ಪತ್ರೆ-ಪುಷ್ಪದಲ್ಲಿ ಆರೋಗ್ಯದ ಗುಟ್ಟು

ಕದಂಬ ವನವಾಸಿನಿ ವರಮಹಾಲಕ್ಷ್ಮಿ ಪೂಜೆಗೆ ಹಲವು ಪುಷ್ಪ-ಪತ್ರೆಗಳನ್ನು ಬಳಸುವ ಸಂಪ್ರದಾಯವಿದೆ. ಆದರೆ ಅವುಗಳ ಬಳಕೆಯ ಹಿಂದಿರುವ ಮಹತ್ವ, ವಿಶೇಷ, ಪ್ರಯೋಜನ ಏನು? ಇಲ್ಲಿದೆ ಮಾಹಿತಿ

ಗಿಡದಿ ನಗುತಿರುವ ಹೂವು ಪ್ರಕೃತಿ ಸಖನಿಗೆ ಚಂದ
ಮಡದಿ ಮುಡಿದಿರುವ ಹೂವು ಯುವಕಂಗೆ ಚಂದ
ಗುಡಿಯೊಳಗೆ ಕೊಡುವ ಹೂವು ದೈವಭಕ್ತಗೆ ಚಂದ
ಬಿಡಿಗಾಸು ಹೂವೊಳಗೆ – ಮಂಕುತಿಮ್ಮ

ಕಮಲದ ಹೂವು

ನಾಳೆ ವರಮಹಾಲಕ್ಷ್ಮಿ ವ್ರತ. ಗಾಂಧಿಬಜಾರು, ಮಲ್ಲೇಶ್ವರಂ ಮಾರ್ಕೆಟ್, ಜಯನಗರ ಕಾಂಪ್ಲೆಕ್ಸ್, ಬನಶಂಕರಿ ಸಂತೆಯಲ್ಲೆಲ್ಲಾ ಜನವೋ ಜನ. ಎಲ್ಲರ ಕೈಯಲ್ಲೂ ಒಂದೊಂದು ಬುಟ್ಟಿ. ಬುಟ್ಟಿ ತುಂಬಾ ತರಹೇವಾರಿ ಹೂವುಗಳು.. ಪತ್ರೆಗಳು.. ಪುಷ್ಪ ಮಾಲಿಕೆಗಳು.. ಹಣ್ಣು.. ಹಂಪಲು.. ಊದು ಬತ್ತಿ, ಕರ್ಪೂರ.. ಇತ್ಯಾದಿ.. ಇತ್ಯಾದಿ..
ನಿಜ, ವರಮಹಾಲಕ್ಷ್ಮಿ ಕೇವಲ ಹಬ್ಬ ಅಷ್ಟೇ ಅಲ್ಲ. ಅದೊಂದು ವ್ರತ. ‘ಕಮಲದ ದೇವತೆ’ ಲಕ್ಷ್ಮಿದೇವಿಯನ್ನು ಅಷ್ಟ ಪುಷ್ಪಗಳಿಂದ ಅಲಂಕರಿಸಿ, ಆರು ಪತ್ರೆಗಳಿಂದ ಪೂಜಿಸಿ, ಆರಾಧಿಸುತ್ತಾರೆ. ‘ಅರ್ಚಕ ಸಂಹಿತೆ’ ಪ್ರಕಾರ ಈ ವ್ರತವನ್ನು ಸುಗಂಧ ಹಾಗೂ ಕುಸುಮವಿರುವ ಪತ್ರ-ಪುಷ್ಪಗಳಿಂದಲೇ ಪೂಜಿಸಬೇಕು!

‘ಹೌದು, ಈ ದೇವರುಗಳೆಲ್ಲ ಎಕೆ, ಇಂಥದ್ದೇ ಪುಷ್ಪ, ಪತ್ರೆ ಪೂಜೆ ಮಾಡು ಅಂತ ಕೇಳುತ್ತವೆ?’. ಇದು ವರಮಹಾಲಕ್ಷ್ಮಿ ಮುಂದೆ ಪೂಜೆಗೆ ಕುಳಿತ ‘ಯುವ ಪೀಳಿಗೆಯ’ ಪ್ರಶ್ನೆ. ಅಷ್ಟು ಮಾತ್ರವಲ್ಲ, ಅನೇಕ ವಿಚಾರವಾದಿಗಳ ಪ್ರಶ್ನೆಯೂ ಹೌದು.  ಆದರೆ ಈ ಪ್ರಶ್ನೆಗೆ ಅಷ್ಟು ಸುಲಭವಾಗಿ ಉತ್ತರ ಲಭ್ಯವಿಲ್ಲ. ಏಕೆ ಗೊತ್ತಾ? ಈ ಪ್ರಶ್ನೆಯ ಹಿಂದೆ ವಿಜ್ಞಾನ ಮತ್ತು ಆರೋಗ್ಯ ಶಾಸ್ತ್ರವೇ ಅಡಗಿದೆ. ಆ ಪ್ರಕಾರ ಪೂಜೆಗೆ ಬಳಸುವ ಹೂವು-ಪತ್ರೆಗಳೆಲ್ಲ ದೇವರ ಪೂಜೆಗಾದರೆ, ಅವುಗಳಿಂದ ಹೊರ ಹೊಮ್ಮುವ ಔಷಧಯುಕ್ತ ಪರಿಮಳ ಪೂಜಿಸುವ ಭಕ್ತರಿಗಾಗುತ್ತದೆ! ಇದು ಅಚ್ಚರಿಯಾದರೂ ಸತ್ಯ.

ಪೂಜೆ-ಪುಷ್ಪ- ಆರ್ಯುವೇದ

ವರಮಹಾಲಕ್ಷ್ಮಿ ವ್ರತಕ್ಕಾಗಿ ಮಂತ್ರಪುಷ್ಪಕ್ಕೊಂದರಂತೆ ಜಾಜಿ, ಅಡಿಕೆ ಹೂವು (ಪೂಗ ಪುಷ್ಪ-ಹೊಂಬಾಳೆ), ಪುನ್ನಾಗ (ಸುರಹೊನ್ನೆ), ಬಕುಳ (ವಕುಲ ಪುಷ್ಪ), ಮಲ್ಲಿಗೆ (ಮಲ್ಲಿಕಾ ಪುಷ್ಪ), ಸೇವಂತಿ, ತಾರೆ (ಕಮಲ), ನೀಲಿ ಕಮಲ ಎಂಬ ಎಂಟು ವಿಧದ ಪುಷ್ಪಗಳನ್ನು ಬಳಸುತ್ತಾರೆ. ಧವನ (ಮಾಚಿ ಪತ್ರೆ), ತುಳಸಿ, ಬಿಲ್ವ, ಮರುಗ (ಮರುವಕ), ಸೇವಂತಿ ಪತ್ರೆ, ವಿಷ್ಣು ಕ್ರಾಂತಿ ಎಂಬ ಆರು ಪತ್ರೆಗಳನ್ನೂ ಉಪಯೋಗಿಸುತ್ತಾರೆ.

ಸೇವಂತಿಯೇ.. ಸೇವಂತಿಯೇ...

ಒಂದು ವಿಶೇಷ ಎಂದರೆ, ಪ್ರತಿ ಹಬ್ಬ ಅಥವಾ ವ್ರತಗಳಲ್ಲಿ ಕಾಲಕ್ಕೆ ಅನುಗುಣವಾಗಿ ಹೊಂದಿಕೊಳ್ಳುವ ಅಥವಾ ಆಯಾ ಕಾಲದಲ್ಲಿ ಉದ್ಭವಿಸುವ ರೋಗಗಳಿಗೆ ಔಷಧವಾಗುವಂತಹ ಪುಷ್ಪ-ಪತ್ರಗಳನ್ನು ಬಳಸುತ್ತಾರೆ. ‘ಮಳೆಗಾಲದಲ್ಲಿ ಬರುವ ವರಮಹಾಲಕ್ಷ್ಮಿ ವ್ರತದಲ್ಲಿ ಬಳಸುವ ಈ ಪುಷ್ಪ ಮತ್ತು ಪತ್ರೆಗಳು ಶೀತ, ಜ್ವರಕ್ಕೆ ಔಷಧಿಯಾಗುತ್ತವೆ ಎನ್ನುತ್ತಾರೆ’ ಡಾ.ವಸುಂಧರಾಭೂಪತಿ.

ಹೂವು-ಪತ್ರೆಗಳಲ್ಲಿ ಔಷಧ

ಪ್ರಕೃತಿ ಚಿಕಿತ್ಸಕರ ಪ್ರಕಾರ ಜಾಜಿ ಹೂವಿನ ಪರಿಮಳದಲ್ಲಿ ಉದ್ರೇಕ ನಿಯಂತ್ರಿಸುವ ಚಿಕಿತ್ಸಕ ಗುಣವಿದೆ. ಮಾತ್ರವಲ್ಲ, ದೀರ್ಘಕಾಲದ ಜ್ವರದಿಂದ ಬಳಲುತ್ತಿರುವವರಿಗೆ ಜಾಜಿ ಬೇರಿನ ಕಷಾಯವನ್ನು ಕುಡಿಸುತ್ತಾರೆ. ಸುಟ್ಟ ಗಾಯಗಳಿಗೆ ಜಾಜಿ ಹೂವು ಅಥವಾ ಎಲೆಯಿಂದ ತಯಾರಿಸಿದ ತುಪ್ಪವನ್ನು ಲೇಪಿಸುತ್ತಾರೆ. ಅಡಿಕೆಯ ಹೊಂಬಾಳೆ ಮನೆಯ ಕಳಶದ ಸಂಕೇತ. ಇವುಗಳ ಕೇಸರಗಳನ್ನು ‘ಸ್ಥಿರ ಚೈತನ್ಯ’ದ ಸಂಕೇತ ಎನ್ನುತ್ತಾರೆ. ಅಡಿಕೆ ಮರದ ಹೂವು, ಬೇರು, ಎಲೆ, ಹಣ್ಣು ಎಲ್ಲವೂ ಔಷಧವಾಗುತ್ತದೆ. ಇವುಗಳನ್ನು ದೇಹ ತಂಪುಗೊಳಿಸಲು, ಸಂದು ನೋವು ನಿವಾರಣೆಗೆ, ನರ ಮತ್ತು ಮೂತ್ರ ಸಂಬಂಧಿ ಕಾಯಿಲೆ ಗುಣಪಡಿಸಲು ಬಳಸುತ್ತಾರೆ.

ಪುನ್ನಾಗ ಪುಷ್ಪದ ತೊಗಟೆ, ಅಂಟು, ತಿರುಳು ಔಷಧವಾಗಿ ಬಳಕೆಯಾಗುತ್ತವೆ. ಈ ಹೂವಿನ ಗಿಡದಲ್ಲಿ ರಾಳ ಮತ್ತು ಟ್ಯಾನಿನ್ ಎಂಬ ರಾಸಾಯನಿಕಗಳಿವೆ. ಸಂಧಿವಾತಕ್ಕೆ ಹೂವಿನ ಎಣ್ಣೆ ಬಳಸುತ್ತಾರೆ. ತುರಿಕಜ್ಜಿ ಮತ್ತು ತಲೆಯಲ್ಲಿನ ಹುಣ್ಣುಗಳಿಗೆ ಈ ಎಣ್ಣೆ ದಿವ್ಯೌಷಧ.

ಬಕುಲ ಅಥವಾ ಪಗಡೆಯಲ್ಲಿ ಹೂವು, ಹಣ್ಣು, ತೊಗಡೆ ಮತ್ತು ಬೀಜದ ತೈಲ ಔಷಧವಾಗುತ್ತದೆ. ತಲೆನೋವಿಗೆ ಹೂವಿನ ಪುಡಿ ಮದ್ದು. ಮಲಬದ್ಧತೆಗೆ ಬೀಜದ ಪುಡಿ ಉತ್ತಮ ಪರಿಹಾರ. ಚರ್ಮರೋಗ ದಂತರೋಗ, ಬಾಯಿ ಹುಣ್ಣಿಗೆ ತೊಗಟೆಯ ಕಷಾಯ ಸಿದ್ಧೌಷಧ.

ಮಲ್ಲಿಗೆ, ಸೇವಂತಿಗೆ, ಪದ್ಮಪುಷ್ಪ (ತಾವರೆ, ಕಮಲ) ಪುಷ್ಪಗಳು ಮಾನಸಿಕ ಖಿನ್ನತೆಗೆ, ಜ್ವರ, ರಕ್ತಶುದ್ಧಿ ಮತ್ತು ವೃದ್ಧಿ, ಡಯೇರಿಯಾದಂತಹ ರೋಗಗಳಿಗೆ ಔಷಧವಾಗುತ್ತದೆ. ದವನ ಪತ್ರೆ- ಶೀತ ಸಂಬಂಧಿ ಕಾಯಿಲೆಗಳಿಗೆ, ಊತ-ವಾತ ನಿವಾರಣೆಗೆ ಮರುಗ, ಮಲಬದ್ಧತೆ, ಚರ್ಮರೋಗ, ಜಾಂಡೀಸ್ ನಿವಾರಣೆಗೆ ಬಿಲ್ವಪತ್ರೆ, ಶ್ವಾಸಕೋಶದ ತೊಂದರೆ, ಕೆಮ್ಮು-ದಮ್ಮು ನಿವಾರಣೆಗೆ ತುಳಸಿ, ಬಿಕ್ಕಳಿಕೆ, ನಿಶ್ಯಕ್ತಿ ನಿವಾರಣೆಗೆ ವಿಷ್ಣುಕ್ರಾಂತಿ ಪತ್ರೆ ಔಷಧವಾಗಿ ಬಳಕೆಯಾಗುತ್ತದೆ.

ಧ್ಯಾನದೊಂದಿಗೆ ಪರಿಮಳ ಆಘ್ರಾಣ

ಮಕರದ ಹೀರುತ್ತಿರುವ ಪಾತರಿಗಿತ್ತಿ

ಪ್ರಸ್ತುತದಲ್ಲಿ ಪೂಜೆ, ವ್ರತ ಎಂದರೆ ಆಡಂಬರ, ಅಲಂಕಾರಕ್ಕೆ ಸೀಮಿತವಾಗಿದೆ. ಭಕ್ತಿಯ ಪರಾಕಾಷ್ಠೆಯಲ್ಲಿ ‘ಮೂಢ ನಂಬಿಕೆಗಳೂ’ ಮನೆ ಮಾಡಿವೆ. ನಿಜವಾದ ಅರ್ಥದಲ್ಲಿ ಪೂಜೆ ಎಂದರೆ ಧ್ಯಾನ. ಧ್ಯಾನದ ಮೂಲಕ ಪತ್ರೆ-ಪುಷ್ಪಗಳ ಪರಿಮಳವನ್ನು ಆಘ್ರಾಣಿಸಬೇಕು’. ಇದರಿಂದ ಮನಸ್ಸು ಪ್ರಫುಲ್ಲವಾಗುತ್ತದೆ. ಏಕಾಗ್ರತೆ, ಮನಶಾಂತಿ ಮೂಡುತ್ತದೆ. ಈ ಅಂಶಗಳು ಅನೇಕ ರೋಗಗಳಿಗೆ ಔಷಧವಾಗುತ್ತವೆ. ಇದನ್ನೇ ‘ಆರೋಮಾ ಥೆರಪಿ’ ಅಥವಾ ಸುಗಂಧ ಚಿಕಿತ್ಸೆ ಎನ್ನುತ್ತಾರೆ.

ಭಾರತೀಯ ಸಂಸ್ಕೃತಿಯಲ್ಲಿ ಹಬ್ಬ-ಹರಿದಿನ, ವ್ರತ-ಪೂಜೆ-ಪುನಸ್ಕಾರಗಳಲ್ಲಿ ಇಂಥ ‘ಥೆರಪಿ’ಗಳು ಅಡಗಿವೆ. ಆಯುರ್ವೇದದಲ್ಲಿ ‘ಕುಸುಮಾಯುರ್ವೇದ’ ವಿಭಾಗವೇ ಇದೆ. ಇಂಥ ಮಹತ್ವದ ವಿಚಾರಗಳನ್ನೊಳಗೊಂಡಿರುವ ಹಬ್ಬಗಳ ಮಹತ್ವವನ್ನು ಸರಿಯಾಗಿ ಪ್ರಚಾರ ಪಡಿಸದೇ ‘ಮೂಢ ನಂಬಿಕೆ’ ಎಂಬ ಪಟ್ಟಕಟ್ಟಲಾಗಿದೆ ಎನ್ನುವುದು ಆಯುರ್ವೇದ ತಜ್ಞ ಡಾ.ಸತ್ಯನಾರಾಯಣ ಭಟ್ ಅಭಿಪ್ರಾಯ