ವೆಂಕಣ್ಣಾಚಾರ್ ಸ್ವಾತಂತ್ರ್ಯೋತ್ಸವದ ನಿರೂಪಣೆಗೆ 40 ವರ್ಷ !


‘ಆ ಪಥ ಸಂಚಲನದಲ್ಲಿ ಭಾಗವಹಿಸಿರುವ ಮಕ್ಕಳ ಶಿಸ್ತನ್ನು ನೋಡಿ. ಎಷ್ಟು ಸೊಗಸಾಗಿದೆ. ಓಹೋ.. ಇಲ್ನೋಡಿ, ನಮ್ ಸಚಿವರು ಸ್ವಾತಂತ್ರ್ಯದ ಶುಭಾಶಯ ಸಂಕೇತವಾಗಿ ಬಲೂನ್‌ಗಳನ್ನು ಆಗಸಕ್ಕೆ ಹಾರಿ ಬಿಡುತ್ತಿದ್ದಾರೆ. ನೀವೆಲ್ಲ ಈಗ ಚಪ್ಪಾಳೆ ತಟ್ಟಿ ಸಂಭ್ರಮಿಸಬೇಕು. ಆಸಂಭ್ರಮ ಮುಗಿಲು ಮುಟ್ಟಬೇಕು…’
ಪ್ರತಿ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವದಲ್ಲಿ ಹೀಗೆ ದೇಶ ಭಕ್ತಿಯ ಆವಾಹನೆಯೊಂದಿಗೆ ಸಾಹಿತ್ಯ ಪರಿಚಾರಕ ಕೆ.ವೆಂಕಣ್ಣಾಚಾರ್ ವೀಕ್ಷಕ ವಿವರಣೆ ನೀಡುತ್ತಿದ್ದರೆ, ಗ್ಯಾಲರಿಯಲ್ಲಿ ಕುಳಿತ ಪ್ರೇಕ್ಷಕ ಮಹಾಪ್ರಭು ಮರು ಯೋಚನೆ ಮಾಡದೇ, ಜೋರಾಗಿ ಕರತಾಡನ ಮಾಡಲೇ ಬೇಕು. ಅಷ್ಟರಮಟ್ಟಿಗೆ ಅವರ ಮಾತುಗಳು ಪ್ರೀತಿ ಪೂರ್ವಕವಾಗಿರುತ್ತವೆ.
ಅಂದಹಾಗೆ, 78ರ ಹೊಸ್ತಿಲಲ್ಲಿರುವ ವೆಂಕಣ್ಣಾಚಾರ್ ಅವರ ಸ್ವಾತಂತ್ರ್ಯೋತ್ಸವದ ವೀಕ್ಷಕ ವಿವರಣೆಗೆ ಈಗ 41ರ ಹರೆಯ. ಅಪರೂಪದ ಮಾಹಿತಿ, ಸ್ಪುಟವಾದ ಭಾಷೆ, ನವಿರಾದ ನಿರೂಪಣೆಯೊಂದಿಗೆ ನಾಲ್ಕು ದಶಕಗಳಿಂದ ನಿರಂತರವಾಗಿ ವೆಂಕಣ್ಣಾಚಾರ್ ವೀಕ್ಷಕ ವಿರಣೆ ನೀಡುತ್ತಾಬಂದಿದ್ದಾರೆ. ಸಾವಿರಾರು ಪ್ರೇಕ್ಷರಿಂದ ಚಪ್ಪಾಳೆಗಳನ್ನು ಹೊಡೆಸಿದ್ದಾರೆ.

ನೆನಪಿನಾಳದಿಂದ…
ಚಿತ್ರದುರ್ಗದ ಹಳೇ ಮಾಧ್ಯಮಿಕ ಶಾಲೆ ಮೈದಾನದಲ್ಲಿ ಆಗಸ್ಟ್ 15, 1973ರ ಸ್ವಾತಂತ್ರ್ಯೋತ್ಸವದೊಂದಿಗೆ ವೀಕ್ಷಕ ವಿವರಣೆ ಆರಂಭಿ­ಸಿದ ವೆಂಕಣ್ಣಾಚಾರ್, 40 ವರ್ಷಗಳಲ್ಲಿ ಒಂದೇಒಂದು ವರ್ಷವೂ ಕಾರ್ಯಕ್ರಮಕ್ಕೆ ತಪ್ಪಿಸಿಕೊಳ್ಳದೇ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದಾರೆ.
‘1972ರಲ್ಲಿ ಚಿತ್ರದುರ್ಗಕ್ಕೆ ಕನ್ನಡ ಸಂಸ್ಕೃತಿ ಇಲಾಖೆಯ ನೌಕರನಾಗಿ ಬಂದೆ. 73ರ ಜನವರಿಯಿಂದಲೇಗಣರಾಜ್ಯೋತ್ಸವದ ನಿರೂಪಣೆ ಜವಾಬ್ದಾರಿ ದೊರೆಯಿತು. ಮೊದಲು ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಎರಡೂಹಳೇ ಮಾಧ್ಯಮಿಕ ಶಾಲಾಆವರಣದಲ್ಲಿ ನಡೆಯುತ್ತಿತ್ತು. ನಂತರ ಒನಕೆ ಓಬವ್ವ ಕ್ರೀಡಾಂಗಣಕ್ಕೆ ವರ್ಗವಾಯಿತು. ಈಗ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ನಡೆಯುತ್ತಿದೆ. ಪ್ರತಿ ವರ್ಷವೂ ಹೊಸ ಹೊಸ ರೂಪದೊಂದಿಗೆ ಕಾರ್ಯಕ್ರಮಗಳು ನಡೆಯುತ್ತಿವೆ. ಮೊದಲು ಶಾಲಾ ಶಿಕ್ಷಕರು ಹಾಡು ಹೇಳುತ್ತಿದ್ದರೆ, ಮಕ್ಕಳು ನರ್ತಿಸುತ್ತಿದ್ದರು. ಈಗ ಟೇಪ್ ರೆಕಾರ್ಡರ್ ಗಳು ಹಾಡುತ್ತವೆ. ಆದರೆ, ಚಿತ್ರದುರ್ಗದಲ್ಲಿ ಎಂದೆಂದೂ ಕಾರ್ಯಕ್ರಮಗಳು ಕಳಪೆಯಾಗಿ ನಡೆಯಲಿಲ್ಲ’ ಎಂದು ಬದಲಾವಣೆಯ ಹಂತಗಳನ್ನು ನೆನಪಿಸಿಕೊಳ್ಳುತ್ತಾರೆ ವೆಂಕಣ್ಣಾಚಾರ್.

ಪ್ರೀತಿಯ ಕೆಲಸ…
ವೆಂಕಣ್ಣಾಚಾರ್ ತನ್ನ ನಾಲ್ಕು ದಶಕಗಳ ಈ ‘ನಿರೂಪಣೆಯ ಪಯಣ’ದಲ್ಲಿ ಸಾಕಷ್ಟು ರಾಜಕೀಯ ನಾಯಕರನ್ನು ಕಂಡಿದ್ದಾರೆ. ಸಾಹಿತಿಗಳು,

ಸಂಶೋಧಕರು, ಅಷ್ಟೇಅಲ್ಲ, ಅನೇಕ ಕಲಾವಿದರ ಸಾಂಗತ್ಯದಲ್ಲೂ ಸ್ವಾತಂತ್ರ್ಯೋತ್ಸವದ ವೀಕ್ಷಕ ವಿವರಣೆ ನೀಡಿದ್ದಾರೆ. ಸರ್ಕಾರಿ ನೌಕರಿಯಲ್ಲಿದ್ದು, ಸಾಹಿತ್ಯ ಪ್ರಕಾರಗಳನ್ನು ಓದಿಕೊಂಡು, ಜ್ಞಾನ ದಿಗಂತವನ್ನು ವಿಸ್ತರಿಸಿಕೊಂಡಿದ್ದರೂ, ತಾವೊಬ್ಬ ಸಾಹಿತ್ಯ ಪರಿಚಾರಕರಾಗಿ, ನಿರೂಪಣೆಯ ಕೆಲಸವನ್ನು ಅತ್ಯಂತ ವಿನಯದಿಂದ ಮಾಡುತ್ತಾರೆ. ಅವರ ನಿರೂಪಣೆಯ ತಯಾರಿ, ವೇದಿಕೆಯ ಅತಿಥಿಗಳಬಗೆಗಿನ ಮಾಹಿತಿ ಸಂಗ್ರಹ, ಗುಣ ವಿಶೇಷಣಗಳನ್ನು ಜವಾಬ್ದಾರಿಯಿಂದ ಸಂಗ್ರಹಿಸುತ್ತಾರೆ. 39 ಬಾರಿ ಸ್ವಾತಂತ್ರ್ಯೋತ್ಸವ ನಿರೂಪಣೆ ಮಾಡಿದರೂ, 40ನೇಕಾರ್ಯಕ್ರಮಕ್ಕೂ ತಾಲೀಮಿನೊಂದಿಗೆ ಬರುತ್ತಾರೆ ಎಂದ ಅವರನ್ನು ಹತ್ತಿರದಿಂದ ಬಲ್ಲವರೂ ಹೇಳುತ್ತಾರೆ.
ಸಮಿತಿಯವರಿಗೆ ಅಭಾರಿ..!
‘ಹಾಗಾದರೆ, ಈ ನಲ್ವತ್ತು ವರ್ಷಗಳಲ್ಲಿ ವೆಂಕಣ್ಣಾಚಾರ್ ಇಲ್ಲದೇ ಚಿತ್ರದುರ್ಗದಲ್ಲಿ ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ ನಡೆದೇ ಇಲ್ಲ ಅಲ್ವೇ’ ಅಂತ ವೆಂಕಣ್ಣಾಚಾರ್ ಅವರನ್ನು ಪ್ರಶ್ನಿಸಿದರೆ, ‘ಇಲ್ಲ, ಒಂದೇಒಂದು ಸಾರಿ ಗಣರಾಜ್ಯೋತ್ಸವ ಕಾರ್ಯಕ್ರಮ ಮಿಸ್ ಆಗಿದೆ’ ಎಂದು ಪತ್ನಿ ರಮಾ ವೆಂಕಣ್ಣಾಚಾರ್ ನೆನಪಿಸಿಕೊಂಡು ಹೇಳುತ್ತಾರೆ.
‘ಈ ಬಾರಿ ಆರೋಗ್ಯ ಸಹಕರಿಸುತ್ತಲ್ಲ. ನಿರೂಪಣೆಗೆ ಬರೋದಿದಲ್ಲ ಅಂತ ಸ್ವಾತಂತ್ರ್ಯೋತ್ಸವದ ಸಭೆಯಲ್ಲಿ ಹೇಳಿದೆ. ಆದರೆ ಸಮಿತಿಯವರು ಒಪ್ಪಲಿಲ್ಲ. ನಿಮಗೆ ಶಕ್ತಿ ಇರುವವರೆಗೂನಡೆಸಿಕೊಡಿ’ ಎಂದು ಪ್ರೀತಿಯಿಂದ ಕೇಳಿದರು. ನೋಡಿ, ನಾನು ನಲ್ವತ್ತುವರ್ಷ ನಿರೂಪಣೆ ಮಾಡಿದ್ದೇನೆ ಎನ್ನುವುದಕ್ಕಿಂತ, ಅಷ್ಟು ವರ್ಷಗಳ ಸ್ವಾತಂತ್ರ್ಯೋತ್ಸವ ಸಮಿತಿಯವರು ನಾನೇನಿರೂಪಣೆ ಮಾಡಬೇಕೆಂದು ಬಯಸಿದ್ದಾರಲ್ಲಾ, ಅದು ನಿಜವಾದ ಪ್ರೀತಿ. ಅದಕ್ಕೆ ನಾನು ಆಭಾರಿಯಾಗಿದ್ದೇನೆ’ ಎಂದು ಮನತುಂಬಿ ನೆನಪಿಸಿಕೊಳ್ಳುತ್ತಾರೆ ವೆಂಕಣ್ಣಾಚಾರ್.
ನಿಜ, ವೆಂಕಣ್ಣಾಚಾರ್ ನಿರೂಪಣೆ ಎಂದರೆ ಹಾಗಿರುತ್ತದೆ. ಅವರ ಮಾತುಗಳಲ್ಲಿ ಒಮ್ಮೊಮ್ಮೆ ಹೊಗಳಿಕೆ ಉತ್ತುಂಗಕ್ಕೆ ಏರಿದ್ದರೂ, ಅವರು ಸಾಂದರ್ಭಿಕವಾಗಿ ನೀಡುವ ಮಾಹಿತಿಗಳು, ವಿಶೇಷವಾದ ನಿರೂಪಣೆ, ಅವೆಲ್ಲವನ್ನೂ ಮರೆಸಿಬಿಡುತ್ತದೆ. ಅಂಥ ನಿರೂಪಣೆಯ ದನಿ ಮತ್ತಷ್ಟು ವರ್ಷ ಕೇಳುವಂತಾಗಲಿ.

Published by

ಗಾಣಧಾಳು ಶ್ರೀಕಂಠ

ಹುಟ್ಟೂರು ಗಾಣಧಾಳು. ಓದಿದ್ದು ತಿಪಟೂರು. ಕೆಲಸ ಮಾಡ್ತಿರೋದು ಬೆಂಗಳೂರು. ವೃತ್ತಿಯಲ್ಲಿ ಪತ್ರರ್ತ, ಆಸಕ್ತಿ ಕೃಷಿ-ಗ್ರಾಮೀಣಾಬಿವೃದ್ದಿ ಮತ್ತು ಪರಿಸರ. ಫೋಟೋಗ್ರಫಿ, ಪುಟ ವಿನ್ಯಾಸ, ಪ್ರವಾಸ ಹವ್ಯಾಸ. ರಮಾ ಬಾಳಸಂಗಾತಿ. ಆಕೆಯೂ ಹವ್ಯಾಸಿ ಬರಹಗಾರ್ತಿ. ಸ್ಪೈಸ್ ಇಂಡಿಯಾ ಕನ್ನಡ ಮಾಸ ಪತ್ರಿಕೆಯಲ್ಲಿ ಆರು ವರ್ಷ ಸಹಾಯಕ ಸಂಪಾದಕಿ (ಎಡಿಟೋರಿಯಲ್ ಅಸಿಸ್ಟೆಂಟ್) ಕೆಲಸ ಮಾಡಿದ್ದಾರೆ. ಸದ್ಯ ಚಿತ್ರದುರ್ಗ ಆಕಾಶವಾಣಿ ಕೇಂದ್ರದಲ್ಲಿ ಗೌರವ ಉದ್ಘೋಷಕಿ, ಮಗಳು ನದಿ ನನ್ನ ಬದುಕು, ಮಗ ಅಗರ್ತ, ನನ್ನ ಭವಿಷ್ಯ. ನಿವೃತ್ತ ಶಿಕ್ಷಕ ತಂದೆ ಗಾಣಧಾಳು ರಾಮಣ್ಣ ಅವರೊಂದಿಗೆ ವರ್ಗವಾದ ಕಡೆ ವಾಸ್ತವ್ಯ. ಸದ್ಯ ಚಿತ್ರದುರ್ಗದಲ್ಲಿ ವಾಸ. ಸಮಾಜಶಾಸ್ತ್ರ ಮತ್ತು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. ಕಾಲೇಜು ದಿನಗಳಲ್ಲೇ ಪತ್ರಿಕೆಗಳಿಗೆ ಲೇಖನ ಬರೆಯುವ ಹವ್ಯಾಸ. ಪ್ರಜಾಪ್ರಗತಿ, ಉದಯವಾಣಿ ಪತ್ರಿಕೆಗಳಿಗೆ ಅರೆಕಾಲಿಕ ವರದಿಗಾರನಾಗಿ ಸೇವೆ. ೧೯೯೬ರಿಂದ ತಿಪಟೂರಿನ ಬೈಫ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಲ್ಲಿ ದಾಖಲಾತಿಗಾರನಾಗಿ ವೃತ್ತಿ ಆರಂಭ. ಕ್ರಮೇಣ, ಅದೇ ಸಂಸ್ಥೆಯ ಪ್ರಕಾಶನದ ಸಿರಿಸಮೃದ್ಧಿ ಕೃಷಿ ಮಾಸಪತ್ರಿಕೆಯಲ್ಲಿ ಉಪ ಸಂಪಾದಕನಾಗಿ ಸೇವೆ ಮುಂದುವರಿಕೆ. ೨೦೦೨ರಿಂದ ವಿಜಯ ಕರ್ನಾಟಕ ದಿನಪತ್ರಿಕೆಯ ಚಿತ್ರದುರ್ಗ ಆವೃತ್ತಿಯಲ್ಲಿ ಉಪ ಸಂಪಾದಕನಾಗಿ ಸೇವೆ ಆರಂಭ. ೨೦೦೪ರಲ್ಲಿ ಇದೇ ಪತ್ರಿಕೆಯ ಕೃಷಿ ವಿಜಯ ಪುರವಣಿಯ ಮುಖ್ಯಸ್ಥನಾಗಿ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಣೆ. ೨೦೦೬ರಿಂದ ಪ್ರಜಾವಾಣಿ ಪತ್ರಿಕೆಯ ಬೆಂಗಳೂರಿನ ಕಚೇರಿಯಲ್ಲಿ ವಿವಿಧ ವಿಭಾಗಗಳಲ್ಲಿ ಸೇವೆ. ಪ್ರಕಟಿತ ಕೃತಿಗಳು : ಆಕಾಶವಾಣಿಯಲ್ಲಿ ಪ್ರಸಾರವಾದ ನಾಟಿ ಬೀಜಗಳ ಪರಂಪರೆ ಕುರಿತ ಸರಣಿಯ ಅಕ್ಷರ ರೂಪದ ಕೃತಿ ‘ಬೀಜಸಂಪದ’ . ಸಾವಯವ ಕೃಷಿಕರ ಯಶೋಗಾಥೆಯ ಕೃತಿ ‘ಸಾವಯವ ಚಿತ್ತಾರ’, ‘ವೆಲ್ವೆಟ್ ಬೀನ್ಸ್ -ನೆಲಕ್ಕೆ ಜೀವ ತುಂಬುವ ಮ್ಯಾಜಿಕ್ ಬಳ್ಳಿ’, ‘ಸ್ಲೋಫುಡ್- ಸುಭೋಜನಾ ಸಾವಧಾನ’, ‘ದೇಸಿ ಕೃಷಿ ಉಪಕರಣಗಳು’, ‘ನೆಲಮೂಲ ಕೃಷಿಜ್ಞಾನ- ಮಲೆನಾಡ ದೇಸಿ ಕೃಷಿ ಪದ್ಧತಿಗಳು’, ‘ ಹಸಿರು ಹಾದಿ’, ‘ಅಜೋಲಾ-ಮೇವಿಗೂ ಸೈ ಗೊಬ್ಬರಕ್ಕೂ ಜೈ’, ‘ಸುಸ್ಥಿರ ತೋಟ ಮಾಡೋಣ ಬನ್ನಿ’ ಹಾಗೂ ‘ಹೊನ್ನಾರು - ಪರಿಸರ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಚಿಂತನೆ’ ಕುರಿತ ಕೃತಿಗಳು ಪ್ರಕಟಗೊಂಡಿವೆ. ಪ್ರಶಸ್ತಿ ಪುರಸ್ಕಾರ ೨೦೦೬ರಲ್ಲಿ ಸಿಡಿಎಲ್ ಸಂಸ್ಥೆಯಿಂದ ‘ಕೆರೆ ಆಪೋಷಣ ಪುರಾಣ’ ಲೇಖನಕ್ಕೆ ರಾಜ್ಯಮಟ್ಟದ ‘ಚರಕ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ’. ಇದೇ ವರ್ಷ ಧಾರವಾಡದ ಕೃಷಿ ಮಾಧ್ಯಮ ಕೇಂದ್ರದಿಂದ ‘ವೆಲ್ವೆಟ್ ಬೀನ್ಸ್’ ಲೇಖನಕ್ಕಾಗಿ ‘ರಾಜ್ಯ ಮಟ್ಟದ ಉತ್ತಮ ಕೃಷಿ ಬರಹಗಾರ ಪ್ರಶಸ್ತಿ’. ‘ದೇಸಿ ಭತ್ತ ಭ್ರಹ್ಮ ನಟವರಸಾರಂಗಿ’ ಲೇಖನಕ್ಕಾಗಿ ೨೦೦೯ರಲ್ಲಿ ಮುರುಘಾಶ್ರೀ - ರಾಜ್ಯಮಟ್ಟದ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ, ೨೦೧೦-೧೧ನೇ ಸಾಲಿನ ‘ಉತ್ತಮ ವಿಜ್ಞಾನ ಲೇಖಕ ಪ್ರಶಸ್ತಿಗೆ ವೆಲ್ವೆಟ್ ಬೀನ್ಸ್ ಮತ್ತು ಸಾವಯವ ಚಿತ್ತಾರ ಪುಸ್ತಕಗಳ ಆಯ್ಕೆ. ೨೦೧೧ರಲ್ಲಿ ನವದೆಹಲಿಯ ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್(ಸಿಎಸ್ಇ) ಸಂಸ್ಥೆಯಿಂದ ‘ಜಲಮೂಲಗಳ ಅಧ್ಯಯನಕ್ಕಾಗಿ’ ೧೨ನೇ ಸಿಎಸ್ಇ ಫೆಲೋಷಿಪ್ ಗೌರವ. ೨೦೧೨ರ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ‘ಯಜಮಾನ್ ಶ್ರೀ ನಾರಾಯಣಪ್ಪ ಪ್ರಶಸ್ತಿ, ೨೦೧೧ನೇ ಸಾಲಿನಲ್ಲಿ ‘ಬೆಂಗಳೂರು ನಿರ್ಮಾತೃ ಕೆಂಪೇಗೌಡ ಪ್ರಶಸ್ತಿ ಪುರಸ್ಕಾರ ಹಾಗೂ ಪರಿಸರ ಪತ್ರಿಕೋದ್ಯಮದಲ್ಲಿನ ಎರಡು ದಶಕಗಳ ಗಣನೀಯ ಸೇವೆಯನ್ನು ಗುರುತಿಸಿರುವ ಕರ್ನಾಟಕ ಸರ್ಕಾರ ‘೨೦೧೪ನೇ ಸಾಲಿನ ರಾಜ್ಯಮಟ್ಟದ ‘ಪರಿಸರ ಪತ್ರಿಕೋದ್ಯಮ’ ಪ್ರಶಸ್ತಿ’ ನೀಡಿ ಗೌರವಿಸಿದೆ. ಅಧ್ಯಯನ ಪ್ರವಾಸ : ಕೃಷಿ ಅಧ್ಯಯನಕ್ಕಾಗಿ ೨೦೧೩ರಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಸ್ಯಾನ್ಫ್ರಾನ್ಸಿಸ್ಕೋಗೆ ಪ್ರವಾಸ. ಭಾರತದ ಚಂಡಿಗಡ, ಒರಿಸ್ಸಾ, ಬಿಹಾರ, ಆಂಧ್ರ, ತಮಿಳುನಾಡು ಸೇರಿದಂತೆ ಕೃಷಿ ಅಧ್ಯಯನಕ್ಕಾಗಿ ವಿವಿಧ ರಾಜ್ಯಗಳಲ್ಲಿ ಪ್ರವಾಸ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s