ವಿಶಾಖಪಟ್ಟಣದ ಸಬ್‌ಮೆರೀನ್ ಮ್ಯೂಸಿಯಂ

ಕುರ್ಸುರಾ ಸಬ್ ಮೆರೀನ್ ಮ್ಯೂಸಿಯಂ ಹೊರ ದೃಶ್ಯ

ವಿಶಾಖಪಟ್ಟಣದ ರಾಮಕೃಷ್ಣ ಬೀಚ್ ದಂಡೆಯ ಮೇಲೆ ಜಲಾಂತರ್ಗಾಮಿಯೊಂದು ಲಂಗರು ಹಾಕಿದೆ. ಮೂರು ದಶಕಗಳ ಬಿಡುವಿಲ್ಲದ ದುಡಿಮೆಯ ನಂತರ ಸುದೀರ್ಘ ವಿಶ್ರಾಂತಿಯಲ್ಲಿದೆ.

ವಿಶ್ರಾಂತಿಯಲ್ಲಿದ್ದರೂ ಅದು ಸುಮ್ಮನಿಲ್ಲ. ತನ್ನನ್ನು ನೋಡಲು ಬರುವವರಿಗೆ `ತಾನು ಯುದ್ಧದಲ್ಲಿ ಎಷ್ಟೆಲ್ಲ ಕೆಲಸ ಮಾಡಿದ್ದೇನೆ. ನೌಕಾಪಡೆಯಲ್ಲಿ ನನ್ನ ಪಾತ್ರವೇನಿತ್ತು, ತನ್ನ ಅಂಗಾಂಗಗಳ ಶಕ್ತಿ-ಸಾಮರ್ಥ್ಯ…`- ಹೀಗೆ ತನ್ನನ್ನು ತಾನು ಸಂಪೂರ್ಣವಾಗಿ ಪರಿಚಯಿಸಿಕೊಳ್ಳುತ್ತಿದೆ.

ಹೀಗೆ ಸ್ವಪರಿಚಯ ಮಾಡಿಕೊಳ್ಳುತ್ತಿರುವ ಜಲಾಂತರ್ಗಾಮಿಯ ಹೆಸರು `ಐಎನ್‌ಎಸ್ ಕುರ‌್ಸುರಾ – ಎಸ್ 20`. ಭಾರತೀಯ ನೌಕಾಪಡೆಯಲ್ಲಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದ ಈ ಜಲಾಂತರ್ಗಾಮಿಯನ್ನು ಮಾಹಿತಿ ಪ್ರಸರಣದ ಉದ್ದೇಶದಿಂದ ನೌಕಾಪಡೆ ವಿಭಾಗದವರು `ಮ್ಯೂಸಿಯಂ` ಆಗಿ ಪರಿವರ್ತಿಸಿದ್ದಾರೆ.

ಶಸ್ತ್ರಸ್ತ್ರಗಳನ್ನು ಜೋಡಿಸಿರುವ ಮೊದಲ ಕೊಠಡಿ

ರಷ್ಯ ನಿರ್ಮಿತ ಜಲಾಂತರ್ಗಾಮಿ
ಡಿಸೆಂಬರ್ 18, 1969ರಲ್ಲಿ ರಷ್ಯದಲ್ಲಿ ನಿರ್ಮಾಣಗೊಂಡ ಜಲಾಂತರ್ಗಾಮಿ. ಆ ದೇಶದ ಫಾಕ್ಸ್‌ಟ್ರೋಟ್ ಕ್ಲಾಸ್ ಜಲಾಂತರ್ಗಾಮಿಗಳಲ್ಲಿ ಇದೂ ಒಂದು. 1970ರಲ್ಲಿ ಭಾರತದ ನೌಕಾದಳದವರು ಖರೀದಿಸಿದರು. ಈ ನೌಕಾಸ್ತ್ರ ವಿಶಾಖಪಟ್ಟಣ ಬಂದರು ಸೇರಿದ್ದು ಮೇ 11, 1970ರಲ್ಲಿ. `ಐಎನ್‌ಎಸ್ ಕುರ‌್ಸುರಾ` ಎಂಬ ಹೆಸರಿನೊಂದಿಗೆ ಭಾರತೀಯ ನೌಕಾಪಡೆಯ ಸದಸ್ಯತ್ವ ಪಡೆಯಿತು.

ಫೆಬ್ರುವರಿ 27, 2001 ಕುರ‌್ಸುರಾ ಯುದ್ಧನೌಕೆ `ಸೇವೆ`ಯಿಂದ ನಿವೃತ್ತಿಯಾಗಿದ್ದು, ಆ ಸಮಯದಲ್ಲಿ ರಾಷ್ಟ್ರೀಯ ಹಡಗು ವಿನ್ಯಾಸ ಮತ್ತು ಸಂಶೋಧನಾ ಕೇಂದ್ರ, ಒಎನ್‌ಜಿಸಿ, ವಿಶಾಖಪಟ್ಟಣ ಬಂದರು ಟ್ರಸ್ಟ್ ಮತ್ತು ಇತರೆ ನೌಕಾಪಡೆಯ ಸಂಘಟನೆಗಳು ನೀರೊಳಗಿದ್ದ ಯುದ್ಧನೌಕೆಯನ್ನು ಮರಳಿನ ಮೇಲಕ್ಕೆ ಕರೆತಂದವು.

ತಾಂತ್ರಿಕ ನೆರವು ನೀಡಿ ಮ್ಯೂಸಿಯಂ ಆಗಿ ಪರಿವರ್ತಿಸಿದವು. ಇದಕ್ಕಾಗಿ ಆಂಧ್ರಪ್ರದೇಶ ಸರ್ಕಾರ ಆರು ಕೋಟಿ ರೂಪಾಯಿ ವೆಚ್ಚ ಮಾಡಿತು. ಆಗಸ್ಟ್ 9, 2002ರಂದು ಅಂದಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು `ಜಲಾಂತರ್ಗಾಮಿ ಮ್ಯೂಸಿಯಂ`ಅನ್ನು ದೇಶಕ್ಕೆ ಸಮರ್ಪಿಸಿದರು.

`ವೃತ್ತಿ`ಯಲ್ಲಿದ್ದಾಗ ಯಂತ್ರ ಹೇಗಿತ್ತೋ ಅದೇ ಸ್ಥಿತಿಯಲ್ಲೇ ಮ್ಯೂಸಿಯಂ ಮಾಡಲಾಗಿದೆ. ಹಾಗಾಗಿ ಜಲಾಂತರ್ಗಾಮಿ ಒಳಭಾಗದಲ್ಲಿ 40-50ರ ದಶಕದ ಯಾಂತ್ರಿಕ ವಸ್ತುಗಳಿವೆ. ಇದು ವಿಶ್ವದಲ್ಲೇ ಎರಡನೆಯ `ಸಬ್ ಮೆರೀನ್ ಮ್ಯೂಸಿಯಂ`. ಏಷ್ಯಾ ಖಂಡದ್ಲ್ಲಲಿ ಮೊದಲನೆಯದು!

ಯಂತ್ರಗಳ ಪ್ರಪಂಚ ಜಲಾಂತರ್ಗಾಮಿಯ ಒಳಗಡೆ ಬೃಹತ್ ಯಂತ್ರಗಳದ್ದೇ ಒಂದು ಪ್ರಪಂಚ. ಒಂದೆಡೆ ಎದುರಾಳಿಗಳನ್ನು ಉಡಾಯಿಸಲು ಸಜ್ಜಾಗಿರುವ ಮಿಸೈಲ್‌ಗಳು. ಇನ್ನೊಂದೆಡೆ ಅವುಗಳನ್ನು ನಿಯಂತ್ರಿಸುವ ತಿರುಗಣೆಗಳು. ಓಣಿಯಂತಿರುವ ಸರಣಿ ಕೊಠಡಿಗಳು. ಇವೆಲ್ಲವನ್ನೂ ಒಂದಾದ ಮೇಲೊಂದರಂತೆ ದಾಟುತ್ತಾ ಹೊರಟರೆ, ಹೊಸ ಯಾಂತ್ರಿಕ ಜಗತ್ತೇ ಕಣ್ಣಮುಂದೆ ತೆರೆದುಕೊಳ್ಳುತ್ತದೆ.

ತಿಮಿಂಗಲಾಕಾರದಲ್ಲಿರುವ ಈ ಜಲಾಂತರ್ಗಾಮಿ 91.3 ಮೀಟರ್ ಉದ್ದ, 7.5 ಮೀಟರ್ ಅಗಲ, 1952 ಟನ್ ತೂಕವಿದೆ. `ಇದು ಮೇಲ್ಭಾಗದಲ್ಲಿ ಕಾಣುವ ಜಲಾಂತರ್ಗಾಮಿಯ ಅಳತೆ. ಇದಕ್ಕೂ ಹೆಚ್ಚು ಉದ್ದ- ಗಾತ್ರ- ಅಗಲದಷ್ಟು ಭಾಗ ಭೂಮಿಯ ಆಳದಲ್ಲಿದೆ` ಎನ್ನುತ್ತಾರೆ ಗೈಡ್ ರಘು. ಇದರ ಒಟ್ಟು ತೂಕ 2475 ಟನ್. ಕಾರ್ಯ ನಿರ್ವಹಿಸುತ್ತಿದ್ದಾಗ 985 ಮೀಟರ್ ಸಮುದ್ರದ ಆಳದವರೆಗೂ ಈ ಅಂತರ್ಗಾಮಿ ಚಲಿಸುವ ಸಾಮರ್ಥ್ಯವಿತ್ತಂತೆ.

ಒಳಾಂಗಣ ವಿಶೇಷ
ಈ ನೌಕಾಸ್ತ್ರದಲ್ಲಿ ಒಟ್ಟು ಏಳು ಕೊಠಡಿಗಳಿವೆ. ಹನ್ನೊಂದು ಮಂದಿ ನಾವಿಕರು ಪಯಣಿಸುವಷ್ಟು ಸೌಕರ್ಯವಿದೆ. ಒಂದು ಕೊಠಡಿಯಲ್ಲಿ ಶಸ್ತ್ರಾಸ್ತ್ರಗಳಿವೆ. ಮತ್ತೊಂದು ಕೊಠಡಿಗಳಲ್ಲಿ ಅವುಗಳನ್ನು ನಿಯಂತ್ರಿಸುವ ತಿರುಗಣಿಗಳಿವೆ. ಎಡಭಾಗದಲ್ಲಿ ಸಿಗ್ನಲ್ ಛೇಂಬರ್, ಬಲಭಾಗದಲ್ಲಿ ಅಡುಗೆ ಕೋಣೆ, ವಿಶ್ರಾಂತಿ ಕೊಠಡಿ, ರೀಡಿಂಗ್ ರೂಮ್… ಹೀಗೆ ಗಾಳಿ, ಬೆಳಕು ರಹಿತವಾಗಿ ತಿಂಗಳುಗಟ್ಟಲೆ ಜೀವನ ನಡೆಸುವಂತಹ ವಾತಾವರಣದ ವ್ಯವಸ್ಥೆಯನ್ನು ಮ್ಯೂಸಿಂಯನಲ್ಲಿ ನೋಡಬಹುದು.

ಪ್ರವಾಸಿಗರಿಗೆ ಸಬ್‌ಮೆರೀನ್ ಕಾರ್ಯ ವೈಖರಿ ಮಾಹಿತಿಯನ್ನು ಸುಲಭವಾಗಿ ಅರ್ಥೈಸಲು ಪ್ರತಿ ಕೊಠಡಿಗಳಲ್ಲೂ ಯೋಧರ ಪ್ರತಿ ರೂಪದ ಬೊಂಬೆಗಳನ್ನು ನಿಲ್ಲಿಸಲಾಗಿದೆ. ಆ ಬೊಂಬೆಗಳ `ಆಕ್ಷನ್`ಗಳು ಕೊಠಡಿಯ ಮಹತ್ವ, ಕಾರ್ಯಚಟುವಟಿಕೆಯನ್ನು ವಿವರಿಸುತ್ತವೆ. ಇವುಗಳ ಜೊತೆಗೆ ಅಲ್ಲಲ್ಲಿ ಸೂಚನಾ ಫಲಕಗಳಿವೆ. ಈ ಬೊಂಬೆಗಳ ಜೊತೆಗೆ `ಸಬ್‌ಮರೀನ್` ಕುರಿತ ಕಥೆ ಹೇಳಲು ಆರು ಮಂದಿ ಮಾರ್ಗದರ್ಶಿಗಳಿದ್ದಾರೆ.

ಕೊಠಡಿಗಳನ್ನು ಸಂಪರ್ಕಿಸುವ ಸುರಂಗ ಮಾರ್ಗ

ಇಪ್ಪತ್ತೈದು ರೂಪಾಯಿ ಪ್ರವೇಶ ಶುಲ್ಕ ಕೊಟ್ಟು, ಈ ಮ್ಯೂಸಿಯಂ ಹೊಕ್ಕಿದರೆ ಸಾಕು, ಜಲಾಂತರ್ಗಾಮಿಯ ವಿಶ್ವರೂಪವೇ ನಮ್ಮೆದುರು ತೆರೆದುಕೊಳ್ಳುತ್ತದೆ. ವಿಶಾಖಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರ ತನ್ನೂರಿನ ಹಡಗು ನಿರ್ಮಾಣ ಹಾಗೂ ನೌಕಾಪಡೆಯ ಮಾಹಿತಿ ನೀಡುವುದಕ್ಕಾಗಿಯೇ ಇಂಥ ಮ್ಯೂಸಿಯಂ ನಡೆಸುತ್ತಿದ್ದು, ಈ ಮ್ಯೂಸಿಯಂ ಸೋಮವಾರ ಹೊರತುಪಡಿಸಿ ವಾರದ ಎಲ್ಲ ದಿನಗಳಲ್ಲೂ ತೆರೆದಿರುತ್ತದೆ. ಸಂಜೆ 4 ರಿಂದ ರಾತ್ರಿ 8ರವರೆಗೆ ಪ್ರವೇಶಾವಕಾಶ. ಭಾನುವಾರ ಮತ್ತು ಸಾರ್ವಜನಿಕ ರಜೆ ದಿನಗಳಲ್ಲಿ ಬೆಳಿಗ್ಗೆ 11ರಿಂದ ಮಧ್ಯಾಹ್ನ 1.30ರವರೆಗೆ ತೆರೆದಿರುತ್ತದೆ.

'ಪ್ರಜಾವಾಣಿ' ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ಲೇಖನ