ಬದಲಾದ ನಮ್ಮೂರಿನಲ್ಲಿ ‘ಅಪ್ಪಿಕೋ’ ದಿನ

ಗುಡ್ಡಗಳ ಮೇಲೆಲ್ಲ  ವರ್ಷಪೂರ್ತಿ ಹಸಿರಿನ ಚಾದರ. ಅವುಗಳ ತಪ್ಪಲಿನಲ್ಲಿರುವ ಕೆರೆಗಳಲ್ಲಿ ವರ್ಷಪೂರ್ತಿ ನೀರು. ಹಳ್ಳಿಗಳ ರಸ್ತೆಗಳ ಇಕ್ಕಲೆಗಳಲ್ಲಿ ಹುಣಸೆ, ಹೊಂಗೆ, ಆಲ, ಬೇವು, ನೇರಲೆ.. ಇತ್ಯಾದಿ ಹಣ್ನಿನ ಮರಗಳ ಸಾಲು ಸಾಲು. ತೊನೆದಾಡುವ ತೆಂಗು, ಅಲ್ಲಲ್ಲಿ ಕಾಣುತ್ತಿದ್ದ ಕಂಗು, ದೂರದಲ್ಲಿ ಬತ್ತದ ಪೈರುಗಳು, ಕೊಯ್ಲಿನ ನಂತರ ಕಣದ ಬದುಕು, ಸುಗ್ಗಿಯ ಸಂಭ್ರಮ..!

ಕೇವಲ ಮೂವತ್ತು ವರ್ಷಗಳ ಹಿಂದೆ ನಮ್ಮೂರು ಗಾಣಧಾಳು ಹೀಗೆ ಇತ್ತು (ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಹೋಬಳಿಯಲ್ಲಿನ ನಮ್ಮೂರು ಅರ್ಥಾತ್ ಗಾಣಧಾಳು) ನಮ್ಮೂರಷ್ಟೇ ಅಲ್ಲ, ಸುತ್ತಲಿನ ಗುರುವಾಪುರ, ಮೇಲನಹಳ್ಳಿ, ರಂಗನಕೆರೆ, ದಸೂಡಿ, ದಬ್ಬಗುಂಟೆ, ಲಕ್ಕೇನಹಳ್ಳಿ, ಹೊಯ್ಸಲಕಟ್ಟೆ.. ಎಲ್ಲವೂ ಹೀಗೆ ಇದ್ದವು.

ಗುಡ್ಡಗಳನ್ನೇ ಸುತ್ತುವರಿದ ಊರುಗಳಾಗಿದ್ದರಿಂದ ಪ್ರತಿ ಗುಡ್ಡದ ತಪ್ಪಲಲ್ಲಿ  ಒಂದೊಂದು ಕರೆಗಳಿರುತ್ತಿದ್ದವು. ಒಂದು ಮಳೆಗಾಲಕ್ಕೆ ಕೆರೆ ತುಂಬಿದರೆ, ಎರಡು ವರ್ಷ ಭತ್ತ, ತೋಟಕ್ಕೆ ಆಗುವಷ್ಟು ನೀರು ಖಚಿತ. ಹೀಗಾಗಿ, ವರ್ಷ ಪೂರ್ತಿ ತೋಟದಲ್ಲಿ ಒಂದಲ್ಲ ಒಂದು ಕೃಷಿ ಚಟುವಟಿಕೆ ಕಾಯಂ.

ಗುಡ್ಡಗಳಲ್ಲಿ ಹಸಿರು ಕಾಣೆಯಾಗಿದ್ದನ್ನು ನಾನು ಕಂಡಿಲ್ಲ. ಅದು ಅರಣ್ಯ ಇಲಾಖೆಯ ಪ್ರಾಮಾಣಿಕ ಪ್ರಯತ್ನವೋ ಅಥವಾ ನಮ್ಮ ಪಶು, ಪಕ್ಷಿಗಳ ಬೀಜ ಪ್ರಸಾರದ ಕಾರ್ಯವೋ ಏನೋ, ಒಟ್ಟಾರೆ, ಇಡೀ ಗುಡ್ಡಗಳೆಲ್ಲ ಹಚ್ಚ ಹಸಿರಿನ ತಾಣವಾಗಿದ್ದವು. ವರ್ಷ ಪೂರ್ತಿ ದನಗಳಿಗೆ ಮೇವು ನೀಡುತ್ತಿದ್ದ ಗೋಮಾಳಗಳಾಗಿದ್ದವು.

ರಂಗನಗುಡ್ಡ, ಕರಡಿಗುಡ್ಡದ ತುಂಬಾ ಕಾಡುಬಿಕ್ಕೆ, ಕಾರೆಕಾಯಿ, ಬೆಲವತ್ತ ಹಣ್ಣಿನ ಮರ, ಕಾಡು ಹಲಸು, ಬೆಟ್ಟದ ನೆಲ್ಲಿ, ಕಿರುನೆಲ್ಲಿ, ಸೀಬೆ, ಮರಸೇಬು, ಸಪೋಟ, ಹುಣಸೆ ಸೇರಿದಂತೆ ಅನೇಕ ಹಣ್ಣಿ ಗಿಡಗಳು ಹರಡಿಕೊಂಡಿದ್ದವು. ಇವುಗಳ ಜೊತೆಗೆ ಬೇಟೆ ಸೊಪ್ಪು, ಕೊಳಕುಮಂಡಳ ಹಾವು ಕಚ್ಚಿದರೆ ವಾಸಿ ಮಾಡುವ ಗಿಡ ಮೂಲಿಕೆ, ಬೇಲಿ ಮಾಡುವ ಬಂದ್ರೆ ಸೊಪ್ಪು, ಜೀರುಂಬೆ ತಿನ್ನುವ ಬೇಟೆ ಸೊಪ್ಪು, ದನಗಳಿಗಾಗಿ ಮೇವಿನ ಮರಗಳು, ಕರಡೇವು.. ಹೀಗೆ ಸುತ್ತ ಹತ್ತೂರಿನ ಜನ ಜಾನುವಾರಿಗೆ ಪೂರೈಸುವ ಎಲ್ಲ ಸಂಪನ್ಮೂಲಗಳೂ ಸಮೃದ್ಧವಾಗಿದ್ದವು. ಇದೇ ಕಾರಣಕ್ಕೆ ಗುಡ್ಡದ ಮೇಲಿನ ಬಂಡೆಗಳ ಗುಹೆಗಳಲ್ಲಿ ಕರಡಿಗಳು ವಾಸವಿರುತ್ತಿದ್ದವು. ಅವುಗಳಿಗಾಗಿಯೇ ಅರಣ್ಯ ಇಲಾಖೆಯವರು ಅಲ್ಲಲ್ಲಿ ಗುಂಡಿಗಳನ್ನು ಮಾಡಿ, ಮಳೆ ನೀರು ಸಂಗ್ರಹಿಸುತ್ತಿದ್ದರು. ಈ ಎಲ್ಲ ಕಾರಣದಿಂದಲೇ ನಮಗೆಂದೂ ಗುಡ್ಡಗಳು ನಿರ್ಜೀವ ವಸ್ತುಗಳಾಗಿ ಕಾಣದೇ, ಜೀವವೈವಿಧ್ಯದ ಭಂಡಾರದಂತೆ ಗೋಚರಿಸುತ್ತಿದ್ದವು.

ಗುಡ್ಡಗಳು ನಮ್ಮೂರಿನ ಎಲ್ಲ ಜಲಮೂಲಗಳ ಕ್ಯಾಚ್ಮೆಂಟ್ ಪ್ರದೇಶ. ಮಳೆ ನಮ್ಮೂರಿಗೆ ಬೀಳಬೇಕೆಂದು ನಾವು ಎಣಿಸುತ್ತಿರಲಿಲ್ಲ. ದೂರದ ಗುಡ್ಡಕ್ಕೋ, ಆ ಬದಿಯ ಊರಿಗೆ ಜೋರು ಮಳೆಯಾಗಿ, ಉಳಿದ ನಾಲ್ಕು ಹನಿ ನಮ್ಮೂರಿನ ಜಮೀನುಗಳ ಮೇಲೆ ಬಿದ್ದರೆ ಎಂದು ಎಣಿಸುತ್ತಿದ್ದೆವು. ಅಂಥದ್ದೇ ಮಳೆ ಕರೆಯುವುದಕ್ಕಾಗಿ ನಮ್ಮೂರಲ್ಲಿ ‘ಕನ್ನೆಕೆರೆ’ ಎಂಬ ಸಾಂಪ್ರದಾಯಿಕ ದೇವರ ಹಬ್ಬ ಕೂಡ ನಡೆಯುತ್ತಿತ್ತು.

ಹಿರಿಯೂರು ಭಾಗದ ಕುದರೆಕಣಿವೆ (ಮಾರಿಕಣಿವೆ ಹಿಂಭಾಗದ ಜಾಗ) ಬೆಟ್ಟ, ದಸೂಡಿ ಭಾಗದ ಗುಡ್ಡಗಳ ಮೇಲೆ ಮಳೆ ಸುರಿದರೆ, ಸೋಮನಹಳ್ಳಿ ಕೆರೆ, ಹಳೇಕೆರೆ ಭರ್ತಿಯಾಗುತ್ತಿತ್ತು. ಈ ಗುಡ್ಡಗಳ ಮೇಲೆ ಸುರಿದ ಹನಿ ಹನಿ ಮಳೆ ನೀರು ತಪ್ಪದೇ ಕೆರೆ ಸೇರುತ್ತಿತ್ತು. ಒಮ್ಮೆ ಕೆರೆ ತುಂಬಿದರೆ, ಊರಲ್ಲಿರುವ ಬಾವಿಗಳೆಲ್ಲ ಭರ್ತಿಯಾಗುತ್ತಿದ್ದವು. ನನಗೆ ನೆನಪಿದ್ದಂತೆ, ನಮ್ಮ ಮನೆಯ ಎದುರಿನ ಬಾವಿಯಲ್ಲಿ ಹಗ್ಗ, ರಾಟೆ ಇಲ್ಲದೇ, ಹಾಗೆಯೇ ಬಿಂದಿಗೆಯಲ್ಲಿ ನೀರು ಮೊಗೆದ ಉದಾಹರಣೆಗಳಿವೆ. ಅಷ್ಟರಮಟ್ಟಿಗೆ ಅಂತರ್ಜಲ ಮೇಲ್ಭಾಗದಲ್ಲಿರುತ್ತಿತ್ತು.

ಕೆರೆಯಲ್ಲಿ ನೀರಿದ್ದಾಗ, ಊರಿನಲ್ಲಿ ಯಾರೂ ಮನೆ ಕಟ್ಟುವ ಪ್ರಯತ್ನ ಮಾಡುತ್ತಿರಲಿಲ್ಲ. ಏಕೆಂದರೆ, ತಳ ಹದಿ ತೆಗೆಯುವ ವೇಳೆಗೆ ನೀರಿನ ಒರತೆ ಆರಂಭವಾಗುತ್ತಿತ್ತು. ಕಡಪ ಕಲ್ಲಿನ ಮನೆಗಳಲ್ಲಿ ನೀರಿನ ಜೋಪು ಕಾಣುತ್ತಿತ್ತು. ಕೊಟ್ಟಿಗೆಗಳಲ್ಲಿ ದನ ಕಟ್ಟಲು ನೆಟ್ಟಿದ್ದ ಗೂಟೆಗಳೆಲ್ಲ ಸಡಿಲವಾಗುತ್ತಿದ್ದವು. ತೋಟದಲ್ಲಿ, ತೆಂಗಿನ ಮರಗಳಿಗೆ ಹೆಚ್ಚು ನೀರು ಹಾಯುತ್ತದೆ ಎಂದು ತೋಟದ ಸುತ್ತಾ, ಬಸಿಗಾಲುವೆಗಳನ್ನು ನಿರ್ಮಾಣ ಮಾಡುತ್ತಿದ್ದರು. ಹೆಚ್ಚಾದ ನೀರು, ಈ ಕಾಲುವೆಗಳ ಮೂಲಕ ತೋಟದಿಂದ ಹೊರ ಹಾಕುತ್ತಿದ್ದರು. ಹೀಗಾಗಿ ಮಳೆಗಾಲದ ಸುಮಾರು ಒಂದೂವರೆ ತಿಂಗಳು, ಅತಿಯಾದ ಅಂತರ್ಜಲದ ಒರತೆ ಇಡೀ ಊರನ್ನೇ ಬಾಧಿಸುತ್ತಿತ್ತು.

ವಿಶೇಷ ಎಂದರೆ ನಮ್ಮೂರಿನ ಪ್ರತಿ ತೋಟದಲ್ಲೂ ಒಂದೊಂದು ತೆರೆದ ಬಾವಿ ಇತ್ತು. ಹಳೇಕೆರೆ, ಹೊಸಕೆರೆ ಮುದ್ದಣ್ಣನ ತೋಟದ ಬಾವಿ, ಕುಂಬಾರಳ್ಳಿಯವರ ಬಾವಿ, ದೊಡ್ಡಯ್ಯನ ತೋಟದ ಬಾವಿ, ಪಂಚನಹಳ್ಳಿಯವರ ಬಾವಿ, ನೇರಲಬಾವಿ, ದೆವ್ವದ ಬಾವಿ, ಹಂಪಣ್ಣನ ಮನೆ ಬಾವಿ, ಗುಡಿಗೌಡರ ಮನೆ ಬಾವಿ, ಸಾಬರ ತೋಟದ ಬಾವಿ, ಗಂಗಸಿದ್ನಾಳ್ ಹಳ್ಳ, ಯಗಚಿಹಳ್ಳಿ ಹಳ್ಳ, ಬಾಳೆಗುಂದಿ ಹಳ್ಳ.. ಇತ್ಯಾದಿ ಬಾವಿಗಳಿದ್ದವು. 1980ರವರೆಗೂ ಕೊಳವೆ ಬಾವಿ ಬಂದಿರಲಿಲ್ಲ. ಪ್ರತಿಯೊಂದು ಮನೆಯ ಹಿತ್ತಲಿನಲ್ಲೂ ತೆರೆದಬಾವಿಗಳಿದ್ದವು. ಹೀಗಾಗಿ, ನೀರಿಗಾಗಿ ಪಂಪ್ ಹಾಕುವುದು, ಮೋಟಾರ್ ಹಾಕುವುದು ಇವೆಲ್ಲ ತಾಪತ್ರಯವೇ ಇರಲಿಲ್ಲ.

ಮತ್ತೊಂದು ಕಡೆ ಹುಳಿಯಾರು ಹೊರ ಭಾಗದಲ್ಲಿ ಉತ್ತಮ ಮಳೆಯಾಗಿ ತಿಮ್ಮಲಾಪುರದ ಕೆರೆ ಭರ್ತಿಯಾದರೆ ಸಾಕು, ಹೆಚ್ಚಾದ ನೀರು, ಕಾರೇಹಳ್ಳಿ ಮೂಲಕ ಹರಿದು ಬೋರನಕಣಿವೆ ಜಲಾಶಯ ಸೇರುತ್ತಿತ್ತು. ಒಮ್ಮೆ ಜಲಾಶಯ ಭರ್ತಿಯಾದರೆ, ಸುತ್ತಲಿನ ಗದ್ದೆಗಳಲ್ಲಿ ಎರಡು ವರ್ಷ ಭತ್ತ, ಜೊತೆಗೆ ಮೀನುಗಾರಿಕೆ ಚಟುವಟಿಕೆ ನಿರಂತರವಾಗಿ ನಡೆಯುತ್ತಿತ್ತು.

ಗಾಣಧಾಳು ಗ್ರಾಮದ  ಮೇಲ್ಭಾಗದ ಪ್ರದೇಶದಲ್ಲಿ ಕಬ್ಬು ಬೆಳೆಯುತ್ತಿದ್ದರು. ಅದಕ್ಕಾಗಿಯೇ ಆ ಜಾಗಕ್ಕೆ ಇವತ್ತಿಗೂ ‘ಕಬ್ಬಿನ ಕೂಳೆ’ ಎಂಬ ಹೆಸರಿದೆ. ಅಲ್ಲಿ ಬೆಳೆದ ಕಬ್ಬನ್ನು ಗಾಣಧಾಳಿನಲ್ಲಿದ್ದ ಆಲೆಮನೆಗಳಲ್ಲಿ ಅರೆದು ಬೆಲ್ಲ ಮಾಡುತ್ತಿದ್ದರಂತೆ. ಅದಕ್ಕೇ ಗಾಣದ ಹಾಲು ಎಂಬ ಹೆಸರಿದೆ ಎಂದು ಹೇಳುತ್ತಾರೆ.

ಯಗಚಿಹಳ್ಳಿಯಿಂದ ಕೆಳಭಾಗಕ್ಕಿರುವ ಹಳ್ಳವನ್ನು ‘ಬಾಳೆಗುಂದಿ ಹಳ್ಳ’ ಎನ್ನುತ್ತಾರೆ. ಸುತ್ತಲಿನ ಗುಡ್ಡ ಹಾಗೂ ದೂರದ ಕೆರೆಯಲ್ಲಿ ನಿಂತು ಇಂಗಿ, ಹೆಚ್ಚಾಗಿ ಹರಿದ ನೀರು ಈ ಹಳ್ಳದಲ್ಲಿ ಹರಿಯುತ್ತಿದ್ದು, ಈ ಪ್ರದೇಶದಲ್ಲಿ ಬಾಳೆ ಬೆಳೆಯುತ್ತಿದ್ದರಿಂದ ಆ ಹೆಸರು ಇಟ್ಟಿದ್ದಾರೆ. ಈ ಎಲ್ಲ ಸಂಕೇತಗಳು, ಚಿನ್ಹೆಗಳು, ಈ ಗ್ರಾಮದಲ್ಲಿನ ಅಂತರ್ಜಲ ಸಮೃದ್ಧಿ, ಸುಸ್ಥಿರ ಕೃಷಿ ಚಟುವಟಿಕೆಯನ್ನು ಪ್ರತಿ ಪಾದಿಸುತ್ತವೆ.

ಸಿರಾರಸ್ತೆಯಲ್ಲಿರುವ ಬೆಳ್ಳಾರದ ಸಮೀಪದ ಚಿನ್ನದಗಣಿ ಇತ್ತು. ಅದೇ ಜಾಗದಲ್ಲಿ ರಾಜ್ಯಪಾಲರಾಗಿದ್ದ ಧರ್ಮವೀರ ಅವರ ಹೆಸರಿನಲ್ಲಿ ತೋಟಗಾರಿಕಾ ಫಾರಂ ಕೂಡ ಇತ್ತು (ಈಗ ಬೋರ್ಡ್ ಅಷ್ಟೇ ಇರಬಹುದು). ಇಲ್ಲಿ ಚಿನ್ನದ ಗಣಿ ನಿಂತ ಮೇಲೆ, ತೆಂಗಿನ ತಳಿಗಳನ್ನು ಬೆಳೆಸುವ ಅಥವಾ ಅಭಿವೃದ್ದಿಪಡಿಸುವ ಕೆಲಸಗಳು ನಡೆಯುತ್ತಿದ್ದವು. 1984ರಲ್ಲಿ ಕೈಗೆಟುಕುವ ಬುಡ್ಡ ತೆಂಗಿನ ಮರಗಳಲ್ಲಿ (ಡ್ವಾರ್ಫ್ ವೆರೈಟಿ) ಕೆಂದನೆಯ ಎಳನೀರು ಬಿಟ್ಟಿದ್ದನ್ನು ನೋಡಿದ ನೆನಪು.

ಇಂಥ ಸಮೃದ್ಧವಾಗಿದ್ದ ಹುಳಿಯಾರು ಸುತ್ತಮುತ್ತಲಿನ ಗ್ರಾಮಗಳ ಪರಿಸರ ಎರಡು-ಮೂರು ದಶಕಗಳಲ್ಲಿ ಕ್ಷಿಪ್ರಗತಿಯಲ್ಲಿ ಬದಲಾಗಿದೆ. ಈ ಬದಲಾವಣೆಗೆ ಮಳೆ ದಿನಗಳು ಕಡಿಮೆಯಾಗಿದೆ ಎನ್ನುವ ಕಾರಣ ಒಂದು ಕಡೆಯಾದರೆ, ಮತ್ತೊಂದು ಕಾರಣ ಸುರಿವ ಮಳೆಯ ನೀರನ್ನು ಕೆರೆಗಳಿಗೆ ಸೇರಿಸುತ್ತಿದ್ದ ಬೆಟ್ಟ ಗುಡ್ಡಗಳಲ್ಲಿದ್ದ ನೀರ ಹಾದಿಯನ್ನೇ ಬದಲಿಸಿರುವುದು. ಗುಡ್ಡಗಳ ನೆತ್ತಿಗಳನ್ನು ಕಡಿದು ಪವನ ಯಂತ್ರಗಳನ್ನು ಅಳವಡಿಸಿ, ನೀರು ಹರಿಯುವ ದಾರಿಗಳನ್ನು ಬದಲಾಯಿಸಲಾಗಿದೆ. ಅಲ್ಪಸ್ವಲ್ಪ ಇದ್ದ ಕುರುಚಲು ಕಾಡು ತೆಳ್ಳಗಾಗುತ್ತಿದೆ. ಕಾಡುಬಿಕ್ಕೆ, ಕಾಡು ಹಲಸು, ನೇರಳೆ, ಕಾಡುನೆಲ್ಲಿ ಇತ್ಯಾದಿ ಗಿಡಗಳು ನಾಪತ್ತೆಯಾಗಿವೆ. ಗುಡ್ಡ ರಕ್ಷಿಸುತ್ತಿದ್ದ ಕರಡಿ, ಕಿರುಬನಂತಹ ಪ್ರಾಣಿಗಳು ನಾಪತ್ತೆಯಾಗಿವೆ.

ಕ್ಯಾಚ್ಮೆಂಟ್ (ಗುಡ್ಡಗಳು) ಪ್ರದೇಶ ಹಾಳಾದ ಮೇಲೆ ಕೆರೆಯಲ್ಲಿ ನೀರು ನಿಲ್ಲುವ ಪ್ರಮಾಣ ಕಡಿಮೆಯಾಗಿದೆ. ಪರಿಣಾಮ ಅಂತರ್ಜಲ ಕುಸಿದಿದೆ. ಕೆಲವು ಹಳ್ಳಿಗಳಲ್ಲಿ ಕೊಳವೆ ಬಾವಿಯ ನೀರು  ಫ್ಲೋರೈಡ್ ಯುಕ್ತವಾಗಿದೆ. ಗ್ರಾಮಗಳಿಗೂ ಕ್ಯಾನ್ ವಾಟರ್ ಅಡಿಯಿಟ್ಟಿದೆ. ಕೆಲವು ಕಡೆ ಶುದ್ಧನೀರಿನ ಘಟಕಗಳು ಸ್ಥಾಪಿತಗೊಂಡಿವೆ.

ಅಂತರ್ಜಲ ಪಾತಾಳಕ್ಕೆ ಇಳಿಯಲು ಅತಿಯಾದ ಕೊಳವೆಬಾವಿಳ ಕೊರೆತವೂ ಕಾರಣವಾಗಿದೆ. ಪರಿಣಾಮವಾಗಿ ತೊನೆದಾಡುತ್ತಿದ್ದ ತೆಂಗಿನ ಮರಗಳೇ ಸುಳಿ ಬಿಟ್ಟಿವೆ. ಬಯಲು ಸೀಮೆಗೆ ಬೇಡವಾಗಿದ್ದ ಅಡಕೆ ತಂದು ನೆಟ್ಟು, ನೀರನ್ನು ಬರಿದು ಮಾಡಲಾಗಿದೆ. ಹೊಲ, ಗದ್ದೆ ಉಳುಮೆ ಮಾಡಲು ಕೂಲಿ ಕಾರ್ಮಿಕರು ಸಿಗದೇ, ಆ ಗದ್ದೆಗಳ್ಲಲಿ ಹಣ ನೀಡುತ್ತದೆ ಎಂಬ ಆಸೆಯಿಂದ ಅಂತರ್ಜಲ ಬರಿದು ಮಾಡುವ ಅಕೇಷಿಯಾ ಗಿಡಗಳನ್ನು ನೆಡುತ್ತಿದ್ದಾರೆ.

ಬೋರಕನಕಣಿವೆ ಜಲಾಶಯಕ್ಕೆ ನೀರು ಬಾರದೇ ವರ್ಷಗಳೇ ಕಳೆದಿವೆ. ವಾಣಿಜ್ಯ ಪಟ್ಟಣ ಎಂದೇ ಹೆಸರು ಪಡೆದಿದ್ದ ಹುಳಿಯಾರು ಕುಡಿಯುವ ನೀರಿನ ಸಮಸ್ಯೆಯಿಂದ ನಲುಗುತ್ತಿದೆ. ರಾಜಕಾರಣಿಗಳು ಹೇಮಾವತಿ ಕೊಡುತ್ತೀವಿ, ಭದ್ರಾ ಮೇಲ್ದಂಡೆ ತರುತ್ತೇವೆ ಎಂಬ ನೀರು ಕೊಡುವ ಭರವಸೆಗಳೊಂದಿಗೆ ಚುನಾವಣೆಗಳನ್ನು ಗೆಲ್ಲುತ್ತಿದ್ದಾರೆ.

ಇತ್ತ ನೀರಿಲ್ಲದೇ ನಾಟಿ ಆಕಳು, ಹೋರಿಗಳೇ ತುಂಬಿದ್ದ ಗ್ರಾಮಗಳಲ್ಲಿ ಹೆಚ್ಚು ಹಾಲುಕೊಡುವ ಸೀಮೆ ಹಸುಗಳು ಸ್ಥಾನಪಡೆದಿವೆ. ಗುಡ್ಡಕ್ಕೆ ಜಂಗ್ಲಿ ದನ ಹೊಡೆಯುವವರೂ ಇಲ್ಲವಾಗಿದ್ದಾರೆ. ಪ್ರತಿ ಊರಿನಲ್ಲಿ ನಿತ್ಯವೂ ಭಾನುವಾರದ ಕಳೆ. ಊರನ್ನು ರಕ್ಷಿಸುತ್ತಿದ್ದ ಬಹುತೇಕ ಮನೆ ಯಜಮಾನ, ಯಜಮಾನತಿಯರು, ಜಮೀನುಗಳನ್ನು ಬೆದ್ಲು ಬಿಟ್ಟು, ಬೆಂಗಳೂರಿನ ಹೊರವಲಯದ ಎಂಟನೇ ಮೈಲಿ, ದಾಸರಹಳ್ಳಿ, ನೆಲಗದರನಹಳ್ಳಿಯಲ್ಲಿ ನೆಲೆಸಿದ್ದಾರೆ. ಸಮೀಪದ ಗಾರ್ಮೆಂಟ್ ಕಾರ್ಖಾನೆಯಲ್ಲಿ ಪತಿ ಸೆಕ್ಯೂರಿಟಿ ಗಾರ್ಡ್, ಪತ್ನಿ ಮಕ್ಕಳು ಗಾರ್ಮೆಂಟ್್ನಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ನಮ್ಮೂರಿನಲ್ಲಿ ಬಿಪಿಎಲ್ ಕಾರ್ಡ್, ಅನ್ನಭಾಗ್ಯದ ಅಕ್ಕಿ, ಸಕ್ಕರೆ, ಗೋಧಿ ಪಡೆದು, ಬೆಂಗಳೂರಿನ ಮೆನ ಮಂದಿಯಲ್ಲ ಸೇರಿ ವರ್ಷಕ್ಕೆ ಕೃಷಿಯಿಂದ ದುಡಿಯುವ ಹಣವನ್ನು ತಿಂಗಳೊಪ್ಪತ್ತಿಗೆ ದುಡಿಯುತ್ತಾ, ಇದೇ ಸರಿಯಾದ ಜೀವನ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

ಮೂರು ದಶಕಗಳ ಈ ಕ್ಷಿಪ್ರಗತಿಯ ಬದಲಾವಣೆಯ ವೇಳೆ, ಸಲಹೆಗಳನ್ನು ನೀಡಿ, ಪರಿಸರವನ್ನು ರಕ್ಷಿಸುವ ಯಾವ ಪ್ರಯತ್ನಗಳು ನಡೆದೇ ಇಲ್ಲ. ಇಂಥ ಸಂಕಷ್ಟದ ದಂಡೆಯ ಮೇಲೆ ನಿಂತಿರುವ  ಪ್ರದೇಶದಲ್ಲಿ ‘ಸಹ್ಯಾದ್ರಿ ಉಳಿಸಿ’ ಅಪ್ಪಿಕೋ ಚಳವಳಿಯ 32ನೇ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.

ಬಯಲು ಸೀಮೆಯವರಿಗೆ ದಾರಿ ತೋರುವ  ಇಂಥ ಕಾರ್ಯಗಳು ಬಹಳ ಹಿಂದೆಯೇ ನಡೆಯಬೇಕಿತ್ತು. ಕನಿಷ್ಠ ತಡವಾಗಿಯಾದರೂ ಈ ಪ್ರಯತ್ನಗಳು ನಡೆಯುತ್ತಿವೆ ಎಂಬುದು ಖುಷಿಯ ವಿಚಾರ. ಈ ಕಾರ್ಯಕ್ರಮ ಬಯಲು ಸೀಮೆಯಲ್ಲಿ ಜಲ ಸಂರಕ್ಷಣೆಯ ಕ್ರಾಂತಿಗೆ ನಾಂದಿಯಾಡುವಂತಾಗಲಿ. ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ.