ಪಕ್ಷಿಗಳಿಗೆ ಬೊಗಸೆ ನೀರು ಕೊಡಿ ಪ್ಲೀಸ್!

This slideshow requires JavaScript.

ಚಿತ್ರದುರ್ಗ: ಆಡುಮಲ್ಲೇಶ್ವರ ಕಿರು ಉದ್ಯಾನದ ಪಕ್ಕದ ನರ್ಸರಿಯಲ್ಲಿ ನವಿಲೊಂದು ಪೈಪ್‌ನಿಂದ ಸೋರುತ್ತಿದ್ದ ನೀರಿಗೆ ಕೊಕ್ಕು ಹಾಕುತ್ತಿತ್ತು, ಬೆಳವಲದ ಹಕ್ಕಿಯೊಂದು ಕೊಳವೆಯಿಂದ ತೊಟ್ಟಿಕ್ಕುತ್ತಿದ್ದ ನೀರಿಗೆ ಕೊಕ್ಕು ನೀಡುತ್ತಿತ್ತು. ಜಿಲ್ಲಾಧಿಕಾರಿ ಕಚೇರಿಯ ಹಿಂಬದಿಯ ಹೋಟೆಲ್‌ ಟೇಬಲ್‌ ಮೇಲ್ಭಾಗದಲ್ಲಿ ಜಗ್ಗಿನಲ್ಲಿಟ್ಟಿದ್ದ ನೀರಿಗಾಗಿ ಮಂಗಗಳು ಕಸರತ್ತು ನಡೆಸುತ್ತಿದ್ದವು…

ಬೇಸಿಗೆಯ ತೀವ್ರತೆ ಹೆಚ್ಚಾಗಿದೆ. ಏಪ್ರಿಲ್‌ – ಮೇ ತಿಂಗಳಿಗೆ ಮುನ್ನವೇ ವಾತಾವರಣದಲ್ಲಿ 38 ಡಿಗ್ರಿ ಸೆ. ತಾಪಮಾನ ದಾಖಲಾಗಿದೆ. ಮಾರ್ಚ್‌ ಆರಂಭದವರೆಗೂ ಅಲ್ಲಲ್ಲಿ ಕಾಣುತ್ತಿದ್ದ ಜಲಮೂಲಗಳು ಬರಿದಾಗಿವೆ. ನಗರಕ್ಕೆ ಹೊಂದಿ ಕೊಂಡಿರುವ ಉದ್ಯಾನ, ಅರಣ್ಯದಂಚಿನ ಪ್ರದೇಶಗಳಲ್ಲಿ ಪ್ರಾಣಿ, ಪಕ್ಷಿಗಳು ನೀರಿಗಾಗಿ ಪರದಾಡುತ್ತಿವೆ.

ಅರಣ್ಯ ಪ್ರದೇಶದಲ್ಲಿ ಎಲ್ಲೂ ನೀರು ನಿಲ್ಲುವ ವ್ಯವಸ್ಥೆ ಇಲ್ಲ. ಮನುಷ್ಯರೇನೋ ಬಾಯಾರಿದರೆ ನೀರು ಕೇಳಿ ಪಡೆಯುತ್ತಾರೆ. ಆದರೆ, ಬಿಸಿಲ ದಿನಗಳಲ್ಲಿ ಮೂಕ ಪಕ್ಷಿಗಳ ಪಾಡೇನು? ಅದಕ್ಕಾಗಿ ದಯವಿಟ್ಟು ಪಕ್ಷಿಗಳಿಗೆ ನಿತ್ಯ ಸ್ವಲ್ಪ ನೀರಿಡಿ’ ಎನ್ನುವುದು ಪಕ್ಷಿ ಪ್ರಿಯರ ಕಳಕಳಿಯಾಗಿದೆ.

ಪಕ್ಷಿ, ಪ್ರಾಣಿಗಳಿಗಾಗಿ ಆಹಾರ ನೀಡುವ ಸಂಪ್ರದಾಯ ಸಾಮಾನ್ಯ. ನೀರು ಕೊಡುವ ಕಾಯಕ  ವಿರಳ. ಆದರೆ, ನಗರದ ಕೆಲವು ಕಡೆ ಅಂಥ ಪ್ರಯತ್ನಗಳು ನಡೆದಿವೆ. ಆ ಪ್ರಯತ್ನ ವ್ಯಾಪಕ ಆಗಬೇಕು ಎನ್ನುವುದು ಪರಿಸರ ಪ್ರಿಯರ ಮನವಿಯಾಗಿದೆ.

ಮೂರು ವರ್ಷಗಳ ಪ್ರಯತ್ನ:

ನಗರದ ಹೊರವಲಯದಲ್ಲಿರುವ ಮಾದಾರ ಚನ್ನಯ್ಯ ಗುರುಪೀಠದ ಅಂಗಳದಲ್ಲಿ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಮಠದ ಎದುರಿಗಿನ ಕಟ್ಟೆಯ ಮೇಲೆ ಮಣ್ಣಿನ ಹರಿವಾಣ (ತಟ್ಟೆಗಿಂತ ದೊಡ್ಡದು) ನೀರು ತುಂಬಿಸಿ ಇಡುತ್ತಾರೆ. ಮೂರ್ನಾಲ್ಕು ವರ್ಷಗಳಿಂದ ಈ ಕಾಯಕ ಮುಂದುವರಿದಿದೆ. ಬೇಸಿಗೆ ಮಾತ್ರವಲ್ಲ, ವರ್ಷಪೂರ್ತಿ ‘ಜಲಕಾಯಕ’ ನಡೆಯುತ್ತಿದೆ.

ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ, ಈ ಪಾತ್ರೆಗಳಿಗೆ ನೀರು ತುಂಬಿಸುತ್ತಾರೆ. ಮೂರು ಹೊತ್ತು ನೂರಾರು ಹಕ್ಕಿಗಳು ಹಿಂಡು ಹಿಂಡಾಗಿ ಬಂದು ನೀರು ಕುಡಿಯುತ್ತವೆ. ಕೆಲವು ಈಜಾಡುತ್ತವೆ. ಪಕ್ಕದಲ್ಲಿದ್ದ ಗಿಡಗಳ ಮೇಲೆ ಕುಳಿತು ದಣಿವಾರಿಸಿಕೊಂಡು ಹೋಗುತ್ತವೆ.

‘ಸಂಪಿಗೆ, ಬೇವಿನ ಮರ ಸುತ್ತ ಕಟ್ಟೆ ಕಟ್ಟಿಸಿದ್ದೇವೆ. ಅದರ ಸುತ್ತ ನೀರಿಟ್ಟಿದ್ದೇವೆ. ಮೂರು ಹೊತ್ತು ನೀರು ಕುಡಿಯಲು ನೂರಾರು ಪಕ್ಷಿಗಳು ಬರುತ್ತವೆ. ಚಿಟುಗು ಗುಬ್ಬಿ, ಬೆಳವಲ, ನೀಲಿ ಬಣ್ಣದ ಹಕ್ಕಿ, ಮರಕುಟುಕ, ಗುಬ್ಬಚ್ಚಿ, ಕಾಗೆ, ಸಾಂಬಾರು ಕಾಗೆ.. ಹೀಗೆ ಗಾತ್ರ, ಬಣ್ಣ, ಧ್ವನಿ ಆಧರಿಸಿ, 10ರಿಂದ 15 ಬಗೆಯ ಪಕ್ಷಿಗಳು ಬರುತ್ತವೆ. ನೀರು, ಆಹಾರ, ಆವಾಸ ಮೂರು ಇರುವುದರಿಂದ ಪಕ್ಷಿಗಳಿಗೆ ಉತ್ತಮ ತಾಣವಾಗಿದೆ’ ಎಂದು ಸ್ವಾಮೀಜಿ ಮಠದ ಅಂಗಳದ ಪಕ್ಷಿ ಸ್ನೇಹಿ ವಾತಾವರಣ ವಿವರಿಸುತ್ತಾರೆ.

ಪಾರಿವಾಳಗಳ ಹಿಂಡು:

ಕೆಳಗೋಟೆ ಯಲ್ಲಿರುವ ಆಕಾಶವಾಣಿ ಕೇಂದ್ರದ ಅಂಗಳದಲ್ಲಿ ಪಾರಿವಾಳಗಳ ಸಂಸಾರವೇ ಇದೆ. ಅಂದಾಜು 80ಕ್ಕೂ ಹೆಚ್ಚು ಪಾರಿವಾಳಗಳಿವೆ. ಇದರ ಜತೆ ಬೇರೆ ಬೇರೆ ಪಕ್ಷಿಗಳೂ ಬಂದು ಹೋಗುತ್ತವೆ.

‘ಆಕಾಶವಾಣಿ ಕೇಂದ್ರದ ಆವರಣ ದಲ್ಲಿ ಪಕ್ಷಿಗಳಿಗಾಗಿ ಕಾಯಂ ಜಲಪಾತ್ರೆ ಯನ್ನು ನಿರ್ಮಿಸಲಾಗಿದೆ. ನಮ್ಮಲ್ಲಿ ಕೆಲಸ ಮಾಡುವ ಸಿಬ್ಬಂದಿ ಸೇರಿ ಅದನ್ನು ನಿರ್ಮಿಸಿದ್ದಾರೆ. ಸೆಕ್ಯುರಿಟಿ ವಿಭಾಗದವರು ಪಕ್ಷಿಗಳಿಗೆ ಬೆಳಿಗ್ಗೆ, ಸಂಜೆ ಆಹಾರ ಪೂರೈಸುತ್ತಾರೆ. ಹೀಗಾಗಿ, ಆಕಾಶವಾಣಿ ಅಂಗಳದಲ್ಲಿ ಪಕ್ಷಿಗಳ ಸಂಸಾರ ನಿರಂತರ ವಾಗಿರುತ್ತದೆ’ ಎನ್ನುತ್ತಾರೆ ಕಾರ್ಯಕ್ರಮ ಮುಖ್ಯಸ್ಥೆ ಎಸ್‌.ಉಷಾಲತಾ.

‘ಸರಸ್ವತಿಪುರದ 1ನೇ ಕ್ರಾಸ್‌ನಲ್ಲಿ ನಮ್ಮ ಮನೆಯಿದೆ. ಅಂಗಳದಲ್ಲಿ ಸಂಪಿಗೆ, ಸೀಬೆ, ತೆಂಗಿನ ಮರಗಳಿವೆ. ಅಂಗಳದಲ್ಲಿ ದೊಡ್ಡದಾಗಿ ಪ್ಲಾಸ್ಟಿಕ್‌ ಟ್ಯಾಂಕ್ ಇಟ್ಟು, ನೀರು ತುಂಬಿಸುತ್ತೇವೆ. ಸಾಂಬಾರ ಕಾಗೆ, ಚಿಂವ್‌ ಚಿಂವ್‌ ಗುಬ್ಬಿ ಸೇರಿದಂತೆ ಹಲವು ಪಕ್ಷಿಗಳು ಬರುತ್ತವೆ. ಡ್ರಮ್‌ ಕಂಠದ ಮೇಲೆ ಕುಳಿತು, ಕೊಕ್ಕು ಹಾಕಿ, ನೀರು ಕುಡಿದು ಹಾರಿ ಹೋಗುತ್ತವೆ. ನೀರು, ನೆರಳು, ಹಣ್ಣು ಹಕ್ಕಿಗಳಿಗೆ ಸೂಕ್ತ ತಾಣವಾಗಿದೆ’ ಎನ್ನುತ್ತಾರೆ ನಿವಾಸಿ ಜಿ.ಎಸ್.ಉಜ್ಜಿನಪ್ಪ.

ಕೋಟೆ ಅಂಗಳದಲ್ಲಿ…:

ಐತಿಹಾಸಿಕ ಏಳು ಸುತ್ತನ ಕೋಟೆ ಪ್ರಾಂಗಣದಲ್ಲಿ ಪ್ರಾಣಿಗಳಿಗೆ ಅನುಕೂಲವಾಗುವಂತಹ ನೀರಿನ ವ್ಯವಸ್ಥೆ ಇಲ್ಲ ಎಂದು ಅಲ್ಲಿನ ವಾಯುವಿಹಾರಿಗಳು ಅಭಿಪ್ರಾಯಪಡು ತ್ತಾರೆ. ಕಳೆದ ವರ್ಷ ಗೊಂಬೆ ಮಂಟಪದ ವ್ಯಾಪ್ತಿಯಲ್ಲಿ ಅಳಿಲು, ಪಕ್ಷಿಗೆ ಅನುಕೂಲ ವಾಗುವಂತೆ ಕೆಲವು ವಾಯುವಿಹಾರಿ ಗಳು ಅಲ್ಲಲ್ಲೇ ಚಿಪ್ಪು ಮತ್ತು ಪ್ಲಾಸ್ಟಿಕ್ ಡಬ್ಬಗಳಲ್ಲಿ ನೀರು ತುಂಬಿಡುತ್ತಿದ್ದರು.

ಅದು ಸರಿ ಹೋಗುತ್ತಿಲ್ಲ­ವಾದ್ದರಿಂದ, ಪಕ್ಕದಲ್ಲೇ ಕೆಲಸ ಮಾಡುತ್ತಿದ್ದ ಕಾರ್ಮಿಕ ರಿಗೆ ಸಣ್ಣದೊಂದು ಬಾನಿ (ತೊಟ್ಟಿ) ನಿರ್ಮಿಸುವಂತೆ ಮನವಿ ಮಾಡಿದ್ದಾರೆ. ಆ ಕೆಲಸ ಇನ್ನೂ ಆಗಿಲ್ಲ. ಪ್ರಾಣಿ ಪಕ್ಷಿಗಳು ಪರದಾಡುವುದು ತಪ್ಪಿಲ್ಲ’ ಎನ್ನುತ್ತಾರೆ ಕೋಟೆ ವಾಯುವಿಹಾರಿಗಳು.