ಹೊಲದ ಕೃಷಿಹೊಂಡದಲ್ಲಿ ನೀರಿನ ಸೆಲೆ !

ನೀರಿನ ಸೆಲೆಯಿಂದ ತುಂಬಿಕೊಳ್ಳುತ್ತಿದ್ದ ತೆರೆದ ಬಾವಿಗಳು ಮಾಯವಾಗುತ್ತಿರುವ ಈ ಕಾಲದಲ್ಲಿ 3 ಮೀಟರ್ ಆಳದ ಕೃಷಿಹೊಂಡವೊಂದರಲ್ಲಿ ನೀರಿನ ಸೆಲೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ…!
ಹಿರಿಯೂರು ತಾಲ್ಲೂಕಿನ ಐಮಂಗಲ ಹೋಬಳಿಯ ವದ್ದೀಕೆರೆಯ ನಾಗವೇಣಿ ಲೋಕನಾಥ್ ಎಂಬ ರೈತರ ಹೊಲದ ಕೃಷಿಹೊಂಡದಲ್ಲಿ ನೀರಿನಸೆಲೆ ಲಭ್ಯವಾಗಿದೆ. ಈ ಸಣ್ಣದಾದ ನೀರಿನ ಒರತೆಯಿಂದಾಗಿ ಒಂದೆರಡು ವಾರದಲ್ಲಿ ಹೊಂಡದಲ್ಲಿ ಎರಡೂವರೆ ಅಡಿಯಷ್ಟು ನೀರು ಸಂಗ್ರಹವಾಗಿದೆ.
ಕೃಷಿಕ ಮಹಿಳೆ ನಾಗವೇಣಿ, ಕೃಷಿ ಚಟುವಟಿಕೆಗೆ ಎದುರಾಗಿದ್ದ ನೀರಿನ ಸಮಸ್ಯೆಗೆ ಪರಿಹಾರವಾಗಿ 20 ಮೀಟರ್ ಅಗಲ,20ಮೀಟರ್ ಉದ್ದ, 3 ಮೀಟರ್ ಆಳದ ಅಳತೆಯ ಕೃಷಿಹೊಂಡ ಮಾಡಿಸಿದ್ದಾರೆ. ಇಲಾಖೆಯ ಯೋಜನೆ­ಯೊಂದರಡಿ ₨ 1ಲಕ್ಷ ವೆಚ್ಚದಲ್ಲಿ ನಿರ್ಮಿಸಿ­ರುವ ಕೃಷಿಹೊಂಡದ ನಿರ್ಮಾಣ ಅಂತಿಮ ಹಂತ­ದಲ್ಲಿ­ದ್ದಾಗ, ಹೊಂಡದ ತುದಿಯಿಂದ ನೀರಿನ ಒರತೆ ಕಾಣಿಸಿಕೊಂಡಿದೆ. ಒಂದೆರಡು ವಾರಗಳಲ್ಲಿ ಹೊಂಡದಲ್ಲಿ ಎರಡೂವರೆ ಅಡಿಯಷ್ಟು ನೀರು ಸಂಗ್ರಹವಾಗಿದೆ. ಬಿರು ಬೇಸಿಗೆಯಲ್ಲಿ ನೀರಿನ ಒರತೆ ಕಂಡು, ನಾಗವೇಣಿ ಕುಟುಂಬ ಸಂಭ್ರಮಪಟ್ಟಿದೆ.

ನೀರಿನ ಸೆಲೆ ಹೇಗೆ?
ಹಿರಿಯೂರು ತಾಲ್ಲೂಕಿನ ಐಮಂಗಲ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ  200 ರಿಂದ 250 ಅಡಿಗೆ ಲಭ್ಯವಿದೆ. ಆದರೆ, ಆ ನೀರಿನಲ್ಲಿ 1500 ಪಿಪಿಎಂಗಿಂತ ಹೆಚ್ಚು ಲವಣಾಂಶಗಳಿದ್ದು, ಕುಡಿಯಲು ಯೋಗ್ಯವಿಲ್ಲ. ಇಂಥ ಪ್ರದೇಶದಲ್ಲಿ ತೆಗೆಸಿರುವ ಕೃಷಿಹೊಂಡದಲ್ಲಿ 10 ಮೀಟರ್‌ಗೆ ನೀರಿನ ಸೆಲೆ ಲಭ್ಯವಾಗಿದೆ. ಜತೆಗೆ, ಆ ನೀರು ಕುಡಿಯಲು ಯೋಗ್ಯವಾಗಿದೆ ಎಂದು ಜಲತಜ್ಞ ಎನ್.ದೇವರಾಜರೆಡ್ಡಿ ಖಚಿತಪಡಿಸುತ್ತಾರೆ. ‘ಈ ಭಾಗದ ಭೂಗರ್ಭದಲ್ಲಿರುವ ಶಿಥಿಲ (ಫೆದರ್‌ಝೋನ್) ವಲಯದಲ್ಲಿ ನೀರಿನ ಹರಿವಿನ ಪ್ರಮಾಣ ಉತ್ತಮವಾಗಿದೆ. ಇದೇ ಕಾರಣದಿಂದಾಗಿಯೇ ಇಷ್ಟು ಮೇಲ್ಭಾಗದಲ್ಲಿ ನೀರು ಲಭ್ಯವಾಗಿದೆ’ ಎಂದು ರೆಡ್ಡಿ ಅಭಿಪ್ರಾಯ­ಪಡುತ್ತಾರೆ.
‘ಕೃಷಿಹೊಂಡದ ಸಾಲಿನಲ್ಲಿರುವ (ಮೇಲ್ಭಾಗದಲ್ಲಿ) ಹೊಲದಲ್ಲಿ ಒಂದೆರಡು ಬಾವಿಗಳಿವೆ. ಬಾವಿ ಹಾಗೂ ಕೃಷಿ ಹೊಂಡ­ವಿರುವ ಜಾಗ ಇಳಿಜಾರಿನಲ್ಲಿದೆ. ಮಳೆ ನೀರು ಇದೇ ಜಾಡಿನಲ್ಲಿ ಹರಿಯುವಾಗ ಬಾವಿಗಳಲ್ಲಿ ಇಂಗಿರಬಹುದು. ಬಾವಿ ನೀರು ಬಳಸದಿರುವುರಿಂದ ಅಂತರ್ಜಲ ಹೆಚ್ಚಾಗಿ ಕೃಷಿ ಹೊಂಡದಲ್ಲಿ ಒರತೆ ಕಾಣಿಸಿಕೊಂಡಿ­ರ­ಬಹುದು ಎಂದು ನಾಗವೇಣಿ ಮತ್ತೊಂದು ರೀತಿ ಅಂದಾಜಿಸುತ್ತಾರೆ.

4 ಕಿ.ಮೀ ಕ್ಯಾಚ್‌ಮೆಂಟ್‌:
ನಾಲ್ಕು ಕಿ.ಮೀ ವ್ಯಾಪ್ತಿಯ ಹಳ್ಳಿಗಳ ನೀರು ನಾಗವೇಣಿಯವರ ಜಮೀನಿನ ಮೇಲೆ ಹರಿದು, ನಂತರ ಮುಂದಿ­ರುವ ಸಾಣಿಕೆರೆಗೆ ಸೇರುತ್ತಿತ್ತಂತೆ. ಹಾಗೆ ಹರಿಯುವ ನೀರು ಭೂಮಿಯಲ್ಲಿ ಇಂಗಿ, ಭೂಗರ್ಭದ ಶಿಥಿಲಪದರ­ದಲ್ಲಿ ಸಂಗ್ರಹವಾಗಿದೆ. ಇಳಿಜಾರಿಗೆ ಅಡ್ಡಲಾಗಿ ಕೃಷಿಹೊಂಡ ನಿರ್ಮಿಸಿರುವುದರಿಂದ, ನೀರಿನ ಸೆಲೆ ಕಾಣುತ್ತಿದೆ ಎಂಬುದು ತಜ್ಞರ ಲೆಕ್ಕಾಚಾರವಾಗಿದೆ.

ತಜ್ಞರು ಹೀಗೆ ಹೇಳ್ತಾರೆ…
ಭೂಗರ್ಭದ ಶಿಥಿಲವಲಯದಲ್ಲಿ ನೀರಿನ ಪ್ರಮಾಣ ಉತ್ತಮವಾಗಿರುವುದೇ, ಹೊಂಡದಲ್ಲಿ ನೀರಿನ ಒರತೆ ಗೋಚರಿಸಲು ಸಾಧ್ಯವಾಗಿದೆ. ಜಮೀನಿನಲ್ಲಿ ಮಳೆ ನೀರು ಇಂಗಿದರೆ ಇಂಥ ಅಚ್ಚರಿಗಳು ಕಾಣಿಸಲು ಸಾಧ್ಯವಿದೆ.
– ಎನ್. ದೇವರಾಜರೆಡ್ಡಿ, ಜಲತಜ್ಞರು,
ಕೋಟ್‌…

ಕೊನೆ ಕ್ಷಣದಲ್ಲಿ ನೀರು ಕಂಡಿತು..

ಜೆಸಿಬಿಯಿಂದ ಮಣ್ಣು ತೆಗೆಸಿ, ಪ್ಲಾಸ್ಟಿಕ್ ಹೊದಿಸುವ ಹಂತದಲ್ಲಿದ್ದೆವು. ಆಗ ಹೊಂಡದ ಮೂಲೆಯಿಂದ ಒರತೆ ಕಾಣಿಸಿಕೊಂಡಿತು. ಈಗ ಹೊಂಡದಲ್ಲಿ ಮೊಳಕಾಲುದ್ದ ನೀರು ಸಂಗ್ರಹವಾಗಿದೆ.
– ನಾಗವೇಣಿ ಲೋಕನಾಥ್, ವದ್ದೀಕೆರೆ