೧೯೯೯-೨೦೦೦ರ ಸಮಯ. ಚನ್ನಗಿರಿ ಸಮೀಪದ ಹಳ್ಳಿಯೊಂದರಲ್ಲಿ ಕೊಳವೆ ಬಾವಿ ಕೊರೆಸುವ ಕುರಿತು ಚರ್ಚೆ ನಡೆಯುತ್ತಿತ್ತು. ‘ಈ ಪ್ರದೇಶದಲ್ಲಿ ಅಂತರ್ಜಲ ಕುಸಿದಿದೆ. ಕೊಳವೆ ಬಾವಿ ಕೊರೆಸಿದರೂ ನೀರು ಸಿಗುವುದಿಲ್ಲ’ ಎಂಬ ಸಲಹೆ ನೀಡಿದೆ. ಅದಕ್ಕೊಬ್ಬ ರೈತರು, ‘ಅಲ್ಲ, ನಮ್ಮೂರು ಸಮುದ್ರ ಮಟ್ಟದಿಂದ ೩ ಸಾವಿರ ಅಡಿ ಮೇಲಿದೆ ಅಲ್ವಾ? ಹಾಗಾದರೆ, ನೀವ್ಯಾಕೆ ೮೦೦ ಅಡಿ ಬಗ್ಗೆ ಯೋಚ್ನೆ ಮಾಡ್ತೀರಾ ? ಸಮುದ್ರದಲ್ಲೇ ನೀರಿದೆ ಎಂದರೆ, ನಾವು ೩ ಸಾವಿರ ಅಡಿ ಕೊರದರೆ ನೀರು ಸಿಗುತ್ತಲ್ಲ. ಹಣ ಎಷ್ಟಾದರೂ ಖರ್ಚಾಗಲಿ’ ಎಂದರು. ಹೀಗೆ ಹೇಳುವವರಿಗೆ, ಆ ಕಾಲದಲ್ಲಿ ಸಾವಿರ ಅಡಿ ಆಳ ಕೊರೆಯಲು ನಮ್ಮಲ್ಲಿ ಯಂತ್ರಗಳಿಲ್ಲ ಎಂಬ ಅರಿವೂ ಇರಲಿಲ್ಲ…!
****
ತುಂಗಭದ್ರ ಜಲಾಶಯದ ಹಿನ್ನೀರಿನಲ್ಲಿರುವ ಹೊಸಪೇಟೆ ಸಮೀಪದ ಹಳ್ಳಿ. ಡ್ಯಾಂ ತುಂಬಿದಾಗ ಈ ಹಳ್ಳಿಯ ಜಮೀನುಗಳು ಜಲಾವೃತವಾಗುತ್ತವೆ. ಬೇಸಿಗೆಯಲ್ಲಿ ನೀರು ಇಂಗಿದ ಮೇಲೆ ಆ ಜಾಗದಲ್ಲಿ ಬೆಳೆ ಬೆಳೆಯುತ್ತಾರೆ. ಆ ರೈತರಿಗೆ, ಜಲಾವೃತವಾಗುವ ಜಾಗದಲ್ಲಿ ಬೋರ್ ಹಾಕಿಸಿ, ಬೆಳೆ ಬೆಳೆಯುವ ಹಂಬಲ. ನನ್ನ ಸಲಹೆ ಕೇಳಿದರು, ಪಾಯಿಂಟ್ ಮಾಡಿಕೊಡಿ ಎಂದರು. ‘ಈ ಸ್ಥಳದಲ್ಲಿ ನೀರಿನ ಸೆಲೆ ಇಲ್ಲ’ ಎಂದೆ. ಆ ರೈತರು ಗೇಲಿ ಮಾಡಿದರು. ‘ರೀ ಎಷ್ಟು ವರ್ಷ ನಿಮಗೆ ಎಕ್ಸ್‌ಪೀರಿಯನ್ಸು ? ಪ್ರತಿ ವರ್ಷ ನಾಲ್ಕು ಮಟ್ಟ ನೀರು ನಿಲ್ಲುವ ಈ ಜಾಗದಲ್ಲಿ ನೀರು ಸಿಗಲ್ಲ ಎನ್ನುತ್ತೀರಿ’ ಎಂದು ವ್ಯಂಗ್ಯ ಮಾಡಿದರು. ಅವರ ಪ್ರತಿಕ್ರಿಯೆ ಗಮನಿಸಿದಾಗ, ‘ಜಲಾಶಯಗಳು ನೀರಿನ ಸಂಗ್ರಹಾಗಾರಗಳು. ಗಟ್ಟಿಭೂಮಿ ಮೇಲೆ ಜಲಾಶಯ ಕಟ್ಟುವುದು. ಅಲ್ಲಿ ಅಂತರ್ಜಲ ಮೇಲ್ಮಟ್ಟದಲ್ಲಿರುವುದಿಲ್ಲ’ ಎಂಬ ಸಾಮಾನ್ಯ ಅರಿವು ಇದ್ದಂತೆ ಕಾಣಲಿಲ್ಲ..!
***
ಅಂತರ್ಜಲ ಭೂಮಿಯ ಒಳಗಿರುವ ಬೃಹತ್ ಸರೋವರ, ಹರಿಯುವ ನದಿ ಎಂಬ ತಪ್ಪು ಕಲ್ಪನೆಗಳಿವೆ. ಅಂತರ್ಜಲ ಕುಸಿದಿದೆ ಎಂದರೆ, ಎಲ್ಲಿವರೆಗೂ ಕುಸಿದಿದೆಯೋ ಅಲ್ಲಿಂದಲೇ ಪೈಪ್ ಹಾಕಿ ನೀರು ಎತ್ತೋಣ ಎಂದು ಅರ್ಥೈಸಿಕೊಂಡು, ಜಮೀನಿನ ತುಂಬಾ ಕೊಳವೆಬಾವಿ ಕೊರೆಸುವವರೇ ಹೆಚ್ಚಾಗಿದ್ದಾರೆ. ಇಂಥ ಅವೈಜ್ಞಾನಿಕ ಅರಿವು ಅಂತರ್ಜಲ ಬರಿದಾಗಲು ಕಾರಣ.
ಅಂತರ್ಜಲ ಎಂದರೆ ಭೂ ಮೇಲ್ಪದರದಿಂದ ನಿರ್ದಿಷ್ಟ ಆಳದಲ್ಲಿ ಮಣ್ಣಿನ ಕಣಗಳ ನಡುವಿನ ಖಾಲಿ ಜಾಗದಲ್ಲಿ ಶಿಲಾಪದರಗಳ ನಡುವೆ ಸಂಗ್ರಹವಾಗಿರುವ ನೀರು. ಇದನ್ನು ‘ಸ್ಪಂಜಿನಲ್ಲಿ ಶೇಖರಿಸಿಟ್ಟ ನೀರಿಗೆ’ ಹೋಲಿಸಬಹುದು. ನೀರು ಕಣ್ಣಿಗೆ ಕಾಣ-ದಿದ್ದರೂ, ಅದನ್ನು ಹಿಂಡಿ ಹೊರತೆಗೆಯಬಹುದು. ಇಂಥ ನೀರನ್ನು ಕೊಳವೆ ಬಾವಿಗಳಿಂದ ಎತ್ತಲು ಆರಂಭವಾಗಿದ್ದು ೭೦ರ ದಶಕದಲ್ಲಿ.
೭೦ರ ದಶಕ ತೆರೆದ ಬಾವಿಗಳ ಕಾಲ. ಆದರೆ, ವೈಜ್ಞಾನಿಕವಾಗಿ ನೀರಿನ ಸೆಲೆ ಗುರು-ತಿಸಲಾಗದೇ, ಎಷ್ಟೋ ಮಂದಿ ಬಾವಿ ತೆಗೆಸುವುದರಲ್ಲಿ ಸೋಲುತ್ತಿದ್ದರು. ಬಾವಿ ತೆಗೆದರೂ ನೀರು ಸಿಗದಿರುವ ಉದಾಹರಣೆಗಳಿದ್ದವು. ಆಗ ಸರ್ಕಾರ ಕೊಳವೆ ಬಾವಿ ಪರಿಚಯಿಸಿತು. ಸಣ್ಣ ಹಿಡುವಳಿದಾರರು ಎಕರೆ ಜಮೀನಿನಲ್ಲಿ ಅರ್ಧ ಭಾಗವನ್ನು ಬಾವಿಗಾಗಿ ವ್ಯರ್ಥ ಮಾಡುವ ಬದಲು, ಕೊಳವೆ ಮೂಲಕ ಬಾವಿಯಷ್ಟೇ ಆಳದಿಂದ ನೀರು ತೆಗೆದು ಬಳಸುವ ಈ ಸುಲಭ ವಿಧಾನ ಸೂಕ್ತ ಎಂದು ಹೇಳಲಾಯಿತು.
ಕೊಳವೆ ಬಾವಿ ಕೊರೆಸಲು ಭೂಗರ್ಭಶಾಸ್ತ್ರಜ್ಞರ ಮಾರ್ಗದರ್ಶನ ಕಡ್ಡಾಯ. ಜಿಯಾಲಜಿಸ್ಟ್ಗಳೂ ಸಹ ೧೮ ರಿಂದ ೩೦ ಮೀಟರ್ (೧೦೦ ಅಡಿ) ದಾಟದಂತೆ ನೀರಿನ ಸೆಲೆ ಗುರುತಿಸುವ ನಿಬಂಧನೆ ವಿಧಿಸಲಾಗಿತ್ತು. ಅಂದರೆ ಮೇಲ್ಪದರದಲ್ಲಿರುವ ನೀರು ತೆಗೆಯಲು ಮಾತ್ರ ಅನುಮತಿ ಇತ್ತು. ಸರ್ಕಾರದ ನಿಬಂಧನೆ ಮೀರಿ ನೀರಿನ ಸೆಲೆ ಗುರುತಿಸಿದರೆ, ಅಂಥವರು ಒಳ್ಳೆಯ ಜಿಯಾಲಜಿಸ್ಟ್ ಅಲ್ಲ ಎಂದು ಹಿರಿಯ ಭೂಗರ್ಭಶಾಸ್ತ್ರಜ್ಞ ಡಾ.ಬಿ.ಪಿ.ರಾಧಾಕೃಷ್ಣ ಹೇಳುತ್ತಿದ್ದರು.
ಆದರೆ, ಸರ್ಕಾರದ ಈ ನಿಬಂಧನೆಗಳು ಬಹಳ ದಿನ ಉಳಿಯಲಿಲ್ಲ. ಕೊಳವೆಬಾವಿ ಕ್ಷೇತ್ರಕ್ಕೆ ಖಾಸಗಿಯವರು ಪ್ರವೇಶಿಸಿದ ಮೇಲೆ, ವಾಣಿಜ್ಯ ಕೃಷಿ ಸಾಂದ್ರತೆ ಹೆಚ್ಚಾದ ಮೇಲೆ, ಭೂಗರ್ಭ ಶಾಸ್ತ್ರಜ್ಞ ಸಾಲ ಪಡೆಯುವವರಿಗೆ ಪ್ರಮಾಣ ಪತ್ರ ನೀಡಲಷ್ಟೇ ಸೀಮಿತವಾದರು ಅಂದಾಜಿನ ಮೇಲೆ ನೀರಿನ ಸೆಲೆ ಗುರುತಿಸುವವರ ಸಂಖ್ಯೆ ಹೆಚ್ಚಾಯಿತು. ಸರ್ಕಾರ ಕೂಡ ಇದನ್ನು ನಿಯಂತ್ರಿಸಲು ಕಾನೂನು ರಚಿಸಲಿಲ್ಲ. ಪರಿಣಾಮ ಕೊಳವೆ ಬಾವಿಗಳ ಬಳಕೆ ವಿಸ್ತರಣೆಯಾಯಿತು. ೧೦೦ ಅಡಿಯಲ್ಲಿದ್ದ ಅಂತರ್ಜಲ ೧೫೦೦ ಅಡಿಗೆ ಇಳಿಯಿತು.
ಗುಣಮಟ್ಟದ ನೀರಿನ ಕೊರತೆ ?
ಬಹಳಷ್ಟು ಮಂದಿಗೆ ಬಳಸುತ್ತಿರುವ ಕೊಳವೆ ಬಾವಿ ನೀರಿನ ಗುಣಮಟ್ಟದ ಬಗ್ಗೆ ಅರಿವಿಲ್ಲ. ಅದು ಎಷ್ಟು ಆಳದಲ್ಲೇ ದೊರೆತರೂ, ‘ಎಷ್ಟು ಇಂಚು’ ಸಿಕ್ಕಿದೆ ಸಂಭ್ರಮಿಸುತ್ತಾರೆಯೇ ವಿನಃ ಆ ನೀರು ಎಷ್ಟು ಗುಣಮಟ್ಟದ್ದಾಗಿದೆ ಎಂದು ಯೋಚಿಸುವುದಿಲ್ಲ.
ಭೂಗರ್ಭದ ಮೂರು ಪದರಗಳಲ್ಲಿ ನೀರು ಲಭ್ಯವಿದೆ. ಶೀತಲ ಪದರ (ವೆದರ್ ಝೋನ್), ಕಲ್ಲು ಪದರ (ಫ್ರಾಕ್ಚರ್ ಝೋನ್), ಪಳೆಯುಳಿಕೆ ಪದರ (ಫಾಸಿಲ್ಸ್ ಝೋನ್). ಶೀತಲ ಪದರದಲ್ಲಿರುವ ನೀರು ಮಾತ್ರ ಬಳಕೆಗೆ ಯೋಗ್ಯ. ಉಳಿದ ಎರಡು ಪದರಗಳಲ್ಲಿರುವ ನೀರಿನಲ್ಲಿ ರಾಸಾಯನಿಕಗಳು ಬೆರೆತಿರುತ್ತವೆ. ಅದೇ ಗಡಸು ನೀರು, ಫ್ಲೋರೈಡ್, ಆರ್ಸೆನಿಕ್‌ನಂತಹ ರಾಸಾಯನಿಕಯುಕ್ತ ನೀರು. ರಾಜ್ಯದಲ್ಲಿ ಬಹುತೇಕ ಕಡೆ ಈಗಾಗಲೇ ಎರಡನೇ ಪದರದ ನೀರು ಬಳಕೆಯಲ್ಲಿದೆ. ಕೆಲವು ಕಡೆ ಮೂರನೇ ಪದರಕ್ಕೂ ಕೈ ಹಾಕಿರುವ ಉದಾಹರಣೆಗಳಿವೆ.
ಜನರು ‘ನನಗೆ ಐದು ಇಂಚು ನೀರು ಸಿಕ್ಕಿದೆ’ ಎನ್ನುತ್ತಾರೆ. ಅದು ೧೨೫೦ ಅಡಿ ಆಳದಿಂದ ನೀರು ತೆಗೆದಿರುವುದನ್ನು ಮರೆತಿರುತ್ತಾರೆ. ಆ ನೀರಿನಲ್ಲಿ ೧೫೦೦ ಪಿಪಿಎಂ ಫ್ಲೋರೈಡ್ ಅಂಶವಿರುತ್ತದೆ. ಅದನ್ನು ಸೇವಿಸಿದರೆ ಕ್ಷಾರಯುಕ್ತ ರುಚಿ. ಕೃಷಿಗೆ ಬಳಸಿದರೆ ಮಣ್ಣಿನ ಫಲವತ್ತತೆ ಹಾಳಾಗುತ್ತದೆ. ಈ ಬಗ್ಗೆ ಅರಿವಿರುವುದಿಲ್ಲ. ೫ ಇಂಚು ನೀರು ಸಿಕ್ಕಿತು ಎಂದ ಕೂಡಲೇ ಅಡಿಕೆ ಬೆಳೆ ಇಡಲು ಮುಂದಾಗುತ್ತಾರೆ !
ಇಂಥ ಕೃಷಿಗಷ್ಟೇ ಅಲ್ಲ, ಕಟ್ಟಡ ನಿರ್ಮಾಣಕ್ಕೂ ಅಪಾಯವಾಗುತ್ತದೆ. ಇಂಥ ಗಡಸು, ಫ್ಲೋರೈಡ್ ಯುಕ್ತ ನೀರು ಬಳಸಿ ಕಟ್ಟಿದ ಕಟ್ಟಡಗಳ ಬಾಳಿಕೆ ಗುಣ (ಶೆಲ್ಫ್ ಲೈಫ್)’ ಕಡಿಮೆಯಾಗುತ್ತದೆ. ಧಾರವಾಡದ ಸಮೀಪದ ಮುಳ್ಳಳ್ಳಿ ಎಂಬಲ್ಲಿ ಸ್ವಾಮೀಜಿಯೊಬ್ಬರು ಮಠದ ಕಟ್ಟಡ ನಿರ್ಮಾಣಕ್ಕೆ, ಸ್ವಂತ ಕೊಳವೆಬಾವಿಯಲ್ಲಿ ೪ ಇಂಚು ನೀರು ಸಿಕ್ಕರೂ, ಅದು ಗಡಸು ನೀರು ಎಂದು, ಹುಬ್ಬಳ್ಳಿಯಿಂದ ಸಿಹಿನೀರು ತರಿಸಿ ಅದರಲ್ಲಿ ಕಟ್ಟಡ ಕಟ್ಟಿದ್ದಾರೆ.
ಅವೈಜ್ಞಾನಿಕ ಬೆಳೆಪದ್ಧತಿ:
ಬಯಲು ಸೀಮೆಗೆ ಮಳೆಯಾಶ್ರಿತ ಬೆಳೆಯೇ ಸೂಕ್ತ. ಆದರೆ, ಬೆಂಗಾಡಿನಲ್ಲೂ ಅಡಿಕೆಯಂತಹ ವಾಣಿಜ್ಯ ಬೆಳೆ ಬೆಳೆಯಲಾಗುತ್ತಿದೆ. ಚಿತ್ರದುರ್ಗ, ದಾವಣಗೆರೆಯಲ್ಲಿ ಬೇಸಿಗೆಯಲ್ಲಿ ಶೇಂಗಾ, ಈರುಳ್ಳಿ, ಹತ್ತಿ, ಅಡಿಕೆ, ಬತ್ತ ಬೆಳೆಯುವವರು ಹೆಚ್ಚಿದ ಮೇಲೆ ಕೊಳವೆಬಾವಿಗಳ ಸಂತತಿ ವಿಸ್ತರಣೆಯಾಗಿದೆ. ಅಡಿಕೆ ಬೆಳೆಗಾಗಿ ಕೊಳವೆಬಾವಿ ತೆಗೆಸಿ ಚನ್ನಗಿರಿಯಲ್ಲಿ ಲಕ್ಷ ಲಕ್ಷ ಸಾಲ ಮಾಡಿ ಸೋತ ರೈತರಿದ್ದಾರೆ.
ಇಷ್ಟಾದರೂ ಜನರಲ್ಲಿ ಕೊಳವೆಬಾವಿ ಬಗೆಗಿನ ವ್ಯಾಮೋಹ ಕಡಿಮೆಯಾಗಿಲ್ಲ. ಅಷ್ಟು ಸೋತರೂ ಕಿಲೋಮೀಟರ್ ದೂರದ ಬೆಟ್ಟದಿಂದ ಪೈಪ್ ಲೈನ್ ಹಾಕಿ ನೀರು ತರುವ ಪೈಪೋಟಿ ಇಳಿದಿಲ್ಲ. ಮಾತ್ರವಲ್ಲ, ‘ಅಲ್ಲೇ ೨೦೦ ಅಡಿಗೆ ನೀರಿದೆ, ನಮ್ಮಲ್ಲೇಕೆ ಇಲ್ಲ’ ಎಂದು ಸವಾಲಿನ ಪ್ರಶ್ನೆ ಹಾಕುತ್ತಾರೆ. ಇನ್ನೂ ಕೆಲವರು, ೫೦ ಅಡಿಗೆ ಒಂದೊಂದು ಕೊಳವೆಬಾವಿ ಕೊರೆಸಿ, ನೀರು ಎತ್ತುತ್ತಿದ್ದಾರೆ. ಮಣ್ಣಿನ ಗುಣಮಟ್ಟ, ಭೂಗರ್ಭದ ರಚನೆ, ಜಲ ಸೆಲೆ ಹರಿಯುವ ಅರಿವಿಲ್ಲದೇ, ಯಾರೋ ಅಂದಾಜಿಸಿ ಗುರುತಿಸುವ ಜಾಗದಲ್ಲಿ ಕೊಳವೆ ಬಾವಿ ಕೊರೆಸುತ್ತಿದ್ದಾರೆ. ಇಂಥ ಅವೈಜ್ಞಾನಿಕ ಮನಸ್ಥಿತಿ ಅಂತರ್ಜಲ ಬರಿದಾಗಲು ಕಾಣವಾಗಿದೆ.
ಸಮಸ್ಯೆ ಢಾಳವಾಗಿದೆ :
ರಾಜ್ಯದ ಕುಡಿಯುವ ನೀರಿನ ಪರಿಸ್ಥಿತಿಗೆ ಕೊಳವೆಬಾವಿ ಪರಿಹಾರವಿರಬಹುದು. ಆದರೆ, ರಾಜ್ಯವನ್ನೂ ಒಳಗೊಂಡ ದೇಶದಲ್ಲಿ ಎಲ್ಲೂ ಕೊಳವೆಬಾವಿಗಳ ಕಾರ್ಯ-ಕ್ಷಮತೆ ಉತ್ತಮವಾಗಿಲ್ಲ. ಬೇಸಿಗೆಯಲ್ಲಿ ಬತ್ತಿದ ಬೋರ್ವೆಲ್‌ಗಳು ಮಳೆಗಾಲದಲ್ಲಿ ಮರುಪೂರಣವಾಗುತ್ತವೆ, ಆದರೆ, ಫ್ಲೋರೈಡ್, ನೈಟ್ರೇಟ್ ಸಮಸ್ಯೆ ನಿರಂತರ-ವಾಗಿರುತ್ತದೆ.
ಇಷ್ಟು ವರ್ಷ ಅಂತರ್ಜಲ ಬರಿದು ಮಾಡಿರುವುದರಿಂದ ಭೂಗರ್ಭದ ಪದರಗಳಲ್ಲಿ ಗಾಳಿ ತುಂಬಿಕೊಂಡಿದೆ. ಮಳೆ ನೀರು ಇಂಗಿದಾಗ, ಭೂಮಿಯಿಂದ ಗುಳ್ಳೆಗಳು ಹೊರಹೊಮ್ಮುತ್ತಿವೆ. ಅಂತರ್ಜಲವನ್ನು ಎಷ್ಟು ತೆಗೆದಿದ್ದೇವೆಂದರೆ, ಊರಿನ ಕೆರೆ, ಕಟ್ಟೆ, ಕುಂಟೆಗಳು ಕನಿಷ್ಠ ಹತ್ತು ಸಾರಿ ತುಂಬಿ, ನೀರು ಇಂಗಿದರೆ ಆಗುವಷ್ಟು ಪ್ರಮಾಣದಲ್ಲಿ ತೆಗೆದಿದ್ದೇವೆ. ಇಂಥ ಪರಿಸ್ಥಿತಿಯಲ್ಲಿ ಸರ್ಕಾರ ಪ್ರತಿ ವರ್ಷ ನೀರಿನ ಸಮಸ್ಯೆಗೆ ಕೊಳವೆಬಾವಿಗಳೇ ಪರಿಹಾರ ಎನ್ನುತ್ತಿದೆ.
ಮಳೆನೀರೇ ಪರಿಹಾರ :
ನೀರಿನ ಸಮಸ್ಯೆಗೆ ಕೊಳವೆಬಾವಿ ಒಂದೇ ಪರಿಹಾರವಾಗುವುದಿಲ್ಲ. ಈ ಪರಿಹಾರಕ್ಕೆ ಕೆರೆ ಕಟ್ಟೆಗಳಂತಹ ಜಲಸಂರಕ್ಷಣಾ ತಾಣಗಳನ್ನು ಜೋಡಿಸಬೇಕು. ಗುಡ್ಡಗಾಡು ಪ್ರದೇಶಗಳಲ್ಲೂ ನೀರು ಇಂಗಿಸುವ ಚೆಕ್ ಡ್ಯಾಮ್ ಗಳು ನಿರ್ಮಾಣವಾಗಬೇಕು. ಜಗಳೂರಿನಲ್ಲಿ ಹಿಂದೆ ಗುರುಸಿದ್ದನಗೌಡರು ಶಾಸಕರಾಗಿದ್ದಾಗ ೧೦೦ಕ್ಕೂ ಹೆಚ್ಚು ಪುಟ್ಟ ಪುಟ್ಟ ಕೆರೆಗಳನ್ನು ಕಟ್ಟಿಸಿದ್ದರು. ಅವು ಪ್ರತಿ ಮಳೆಗಾಲದಲ್ಲಿ ತುಂಬುತ್ತವೆ. ಅಕ್ಕಪಕ್ಕದ ಕೊಳವೆಬಾವಿಗಳು ರೀಚಾರ್ಜ್ ಆಗುತ್ತವೆ. ಫ್ಲೋರೈಡ್ ಅಂಶ ಕಡಿಮೆಯಾಗುತ್ತದೆ. ಈ ಪ್ರಯತ್ನಗಳು ಸಾಮೂಹಿವಾಗಿ ನಡೆಯುವಂತಾಗಬೇಕು.
ನೀರಿನ ಸಮಸ್ಯೆಗೆ ‘ಮಳೆ ನೀರು’ ಹಿಡಿದುಕೊಳ್ಳುವ ಪರಿಹಾರ ಸೂಚಿಸಿದಾಗಲೆಲ್ಲ, ಕೆಲವರು ಜಗಳಕ್ಕೆ ಇಳಿಯುತ್ತಾರೆ. ‘ಮಳೆಯೇ ಬೀಳಲ್ಲ, ಇನ್ನು ಇಂಗಿಸುವುದು ಏನನ್ನು’ ಎಂದು ವ್ಯಂಗ್ಯ ಮಾಡುತ್ತಾರೆ.
ನೋಡಿ, ಈ ವರ್ಷ ಚಿತ್ರದುರ್ಗದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಯಿತು. ನಮ್ಮ ಮನೆ ಚಾವಣಿಯಿಂದ(೧೨೦೦ ಚ.ಅಡಿ) ೧.೫೦ ಲಕ್ಷ ಲೀಟರ್ ಸಂಗ್ರಹವಾಯಿತು. ನಾಲ್ಕೈದು ಕಿ.ಮೀ ದೂರದ ಜಮೀನಿನಲ್ಲಿ ಇಷ್ಟೇ ಮಳೆ ಸುರಿದಿದೆ. ಆದರೆ ಮಳೆ ನೀರು ಎಲ್ಲಿ ಹೋಯಿತು ? ಮನೆಯಲ್ಲಿ ಸರಿ ಹೋಗುವ ’ಗಣಿತ’, ಜಮೀನಿನಲ್ಲೇಕೆ ಸರಿಯಾಗುವುದಿಲ್ಲ? ಈ ಬಗ್ಗೆ ರೈತರು ಯೋಚಿಸಬೇಕಿದೆ. ಜಮೀನಿನ ಮೇಲೆ ಸುರಿಯುವ ಹನಿ ಮಳೆ ನೀರು, ಅದೇ ಮಣ್ಣಿನೊಳಗೆ ಠೇವಣಿಯಾಗಬೇಕು. ಮಣ್ಣಿನ ಫಲವತ್ತತೆ ಹೆಚ್ಚಿಸಬೇಕು. ಅಂಥ ಬೆಳೆ ಸಂಯೋಜನೆ ಮಾಡಬೇಕು. ಮಳೆಯಾಶ್ರಿತ ಅಥವಾ ಕಡಿಮೆ ನೀರು ಆಧಾರಿತ ಕೃಷಿ ಚಟುವಟಿಕೆಯೇ ಪ್ರಧಾನವಾಗಬೇಕು.
——–
‘ನೀರು ಶುದ್ಧೀಕರಣ’ದ ನಂತರ ಮುಂದೇನು ?
——————–
ಕರ್ನಾಟಕ ಸರ್ಕಾರ ರಾಷ್ಟ್ರಪತಿ ಕುಡಿಯುವಂಥ ಶುದ್ಧ ಕುಡಿಯುವ ನೀರನ್ನೂ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಪೂರೈಸಬೇಕೆಂದು ಹಳ್ಳಿ ಹಳ್ಳಿಗೆ ಶುದ್ಧ ಕುಡಿಯುವ ನೀರಿನ ಘಟಕ (ರಿವರ್ಸ್ ಆಸ್ಮೋಸಿಸ್ ಪ್ಲಾಂಟ್) ಸ್ಥಾಪಿಸುತ್ತಿದೆ. ಈ ಆರ್ ಓ ಘಟಕಗಳ ಬಾಳಿಕೆ ಅವಧಿ ಎಷ್ಟು ? ಒಂದು ಲೀಟರ್ ಶುದ್ಧೀಕರಿಸಲು ಒಂಬತ್ತು ಲೀಟರ್ ತ್ಯಾಜ್ಯ ನೀರು ಹೊರ ಹೊಮ್ಮುತ್ತದೆ. ಆ ರಾಸಾಯನಿಕ ತ್ಯಾಜ್ಯ ನೀರನ್ನು ಎಲ್ಲಿಗೆ ಪೂರೈಸುತ್ತಾರೆ. ಹಾಗೆ ಪೂರೈಸಿದಾಗ ಭೂಮಿಗೆ ಪುನಃ ರಾಸಾಯನಿಕ ಅಂಶಗಳು ಸೇರುವುದಿಲ್ಲವೇ ? ಈ ಬಗ್ಗೆ ಯಾರೂ ಚಿಂತಿಸುತ್ತಿಲ್ಲ.
ಉದಾಹರಣೆಗೆ, ಚಿತ್ರದುರ್ಗ ನಗರದಲ್ಲಿ ಕೆಲವು ಕಡೆ ಖಾಸಗಿಯವರು ಶುದ್ಧೀಕರಣ ಘಟಕ ಆರಂಭಿಸಿದ್ದರು. ಆ ಭಾಗದಲ್ಲಿನ ನೀರಿನಲ್ಲಿ 1200 ಪಿಪಿಎಂ ಪ್ರಮಾಣದಲ್ಲಿ ಫ್ಲೋರೈಡ್ ಇದ್ದಿದ್ದರಿಂದ, ತ್ವರಿತಗತಿಯಲ್ಲಿ ಶುದ್ಧೀಕರಣ ಯಂತ್ರಗಳು ಹಾಳಾಗಿ, ಲಕ್ಷ ರೂಪಾಯಿ ಖರ್ಚಿಗೆ ಬಂತು. ಅಂತಿಮವಾಗಿ, ಈಗ ಬೇರೆಡೆಯಿಂದ ಮೆದುನೀರನ್ನು ಖರೀದಿಸಿ, ಶುದ್ಧೀಕರಿಸಿ ಮಾರುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ, ಚಿತ್ರದುರ್ಗದಲ್ಲೇ ‘ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ’ ಅಳವಡಿಸಿರುವ ನೀರು ಶುದ್ಧೀಕರಣ ಘಟಕಗಳು ಎಷ್ಟು ಸುರಕ್ಷಿತ, ಶಾಶ್ವತ ?
——————————-
ಹೆಚ್ಚಿನ ಮಾಹಿತಿಗಾಗಿ : ಎನ್. ದೇವರಾಜರೆಡ್ಡಿ,
ಭೂಗರ್ಭಶಾಸ್ತ್ರಜ್ಞ ಮತ್ತು ಜಲತಜ್ಞ, ಜಲಧಾಮ, ಜಿಯೋ ರೈನ್ ವಾಟರ್ ಬೋರ್ಡ್, ಅಯ್ಯಪ್ಪಸ್ವಾಮಿ ದೇವಾಲಯದ ಎದುರು, ಎಂ.ಎಚ್.ರಸ್ತೆ, ವಿದ್ಯಾನಗರ, ಚಿತ್ರದುರ್ಗ 577502, ದೂರವಾಣಿ: 9448125498 email: devraj05@gmail.com