ಬಿದಿರು ಬೊಂಬಿನ ಸಂಗೀತ ಸಂಜೆ

ಸೆಪ್ಟೆಂಬರ್ 18, ವಿಶ್ವ ಬಿದಿರು ದಿನ. ಹೀಗೆಂದು ಗೊತ್ತಾಗಿದ್ದು ಡೆಕನ್ ಹೆರಾಲ್ಡ್ ನ ಪನೋರಮಾ ಪುಟದಲ್ಲಿ  ಅಪ್ಪಿಕೋ ಚಳುವಳಿ ನೇತಾರ ಪಾಂಡುರಂಗಹೆಗಡೆಯವರ ಬರೆದ ಲೇಖನ ಓದಿದ ಮೇಲೆ. ಈ ಸಂದರ್ಭದಲ್ಲಿ  ‘ಬಿದಿರಿನ ಗೆಳೆಯ’ ಕೇರಳದ ಉನ್ನಿಕೃಷ್ಣ ಪಕ್ಕನಾರ್ ನನಪಾದರು. ಹತ್ತಾರು ಬಿದಿರು ವಾದ್ಯಗಳ ಮೂಲಕ ಸಂಗೀತ ಸುಧೆ ಹರಿಸುತ್ತಾ ಪರಿಸರ ಸಂರಕ್ಷಣೆಗಾಗಿ ಪಣ ತೊಟ್ಟಿರುವ ಉನ್ನಿಕೃಷ್ಣ ತಂಡದ ಬಗ್ಗೆ ಕೆಲವು ತಿಂಗಳುಗಳ ಹಿಂದೆ ಕರ್ನಾಟಕ ದರ್ಶನದಲ್ಲಿ ಲೇಖನ ಬರೆದಿದ್ದೆ. ಹಾಗೆ ನೆನಪಿಸುವ ಸಲುವಾಗಿ ಇಲ್ಲಿ ಪೋಸ್ಟ್  ಮಾಡಿದ್ದೇನೆ.

ಉನ್ನಿಕೃಷ್ಣ ಸಂಗೀತ ತಂಡ

Our Bamboo,
Our Music,
Our Planet,
Save Bamboo,
Save Athirapilly,
Save Western ghats,

– ಹೀಗೆ ‘ಪ್ರಾರ್ಥಿಸುತ್ತಲೇ’ ಉನ್ನಿಕೃಷ್ಣ ಪಕ್ಕನಾರ ಮತ್ತು ತಂಡದವರು ‘ಬೊಂಬಿನ ಸಂಗೀತ ಸಂಜೆ’ ಆರಂಭಿಸುತ್ತಾರೆ. ಬಿದಿರಿನಿಂದ ತಯಾರಿಸಿದ ಸಂಗೀತ ವಾದ್ಯಗಳನ್ನು ನುಡಿಸುತ್ತಾ ಜನಪದ ಗೀತೆಗಳನ್ನು ಹಾಡುತ್ತಾರೆ. ನೋಡುಗರು ಮತ್ತು ಕೇಳುಗರನ್ನು ಮಂತ್ರಮುಗ್ಧರನ್ನಾಗಿಸುತ್ತಾರೆ.

‘ಸಂಗೀತವೇ ನಮ್ಮ ದೇವರು, ಪರಿಸರ ಸಂರಕ್ಷಣೆಯೇ ನಮ್ಮ ಉಸಿರು. ಬಿದಿರು ಉಳಿಸಿ, ಅಥಿರಪಲ್ಲಿ ರಕ್ಷಿಸಿ, ಪಶ್ಚಿಮ ಘಟ್ಟ ಸಂರಕ್ಷಿಸಿ.. ಎಂದು ಹೇಳುತ್ತಾ ಸಂಗೀತ ಕಾರ್ಯಕ್ರಮಕ್ಕೆ ‘ಮಂಗಳ’ ಹಾಡುತ್ತಾರೆ!

ಮೂಂಗೇತರಂಗ

ಉನ್ನಿಕೃಷ್ಣ ಪಕ್ಕನಾರ್ ಹಾಗೂ ಗೆಳೆಯರು ಕೇರಳದ ತ್ರಿಶ್ಯೂರ್ ಜಿಲ್ಲೆಯವರು. ಚಾಲುಕುಡಿ ನದಿಯ ದಡದ ನಿವಾಸಿಗಳು. ತಮ್ಮ ಊರಿನ ನದಿ  ನೀರು ಬಳಸಿ ವಿದ್ಯುತ್ ತಯಾರಿಸಲು ಕೇರಳ ಸರ್ಕಾರ ಮುಂದಾದಾಗ ಆ ಪ್ರಕ್ರಿಯೆ ವಿರುದ್ಧ ಹೋರಾಟ ನಡೆಸಲು ಉನ್ನಿಕೃಷ್ಣ ಬಿದಿರು ವಾದ್ಯಗಳ ಆರ್ಕೆಸ್ಟ್ರಾ ತಂಡವನ್ನು ಕಟ್ಟಿದರು. ಕಳೆದ ಹತ್ತು ವರ್ಷಗಳಿಂದ ‘ಮೂಲ ಪಾಡುಂ ರಾವು’(ಬಿದಿರು ಸಂಗೀತ ಸಂಜೆ) ತಂಡದೊಂದಿಗೆ ಪರಿಸರ ಸಂರಕ್ಷಣೆಗೆ ಧ್ವನಿಯಾಗಿದ್ದಾರೆ.

‘ಬ್ಯಾಂಬೂ ಮ್ಯೂಸಿಕ್ ತಂಡ’ದಲ್ಲಿ ಹತ್ತು ಮಂದಿ ನುರಿತ ಕಲಾವಿದರಿದ್ದಾರೆ. ಎಂಬತ್ತಕ್ಕೂ ಹೆಚ್ಚು ವೈವಿಧ್ಯಮಯ ಬಿದಿರು ವಾದ್ಯಗಳನ್ನು ಈ ತಂಡದ ಕಲಾವಿದರು ಬಳಸುತ್ತಾರೆ. ಅವನ್ನು ಅವರೇ ತಯಾರಿಸಿದ್ದಾರೆ.  ವಾದ್ಯಗಳಿಗೆ ಧ್ವನಿ ಆಧರಿಸಿ ಹೆಸರಿಟ್ಟಿದ್ದಾರೆ. ‘ಮೊಳದುದ್ದ  ಬಿದಿರಿಗೆ ಒಂದು ರಂಧ್ರ ಮಾಡಿದರೆ ‘ಅಂಬಾ’ ಎಂಬ ಶಬ್ದ ಹೊಮ್ಮುತ್ತದೆ. ಅದಕ್ಕೆ ‘ಅಂಬಾ’ ಎಂದು ಹೆಸರಿಟ್ಟೆವು. ಇದೇ ಬೇಸ್ ವಾಯ್ಸೆ. ಇನ್ನೊಂದಕ್ಕೆ ಮರಿಂಬಾ, ಮತ್ತೊಂದಕ್ಕೆ ಮೂಲಂ ತಡಿ (ರಿದಂ ಪ್ಯಾಡ್), ಮೂಲಂತಟ್ಟು (ರಿದಂ ಪ್ಯಾಡ್‌ನಂತಹ ವಾದ್ಯ), ನ್ಯಾಲಿಕೋರ್,  ಆಂಕ್ಲನ್ – ಸೈಲೋ ಫೋನ್ (ಇಂಡೋನೇಷ್ಯಾದ ವಾದನ), ಮುಂಗೇತರಂಗ್, ಪ್ಯಾನ್ ಪ್ಲೂಟ್(ಮೌತ್ ಆರ್ಗನ್), ಮರುಮೂಳಿ (ಮಳೆ ಹನಿ ಶಬ್ದ ಹೊರಡಿಸುವ ವಾದ್ಯ), ಪಕ್ಕನಾರ್-1 ಮತ್ತು ಪಕ್ಕನಾರ್-2 ಹೀಗೆ ಅವರದೇ ವಿಧಾನಗಳಲ್ಲಿ ವಾದ್ಯಗಳನ್ನು ಅನುಶೋಧಿಸಿದ್ದಾರೆ. ವಿಶೇಷವೆಂದರೆ ಪ್ರತಿ ವಾದ್ಯದ ಅನುಶೋಧನೆಯ ಹಿಂದೆ ಪರಿಸರದ ಲಯವಿದೆ. ತಾಳವಿದೆ. ದನಿಯಿದೆ.
ಸಂಗೀತಕ್ಕೆ ಸ್ಪೂರ್ತಿ ನೀಡಿದ ಬಿದಿರಿನೊಂದಿಗೆ ತನ್ನ ಹಳ್ಳಿಯಲ್ಲಿ ಉನ್ನಿಕೃಷ್ಣ
ಬಿದಿರು ಸಂಗೀತದ ಬೆನ್ನ ಹಿಂದೆ…
ಉನ್ನಿಕೃಷ್ಣ ಅವರದ್ದು ಕಾಡಿನೊಳಗಿನ ಜೀವನ. ಅಲ್ಲಿನ ಪ್ರಾಣಿ, ಪಕ್ಷಿಗಳು, ಗಿಡ-ಮರಗಳೇ ಅವರ ಸ್ನೇಹಿತರು. ದುಂಬಿಗಳ ಝೇಂಕಾರ, ಹಕ್ಕಿಗಳ ಚಿಲಿಪಿಲಿ ಕಲರವ, ಮಳೆ ಹನಿ ತೊಟ್ಟಿಕ್ಕುವ ಸದ್ದು, ಬಾಗುತ್ತಾ, ಬಳುಕುತ್ತಾ, ಧುಮ್ಮಿಕ್ಕುವ ಜಲಪಾತಗಳ ಮಂಜುಳ ನೀನಾದ… ಇವೇ ಮನರಂಜನೆ. ಒಮ್ಮೆ ಉನ್ನಿಕೃಷ್ಣ ಬಿದಿರು ಮೆಳೆಯಲ್ಲಿ  ಅಡ್ಡಾಡುತ್ತಿದ್ದರು. ಆಗ ಗಾಳಿ ಸುಯ್ಯೆಂದು ಬೀಸಿತು. ಗಾಳಿಗೆ ಸುತ್ತಲಿನ ಬಿದಿರು ಮೆಳೆಗಳು ಕಟಿ ಕಟಿ ಕಟಿ ಎಂದು ಶಬ್ದಮಾಡಿದವು. ಮರ, ಗಿಡ, ಬಳ್ಳಿಗಳು ತೊನೆದಾಡಿದವು.  ತೆಳ್ಳೆನೆಯ ಮರವೊಂದು ಬಳುಕುತ್ತ ಕೊರ್ರೊ…. ಎಂದು ಕೂಗಿತು. ಬಂಡೆಯ ಸಂದಿನೊಳಗೆ ಝರಿಯೊಂದು ಬಳುಕುತ್ತ ಜುಳಕ್, ಜುಳಕ್ ಸದ್ದು ಮಾಡಿತು. ಪ್ರಕೃತಿ ಹೊಮ್ಮಿಸುತ್ತಿದ್ದ ಇಂಥ ವೈವಿಧ್ಯಮಯ ನಾದಗಳ ಜೊತೆಗೆ ಉನ್ನಿಕೃಷ್ಣ ಕೊಳಲು ಬಾರಿಸುತ್ತ ಧ್ವನಿಗೂಡಿಸಿದರು. ‘ಪ್ರಕೃತಿಯ ಜೊತೆಗಿನ ಜುಗಲ್ ಬಂದಿಯೇ ಬಿದಿರಿನ ಸಂಗೀತ ಸಾಮ್ರಾಜ್ಯ ಆರಂಭಕ್ಕೆ ಮುನ್ನುಡಿ ಬರೆಯಿತು  ಎನ್ನುತ್ತಾರೆ ಉನ್ನಿಕೃಷ್ಣ.

ಪ್ರಕೃತಿಯಿಂದ ಸಂಗೀತ ಕಲಿತ ಉನ್ನಿಕೃಷ್ಣ ಆರಂಭದಲ್ಲಿ ಕೊಳಲು ನುಡಿಸುವುದನ್ನು ಕಲಿತರು. ಆನಂತರ ಸಮಾನಾಸಕ್ತ ಗೆಳೆಯರು ಜೊತೆಯಾದರು. ಮೊದಲು ಮೌತ್ ಆರ್ಗನ್, ಡ್ರಮ್, ರಿದಂ ಪ್ಯಾಡ್.. ಹೀಗೆ ಒಬ್ಬೊಬ್ಬರು ಒಂದೊಂದು ವಾದ್ಯಗಳನ್ನು ಅನುಶೋಧಿಸಿದರು. ಇದನ್ನು ಅನುಶೋಧನೆ ಎನ್ನುತ್ತಾರೆ. ನನಗೆ ಹಾಗನ್ನಿಸಿಲ್ಲ. ಬಿದಿರು ಸಂಗೀತ ಹಾಡಿತು. ನಾವು ಅದನ್ನು ಹಿಂಬಾಲಿಸಿದೆವು ಎನ್ನುತ್ತಾರೆ ಉನ್ನಿಕೃಷ್ಣ.

ಅಂಗುಲಾಂಗ್

ಉನ್ನಿಕೃಷ್ಣ ಅವರ ಅಪ್ಪ, ಅಜ್ಜ ಬಿದಿರಿನಿಂದ ಆಟಿಕೆ ತಯಾರಿಸಿ ಸ್ಥಳೀಯ ಹಬ್ಬ, ಜಾತ್ರೆ, ಸಂತೆಗಳಲ್ಲಿ ಮಾರಾಟ ಮಾಡುತ್ತಿದ್ದರು. ಒಮ್ಮೆ ಸ್ಥಳೀಯ ಪಂಚಾಯಿತಿಯ ಉತ್ಸವದಲ್ಲಿ ತಮ್ಮ ಮಳಿಗೆ ಮುಂದೆ ನಿಂತ ಗ್ರಾಹಕರು, ಅವುಗಳನ್ನು ನೋಡಿ ಹಾಗೇ ಹೊರಟು ಹೋಗುತ್ತಿದ್ದರು. ಈ ಗ್ರಾಹಕರನ್ನು ಸೆಳೆಯುವ ಮನಸ್ಸಾಯಿತು. ಮಾರನೆ ದಿನ ಮಳಿಗೆಯೊಳಗೆ ಕುಳಿತು ‘ನಾಧಿನ್ ಧಿನ್ನಾ,ನಾಧಿನ್ ಧಿನ್ನಾ’ ಅಂತ ಬಿದಿರಿನ ದಮಡಿ ನುಡಿಸಲು ಆರಂಭಿಸಿದರು. ‘ದಮಡಿ ತಾಳಕ್ಕೆ ಗ್ರಾಹಕರು ಮನ ಸೋತರು. ಮಳಿಗೆ ಎದುರು ಬಂದು ನಿಂತರು. ಬಿದಿರಿನ ಆಟಿಕೆಗಳ ವ್ಯಾಪಾರ ಕುದುರಿತು. ನನ್ನ ಈ ಅವತಾರ ನೋಡಿ ಕೆಲವರು ಹುಚ್ಚ ಎಂದರು ಎಂದು ಹಳೆಯ ನೆನಪುಗಳನ್ನು ಬಿಚ್ಚಿಡುತ್ತಾರೆ ಉನ್ನಿಕೃಷ್ಣ.

ಸಂಗೀತ – ಹೋರಾಟದ ನಂಟು:

ಬಿದಿರು ಸಂಗೀತ ತಂಡ ಆರಂಭವಾಗಿದ್ದು ಹವ್ಯಾಸ ಮತ್ತು ಮನರಂಜನೆಗಾಗಿ. ಕೆಲ ವರ್ಷಗಳ ಹಿಂದೆ ಕೊಟ್ಟನೆಲ್ಲು ಸಮೀಪ ಚಾಲುಕುಡಿ ನದಿ(ಅಥಿರಪಲ್ಲಿ ಜಲಪಾತ) ನೀರು ಬಳಸಿ ವಿದ್ಯುತ್ ತಯಾರಿಸಲು ಸರ್ಕಾರ ತೀರ್ಮಾನಿಸಿತು. ಈ ನದಿ ರಕ್ಷಣೆಗಾಗಿ ಹಲವು ಸಂಸ್ಥೆಗಳು ಹೋರಾಟ ಆರಂಭಿಸಿದವು. ‘ಪ್ರಕೃತಿಯನ್ನೇ ತಾಯಿ ಎಂದು ನಂಬಿರುವ ನಾವು ಆಕೆಯನ್ನು ಉಳಿಸಿಕೊಳ್ಳುವ ಸಲುವಾಗಿ ಪರಿಸರ ಹೋರಾಟಕ್ಕೆ ಕೈಜೋಡಿಸಿದೆವು. ಸಂಗೀತದ ಮೂಲಕ ಹೋರಾಟಕ್ಕೆ ಧ್ವನಿಯಾದೆವು’

‘ಪರಿಸರ ಹೋರಾಟ ಎನ್ನುತ್ತೀರಿ, ಬಿದಿರು ಕಡಿದು ವಾದ್ಯಗಳನ್ನು ಮಾಡಿಕೊಂಡಿದ್ದೀರಲ್ಲ? ಎಂಬ ಪ್ರಶ್ನೆಗೆ  ‘ಬಿದಿರು ಕಡಿದಂತೆ ಬೆಳೆಯುವ ಸಸ್ಯ. ಮಾನವನ ಬದುಕಿನ ಆದಿಯಿಂದ ಅಂತ್ಯದವರೆಗೂ ಬಿದಿರು ಬಳಕೆಯಾಗುತ್ತದೆ ಎಂಬ ವಿವರಣೆ ನೀಡುತ್ತಾರೆ.

ಹತ್ತು ವರ್ಷಗಳಿಂದ ಪರಿಸರ ಹೋರಾಟದಲ್ಲಿ ಸಕ್ರಿಯರಾಗಿರುವ ಬಿದಿರು ಸಂಗೀತ ತಂಡ ದೇಶದ ವಿವಿಧೆಡೆ ಸಂಗೀತ  ಕಾರ್ಯಕ್ರಮ ನೀಡಿದೆ. ಕೇರಳದ ‘ಅಥಿರಪಲ್ಲಿ ಉಳಿಸಿ’ ದಕ್ಷಿಣ ಭಾರತದ ಪಶ್ಚಿಮ ಘಟ್ಟ ಉಳಿಸಿ  ಹೋರಾಟ ಸೇರಿದಂತೆ ಹಲವು ಪರಿಸರ ಚಳವಳಿಗಳಲ್ಲಿ ಅವರು ಭಾಗವಹಿಸಿದ್ದಾರೆ. ಹೋರಾಟದ ಕಾರ್ಯಕ್ರಮಗಳಲ್ಲಿ ಉಚಿತವಾಗಿ ಮತ್ತು ಖಾಸಗಿ ಕಾರ್ಯಕ್ರಮಗಳಲ್ಲಿ ಸಂಭಾವನೆ ಪಡೆಯುವ ಉನ್ನಿಕೃಷ್ಣ ‘ಎರಡು ಹೊತ್ತಿನ ಊಟಕ್ಕೆ ಹಣ ಸಿಕ್ಕರೆ ಸಾಕು. ಸಂಗೀತದಿಂದ  ದುಡ್ಡು ಮಾಡುವ ಅಗತ್ಯ ಇಲ್ಲ’ ಎನ್ನುತ್ತಾರೆ.

ಮೂಲಂ ತುಡಿ

ಉನ್ನಿಕೃಷ್ಣ ನೂರು ಕಲಾವಿದರಿರುವ ಸಂಗೀತ ತಂಡ ಕಟ್ಟಿದ್ದಾರೆ. ಅವರೊಡನೆ ಹತ್ತು ಜನರ ‘ಕೋರ್’ ಟೀಮ್ ಕೂಡ ಇದೆ. ಕಳೆದ ವರ್ಷದಿಂದ  ‘ಇನ್ಸ್ಟಿಟ್ಯೂಟ್ ಆಫ್ ಬ್ಯಾಂಬೂ ಮ್ಯೂಸಿಕ್(ಐಬಿಎಂ) ಎಂಬ ಸಂಗೀತ ಶಾಲೆಯನ್ನೂ ಆರಂಭಿಸಿದ್ದಾರೆ. ಶಾಲೆಯಲ್ಲಿ ಹತ್ತೊಂಬತ್ತು ವಿದ್ಯಾರ್ಥಿಗಳು ಸಂಗೀತ ಅಭ್ಯಾಸ ಮಾಡುತ್ತಿದ್ದಾರೆ.