ಕಾರ್ಟೂನಿಸ್ಟ್ ಗೆಳೆಯ ಎಸ್.ವಿ.ಪದ್ಮನಾಭ್ ಆತ್ಮಹತ್ಯೆ ಮಾಡಿಕೊಂಡರು ಎಂದು ಮೆಸೇಜ್ ನೋಡಿದಾಗ, ಕೆಲವೊಮ್ಮೆ ಕಾರ್ಟುನಿಸ್ಟ್ ಗೆಳೆಯರು ಜೋಕ್ ಮಾಡ್ತಿರ್ತಾರೆ. ಇದು ಹಾಗೆ ಇರಬೇಕು ಅಂದು ಕೊಂಡು, ಆತ್ಮೀಯ ಗೆಳೆಯರಿಗೆ ಕರೆ ಮಾಡಿ ಕೇಳಿದೆ. ಮೆಸೇಜ್ ಸುಳ್ಳಾಗಿರಲಿಲ್ಲ. ಆದರೆ, ಆ ಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಪದ್ಮನಾಭ್, ಕೇವಲ ಮಾತು-ಮಂಥನದ ಗೆಳೆಯರಷ್ಟೇ ಅಲ್ಲ. ಸತತ ಮೂರು ವರ್ಷಗಳ ಕಾಲ ನನ್ನೊಂದಿಗೆ ಮಧ್ಯಾಹ್ನದ ಊಟದ ನೆಂಟನಾಗಿದ್ದರು. ನನ್ನ ಅಮ್ಮನ ಕೈಯಲ್ಲಿ ತಯಾರಾದ ತಿಳಿ ಸಾರು ಅವರಿಗೆ ಬಹಳ ಪ್ರಿಯವಾಗಿತ್ತು.
2004ರಲ್ಲಿ ‘ವಿಜಯ ಕರ್ನಾಟಕ’ದಲ್ಲಿದ್ದಾಗ, ನಾನು ಕೃಷಿ ಮ್ಯಾಗಜಿನ್ ವಿಭಾಗದ ಉಸ್ತುವಾರಿ ನೋಡಿಕೊಳ್ಳುತ್ತಿದ್ದೆ. ಪಕ್ಕದ ಸೆಕ್ಷನ್ ಅವರದ್ದು. ಮಧ್ಯಾಹ್ನ 1.30 ಆದ ಕೂಡಲೇ,’ಏನ್ರಿ ಇವತ್ತು ಊಟದ ವಿಶೇಷ’ ಎನ್ನುತ್ತಿದ್ದರು ಪದ್ಮನಾಭ್. ಹಾಗೆ ಕೇಳುತ್ತಿದ್ದಂತೆ, ಅವರ ಟೇಬಲ್ ಡೈನಿಂಗ್ ಟೇಬಲ್ ಆಗುತ್ತಿತ್ತು. ನಾನು, ರವಿ ಅಜ್ಜೀಪುರ, ಶಶಿಧರ ಹಳೇಮನಿ, ಎನ್. ಆರ್. ಬಡಿಗೇರ್, ಮಣಿಕಾಂತ್, ರಜನಿ… ಹೀಗೆ ಇನ್ನೂ ಅನೇಕ ಗೆಳೆಯರು ಎಲ್ಲ ಒಟ್ಟಿಗೆ ಊಟಕ್ಕೆ ಸೇರುತ್ತಿದ್ದೆವು. ಬಾಕ್ಸ್ ಗಳು ಬದಲಾಗುತ್ತಿದ್ದವು. ಅನೇಕ ಬಾರಿ, ಊಟ ಕಡಿಮೆಯಾದಾಗ, ಅರೆ ಹೊಟ್ಟೆ ಮಾಡ್ಕೊಬೇಡಿ ಬನ್ನಿ, ಅಂತ ಎಸ್ ಎಲ್ ವಿಗೆ ಹೋಗಿ ಊಟ ಮಾಡಿದ ದಿನಗಳೂ ಇದ್ದವು.
ಊಟದ ಜತೆ, ನಮ್ಮ ಟೇಬಲ್ ಮೇಲೆ ಹಿಂದಿನ ದಿನದ ಗರಮಾಗರಂ, ಅಪಾರಾರ್ಥ ಕಾರ್ಟೂನುಗಳು ಉಪ್ಪಿನಕಾಯಿಯಾಗುತ್ತಿದ್ದವು. ಆ ಕಾರ್ಟೂನ್ ಹೆಂಗೆ ಬರದೆ ಗೊತ್ತಾ ಅಂತ ಪದ್ಮನಾಭ್ ಗಂಭೀರವಾಗಿ ವಿವರಣೆ ನೀಡುತ್ತಿದ್ದರೆ, ಉಳಿದವರು ಬಾಯಲ್ಲಿ ಅನ್ನದ ತುತ್ತಿದ್ದರೂ, ತೊದಲುಕೊಂಡೇ ನಗುತ್ತಿದ್ದರು. ನೆತ್ತಿಗೆ ಹತ್ತುವವರೆಗೂ ನಗುತ್ತಿದ್ದರು. ‘ಅಪಾರಾರ್ಥ’ ಅಂಕಣದಲ್ಲಿ ಅವರು ಬರೆದಿದ್ದ ‘ಇನ್ ಕಮಿಂಗ್ ಕಾಲ್ಸೂ’ ಎಂಬ ಕಾರ್ಟೂನ್ ಇವತ್ತು ನೆನಪಿಸಿಕೊಂಡರೂ ನಗೆ ಹುಟ್ಟಿಸುತ್ತದೆ. ಇವತ್ತಿಗೂ ಅನೇಕ ಪತ್ರಿಕೋದ್ಯಮ ಶಿಬಿರಗಳಲ್ಲಿ ಈ ಕಾರ್ಟೂನ್ ಅನ್ನು ಉದಾಹರಿಸುತ್ತೇನೆ.
ಪದ್ಮನಾಭ್ ಆಫೀಸಿಗೆ ಬಂದ ಕೂಡಲೇ, ಎಲ್ಲ ಪೇಪರ್ ತಡಕುತ್ತಿದ್ದರು. ‘ಏನೂ ಆಹಾರ ಸಿಗಲಿಲ್ಲವಲ್ರೀ.. ಕಾರ್ಟೂನ್ ಬರೆಯೋಕೆ ಐಡಿಯಾ ಕೊಡ್ರಿ’ ಅಂತ ನಮ್ಮ ಹತ್ರ ಮಾಹಿತಿ ತಗೊಳ್ಳುತ್ತಿದ್ದರು. ನಾವೆಲ್ಲ ತಲೆಗೊಂದು ಐಡಿಯಾಕೊಟ್ಟು, ನಾಳೆ ಇದೇ ಬರೀತಾರೆ ನೋಡು.. ಎಂದು ಹೇಳುತ್ತಾ, ಬೆಳಿಗ್ಗೆ ಎದ್ದು ಪೇಪರ್ ನೋಡಿದರೆ, ವಿಭಿನ್ನವಾದ ಕಾರ್ಟೂನು ಪ್ರಕಟವಾಗಿರುತ್ತಿತ್ತು. ಪದ್ಮನಾಭ್ ಯೋಚಿಸುತ್ತಿದ್ದ ರೀತಿಯೇ ಅದ್ಭುತವಾಗಿತ್ತು. ಆತನ ಗೆರೆಗಳಲ್ಲಿ, ಪರಿಕಲ್ಪನೆಗಳಲ್ಲಿ ಬಹಳ ಸೂಕ್ಷ್ಮತೆಗಳಿರುತ್ತಿದ್ದವು.
ಪದ್ಮನಾಭ್ ಕಾರ್ಟೂನ್ ಪತ್ರಿಕೆಗಳಲ್ಲಷ್ಟೇ ಪ್ರಕಟವಾಗುತ್ತಿದ್ದಾಗ, ಅದನ್ನು ಕೃಷಿ ಬರಹಗಳಿಗೂ ಬಳಸಿಕೊಳ್ಳಬೇಕೆಂದು ಯೋಚನೆ ಮಾಡಿದ್ದು ಗೆಳೆಯ ಜಿ.ಕೃಷ್ಣಪ್ರಸಾದ್. ಪದ್ಮನಾಭ್ ಕೂಡ ಕೃಷಿ ಮನೆತನದವರು, ಮಣ್ಣು, ಗೊಬ್ಬರ, ಗಿಡ ಮರಗಳ ಬಗ್ಗೆ ಪ್ರೀತಿ ಇದ್ದಿದ್ದರಿಂದ ಕೃಷಿ ಪುಸ್ತಕಕ್ಕೆ ಕಾರ್ಟೂನ್ ಬರೆಯೋಕೆ ಒಪ್ಪಿದರು. ‘ಸಾವಯವ ಕೃಷಿಯ ಹತ್ತು ಹೆಜ್ಜೆಗಳು’ ಪುಸ್ತಕಕ್ಕೆ ಬರೆದುಕೊಟ್ಟರು. ಆ ಚಿತ್ರಗಳು ಎಷ್ಟು ಲವ್ಲಿಯಾಗಿದ್ದವೆಂದರೆ, ರೈತ ಮತ್ತು ಎರೆಹುಳು ನಡುವಿನ ಪ್ರೀತಿಯನ್ನು ಬಹಳ ಅಂದವಾಗಿ ಗೆರೆಗಳಲ್ಲಿ ಮೂಡಿಸಿದ್ದರು. ಇದಾದ ಮೇಲೆ ಕೃಷಿ ಪುಸ್ತಕದ ನಮ್ಮ ಬಳಗಕ್ಕೆ ಅವರು ಸೇರಿದರು. ಕೃಷಿ ಕಾರ್ಯಕ್ರಮಗಳಿಗೂ ಬರೋದಕ್ಕೆ ಶುರು ಮಾಡಿದರು.
ಮುಂದೆ, ಪದ್ಮನಾಭ್, ನನ್ನ ಅಜೋಲ್ಲಾ ಪುಸ್ತಕಕ್ಕೆ ಚಿತ್ರಗಳನ್ನು ಬರೆದುಕೊಟ್ಟರು. ಮೊದಲು ಒಪ್ಪಿರಲಿಲ್ಲ. ಪುಸ್ತಕ ಓದಿದ ಮೇಲೆ, ‘ಬಹಳ ಚೆನ್ನಾಗಿದೆ ರೀ, ಇಂಥ ಮಾಹಿತಿಗೆ, ಈ ಕಾರ್ಟೂನ್ ಬರೆಯೋಣ’ ಅವರೇ ನಿರ್ಧಾರ ಮಾಡಿ ಚಿತ್ರಗಳನ್ನು ಬರೆದರು. ‘ರೈತರೊಬ್ಬರು ಅಜೋಲಾ ಮುಂದೆ ಕುಳಿತು, ನಿಬ್ಬೆರಗಾಗಿ ನೋಡುತ್ತಿರುವುದನ್ನು’ ಅದ್ಭುತವಾಗಿ ಬರೆದಿದ್ದರು.
ಅಷ್ಟು ಅದ್ಬುತವಾಗಿ ಕಾರ್ಟೂನ್ ರಚಿಸುತ್ತಿದ್ದರೂ, ಬೇರೆ ಕಾರ್ಟೂನಿಸ್ಟ್ ಗಳ ಬಗ್ಗೆ ಬಹಳ ಗೌರವವಿತ್ತು. ಆಗ ಪ್ರಜಾವಾಣಿಯಲ್ಲಿ ಪಿ.ಮಹಮದ್ ‘ಚಿನಕುರುಳಿ’ ಬರೆಯುತ್ತಿದ್ದರು. ಅದನ್ನಿಟ್ಟುಕೊಂಡು, ಅನೇಕ ಬಾರಿ ಅವರಿಗೆ ಫೋನ್ ಮಾಡಿ ಮಾತನಾಡುತ್ತಿದ್ದರು.
ಮೊನ್ನೆ ಮೊನ್ನೆ ಕೂಡ, ಹೆಲ್ಮೆಟ್ ಕಡ್ಡಾಯವಾದಾಗ, ‘ಯಾರು ಯಾರನ್ನು ಬೇಕಾದರೂ ಬೈಕ್ ಹಿಂದೆ ಕೂರಿಸಿಕೊಂಡು ಹೋಗಬಹುದು’ ಎಂದು ಪದ್ಮನಾಭ್ ಕಾರ್ಟೂನ್ ಬರೆದಿದ್ದರು. ಅದನ್ನು ನೋಡಿ, ‘ರೀ ಪದ್ಮನಾಭ್ ಎಂಥ ಅಪಾಯದ ಐಡಿಯಾ ಕೊಡ್ತೀರಿ’ ಎಂದು ಪ್ರತಿಕ್ರಿಯಿಸಿದ್ದೆ. ಪ್ರತಿಕ್ರಿಯೆ ಸಾಲದು ಎಂದು ಫೋನ್ ಮಾಡಿ ಮಾತನಾಡಿದ್ದೆ. ‘ಶ್ರೀಕಂಠ, ಫೋನ್ ಕಳೆದು ಹೋಗಿದೆ. ನಿಮ್ಮ ನಂ. ಇರಲಿಲ್ಲ. ಅನೇಕ ಸಾರಿ ಫೋನ್ ಮಾಡ್ಕೋಬೇಕು ಅಂದುಕೊಂಡೆ, ನಂಬರ್ ಸಿಕ್ಕಿರಲಿಲ್ಲ. ನಿಮ್ಮ ನಂಬರ್ ಕೊಡಿ’ ಎಂದು ತೆಗೆದುಕೊಂಡಿದ್ದರು. ನಾನು, ಮಲ್ಲಿಕಾರ್ಜುನ ಹೊಸಪಾಳ್ಯ, ನಮ್ಮ ಹೊಸ ಪುಸ್ತಕಕ್ಕೆ ಕಾರ್ಟೂನ್ ಮಾಡಿಸುವ ಕುರಿತು ಯೋಚನೆ ಮಾಡ್ತಿದ್ದೆವು. ಆದರೆ, ಫೋನ್ ನಂಬರ್ ತಗೊಂಡ ಪದ್ಮನಾಭ್ ಮತ್ತೆ ಕರೆ ಮಾಡಲೂ ಇಲ್ಲ. ನಮ್ಮ ಕರೆಗೂ ಸಿಗಲಿಲ್ಲ.
ಯಾಕ್ ಹೀಗಾಯ್ತು ಎಂದು ಕೊಳ್ಳುತ್ತಿದ್ದಾಗ, ‘ಪದ್ಮನಾಭ್ ಆತ್ಮಹತ್ಯೆ ಮಾಡ್ಕೊಂಡ್ರು’ ಅಂತ ಬುಧವಾರ ನಾಲ್ಕು ಗಂಟೆಗೆ ಮೆಸೇಜ್ ಬಂತು. ಖಚಿತ ಪಡಿಸಿಕೊಳ್ಳೋಕೆ ಗೆಳೆಯರಿಗೆ ಕರೆ ಮಾಡಿದೆ. ವಿಷಯ ಸುಳ್ಳಾಗಲಿಲ್ಲ. ಕಾರಣ ಗೊತ್ತಾಗಲಿಲ್ಲ. ಅಲ್ಲಿ ಇಲ್ಲಿ ಸಿಕ್ಕಿದ ಗೆಳೆಯರು, ಫೋನ್ ನಲ್ಲಿ ಮಾತನಾಡಿದವರು,
‘ಸಾಲಬಾಧೆ’ ಸಾವಿಗೆ ಕಾರಣವಂತೆ ಎಂದು ಮಾತನಾಡಿಕೊಳ್ಳುತ್ತಿದ್ದರು. ಆದರೆ, ಹತ್ತಿರವಿದ್ದ ಗೆಳೆಯರು, ಅವರನ್ನು ಮಾತನಾಡಿಸಿ, ಏನಾದರೂ ಪರಿಹಾರ ಸೂಚಿಸಬಹುದಿತ್ತೋ ಏನೋ. ಹಾಗಂತ ಗೆಳೆಯ ಟಿ.ಆರ್.ಶಿವಪ್ರಸಾದ್ ಹೇಳ್ತಿದ್ದ. ಏನೋ ಅಪ್ಪ, ನಿನ್ನೆ ಮೊನ್ನೆಯಿಂದ ಮಾಧ್ಯಮದಲ್ಲಿ ಕೆಲಸ ಮಾಡುವ ಮೂರ್ನಾಲ್ಕು ಮಂದಿ ಹೀಗೆ ಮರಣಕ್ಕೆ ತುತ್ತಾಗಿದ್ದಾರೆ. ಕೆಲಸದ ಒತ್ತಡವೋ, ಜೀವನ ಶೈಲಿಯಲ್ಲಾದ ಬದಲಾವಣೆಯೋ.. ಒಂದು ಗೊತ್ತಾಗುತ್ತಿಲ್ಲ. ಇವೆಲ್ಲ ನೋಡಿಕೊಂಡು ವಾಪಸ್ ಮಣ್ಣಿನ ಮೇಲೆ ನಿಂತು ನೆಲೆ ಕಂಡು ಕೊಳ್ಳೋಣ ಎಂದರೆ, ಅಲ್ಲೂ ಕೂಡ ‘ಪದ್ಮನಾಭ್’ ಪ್ರಕರಣಗಳೇ ಕಾಣಿಸುತ್ತಿವೆ. ಸಾಯವ ರೈತರಿಗೆ ಆಪ್ತ ಸಲಹೆ ನೀಡುವುದಕ್ಕೂ ಊರಿನಲ್ಲಿ ಜನ ಇಲ್ಲದಂತಾಗಿದ್ದಾರೆ. ಬದುಕು ಬಹಳ ‘ಮೌನ’ ಎನ್ನಿಸುತ್ತಿದೆ.
ಅದೆಲ್ಲ ಸರಿ, ಪದ್ಮನಾಭ್, ಗೆರೆಗಳೊಂದಿಗೆ ನಮ್ಮನ್ನೆಲ್ಲ ನಗಿಸುತ್ತಾ, ಒಂದು ದಿನವೂ ಮುಖದ ಮೇಲೆ ಸಾವಿನ ಗೆರೆ ಎಳೆದುಕೊಳ್ಳದ ನೀವು.. ಯಾಕೆ ಹೀಗೆ ಮಾಡ್ಕೊಂಡ್ರಿ…. !