ಹೊಂಗೆ ಮರದ ರಸ್ತೆ !

60 ಅಡಿ ರಸ್ತೆಯಲ್ಲಿರುವ ಹೊಂಗೆ ಮರಗಳ ಸಾಲು

ಮಲ್ಲೇಶ್ವರ, ಸದಾಶಿವನಗರ, ನ್ಯೂ ಬಿಇಎಲ್ ರಸ್ತೆ.. ಹೂ ..ಹೂಂ.. ಇಲ್ಲೆಲ ಹುಡುಕಿದರೂ ಈ ರಸ್ತೆ ಸಿಗುವುದಿಲ್ಲ ಬಿಡಿ. ಏಕೆ ಗೊತ್ತಾ ? ಈ ಹೆಸರಿನ ರಸ್ತೆ ಪಾಲಿಕೆಯ ಪುಸ್ತಕದಲ್ಲಿಲ್ಲ. ಅಂಚೆ ಇಲಾಖೆಯ ವಿಳಾಸದ ಡೈರೆಕ್ಟರಿಯಲ್ಲೂ  ಇಲ್ಲ. ಈ ರಸ್ತೆ ಇರುವುದು ಸಂಜಯ ನಗರ ಬಡಾವಣೆಗೆ ಹೊಂದಿಕೊಂಡಿರುವ ಭೂಪಸಂದ್ರದಲ್ಲಿ. ಇಲ್ಲಿನ ಕಲ್ಪನಾಚಾವ್ಲ ರಸ್ತೆ ಮತ್ತು ಹೆಬ್ಬಾಳದ ಫೈಓವವರ್‌ಗೆ ಸಂಪರ್ಕ ಕಲ್ಪಿಸುವ ೬೦ ಅಡಿ ವಿಶಾಲ ಒಳ ರಸ್ತೆಯೇ ಹೊಂಗೆ ಮರದ ರಸ್ತೆ !
ಈ ರಸ್ತೆಗೆ ‘ಹೊಂಗೆ ಮರದ ರಸ್ತೆ’ ಎಂದು ಯಾರೂ ಹೆಸರಿಟ್ಟಿಲ್ಲ. ರಸ್ತೆಯ ಇಕ್ಕೆಲಗಳಲ್ಲಿ ಹಸಿರಿನಿಂದ ಕಂಗೊಳಿಸುವ ಸಾಲು ಸಾಲು ಹೊಂಗೆ ಮರಗಳು ‘ಈ ರಸ್ತೆಗೊಂದು ಅಂಥ ಹೆಸರಿಡಿ’ ಎಂದು ಕೇಳುತ್ತವೆ.
ಹೊಂಗೆ ಮರಗಳ ಸಾಲು
ಇಲ್ಲಿ ಸುಮಾರು ನೂರಕ್ಕೂ ಹೆಚ್ಚು ಮರಗಳಿರಬಹುದು. ಎಲ್ಲ ಮರಗಳನ್ನೂ ಪಾದಚಾರಿ ಮಾರ್ಗದಲ್ಲೇ ನೆಟ್ಟಿದ್ದಾರೆ. ಪ್ರತಿಯೊಂದಕ್ಕೂ ವ್ಯವಸ್ಥಿತವಾಗಿ ಸಿಮೆಂಟ್ ಪಾತಿ ಮಾಡಲಾಗಿದೆ. ದಟ್ಟವಾಗಿರುವ ಈ ಮರಗಳ ನಡುವಿನ ರಸ್ತೆಯಲ್ಲಿ ಮುಂಜಾನೆ, ಸಂಜೆ ವಿಹರಿಸುವುದೆಂದರೆ ವಾಹ್ ! ಅದರ ಅನುಭವವೇ ವಿಭಿನ್ನ !
ಐದಾರು ವರ್ಷಗಳ ಹಿಂದೆ ಭೂಪಸಂದ್ರ ಬಡಾವಣೆಯನ್ನು ‘ಹಸಿರಾಗಿಸುವ’ ಪ್ರಯತ್ನದಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯವರು ಈ ಹೊಂಗೆ ಸಸಿಗಳನ್ನು ನೆಟ್ಟಿದ್ದಾರೆ. ಆಗ ಇಲಿ ಸ್ವಂತ ಮನೆ ಹೊಂದಿದ್ದವರು ತಮ್ಮ ಮನೆಯ ಮುಂದೆ ಅಲಂಕಾರಕ್ಕಾಗಿ ಎರಡೆರಡು ಹೊಂಗೆ ಮರಗಳನ್ನು ಕೇಳಿ ಕೇಳಿ ನಾಟಿ ಮಾಡಿಸಿದ್ದಾರೆ. ಈಗ ಅವೆಲ್ಲ ಪುಟ್ಟ ಪುಟ್ಟ ಮರಗಳಾಗಿ ಇಡೀ ರಸ್ತೆಗೆ ಹಸಿರುಡುಗೆಯಾಗಿಸಿವೆ.
ಹೂವಿನ ನಡೆಮುಡಿ
ಫೆಬ್ರುವರಿ ಮಾರ್ಚ್ ತಿಂಗಳ್ಲಲಿ ಈ ರಸ್ತೆಯ್ಲಲಿ ಮುಂಜಾನೆ ವಾಕಿಂಗ್ ಮಾಡುವುದು ಒಂದು ವಿಶಿಷ್ಟ ಅನುಭವ. ಅದು ಹೂವು ಅರಳುವ ಸಮಯ. ದುಂಬಿಗಳು ಹೂವಿನ ಮಕರಂದ ಹೀರುತ್ತಾ ಆನಂದವಾಗಿ ಹಾರುಡುತ್ತಿರುತ್ತವೆ. ಜೇನಿನ ಹುಳಗಳು ಮಕರಂದ ಹೀರಿ ಪಕ್ಕದ ಬೇಲಿಗೆ ಹಾರಿ ‘ಗೂಡು’ ಕಟ್ಟುತ್ತವೆ. ಹೊಂಗೆ ಹೂವು ಪರಿಮಳ ‘ದೇಹ ದಂಡಿಸುವವರ’ ಮನಸ್ಸನ್ನು ಅರಳಿಸುತ್ತದೆ. ಮುಂದಿನ ದಿನಗಳ್ಲಲಿ ಇದೇ ಹೂವುಗಳು ನೆಲದ್ಲಲಿ ಹರಡಿಕೊಂಡು ನಡೆದಾಡುವವರಿಗೆ ನಡೆಮುಡಿ ಹಾಸುತ್ತವೆ. ಈ ನೈಸರ್ಗಿಕ ಪ್ರಕ್ರಿಯೆಯನ್ನು ನೋಡುವುದೇ ಒಂದು ಆನಂದ.ಹೊಂಗೆ ಮರಗಳು ಅಂದ ಹೆಚ್ಚಿಸುವ ಜೊತೆಗೆ ಬೇಸಿಗೆಯ ಬೇಗೆಯನ್ನೂ ತಣಿಸುತ್ತವೆ.
ಈ ಪ್ರದೇಶದಲ್ಲಿರುವ ಕಟ್ಟಡ ಕಾರ್ಮಿಕ ಮಕ್ಕಳು ಈ ಮರಗಳಿಗೆ ಉಯ್ಯಾಲೆ ಕಟ್ಟಿಕೊಳ್ಳುತ್ತಾರೆ. ಬಿಸಿಲಿನ್ಲಲಿ ಓಡಾಡುವ ಹಿರಿಯ ಜೀವಗಳು ಹೊಂಗೆಯ ನೆರಳಿನಲ್ಲಿ  ಸ್ವಲ್ಪ ಹೊತ್ತು ವಿರಮಿಸಿ ಕೊಂಡು ಮುಂದುವರಿಯುತ್ತಾರೆ. ದೀರ್ಘಕಾಲ ಮೊಬೈಲ್‌ನಲ್ಲಿ ಮಾತನಾಡುವವರಿಗೆ ಇದು ‘ನೈಸರ್ಗಿಕ ಟೆಲಿ ಬೂತ್’ ಆಗಿದೆ. ಅಷ್ಟೇ ಅಲ್ಲ, ಗುಟ್ಟಾಗಿ ಹೇಳಬೇಕೆಂದರೆ, ಪ್ರೇಮಿಗಳ ಪಿಸು ಮಾತಿನ ತಾಣವೂ ಹೌದು !
ಒಳ ರಸ್ತೆಗಳಲ್ಲೂ ಮರಗಳ ಸಾಲು:
ಹೊಂಗೆ ಮರಗಳು ಕೇವಲ ಈ ಪ್ರಮುಖ ರಸ್ತೆಯ್ಲಲಷ್ಟೇ ಅಲ. ಒಳ ರಸ್ತೆಗಳನ್ನೂ ಅಲಂಕರಿಸಿವೆ. ಸಮೀಕ್ಷೆ ಮಾಡಿದರೆ ಪ್ರತಿ ಮನೆಗಳ ಮುಂದು ಎರಡೆರಡು ಹೊಂಗೆ ಮರಗಳಿವೆ. ಆ ಮರಗಳು ಅದೆಷ್ಟು ಅಂದವಾಗಿ ಬೆಳೆದುಕೊಂಡಿವೆಯೆಂದರೆ ಒಂದು ಕಾರನ್ನು ಸರಾಗವಾಗಿ ಮರದ ಕೆಳಗೆ ಪಾರ್ಕ್ ಮಾಡಬಹುದು. ಹಾಗಾಗಿ ಮರಗಳ ನೆರಳು ಕಾರು ಪಾರ್ಕಿಂಗ್‌ಗೆ ಮೀಸಲಾಗಿದೆ. ಕಾಕತಾಳೀಯವೋ ಏನೋ, ಮರದ ‘ಕೆನಾಪಿ’ಗಳ ವಿನ್ಯಾಸ ಕೂಡ ಪಾರ್ಕಿಂಗ್‌ಗೆ ಹೇಳಿ ಮಾಡಿಸಿದಂತಿವೆ. ಈ ನೆರಳನ್ನೇ ಬಳಸಿಕೊಂಡ ಕೆಲವರು ತಮ್ಮ ಮನೆಗಳ ಮುಂದೆ ಅಲಂಕಾರಿಕ ಸಸ್ಯಗಳನ್ನೂ ಬೆಳೆಸಿ, ರಸ್ತೆಯ ಚೆಲುವು ಹೆಚ್ಚಲು ಕೆಲವು ನಾಗರಿಕರು ಸಹಕರಿಸಿದ್ದಾರೆ.
ನಾಗರಿಕರ ಆಸ್ತೆಯೂ ಕಾರಣ:
ಬೆಂಗಳೂರಿನ ರಸ್ತೆ ಬದಿಗಳಲ್ಲಿ ಹೀಗೆ ಮರಗಳ ಸಾಲಿರುವುದು ಸಾಮಾನ್ಯ, ಅದರಲ್ಲಿ ಅಂಥ ವಿಶೇಷವಿಲ್ಲ. ಆದರೆ ಈ ಬಡಾವಣೆಯಲ್ಲಿ ಮರಗಳನ್ನು ಸಂರಕ್ಷಿಸುವ, ಪೋಷಿಸುವ ಮತ್ತು ನಿರ್ವಹಿಸುವ ನಾಗರಿಕರ ಆಸಕ್ತಿ, ಆಸ್ತೆ ಮೆಚ್ಚುವಂಥದ್ದು. ಎಲರೂ ಈ ಕಾರ್ಯಕ್ಕೆ ಕೈ ಜೋಡಿಸದಿದ್ದರೂ ತಮ್ಮ ಕಾರಿಗೆ ನೆರಳು ನೀಡುವ, ದಣಿದ ದೇಹಗಳಿಗೆ ತಂಪನೆರೆಯುವ, ಮನೆ ಮುಂದಿನ ಅಂದ ಹೆಚ್ಚಿಸುವ ವೃಕ್ಷ ಪ್ರೀತಿಯ ಮನಸ್ಸಿರುವ ಕೆಲವರು ಹೊಂಗೆ ಮರಗಳ ಒಂದೇ ಒಂದು ರೆಂಬೆಯನ್ನೂ ಕೀಳಗೊಡುವುದ್ಲಿಲ. ಅಷ್ಟೇ ಅಲ. ನಿತ್ಯ ಕಾರು ತೊಳೆಯುವವರು ಉಳಿದ ನೀರನ್ನು ಮನೆ ಮುಂದಿನ ಗಿಡಗಳಿಗೆ ಉಣಿಸುತ್ತಾರೆ. ಕಾಲ ಕಾಲಕ್ಕೆ ಕೊಂಬೆಗಳನ್ನು ಸವರಿಸುತ್ತಾರೆ. ರೆಂಬೆಗಳು ದೊಡ್ಡದಾಗ್ದಿದರೆ ಪಾಲಿಕೆಯವರಿಗೆ ತಿಳಿಸುತ್ತಾರೆ. ನಾಗರಿಕರ ಮತ್ತು ಪಾಲಿಕೆಯವರ ಸಹಯೋಗದಲ್ಲಿ ಪಾದಚಾರಿ ಮಾರ್ಗಗಳಲ್ಲೂ ಮರಗಳು ಸುರಕ್ಷಿತವಾಗಿವೆ. ಈ ಮರ ಬೆಳೆಸುವ ಮುತುವರ್ಜಿ ನಿಜಕ್ಕೂ ಮಾದರಿಯಾಗುವಂಥದ್ದು.
ಇಂಥದೊಂದು ಪರಿಸರ ಪ್ರೀತಿಯ ಬಡಾವಣೆಗೆ ದೃಷ್ಟಿಬೊಟ್ಟಿಟ್ಟಂತೆ ಅಲ್ಲಲ್ಲಿ ಕಸದ ರಾಶಿ ತುಂಬಿಕೊಂಡಿದೆ.
. ಭೂಪಸಂದ್ರದ ಆರಂಭದಲ್ಲೇ ಪಾಲಿಕೆಯವರು ಕಸವಿಲೇವಾರಿ ನಡೆಸುತ್ತಾರೆ. ಈ ಕಸದ ರಾಶಿ(ವಿಶೇಷವಾಗಿ ಪ್ಲಾಸ್ಟಿಕ್ ರಾಶಿ) ವಾಕಿಂಗ್ ಪೂರೈಸಿ ಬರುವವರನ್ನು ಕೆರಳುವಂತೆ ಮಾಡುತ್ತದೆ. ಪರಿಸರ ಪ್ರೀತಿಯ ನಡುವೆ ಈ ಕೊಳಕು ಏಕೆ ಎಂಬುದಕ್ಕೇ ಆ ‘(ಕಟ್ಟಾ) ಸುಬ್ರಹ್ಮಣ್ಯನೇ’ ಉತ್ತರ ನೀಡಬೇಕು !