ತೆಂಗು ಬೆಳೆಗಾರರೇ ಮತ್ತು ಬಳಕೆದಾರರೆ,ತೆಂಗಿನ ಎಣ್ಣೆಯು ಜಗತ್ತಿನ ಶ್ರೇಷ್ಠ ಎಣ್ಣೆ ಎಂಬುದು ಸಾಬೀತಾಗಿದೆ. ತಾಯಿಯ ಎದೆ ಹಾಲಿಗೆ ಸಮಾನವಾದ ಪೋಷಕಾಂಶಗಳಿವೆ. ತೆಂಗಿನೆಣ್ಣೆಯು ದೇಹದಲ್ಲಿ ರೋಗತರುವ ಬ್ಯಾಕ್ಟೀರಿಯಾ ಹಾಗು ವೈರಸ್ಗಳ ವಿರುದ್ದ ಕೆಲಸ ಮಾಡುತ್ತದೆ. ಇದರಿಂದ ಮಾಮೂಲು ಶೀತ, ನೆಗಡಿ, ಜ್ವರ, ಹೆಪಟೈಟಿಸ್, ಅಮೀಬಿಯಾಸಿಸ್, ಹರ್ಷಿಸ್ ಮತ್ತು ಎಚ್ಐವಿ ಮುಂತಾದ ರೋಗಗಳ ವಿರುದ್ದ ನಿರೋಧಕ ಶಕ್ತಿಯನ್ನು ಕೊಡುತ್ತದೆ. ಸಕ್ಕರೆ ಕಾಯಿಲೆ, ಹೃದಯ ರೋಗ, ರಕ್ತದೊತ್ತಡ, ಹೆಚ್ಚು ತೂಕ, ಬೊಜ್ಜುದೇಹ ಇವೆಲ್ಲ ರೋಗಿಗಳು ತಿನ್ನಬಹುದಾದ ಏಕೈಕ ಎಣ್ಣೆ ತೆಂಗಿನೆಣ್ಣೆ. ತೆಂಗಿನೆಣ್ಣೆಯಲ್ಲಿರುವ ಲಾರಿಕ್ ಆಸಿಡ್ ಎಂಬುದು ತಾಯಿಯ ಎದೆಹಾಲನ್ನು ಬಿಟ್ಟರೆ ಇಷ್ಟು ಪ್ರಮಾಣದಲ್ಲಿ (ಶೇ.೫೦) ಸಿಗುವುದು ತೆಂಗಿನೆಣ್ಣೆಯಲ್ಲಿ ಮಾತ್ರ. ಜಗತ್ತಿನಲ್ಲಿಯೇ ತೆಂಗಿನ ಎಣ್ಣೆಯನ್ನು ಹೇರಳವಾಗಿ ಬಳಸುವ ಶ್ರೀಲಂಕಾದಲ್ಲಿ ಹೃದಯಾಘಾತದ ಪ್ರಮಾಣ ಬಹಳ ಕಡಿಮೆ ಇದೆ.
ಆದರೆ, ತೆಂಗಿನೆಣ್ಣೆಯಲ್ಲಿ ಕೊಲೆಸ್ಟರಾಲ್ ಇದೆ (ಸ್ಯಾಚುರೇಟೆಡ್ ಫ್ಯಾಟ್) ಎಂದು ಹೇಳಿ ತೆಂಗಿನ ಎಣ್ಣೆಯನ್ನು ಬಳಸಲು ಜನರು ಭಯಪಡುವಂತಹ ಸನ್ನಿವೇಶ ಬಂದೊದಗಿದೆ. ತೆಂಗಿನೆಣ್ಣೆ ತಿಂದರೆ ಹೃದಯಾಘಾತವಾಗುತ್ತೆ ಎಂದು ಜನರು ದಿಗಿಲು ಬೀಳುವಂತೆ ಮಾಡಿದ್ದಾರೆ. ಆದರೆ ಸತ್ಯ ಏನೆಂದರೆ “ತೆಂಗಿನೆಣ್ಣೆ ತಿನ್ನುವುದರಿಂದ ಹೃದಯ ಸಂಬಂಧಿಕಾಯಿಲೆಗಳು ದೂರವಾಗುತ್ತವೆ” ಎಂಬುದನ್ನು ವೈಜ್ಞಾನಿಕವಾಗಿ ಒಪ್ಪಿಕೊಳ್ಳಲಾಗಿದೆ. ತೆಂಗಿನ ಮೇಲೆ ಅಪವಾದಮಾಡಲು ಕಾರಣ, ಸೋಯಾಬೀನ್ ಎಣ್ಣೆಯನ್ನು ತೃತೀಯ ಜಗತ್ತಿನ ರಾಷ್ಟ್ರಗಳಲ್ಲಿ ಮಾರಾಟ ಮಾಡಲು ಪಾಶ್ಚಿಮಾತ್ಯ ರಾಷ್ಟ್ರಗಳು ಪಿತೂರಿ ನಡೆಸುತ್ತಿವೆ. ಇಲ್ಲಿನ ಎಣ್ಣೆಯನ್ನು ಬಳಸದಂತೆ ಮಾಡಿ ತಮ್ಮ ಎಣ್ಣೆಗಳನ್ನು ಮಾರಿಕೊಳ್ಳುತ್ತಿದ್ದಾರೆ.
ತೆಂಗಿನೆಣ್ಣೆಯನ್ನು ಕಾಯಿಯ ರೂಪದಲ್ಲಿ ತುಮಕೂರು ಸೀಮೆ ಜನ ಹೇರಳವಾಗಿ ಬಳಸುತ್ತಿದ್ದೇವೆ. ಕರಾವಳಿಯ ಜನರಂತೂ ಕೊಬ್ಬರಿಎಣ್ಣೆ ಇಲ್ಲದೆ ಏನನ್ನೂ ಮಾಡುವುದಿಲ್ಲ. ಸಾವಿರಾರು ವರ್ಷಗಳಿಂದ ನಮ್ಮ ಜನ ತೆಂಗನ್ನು ತಿನ್ನುತ್ತಾ ಬದುಕಿದ್ದಾರೆ. ತೆಂಗು ನಮ್ಮ ಜನರ ಆಹಾರ ಸಂಸ್ಕೃತಿಯ ಭಾಗವಾಗಿದೆ. ಆಯುರ್ವೇದವೂ ತೆಂಗಿನೆಣ್ಣೆಯನ್ನು ಸಾಕಷ್ಟುಕಾಯಿಲೆಗಳಿಗೆ ಔಷಧಿಯಾಗಿ ಬಳಸಲು ಹೇಳುತ್ತದೆ.
ಆದರೆ ಇದರ ಬಗ್ಗೆ ಮಾತನಾಡಬೇಕಾದ ಜವಾಬ್ದಾರಿಯಿರುವ ಬಹುಪಾಲು ವೈದ್ಯರು, ವಿಜ್ಞಾನಿಗಳು, ಇಲಾಖೆಗಳು, ಮಂಡಳಿಗಳು ಬಾಯಿ ಮುಚ್ಚಿ ಕುಳಿತಿದ್ದಾರೆ. ಇದೇ ಕಾರಣದಿಂದ ತೆಂಗಿನ ಉತ್ಪನ್ನಗಳ ಬೆಲೆಯೂ ಕುಸಿದಿದೆ. ಸ್ಥಳೀಯ ಬಳಕೆಯೂ ಕಡಿಮೆಯಾಗಿದೆ. ತೆಂಗು ಬಳಕೆದಾರರೇ ಎದ್ದೇಳಿ, ತೆಂಗಿನ ಶ್ರೇಷ್ಠತೆಯನ್ನು ಜಗತ್ತಿಗೆ ಸಾರೋಣ.
ಸೆಪ್ಟಂಬರ್ ೨ ವಿಶ್ವ ತೆಂಗು ದಿನ. ಅಂದು ನಾವೆಲ್ಲರೂ ತೆಂಗು ಪ್ರಸಿದ್ದ ಚಿಕ್ಕನಾಯಕನಹಳ್ಳಿಯಿಂದ ತಿಪಟೂರಿನಿಂದ ಮತ್ತು ತುರುವೆಕೆರೆಯಿಂದ ತುಮಕೂರಿನವರೆಗೂ ಸೈಕಲ್ ತುಳಿಯುತ್ತ ಜಾಥಾ ಹೋಗಲು ತೀರ್ಮಾನಿಸಿದ್ದೇವೆ. ಆ ಮೂಲಕ ತೆಂಗು ಜಗತ್ತಿನ ಶ್ರೇಷ್ಠ ಎಣ್ಣೆಯೆಂದು ಎಲ್ಲರಿಗೂ ಹೇಳೋಣ. ತೆಂಗಿನ ಶ್ರೇಷ್ಠತೆಯನ್ನು ಸಾರುವ ಸೈಕಲ್ ಜಾಥಾದಲ್ಲಿ ನೀವು ಭಾಗವಹಿಸಿರಿ. ಭಾಗವಹಿಸುವ ಆಸಕ್ತರು ಹೆಚ್ಚಿನ ಮಾಹಿತಿಗೆ ಕೆಳಗಿನ ದೂರವಾಣಿಗಳಿಗೆ ಸಂಪರ್ಕಿಸಿ ನಿಮ್ಮ ಹೆಸರನ್ನು ನೊಂದಾಯಿಸಿಕೊಳ್ಳಿ. ನೆನಪಿರಲಿ, ನಿಮ್ಮ ಭಾಗವಹಿಸುವಿಕೆಯು ಜಗತ್ತಿಗೆ ಮುಖ್ಯ ಸಂದೇಶವೊಂದನ್ನು ಕೂಗಿ ಹೇಳಲಿದೆ.
ಅಲ್ಲದೆ ಇದೇ ದಿನ ಸಂಜೆ ನಾಲ್ಕುಗಂಟೆ ತೆಂಗು ಬೆಳೆಗಾರರೆಲ್ಲ ತುಮಕೂರಿನಲ್ಲಿ ಒಂದೆಡೆ ಸೇರಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮದ ಮೂಲಕ ತೆಂಗು ಜಗತ್ತಿನ ಶ್ರೇಷ್ಠ ಎಣ್ಣೆ ಎಂದು ಹೇಳಲು ರೈತರೆಲ್ಲಾ ಸೇರುತ್ತಿದ್ದಾರೆ. ತೆಂಗು ತಜ್ಞರು ಆರೋಗ್ಯದ ಬಗ್ಗೆ ಮಾತನಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತೆಂಗು ಬೆಳೆಗಾರರ ಏಕತೆಯನ್ನು ಪ್ರದರ್ಶಿಸೋಣ. ನೀವು ಬನ್ನಿ.
ಜಾಥಾದ ಸಂಚಾಲಕರು: ಅಣೇಕಟ್ಟೆ ವಿಶ್ವನಾಥ್ ೮೦೯೫೨೨೨೭೨೮, ರಘುರಾಂ ಎಸ್. ೯೯೬೪೨೦೦೮೪೦ ಮತ್ತು ವಿನೋದ್ ೯೪೪೮೩೫೭೫೩೬
ಹೃದಯದ ಆರೋಗ್ಯಕ್ಕೆ ತೆಂಗು ಬಳಸಿ