ಕೆಂಪುತೋಟದಲ್ಲಿ ಹೂ ಹಬ್ಬ

ಲಾಲ್ ಬಾಗ್ ಅಂಗಳದಲ್ಲಿ ದೆಹಲಿಯ ಲೋಟಸ್ ಟೆಂಪಲ್

ಮುಂಗಾರು ಬುವಿಗೆ ಮುತ್ತಿಕ್ಕಿದೆ. ಅವಿತಿದ್ದ ಬೀಜಗಳು ಮೊಳೆಯುತ್ತಿವೆ. ಅವು ಚಿಗುರೊಡೆದು, ಕಾಂಡದ ಕಣ್ಣುಗಳಿಂದ ಮೊಗ್ಗು ಚಿಮ್ಮಿಸಿ, ಹೂ ಬಿರಿಯುವ ಪ್ರಕ್ರಿಯೆಯೇ ಶ್ರಾವಣದ ಸಂಭ್ರಮ. ಪ್ರಕೃತಿಯ ಈ ಸೊಬಗಿನೊಂದಿಗೆ ಹಬ್ಬಗಳ ಸಾಲು ಸಾಲು..
ಶ್ರಾವಣದ ಮೊದಲ ನಾಡ ಹಬ್ಬವೇ ಸ್ವಾತಂತ್ರ್ಯೋತ್ಸವ. ಈ ಹಬ್ಬದ ನೆನಪಲ್ಲೇ ಕೆಂಪುತೋಟ ಲಾಲ್‌ಬಾಗ್ ಅಂಗಳದಲ್ಲಿ `ಹೂವಿನ ಹಬ್ಬ`ವೂ ಆರಂಭ. ನೂರರ ಹೊಸ್ತಿಲಲ್ಲಿರುವ ಹೂವಿನ ಹಬ್ಬಕ್ಕೆ ಈ ಬಾರಿ ರಂಗುರಂಗು ಪುಷ್ಪಗಳ ಮೆರವಣಿಗೆ.
ವೈವಿಧ್ಯಮಯ ವಾತಾವರಣದಲ್ಲಿ ಬೆಳೆದಿರುವ ಹೂವುಗಳ ಪ್ರದರ್ಶನ. ಕುಂಡ ಕೃಷಿಯಲ್ಲಿ ಸಾವಿರಾರು ಸಂಖ್ಯೆಯ ತರಕಾರಿ ಬೆಳೆ, ಇಕೆಬಾನದ ವಿರಾಟ ದರ್ಶನ. ಕಣ್ಣಿಗೆ ತಂಪಾಗುವ ಪುಷ್ಪೋತ್ಸವದ ಜೊತೆಗೆ ಇಳಿ ಸಂಜೆಯಲ್ಲಿ `ಸಂಗೀತ ರಸಸಂಜೆ`ಯ ವಿಶೇಷ.

ಕೋನಾರ್ಕ್ ಸೂರ್ಯದೇವಾಲಯ

ಪ್ರದರ್ಶನ `ಮೆನು`
ಕೆಂಪುತೋಟದಲ್ಲಿ ನಡೆಯುತ್ತಿರುವ ಸ್ವಾತಂತ್ರ್ಯೋತ್ಸವದ ಫಲಪುಷ್ಪ ಪ್ರದರ್ಶನವನ್ನು `ದೆಹಲಿಯ ಲೋಟಸ್ ಮಂದಿರ`ಕ್ಕಾಗಿ ಅರ್ಪಿಸಲಾಗಿದೆ. ಆ ನೆನಪಿಗಾಗಿ ಬೃಹತ್ ಗಾತ್ರದ `ಕಮಲ`ದ ಪ್ರತಿಕೃತಿಯನ್ನು ಗಾಜಿನಮನೆಯ ನಡುವಿನಲ್ಲಿ ನಿರ್ಮಿಸಲಾಗಿದೆ. ಶ್ವೇತ ಕಮಲ ಶಾಂತಿಯ ಸಂಕೇತ. ದೇಶದಲ್ಲಿ ಶಾಂತಿ ನೆಲಸಲಿ ಎಂದು ಫಲಪುಷ್ಪ ಪ್ರದರ್ಶನದ ಮೂಲಕ ತೋಟಗಾರಿಕೆ ಇಲಾಖೆ ಹಾರೈಸುತ್ತಿದೆ.

32 ಅಡಿ ಅಗಲ, 22 ಅಡಿ ಉದ್ದ, ಮೂರೂವರೆ ಲಕ್ಷ ಹೂವುಗಳಿಂದ ನಿರ್ಮಾಣಗೊಂಡಿರುವ `ಕಮಲ`ದಲ್ಲಿ ಗುಲಾಬಿ, ಕಾರ್ನೇಷನ್, ಸುಗಂಧರಾಜ ಪುಷ್ಪಗಳಿವೆ. ಎಲ್ಲವೂ ಶ್ವೇತವರ್ಣದವು.
ಕಮಲದ ಸುತ್ತ `ಫ್ಲೋರಲ್ ವ್ಹೀಲ್` (ಹೂವಿನ ಚಕ್ರ) ಚಿತ್ತಾರಗಳಿವೆ. ಒಂದೂ ಮುಕ್ಕಾಲು ಲಕ್ಷ ಜರ್ಬೆರಾ ಹೂವುಗಳನ್ನು ಬಳಸಿ ಈ `ಹೂ ಚಕ್ರ` ಬಿಡಿಸಲಾಗಿದೆ. ಒರಿಸ್ಸಾದ ಕೊನಾರ್ಕ ಸೂರ್ಯ ದೇವಾಲಯದಲ್ಲಿರುವ `ಚಕ್ರ`ದ ಪ್ರತಿಬಿಂಬವೇ ಈ ಹೂ ಚಕ್ರ.
ಊಟಿಯ ಶೀತ ಪ್ರದೇಶದಲ್ಲಿ ಕರ್ನಾಟಕ ತೋಟಗಾರಿಕಾ ವಿಭಾಗದವರು ಬೆಳೆಸಿರುವ ಪುಷ್ಪಗಳನ್ನೂ ಇಲ್ಲಿ ತಂದು ಪ್ರದರ್ಶನಕ್ಕೆ ಇಡಲಾಗಿದೆ. ಈ ವಿಭಾಗದಲ್ಲಿ ಪ್ರತಿ ವರ್ಷ ಕಡಿಮೆ ಸಂಖ್ಯೆಯಲ್ಲಿ ಹೂಗಳು ಇರುತ್ತಿದ್ದವು. ಆದರೆ ಈ ವರ್ಷ 56 ಬಗೆಯ ಪುಷ್ಪಗಳಿವೆ.  ಸ್ವಾಟಿಸ್, ಲಿಸೀತಿಯಂ, ಸೈಕ್ಲೋಮಿನ್, ಅಗಫಾಂತಸ್, ರೆಡ್ ಹಾಟ್ ಪೋಕರ್, ಕ್ಯಾಲಾಲಿಲ್ಲಿ.. ಇತ್ಯಾದಿ. ಇವೆಲ್ಲ  ಗಾಜಿನಮನೆಯ ಕೊನೆಯ ಭಾಗದಲ್ಲಿವೆ. ಆಂತೋರಿಯಂ – ಹೈಟೆಕ್ ಪುಷ್ಪೋದ್ಯಮದ ವಾಣಿಜ್ಯ ಬೆಳೆ. ಸುಮಾರು 12 ವಿಧದ ಆಂತೋರಿಯಂ ಪುಷ್ಪಗಳು ಪ್ರದರ್ಶನದಲ್ಲಿವೆ.

ಬಟರ್ ಫ್ಲೈ ಕಾರ್ನರ್

ಇಕೆಬಾನ ಸ್ಪೆಷಲ್
ಬೆಂಗಳೂರಿಗೂ ಇಕೆಬಾನಕ್ಕೂ ಅವಿನಾಭಾವ ಸಂಬಂಧ. ಅದರ ನೆನಪಲ್ಲಿ ಅಂತರರಾಷ್ಟ್ರೀಯ ಖ್ಯಾತಿಯ ಪರಿಣತರಾದ ಲೀಲಾ ರಾಜ್‌ಕುಮಾರ್ ಅವರು ವೈವಿಧ್ಯಮಯ ಇಕೆಬಾನಗಳನ್ನು ಪ್ರದರ್ಶಿಸುತ್ತಿದ್ದಾರೆ.  `ಶತಮಾನದ ಹೊಸ್ತಿಲಲ್ಲಿರುವ ಫಲಪುಷ್ಪ ಪ್ರದರ್ಶನಕ್ಕಾಗಿ` ಲೀಲಾ ಅವರು ದೆಹಲಿ, ಮುಂಬೈ, ತಿರುವನಂತಪುರ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಹೂವುಗಳನ್ನು ಸಂಗ್ರಹಿಸಿ `ಇಕೆಬಾನ` ತಯಾರಿಸಿದ್ದಾರೆ.
ಫಲಪುಷ್ಪ ಪ್ರದರ್ಶನದಲ್ಲಿ ಎಚ್‌ಎಎಲ್, ಜೆಡ್ – ಪರಿಸರ ಸ್ನೇಹಿ ಮನೆ ನಿರ್ಮಾಣ ಸಂಸ್ಥೆ ಸೇರಿದಂತೆ 230 ವಿವಿಧ ಕಂಪೆನಿಗಳು, ಸರ್ಕಾರಿ ಕಚೇರಿಗಳು, ಖಾಸಗಿ ಸಂಸ್ಥೆಗಳು, ಅಂದದ ಕೈತೋಟ ನಿರ್ಮಿಸಿರುವ ಮನೆ ಮಾಲೀಕರು ಪಾಲ್ಗೊಂಡಿದ್ದಾರೆ.
ತರಕಾರಿ ವೈವಿಧ್ಯ
ಕುಂಡಗಳಲ್ಲಿ ತರಕಾರಿ ಬೆಳೆಯಲು ಸಾಧ್ಯವೇ? ಹೀಗೆಂದು ಅಚ್ಚರಿಯಿಂದ ಪ್ರಶ್ನಿಸುವವರಿಗೆ ಫಲಪುಷ್ಪ ಪ್ರದರ್ಶನದಲ್ಲಿರುವ ತೋಟಗಾರಿಕಾ ಇಲಾಖೆ ಮಳಿಗೆಯಲ್ಲಿ ಕುಂಡಗಳಲ್ಲಿ ಬೆಳೆದಿರುವ ತರಕಾರಿಗಳೇ ಉತ್ತರ ನೀಡುತ್ತವೆ.
ಈ ಮಳಿಗೆಯಲ್ಲಿ ಸಾವಿರಾರು ಕುಂಡಗಳಲ್ಲಿ ತರಕಾರಿಗಳನ್ನು ಬೆಳೆಸಲಾಗಿದೆ. ಜೊತೆಗೆ ತೋಟಗಾರಿಕೆ ಕುರಿತು ವಿವರಣೆ ನೀಡುವ ಮಾಹಿತಿ ಕೇಂದ್ರ ಕೂಡ ಇದೆ.
ಪಕ್ಕದಲ್ಲಿರುವ ಮತ್ತೊಂದು ಮಳಿಗೆಯಲ್ಲಿ ಹಣ್ಣುಗಳನ್ನು ಸಂಸ್ಕರಿಸಿ ಜಾಮ್, ಜೆಲ್ಲಿ ಹಾಗೂ ವಿವಿಧ ಬಗೆಯ ಜ್ಯೂಸ್‌ಗಳ ತಯಾರಿಕೆ ಪ್ರಾತ್ಯಕ್ಷಿಕೆಯಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಜಗದೀಶ್.ಕುಂಡದಲ್ಲಿ ತರಕಾರಿಗಳನ್ನೂ ಬೆಳೆದಿರುವುದು ಪ್ರದರ್ಶನದ ಹೈಲೈಟ್. ಜತೆಗೆ ತೋಟ ನಿರ್ಮಾಣ ಮಾಡುವವರಿಗೆ ಸಲಕರಣೆಗಳೂ ಪ್ರದರ್ಶನದಲ್ಲಿ ಲಭ್ಯ. ಅದಕ್ಕಾಗಿ ಗೊಬ್ಬರ, ಔಷಧ ಪರಿಕರಗಳ ಮಾರಾಟದ ಮಳಿಗೆ ತೆರೆಯಲಾಗಿದೆ. ಮಹಾನಗರದ 12 ಪ್ರತಿಷ್ಠಿತ ನರ್ಸರಿಗಳು ಹೊಸ ಹೊಸ ಗಿಡಗಳೊಂದಿಗೆ ನಿಮ್ಮನ್ನು ಸ್ವಾಗತಿಸಲು ಸಜ್ಜಾಗಿವೆ.

ಸಂಗೀತದ ರಸದೌತಣ

ಫಲಪುಷ್ಪ ಪ್ರದರ್ಶನ ಕಂಡು ಕಣ್ಣಿಗೆ ತಂಪು ನೀಡುತ್ತದೆ. ಒಂದಷ್ಟು ಮನ ತಣಿಯಬೇಕಲ್ಲ. ಅದಕ್ಕಾಗಿಯೇ ತೋಟಗಾರಿಕೆ ಇಲಾಖೆಯವರು ಲಾಲ್‌ಬಾಗ್ ಬ್ಯಾಂಡ್ ಸ್ಟಾಂಡ್‌ನಲ್ಲಿ ಪ್ರದರ್ಶನದ ಪ್ರತಿ ದಿನ ಸಂಜೆ 4ರಿಂದ 7 ರವರೆಗೆ `ಸಂಗೀತ ಸಂಜೆ` ಏರ್ಪಡಿಸಿದ್ದಾರೆ.  ಫಲಪುಷ್ಪ ಪ್ರದರ್ಶನಕ್ಕೆ ಬಂದವರಿಗೆ ಸಂಗೀತ ಸಂಜೆ ಒಂದು ಬೋನಸ್. ಈ ಕಾರ್ಯಕ್ರಮದಲ್ಲಿ ಹೆಸರಾಂತ ಗಾಯಕರು ಗೀತಗಾಯನ ಪ್ರಸ್ತುಪಡಿಸುತ್ತಾರೆ.

13ರಂದು ವಿಶೇಷ ಸಂಗೀತ ಕಾರ್ಯಕ್ರಮವಿದೆ. ಮಿಲಿಟರಿಯ 40 ಮಂದಿ ಹೆಸರಾಂತ ವಾದ್ಯಗಾರರು ತಮ್ಮ ವಾದ್ಯಗಳ ಮೂಲಕ ಸಂಗೀತದ ರಸದೌತಣ ನೀಡಲಿದ್ದಾರೆ. ಇದು ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನದ 99 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಆಯೋಜಿಸಿರುವ ಕಾರ್ಯಕ್ರಮ.

ಲಾಲ್‌ಬಾಗ್ ಸುತ್ತಿ ಸುಸ್ತಾದರೆ, ನಿಮ್ಮ ದಣಿವು, ಬಾಯಾರಿಕೆ ನೀಗಿಸಲು ಗಾಜಿನಮನೆ ಸುತ್ತ 120 ಮಳಿಗೆಗಳಿವೆ. ಇಲ್ಲಿ ಕುರುಕುಲು ತಿಂಡಿ, ತಂಪು ಪಾನೀಯಗಳು ಎಲ್ಲವೂ ಲಭ್ಯ.
ಎಲ್ಲದಕ್ಕೂ ಉತ್ತರ ಸಿಕ್ಕ ಮೇಲೆ, ಇನ್ನೇಕೆ ತಡ; ಪುಷ್ಪೋತ್ಸವದ ಸೌಂದರ್ಯದ ಸವಿ ಸವಿಯಲು ಹೊರಡಿ ಸಸ್ಯ ಕಾಶಿಗೆ !

ಬಣ್ಣ ಬಣ್ಣದ ಹೂಗಳ ರಂಗೋಲಿ

ಪಾರ್ಕಿಂಗ್, ಪ್ರವೇಶ
ಇಷ್ಟೆಲ್ಲ ವೈವಿಧ್ಯವಿರುವ `ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ`ವನ್ನು ನೋಡಲು ಹೋಗಲೇಬೇಕು. ಆದರೆ ನಮ್ಮ ಬೈಕು, ಕಾರು ಪಾರ್ಕಿಂಗ್ ಮಾಡುವುದೆಲ್ಲಿ? ನಿಜ, ನಿಮ್ಮ ಸಮಸ್ಯೆಗೆ ಇಲಾಖೆಯವರು ಪರಿಹಾರ ಸೂಚಿಸಿದ್ದಾರೆ. ಈ ಬಾರಿ ಡಬ್ಬಲ್ ರೋಡ್ ದ್ವಾರ ಹಾಗೂ ಸಿದ್ಧಾಪುರ ಗೇಟ್ (ಅಶೋಕ ಪಿಲ್ಲರ್ ಕಡೆಯಿಂದ) ಸಮೀಪದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಒಟ್ಟು 12,000 ವಾಹನಗಳನ್ನು ನಿಲ್ಲಿಸುವ ವ್ಯವಸ್ಥೆ ಇದೆ.