ಸಮುದಾಯದ ಒಗ್ಗಟ್ಟು ಕೆರೆ ಅಭಿವೃದ್ಧಿಯ ಗುಟ್ಟು


೨೮ ಆಗಸ್ಟ್ ೨೦೦೯ ರಲ್ಲಿ..

ಕೆರೆ ಅಂಗಳದ ತುಂಬಾ ಕಳೆ, ಶಿಥಿಲಗೊಂಡ ಏರಿ. ಅದರ ಮೇಲೆ ಪೊದೆಯಂತೆ ಬೆಳೆದು ನಿಂತ ಮುಳ್ಳು-ಕಂಟಿ ಗಿಡಗಳು. ಮಳೆಗಾಲದಲ್ಲೂ ತುಂಬದ ಕೆರೆ, ನಿರ್ವಹಣೆಯಿಲ್ಲದೇ ಸೊರಗಿದ್ದ ತೂಬು, ರಾಜಕಾಲುವೆ… ಒಟ್ಟಾರೆ ಅಧ್ವಾನವಾಗಿದ್ದ ಆ ಕೆರೆ ಒಂದು ರೀತಿಯಲ್ಲಿ ಪಾಳು ಕೊಂಪೆ..

೧೦ ಜೂನ್ ೨೦೧೧ರಲ್ಲಿ…
ಹುಲ್ಲು ಹಾಸಿನ ಕೆರೆಯ ಏರಿ. ಜಲಾಶಯದ ಗೋಡೆಯಷ್ಟು ಭದ್ರವಾದ ಕಲ್ಲುಕಟ್ಟಡ. ಬೇಸಿಗೆಯಲ್ಲೂ ಕೆರೆಯ ತುಂಬಾ ನೀರು.. ಜಲಾನಯನ ಪ್ರದೇಶದಲ್ಲಿ ಕಾಡು ಮರಗಳ ಹಸಿರು ಹಾಸು, ಮಳೆ ನೀರಿಗೆ ದಾರಿ ತೋರುವ ಒಡ್ಡುಗಳು, ‘ಕೆರೆ ಸಾಕ್ಷರತೆ’ ಸಾರುವ ನಾಮಫಲಕಗಳು, ಇವೆಲ್ಲದರ ನಡುವೆ ಸುಡು ಬಿಸಿಲಲ್ಲೂ ಬೀಸುವ ತಂಗಾಳಿ… ಮುಂಜಾನೆ – ಸಂಜೆ ಕೆರೆಯ ಸುತ್ತಾ ಹೆಜ್ಜೆ ಹಾಕುವ ಕೆರೆ ಬಳಕೆದಾರರು..

****

ಎರಡು ವರ್ಷಗಳಲ್ಲಿ ಗೋಪಾಲನಹಳ್ಳಿ ಕೆರೆ ಬದಲಾಗಿದ್ದು ಒಂದು ಅಚ್ಚರಿಯ ಅಭಿವೃದ್ಧಿ. ಇದು ಏಕಾ ಏಕಿಯಾದ ಅಭಿವೃದ್ಧಿಯಲ್ಲ. ಕಲ್ಲು-ಮುಳ್ಳುಗಳ ನೆಡಮುಡಿಯ ಮೇಲೆ

ಕೆರೆ ಅಂಗಳದಲ್ಲಿ ತಿಳಿ ನೀರು

ಸಾಗುತ್ತಾ ಗುರಿ ತಲುಪಿದ ಕಥೆ. ಈ ಬೆಳವಣಿಗೆ, ಬದಲಾವಣೆಯ ಹಿಂದೆ ಒಂದು ಸಮುದಾಯದ ಶ್ರಮವಿದೆ. ಬದ್ಧತೆಯ ಕೆಲಸವಿದೆ. ಜೊತೆಗೆ ಜಲಸಂವರ್ಧನ ಯೋಜನೆಯ ನೆರವಿದೆ. ಸಮುದಾಯಗಳ ಮನಸ್ಸು ಒಗ್ಗೂಡಿದರೆ ಎಂಥಾ ಅಭಿವೃದ್ಧಿ ಕಾರ್ಯಗಳು ‘ಹೂವು ಎತ್ತಿದಷ್ಟೇ’ ಸರಾಗವಾಗುತ್ತವೆ ಎನ್ನುವುದಕ್ಕೆ ಈ ‘ಕೆರೆಯ ಅಭಿವೃದ್ಧಿ’ಯೊಂದು ಜ್ವಲಂತ ಸಾಕ್ಷಿ !

ಗೋಪಾಲನಹಳ್ಳಿ, ತುಮಕೂರು ಜಿಲ್ಲೆ ಚಿಕ್ಕನಾಯ್ಕನಹಳ್ಳಿ ತಾಲ್ಲೂಕಿನ ಪುಟ್ಟ ಗ್ರಾಮ. ಚಿಕ್ಕನಾಯ್ಕನಹಳ್ಳಿ – ತಿಪಟೂರು ಮಾರ್ಗದಲ್ಲಿದೆ ಈ ಹಳ್ಳಿ. ಗ್ರಾಮದಲ್ಲಿ ಒಟ್ಟು ೧೨೦ ಮನೆಗಳಿವೆ. ಸಣ್ಣ ಮತ್ತು ಮಧ್ಯಮ ವರ್ಗದ ರೈತರೇ ಹೆಚ್ಚು. ಇಲ್ಲಿನ ಕುಂಟುಂಬಗಳು ಒಂದಲ್ಲಾ ಒಂದು ರೀತಿಯಿಂದ ಈ ಕೆರೆಯನ್ನು ಅವಲಂಬಿಸಿದ್ದಾರೆ.

ಒಟ್ಟು ೪೩.೭೫ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ಈ ಕೆರೆ ನೀರುಣಿಸುತ್ತದೆ. ಈ ಅಚ್ಚುಕಟ್ಟು ಪ್ರದೇಶದಲ್ಲಿ ತೆಂಗಿನ ತೋಟಗಳಿವೆ. ಸ್ವಲ್ಪ ಪ್ರಮಾಣದಲ್ಲಿ ತರಕಾರಿ ಬೆಳೆಯುತ್ತಾರೆ. ಹಣ್ಣಿನ ಗಿಡಗಳಿವೆ. ಇವೆಲ್ಲವಕ್ಕೂ ಕೆರೆ ನೀರೇ ಆಧಾರ. ಈ ಕೆರೆಯ ಮೇಲೆ ಇಷ್ಟೆಲ್ಲಾ ಅವಲಂಬನೆಯಿದ್ದರೂ, ಊರಿನವರ‍್ಯಾರೂ ಕೆರೆ ನಿರ್ವಹಣೆಯತ್ತ ಗಮನಿಸುತ್ತಿರಲಿಲ್ಲ. ಮಳೆ ಬಂದಾಗ ಅಲ್ಪ ಸ್ವಲ್ಪ ಕೆರೆ ತುಂಬುತ್ತಿತ್ತು. ಸಿಕ್ಕಷ್ಟು ನೀರನ್ನು ಕೃಷಿಗೆ ಬಳಸಿಕೊಂಡು ರೈತರು ಸುಮ್ಮನಾಗುತ್ತಿದ್ದರು. ಹೀಗೆ ನಿರ್ವಹಣೆ ಕೊರತೆಯಿಂದಾಗಿ ಕೆರೆಯಲ್ಲಿ ಹೂಳು ತುಂಬಿಕೊಂಡಿತ್ತು. ಮುಳ್ಳು-ಕಂಟಿಗಳು ಬೆಳೆದು, ಏರಿ ದುರ್ಬಲವಾಯಿತು ಕೆರೆ ಸಂಪೂರ್ಣ ಪಾಳು ಬಿತ್ತು.

ಆಗಸ್ಟ್ ೨೦೦೯ರಲ್ಲಿ ಜಲಸಂವರ್ಧನಾ ಯೋಜನ ಸಂಘ ‘ಸಮುದಾಯ ಸಹಭಾಗಿತ್ವದ ಕೆರೆ ಅಭಿವೃದ್ಧಿ’ ಯೋಜನೆಯಡಿ ಚಿಕ್ಕನಾಯ್ಕನಹಳ್ಳಿ ತಾಲ್ಲೂಕಿನ 40 ಕೆರೆಗಳನ್ನು ಆಯ್ಕೆ ಮಾಡಿತು. ಅದರಲ್ಲಿ ಗೋಪಾಲನಹಳ್ಳಿ ಕೆರೆಯೂ ಸೇರಿತು. ಆರಂಭದಲ್ಲಿ ಗ್ರಾಮಸ್ಥರು ಕೆರೆ ಅಭಿವೃದ್ಧಿಗೆ ಆಸಕ್ತಿ ತೋರಲಿಲ್ಲ. ಆದರೆ ಸ್ಥಳೀಯ ಉಪನ್ಯಾಸಕ ರಘು ಈ ಯೋಜನೆಯನ್ನು ಅರ್ಥಮಾಡಿಕೊಂಡರು. ಗ್ರಾಮಸ್ಥರನ್ನೂ ಒಪ್ಪಿಸಿದರು. ಊರಿನ ಯುವಕರನ್ನು ಹುರಿದುಂಬಿಸುತ್ತಾ, ‘ಕಾಲಭೈರವೇಶ್ವರ ಬನಶಂಕರಿ ಕೆರೆ ಅಭಿವೃದ್ಧಿ ಸಂಘ’ ರಚಿಸಿದರು. ಸಂಘದ ೯ ಮಂದಿ ಕಾರ್ಯಕಾರಿ ಸಮಿತಿ ಸದಸ್ಯರು, ಎಲ್ಲ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತಗೆದುಕೊಂಡು ಕೆರೆ ಅಭಿವೃದ್ಧಿಗೆ ಸಂಕಲ್ಪ ಮಾಡಿದರು.
ಸಂಘ ರಚನೆಯಾದ ಮೇಲೆ ಯೋಜನೆಯ ನಿಯಮದಂತೆ ಕೆರೆ ಅಭಿವೃದ್ಧಿಯ ವೆಚ್ದದಲ್ಲಿ  ಶೇ.೬ ರಷ್ಟನ್ನು ಸಮುದಾಯಗಳು ಭರಿಸಬೇಕು. ಸರ್ಕಾರ ೧೯,೭೮,೬೦೪ ರೂಪಾಯಿ ನೀಡಿದರೆ, ಅದಕ್ಕೆ ಗ್ರಾಮಸ್ಥರು ಶೇ ೬ ರಷ್ಟು ಅಂದರೆ  ರೂ.೧,೧೮,೭೧೬ ಗಳನ್ನು ವಂತಿಕೆ ಕಟ್ಟಬೇಕು. ಸಂಘದ ಸದಸ್ಯರು ಯೋಜನೆ ಈನಿಯಮಕ್ಕೆ ಬದ್ಧರಾಗಿ, ಮನೆ ಮನೆಗೆ ತಿರುಗಿ ವಂತಿಕೆ ಸಂಗ್ರಹಿಸಿದರು.

ಏರಿಗೆ ‘ಹೆಪ್ಪು’, ಕೆರೆಯಂಚಿಗೆ ಹಸಿರು…!

ಹಲ್ಲು ಹೆಪ್ಪಿನೊಂದಿಗೆ ಕೆರೆ ಏರಿ

ವಂತಿಕೆ ಸಂಗ್ರಹದ ನಂತರೆ ಕೆರೆ ಅಭಿವೃದ್ಧಿ ಚಟುವಟಿಕೆ ಚುರುಕಾಯಿತು. ಮೊದಲು ಏರಿಯ ಸುತ್ತಲಿದ್ದ ಮುಳ್ಳು – ಕಂಟಿಗಳನ್ನು ತೆಗೆದರು. ಏರಿಯ ಇಳಿಜಾರಿಗೆ ‘ಹೆಪ್ಪು’ ಹೊದಿಸಿ(ಹುಲ್ಲಿನ ತೆಂಡೆಗಳು)ಗಟ್ಟಿಗೊಳಿಸಿದರು. ಮಳೆಗಾಲ ಶುರುವಾಗುವುದರೊಳಗೆ ಅರ್ಧ ಕೆರೆ ಹೂಳು ತೆಗೆಸಿದ್ದಾಯಿತು. ಕೆರೆ ಅಭಿವೃದ್ಧಿ ಕಾರ್ಯಗಳು ಸಾಗಿದಂತೆ ಗ್ರಾಮಸ್ಥರ ಆಸಕ್ತಿಯೂ ಗರಿಗೆದರಿತು. ಮುಂದಿನ ಕೆಲಸಗಳು ಹೂವು ಪೋಣಿಸಿದಂತೆ ಸರ ಸರ ಸಾಗಿದವು. ಕೆರೆ ಅಂಗಳ ಸ್ವಚ್ಛವಾಗುತ್ತಲೇ, ಕ್ಯಾಚ್‌ಮೆಂಟ್ ಪ್ರದೇಶ(ಕೆರೆಗೆ ನೀರು ಹರಿವ ಸ್ಥಳ)ಕ್ಕೆ ‘ಚಿಕಿತ್ಸೆ’. ಅದರ ಮೊದಲ ಹೆಜ್ಜೆಯೇ ಕೆರೆ ಅಂಚಿನಲ್ಲಿ ನೆಡು ತೋಪು ನಿರ್ಮಾಣ. ಇದಕ್ಕಾಗಿ ಗ್ರಾಮಸ್ಥರೇ ಟೊಂಕ ಕಟ್ಟಿ ನಿಂತಿದ್ದ ವಿಶೇಷ.

ಪ್ರತಿ ಭಾನುವಾರ ಗ್ರಾಮಸ್ಥರೆಲ್ಲ ಕೆರೆ ಅಂಚಿನಲ್ಲಿ ಸೇರುತ್ತಿದ್ದರು. ಆ ದಿನ ಕೃಷಿ ಪರಿಕರಗಳ ಜೊತೆಗೆ ಅಡುಗೆ ಮನೆಯೂ ಕೆರೆ ಅಂಚಿಗೆ ವರ್ಗವಾಗುತ್ತಿತ್ತು. ಒಂದೆಡೆ ಗಿಡ ನಾಟಿ ಮಾಡುತ್ತಿದ್ದರೆ, ಇನ್ನೊಂದೆಡೆ ರುಚಿ ರುಚಿಯಾದ ಅಡುಗೆ ಸಿದ್ಧವಾಗುತ್ತಿತ್ತು. ಹೀಗೆ ಸಂಭ್ರಮದಿಂದಲೇ ಒಂದೂವರೆ ತಿಂಗಳಲ್ಲಿ ಶ್ರಮದಾನ ಪೂರ್ಣ. ಪರಿಸರ ತಜ್ಞರ ನಿರ್ದೇಶನದೊಂದಿಗೆ ಹೊಂಗೆ, ಅತ್ತಿ, ಹೂವತ್ತಿ, ನೆಲ್ಲಿ, ಹುಣಸೆ, ಸೀತಾಫಲ, ಬೇಲ, ಮಾವು, ಸಿಲ್ವರ್ ಓಕ್, ಅಕೇ ಶಿಯಾ, ಕಾಡು ಬಾದಾಮಿ, ನೇರಳೆ, ಮತ್ತಿ, ಹಲಸಿನಂತಹ ೨೨ ಜಾತಿಯ ೧೫೦೦ ಗಿಡಗಳನ್ನು ನಾಟಿ ಮಾಡಿದರು. ನುಜ್ಜುಕಲ್ಲಿನ ನೆಲದಲ್ಲಿ ಗುಂಡಿ ತೆಗೆದು ಗಿಡ ನೆಡುವುದು ಸುಲಭದ ಮಾತಲ್ಲ. ಆದರೆ ಆ ಕಾರ್ಯವನ್ನು ಸಾಧಿಸಿರುವ ಗ್ರಾಮಸ್ಥರ ಒಗ್ಗಟ್ಟಿನ ಶಕ್ತಿ ಮೆಚ್ಚುವಂಥದ್ದು. ಇಷ್ಟೆಲ್ಲ ಕಷ್ಟದ ಕೆಲಸವಾದರೂ ಗ್ರಾಮಸ್ಥರಿಗೆ ಇದು ಶ್ರಮದ ಕೆಲಸ ಅಂತ ಅನ್ನಿಸಿಲಿಲ್ಲವಂತೆ. ಹಬ್ಬದ ರೀತಿಯಲ್ಲಿ ಶ್ರಮದಾನ ಮಾಡಿದ್ದೇವೆ. ಊರಿನ ಒಗ್ಗಟ್ಟಿನಿಂದಲೇ ಕಲ್ಲು ಭೂಮಿಯಲ್ಲೂ ಹಸಿರು ಅರಳಿಸಲು ಸಾಧ್ಯವಾಗಿದೆ’- ರಘು ಭಾವುಕರಾಗಿ ನುಡಿಯುತ್ತಾರೆ.

ಕ್ಯಾಚ್ ಮೆಂಟ್ ಪ್ರದೇಶದಲ್ಲಿ ಶ್ರಮದಾನದ ಮೂಲಕ ಬೆಳೆಸಿದ ಕಾಡು-ಹಣ್ಣಿನ ಗಿಡಗಳು

ಗಿಡ ನೆಟ್ಟು ವರ್ಷವಾಗಿದೆ. ನೆಟ್ಟ ಗಿಡಗಳೆಲ್ಲ ಎದೆಯುದ್ದಕ್ಕೆ ಬೆಳೆದಿವೆ. ಶೇ.೯೦ರಷ್ಟು ಗಿಡಗಳು ಉಳಿದಿವೆ. ‘ಈ ಯೋಜನೆಯಡಿ ಜಿಲ್ಲೆಯಾದ್ಯಂತ ಲಕ್ಷಕ್ಕೂ ಹೆಚ್ಚು ಗಿಡಗಳನ್ನು ನಾಟಿ ಮಾಡಲಾಗಿದೆ. ಆದರೆ ಇಂಥ ಫಲಿತಾಂಶ ಎಲ್ಲೂ ಕಂಡಿಲ್ಲ. ಇದೆಲ್ಲ ಸಮುದಾಯದ ಶ್ರಮ, ಅನುಸರಿಸಿರುವ ನಿರ್ವಹಣಾ ಕ್ರಮ’ ಎಂದು ಹರ್ಷ ವ್ಯಕ್ತಪಡಿಸು ತ್ತಾರೆ ಜೆಎಸ್‌ವೈಎಸ್‌ನ ಜಿಲ್ಲಾ ಪರಿಸರ ತಜ್ಞ ನಾಗರಾಜ್. ಇತ್ತೀಚೆಗೆ ಕೆರೆ ಅಭಿವೃದ್ಧಿ ವೀಕ್ಷಣೆಗೆ ಆಗಮಿಸಿದ್ದ ವಿಶ್ವಬ್ಯಾಂಕಿನ ಪರಿಸರ ತಜ್ಞರಾದ  ಪಿಯುಷ್ ಡೊಗ್ರಾ ಕೂಡ ಈ ನೆಡುತೋಪಿನ ಬಗ್ಗೆ ಅಚ್ಚರಿ ವ್ಯಕ್ತಪಡಿಸಿರುವುದು ಸಂಘದ ಸದಸ್ಯರ ಉತ್ಸಾಹ ಇಮ್ಮಡಿಸುವಂತಾಗಿದೆ.

ಕೆರೆ ಅಭಿವೃದ್ಧಿಯೊಂದಿಗೆ..
ಕೆರೆ ಅಭಿವೃದ್ಧಿಯೊಂದಿಗೆ ಪ್ರಸ್ತುತ ಗ್ರಾಮದಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಬೆಂಗಳೂರು ಕೃಷಿ ವಿಶ್ವ ನೆರವಿನೊಂದಿಗೆ ರೈತರ ಜಮೀನಿನಲ್ಲಿ ಸಂಶೋಧನೆಗಳೂ ಆರಂಭವಾಗಿವೆ. ಮರೆಯಾಗಿದ್ದ ಸಿರಿಧಾನ್ಯಗಳು( ಹಾರಕ, ಕೊರಲೆ, ನವಣೆ) ಕಾಣಿಸಿಕೊಳ್ಳುತ್ತಿವೆ. ತರಕಾರಿ ಬೆಳೆ, ಮೇವಿನ ಬೆಳೆ ಬೆಳೆಯುವವರ ಸಂಖ್ಯೆ ಹೆಚ್ಚಿದೆ. ಸಂಘದವತಿ ಯಿಂದ ಮೀನುಗಾರಿಕೆ ಕೈಗೊಂಡು ೨೫ ಸಾವಿರ ರೂಪಾಯಿ ಆದಾಯ ಗಳಿಸಿದ್ದಾರೆ.
ಈ ಯೋಜನೆಯಲ್ಲಿ ವಿಧವೆಯರಿಗೆ ಒಂದೂವರೆ ಲಕ್ಷ ರೂಪಾಯಿಯ ಸುತ್ತು ನಿಧಿ ನೀಡಲಾಗಿದೆ. ಈ ಹಣದಲ್ಲಿ ಹೈನುಗಾರಿಕೆ, ಕೋಳಿ, ಕುರಿ, ಆಡು ಸಾಕಾಣಿಕೆ ಕೈಗೊಂಡಿದ್ದಾರೆ. ಕೆರೆ ಅಬಿವೃದ್ಧಿ ಯೋಜನೆಯಿಂದ ಊರಿನಲ್ಲಿ ದನಕರಗಳು ಹೆಚ್ಚಾಗಿವೆ. ‘ಸಂಘದಿಂದ ಸಾಲವಾಗಿ ಪಡೆದ ಹಣವನ್ನು ಆರು ತಿಂಗಳೊಳಗೆ ಮರುಪಾವತಿ ಮಾಡಿದ್ದಾರೆ ಸದಸ್ಯರು’ ಎನ್ನುತ್ತಾರೆ ಜಿಲ್ಲಾ ಸಾಮಾಜಿಕ ತಜ್ಞೆ ವೀಣಾ.

ಕ್ಯಾಚ್ ಮೆಂಟ್ ಪ್ರದೇಶದಲ್ಲಿ ಹಸಿರು ಹೊದಿಕೆ
ಸಮುದಾಯ ಸಂಘಟನೆಯ ರೂವಾರಿ ರಘು(ಎಡಬದಿ) ಜೆಎಸ್ ವೈಎಸ್ ಜಿಲ್ಲಾ ಸಂಯೋಜನಾಧಿಕಾರಿ ಪದ್ಮಪ್ರಭ

ಹಂತ ಹಂತವಾಗಿ ಕೆರೆ ಅಭಿವೃದ್ಧಿ ಜೊತೆಗೆ ಸಮಗ್ರವಾಗಿ ಗ್ರಾಮದ ಅಭಿವೃದ್ಧಿಯಾಗುತ್ತಿದೆ. ‘ಮೊದಲು ನೀರು ಬಳಸುವವನಿಗಷ್ಟೇ ಈ ಕೆರೆ ಸೇರಿದ್ದು’ ಎಂಬ ಭಾವನೆಯಿತ್ತು. ಆದರೆ ಕೆರೆ ಅಭಿವೃದ್ಧಿ ಯೋಜನೆ ಅನುಷ್ಠಾನದ ನಂತರ ಕೆರೆ ಮತ್ತು ಗ್ರಾಮಸ್ಥರ ನಡುವೆ ಆತ್ಮೀಯತೆ ಬೆಳೆದಿದೆ. ಪ್ರತಿಯೊಬ್ಬರೂ ಕೆರೆಯನ್ನು ಪ್ರೀತಿಯ ಕಂಗಳಿಂದ ನೋಡುತ್ತಾರೆ. ನಿತ್ಯ ಒಬ್ಬರಲ್ಲಾ ಒಬ್ಬರು ಕೆರೆಗೆ ಭೇಟಿ ನೀಡುತ್ತಾರೆ. ಸಣ್ಣ ಸಣ್ಣ ಬದಲಾವಣೆಗಳನ್ನು ಗಮನಿಸುತ್ತಾರೆ. ಅದಕ್ಕೆ ರಘು ಹೇಳ್ತಾರೆ, ‘ಈ ಯೋಜನೆ ಕೆರೆಯನ್ನಷ್ಟೇ ಕಟ್ಟಲಿಲ್ಲ, ನಮ್ಮ ಗ್ರಾಮಸ್ಥರ ಮನಸ್ಸುಗಳನ್ನು ಬೆಸೆದಿದೆ. ಒಗ್ಗಟ್ಟಿನ ಪಾಠ ಹೇಳಿದೆ. ಕೆರೆಯೊಂದು ಅಭಿವೃದ್ಧಿಯಾದರೆ, ಇಡೀ ಊರೇ ಅಭಿವೃದ್ಧಿಯಾದಂತೆ’ ಎಂಬ ಸಿದ್ಧಾಂತವನ್ನು ತಿಳಿಸಿಕೊಟ್ಟಿದೆ.

ಒಂದೂವರೆ ವರ್ಷದಲ್ಲಿ ಗೋಪಾಲನಹಳ್ಳಿಯಲ್ಲಾಗಿರುವ ಬದಲಾವಣೆಗಳು ರಾಜ್ಯಾದ್ಯಂತ ಪಸರಿಸಿವೆ. ಜಿಲ್ಲಾ ಸಮನ್ವಯ ಅಧಿಕಾರಿಗಳಿಗೆ ‘ಇದೊಂದು ಮಾದರಿ ಕೆರೆ’ಯಾಗಿದೆ. ಇಲ್ಲಿನ ಸಮುದಾಯದ ಬದ್ಧತೆ ಅರಿತ ವಿವಿಧ ಇಲಾಖೆಗಳು ‘ತಮ್ಮ ಯೋಜನೆಗಳನ್ನು ಈ ಗ್ರಾಮದಲ್ಲಿ ಅನುಷ್ಠಾನಗೊಳಿಸಲು’ ಪೈಪೋಟಿಗಿಳಿದಿವೆ. ಅತ್ಯುತ್ತಮ ಗ್ರಾಮ ಸಂಘಟನೆಯ ಕಾರ್ಯವನ್ನು ವೀಕ್ಷಿಸಲು ಹಲವರು ಗಣ್ಯರು ಭೇಟಿ ನೀಡಿದ್ದಾರೆ. ಈಗ ಎಲ್ಲರ ದೃಷ್ಟಿ ಗೋಪಾಲನಹಳ್ಳಿಯತ್ತ ನೆಟ್ಟಿದೆ.

ಸಮುದಾಯ ಸಂಘಟನೆ ಕಟ್ಟಿದ ಸೇತುವೆ

ಸೇತುವೆ ನಿರ್ಮಿಸಿದ ಸಮುದಾಯ !
ಗೋಪಾಲನಹಳ್ಳಿ ಕೆರೆ ಕೋಡಿ ಬಿದ್ದಾಗ ಮುಂದೆ ದೊಡ್ಡದಾದ ಹಳ್ಳ ಹರಿಯುತ್ತದೆ. ಈ ಹಳ್ಳ ಮಳೆಗಾಲದಲ್ಲಿ ಗ್ರಾಮ ಹಾಗೂ ೩೦ ಮಂದಿ ಅಚ್ಚುಕಟ್ಟುದಾರರಿಗೆ ‘ಜಲ ಕಂಟಕ’ವಾಗಿತ್ತು. ಬೆಳಿಗ್ಗೆ ಜಮೀನಿಗೆ ಹೊ ದವರು ಸಂಜೆಯ ಮಳೆಗೆ ಸಿಕ್ಕಿ ಗ್ರಾಮಕ್ಕೆ ವಾಪಾಸಾಗುವುದರೊಳಗೆ ಹಳ್ಳದಲ್ಲಿ ಎದೆ ಮಟ್ಟದ ನೀರು. ಜಾನುವಾರು, ಕುರಿ-ಮೇಕೆ ಹೇಗೋ ಈಜಿ ದಡ ಸೇರುತ್ತಿದ್ದವು. ಮಹಿಳೆಯರು, ಮಕ್ಕಳು ಮಾತ್ರ, ನೀರು ಇಳಿಯುವವರೆಗೂ ಕಾಯಬೇಕಿತ್ತು. ಬೆಳೆ ಕೊಯ್ಲಾದಾಗ, ಕಣ ಮಾಡಿದಾಗ ದವಸ-ಧಾನ್ಯ ಸಾಗಿಸಲು ವಿಪರೀತ ತೊಂದರೆ.
‘ಕೆರೆ ಅಭಿವೃದ್ಧಿ ಮಾಡಿದಿರಿ. ನಮ್ಮ ಕಷ್ಟನೂ ಒಮ್ಮೆ ನೋಡಿ, ಸೇತುವೆ ಕಟ್ಟಿಕೊಡಿ’ ಎಂದು ಕೆರೆ ಅಭಿವೃದ್ಧಿ ಸಂಘದವರು ಯೋಜನಾಧಿಕಾರಿಗಳಿಗೆ ಮೊರೆಯಿಟ್ಟರು. ಆದರೆ ಎಂಜಿನಿಯರ್‌ಗಳು ‘ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ’ ಎಂದು ಕೈಚೆಲ್ಲಿದ್ದರು. ಆದರೆ ಅಂದಿನ ಜಿಲ್ಲಾ ಸಮನ್ವಯಾಧಿಕಾರಿ ನಾಗರಾಜನಾಯಕ್, ಗೋಪಾಲನಹಳ್ಳಿಯ ‘ಸಮುದಾಯದ ಬದ್ಧತೆ’ ಕಂಡು ಸೇತುವೆ ನಿರ್ಮಾಣಕ್ಕೆ ಅನುಮತಿ ಕೊಡಿಸಿದರು. ಕ್ರಿಯಾ ಯೋಜನೆ ರೂಪಿಸಿದ ಒಂದೂವರೆ ತಿಂಗಳಲ್ಲಿ ಸೇತುವೆ ಸಿದ್ಧವಾಯಿತು. ಕೆರೆ ಅಭಿವೃದ್ಧಿ ಸಂಘದವರ ಕಣ್ಗಾವಲಿನಲ್ಲೇ ಕಾಮಗಾರಿ ಸಾಗಿದ್ದು ವಿಶೇಷ.  ಸೇತುವೆ ನಿರ್ಮಿಸಿದ್ದಕ್ಕೆ ಗ್ರಾಮಸ್ಥರು ಇಲಾಖೆಗೆ ಋಣಿಯಾಗಿದ್ದಾರೆ. ‘ಸೇತುವೆ ನಿರ್ಮಾಣ, ನಮ್ಮ ಪಾಲಿಗೆ ‘ಕೋಟಿ ಹಣಕ್ಕಿಂತಲೂ’ ಹೆಚ್ಚು ಎನ್ನುವುದು ಮಹಿಳಾ ಸಂಘದ ಸದಸ್ಯೆ ಲಲಿತಮ್ಮ ಅಭಿಪ್ರಾಯ.

Published by

ಗಾಣಧಾಳು ಶ್ರೀಕಂಠ

ಹುಟ್ಟೂರು ಗಾಣಧಾಳು. ಓದಿದ್ದು ತಿಪಟೂರು. ಕೆಲಸ ಮಾಡ್ತಿರೋದು ಬೆಂಗಳೂರು. ವೃತ್ತಿಯಲ್ಲಿ ಪತ್ರರ್ತ, ಆಸಕ್ತಿ ಕೃಷಿ-ಗ್ರಾಮೀಣಾಬಿವೃದ್ದಿ ಮತ್ತು ಪರಿಸರ. ಫೋಟೋಗ್ರಫಿ, ಪುಟ ವಿನ್ಯಾಸ, ಪ್ರವಾಸ ಹವ್ಯಾಸ. ರಮಾ ಬಾಳಸಂಗಾತಿ. ಆಕೆಯೂ ಹವ್ಯಾಸಿ ಬರಹಗಾರ್ತಿ. ಸ್ಪೈಸ್ ಇಂಡಿಯಾ ಕನ್ನಡ ಮಾಸ ಪತ್ರಿಕೆಯಲ್ಲಿ ಆರು ವರ್ಷ ಸಹಾಯಕ ಸಂಪಾದಕಿ (ಎಡಿಟೋರಿಯಲ್ ಅಸಿಸ್ಟೆಂಟ್) ಕೆಲಸ ಮಾಡಿದ್ದಾರೆ. ಸದ್ಯ ಚಿತ್ರದುರ್ಗ ಆಕಾಶವಾಣಿ ಕೇಂದ್ರದಲ್ಲಿ ಗೌರವ ಉದ್ಘೋಷಕಿ, ಮಗಳು ನದಿ ನನ್ನ ಬದುಕು, ಮಗ ಅಗರ್ತ, ನನ್ನ ಭವಿಷ್ಯ. ನಿವೃತ್ತ ಶಿಕ್ಷಕ ತಂದೆ ಗಾಣಧಾಳು ರಾಮಣ್ಣ ಅವರೊಂದಿಗೆ ವರ್ಗವಾದ ಕಡೆ ವಾಸ್ತವ್ಯ. ಸದ್ಯ ಚಿತ್ರದುರ್ಗದಲ್ಲಿ ವಾಸ. ಸಮಾಜಶಾಸ್ತ್ರ ಮತ್ತು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. ಕಾಲೇಜು ದಿನಗಳಲ್ಲೇ ಪತ್ರಿಕೆಗಳಿಗೆ ಲೇಖನ ಬರೆಯುವ ಹವ್ಯಾಸ. ಪ್ರಜಾಪ್ರಗತಿ, ಉದಯವಾಣಿ ಪತ್ರಿಕೆಗಳಿಗೆ ಅರೆಕಾಲಿಕ ವರದಿಗಾರನಾಗಿ ಸೇವೆ. ೧೯೯೬ರಿಂದ ತಿಪಟೂರಿನ ಬೈಫ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಲ್ಲಿ ದಾಖಲಾತಿಗಾರನಾಗಿ ವೃತ್ತಿ ಆರಂಭ. ಕ್ರಮೇಣ, ಅದೇ ಸಂಸ್ಥೆಯ ಪ್ರಕಾಶನದ ಸಿರಿಸಮೃದ್ಧಿ ಕೃಷಿ ಮಾಸಪತ್ರಿಕೆಯಲ್ಲಿ ಉಪ ಸಂಪಾದಕನಾಗಿ ಸೇವೆ ಮುಂದುವರಿಕೆ. ೨೦೦೨ರಿಂದ ವಿಜಯ ಕರ್ನಾಟಕ ದಿನಪತ್ರಿಕೆಯ ಚಿತ್ರದುರ್ಗ ಆವೃತ್ತಿಯಲ್ಲಿ ಉಪ ಸಂಪಾದಕನಾಗಿ ಸೇವೆ ಆರಂಭ. ೨೦೦೪ರಲ್ಲಿ ಇದೇ ಪತ್ರಿಕೆಯ ಕೃಷಿ ವಿಜಯ ಪುರವಣಿಯ ಮುಖ್ಯಸ್ಥನಾಗಿ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಣೆ. ೨೦೦೬ರಿಂದ ಪ್ರಜಾವಾಣಿ ಪತ್ರಿಕೆಯ ಬೆಂಗಳೂರಿನ ಕಚೇರಿಯಲ್ಲಿ ವಿವಿಧ ವಿಭಾಗಗಳಲ್ಲಿ ಸೇವೆ. ಪ್ರಕಟಿತ ಕೃತಿಗಳು : ಆಕಾಶವಾಣಿಯಲ್ಲಿ ಪ್ರಸಾರವಾದ ನಾಟಿ ಬೀಜಗಳ ಪರಂಪರೆ ಕುರಿತ ಸರಣಿಯ ಅಕ್ಷರ ರೂಪದ ಕೃತಿ ‘ಬೀಜಸಂಪದ’ . ಸಾವಯವ ಕೃಷಿಕರ ಯಶೋಗಾಥೆಯ ಕೃತಿ ‘ಸಾವಯವ ಚಿತ್ತಾರ’, ‘ವೆಲ್ವೆಟ್ ಬೀನ್ಸ್ -ನೆಲಕ್ಕೆ ಜೀವ ತುಂಬುವ ಮ್ಯಾಜಿಕ್ ಬಳ್ಳಿ’, ‘ಸ್ಲೋಫುಡ್- ಸುಭೋಜನಾ ಸಾವಧಾನ’, ‘ದೇಸಿ ಕೃಷಿ ಉಪಕರಣಗಳು’, ‘ನೆಲಮೂಲ ಕೃಷಿಜ್ಞಾನ- ಮಲೆನಾಡ ದೇಸಿ ಕೃಷಿ ಪದ್ಧತಿಗಳು’, ‘ ಹಸಿರು ಹಾದಿ’, ‘ಅಜೋಲಾ-ಮೇವಿಗೂ ಸೈ ಗೊಬ್ಬರಕ್ಕೂ ಜೈ’, ‘ಸುಸ್ಥಿರ ತೋಟ ಮಾಡೋಣ ಬನ್ನಿ’ ಹಾಗೂ ‘ಹೊನ್ನಾರು - ಪರಿಸರ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಚಿಂತನೆ’ ಕುರಿತ ಕೃತಿಗಳು ಪ್ರಕಟಗೊಂಡಿವೆ. ಪ್ರಶಸ್ತಿ ಪುರಸ್ಕಾರ ೨೦೦೬ರಲ್ಲಿ ಸಿಡಿಎಲ್ ಸಂಸ್ಥೆಯಿಂದ ‘ಕೆರೆ ಆಪೋಷಣ ಪುರಾಣ’ ಲೇಖನಕ್ಕೆ ರಾಜ್ಯಮಟ್ಟದ ‘ಚರಕ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ’. ಇದೇ ವರ್ಷ ಧಾರವಾಡದ ಕೃಷಿ ಮಾಧ್ಯಮ ಕೇಂದ್ರದಿಂದ ‘ವೆಲ್ವೆಟ್ ಬೀನ್ಸ್’ ಲೇಖನಕ್ಕಾಗಿ ‘ರಾಜ್ಯ ಮಟ್ಟದ ಉತ್ತಮ ಕೃಷಿ ಬರಹಗಾರ ಪ್ರಶಸ್ತಿ’. ‘ದೇಸಿ ಭತ್ತ ಭ್ರಹ್ಮ ನಟವರಸಾರಂಗಿ’ ಲೇಖನಕ್ಕಾಗಿ ೨೦೦೯ರಲ್ಲಿ ಮುರುಘಾಶ್ರೀ - ರಾಜ್ಯಮಟ್ಟದ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ, ೨೦೧೦-೧೧ನೇ ಸಾಲಿನ ‘ಉತ್ತಮ ವಿಜ್ಞಾನ ಲೇಖಕ ಪ್ರಶಸ್ತಿಗೆ ವೆಲ್ವೆಟ್ ಬೀನ್ಸ್ ಮತ್ತು ಸಾವಯವ ಚಿತ್ತಾರ ಪುಸ್ತಕಗಳ ಆಯ್ಕೆ. ೨೦೧೧ರಲ್ಲಿ ನವದೆಹಲಿಯ ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್(ಸಿಎಸ್ಇ) ಸಂಸ್ಥೆಯಿಂದ ‘ಜಲಮೂಲಗಳ ಅಧ್ಯಯನಕ್ಕಾಗಿ’ ೧೨ನೇ ಸಿಎಸ್ಇ ಫೆಲೋಷಿಪ್ ಗೌರವ. ೨೦೧೨ರ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ‘ಯಜಮಾನ್ ಶ್ರೀ ನಾರಾಯಣಪ್ಪ ಪ್ರಶಸ್ತಿ, ೨೦೧೧ನೇ ಸಾಲಿನಲ್ಲಿ ‘ಬೆಂಗಳೂರು ನಿರ್ಮಾತೃ ಕೆಂಪೇಗೌಡ ಪ್ರಶಸ್ತಿ ಪುರಸ್ಕಾರ ಹಾಗೂ ಪರಿಸರ ಪತ್ರಿಕೋದ್ಯಮದಲ್ಲಿನ ಎರಡು ದಶಕಗಳ ಗಣನೀಯ ಸೇವೆಯನ್ನು ಗುರುತಿಸಿರುವ ಕರ್ನಾಟಕ ಸರ್ಕಾರ ‘೨೦೧೪ನೇ ಸಾಲಿನ ರಾಜ್ಯಮಟ್ಟದ ‘ಪರಿಸರ ಪತ್ರಿಕೋದ್ಯಮ’ ಪ್ರಶಸ್ತಿ’ ನೀಡಿ ಗೌರವಿಸಿದೆ. ಅಧ್ಯಯನ ಪ್ರವಾಸ : ಕೃಷಿ ಅಧ್ಯಯನಕ್ಕಾಗಿ ೨೦೧೩ರಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಸ್ಯಾನ್ಫ್ರಾನ್ಸಿಸ್ಕೋಗೆ ಪ್ರವಾಸ. ಭಾರತದ ಚಂಡಿಗಡ, ಒರಿಸ್ಸಾ, ಬಿಹಾರ, ಆಂಧ್ರ, ತಮಿಳುನಾಡು ಸೇರಿದಂತೆ ಕೃಷಿ ಅಧ್ಯಯನಕ್ಕಾಗಿ ವಿವಿಧ ರಾಜ್ಯಗಳಲ್ಲಿ ಪ್ರವಾಸ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s