ವರ್ಲಿ ಚಿತ್ತಾರಗಳ ವಿದ್ಯಾನಿಕೇತನ

ಬಿದಿರಿನ ಕಲಾಕೃತಿಗಳಿಂದ ಅಲಂಕೃತ ಹೆಬ್ಬಾಗಿಲು. ಒಳಗೆ ಹಸಿರು ಗೋಡೆಗಳ ಮೇಲೆ ಬೆಳ್ಳನೆಯ ಗೆರೆಗಳ ಚಿತ್ತಾರಗಳು. ಕಂಬಗಳ ನಡುವೆ, ಕಿಟಕಿಯ ಪಕ್ಕ, ಬಾಗಿಲು, ಕಾರಿಡಾರ್‌ನ ಬದಿಯಲ್ಲೆಲ್ಲಾ ಚಿತ್ತಾರಗಳ ಸೊಬಗು. ಜನರ ದೈನಂದಿನ ಬದುಕಿಗೆ ಆಧಾರವಾದ ಹಲವು ಕಾಯಕಗಳನ್ನು ಪರಿಚಯಿಸುವ ಚಿತ್ರಗಳು ಗೋಡೆಗಳ ಮೇಲೆ ಅನಾವರಣಗೊಂಡಿವೆ! ಗೆರೆಗಳನ್ನೇ ಬಾಗಿಸಿ, ಸುರುಳಿಯಾಗಿ ಸುತ್ತಿಸಿ ಬಿಡಿಸಿರುವ ‘ವರ್ಲಿ ಚಿತ್ತಾರಗಳು’ ಶಾಲೆ ಅಂದವನ್ನು ಇಮ್ಮಡಿಗೊಳಿಸಿವೆ!

ವರ್ಲಿ ಚಿತ್ತಾರಗಳ ಸಿರಿವಂತಿಕೆಯನ್ನೇ ಧರಿಸಿನಿಂತಿರುವ ಈ ಶಾಲೆಯ ಹೆಸರು ಟ್ವಿಂಕ್ಲರ್ಸ್‌ ವಿದ್ಯಾನಿಕೇತನ. ಬೆಂಗಳೂರಿನ ನಾಗರಬಾವಿ ಬಡಾವಣೆಯ ಎನ್‌ಜಿಇಎಫ್ ಲೇಔಟ್‌ನಲ್ಲಿದೆ. ಕೆ.ಎಸ್.ಜಗನ್ನಾಥ ಗುಪ್ತ ಈ ಶಾಲೆಯ ಸ್ಥಾಪಕರು. 350 ಮಕ್ಕಳು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಮೂರು ವರ್ಷಗಳ ಹಿಂದೆ ಈ ಶಾಲೆಯ ಗೋಡೆಗಳ ಮೇಲೆಲ್ಲಾ ಕಾರ್ಟೂನ್‌ಗಳಳು ಎದ್ದು ಕಾಣುತ್ತಿದ್ದವು. ಅದೇ ಮಿಕ್ಕಿಮೌಸ್, ಟೆಡ್ಡಿ ಬೇರ್. ಟಿವಿ, ಪುಸ್ತಕ, ಸಿನಿಮಾಗಳಲ್ಲಿ ಇಂಥ ಚಿತ್ರಗಳನ್ನು ನೋಡಿ ಬೋರ್ ಹೊಡೆಸಿಕೊಂಡಿದ್ದ ಮಕ್ಕಳು, ಶಾಲೆ ಗೋಡೆಗಳ ಮೇಲಿದ್ದ ಅವೇ ಚಿತ್ರಗಳನ್ನು ಅಷ್ಟಾಗಿ ಗಮನಿಸುತ್ತಿರಲಿಲ್ಲ. ಇದೇ ಸಮಯದಲ್ಲಿ ಪತ್ರಿಕೆಯೊಂದರಲ್ಲಿ ‘ವರ್ಲಿ ಕಲೆ’ ಕುರಿತು ಪ್ರಕಟವಾದ ಲೇಖನ ಹಾಗೂ ಚಿತ್ರಗಳನ್ನು ಗಮನಿಸಿದ ಗುಪ್ತ ಅವರಿಗೆ  ತಮ್ಮ  ಶಾಲೆಯ ಗೋಡೆಗಳ ಮೇಲೂ ಇಂಥ ಚಿತ್ರಗಳನ್ನು ಬಿಡಿಸಬಾರದೇಕೆ? ಅನ್ನಿಸಿತು. ವರ್ಲಿ ಚಿತ್ರಗಳ ಮೂಲಕ ಮಕ್ಕಳಿಗೆ ‘ಸ್ಥಳೀಯ ಶ್ರಮ ಸಂಸ್ಕೃತಿ’ಯನ್ನು ಪರಿಚಯಿಸಬೇಕು ಎನ್ನುವ ನಿರ್ಧಾರಕ್ಕೆ ಬಂದರು.

ಇದೇ ಸಮಯದಲ್ಲಿ ಸಂಶೋಧಕ ಸತ್ಯಜಿತ್ ಅವರ ಮೂಲಕ ಮಂಡ್ಯದ ಕಲಾವಿದ ಸೋಮವರದ ಅವರ  ಪರಿಚಯವಾಯಿತು. ಸತ್ಯಜಿತ್ ಅವರ ಮಗ ಈ ಶಾಲೆಯ ವಿದ್ಯಾರ್ಥಿ. ಸೋಮವರದ ಅವರ ಕಲಾ ಕೌಶಲ್ಯ ಹಾಗೂ ಗುಪ್ತ ಅವರ ‘ಸ್ಥಳೀಯ ಸಂಸ್ಕೃತಿ’ ಪರಿಕಲ್ಪನೆ ಎರಡೂ ಸಮಾಗಮಗೊಂಡು ಮೂರು ತಿಂಗಳಲ್ಲಿ ಶಾಲೆಯ ಗೋಡೆಗಳ ಮೇಲೆ ವರ್ಲಿ ಚಿತ್ತಾರಗಳು ಅರಳಿದವು!

ಮಧ್ಯಾಹ್ನ ಊಟದ ಸಮಯದಲ್ಲಿ ಶಿಕ್ಷಕಿಯರೊಂದಿಗೆ ಚಿತ್ತಾರಗಳ ನೋಟ

ಕಟ್ಟಡದ ವಿನ್ಯಾಸಕ್ಕೆ ತಕ್ಕಂತೆ ಚಿತ್ರಗಳಿವೆ. ಮಕ್ಕಳು ಓಡಾಡುವ, ಊಟ ಮಾಡುವ ಹಾಗೂ ಆಟವಾಡುವ ಸ್ಥಳದ ಪಕ್ಕದ ಗೋಡೆಗಳ ಮೇಲೆ ಚಿತ್ರಗಳನ್ನು ಬರೆಸಲಾಗಿದೆ. ಹಳ್ಳಿಯ ಹಾಗೂ ಪಟ್ಟಣದ ಜೀವನವನ್ನು ಪರಿಚಯಿಸುವ ಚಿತ್ರಗಳಿವೆ. ಬೇಸಾಯ ಚಟುವಟಿಕೆಗಳಾದ ಉಳುಮೆ, ಚಕ್ಕಡಿ ಓಟ, ಬಿತ್ತನೆ, ಧಾನ್ಯ ಸಂಸ್ಕರಣೆ, ಅಡುಗೆ ತಯಾರಿ, ಗ್ರಾಮೀಣ ಕ್ರೀಡೆಗಳೂ ಸೇರಿದಂತೆ 20 ರಿಂದ 25 ವೈವಿಧ್ಯಮಯ ಚಿತ್ರಗಳು ಇಲ್ಲಿ ಅರಳಿವೆ. ಈ ಚಿತ್ರಗಳು ಅರಣ್ಯ,ಪರಿಸರ, ಜಲ ಸಂರಕ್ಷಣೆಯ ಪಾಠಗಳನ್ನೂ ಹೇಳುತ್ತವೆ. ಪುಟ್ಟ ಮಕ್ಕಳಿಗಾಗಿ ವಿಮಾನ, ಹಳೆಕಾಲದ ಉಗಿಬಂಡಿ,  ಬಸ್ಸು, ಲಾರಿ, ಮೋಟರ್ ಬೈಕ್ ಮತ್ತಿತರ ವಾಹನಗಳ ಚಿತ್ರಗಳಿವೆ.

‘ಇಲ್ಲಿನ ವರ್ಲಿ ಚಿತ್ರಗಳಲ್ಲಿ ವೈವಿಧ್ಯತೆ ಇದೆ. ಮಕ್ಕಳು ಬಹಳ ಆಸಕ್ತಿಯಿಂದ ಇವನ್ನು ಗಮನಿಸುತ್ತಾರೆ. ಊಟದ ಸಮಯದಲ್ಲಿ, ಬಿಡುವಿನ ವೇಳೆಯಲ್ಲಿ ಚಿತ್ರಗಳ ಮೇಲೆ ಕಣ್ಣು ಹಾಯಿಸುತ್ತಾರೆ. ಚಿತ್ರಗಳನ್ನು ತೋರಿಸುತ್ತಾ  ಶಿಕ್ಷಕರನ್ನು ಪ್ರಶ್ನಿಸುವುದನ್ನು ನಾನು ಗಮನಿಸಿದ್ದೇನೆ ಎನ್ನುತ್ತಾರೆ ಗುಪ್ತ.

ಮಕ್ಕಳ ಮನೋ ವಿಕಾಸ: ‘ಮಕ್ಕಳ ಮುಗ್ಧ ಮನಸ್ಸುಗಳಿಗೆ ಖುಷಿ ಕೊಡುವಂತಹ ಚಿತ್ರ ಬಿಡಿಸಬೇಕು. ಆ ಚಿತ್ರ ನೋಡಿದ ಕೂಡಲೇ ಮಕ್ಕಳು ತಾವೂ ಚಿತ್ರ ಬರೆಯಲು ಮುಂದಾಗಬೇಕು. ಅದಕ್ಕೆಂದೇ ‘ವರ್ಲಿ ಚಿತ್ರ ಕಲೆಯನ್ನು ಆಯ್ಕೆ ಮಾಡಿಕೊಂಡೆ’ ಎನ್ನುತ್ತಾರೆ ಸೋಮವರದ. ವರ್ಲಿ ಚಿತ್ರ ರಚಿಸುವುದು ಸುಲಭ ಹಾಗೂ ಅವು ಜನರಿಗೆ ನೋಡುತ್ತಿದ್ದಂತೆ ಅರ್ಥವಾಗಿಬಿಡುತ್ತವೆ ಎನ್ನುವುದು ಸೋಮವರದ ಅವರ ಅಭಿಪ್ರಾಯ.

ಚಿತ್ರಗಳಿಗೆ ಹಸಿರು ಮತ್ತು ಬಿಳಿ ಬಣ್ಣಗಳನ್ನು ಮಾತ್ರ ಬಳಸಿದ್ದೇನೆ. ‘ಹಸಿರು ನಿಸರ್ಗದ ಸಂಕೇತ. ಅದು ಕಣ್ಣಿಗೆ ತಂಪು ನೀಡುತ್ತದೆ. ಶಾಲೆಯ ಹಿಂಭಾಗದಲ್ಲಿ ಮರಗಳಿವೆ. ಹಸಿರು ಹಿನ್ನೆಲೆಯಲ್ಲಿ ಬಿಳಿ ಗೆರೆಗಳು ಎದ್ದುಕಾಣುತ್ತವೆ ಎನ್ನುತ್ತಾರೆ.

ಮಾಧ್ಯಮಿಕ ಶಾಲೆ ಮಕ್ಕಳಿಗೆ ಚಿತ್ತ ನೋಡುವಲ್ಲಿ ಆಸಕ್ತಿ

ಶಾಲೆಯ ಚಿತ್ರಗಳು ಮಕ್ಕಳ ಪಾಲಕರು ಹಾಗೂ ಸಾರ್ವಜನಿಕರಿಗೂ ಇಷ್ಟವಾಗಿವೆ. ಚಿತ್ರಗಳನ್ನು ನೋಡಿ ಉತ್ತೇಜನಗೊಂಡಿರುವ ಅನೇಕ ಪಾಲಕರು ತಮ್ಮ ಮನೆಗಳ ಗೋಡೆಗಳ ಮೇಲೆ ವರ್ಲಿ ಚಿತ್ರಗಳನ್ನು ಬರೆಸಲು ಮುಂದಾಗಿದ್ದಾರೆ. ಗುಪ್ತ ಅವರೂ ತಮ್ಮ ಹೊಸ ಶಾಲಾ ಕಟ್ಟಡದ ಗೋಡೆಗಳ ಮೇಲೂ ವರ್ಲಿ ಚಿತ್ರಗಳನ್ನೇ  ಬರೆಸಲು ನಿರ್ಧರಿಸಿದ್ದಾರೆ.

ಟ್ವಿಂಕ್ಲರ್ಸ್‌ ವಿದ್ಯಾನಿಕೇತನ ಶಾಲೆಯ ಈ ಪ್ರಯತ್ನ ಅನೇಕ ಶೈಕ್ಷಣಿಕ ಸಂಸ್ಥೆಗಳಿಗೆ ಮಾದರಿಯಾಗಿದೆ. ಭಾರೀ ಹಣ ಖರ್ಚು ಮಾಡಿ ಶಾಲೆಯ ಗೋಡೆಗಳ ಮೇಲೆ ಬಣ್ಣಗಳ ರಾಡಿ ಎಬ್ಬಿಸುವ ಬದಲು ಸೌಮ್ಯ ಬಣ್ಣಗಳನ್ನು ಬಳಸಿಕೊಂಡು ಆಕರ್ಷಕ ಚಿತ್ರಗಳನ್ನು ಬರೆಸುವುದು ಹೆಚ್ಚು ಪರಿಣಾಮಕಾರಿ.

ಟ್ವಿಂಕ್ಲರ್ಸ್‌ ವಿದ್ಯಾನಿಕೇತನ ಶಾಲೆಯ ದೂರವಾಣಿ ನಂಬರ್- 23213135. ಸೋಮವರದ ಅವರ ಮೊಬೈಲ್ ನಂಬರ್ – 9743512174.