ತಾರಸಿ ಅಂಗಳದಲ್ಲಿ ಸುಂದರ ಕೈತೋಟ

ನಿನ್ನೆಯಷ್ಟೇ ವಿಶ್ವ ಕೈತೋಟ ದಿನ ಆಚರಿಸಿದ್ದೇವೆ. ಕೈತೋಟಕ್ಕೆ ವಿಶಾಲವಾದ ಭೂಮಿಯೇ ಇರಬೇಕೆಂದಿಲ್ಲ. ಬೆಂಗಳೂರಿನಂಥ ನಗರದಲ್ಲಿ ಮನೆ ತಾರಸಿಯ ಮೇಲೂ ಸಸಿಗಳನ್ನು ನೆಟ್ಟು ತರಕಾರಿ ಬೆಳೆದು ಬಳಸಲು ಸಾಧ್ಯ. ಅದು ಹೇಗೆ ಎಂದಿರಾ? ‘ತಾರಸಿ ತೋಟ’ದ ಕಿರು ಮಾಹಿತಿ ಇಲ್ಲಿದೆ.

ಹಸಿರು ಕಳೆದುಕೊಂಡು ಬೋಳಾಗುತ್ತಿರುವ ಬೆಂಗಳೂರಿನ ಮುಂಜಾವು ದಿನದಿಂದ ದಿನಕ್ಕೆ ಬೋರು ಬೇಜಾರು. ರಸ್ತೆ ವಿಸ್ತರಣೆ- ಮೆಟ್ರೋ ನೆಪದಲ್ಲಿ ಬೀದಿಬದಿಯ ಮರಗಳು ನೆಲಕಚ್ಚುತ್ತಿವೆ. ಹಸಿರು ಪರಿಸರ ಎನ್ನುವುದು ಲಾಲ್‌ಬಾಗ್- ಕಬ್ಬನ್‌ಪಾರ್ಕ್‌ಗೇ ಸೀಮಿತವಾಗಿದೆ. ಬಾಡಿಗೆ ಮನೆಯಲ್ಲಿರುವ ನಾವು ಇದನ್ನೆಲ್ಲಾ ನೋಡುತ್ತಾ ಹಪಹಪಿಸುವುದು ಬಿಟ್ಟು ಇನ್ನೇನು ಮಾಡೋದು ಸ್ವಾಮಿ ಎಂದಿರಾ… ಯಾಕ್ರೀ ಅಷ್ಟು ಬೇಜಾರು. ನಿಮ್ಮ ಮನೇಲೇ ಒಂದು ಲಾಲ್‌ಬಾಗ್ ಮಾಡ್ರೀ. ಹೇಗೆ ಅಂತ ಹೇಳ್ಕೊಡದಕೆ ವಿಶ್ವನಾಥ್, ಅನಸೂಯ ಅವರಂಥ ಸಹೃದಯರಿದ್ದಾರೆ. ನಿಮ್ಮ ಸಮಯ ನಮಗೆ ಕೊಡಿ. ನಿಮ್ಮ ಮನೆಗೆ- ಬೆಂಗಳೂರಿಗೆ ಹಸಿರು ತುಂಬುವ ಮಾಹಿತಿ ನಾವು ಕೊಡುತ್ತೇವೆ ಎನ್ನುತ್ತಾರೆ.

ತಾರಸಿ ತೋಟ

ಪಾಟ್‌ಗಳಲ್ಲಿ ಗಿಡ ನೆಡುವುದು ಹಳೇ ಸ್ಟೈಲ್. ಅದರ ಜತೆಗೆ ಸವೆದು ವೇಸ್ಟ್ ಆದ ಟೈರ್, ಥರ್ಮೊಕೋಲ್ ಪೆಟ್ಟಿಗೆ, ಸಿಮೆಂಟ್ ಚೀಲ, ಒಡೆದ ಬಕೆಟ್ ಇತ್ಯಾದಿಗಳಲ್ಲಿ ಗಿಡ ನೆಡುವುದು ಇಂದಿನ ವಿದ್ಯಮಾನ. ಇದಿಷ್ಟೇ ಅಲ್ಲ; ಗಿಡಗಳ ಬೇರುಗಳಿಗೆ ರಕ್ಷಣೆ ನೀಡುವ, ಪೋಷಕಾಂಶ ಪೂರೈಕೆಗೆ ಸಹಾಯವಾಗುವ ಯಾವುದೇ ಪರಿಕರಗಳಲ್ಲೂ ಗಿಡ ನೆಟ್ಟು ನೀವೂ ಅನ್ನದಾತರಾಗಬಹುದು. ಆದರೆ ಗಿಡ ಬೆಳೆಸುವ ಪರಿಕರದ ತಳಭಾಗದಲ್ಲಿ ರಂಧ್ರ ಮಾಡುವುದನ್ನು ಮಾತ್ರ ಮರೆಯದಿರಿ.

ತಾರಸಿ ತೋಟ ಮಾಡುವವರು ‘ವಾಟರ್ ಪ್ರೂಫ್’ ಸಿಮೆಂಟ್ ಮಾಡಿಸಿರಲೇ ಬೇಕು. ಇಲ್ಲದಿದ್ದರೆ ಗಿಡಗಳಿಗೆ ಹನಿಸಿದ ನೀರು ಮನೆಯೊಳಗೆ ಇಳಿದು ನೀವು ಡಾಕ್ಟರ್ ಫಿಕ್ಸಿಟ್ ಜಾಹೀರಾತಿಗೆ ಮಾಡೆಲ್‌ಗಳಾಗುತ್ತೀರಿ ಎಚ್ಚರಿಕೆ! ತಾರಸಿಯಲ್ಲಿ ನೀರಿನ ಟ್ಯಾಂಕ್ ಇದ್ದರೆ ಅದರ ನೆರಳಿನಲ್ಲಿ ಗಿಡಗಳಿಗೆ ಬೇಕಾದ ಪುಟ್ಟ ಗೊಬ್ಬರ ಘಟಕ ಸ್ಥಾಪಿಸಬಹುದು. ಗಿಡಗಳ ಎಲೆ, ಅಡುಗೆ ಮನೆ ತ್ಯಾಜ್ಯ, ಕೊಳೆಯುವ ಯಾವುದೇ ವಸ್ತುವನ್ನು ಇದರಲ್ಲಿ ತುಂಬಿಸಿಟ್ಟರೆ 45 ದಿನಗಳಲ್ಲಿ ತೋಟಕ್ಕೆ ಬೇಕಾದ ಗೊಬ್ಬರ ಸಿದ್ಧ. ಇದೇ ಗೊಬ್ಬರಕ್ಕೆ ಎರೆಹುಳು ಬಿಟ್ಟರೆ ಉತ್ಕೃಷ್ಟ ಕಾಂಪೋಸ್ಟ್ ತಯಾರಿ. ತಾರಸಿಯಲ್ಲಿ ಬಿದ್ದ ಮಳೆ ನೀರು ಒಂದೆಡೆ ಶೇಖರವಾಗಲು ತೊಟ್ಟಿ ನಿರ್ಮಿಸಿ.

ಮಳೆ ನೀರಿನಿಂದ ಕನಿಷ್ಠ ಐದಾರು ತಿಂಗಳು ಗಿಡಗಳನ್ನು ಪೋಷಿಸಬಹುದು. ತಾರಸಿ ಸುತ್ತಲಿನ ಪ್ಯಾರಾಪೆಟ್ ಗೋಡೆಗೆ ಕಬ್ಬಿಣದ ಪಟ್ಟಿ ಹೊಡೆಯಿರಿ. ಎದುರಿನ ಗೋಡೆಗಳಿಗೆ ‘ಟಿ’ ಆಕಾರದ ಕಬ್ಬಿಣ ಜೋಡಿಸಿ. ಅವುಗಳಿಗೆ ನಾಲ್ಕೈದು ಸಾಲು ತಂತಿ ಕಟ್ಟಿ. ಬಳ್ಳಿ ಗಿಡಗಳನ್ನು ಕುಂಡದಲ್ಲಿ ಬೆಳೆಸಿ, ತಂತಿಗಳ ಆಧಾರ ಕೊಡಿ. ಬಳ್ಳಿಗಳು ಸೊಂಪಾಗಿ ಹರಡಿ ಬೇರೆ ಗಿಡಗಳಿಗೆ ಚಪ್ಪರವಾಗಿ ನೆರಳು ನೀಡುತ್ತವೆ. ನೆರಳಲ್ಲೇ ಅರಳುವ ಗಿಡಗಳನ್ನು ಇಲ್ಲಿ ಬೆಳೆಸಬಹುದು. ನರ್ಸರಿ ಮಾಡಬಹುದು. ಗಿಡಗಳೇ ಇಲ್ಲದ ಕಾಲದಲ್ಲಿ ಬಟ್ಟೆ ಒಣಗಿಸಲು ಈ ತಂತಿ ಅನುಕೂಲವಾಗುತ್ತದೆ!

‘ತಾರಸಿ ಸುತ್ತ ಕಡಪ ಕಲ್ಲಿನಿಂದಲೋ, ಸಿಮೆಂಟ್ ಸ್ಲಾಬ್‌ಗಳಿಂದಲೂ ಒಂದು ಕುಂಡವಿಡುವಷ್ಟು ವಿಸ್ತೀರ್ಣದ ಕಟ್ಟೆಗಳನ್ನು ನಿರ್ಮಿಸಿ. ಇದರಿಂದ ಗಿಡ ನಿರ್ವಹಣೆಗೆ ಸುಲಭವಾಗುತ್ತದೆ’ ಎನ್ನುವುದು ತಾರಸಿ ಕೃಷಿ ಪರಿಣತೆ ಅನಸೂಯಾ ಶರ್ಮಾ ಅವರ ಅಭಿಪ್ರಾಯ. ಇವರು ಸುಮಾರು 400ಕ್ಕೂ ಹೆಚ್ಚು ಕುಂಡಗಳನ್ನಿಟ್ಟು ಗಿಡಗಳನ್ನು ಬೆಳೆಸಿದ್ದಾರೆ. ಗಿಡ ಬೆಳೆಸುವ ಬಗೆ ಒಂದು ಭಾಗ ಮಣ್ಣು, ಒಂದು ಭಾಗ ಮರಳು, ಒಂದೂವರೆ ಭಾಗ ಗೊಬ್ಬರದ ಮಿಶ್ರಣವನ್ನು ಕುಂಡ ಅಥವಾ ನಿಗದಿತ ಪರಿಕರದಲ್ಲಿ ತುಂಬಿ. ಕುಂಡದ ಕೆಳಭಾಗದಲ್ಲಿನ ಡ್ರೈನೇಜ್ ರಂಧ್ರವನ್ನು ದಪ್ಪಮರಳು ಮತ್ತು ಇಟ್ಟಿಗೆಗಳಿಂದ ಪ್ಯಾಕ್ ಮಾಡಿ. ಗಿಡ ನೆಡುವಾಗ ಕುಂಡದಲ್ಲಿ ಒಂದೂವರೆಯಿಂದ ಎರಡು ಇಂಚು ಬಿಟ್ಟು ಮಣ್ಣು ತುಂಬಿ. ಹೀಗಿದ್ದಾಗ ಕ್ಷಣಕಾಲ ನೀರು ನಿಂತು ನಿಧಾನವಾಗಿ ಆಳಕ್ಕೆ ಇಳಿಯಲು ಸಹಕಾರಿಯಾಗುತ್ತದೆ.

ಯಾವ ಸಸ್ಯ ಬೆಳೆಯಬಹುದು?

ಥರ್ಮೋಕೋಲ್ ನಲ್ಲಿ ಸೊಪ್ಪು ತರಕಾರಿ

ಕೇರಳದ ಒಂದು ಪಟ್ಟಣವೊಂದರ ತಾರಸಿ ಮೇಲೆ ಪಪ್ಪಾಯ, ಬಾಳೆ, ದಾಳಿಂಬೆಯಂತಹ ಮರಗಳನ್ನೇ ಬೆಳೆದಿದ್ದಾರೆ. ಕೈತೋಟ ಮಾಡುವ ಮನಸ್ಸಿದ್ದರೆ ಎಂಥ ಗಿಡ ಬೇಕಾದರೂ ಬೆಳೆಸಬಹುದು. ಆದರೆ, ಬೆಳೆಯುವ ಗಿಡದ ಗಾತ್ರವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಶರ್ಮಾ ಅವರ ಅನುಭವದಂತೆ ‘ಪುದೀನಾದಂತಹ ಹರಡಿಕೊಳ್ಳುವ ಗಿಡಗಳನ್ನು ಹಳೇ ಟೈರುಗಳಲ್ಲಿ ಬೆಳೆಸಬಹುದು. ಬುಟ್ಟಿಗಳಲ್ಲಿ ಮೆಂತ್ಯೆ, ಅಗಲವಾದ ಥರ್ಮೋಕೋಲ್‌ನಲ್ಲಿ ಕೊತ್ತಂಬರಿ, ಹರಿವೆಯಂತ ಸೊಪ್ಪುಗಳನ್ನು ಬೆಳೆಸಬಹುದು. ಗೆಡ್ಡೆ ಗೆಣಸುಗಳಿಗೆ ಸ್ವಲ್ಪ ಆಳವಾದ ಕುಂಡಗಳ ಅಗತ್ಯವಿದೆ. ತಾರಸಿ ಕೃಷಿ ಹೆಚ್ಚಿನ ಮಾಹಿತಿಗೆ: ಅನಸೂಯಾ ಶರ್ಮಾ ಅವರನ್ನು (2341 5664) ಸಂಪರ್ಕಿಸಬಹುದು.

ವಿಶ್ವ ಕೈತೋಟ ದಿನಕ್ಕೊಂದು ಹಿನ್ನಲೆ

ಅಮೆರಿಕದ ‘ಕಿಚನ್ ಗಾರ್ಡನ್ ಇಂಟರ್ ನ್ಯಾಷನಲ್’ (ಕೆಜಿಐ) ಎಂಬ ಸ್ವಯಂ ಸೇವಾ ಸಂಸ್ಥೆ ವಿಶ್ವ ಕೈತೋಟ ದಿನಾಚರಣೆಯನ್ನು ಆರಂಭಿಸಿತು.  ರಾಸಾಯನಿಕ ಮುಕ್ತ ಆಹಾರ ಕುರಿತು ಅರಿವು ಮೂಡಿಸಲು ಕನಿಷ್ಠ ಒಂದು ದಿನವನ್ನಾದರೂ ಮೀಸಲಿಡಲು ಈ ಸಂಸ್ಥೆ ನಿರ್ಧರಿಸಿತು. ಅದಕ್ಕಾಗಿ ಆಗಸ್ಟ್ ತಿಂಗಳಿನ ಕೊನೆ ವಾರ ಆಯ್ಕೆ ಮಾಡಿತು. ಈ ಆಚರಣೆಯಲ್ಲಿ ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿರುವ ಕೈತೋಟ ಆಸಕ್ತರು ಒಂದೆಡೆ ಸೇರಿ, ಸುರಕ್ಷಿತ ಆಹಾರದ ಬಗ್ಗೆ ಚರ್ಚಿಸುತ್ತ ಬಂದಿದ್ದಾರೆ.
ಕೆಜಿಐಗೆ 45ಕ್ಕೂ ಹೆಚ್ಚು ದೇಶಗಳಲ್ಲಿ ಸದಸ್ಯರಿದ್ದಾರೆ. ‘ಮನೆ ಸನಿಹದಲ್ಲಿ ನಮ್ಮ ನಿಗಾದಲ್ಲಿ ಬೆಳೆದ ಆಹಾರಕ್ಕಿಂತ ಸುರಕ್ಷಿತವಾದದ್ದು ಯಾವುದೂ ಇಲ್ಲ.  ಹಾಗಾಗಿ ನಮ್ಮ ಆರೋಗ್ಯದ ಗುಟ್ಟು ನಮ್ಮಲ್ಲೇ ಇದೆ ಎಂಬುದನ್ನು ಜನರಲ್ಲಿ ಮನದಟ್ಟು ಮಾಡಿಸುವುದೇ ವಿಶ್ವ ಕೈತೋಟ ದಿನದ ಉದ್ದೇಶ’ ಎನ್ನುತ್ತಾರೆ ಕೆಜಿಐ ಸ್ಥಾಪಕ ರೋಜರ್ ಡಾಯಿರಾನ್.