ಎದೆ ತುಂಬಿ ಹಾಡಿದ ಗಾಯಕರು, ಮನವಿಟ್ಟು ಕೇಳಿದ ಪ್ರೇಕ್ಷಕರು…!


03ct4ep 03ct5ep

ಬುಧವಾರ ಇಳಿ ಸಂಜೆಯಲ್ಲಿ ನಗರದ ತರಾಸು ರಂಗಮಂದಿರದ ತುಂಬಾ ಜಿಎಸ್ಎಸ್ ಕಾವ್ಯದ ಹೊನಲು ಹರಿಯುತ್ತಿತ್ತು. ಆ ಭಾವ ಲಹರಿಯ ಅಲೆಯಲ್ಲಿ ಐದುನೂರಕ್ಕೂ ಹೆಚ್ಚು ಕವಿ ಮನಸ್ಸಿನ ಸಹೃದಯಿಗಳು ತೇಲಿ ಹೋದರು..!
ವಿಶ್ವಪಥ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ‘ಎದೆ ತುಂಬಿ ಹಾಡುವೆವುವು…’ – ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರಿಗೆ ಗೀತ ನಮನ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯವಿದು.
‘ಹಣತೆ’ ಹಚ್ಚಿ ಕನ್ನಡ ಸಾರಸ್ವತ ಲೋಕವನ್ನು ಬೆಳಗಿಸಿದ ಚೈತ್ರ ಕವಿ ಜಿಎಸ್ಎಸ್ ಅವರ ಹದಿನಾರು ಜನಪ್ರಿಯ ಗೀತೆಗಳನ್ನು ಹದಿನೇಳು ಗಾಯಕರು ಹಾಡುವ ಮೂಲಕ ರಾಷ್ಟ್ರಕವಿಗೆ ಗೀತ ನಮನ ಸಲ್ಲಿಸಿದರು. ಗೀತೆಯ ಜೊತೆಗೆ, ಅದರ ರಚನೆಯ ಉದ್ದೇಶ, ಸನ್ನಿವೇಶ, ಸಂದರ್ಭಗಳನ್ನು ಸಾಹಿತ್ಯ ಪೂರಣ ನಿರೂಪಣೆಯ ಮೂಲಕ ಆಕಾಶವಾಣಿ ಕಾರ್ಯಕ್ರಮ ಮುಖಸ್ಥೆ ಉಷಾ ಲತಾ ಅವರು ನಿರೂಪಿಸಿದರು.
ಗಾಯಕಿ ಕೋಕಿಲಾ ರುದ್ರಮೂರ್ತಿಯವರ ದನಿಯಲ್ಲಿ ಮೂಡಿಬಂದ ಮುಂಗಾರಿನ ಅಭಿಷೇಕಕೆ / ಮಿದುವಾಯಿತು ನೆಲವು / ಧಗೆಯಾರಿದ ಹೃದಯದಲ್ಲಿ/ ಪುಟಿದೆದ್ದಿತು ಚೆಲುವು’ ಎಂಬ ಗೀತೆ ಪ್ರೇಕ್ಷಕರನ್ನು ಮುಂಗಾರಿನ ಮಳೆಯಲ್ಲಿ ತೊಯ್ದಂತಹ ಅನುಭವ ನೀಡಿತು.
ಯುವ ಗಾಯಕ ಪ್ರಜ್ವಲ್ ಧ್ವನಿಯಲ್ಲಿ ಮೂಡಿ ಬಂದ, ‘ಆಕಾಶದ ನೀಲಿಯಲ್ಲಿ / ಚಂದ್ರ ತಾರೆ ತೊಟ್ಟಿಲಲ್ಲಿ / ಬೆಳಕನಿಟ್ಟು ತೂಗದಾಕೆ / ನಿನಗೆ ಬೇರೆ ಹೆಸರು ಬೇಕೇ/ ಸ್ತ್ರೀ ಎಂದರೆ ಅಷ್ಟೇ ಸಾಕೆ’ ಗೀತೆ ಹಾಗೂ ಸತೀಶ್ ಜಟ್ಟಿಯವರ ಕಂಠದಿಂದ ಹೊಮ್ಮಿದ ‘ಕಾಣದ ಕಡಲಿಗೆ ಹಂಬಲಿಸಿದೆ ಮನ’ ಕವಿತೆ, ಗಾಯಕ ದಿ. ಸಿ. ಅಶ್ವತ್ಥ್ ಅವರ ಶಾರೀರವನ್ನು ನೆನಪಿಸಿತು. ಪ್ರೇಕ್ಷಕರ ಒತ್ತಾಯ ಹಾಗೂ ಹಾಡುಗಾರರ ಜಿಎಸ್ಎಸ್ ಮೇಲಿನ ಪ್ರೀತಿಯಿಂದಾಗಿ ‘ದುರ್ಗದ ಸಿರಿ’ ಸಾಂಸ್ಕೃತಿಕ ವೇದಿಕೆಯ ಡಿವೈಎಸ್ಪಿ ಮಹಂತರೆಡ್ಡಿಯವರು ’ಕಾಣದ ಕಡಲಿಗೆ ಹಂಬಲಿಸಿದ ಮನ’ ಹಾಡನ್ನು ಹಾಡಿ, ಪ್ರೇಕ್ಷಕರನ್ನು ಮತ್ತಷ್ಟು ರಂಜಿಸಿದರು. ಮಂದ್ರ ಸ್ಥಾಯಿ, ತಾರಸ್ಥಾಯಿಯ ಸಂಗೀತ ಸ್ವರಗಳಿಗೆ ಪ್ರೇಕ್ಷಕರು ತಲೆದೂಗಿದರು, ಧ್ಯಾನಸ್ಥರಾದರು, ಅಂತರ್ಮುಖಿಯಾಗಿ ಗಾಯನವನ್ನು ಆಸ್ವಾದಿಸಿದರು. ಕೆಲವರ ಕಣ್ಣಾಲಿಗಳು ತೇವವಾದವು !
ಬಿ.ಪಿ.ಶೋಭಾ ಅವರ ‘ಪ್ರಕೃತಿಯಂತೆ ಕವಿಯ ಮನಸು..’ ಗಾಯನ, ಚಿತ್ರದುರ್ಗದ ಜೋಗಿಮಟ್ಟಿಯ ಹಸಿರ ಸಿರಿಯನ್ನು ನೆನಪಿಸಿದರೆ, ಡಿ.ಓ ಮೊರಾರ್ಜಿಯವರ ‘ಶತಮಾನದಿಂದ ..’ ಗೀತೆ ದುರ್ಗದ ನೆಲದ ಹೋರಾಟದ ಕಿಚ್ಚನ್ನು ಮೆಲಕುವಂತೆ ಮಾಡಿತು. ವೇಣುಗೋಪಾಲ್ ಅವರ ದನಿಯಲ್ಲಿ ಮೂಡಿದ ‘ನಿನ್ನದೇ ನೆಲ, ನಿನ್ನದೇ ಜಲ..’ ಜಿಎಸ್ಎಸ್ ಅವರ ನೆಲದ ಪ್ರೀತಿಯನ್ನು ಪ್ರದರ್ಶಿಸಿತು. ಚಂದ್ರಪ್ಪ ಅವರು ‘ಎದೆ ತುಂಬಿ ಹಾಡುವೆನು’ ತ್ರಿವೇಣಿಯವರ ‘ಉಡುಗಣ ವೇಷ್ಟಿತ’, ಕುಮಾರಿ ನಾಶ್ರೀಯವರ ದನಿಯಲ್ಲಿ ಮೂಡಿ ಬಂದ ‘ಯಾವ ರಾಗಕೋ..’ ಗೀತೆಗಳು ಪ್ರೇಕ್ಷಕರ ಕೈಗಳಿಗೆ ತಾಳದ ಲೇಪನವನ್ನು ಹಚ್ಚಿದವು. ಈ ಎಲ್ಲ ಹಾಡುಗಳಿಗೂ ಪ್ರೇಕ್ಷಕ ಮಹಾಪ್ರಭು ಜೋರು ಚಪ್ಪಾಳೆ ತಟ್ಟುವ ಮೂಲಕ ‘ಫುಲ್ ಮಾರ್ಕ್ಸ್’ ನೀಡಿದರು.
ವೃಂದಗಾನದಲ್ಲಿ ಪ್ರಸ್ತುತಪಡಿಸಿದ ‘ಒಂದೇ ಒಂದೇ ಒಂದೇ ನಾವೆಲ್ಲರೂ ಒಂದೇ ’ ಗೀತೆ ಜಿಎಸ್ಎಸ್ ಅವರ ದೇಸಿ ತನವನ್ನು ತೆರೆದಿಟ್ಟರೆ, ನಾಗಶ್ರೀ, ಬಿ.ಪಿ.ಶೋಬಾ ಹಾಗೂ ಮೀನಾಕ್ಷಿ ಭಟ್ ಹಾಡಿದ ‘ಹೊಸ ವರ್ಷದ ಗೀತೆ’ ಪ್ರೇಕ್ಷರಿಗೆ ಹೊಸ ವರ್ಷಾಚರಣೆಯ ಶುಭಾಶಯವನ್ನು ಕೋರಿದಂತಿತ್ತು.
ಚಿತ್ರದುರ್ಗದ ಹಾಡು ಹಕ್ಕಿಗಳ ಸಂಗೀತಕ್ಕೆ ಗುಡದೇಶ್ (ಕೀಬೋರ್ಡ್), ಬಸವರಾಜ್ (ತಬಲ), ಚಂದ್ರಶೇಖರ್ (ರಿದಂ ಪ್ಯಾಡ್) ಪಕ್ಕವಾದ್ಯ ನೀಡಿದರು. ಈ ಮೂವರ ಸಂಗೀತದ ಮೋಡಿಯಿಂದ ಗೀತ ಗಾಯನ ಅದ್ಭುತವಾಗಿ ಮೂಡಿಬಂತು.
ಕೇತೇಶ್ವರ ಶ್ರೀಗಳು, ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ, ನ್ಯಾಯಾಧೀಶ ಸದಾಶಿವ ಎಸ್. ಸುಲ್ತಾನಪುರಿ, ಎಸ್.ಆರ್. ಎಸ್ ಕಾಲೇಜಿನ ಮುಖ್ಯಸ್ಥ ಲಿಂಗಾರೆಡ್ಡಿ, ಬಾಪೂಜಿ ವಿದ್ಯಾಸಂಸ್ಥೆಯ ಮುಖ್ಯಸ್ಥ ಕೆ.ಎಂ.ವೀರೇಶ್, ಸಾಹಿತ್ಯ ಪರಿಚಾರಕ ವೆಂಕಣ್ಣಾಚಾರ್, ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ, ಯಶೋಧಮ್ಮ ದಂಪತಿ ಸೇರಿದಂತೆ ಕೋಟೆ ನಾಡಿನ ಪ್ರಮುಖ ವ್ಯಕ್ತಿಗಳೆಲ್ಲ ಪ್ರೇಕ್ಷಕ ಗ್ಯಾಲರಿಯಲ್ಲಿ ಕುಳಿತು ಗಾನ ಸುಧೆಯನ್ನು ಆಸ್ವಾದಿಸಿದ್ದು ವಿಶೇಷ.
ಕಾರ್ಯಕ್ರಮ ಮುಗಿದು, ಪ್ರೇಕ್ಷಕರೆಲ್ಲ ಮನೆಯತ್ತ ಹೆಜ್ಜೆ ಹಾಕುತ್ತಿದ್ದರೆ, ಇತ್ತ ರಂಗ ಮಂದಿರದಲ್ಲಿ ಇಟ್ಟಿದ್ದ ಶಿವರುದ್ರಪ್ಪನವರ ಭಾವಚಿತ್ರದ ಎದುರು ನಿಂತು ಅವರ ಸಹೋದರಿ ಜಯಕ್ಕ, ಅಗಲಿದ ಸಹೋದರನನ್ನು ನೆನೆಯುತ್ತಾ ಕಣ್ಣೀರಿಡುತ್ತಿದ್ದರು !
———————————
ಉಳಿದಂತೆ ಹಾಡಿದವರು..
ಯಾವ ಹಾಡ ಹಾಡಲಿ – ತೋಟಪ್ಪ ಉತ್ತಂಗಿ
ನನ್ನ ನಿನ್ನ ನಡುವೆ – ಜಿ.ಎಸ್. ಉಜ್ಜಿನಪ್ಪ
ಎಲ್ಲೋ ಹುಡುಕಿದ – ರವಿ ಉಗ್ರಾಣ
ಹಾಡು ಹಳೆಯದಾದರೇನು – ಮೀನಾಕ್ಷಿ ಭಟ್
ಮಬ್ಬು ಕವಿದರೇನು – ಚಂಪಕಾ ಶ್ರೀಧರ್
ಒಂದೇ ಒಂದೇ ಒಂದೇ – ಎಂ.ಕೆ. ಹರೀಶ್
ಎಳೆ ಬೆಳದಿಂಗಳೇ – ಕೆ.ಎ. ಏಕಾಂತಪ್ಪ
–––––––––––––
ಹೊರಡುವ ಮುನ್ನ ಹೀಗೆಂದರು..
ವಿಭಿನ್ನ ಕಾರ್ಯಕ್ರಮ. ವಿನೂತನ ಪ್ರಯತ್ನ. ಭಾವಗೀತೆಯೇ ಪ್ರಧಾನವಾದ ಕಾರ್ಯಕ್ರಮ ಇದು. ಆಯೋಜಕರಿಗೊಂದು ಶಹಬ್ಬಾಸ್.
–ಅಶೋಕ್ ಬಾದರದಿನ್ನಿ, ರಂಗಕರ್ಮಿ

ಚಂದದ ಕಾರ್ಯಕ್ರಮ. ಚಿತ್ರದುರ್ಗದ ಜಿಲ್ಲಾ ಉತ್ಸವ ಇದೇ ರೀತಿಯಲ್ಲಿ ನಡೆಯಬೇಕು.
– ವಿ.ಪಿ.ಇಕ್ಕೇರಿ, ಜಿಲ್ಲಾಧಿಕಾರಿ
ಮೊದ ಮೊದಲು ಗಾಯನ ಸಾಧಾರಣವಾಗಿತ್ತು. ಆಮೇಲೆ ರಂಗ ಮಂದಿರದಿಂದ ಎದ್ದು ಹೋಗದ ಮಟ್ಟಿಗೆ ಆ ಗೀತೆಗಳು ನನ್ನ ಮನಸ್ಸನ್ನು ಕಟ್ಟಿ ಹಾಕಿಬಿಟ್ಟವು.
– ಕೋಟ್ಲಾ ರಾಮಲಿಂಗರೆಡ್ಡಿ, ರೈಲ್ವೆ ಹೋರಾಟ ಸಮಿತಿ ಸದಸ್ಯರು

ಕಲಾವಿದರಿಗೆ ಈ ಪರಿ ಗೌರವ ಕೊಟ್ಟಿದ್ದು ತುಂಬಾ ಸಂತಸ ತಂದಿದೆ. ಇಂಥ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು.
– ಬಿ.ಪಿ.ಶೋಭಾ, ಚಂದ್ರಪ್ ಕಲ್ಕರೆ, ಕಲಾವಿದರ ಪರವಾಗಿ

Published by

ಗಾಣಧಾಳು ಶ್ರೀಕಂಠ

ಹುಟ್ಟೂರು ಗಾಣಧಾಳು. ಓದಿದ್ದು ತಿಪಟೂರು. ಕೆಲಸ ಮಾಡ್ತಿರೋದು ಬೆಂಗಳೂರು. ವೃತ್ತಿಯಲ್ಲಿ ಪತ್ರರ್ತ, ಆಸಕ್ತಿ ಕೃಷಿ-ಗ್ರಾಮೀಣಾಬಿವೃದ್ದಿ ಮತ್ತು ಪರಿಸರ. ಫೋಟೋಗ್ರಫಿ, ಪುಟ ವಿನ್ಯಾಸ, ಪ್ರವಾಸ ಹವ್ಯಾಸ. ರಮಾ ಬಾಳಸಂಗಾತಿ. ಆಕೆಯೂ ಹವ್ಯಾಸಿ ಬರಹಗಾರ್ತಿ. ಸ್ಪೈಸ್ ಇಂಡಿಯಾ ಕನ್ನಡ ಮಾಸ ಪತ್ರಿಕೆಯಲ್ಲಿ ಆರು ವರ್ಷ ಸಹಾಯಕ ಸಂಪಾದಕಿ (ಎಡಿಟೋರಿಯಲ್ ಅಸಿಸ್ಟೆಂಟ್) ಕೆಲಸ ಮಾಡಿದ್ದಾರೆ. ಸದ್ಯ ಚಿತ್ರದುರ್ಗ ಆಕಾಶವಾಣಿ ಕೇಂದ್ರದಲ್ಲಿ ಗೌರವ ಉದ್ಘೋಷಕಿ, ಮಗಳು ನದಿ ನನ್ನ ಬದುಕು, ಮಗ ಅಗರ್ತ, ನನ್ನ ಭವಿಷ್ಯ. ನಿವೃತ್ತ ಶಿಕ್ಷಕ ತಂದೆ ಗಾಣಧಾಳು ರಾಮಣ್ಣ ಅವರೊಂದಿಗೆ ವರ್ಗವಾದ ಕಡೆ ವಾಸ್ತವ್ಯ. ಸದ್ಯ ಚಿತ್ರದುರ್ಗದಲ್ಲಿ ವಾಸ. ಸಮಾಜಶಾಸ್ತ್ರ ಮತ್ತು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. ಕಾಲೇಜು ದಿನಗಳಲ್ಲೇ ಪತ್ರಿಕೆಗಳಿಗೆ ಲೇಖನ ಬರೆಯುವ ಹವ್ಯಾಸ. ಪ್ರಜಾಪ್ರಗತಿ, ಉದಯವಾಣಿ ಪತ್ರಿಕೆಗಳಿಗೆ ಅರೆಕಾಲಿಕ ವರದಿಗಾರನಾಗಿ ಸೇವೆ. ೧೯೯೬ರಿಂದ ತಿಪಟೂರಿನ ಬೈಫ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಲ್ಲಿ ದಾಖಲಾತಿಗಾರನಾಗಿ ವೃತ್ತಿ ಆರಂಭ. ಕ್ರಮೇಣ, ಅದೇ ಸಂಸ್ಥೆಯ ಪ್ರಕಾಶನದ ಸಿರಿಸಮೃದ್ಧಿ ಕೃಷಿ ಮಾಸಪತ್ರಿಕೆಯಲ್ಲಿ ಉಪ ಸಂಪಾದಕನಾಗಿ ಸೇವೆ ಮುಂದುವರಿಕೆ. ೨೦೦೨ರಿಂದ ವಿಜಯ ಕರ್ನಾಟಕ ದಿನಪತ್ರಿಕೆಯ ಚಿತ್ರದುರ್ಗ ಆವೃತ್ತಿಯಲ್ಲಿ ಉಪ ಸಂಪಾದಕನಾಗಿ ಸೇವೆ ಆರಂಭ. ೨೦೦೪ರಲ್ಲಿ ಇದೇ ಪತ್ರಿಕೆಯ ಕೃಷಿ ವಿಜಯ ಪುರವಣಿಯ ಮುಖ್ಯಸ್ಥನಾಗಿ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಣೆ. ೨೦೦೬ರಿಂದ ಪ್ರಜಾವಾಣಿ ಪತ್ರಿಕೆಯ ಬೆಂಗಳೂರಿನ ಕಚೇರಿಯಲ್ಲಿ ವಿವಿಧ ವಿಭಾಗಗಳಲ್ಲಿ ಸೇವೆ. ಪ್ರಕಟಿತ ಕೃತಿಗಳು : ಆಕಾಶವಾಣಿಯಲ್ಲಿ ಪ್ರಸಾರವಾದ ನಾಟಿ ಬೀಜಗಳ ಪರಂಪರೆ ಕುರಿತ ಸರಣಿಯ ಅಕ್ಷರ ರೂಪದ ಕೃತಿ ‘ಬೀಜಸಂಪದ’ . ಸಾವಯವ ಕೃಷಿಕರ ಯಶೋಗಾಥೆಯ ಕೃತಿ ‘ಸಾವಯವ ಚಿತ್ತಾರ’, ‘ವೆಲ್ವೆಟ್ ಬೀನ್ಸ್ -ನೆಲಕ್ಕೆ ಜೀವ ತುಂಬುವ ಮ್ಯಾಜಿಕ್ ಬಳ್ಳಿ’, ‘ಸ್ಲೋಫುಡ್- ಸುಭೋಜನಾ ಸಾವಧಾನ’, ‘ದೇಸಿ ಕೃಷಿ ಉಪಕರಣಗಳು’, ‘ನೆಲಮೂಲ ಕೃಷಿಜ್ಞಾನ- ಮಲೆನಾಡ ದೇಸಿ ಕೃಷಿ ಪದ್ಧತಿಗಳು’, ‘ ಹಸಿರು ಹಾದಿ’, ‘ಅಜೋಲಾ-ಮೇವಿಗೂ ಸೈ ಗೊಬ್ಬರಕ್ಕೂ ಜೈ’, ‘ಸುಸ್ಥಿರ ತೋಟ ಮಾಡೋಣ ಬನ್ನಿ’ ಹಾಗೂ ‘ಹೊನ್ನಾರು - ಪರಿಸರ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಚಿಂತನೆ’ ಕುರಿತ ಕೃತಿಗಳು ಪ್ರಕಟಗೊಂಡಿವೆ. ಪ್ರಶಸ್ತಿ ಪುರಸ್ಕಾರ ೨೦೦೬ರಲ್ಲಿ ಸಿಡಿಎಲ್ ಸಂಸ್ಥೆಯಿಂದ ‘ಕೆರೆ ಆಪೋಷಣ ಪುರಾಣ’ ಲೇಖನಕ್ಕೆ ರಾಜ್ಯಮಟ್ಟದ ‘ಚರಕ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ’. ಇದೇ ವರ್ಷ ಧಾರವಾಡದ ಕೃಷಿ ಮಾಧ್ಯಮ ಕೇಂದ್ರದಿಂದ ‘ವೆಲ್ವೆಟ್ ಬೀನ್ಸ್’ ಲೇಖನಕ್ಕಾಗಿ ‘ರಾಜ್ಯ ಮಟ್ಟದ ಉತ್ತಮ ಕೃಷಿ ಬರಹಗಾರ ಪ್ರಶಸ್ತಿ’. ‘ದೇಸಿ ಭತ್ತ ಭ್ರಹ್ಮ ನಟವರಸಾರಂಗಿ’ ಲೇಖನಕ್ಕಾಗಿ ೨೦೦೯ರಲ್ಲಿ ಮುರುಘಾಶ್ರೀ - ರಾಜ್ಯಮಟ್ಟದ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ, ೨೦೧೦-೧೧ನೇ ಸಾಲಿನ ‘ಉತ್ತಮ ವಿಜ್ಞಾನ ಲೇಖಕ ಪ್ರಶಸ್ತಿಗೆ ವೆಲ್ವೆಟ್ ಬೀನ್ಸ್ ಮತ್ತು ಸಾವಯವ ಚಿತ್ತಾರ ಪುಸ್ತಕಗಳ ಆಯ್ಕೆ. ೨೦೧೧ರಲ್ಲಿ ನವದೆಹಲಿಯ ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್(ಸಿಎಸ್ಇ) ಸಂಸ್ಥೆಯಿಂದ ‘ಜಲಮೂಲಗಳ ಅಧ್ಯಯನಕ್ಕಾಗಿ’ ೧೨ನೇ ಸಿಎಸ್ಇ ಫೆಲೋಷಿಪ್ ಗೌರವ. ೨೦೧೨ರ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ‘ಯಜಮಾನ್ ಶ್ರೀ ನಾರಾಯಣಪ್ಪ ಪ್ರಶಸ್ತಿ, ೨೦೧೧ನೇ ಸಾಲಿನಲ್ಲಿ ‘ಬೆಂಗಳೂರು ನಿರ್ಮಾತೃ ಕೆಂಪೇಗೌಡ ಪ್ರಶಸ್ತಿ ಪುರಸ್ಕಾರ ಹಾಗೂ ಪರಿಸರ ಪತ್ರಿಕೋದ್ಯಮದಲ್ಲಿನ ಎರಡು ದಶಕಗಳ ಗಣನೀಯ ಸೇವೆಯನ್ನು ಗುರುತಿಸಿರುವ ಕರ್ನಾಟಕ ಸರ್ಕಾರ ‘೨೦೧೪ನೇ ಸಾಲಿನ ರಾಜ್ಯಮಟ್ಟದ ‘ಪರಿಸರ ಪತ್ರಿಕೋದ್ಯಮ’ ಪ್ರಶಸ್ತಿ’ ನೀಡಿ ಗೌರವಿಸಿದೆ. ಅಧ್ಯಯನ ಪ್ರವಾಸ : ಕೃಷಿ ಅಧ್ಯಯನಕ್ಕಾಗಿ ೨೦೧೩ರಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಸ್ಯಾನ್ಫ್ರಾನ್ಸಿಸ್ಕೋಗೆ ಪ್ರವಾಸ. ಭಾರತದ ಚಂಡಿಗಡ, ಒರಿಸ್ಸಾ, ಬಿಹಾರ, ಆಂಧ್ರ, ತಮಿಳುನಾಡು ಸೇರಿದಂತೆ ಕೃಷಿ ಅಧ್ಯಯನಕ್ಕಾಗಿ ವಿವಿಧ ರಾಜ್ಯಗಳಲ್ಲಿ ಪ್ರವಾಸ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s