ ಸೇವೆ ಆರಂಭ. ೨೦೦೪ರಲ್ಲಿ ಇದೇ ಪತ್ರಿಕೆಯ ಕೃಷಿ ವಿಜಯ ಪುರವಣಿಯ ಮುಖ್ಯಸ್ಥನಾಗಿ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಣೆ. ೨೦೦೬ರಿಂದ ಪ್ರಜಾವಾಣಿ ಪತ್ರಿಕೆಯ ಬೆಂಗಳೂರಿನ ಕಚೇರಿಯಲ್ಲಿ ವಿವಿಧ ವಿಭಾಗಗಳಲ್ಲಿ ಸೇವೆ. ಪ್ರಕಟಿತ ಕೃತಿಗಳು : ಆಕಾಶವಾಣಿಯಲ್ಲಿ ಪ್ರಸಾರವಾದ ನಾಟಿ ಬೀಜಗಳ ಪರಂಪರೆ ಕುರಿತ ಸರಣಿಯ ಅಕ್ಷರ ರೂಪದ ಕೃತಿ ‘ಬೀಜಸಂಪದ’ . ಸಾವಯವ ಕೃಷಿಕರ ಯಶೋಗಾಥೆಯ ಕೃತಿ ‘ಸಾವಯವ ಚಿತ್ತಾರ’, ‘ವೆಲ್ವೆಟ್ ಬೀನ್ಸ್ -ನೆಲಕ್ಕೆ ಜೀವ ತುಂಬುವ ಮ್ಯಾಜಿಕ್ ಬಳ್ಳಿ’, ‘ಸ್ಲೋಫುಡ್- ಸುಭೋಜನಾ ಸಾವಧಾನ’, ‘ದೇಸಿ ಕೃಷಿ ಉಪಕರಣಗಳು’, ‘ನೆಲಮೂಲ ಕೃಷಿಜ್ಞಾನ- ಮಲೆನಾಡ ದೇಸಿ ಕೃಷಿ ಪದ್ಧತಿಗಳು’, ‘ ಹಸಿರು ಹಾದಿ’, ‘ಅಜೋಲಾ-ಮೇವಿಗೂ ಸೈ ಗೊಬ್ಬರಕ್ಕೂ ಜೈ’, ‘ಸುಸ್ಥಿರ ತೋಟ ಮಾಡೋಣ ಬನ್ನಿ’ ಹಾಗೂ ‘ಹೊನ್ನಾರು - ಪರಿಸರ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಚಿಂತನೆ’ ಕುರಿತ ಕೃತಿಗಳು ಪ್ರಕಟಗೊಂಡಿವೆ. ಪ್ರಶಸ್ತಿ ಪುರಸ್ಕಾರ ೨೦೦೬ರಲ್ಲಿ ಸಿಡಿಎಲ್ ಸಂಸ್ಥೆಯಿಂದ ‘ಕೆರೆ ಆಪೋಷಣ ಪುರಾಣ’ ಲೇಖನಕ್ಕೆ ರಾಜ್ಯಮಟ್ಟದ ‘ಚರಕ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ’. ಇದೇ ವರ್ಷ ಧಾರವಾಡದ ಕೃಷಿ ಮಾಧ್ಯಮ ಕೇಂದ್ರದಿಂದ ‘ವೆಲ್ವೆಟ್ ಬೀನ್ಸ್’ ಲೇಖನಕ್ಕಾಗಿ ‘ರಾಜ್ಯ ಮಟ್ಟದ ಉತ್ತಮ ಕೃಷಿ ಬರಹಗಾರ ಪ್ರಶಸ್ತಿ’. ‘ದೇಸಿ ಭತ್ತ ಭ್ರಹ್ಮ ನಟವರಸಾರಂಗಿ’ ಲೇಖನಕ್ಕಾಗಿ ೨೦೦೯ರಲ್ಲಿ ಮುರುಘಾಶ್ರೀ - ರಾಜ್ಯಮಟ್ಟದ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ, ೨೦೧೦-೧೧ನೇ ಸಾಲಿನ ‘ಉತ್ತಮ ವಿಜ್ಞಾನ ಲೇಖಕ ಪ್ರಶಸ್ತಿಗೆ ವೆಲ್ವೆಟ್ ಬೀನ್ಸ್ ಮತ್ತು ಸಾವಯವ ಚಿತ್ತಾರ ಪುಸ್ತಕಗಳ ಆಯ್ಕೆ. ೨೦೧೧ರಲ್ಲಿ ನವದೆಹಲಿಯ ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್(ಸಿಎಸ್ಇ) ಸಂಸ್ಥೆಯಿಂದ ‘ಜಲಮೂಲಗಳ ಅಧ್ಯಯನಕ್ಕಾಗಿ’ ೧೨ನೇ ಸಿಎಸ್ಇ ಫೆಲೋಷಿಪ್ ಗೌರವ. ೨೦೧೨ರ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ‘ಯಜಮಾನ್ ಶ್ರೀ ನಾರಾಯಣಪ್ಪ ಪ್ರಶಸ್ತಿ, ೨೦೧೧ನೇ ಸಾಲಿನಲ್ಲಿ ‘ಬೆಂಗಳೂರು ನಿರ್ಮಾತೃ ಕೆಂಪೇಗೌಡ ಪ್ರಶಸ್ತಿ ಪುರಸ್ಕಾರ ಹಾಗೂ ಪರಿಸರ ಪತ್ರಿಕೋದ್ಯಮದಲ್ಲಿನ ಎರಡು ದಶಕಗಳ ಗಣನೀಯ ಸೇವೆಯನ್ನು ಗುರುತಿಸಿರುವ ಕರ್ನಾಟಕ ಸರ್ಕಾರ ‘೨೦೧೪ನೇ ಸಾಲಿನ ರಾಜ್ಯಮಟ್ಟದ ‘ಪರಿಸರ ಪತ್ರಿಕೋದ್ಯಮ’ ಪ್ರಶಸ್ತಿ’ ನೀಡಿ ಗೌರವಿಸಿದೆ. ಅಧ್ಯಯನ ಪ್ರವಾಸ : ಕೃಷಿ ಅಧ್ಯಯನಕ್ಕಾಗಿ ೨೦೧೩ರಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಸ್ಯಾನ್ಫ್ರಾನ್ಸಿಸ್ಕೋಗೆ ಪ್ರವಾಸ. ಭಾರತದ ಚಂಡಿಗಡ, ಒರಿಸ್ಸಾ, ಬಿಹಾರ, ಆಂಧ್ರ, ತಮಿಳುನಾಡು ಸೇರಿದಂತೆ ಕೃಷಿ ಅಧ್ಯಯನಕ್ಕಾಗಿ ವಿವಿಧ ರಾಜ್ಯಗಳಲ್ಲಿ ಪ್ರವಾಸ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s