ಜಿಗಣಿಯ ವಿವೇಕಾನಂದ ಯೋಗ ಕೇಂದ್ರದಲ್ಲಿ ಸೋಮವಾರದಿಂದ ‘ಯೋಗ, ಗೋವು ಹಾಗೂ ಗ್ರಾಮೀಣ ಪುನರ್‌ರಚನೆ’ ಕುರಿತ ಅಂತರರಾಷ್ಟ್ರೀಯ ಸಮಾವೇಶವೊಂದು ನಡೆಯುತ್ತಿದೆ.
ಯೋಗ, ಧ್ಯಾನ, ಪ್ರಾಣಾಯಾಮಗಳು ಸ್ವಾಸ್ಥ್ಯ ಜೀವನದ ಗುಟ್ಟು. ಪೌಷ್ಟಿಕ ಆಹಾರ ಈ ಗುಟ್ಟಿನ ಹಿಂದಿನ ಶಕ್ತಿ. ಆಹಾರ- ಆರೋಗ್ಯ- ವಾತಾವರಣ- ನಿತ್ಯದ ಕ್ರಿಯೆ. ಇವೆಲ್ಲ ಒಂದೊಕ್ಕೊಂದು ಕೊಂಡಿ. ಅದಕ್ಕಾಗಿ ಯೋಗ- ಧ್ಯಾನ- ಪ್ರಾಣಾಯಾಮ ತರಬೇತಿ ನೀಡುವ ಕೇಂದ್ರಗಳಲ್ಲೆಲ್ಲಾ ವಿಷರಹಿತ ಕೃಷಿ, ಸಾವಯವ ಆಹಾರದ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿರುತ್ತದೆ.
ಯೋಗ ಗುರು ಬಾಬಾ ರಾಮದೇವ್ ಅವರಿಂದ ಹಿಡಿದು, ಸ್ಥಳೀಯ ಮಠ ಮಾನ್ಯಗಳೆಲ್ಲ ಪೌಷ್ಟಿಕ ಆಹಾರ ಉತ್ಪಾದನೆಯಲ್ಲಿ ಆಸಕ್ತಿ ತೋರಿವೆ. ದೇಸಿ ಆಕಳು, ಅವುಗಳ ಸೆಗಣಿ, ಗಂಜಲ ಬಳಕೆಯಿಂದ ಕೃಷಿ ಚಟುವಟಿಕೆ ಕೈಗೊಳ್ಳುವುದರ ಜೊತೆಗೆ, ಸಾವಯವ ಆಹಾರ ಉತ್ಪಾದನೆಯ ದಾಸೋಹಕ್ಕೂ ಮುಂದಾಗಿವೆ. ಪುದುಚೆರಿಯ ಅರಬಿಂದೋ ಆಶ್ರಮದಲ್ಲಿ ಈ ಪ್ರಯತ್ನ ಸಾಗಿದೆ. ಅಲ್ಲಿನ ನಿತ್ಯ ದಾಸೋಹದಲ್ಲಿ ಸಾವಯವ ತರಕಾರಿ, ಹಣ್ಣು, ಹಂಪಲು, ಧಾನ್ಯಗಳನ್ನು ಬಳಸಲಾಗುತ್ತಿದೆ.
ಈ ಚಟುವಟಿಕೆಗಳ ನಡುವೆಯೇ ವೇದಗಳ ಕಾಲದ ಕೃಷಿಗೂ ಜೀವ ತುಂಬುವ ಕೆಲಸ ನಡೆಯುತ್ತಿದೆ. ಅಗ್ನಿಹೋತ್ರ, ಹೋಮ-ಹವನಗಳಿಂದ ಬೆಳೆ ಇಳುವರಿ ಹೆಚ್ಚಳ, ರೋಗ-ಕೀಟ ಬಾಧೆ ನಿಯಂತ್ರಣ, ವಾತಾವರಣ ಶುದ್ಧೀಕರಣ ಕುರಿತು ಸಂಶೋಧನೆಗಳೂ ಯಶಸ್ವಿಯಾಗಿವೆ.
ಅಗ್ನಿಹೋತ್ರ ಎಂದರೆ ನಾಟಿ ಹಸುವಿನ ಸೆಗಣಿಯ ಬೆರಣಿಗೆ ನಾಟಿ ಹಸುವಿನ ಬೆಣ್ಣೆ ಲೇಪಿಸಿ, ಉಲ್ಟಾ ಪಿರಮಿಡ್ (ರಿವರ್ಸ್ ಪಿರಮಿಡ್) ಆಕಾರದ ತಾಮ್ರದ ಹೋಮ ಕುಂಡದಲ್ಲಿ ಸೂರ್ಯೋದಯ ಹಾಗೂ ಸೂರ್ಯಾಸ್ತದ ಸಮಯದಲ್ಲಿ ನಿಗದಿತ ಮಂತ್ರ ಪಠಣದೊಂದಿಗೆ ಹೋಮ ಕೈಗೊಳ್ಳುವ ಕ್ರಿಯೆ. ಈ ಹೋಮದಿಂದ ಹೊರಹೊಮ್ಮುವ ಧೂಪ ವಾತಾವರಣವನ್ನು ಶುದ್ಧೀಕರಿಸುವ ಜೊತೆಗೆ, ಸುತ್ತಲಿನ ಗಿಡ-ಮರ, ಬೆಳೆ-ಬಳ್ಳಿಗಳ ಆರೋಗ್ಯ ಕಾಪಾಡಲು ನೆರವಾಗುತ್ತದೆ ಎನ್ನುವುದು ಈ ಹೋಮ ಕೈಗೊಳ್ಳುವ ಸಂಶೋಧಕರ ಅಭಿಪ್ರಾಯ.
ಒಂದು ಕಾಲದಲ್ಲಿ ಈ ಹೋಮ ಕೇವಲ ಧಾರ್ಮಿಕ ಆಚರಣೆಯಾಗಿತ್ತು. ಇತ್ತೀಚಿನ ಹಲವು ಸಂಶೋಧನೆಗಳ ಬಳಿಕ ಇದು ಕೃಷಿ ಕಾರ್ಯಗಳಲ್ಲೂ ಬಳಕೆಯಾಗುತ್ತಿದೆ. ವಿಶೇಷವಾಗಿ ಸಾವಯವ ಕೃಷಿ ಕೈಗೊಳ್ಳುತ್ತಿರುವ ಕೆಲವು ರೈತರು ಅಗ್ನಿಹೋತ್ರ- ಹೋಮಾ ಫಾರ್ಮ್ ಅಳವಡಿಸಿಕೊಳ್ಳುತ್ತಿದ್ದಾರೆ.
ತೀರ್ಥಹಳ್ಳಿಯ ಸಾವಯವ ಕೃಷಿಕ ದಿ. ಪುರುಷೋತ್ತಮ ರಾಯರು 80-90ರ ದಶಕದಲ್ಲಿ ಕರ್ನಾಟಕಕ್ಕೆ ‘ಅಗ್ನಿಹೋತ್ರ’ ಪರಿಚಯಿಸಿದರು. ಬೆಳಗಾವಿಯ ಅಭಯ್ ಮುತಾಲಿಕ್ ದೇಸಾಯಿ ಅವರು ಇವತ್ತಿಗೂ ತಮ್ಮ ಕೃಷಿ ಜಮೀನಿನಲ್ಲಿ ನಿತ್ಯ ಎರಡು ಹೊತ್ತು ‘ಅಗ್ನಿಹೋತ್ರ’ ಕೈಗೊಳ್ಳುತ್ತಿದ್ದಾರೆ. ಆ ಮೂಲಕ ತರಕಾರಿ ಬೆಳೆದು ಬೆಂಗಳೂರಿನಂತಹ ನಗರಗಳಿಗೆ ಹಂಚುತ್ತಿದ್ದಾರೆ.
ಅಗ್ನಿಹೋತ್ರ ಹೋಮದಿಂದ ಹೊರಹೊಮ್ಮುವ ಭಸ್ಮದಿಂದ ನೀರನ್ನು ಪರಿಶುದ್ಧಗೊಳಿಸಬಹುದು ಎಂದು ಟುಸ್ಕೀ ವಿವಿ ಸಂಶೋಧನೆಯೊಂದರಿಂದ ದೃಢಪಡಿಸಿದೆ. ಶಾಂತಿ ವಿಲ್ಲಾ ಸಂಸ್ಥೆ, ಈ ಸಂಶೋಧನೆಯನ್ನು ಪ್ರಯೋಗಕ್ಕೂ ಇಳಿಸಿದೆ.
ಉದಕಮಂಡಲದಲ್ಲಿರುವ ತೋಟಗಾರಿಕಾ ಸಂಶೋಧನಾ ಕೇಂದ್ರ ನಡೆಸಿದ ಪ್ರಾಥಮಿಕ ಅಧ್ಯಯನದಿಂದ ಹೋಮಾ ಫಾರ್ಮ್‌ನಿಂದ ತೋಟದ ಬೆಳೆಗಳಿಗೆ ಬಾಧಿಸಿದ್ದ ರೋಗ ನಿಯಂತ್ರಣಗೊಂಡಿದ್ದು, ಬೆಳೆ ಇಳುವರಿ ಏರಿಕೆಯಾಗಿರುವುದು ದೃಢಪಟ್ಟಿದೆ.
ಹೀಗೆ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಕೃಷಿ ವಲಯದಲ್ಲಿ ನಡೆಯುತ್ತಿರುವ ಹೋಮಾ ಫಾರ್ಮ್, ಅಗ್ನಿಹೋತ್ರ ಪ್ರಕ್ರಿಯೆಗಳ ಪರಿಣಾಮ ಕುರಿತ ವೈಜ್ಞಾನಿಕ ಸಂಶೋಧನೆಗಳ ಚರ್ಚೆಗೆ ಜಿಗಣಿ ಸಮೀಪವಿರುವ ವಿವೇಕಾನಂದ ಅನುಸಂದಾನ ಸಂಸ್ಥಾನದಲ್ಲಿ (ವ್ಯಾಸ) ‘ಯೋಗ, ಗೋವು ಮತ್ತು ಗ್ರಾಮೀಣ ಪುನರ್‌ರಚನೆ’ ಎಂಬ ಅಂತರರಾಷ್ಟ್ರೀಯ ಸಮಾವೇಶವೊಂದು ಸೋಮವಾರ ಆರಂಭವಾಗಿದ್ದು, ಮೂರು ದಿನ ನಡೆಯಲಿದೆ.
ಸಮಾವೇಶದಲ್ಲಿ ಏನೇನಿದೆ ?
ಭಾರತೀಯ ಕೃಷಿಯಲ್ಲಿ ಗೋವಿನ ಮಹತ್ವ ಕುರಿತ ಉಪನ್ಯಾಸ. ಮೂರೂ ದಿನಗಳ ಕಾಲ ‘ಅಗ್ನಿಹೋತ್ರ’ದ ಪ್ರಾತ್ಯಕ್ಷಿಕೆ, ವಿವಿಧ ಯೋಗಾಸನಗಳ ತರಬೇತಿ, ಭಜನೆ, ಗುಂಪು ಚರ್ಚೆ, ಕ್ಷೇತ್ರ ಭೇಟಿ, ಸತ್ಸಂಗ, ಕೃಷಿಯಲ್ಲಿ ಯೋಗ ವೃಕ್ಷಾಯುರ್ವೇದದ ಬಳಕೆ, ಸಾವಯವ ಕೃಷಿ ಮತ್ತು ಆರೋಗ್ಯ, ಗೋವು ಆಧಾರಿತ ಕೃಷಿ ಕುರಿತ ಚರ್ಚೆ ಹಾಗೂ ಮನರಂಜನಾ ಕಾರ್ಯಕ್ರಮಗಳಿವೆ.
ಗೋವು ಆಧಾರಿತ ಸುಸ್ಥಿರ ಕೃಷಿಯಲ್ಲಿ ಪಂಚಗವ್ಯ ಮತ್ತು ಹೋಮಾ ಫಾರ್ಮ್ ಬಳಕೆ, ಆರ್ಥಿಕಾಭಿವೃದ್ಧಿಗೆ ಗೋವು, ಗೋವು ಮತ್ತು ಸಂಸ್ಕೃತಿ, ಗೋವು ಮತ್ತು ತಂತ್ರಜ್ಞಾನ, ಗೋವು ಮತ್ತು ಸಮುದಾಯ ಆಧಾರಿತ ಉದ್ಯೋಗ.. ಹೀಗೆ ಔದ್ಯೋಗಿಕ ದೃಷ್ಟಿಕೋನದಲ್ಲಿ ಚರ್ಚೆಗಳು ನಡೆಯಲಿವೆ. ದೇಶದ ವಿವಿಧ ಭಾಗಗಳಿಂದ ಸ್ವಯಂ ಸೇವಾ ಸಂಸ್ಥೆಗಳು ಭಾಗವಹಿಸಲಿದ್ದು, ಅಗ್ನಿಹೋತ್ರ ಉತ್ಪನ್ನಗಳು, ಅರ್ಕ, ಪಂಚಗವ್ಯ ಸೇರಿದಂತೆ ವಿವಿಧ ವಸ್ತುಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯಿದೆ.ಸಾವಯವ ಆಹಾರ ಕೃಷಿ ಹಾಗೂ ಆಯುರ್ವೇದ ಸಂಬಂಧಿ ಪುಸ್ತಕಗಳು,ಸಿಡಿಗಳು ಪ್ರದರ್ಶನದಲ್ಲಿರುತ್ತವೆ.
ಸ್ಥಳ: ವ್ಯಾಸ (ವಿವೇಕಾನಂದ ಅನುಸಂದಾನ ಸಂಸ್ಥಾನ),ಪ್ರಶಾಂತಿ ಕುಟೀರ, ವಿವೇಕಾನಂದ ಮಾರ್ಗ,ಜಿಗಣಿ. ಮಾಹಿತಿಗೆ: 2263 9955.